‘ಗಾಯತ್ರೀ’ ಮಂತ್ರದ್ರಷ್ಟಾರ ವಿಶ್ವಾಮಿತ್ರ ಮಹರ್ಷಿ

Share Button

ಒಳ್ಳೆಯವರು ಕೆಟ್ಟವರಾಗಬಹುದು. ಕೆಟ್ಟವರು ಒಳ್ಳೆಯವರೂ ಆಗಬಹುದು, ಕೀರ್ತಿ-ಅಪಕೀರ್ತಿಗಳಲ್ಲಿ ಪೂರ್ವಜನ್ಮದ ಸುಕೃತಫಲ ಅಥವಾ ಪಾಪಶೇಷ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಾನುಸಾರದ ಫಲ ಎಂಬುದು ಸನಾತನ ನಂಬಿಕೆ. ಇಂತಹ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ಹೇರಳವಾಗಿವೆ. ಹಾಗೆಯೇ ಮನುಷ್ಯನ ತಪಃಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು.

ಅರ್ಥಾತ್… ಗುರಿ, ಸಾಧನೆ, ನಿಷ್ಠೆ ಇರುವಾತನಿಗೆ ಅಸಾಧ್ಯವಾದ ಕೆಲಸವೇ ಇಲ್ಲ ಎಂಬ ದೃಷ್ಟಾಂತವಾಗಿ ಅನೇಕ ಕಥೆಗಳು ನಮ್ಮನ್ನು ಎಚ್ಚರಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮಮುಂದೆ ವಿಶ್ವಾಮಿತ್ರ ಋಷಿ ನಿಲ್ಲುತ್ತಾರೆ. ‘ಬ್ರಾಹ್ಮಣ’ ಎಂಬುದು ಒಂದು ನಿಷ್ಠೆ, ಶಕ್ತಿ,ತಪಸ್ಸು ಎಂಬುದಾಗಿ ತಾನು ಸ್ವತಃ ಬ್ರಹ್ಮರ್ಷಿಯಾಗಿ ತೋರಿಸಿಕೊಟ್ಟವರವರು. ಬ್ರಾಹ್ಮಣರು ನಿತ್ಯ ಉಪಾಸನೆ ಮಾಡಬೇಕಾದಂತಹ, ನಾಲ್ಕು ವೇದಗಳಲ್ಲೂ ಇರುವಂತಹ ‘ಗಾಯತ್ರಿಮಂತ್ರ’ ದ್ರಷ್ಟಾರರು. ಮೂಲತಃ ಕ್ಷತ್ರಿಯನಾಗಿದ್ದ ಇವರು ಯಾವ ಕಾರಣದಿಂದ ಹೇಗೆ ಬ್ರಹ್ಮರ್ಷಿಯಾದರು? ಎಂಬುದನ್ನು ತಿಳಿಯೋಣ.

ವಿಶ್ವಾಮಿತ್ರನು ಚಂದ್ರವಂಶದವನು. ಗಾಧಿರಾಜನ ಮಗ. ಇವನ ಪೂರ್ವನಾಮ ‘ವಿಶ್ವರಥ’ ಎಂಬುದಾಗಿತ್ತು. ಈತನ ಧರ್ಮಪತ್ನಿ ಹೈಮವತಿ. ಆದರೆ ‘ಮೇನಕೆ’ಯು ವಿಶ್ವಾಮಿತ್ರನ ಮಡದಿಯೇಂದೇ ಲೋಕಪ್ರಸಿದ್ಧವು . ವಿಶ್ವಾಮಿತ್ರ- ಮೇನಕೆಯರ ಮಗಳೇ ಶಕುಂತಳೆ, ಕಣ್ವ ಋಷಿಯ ಸಾಕು ಮಗಳು, ವಿಶ್ವಾಮಿತ್ರನಿಗೆ ಶಾಲಾವತಿ, ದೃಷ್ಟದ್ವತಿ, ರೇಣು, ಮಾಧವಿ ಮೊದಲಾದ ಪತ್ನಿಯೂ ಇದ್ದರು. ಶಾಲಾವತಿಯಲ್ಲಿ ಹಿರಣ್ಯಾಕ್ಷ,

ದೇವಶ್ರವ, ಕತಿ ಎಂಬ ಮೂವರು ಮಕ್ಕಳಿದ್ದರು. ಕತಿಯ ವಂಶಜರೇ ಕಾತ್ಯಾಯನರೆಂದು ಪ್ರಸಿದ್ಧರು. ದೃಷ್ಟದ್ವತಿಯಲ್ಲಿ ‘ಅಷ್ಟಕ’, ಕಚ್ಛಪ, ‘ಹಾರೀತರ’ ಎಂಬ ಮೂವರು ಮಕ್ಕಳೂ ರೇಣು ಎಂಬ ಪತ್ನಿಯಿಂದ ಈ ಬ್ರಹ್ಮರ್ಷಿಗೆ ರೇಣುಮಾನ್, ಸಂಕೃತಿ, ಗಾಲವ, ಮುದ್ಗಲ (ಮುದ್ಗಲ ಋಷಿಯ ಬಗ್ಗೆ ಇದೇ ಅಂಕಣದಲ್ಲಿ ಈ ಹಿಂದೆ ಬರೆದಿದ್ದೇನೆ),  ಮದುಚ್ಚಂದ್ರ, ಜಯ ಹಾಗೂ ದೇವಲ ಎಂಬ ಪುತ್ರರಾದರು,

ಒಂದು ದಿನ ವಿಶ್ವರಥ (ವಿಶ್ವಾಮಿತ್ರ) ನು ಕ್ಷತ್ರಿಯ ರಾಜನಾಗಿದ್ದಾಗ ಜಗತ್ತಿನ ರಾಜ ಮಹಾರಾಜನ್ನೆಲ್ಲ ಸೋಲಿಸಿ ವಿಜಯದ ಅಬ್ಬರದಲ್ಲಿ ಹೆಮ್ಮೆಯಿಂದ ತನ್ನ ರಾಜಧಾನಿಗೆ ಹಿಂತಿರುಗುತ್ತಿದ್ದನಂತೆ. ಒಂದು ಮಧ್ಯಾಹ್ನದ ಹೊತ್ತಿಗೆ ದಾರಿಯಲ್ಲಿ ವಸಿಷ್ಠ ಮಹರ್ಷಿಯ ಆಶ್ರಮ ಕಂಡು ಸೈನ್ಯ ಸಮೇತ ಅಲ್ಲಿ ತಂಗಿದನಂತೆ. ವಸಿಷ್ಠನಿಗೆ ಬೇಡಿದ್ದನ್ನು ಕೊಡುವಂತಹ ‘ಕಾಮಧೇನು’ ಎಂಬ ಹಸುವಿತ್ತು . ಮತ್ತೆ ಕೇಳಬೇಕೆ? ಬಂದ ಅತಿಥಿಗಳಿಗೆಲ್ಲರಿಗೂ ಊಟೋಪಚಾರಗಳನ್ನು ಮಾಡಿಸಿದ ವಸಿಷ್ಠ , ಹಲವಾರು ಮಂದಿ ಸೈನ್ಯರೊಡಗೂಡಿ ಬಂದ ವಿಶ್ವರಥನಿಗೆ ಕ್ಷಣದಲ್ಲಿ ಮೃಷ್ಟಾನ್ನ ಭೋಜನವಿಕ್ಕಿದ ‘ಧೇನು’ ವಿನ ಮೇಲೆ ರಾಜನ ಕಣ್ಣು ಬಿತ್ತು. ಇಂತಹ ಅಪರೂಪದ, ವಿಶೇಷವಾದ ಹಸು ರಾಜಧಾನಿಯಲ್ಲಿರಬೇಕೇ ಹೊರತು ಓರ್ವ ಋಷಿಮುನಿಯ ಆಶ್ರಮದಲ್ಲ ಎಂಬ ಯೋಚನೆಯಂಟಾಗಿ ರಾಜನಾದ ತನಗೇ ದಕ್ಕಬೇಕೆಂಬ ದುರಾಸೆ ಮೂಡಿ ವಸಿಷ್ಠನಲ್ಲಿ ತನ್ನ ಆದೇಶವನ್ನು ಮುಂದಿಟ್ಟ.

ದೇವಲೋಕದ ಸೊತ್ತಾದ ಕಾಮಧೇನುವನ್ನು ನಿನಗೆ ಕೊಡುವ ಅಧಿಕಾರ ತನಗಿಲ್ಲ’ವೆಂದು ವಸಿಷ್ಠ ನಿರಾಕರಿಸಿದ. ಅಷ್ಟಕ್ಕೆ ವಿಶ್ವರಥ ಸುಮ್ಮನಾಗಲಿಲ್ಲ. ಬಲಾತ್ಕಾರ ಮಾಡಿದ. ನಿರ್ವಾಹವಿಲ್ಲದೆ ವಸಿಷ್ಠನು ಮಂತ್ರಿಸಿದ ದಂಡವನ್ನು ಧೇನುವಿನ ಮುಂದಿಟ್ಟ. ಇದರಿಂದಾಗಿ ವಿಶ್ವರಥನಿಗೆ ಕಾಮಧೇನುವನ್ನು ಅಲ್ಲಿಂದ ಅಲುಗಾಡಿಸುವುದಕ್ಕೂ ಅಸಾಧ್ಯವಾಯಿತು! ಅರರೆ! ಬ್ರಾಹ್ಮಣನಾದವನ ಮಂತ್ರಕ್ಕೆ ಇಷ್ಟು ಶಕ್ತಿಯಿದೆಯೇ?! ಎಂದು ರಾಜ, ಮೂಗಿನ ಮೇಲೆ ಬೆರಳಿಡುವಂತಾದ. ತಾನು ಬ್ರಹ್ಮರ್ಷಿಯಾಗುವ ಹಂಬಲದಿಂದ ರಾಜ್ಯ ಕೋಶಗಳೆಲ್ಲವೂ ತೊರೆದು ಹಲವು ವರ್ಷ ಘೋರ ತಪಸ್ಸು ಮಾಡಿ ವಸಿಷ್ಠನ ಅನುಗ್ರಹದಿಂದಲೇ ಬ್ರಹ್ಮರ್ಷಿಯಾಗಿ ‘ವಿಶ್ವಾಮಿತ್ರ’ನಾದ.

PC : Internet

ಗಾಯತ್ರಿ ಮಂತ್ರದ್ರಷ್ಟಾರ :

‘ಗಾಯತ್ರಿ ಎಂಬುದು ವೇದಮಂತ್ರ, ನಾಲ್ಕು ವೇದಗಳಲ್ಲೂ ಇರುವಂತಹ ಒಂದೇ ಒಂದು ಮಂತ್ರವೆಂದರೆ ಗಾಯತ್ರಿಮಂತ್ರ ಇದು ಸೂರ್ಯೋಪಾಸನಾ ಮಂತ್ರ ಇದು ಪರಬ್ರಹ್ಮನಿಂದ ಅನುಗ್ರಹಿಸಲ್ಪಟ್ಟದಾದರೂ ವಿಶ್ವಾಮಿತ್ರರು ಪ್ರಥಮವಾಗಿ ಸಿದ್ಧಿಮಾಡಿಕೊಂಡು ಬ್ರಹ್ಮಜ್ಞಾನ ಪಡೆದು ಲೋಕಕ್ಕೆ ಪ್ರಚುರಪಡಿಸಿದವರು. ಆದುದರಿಂದ ಗಾಯತ್ರಿ ಮಂತ್ರದ ಪುರಶ್ಚರಣ ಕೀರ್ತಿ ವಿಶ್ವಾಮಿತ್ರರಿಗೆ ಸಲ್ಲುತ್ತದೆ. ‘ವಿಶ್ವಾಮಿತ್ರ ಋಷಿ: ಗಾಯತ್ರೀ ಛಂದಃ ಸವಿತಾದೇವತಾ|’ ಎಂಬುದು ಗಾಯತ್ರಿ ಮಂತ್ರದ ಆರಂಭಿಕ ಸೊಲ್ಲು. (ಸವಿತೃ-ಸೃಷ್ಟಿಕರ್ತ, ಸೂರ್ಯನಾರಾಯಣ)

ಕಾಮಧೇನು ಪ್ರಕರಣದ ನಂತರ ವಸಿಷ್ಠ-ವಿಶ್ವಾಮಿತ್ರರೆಂದರೆ ಪೂರ್ವ-ಪಶ್ಚಿಮದಂತೆ. ಒಮ್ಮೆ, ‘ಹರಿಶ್ಚಂದ್ರ’ನ ಸತ್ಯತೆಯ ಬಗ್ಗೆ ವಸಿಷ್ಠ-ವಿಶ್ವಾಮಿತ್ರರಲ್ಲಿ ವಾಗ್ವಾದವಾಯಿತು. ಕೊನೆಗೂ ವಸಿಷ್ಠನ ಮಾತಿನಂತೆ ಸತ್ಯದಲ್ಲಿ ಹರಿಶ್ಚಂದ್ರನೇ ಗೆದ್ದುಕೊಂಡು ಲೋಕಕ್ಕೆ

ಸತ್ಯಹರಿಶ್ಚಂದ್ರ ನೆನೆಸಿದ ಕತೆ ನಾವೆಲ್ಲ ತಿಳಿದಿದ್ದೇವೆ. ಇಲ್ಲಿ ಹರಿಶ್ಚಂದ್ರನ ಸತ್ಯವ್ರತವನ್ನು ಮೆಚ್ಚಿ ತಾನು ಅವನಿಂದ ವಾಗ್ದಾನ ಪಡೆದ ರಾಜ್ಯವನ್ನೂ ಹಿಂದಕ್ಕೆ ಕೊಟ್ಟಿದ್ದಲ್ಲದೆ, ವಿಶ್ವಾಮಿತ್ರನು ತನ್ನ ಅದುವರೆಗಿನ ತಪಃಶಕ್ತಿಯನ್ನೂ ಸತ್ಯಹರಿಶ್ಚಂದ್ರನಿಗೆ ಧಾರೆ ಎರೆದಿರುವುದು ಈ ಮಹರ್ಷಿಯ ಹಿರಿದಾದ ತ್ಯಾಗ.

ನಂಬಿದವಗೆ ಇಂಬು:

ವಿಶ್ವಾಮಿತ್ರನು ತ್ರಿಶಂಕುವಿಗೆ ಸ್ವರ್ಗ ನಿರ್ಮಿಸಿ ಕೊಟ್ಟಿದ್ದೂ ಒಂದು ಕುತೂಹಲಭರಿತ ಕಥೆ, ಹರಿಶ್ಚಂದ್ರನ ತಂದೆಯಾದ ‘ತ್ರಿಶಂಕು’ ರಾಜನು ಒಮ್ಮೆ ತಾನು ಸಶರೀರವಾಗಿ ಸ್ವರ್ಗವೇರಬೇಕೆಂದು ಆಸೆ ಪಟ್ಟನಂತೆ. ಅದಕ್ಕಾಗಿ ತನ್ನಿಂದ ಯುಜ್ಞ ಯಾಗಾದಿಗಳನ್ನು ಮಾಡಿಸಬೇಕೆಂದು ವಸಿಷ್ಠನಲ್ಲಿ ವಿನಂತಿಸಿಕೊಂಡನಂತೆ. ಮೂರು ಪಾಪಗಳನ್ನು ಮಾಡಿದ ತಿಂಕುಶವು ಸ್ವರ್ಗವೇರಲು ಅನರ್ಹನು ಎಂದು ಬಗೆದು ವಸಿಷ್ಠನು ತ್ರಿಶಂಕುವಿನ ಕೋರಿಕೆಯನ್ನು ನಿರಾಕರಿಸಿದನಂತೆ. ಮುಂದೆ ವಿಶ್ವಾಮಿತ್ರನಲ್ಲಿ ಹೋಗಿ ವಿನಯದಿಂದ ಪ್ರಾರ್ಥಿಸಿಕೊಂಡ ಪರಿಣಾಮವಾಗಿ ವಿಶ್ವಾಮಿತ್ರನು ತ್ರಿಶಂಕುವಿಗೆ ಸಹಾಯ ಮಾಡಿದನಂತೆ. ಆದರೆ ತ್ರಿಶಂಕುವಿಗೆ ಸ್ವರ್ಗಸೇರುವ ಹಕ್ಕು ಇಲ್ಲವೆಂದು ದೇವೇಂದ್ರನು ಆತನನ್ನು

ಕೆಳಗೆ ನೂಕಿದನಂತೆ. ವಿಶ್ವಾಮಿತ್ರನು ಮೇಲೇರುವಂತೆ ದೂಡಿದನು. ಇದರಿಂದಾಗಿ ಮೇಲೆ ಸ್ವರ್ಗವೂ ಇಲ್ಲ, ಕೆಳಗೆ ಭೂಮಿಯೂ ಅಲ್ಲದ ಪ್ರತ್ಯೇಕ ಒಂದು ಸ್ವರ್ಗವನ್ನು ವಿಶ್ವಾಮಿತ್ರನು ನಿರ್ಮಿಸಿ, ಅದರ ಆಡಳಿತವನ್ನು ತ್ರಿಶಂಕುವಿಗೆ ಒಪ್ಪಿಸಿದನಂತೆ. ಇದುವೇ ಮುಂದೆ; ಅತ್ತೂ ಅಲ್ಲ, ಇತ್ತೂ ಅಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಗೆ ತ್ರಿಶಂಕು ಸ್ವರ್ಗ’ ಎಂಬ ನುಡಿಗಟ್ಟಾಯಿತು.

ಲೋಕಹಿತ ಚಿಂತಕ

ರಾಮಾಯಣದಲ್ಲೂ ವಿಶ್ವಾಮಿತ್ರನ ಪಾತ್ರವಿದೆ. ಋಷಿಮುನಿಗಳ ಯಜ್ಞ-ಯಾಗಾದಿಗಳಿಗೆ ಉಪಟಳ ಕೊಡುತ್ತಿದ್ದ ಸುಬಾಹು, ಮಾರೀಚ ಮೊದಲಾದ ರಾಕ್ಷಸರನ್ನು ಸದೆಬಡಿಯಲು ಬಾಲಕರಾದ ರಾಮ-ಲಕ್ಷ್ಮಣರೇ ಯೋಗ್ಯರೆಂದು ಬಗೆದು ಅಯೋಧ್ಯೆಗೆ ತೆರಳುತ್ತಾನೆ. ರಾಕ್ಷಸರ ಸಂಹಾರಕ್ಕಾಗಿ ರಾಮ-ಲಕ್ಷ್ಮಣರನ್ನು ಕಳುಹಿಸಿಕೊಡಬೇಕೆಂದೂ ಅವರಿಗೆ ಧನುರ್ವಿದ್ಯಾ ಶಿಕ್ಷಣ ನೀಡಿ ಪಳಗಿಸುವನೆಂದೂ ದಶರಥನಲ್ಲಿ ವಿನಂತಿಸುತ್ತಾನೆ ವಸಿಷ್ಠನ ಶಿಫಾರಸ್ಸಿನ ಮೇರೆಗೆ ದಶರಥನು ಬಾಲಕರನ್ನು ಕಳುಹಿಸುತ್ತಾನೆ. ವಿಶ್ವಾಮಿತ್ರನು ರಾಮ-ಲಕ್ಷ್ಮಣರಿಗೆ ‘ಬಲ’, ‘ಅತಿಬಲ’ ಎಂಬ  ವಿಶೇಷವಾದ ಬಿಲ್ಲುವಿದ್ಯೆಯನ್ನು ಬೋಧಿಸುತ್ತಾನೆ.

ಈ ಮೂಲಕ ಲೋಕಕಂಟಕರ ವಿನಾಶಕ್ಕೆ ಕಾರಣನಾಗುತ್ತಾನೆ. ಕ್ಷತ್ರಿಯನಾಗಿ ಜನಿಸಿಯೂ ಬ್ರಹ್ಮರ್ಷಿಯ ಪದವಿಗೇರಿದುದು ಆತನ ತ್ಯಾಗ, ತಪಸ್ಸಿನ ಫಲವು. ಸಪ್ತಋಷಿಗಳಲ್ಲಿ ಒಬ್ಬನಾದ ವಿಶ್ವಾಮಿತ್ರನು ಗೋತ್ರ ಪ್ರವರ್ತಕ. ಈತನ ತ್ಯಾಗ, ತಪಸ್ಸು, ಗುರಿ, ನಿಷ್ಠೆ ಇವೆಲ್ಲವೂ ಸಾಧಕರಿಗೆ ಮಾದರಿಯಾಗಿದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

3 Responses

  1. Vijayasubrahmanya says:

    ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ ವಂದನೆಗಳು.

  2. ಪೌರಾಣಿಕ ಕಥೆಯ..ಅನಾವರಣ… ಚೆನ್ನಾಗಿದೆ… ಮರೆತ..ಕತೆ ಗಳನ್ನು.. ಮತ್ತೆ ಮತ್ತೆ…ನೆನಪಸುವಂತೆ..ಮಾಡುವ ನಿಮಗೆ.. ಧನ್ಯವಾದಗಳು… ವಿಜಯ ಮೇಡಂ

  3. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: