‘ಹಾಡಿ’ಯೊಳಗಿನ ಹಾಡು

Share Button
ಸೋಲಿಗರ ‘ಪೋಡು’ವಿನಲ್ಲಿ ಹೇಮಮಾಲಾ

ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿರಂಗನ ಬೆಟ್ಟ ಹಾಗೂ ಸುತ್ತುಮುತ್ತಲಿನ ಅರಣ್ಯ ಪ್ರದೇಶದಲ್ಲಿ ‘ಸೋಲಿಗರು’ ಎಂದು ಕರೆಲ್ಪಡುವ ಬುಡಕಟ್ಟು ಗಿರಿಜನ ಸಮುದಾಯವಿದೆ. ಕಾಡಿನ ಒಳಗೆ ವಾಸಿಸುತ್ತಿದ್ದ ಇವರನ್ನು ಕೆಲವು ದಶಕಗಳ ಹಿಂದೆ ಕಾಡಿನಂಚಿನ ವಸತಿಗೆ ಸ್ಥಳಾಂತರಿಸಲಾಗಿದೆ. ಹಲವಾರು ಕುಟುಂಬಗಳು ಅಕ್ಕ-ಪಕ್ಕ ವಾಸಿಸುವ ಈ ಜಾಗವನ್ನು ‘ಹಾಡಿ’ ಅಥವಾ ‘ಪೋಡು’ ಅನ್ನುತ್ತಾರೆ. 110 ಕ್ಕೂ ಹೆಚ್ಚು ‘ಪೋಡು’ಗಳಲ್ಲಿ ಅಂದಾಜು 36000 ದಷ್ಟು  ಸೋಲಿಗರು ವಾಸವಾಗಿದ್ದಾರಂತೆ. ಸರಕಾರ ಹಾಗೂ ಕೆಲವು ಎನ್.ಜಿ.ಒ ದವರು ಗಿರಿಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಮಾಜದ ಮುಖ್ಯವಾಹಿನಿಯೊಂದಿಗೆ ಸೇರಿಸುವ ಪ್ರಯತ್ನ ಮಾಡುತ್ತಿವೆ. ಹಾಗಾಗಿ, ಈಗ ಇವರು ಆದಿವಾಸಿ ಬುಡಕಟ್ಟು ಜನಾಂಗವಾಗಿ ಉಳಿದಿಲ್ಲ, ಈಗಲೂ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ತಲಪದ ‘ಪೋಡು’ಗಳಿವೆ. ಹಾಗೆಯೇ, ಬೆರಳೆಣಿಕೆಯಷ್ಟು ಮಂದಿ ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಮಾಡಿದವರೂ ಇದ್ದಾರಂತೆ.

ಸೋಲಿಗರು ತಮ್ಮನ್ನು ತಾವು ಕಾಡಿನ  ಮಕ್ಕಳೆಂದು ಕರೆದುಕೊಳ್ಳುವವರು.  ಅವರು  ‘ಸೋಲಿಗ ನುಡಿ’ ಎಂಬ ಭಾಷೆಯನ್ನು ಬಳಸುತ್ತಾರೆ. ಅದಕ್ಕೆ  ಲಿಪಿ ಇಲ್ಲದ ಕಾರಣ  ಕನ್ನಡ ಮತ್ತು ತಮಿಳು ಭಾಷೆಯ ಲಿಪಿಯನ್ನು ಬಳಸುತ್ತಾರೆ. ಮಣ್ಣಿನ ಗೋಡೆಯ, ಬಾಣೆ ಹುಲ್ಲು ಹೊದಿಸಿದ, ಒಂದೇ ಬಾಗಿಲಿರುವ ಪುಟ್ಟ ಗುಡಿಸಲು ಅವರ ಮನೆ. ಇರುವೆ, ಕಪ್ಪೆ, ಹಾವು, ಚೇಳು ಮೊದಲಾದುವುಗಳು ಅವರ ಮನೆಗೆ ಮುಕ್ತ ಪ್ರವೇಶ ಪಡೆದಿವೆ. ಪ್ರಕೃತಿಯೊಂದಿಗೆ ಜೀವಿಸುವ ಇವರಿಗೆ ಯಾವುದರ ಭಯವೂ ಇಲ್ಲ.  ಕತ್ತಲು ಕವಿದ ಆ ಗುಡಿಸಲಿನಲ್ಲಿ ಸೌದೆ ಒಲೆ, ಕೆಲವು ಪಾತ್ರೆಗಳು, ಒಂದಿಷ್ಟು ದಿನಸಿ, ಸ್ವಲ್ಪ ಬಟ್ಟೆಬರೆಗಳು, ಕೆಲವು ಅಗತ್ಯದ ಪರಿಕರಗಳು. ಅಷ್ಟೇ ಅವರ ಸಂಪತ್ತು. ರಾಗಿ ಮುಖ್ಯ ಆಹಾರ. ತಯಾರಿಸಿದ ಆಹಾರವನ್ನು ಅಕ್ಕ-ಪಕ್ಕದ  ಗುಡಿಸಲಿನವರೊಂದಿಗೆ ಹಂಚಿಯೇ ಉಣ್ಣುವ ಪದ್ಧತಿಯಿರುವುದರಿಂದ  ಸಂತೃಪ್ತಿ, ಸಹಬಾಳ್ವೆ ಸದಾ ಇರುತ್ತದೆ,  

ಆರಾಮದಾಯಕವಾದ ಪ್ಯಾಂಟ್, ಚೂಡಿದಾರ ಧರಿಸಿಕೊಂಡಿರುವ ನಗರವಾಸಿಗಳು ಮರವನ್ನೇರುವುದಿರಲಿ, ಕೆಲವು ಮೆಟ್ಟಿಲುಗಳನ್ನು ಏರಲೂ ಕಷ್ಟಪಡುವುದನ್ನು ನೋಡುತ್ತೇವೆ. ಇನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ಕೆಲಸ ಮಾಡಲು ಸೇಫ್ಟಿ ಬೆಲ್ಟ್ ಧರಿಸುವುದು  ಕಡ್ಡಾಯ ಎಂಬ ಕಾನೂನು  ಇದೆ. ಆದರೆ ಸೋಲಿಗ  ಸಮುದಾಯದ ಸ್ತ್ರೀಯರು, ಸೀರೆ ಉಟ್ಟುಕೊಂಡು, ಯಾವುದೇ ಸೇಫ್ಟಿ ಪರಿಕರದ  ಸಹಾಯವಿಲ್ಲದೆ  ಎತ್ತರದ ಮರಗಳನ್ನೇರಬಲ್ಲರು. ಕಾಡಿನಲ್ಲಿ ವಾಸಿಸುವ ಅವರಿಗೆ ಅಕಸ್ಮಾತ್  ಆಗಿ ವನ್ಯಜೀವಿಗಳು ಎದುರಾದಾಗ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಕಾಡಿನ ಕಿರು ಉತ್ಪನ್ನಗಳಾದ ಸೀಗೆಕಾಯಿ, ನೆಲ್ಲಿಕಾಯಿ, ಹಣ್ಣುಗಳು, ಜೇನು ಇತ್ಯಾದಿಗಳನ್ನು ಪಡೆಯಲು ಅವರಿಗೆ ಪ್ರಕೃತಿಯೇ ಕಲಿಸಿದ ಪಾಠವಿದು. ನಮ್ಮ ಕೋರಿಕೆಯ ಮೇರೆಗೆ ಇಬ್ಬರು ಸೀರೆ ಧರಿಸಿದ್ದ  ಸೋಲಿಗ ಸ್ತ್ರೀಯರು 50 ಅಡಿಗೂ  ಎತ್ತರದ ಮರವನ್ನು   ಚಕಚಕನೇ ಏರಿದಾಗ  ನಾವು ನಿಬ್ಬೆರಗಾದೆವು.

ಸೀರೆಯುಟ್ಟುಕೊಂಡು ಎತ್ತರದ ಮರವನ್ನೇರುವ ಸೋಲಿಗ ಮಹಿಳೆ

‘ಜಲ್ಲೆ ಸಿದ್ದಮ್ಮ’
ಇನ್ನು ಕಾಡಿನ ಮಹಿಳೆಯರ ಚಾಕಚಕ್ಯತೆ ಮತ್ತು   ದೇಸಿಜ್ಞಾನ ಅಪಾರ. ನಾವು ‘ಜಲ್ಲೆ ಸಿದ್ದಮ್ಮ‘ ಎಂಬವರ ಪುಟ್ಟ ಮನೆಗೆ ಭೇಟಿ ಕೊಟ್ಟೆವು .ಅವರು ಸೋಲಿಗರ ‘ಪೋಡು’ಗಳಲ್ಲಿ, ಯಾವುದೇ  ಫಲಾಪೇಕ್ಷೆ ಇಲ್ಲದೆ  ಹೆರಿಗೆ ಮಾಡಿಸುತ್ತಿದ್ದ ಸೂಲಗಿತ್ತಿ. ದಟ್ಟ ಕಾಡಿನ ಯಾವುದೇ ‘ಹಾಡಿ’ಯಿಂದ ಕರೆ ಬಂದರೂ, ಅವರು ಆ ಮನೆಗೆ ತೆರಳಿ ತನಗೆ ಒಲಿದಿದ್ದ ನಾಟಿ ವೈದ್ಯ  ಹಾಗೂ ಪ್ರಸೂತಿ ಜ್ಞಾನದ ಮೂಲಕ  ಸುಖಪ್ರಸವವಾಗುವಂತೆ ನೋಡಿಕೊಳ್ಳುತ್ತಿದ್ದರು. ಇವರು ಸೋಲಿಗರ ಪದ್ಧತಿಯಂತೆ, ಗರ್ಭಿಣಿಯನ್ನು ಕುಕ್ಕರುಗಾಲಿನಲ್ಲಿ ಕುಳ್ಳಿರಿಸಿ ಹೆರಿಗೆ ಮಾಡಿಸುತ್ತಿದ್ದರಂತೆ. ತಮ್ಮ ಕೈಗೆ ಹರಳೆಣ್ಣೆಯನ್ನು ಸವರಿ, ಬಸುರಿಯ ಹೊಟ್ಟೆಯ ಮೇಲೆ ತೀಡುತ್ತಾ, ಯಾವ ಸಮಯದಲ್ಲಿ ಹೆರಿಗೆಯಾಗಬಹುದು, ಮಗು ಹೆಣ್ಣೊ-ಗಂಡೋ ಎಂದು  ಅತ್ಯಂತ ಕರಾರುವಾಕ್ಕಾಗಿ ತಿಳಿಸುತ್ತಿದ್ದುದು ಆಧುನಿಕ ವೈದ್ಯರಿಗೆ ಅಚ್ಚರಿ ಮೂಡಿಸುತ್ತಿತ್ತಂತೆ.  ಗಿರಿಜನರ ‘ಪೋಡು’ಗಳಲ್ಲಿ  ಮೂರು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿದ ಹಿರಿಮೆ ಇವರದು. ಜಲ್ಲೆ ಸಿದ್ದಮ್ಮ ಅವರಿಗೆ ರಾಜ್ಯ ಪ್ರಶಸ್ತಿಯೂ ಸಂದಿದೆ. ಇವರು 2004 ರಲ್ಲಿ ನಿಧನರಾದರು.

ವಿಶಿಷ್ಟ ಹಬ್ಬ ‘ರೊಟ್ಟಿ ಹಬ್ಬ’

ಆಧುನಿಕತೆ ಗಾಳಿ ಸೋಕಿದರೂ, ಸೋಲಿಗ ಬುಡಕಟ್ಟು ಜನಾಂಗವು  ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಅವರು ಆಚರಿಸುವ ವಾರ್ಷಿಕ  ‘ರೊಟ್ಟಿ ಹಬ್ಬ’ ಇದಕ್ಕೆ  ಉತ್ತಮ ಉದಾಹರಣೆ. ಸ್ಥಳೀಯ ಮುಖ್ಯಸ್ಥರು ತಿಳಿಸಿದ ಪ್ರಕಾರ, ಪ್ರತಿ ‘ಪೋಡುವಿನಲ್ಲಿ’ , ಸಾಮಾನ್ಯವಾಗಿ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಒಂದು ನಿಗದಿ ಪಡಿಸಿದ  ಶುಕ್ರವಾರ ರಾತ್ರಿ ‘ರೊಟ್ಟಿ ಹಬ್ಬ’ ಆಚರಿಸುತ್ತಾರೆ. ಸುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಸೋಲಿಗರಿಗೂ ಆಹ್ವಾನವಿರುತ್ತದೆ. ತಾವು ಬೆಳೆದ ರಾಗಿಯನ್ನು ಬೀಸಿ ಹಿಟ್ಟು ಮಾಡಿ, ಕಾಡಿನಿಂದ ತಂದ  ತೇಗ, ಮುತ್ತುಗದ ಎಲೆಗಳ ಮೇಲೆ ತಟ್ಟಿ, ಕೆಂಡದಲ್ಲಿ ಸುಟ್ಟು ರೊಟ್ಟಿ ತಯಾರಿಸುತ್ತಾರೆ . ಇದಕ್ಕೆ ನೆಂಚಿಕೆಯಾಗಿ ಕಾಡು ಹಲಸಿನ ಪಲ್ಯವಿರುತ್ತದೆ. ಇದಕ್ಕೆ ‘ತಾಳ್ದ’ ಅನ್ನುತ್ತಾರೆ. ಈಗೀಗ ಅನ್ನ, ಪಾಯಸ, ಸಾಂಬಾರು ಕೂಡಾ ಅಡುಗೆ ಮಾಡುತ್ತಾರೆ. ಅಡುಗೆಯನ್ನು ತಮ್ಮ ಕುಲದೇವರುಗಳಿಗೆ ನೈವೇದ್ಯ ಅರ್ಪಿಸುತ್ತಾರೆ. ಆಮೇಲೆ ಬಂದವರೆಲ್ಲರೂ ಪ್ರಸಾದ ಸ್ವೀಕರಿಸುತ್ತಾರೆ.  ರಾತ್ರಿಯಾದ ಮೇಲೆ, ತಮಟೆ, ದಮಡಿ, ತಾಳ, ಡೋಲಿನ ವಾದನದೊಂದಿಗೆ  ವಿಶಿಷ್ಟವಾದ ‘ಗೋರು ಗೊರುಕ ಗೋರುಕನ…’ ಎನ್ನುವ ಹಾಡಿಗೆ ಸೋಲಿಗರು ವೃತ್ತಾಕಾರವಾಗಿ ನರ್ತಿಸುತ್ತಾರೆ. ‘ಗೋರು ಕಾನ’ ಎಂದರೆ ಘೋರವಾದ ಕಾನನ ಎಂಬ ಅರ್ಥ. ಸಂಜೆಯಿಂದ ಮಾರನೆಯ ಬೆಳಗ್ಗೆಯವರೆಗೂ ನೃತ್ಯ ನಡೆಯುತ್ತಿರುತ್ತದೆ.  ಈ ಹಾಡಿನಲ್ಲಿ ಸೋಲಿಗರು ಆರಾಧಿಸುವ ದೇವರುಗಳು,  ಹೂವು, ಹಣ್ಣು ಎಲ್ಲವೂ ಕೇಳಿ ಬರುತ್ತದೆ.  

ರೊಟ್ಟಿ ಹಬ್ಬವು ವಯಸ್ಸಿಗೆ ಬಂದ ತರುಣ-ತರುಣಿಯರಿಗೆ ಒಂದು ರೀತಿಯ   ‘ಸ್ವಯಂವರ’ ಕಾರ್ಯಕ್ರಮವೂ ಹೌದು.  ನೃತ್ಯ ಮಾಡುತ್ತಿರುವ ಹುಡುಗರನ್ನು ನೋಡುತ್ತಿರುವ  ಸೋಲಿಗ ಹೆಣ್ಣುಮಗಳು  ತನಗೆ ಯಾರಾದರೂ ಇಷ್ಟವಾದರೆ, ಆತನಿಗೆ ಸಣ್ಣ ಕಲ್ಲು ಎಸೆದು ಗಮನ ಸೆಳೆಯುತ್ತಾಳೆ. ಹುಡುಗನಿಗೂ ಒಪ್ಪಿಗೆ ಎಂದಾದಲ್ಲಿ, ಅವರಿಬ್ಬರೂ ಮಧ್ಯರಾತ್ರಿ ಕಳೆದ ಮೇಲೆ ಕಾಡಿನೊಳಗೆ ಹೋಗುತ್ತಾರೆ. ಹಾಗೆ ನಾಪತ್ತೆಯಾಗಿ ಕೆಲವು ದಿನ ಅವರು  ಕಾಡಿನೊಳಗೆ ಇದ್ದು ಹಿಂತಿರುಗಿ ಬಂದ ಮೇಲೆ ಊರ ಮುಖ್ಯಸ್ಥರ ಎದುರು ಬರುತ್ತಾರೆ.  ಇಬ್ಬರೂ ಪರಸ್ಪರ ಜೋಡಿಯಾಗಲು ಒಪ್ಪಿಗೆಯೇ ಎಂದು ಇಬ್ಬರನ್ನೂ ಕೇಳುತ್ತಾರೆ. ಒಪ್ಪಿಗೆಯಾದರೆ, ವರನ ಕಡೆಯವರು, ‘ಹುಡುಗಿಯನ್ನು ಅಪಹರಿಸಿಕೊಂಡು ಹೋದ ‘ ತಪ್ಪಿಗೆರೂ.12.50/- ‘ತೆರ’ ಅಥವಾ ತಪ್ಪು ಕಾಣಿಕೆ ಕೊಡಬೇಕು. ಇಲ್ಲಿಗೆ ಅವರ ಸಾಂಸಾರಿಕ ಜೀವನಕ್ಕೆ ಅಧಿಕೃತ ಪರವಾನಗಿ ಸಿಕ್ಕಿದಂತೆ. ಹೀಗೆ- ಇವರ ಮದುವೆಯ ಖರ್ಚು ಕೇವಲ   ರೂ.12.50/-  ನಮಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಕಡಿಮೆ. ಇದಕ್ಕಿಂತ ಸರಳ ವಿವಾಹ ಬೇರೆ ಇದ್ದೀತೆ?

ಇದಕ್ಕೆ ಹಿನ್ನೆಲೆಯಾಗಿ ಅವರು ಹೇಳುವ ಕಥೆ ಏನೆಂದರೆ , ಬಿಳಿಗಿರಿ ರಂಗನ ಬೆಟ್ಟದಲ್ಲಿರುವ ರಂಗನಾಥನು, ಸೋಲಿಗರ ಮಗಳು ‘ಕುಸುಮಾಲೆ’ಯನ್ನು ಮೋಹಿಸಿ, ಅಪಹರಿಸಿ ಮದುವೆಯಾದನಂತೆ. ಹಾಗಾಗಿ ಅವರು ಅನುಸರಿಸಿದ ವಿವಾಹಪದ್ಧತಿಯನ್ನು ಇವರು  ಈಗಲೂ ಪಾಲಿಸುವುದಂತೆ. ಇವರು ಬಿಳಿಗಿರಿ ರಂಗನಾಥನನ್ನು ‘ರಂಗಬಾವಾ’ ಎಂದು ಸಂಬೋಧಿಸಿ ಸ್ತುತಿಸುತ್ತಾರೆ. ಮಲೆ ಮಹದೇಶ್ವರ  ಸ್ವಾಮಿ ಇವರಿಗೆ  ‘ಮಾವ’. ‘ಚೆಲ್ಲಿದರೂ ಮಲ್ಲಿಗೆಯಾ…’ ಎಂದು ಹಾಡುತ್ತಾ ತಮ್ಮ ‘ಮಹದೇಶ್ವರ ಮಾವ’ನನ್ನು ನೆನೆಯುತ್ತಾರೆ. ಹೀಗೆ ದೇವರನ್ನು  ತಮ್ಮ ಬಾಂಧವರೆಂದು ಭಾವಿಸಿ ರಚಿಸಿದ ಜನಪದ  ಹಾಡುಗಳನ್ನು ಕೇಳುವುದು ಬಲುಸೊಗಸು.

ಸೆಪ್ಟೆಂಬರ್  04,2022  ರಂದು ಮೈಸೂರಿನ ಪೀಪಲ್ ಟ್ರೀ ಮತ್ತು ಇನ್ನರ್ ವೀಲ್ಸ್   ಅವರ ಸಹಭಾಗಿತ್ವದಲ್ಲಿ ಆಯೋಜಿಸಿಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನಗೆ ಬಿಳಿಗಿರಿರಂಗನ ಬೆಟ್ಟದಲ್ಲಿರುವ ‘ಸೋಲಿಗರ’ ಹಾಡು-ಪಾಡುಗಳನ್ನು ನೋಡುವ ಅವಕಾಶ ಸಿಕ್ಕಿತು. 

-ಹೇಮಮಾಲಾ.ಬಿ

7 Responses

  1. ಬಿಳಿಗಿರಿ ರಂಗನ ಬೆಟ್ಟದ ಮೇಲೆ ವಾಸುಸುತ್ತಿರುವ ಸೋಲಿಗ ಜನಾಂಗೀಯರ ಹಾಡು-ಪಾಡಿನ ನಿರೂಪಣೆ ಸೊಗಸಾಗಿ ಬಂದಿದೆ. ಚಿತ್ರಗಳುಪೂರಕವಾಗಿವೆ.
    ಧನ್ಯವಾದಗಳು, ಗೆಳತಿ ಹೇಮಾ.

  2. ನಯನ ಬಜಕೂಡ್ಲು says:

    ಬ್ಯೂಟಿಫುಲ್. ನಿಮ್ಮ ಪ್ರವಾಸ ಕಥನಗಳು ಬಹಳ ಚಂದ. ಅದರ ಸೆಳೆತ ಹೇಗಿದೆ ಎಂದರೆ ಕುಳಿತಲ್ಲಿಯೇ ಓದುಗನನ್ನು ಆ ತಾಣದೊಳಗೆ ಸವಾರಿ ಮಾಡಿಸಿ ಬಿಡುತ್ತದೆ. ತುಂಬಾ ಚಂದ.

  3. Savithri bhat says:

    ಸೋಲಿಗರ ಜೀವನ ಶೈಲಿಯ, ಅವರ ಆಚಾರ,ವಿವಾಹ ,ಇತ್ಯಾದಿ ಲೇಖನ ಓದಿ ತುಂಬಾ ಕುಶಿ ಆಯಿತು

  4. ಶಂಕರಿ ಶರ್ಮ says:

    ಬಿಳಿಗಿರಿ ರಂಗನ ಬೆಟ್ಟದ ಮೇಲಿನ ಸೋಲಿಗರ ಜೀವನ ಶೈಲಿಯ ಬಗೆಗಿನ ಕಿರುಪರಿಚಯದ ಲೇಖನ ಬಹಳ ಚೆನ್ನಾಗಿದೆ.

  5. ಆಶಾ ನೂಜಿ says:

    ಸೂಪರ್

  6. Padmini Hegde says:

    ಸೋಲಿಗ ಜನಾಂಗೀಯರ ಹಾಡು-ಪಾಡಿನ ನಿರೂಪಣೆ ಸೊಗಸಾಗಿದೆ. ಆಧುನಿಕತೆ ಗಾಳಿ ಸೋಕಿದರೂ, ಸೋಲಿಗ ಬುಡಕಟ್ಟು ಜನಾಂಗವು ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡಿರುವುದು, ಬಿಳಿಗಿರಿ ರಂಗನನ್ನು ‘ಬಾವಾ’ ಎಂದು ಸಂಬೋಧಿಸಿ ಸ್ತುತಿಸುವುದು ವಿಶೇಷವಾದದ್ದು

  7. Hema says:

    ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: