ಹೂವೆ, ಹೂವೇ,ಕುರಂಜಿಯೆಂಬ ಚೆಲುವೆ…

Share Button

ಮಲೆನಾಡಿನ ಮಡಿಲಲ್ಲಿ ಸಂಭ್ರಮ ಸಡಗರಗಳಿಂದ ನಲಿಯುತ್ತಿರುವ ನೀಲ ಕುರಂಜಿಯನ್ನು ನೋಡೋಣ ಬನ್ನಿ. ಪಾಂಡವರು ಹನ್ನೆರೆಡು ವರ್ಷ ವನವಾಸ ಮಾಡಿ, ಒಂದು ವರ್ಷ ಅಜ್ಞಾತವಾಸ ಮಾಡಿದರೆ, ನೀಲ ಕುರಂಜಿ ಎಂಬ ಹೂವು, ಹನ್ನೆರೆಡು ವರ್ಷ ಅಜ್ಞಾತವಾಸ ಮಾಡಿ, ಒಂದು ವರ್ಷ ವನವಾಸ ಮಾಡುವಾಗ, ಇದ್ದಕ್ಕಿದ್ದಂತೆ ನಮ್ಮ ಮುಂದೆ ಧುತ್ತೆಂದು ಪ್ರತ್ಯಕ್ಷಳಾಗುವಳು. ಪಶ್ಚಿಮ ಘಟ್ಟಗಳ ಬೆಟ್ಟ ಗುಡ್ಡಗಳ ಮೇಲೆಲ್ಲಾ ಹರಡುವ ಪುಟ್ಟ ಪುಟ್ಟ ಪೊದೆಗಳಲ್ಲಿ ನಕ್ಷತ್ರಗಳಂತೆ ಹೊಳೆಯುವ ಹೂಗಳು ಅರಳುತ್ತಾ, ಪ್ರಕೃತಿದೇವಿಗೆ ಹೊಸ ಉಡುಗೆಯನ್ನೇ ತೊಡಿಸುವಳು. ಇಷ್ಟು ದಿನ ಹಚ್ಚ ಹಸಿರಾಗಿ ಕಂಗೊಳಿಸುತ್ತಿದ್ದ ನಿಸರ್ಗ ಈಗ ನೇರಳೆ ವರ್ಣದ ಸೀರೆಯನ್ನು ಹೊದ್ದು ವನಪು ವಯ್ಯಾರಗಳಿಂದ ನರ್ತಿಸುವಳು.

ನಿತ್ಯ ಹಲವು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ, ನೀಲ ಕುರಂಜಿಯ ಸುದ್ದಿ, ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿತ್ತು. ನೀಲ ಕುರಂಜಿಯನ್ನು ಕಂಡು ಆನಂದಿಸಲು, ಶ್ರೀ ಶಿವಗಂಗಾ ಯೋಗ ಕೇಂದ್ರದವರು, ಗುರುಗಳಾದ ಶ್ರೀ ರುದ್ರಾರಾಧ್ಯರ ನೇತೃತ್ವದಲ್ಲಿ 28 ಸೆಪ್ಟೆಂಬರ್ 2022 ರಂದು ಹೊರಟರು. ನಾನೂ ಪ್ರವಾಸೀ ತಂಡದಲ್ಲಿ ಒಬ್ಬಳಾಗಿದ್ದೆ. ಒಂದು ದಿನದ ಪ್ರವಾಸವನ್ನು, ಶ್ರೀಯುತರಾದ ಓಂಕಾರ್ ಮತ್ತು ಜಗದೀಶ್‌ರವರು ಉತ್ತಮವಾಗಿ ಸಂಘಟಿಸಿದ್ದರು. ಶಿವಮೊಗ್ಗೆಯಿಂದ ಮುಂಜಾನೆ ಐದೂವರೆ ಗಂಟೆಗೆ ಮೂರು ಬಸ್ಸು ಹಾಗೂ ಒಂದು ಕಾರಿನಲ್ಲಿ ಸುಮಾರು ಎಂಭತ್ತೈದು ಜನ ಪ್ರವಾಸ ಹೊರಟೆವು. ವಾಹನಗಳಿಗೆ – ತುಂಗ, ಭದ್ರ ಹಾಗು ಗಂಗಾ ಎಂದು ಹೆಸರಿಸಿದ್ದರು. ಪ್ರವಾಸವನ್ನು ಓಂಕಾರದೊಂದಿಗೆ ಆರಂಭಿಸಿ, ನಂತರ ಭಜನೆಗಳನ್ನು ಹಾಡುತ್ತಾ, ಎಂಭತ್ತು ಕಿ.ಮೀ. ದೂರದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗದ ದೇವೀರಮ್ಮನ ದೇಗುಲ ತಲುಪಿದೆವು. ಚಿಕ್ಕಮಗಳೂರು ಎಂಬ ಹೆಸರಿನ ಹಿಂದಿರುವ ಕಥೆಯೂ ಸ್ವಾರಸ್ಯಕರವಾಗಿದೆ. ಈ ನಗರವನ್ನು ಸಕ್ಕರಾಯಪಟ್ಟಣದ ರಾಜ ರುಕ್ಮಾಂಗದನು ತನ್ನ ಕಿರಿಯ ಪುತ್ರಿಗೆ, ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ್ದರಿಂದ ಇದನ್ನು ಚಿಕ್ಕಮಗಳೂರೆಂದು ಕರೆಯಲಾಯಿತೆಂಬ ಐತಿಹ್ಯವೂ ಇದೆ. ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ನೆಲೆಯಾಗಿರುವ ದೇವಿ, ನಿಸರ್ಗ ಸಿರಿಯ ಮಡಿಲಲ್ಲಿ ಹಾಯಾಗಿ ಪವಡಿಸಿದ್ದಳು. ಬಹುಶಃ, ನವರಾತ್ರಿಯ ಪೂಜಾ ವಿಧಿ ವಿಧಾನಗಳಿಂದ ದೇವಿ ಬಳಲಿ ವಿರಮಿಸುತ್ತಿದ್ದಳೇನೂ? ಅಥವಾ, ದೇಗುಲವು ಊರಿನ ಹೊರವಲಯದಲ್ಲಿದ್ದುದರಿಂದ, ಪೂಜಾರಿಗಳು ಹತ್ತು ಗಂಟೆಗೆ ದೇಗುಲವನ್ನು ತೆರೆಯುವ ಪರಿಪಾಠವಿದ್ದೀತು ಅಲ್ಲವೇ? ಹಾಗಾಗಿ ನಮಗೆ ದೇವಿಯ ದರ್ಶನ ಭಾಗ್ಯ ಲಭ್ಯವಾಗಲಿಲ್ಲ. ಇರಲಿ, ಪ್ರಕೃತಿಯೇ ದೇರಲ್ಲವೇ? ಕಾಕನ ಕೋಟೆ ಸಿನೆಮಾದ ಗೀತೆಯೊಂದನ್ನು ಓಂಕಾರ್‌ರವರು ಗುನುಗುತ್ತಿದ್ದರು – ‘ನೇಸಾರ ನೋಡು ನೇಸರ ನೋಡು / ಮೂಡಣ ಬಯಲಿಂದ ಮೇಲಕ್ಕೆ ಹಾರಿ / ದೂರಾದ ಮಲೆಯಾ ತಲೆಯಾನೆ ಏರಿ / ನೇಸಾರ ನೋಡು. ಸುಂದರವಾದ ಪ್ರಕೃತಿಮಾತೆಗೆ ನಮಿಸಿ, ನಾವು ಉಪಹಾರವನ್ನು ಸೇವಿಸಿದೆವು.

ನಂತರ, ಇಪ್ಪತ್ತೈದು ಕಿ.ಮೀ.ದೂರದಲ್ಲಿರುವ ಸೀತಾಳಯ್ಯನಗಿರಿಯತ್ತ ಸಾಗಿದೆವು. ಎಲ್ಲರಿಗೂ ಕುರಂಜಿಯದೇ ಧ್ಯಾನ, ಅಲ್ಲೊಂದು, ಇಲ್ಲೊಂದು ಪೊದೆ ಕಂಡವರೆಲ್ಲಾ, ಅಲ್ಲಿ ಕುರಂಜಿ ನೋಡಿ ಎಂದು ಕೂಗಿ ಕೂಗಿ ಹೇಳುತ್ತಿದ್ದರು. ಬಸ್ಸಿನ ಕಿಡಕಿಯ ಹೊರಗೆ ತಲೆ ಹಾಕಿ ನೋಡುತ್ತಿದ್ದೆವು, ಹಾವಿನಂತೆ ಅಂಕು ಡೊಂಕಾದ ಹಾದಿಯಲ್ಲಿ, ಬೆಟ್ಟವೇರುತ್ತಿದ್ದ ವಾಹನದಲ್ಲಿ ಪಯಣಿಸುತ್ತಿದ್ದ ಕೆಲವರಿಗೆ ಕುರಂಜಿಯನ್ನು ನೋಡುವ ಆತುರದಲ್ಲಿ ಎದ್ದು ನಿಂತಾಗ, ವಾಂತಿಯೂ ಆಯಿತು. ಮುಂದೆ ಸಾಗಿದಂತೆ, ಇಡೀ ಬೆಟ್ಟ ಗುಡ್ಡಗಳೆಲ್ಲಾ ಕುರಂಜಿಯೆಂಬ ಪುಷ್ಪಗಳ ಪತ್ತಲ ಹೊದ್ದು ಮಲಗಿದ್ದವು. ಎಲ್ಲಿ ನೋಡಿದರೂ ಅಲ್ಲಿ ನೇರಳೆ ಬಣ್ಣದ ಕುರಂಜಿ ಹೂಗಳು, ತಂಗಾಳಿಯಲ್ಲಿ ನಲಿಯುತ್ತಾ, ತಲೆದೂಗುತ್ತಾ, ನಮ್ಮನ್ನು ಆಹ್ವಾನಿಸುವಂತೆ ತೋರುತ್ತಿತ್ತು. ನಿಸರ್ಗವು – ‘ಈಗ ನೋಡು ನನ್ನ ಚೆಲುವನ್ನು’ ಎಂದು ಬಿಂಕದಿಂದ ಉಸುರಿದಳು. ನನ್ನ ಜೊತೆ ಬಂದ ಕೆಲವರು ಹಾಡಿದರು, ಮತ್ತೆ ಕೆಲವರು ಹರ್ಷದಿಂದ ಕುಣಿದಾಡಿದರು. ಎಲ್ಲರಿಗೂ ಕುರಂಜಿ ಹೂಗಳ ಜೊತೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುವ ಆಸೆ. ಕೆಲವರು ಹೂಗಳ ಮಧ್ಯೆ ಮಲಗಿದ ಭಂಗಿಯಲ್ಲಿ ಫೋಟೋ ಕುಳಿತರೆ ಮತ್ತೆ ಕೆಲವರು ಕುಳಿತ ಭಂಗಿಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಹೂಗಳ ಮಧ್ಯೆ ಹಾರುವ ಹಕ್ಕಿಗಳ ಹಾಗೆ ಪೋಸ್ ಕೊಡುತ್ತಿದ್ದರು. ನಮ್ಮ ತಂಡದವರು, ವಯಸ್ಸಿನ ಅಂತರವಿಲ್ಲದೆ ‘ಶಂಭೋ, ಶಿವ ಶಂಭೋ’ ಗೀತೆಗೆ ಹೆಜ್ಜೆ ಹಾಕಿದರು. ಗುರುಗಳೂ ಜೊತೆಗೂಡಿದಾಗ ಎಲ್ಲರ ಉತ್ಸಾಹ ಇಮ್ಮಡಿಯಾಗಿತ್ತು. ಬೀಸುವ ತಂಗಾಳಿಗೆ ಮೈಯೊಡ್ಡಿ ನಿಂತವರು, ಚಳಿಯ ಪರಿವೆಯಿಲ್ಲದೆ ಕುರಂಜಿಗಳ ಜೊತೆ ಸ್ಪರ್ಧೆಗಿಳಿದವರಂತೆ ನಲಿದಾಡಿದರು. ಎಲ್ಲರಲ್ಲೂ ಉತ್ಸಾಹ ಚೈತನ್ಯ ಉಕ್ಕಿ ಹರಿಯುವಂತಿತ್ತು.

ಹನ್ನೆರೆಡು ವರ್ಷಕ್ಕೊಮ್ಮೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಅರಳುವ ನೀಲ ಕುರಂಜಿಯ ಬಗ್ಗೆ ಕೆಲವು ವೈಜ್ಞಾನಿಕ ವಿವರಗಳನ್ನು, ನಮ್ಮ ಯೋಗಕೇಂದ್ರಕ್ಕೆ ಬರುವ ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸುನಿತಾರ ಮಾತಿನಲ್ಲಿ ಕೇಳೋಣ ಬನ್ನಿ -‘ಕುರಂಜಿಯ ಬಟಾನಿಕಲ್ ಹೆಸರು ಸ್ಟ್ರೋಬಿಲಾನ್‌ತಸ್ ಕುಂತಿಯಾನ. ಇದು ಅಕಾನ್‌ತೇಸಿ ಫ್ಯಾಮಿಲಿಗೆ ಸೇರಿದೆ. ಇದರಲ್ಲಿ ಸುಮಾರು 250 ಪ್ರಬೇಧಗಳಿದ್ದು, ಭಾರತದಲ್ಲಿ 46 ಪ್ರಬೇಧಗಳು ಕಂಡು ಬರುತ್ತವೆ. ದೀರ್ಘಾವಧಿಯ ಅಂತರದಲ್ಲಿ ಅರಳುವ ಈ ಪುಷ್ಪಗಳನ್ನು ಪ್ಲೈಟಿಸಿಯಲ್ಸ್ (Plietesials) ಎಂದು ಕರೆಯುವರು. ಸಾಮಾನ್ಯವಾಗಿ ಈ ಹೂಗಳು ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ ಅರಳುತ್ತವೆ. ಈ ಗಿಡಗಳ ಕಾಲಚಕ್ರ ಒಂದು ವರ್ಷ ಮಾತ್ರ. ಕೆಲವು ಪ್ರಬೇಧಗಳು ಏಳು ವರ್ಷಕ್ಕೊಮ್ಮೆ ಅರಳಿದರೆ, ಮತ್ತೆ ಕೆಲವು ಹದಿನೆಂಟು ವರ್ಷಕ್ಕೊಮ್ಮೆ ಅರಳುವುವು. ಹೀಗೆ ಒಂದೊಂದು ಪ್ರಬೇಧವೂ ಒಂದೊಂದು ಅವಧಿಯ ಅಂತರದಲ್ಲಿ ಅರಳುವುದು. ಹಾಗೆಯೇ ಈ ಹೂಗಳಲ್ಲಿ ಹಲವು ಬಗೆಯ ವರ್ಣಗಳೂ ಇವೆ – ನೀಲಿ, ನೇರಳೆ, ಗುಲಾಬಿ, ಬಿಳಿ ಇತ್ಯಾದಿ. ಸುದೀರ್ಘಕಾಲದ ನಂತರ ಸಮೃದ್ಧವಾಗಿ ಅರಳುವ ಈ ಪುಷ್ಪಗಳು ನೂರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡು ಬಿಡುತ್ತವೆ. ನಮ್ಮ ಚಿಕ್ಕಮಗಳೂರಿನ ಗಿರಿಶಿಖರಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಕುರಂಜಿ ನೀಲ ವರ್ಣದ್ದಾಗಿದ್ದು ಹನ್ನೆರೆಡು ವರ್ಷಕ್ಕೊಮ್ಮೆ ಅರಳುವುದು. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಾಬಾಬುಡೆನ್‌ಗಿರಿ ಮುಂತಾದ ಗಿರಿಗಳಲ್ಲಿ ನೀಲಕುರಂಜಿಯದೇ ದರ್ಬಾರು.’

ಶಿವಮೊಗ್ಗೆಯಿಂದ 100 ಕಿ.ಮೀ. ದೂರದಲ್ಲಿರುವ ಸೀತಾಳಯ್ಯನಗಿರಿ ಒಂದು ಪ್ರಶಾಂತವಾದ ಪುಟ್ಟ ಗ್ರಾಮ. ಇದು ಸಮುದ್ರಮಟ್ಟದಿಂದ 5,000 ಅಡಿ ಎತ್ತರದಲ್ಲಿದ್ದು, ಸೀತಾಳಯ್ಯನೆಂಬ ಯೋಗಿಯು ತಪಸ್ಸು ಮಾಡಿದ ಸ್ಥಳವೆಂಬ ಉಲ್ಲೇಖವಿದೆ. ಇಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ದೇಗುಲವಿದ್ದು, ಗರ್ಭಗುಡಿಯಲ್ಲಿ ಸದಾ ನೀರು ಜಿನುಗುತ್ತಿರುವುದರಿಂದ, ಇಡೀ ದೇಗುಲವು ತಂಪಾಗಿರುವುದು. ದೇಗುಲದ ಎದುರಿಗೇ ಒಂದು ಗುಹೆಯಿದ್ದು ಮುನಿಗಳು ಅಲ್ಲಿಯೇ ತಪಗೈದರೆಂಬ ಐತಿಹ್ಯವೂ ಇದೆ. ಇದನ್ನು ಚಾರಣಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ, ಕಾರಣ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ಮೇಲೆ ಹಲವು ಚಾರಣ ಪಥಗಳಿವೆ. ಸುತ್ತಲೂ ಹಸಿರುಟ್ಟು ನಲಿಯುವ ಪ್ರಕೃತಿ ಮಾತೆ ಪ್ರವಾಸಿಗರ ಮನಸ್ಸಿಗೆ ಮುದ ನೀಡುವಳು.

ಸೀತಾಳಯ್ಯನಗಿರಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನಗಿರಿಗೆ ಸಾಗಿತ್ತು ನಮ್ಮ ಪಯಣ. ಗಿರಿಶಿಖರದ ನೆತ್ತಿಯ ಮೇಲಿದ್ದ ದೇಗುಲ ತಲುಪಲು ಬೆಟ್ಟ ಗುಡ್ಡಗಳ ನಡುವೆ ಕಡಿದಾದ ಹಾದಿಯನ್ನು ಕ್ರಮಿಸಲು, ಜೀಪುಗಳನ್ನು ಬಾಡಿಗೆಗೆ ಪಡೆದೆವು. ಕರ್ನಾಟಕದಲ್ಲಿಯೇ ಅತ್ಯಂತ ಎತ್ತರವಾದ ಶಿಖರವೆಂದು ಹೆಸರಾಗಿರುವ ಮುಳ್ಳಯ್ಯನಗಿರಿ ಸಮುದ್ರಮಟ್ಟದಿಂದ 6,330 ಅಡಿ ಎತ್ತರದಲ್ಲಿದೆ. ಗುಜರಾತ್‌ನಿಂದ ಕನ್ಯಾಕುಮಾರಿಯವರೆಗೆ ಹಬ್ಬಿರುವ ಪಶ್ಚಿಮಘಟ್ಟಗಳ ಸಾಲಿನಲ್ಲಿರುವ, ಈ ಗಿರಿಶಿಖರ, ಇಪ್ಪತ್ಮೂರನೇ ಸ್ಥಾನ ಪಡೆದುಕೊಂಡಿದೆ. ಬೈಕ್ ಸವಾರರಿಗಂತೂ ಅಚ್ಚುಮೆಚ್ಚಿನ ತಾಣವಿದು. ಕಡಿದಾದ ಹಾದಿಯಲ್ಲಿ ಬೆಟ್ಟದ ನೆತ್ತಿಯ ಮೇಲೇರುವ ಸವಾಲಿನ ಜೊತೆ ಜೊತೆಗೇ, ಕೆಳಗಿಳಿಯುವಾಗ ಹಕ್ಕಿಯಂತೆ ಹಾರುವ ಅನುಭವವಾದೀತು ಅಲ್ಲವೇ? ಸೀತಾಳಯ್ಯ ಮತ್ತು ಮುಳ್ಳಯ್ಯ ಅಣ್ಣ ತಮ್ಮಂದಿರೆಂದೂ, ಸೀತಾಳಯ್ಯ ಬೆಟ್ಟದ ಬುಡದಲ್ಲಿ ಉಳಿದರೆ, ಮುಳ್ಳಯ್ಯ ಗಿರಿಯನ್ನೇರಿ ತಪಸ್ಸಿಗೆ ಕುಳಿತನೆಂಬ ಪ್ರತೀತಿಯಿದೆ. ಮುಳ್ಳಯ್ಯನಗಿರಿಯನ್ನೇರಲು ಐನೂರು ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಭರ್ರೋ ಎಂದು ಬೀಸುವ ಗಾಳಿ ನಮ್ಮನ್ನು ತೂರಾಡುವಂತೆ ಮಾಡಿತ್ತು.

ಈ ಲೋಕದ ಗೊಡವೆ ಬೇಡ ಎಂದು ಮುಳ್ಳಪ್ಪ ಸ್ವಾಮಿ ಏಕಾಂತ ಸ್ಥಳವನ್ನು ಅರಸಿ ಹೊರಟಿದ್ದರೂ, ನಾವು ಬಿಡಬೇಕಲ್ಲ. ನಕ್ಷತ್ರಿಕರಂತೆ ಸ್ವಾಮಿಯನ್ನು ಹಿಂಬಾಲಿಸಿದ್ದೆವು. ಸೂರ್ಯ ಉದಯಿಸುವುದನ್ನು ಇಲ್ಲಿ ನೋಡಬೇಕು, ಅಬ್ಬಾ, ಅದೇನು ಚೆಲುವು, ಅದೇನು ಬಣ್ಣಗಳ ಓಕುಳಿಯಾಟ, ಪದಗಳಲ್ಲಿ ಬಣ್ಣಿಸಲು ಸಾಧ್ಯವೇ? ದ.ರಾ ಬೇಂದ್ರೆಯವರ ಕವನ ನೆನೆಪಾಗಿತ್ತು, ‘ಮೂಡಲ ಮನೆಯ ಮುತ್ತಿನ ನೀರಿನ/ ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ / ಬಾಗಿಲ ತೆರೆದು ಬೆಳಕು ಹರಿದು / ಜಗವೆಲ್ಲಾ ತೊಯ್ದ, ದೇವಾ ಜಗವೆಲ್ಲಾ ತೊಯ್ದ’.

ಹಾದಿಯುದ್ದಕ್ಕೂ ಕುರಂಜಿಗಳ ಮೆರವಣಿಗೆ ಹೊರಟಿತ್ತು, ಮದುವಣಗಿತ್ತಿಯಂತೆ ಅಲಂಕರಿಸಿಕೊಂಡಿದ್ದಳು ಪ್ರಕೃತಿಮಾತೆ. ಯಾರಿಗೂ ಮೆಟ್ಟಿಲು ಹತ್ತುವುದು ಶ್ರಮವೆನಿಸಲೇ ಇಲ್ಲ, ಕಾರಣ, ಕುರಂಜಿ ಹೂಗಳು ನಮ್ಮ ದಣಿವನ್ನು ಮರೆಸಿದ್ದವು. ಒಂದು ಕ್ಷಣ, ಮನದಾಳದಿಂದ ಒಂದು ಆಲೋಚನೆ ಮೂಡಿ ಬಂತು, ಇಂತಹ ನಿಸರ್ಗ ಸಿರಿಯ ನಡುವೆ ಮುಳ್ಳಪ್ಪಸ್ವಾಮಿ ಹೇಗೆ ತಾನೆ ಕಣ್ಣುಮುಚ್ಚಿ ಧ್ಯಾನಸ್ಥನಾಗಿ ಕುಳಿತನೋ ಏನೋ. ನಮಗಂತೂ, ಈ ಚೆಲುವನ್ನು ನೋಡಲು ಎರಡು ಕಣ್ಣೂ ಸಾಲದು ಎಂದೆನಿಸಿತ್ತು. ಮುಳ್ಳಯ್ಯನಗಿರಿಯ ನೆತ್ತಿಯ ಮೇಲೆ ನಿಂತಾಗ ಕಂಡಿದ್ದು ಕಣ್ಣಾಮುಚ್ಚಾಲೆಯಾಡುತ್ತಿದ್ದ ಮೋಡಗಳು, ಕಾಳಿದಾಸನ ಮೇಘಧೂತ ನಾಟಕದಲ್ಲಿ, ತನ್ನ ಪ್ರಿಯತಮೆಗೆ ಒಲವಿನ ಸಂದೇಶವನ್ನು ಮೇಘಗಳ ಮೂಲಕ ಕಳುಹಿಸುವ ಯಕ್ಷನ ನೆನಪಾಗಿತ್ತು. ಮೇಘಗಳು ಹತ್ತಿಯ ತುಣುಕುಗಳಂತೆ ಮೇಲೇರುತ್ತಿದ್ದವು, ಕೆಳಗಿಳಿಯುತ್ತಿದ್ದವು, ವಾಯುದೇವನ ಕೈಗೊಂಬೆಗಳಂತೆ ಹಾರಾಡುತ್ತಿದ್ದವು. ಸಿನೆಮಾಗಳಲ್ಲಿ, ದೇವತೆಗಳು ಮೋಡಗಳ ಮಧ್ಯೆ ತಿರುಗಾಡುವುದನ್ನು ಕಂಡಿದ್ದ ನನಗೆ, ಈಗ ನಾವೇ ಮೋಡಗಳ ಮಧ್ಯೆ ಸಂಚರಿಸುವ ದೇವಾನು ದೇವತಗಳೆಂಬ ಭಾವ ಮೂಡಿತ್ತು.

ಮುಳ್ಳಯ್ಯ ಸ್ವಾಮಿಯ ದೇಗುಲದೊಳಗೆ ಕುಳಿತು ಶಿವನ ಭಜನೆಯನ್ನು ಮಾಡಿದೆವು, ದೇಗುಲವನ್ನು ಕುರಂಜಿ ಹೂಗಳ ಮಾಲೆಗಳಿಂದ ಅಲಂಕರಿಸಿದ್ದರು. ಈ ಕುರಂಜಿಯೆಂಬ ಕಿನ್ನರಿ ಎಲ್ಲರಿಗೂ ಮೋಡಿ ಹಾಕಿದ್ದಳು, ನೂರಾರು ಮಂದಿ ಈ ಕಿನ್ನರಿಯ ಸೊಬಗನ್ನು ಸವಿಯಲು ದೂರದೂರುಗಳಿಂದ ಬಂದಿದ್ದರು. ಕೆಲವರು ಸರ್ಪಧಾರಿ ಎಂಬ ಚಾರಣ ಪಥದಲ್ಲಿ ಚಾರಣ ಮಾಡಲು ಉತ್ಸುಕರಾಗಿದ್ದರು. ಮುಂದೆ ನಾವು ನಡೆದದ್ದು ಬಾಬಾ ಬುಡೆನ್‌ಗಿರಿಗೆ. ಇದನ್ನು ದತ್ತಗಿರಿ ಎಂದು ಕರೆಯಲಾಗುತ್ತಿತ್ತು. ಮುಸ್ಲಿಮರು ಬಾಬಾಬುಡೆನ್ ಎಂಬ ಸೂಫಿ ಸಂತನಿದ್ದ ಸ್ಥಳವೆಂದರೆ, ಹಿಂದೂಗಳು ಇದು ಬ್ರಹ್ಮ, ವಿಷ್ಣು, ಮಹೇಶ್ವರರ ಅವತಾರವಾದ ದತ್ತಾತ್ರೇಯನ ದೇಗುಲವೆಂದೂ ನಂಬುತ್ತಾರೆ. ಈ ಶಿಖರಗಳನ್ನು ಮೇಲಿನಿಂದ ವೀಕ್ಷಿಸಿದಾಗ ಅರ್ಧ ಚಂದ್ರಾಕೃತಿಯಲ್ಲಿ ಕಾಣುವುದರಿಂದ ಚಂದ್ರದ್ರೋಣ ಪರ್ವತವೆಂಬ ಹೆಸರು ಬಂದಿದೆ. ಇತ್ತೀಚಿನ ದಿನಗಳಲ್ಲಿ ಕೋಮುಗಲಭೆಯ ಕಾರಣದಿಂದ ಮುಳ್ಳುತಂತಿಯ ಬೇಲಿ ಹಾಕಿ, ಬರುವ ಭಕ್ತರನ್ನೆಲ್ಲಾ ಗುಮಾನಿಯಿಂದಲೇ ನೋಡಲಾಗುತ್ತಿದೆ. ಮನುಷ್ಯ ಮನುಷ್ಯರ ನಡುವೆ ಅದೆಂತ ದ್ವೇಷ, ಅದೆಂತ ವಿರಸ. ಸುಂದರವಾದ ಪರಿಸರದ ಮಧ್ಯೆಯೂ ದೇವರುಗಳ ಹೆಸರಲ್ಲಿ ನಡುವೆ ನಡೆಯುತ್ತಿರುವ ಹಿಂಸೆ ಎಂದು ನಿಲ್ಲುವುದೋ, ಕಾಲವೇ ಉತ್ತರಿಸಬೇಕು. ಸರಸವೇ ಜೀವನ, ವಿರಸವೇ ಮರಣ, ಸಮರಸವೇ ಜೀವನ ಎಂಬ ಸೌಹಾರ್ದತೆಯ ಸಂದೇಶ ಸಾರಿದ ವರಕವಿ ದ.ರಾ.ಬೇಂದ್ರೆಯವರ ಕವನದ ಸಾಲುಗಳು ಮನದಲ್ಲಿ ರಿಂಗಣಿಸಿದವು.

ಬಾಬಾಬುಡೆನ್ ಗಿರಿಯ ನೆತ್ತಿಯ ಮೇಲಿರುವ ಮಾಣಿಕ್ಯಧಾರಾ ನೋಡಲು ಹೊರಟೆವು, ರಸ್ತೆ ಹಾಳಾಗಿದ್ದರಿಂದ ಜೀಪುಗಳಲ್ಲಿ ಹೊರಟೆವು. ಇಲ್ಲಿರುವ ಜಲಪಾತದಲ್ಲಿ ಬಂಡೆಗಳ ಮೇಲಿನಿಂದ ಬೀಳುವ ನೀರು ಮಾಣಿಕ್ಯದಂತೆ ಹೊಳೆ ಹೊಳೆಯುತ್ತಾ ಮುತ್ತಿನ ಹನಿಗಳಂತೆ ಕೆಳಗುರುಳತ್ತವೆ. ತಂಪಾದ ನೀರು ಎಳನೀರಿನಷ್ಟೆ ಸಿಹಿಯಾಗಿತ್ತು. ಎಲ್ಲರೂ ನೀರಿನಡಿ ನಿಂತು ಮಕ್ಕಳಂತೆ ಸಂತಸಪಟ್ಟೆವು. ಮೊಬೈಲುಗಳಿಗೆ ಬಿಡುವೇ ಇರಲಿಲ್ಲ, ಸೆಲ್ಫಿಗಳು, ಸ್ನೇಹಿತರೊಟ್ಟಿಗೆ ವಿವಿಧ ಭಂಗಿಗಳಲ್ಲಿ ಕ್ಲಿಕ್ಕಿಸಿದರು. ಪ್ರವಾಸ ಆಯೋಜಿಸಿದವರು ವಿಸಲ್ ಹೊಡೆದ ಮೇಲೆಯೇ ಮನಸ್ಸಿಲ್ಲದ ಮನಸ್ಸಿನಿಂದ ಹೊರಟಿದ್ದು ನಾವು. ಮೇಲೆ ಬಂದು ನೋಡಿದರೆ ದೇವೀರಮ್ಮನ ಬೆಟ್ಟ ಎದುರಿಗೇ ಕಾಣುತ್ತಿತ್ತು. ಮೋಡಗಳು ಬದಿಗೆ ಸರಿದು ದೇವೀರಮ್ಮನ ಗುಡಿಯ ದರ್ಶನ ಮಾಡಿಸಿದ್ದವು. ಸುತ್ತಲೂ ಕಾಣುತ್ತಿದ್ದ ಚಿಕ್ಕಮಗಳೂರಿವ ವಿಹಂಗಮ ನೋಟ ಬೇಂದ್ರೆಯವರ ಕವನದ ಸಾಲುಗಳನ್ನು ನೆನಪಿಸಿದವು…..’ಗಂದರ್ವ ಸೀಮೆಯಾಯಿತು ಕಾಡಿನ ನಾಡು / ಕ್ಷಣದೊಳು ಕಾಡಿನ ನಾಡು’ ಈ ಗಂದರ್ವ ಸೀಮೆಯಲ್ಲಿ ಒಂದು ದಿನ ಕಳೆದ ನಾವೇ ಭಾಗ್ಯವಂತರಲ್ಲವೇ? ಸಕ್ಕರಾಯಪಟ್ಟಣದ ಅರಸನ ಕಿರಿಯ ಮಗಳು ಕಾವ್ಯ ಕನ್ನಿಕೆ ಸಿರಿ ನೇಚರ್ ರೆಸಾರ್ಟ್‌ನಲ್ಲಿ ಸಾಲಂಕೃತಳಾಗಿ ನಿಂತಿದ್ದಳು ನಮ್ಮನ್ನೆಲ್ಲಾ ಸ್ವಾಗತಿಸುತ್ತಾ, ಚಿಕ್ಕಮಗಳೂರಿನ ಕಾಫಿಯ ರುಚಿ ಸವಿಯಿರೆಂದು. ಚಿಕ್ಕಮಗಳೂರಿಗೆ ಕಾಫಿನಾಡೆಂದು ಹೆಸರು ಬರಲು ಕಾರಣ ತಿಳಿಯೋಣವೇ? ಹದಿನಾರನೇ ಶತಮಾನದಲ್ಲಿ ಸೂಫಿ ಸಂತ ಬಾಬಾ ಬುಡೆನ್, ಹಜ್ ಯಾತ್ರೆಯಿಂದ ಮರಳುವಾಗ, ಯೆಮೆನ್ ದೇಶದ ಮೋಚ ಬಂದರಿನಿಂದ ಏಳು ಕಾಫಿ ಬೀಜಗಳನ್ನು ಚಿಕ್ಕಮಗಳೂರಿನ ಬೆಟ್ಟಗಳ ಇಳಿಜಾರು ಪ್ರದೇಶದಲ್ಲಿ ನೆಟ್ಟನೆಂಬ ಐತಿಹ್ಯವಿದೆ. ಇಸ್ಲಾಂ ಧರ್ಮದಲ್ಲಿ ಏಳು ಎಂಬ ಅಂಕಿಗೆ ಪವಿತ್ರವಾದ ಸ್ಥಾನವಿದೆ. ಯೆಮೆನ್ ದೇಶದವರು, ವ್ಯಾಪಾರದಲ್ಲಿ ಲಾಭ ಪಡೆಯಲು, ಕಾಫಿ ಬೀಜಗಳನ್ನು ಯಾರಿಗೂ ಕೊಡಲಿಚ್ಚಿಸದೆ, ಹುರಿದ ಕಾಫಿ ಬೀಜಗಳನ್ನಷ್ಟೆ ಮಾರಾಟಮಾಡುತ್ತಿದ್ದರಂತೆ. ಹಾಗಾಗಿ ಸೂಫೀಸಂತನು, ತನ್ನ ಗಡ್ಡದಲ್ಲಿ ಕಾಫಿ ಬಿಜಗಳನ್ನು ಅಡಗಿಸಿಟ್ಟುಕೊಂಡು ಚಿಕ್ಕಮಗಳೂರಿನ ಚಂದ್ರಗಿರಿ ಬೆಟ್ಟಗಳ ಇಳಿಜಾರಿನಲ್ಲಿ ನೆಟ್ಟನಂತೆ, ಅಂದಿನಿಂದ ಚಂದ್ರಗಿರಿಗೆ ಬಾಬಾಬುಡನ್ ಗಿರಿ ಎಂಬ ಹೆಸರಿನಿಂದ ಕರೆಯಲಾಯಿತು. ಹೀಗೆ ಚಿಕ್ಕಮಗಳೂರೆಂಬ ಊರು ಕಾಫಿನಾಡೆಂದು ಪ್ರಸಿದ್ಧವಾಯಿತು.

ಪ್ರವಾಸದಿಂದ ಮನೆಗೆ ಹಿಂತಿರುಗುವಾಗ – ಹಸಿರುಡುಗೆ ತೊಟ್ಟ ಗುಡ್ಡ ಬೆಟ್ಟಗಳು, ತಂಗಾಳಿಗೆ ಮೈಯೊಡ್ಡಿ ನಕ್ಕು ನಲಿಯುತ್ತಿದ್ದ ಕುರಂಜಿ ಹೂಗಳು, ಸವನ್ನಾ ಹುಲ್ಲುಗಾವಲುಗಳು ಶೋಲೇ ಅರಣ್ಯಗಳು, ತುಂಬಿ ಹರಿವ ಕೆರೆಗಳು, ಗಿರಿಶಿಖರಗಳ ಮೇಲೆ ತೇಲುವ ಮೋಡಗಳು, ಕಾಫಿ ಮೆಣಸಿನ ತೋಟಗಳು – ಮನದಲ್ಲಿ ಮೆರವಣಿಗೆ ಹೊರಟಿದ್ದವು.

-ಡಾ.ಗಾಯತ್ರಿದೇವಿ ಸಜ್ಜನ್

8 Responses

  1. ನಯನ ಬಜಕೂಡ್ಲು says:

    ಸುಂದರ ಬರಹ

  2. ಕುರಂಜಿ…ಹೂವಿನ…ಇತಿಹಾಸದ… ವಿವರಣೆ.. ಚೆನ್ನಾಗಿದೆ… ಧನ್ಯವಾದಗಳು ಮೇಡಂ

  3. ಪಾರ್ವತಿಕೃಷ್ಣ. says:

    ಕಳಸ ಸಮೀಪದ ಕುದುರೆಮುಖ ಪ್ರದೇಶದಲ್ಲಿ ೧೯೮೧ರಿಂದ ೨೦೦೮ರ ವರೆಗೆ ಇದ್ದನನಗೆ ಈ ನೀಲಕುರುಂಜಿ ಹಲವು ಆಪ್ತ ನೆನಪುಗಳನ್ನು ನೆನಪಿಸಿತು. ಧನ್ಯವಾದಗಳು .

  4. Padmini Hegde says:

    ಬರಹ ಚೆನ್ನಾಗಿದೆ

  5. ಶಂಕರಿ ಶರ್ಮ says:

    ಅಪರೂಪದ ನೀಲಿ ಕುರುಂಜಿ ಹೂವಿನ ವೈಭವವನ್ನು ಕಣ್ತುಂಬಿಕೊಳ್ಳುತ್ತಾ, ದೇಗುಲಗಳ ದರುಶನ ಪಡೆದು, ಆನಂದವನ್ನು ನಮ್ಮೆಲ್ಲರಿಗೂ ಹಂಚಿದ ತಮಗೆ ಧನ್ಯವಾದಗಳು ಮೇಡಂ.

  6. ತಮ್ಮ ಅಭಿಮಾನ ಪೂರ್ವಕ ನುಡಿಗಳಿಗೆ ವಂದನೆಗಳು

  7. ನಿಮ್ಮ ಅಭಿಮಾನ ಪೂರ್ವಕ ನುಡಿಗಳಿಗೆ ವಂದನೆಗಳು

  8. Padma Anand says:

    ಕುರಂಜಿ ಹೂವುಗಳ ಸುಂದರ ವರ್ಣನೆಯೊಂದಿಗೆ ಕಾಫೀನಾಡಿನ ವಿವರಗಳೂ ಸೊಗಸಾಗಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: