ಲಹರಿ

‘ಸುರಹೊನ್ನೆ’ಯ ಸೊಬಗಿಗೆ ನಲ್ನುಡಿಯ ಘಮ..

Share Button

ಧನ್ಯವಾದ ಸುರಹೊನ್ನೆ!

ಹೌದು…ಸುರಹೊನ್ನೆಗೆ ಧನ್ಯವಾದ ತಿಳಿಸಲೆಂದೇ ನಾನೀ ಲೇಖನವನ್ನು ಬರೆಯ ಹೊರಟಿರುವುದು. ಕಳೆದ ಮೂರು ವರ್ಷಗಳಿಂದ ಸುಮಾರು‌ ಐವತ್ತೆರಡು ಲೇಖನಗಳನ್ನು ಬರೆದು ಸುರಹೊನ್ನೆಯ‌ ಓದುಗರೆದುರು‌ ಇಟ್ಟಿದ್ದೇನೆ. ಸುರಹೊನ್ನೆಯ‌ ಓದುಗರು ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಅನ್ನಲು ನಿಜವಾಗಿಯೂ ಖುಷಿಯಾಗುತ್ತಿದೆ. ಧನ್ಯವಾದ ತಿಳಿಸಲು ಕೆಲವು ಕಾರಣಗಳು ನನ್ನ ಮುಂದಿವೆ. ಕೆಲವನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಮನಸ್ಸಾಗಿದೆ.

ಸುರಹೊನ್ನೆಗೆ ಬರೆಯಲಾರಂಭಿಸಿದ ನಂತರ ನನ್ನ‌ ಓದು ಹೆಚ್ಚಾಗಿದೆ. ಹಾಗಾಗಿ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಎಷ್ಟೋ ಓದುಗರು‌ ಅವರ ಅನುಭವಗಳನ್ನು ಹಂಚಿಕೊಳ್ಳುವ ಕಾರಣ, ಗೊತ್ತಿಲ್ಲದ ವಿಷಯಗಳನ್ನು ತಿಳಿಯುವಂತಾಗಿದೆ. ಓದುಗರು ಮುಂದಿಡುವ ಪ್ರಶ್ನೆಗಳಿಗೆ ಅಥವಾ ಸಂದೇಹಗಳಿಗೆ ಉತ್ತರ ಹುಡುಕಲು ಹೊರಟಾಗ ಹೊಸತೊಂದು ವಿಷಯದ ಬಗ್ಗೆ ಹೊಳಹು ಮೂಡುತ್ತದೆ. ಮಾತ್ರವಲ್ಲದೇ‌ ಇಲ್ಲಿ‌ ಅನುಭವೀ ಲೇಖಕರ ಲೇಖನಗಳನ್ನು ಓದುವ ಸದವಕಾಶ.

ಕೆಲವೊಮ್ಮೆ ನನ್ನ ಪರಿಚಿತ ಬಳಗದವರು “ನಿಮ್ಮ ಲೇಖನದಕೊಂಡಿ (ಲಿಂಕ್) ಕಳುಹಿಸಿ” ಅಂದಾಗ ಖುಷಿಯಿಂದಲೇ ಕಳುಹಿಸುವುದುಂಟು. ಹೆತ್ತವರಿಗೆ ಹೆಗ್ಗಣ ಮುದ್ದು‌ಅನ್ನುವ ಮಾತಿಗೆ ನಾನೂ ಹೊರತಲ್ಲ ನೋಡಿ. ಲೇಖನದ ಕೊಂಡಿ ಕಳುಹಿಸುವಾಗ ನನ್ನ ಲೇಖನ ಓದಿ ಹೊಸತೇನಾದರೂ ಪ್ರತಿಕ್ರಿಯೆ ಬಂದಿದೆಯೇ‌ ಅಂತ ಪರೀಕ್ಷಿಸುವುದುಂಟು. ಹಿಂದೊಮ್ಮೆ “ಅಲರ್ಜಿ‌ ಅನ್ನುವ ಬೆದರು ಬೊಂಬೆ” ಅನ್ನುವ ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಸೇರೆಮರದ ರಸದಿಂದ‌ ಅಥವಾ ಸೇರೆ ಮರದಡಿ ಬಂದು ನಿಂತಾಗ ಹಲವರಿಗೆ ಮೈಯಲ್ಲಿ ತುರಿಕೆ ಬರುವುದರ ಬಗ್ಗೆ ಪ್ರಸ್ತಾಪಿಸಿದ್ದೆ. ಇತ್ತೀಚೆಗೆ‌ ಒಬ್ಬರು “ಸೇರೆ ಮರದ ಸೊನೆ(ರಸ) ತಾಗಿ‌ ಉಂಟಾಗುವ ತುರಿಕೆಗೆ ಮನೆಮದ್ದು‌ ಇದ್ದರೆ ತಿಳಿಸಿ” ಅಂತ ಬರೆದಿದ್ದರೆ‌ ಇನ್ನೊಬ್ಬರು ‘ನಾನೂ ಆ ಉತ್ತರಕ್ಕಾಗಿ ಕಾಯುತ್ತಿದ್ದೇನೆ‌ಅಂತ ಪ್ರತಿಕ್ರಿಯಿಸಿದ್ದರು. ನಾನು ಈ ಪ್ರತಿಕ್ರಿಯೆ ನೋಡಲು ತಡವಾದದ್ದಕ್ಕೆ “ಛೇ” ಅನಿಸಿತು. ಉತ್ತರ ಹುಡುಕುವುದು ನನ್ನ ಜವಾಬ್ದಾರಿಯೂ‌ ಆಗಿತ್ತು. ಅಮ್ಮನ ಬಳಿ ಕೇಳಬೇಕೆಂದುಕೊಂಡೆ. ನನ್ನ‌ಅಮ್ಮ ಹಳ್ಳಿ ಮದ್ದು ಪ್ರವೀಣೆ.
ಆ ದಿನ ಅವರ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.

ಕಾರ್ಯ ನಿಮಿತ್ತ ನಮ್ಮ‌ಊರಿಗೆ ಹೋಗಿದ್ದಾಗ ನಮ್ಮ ಮನೆಯ ಕೆಲಸಕ್ಕೆ ಬರುವ ಸೇಸಮ್ಮನ ಬಳಿ ಸೇರೆ ಮರದರಸ ತಾಗಿ‌ ಉಂಟಾಗುವ ತುರಿಕೆ ಹಾಗೂ ಬಾವು ಇದಕ್ಕೆ ಮದ್ದು ಯಾವುದೆಂದು ಕೇಳಿದಾಗ “ಶಾಂತಿ ಮರದ ತೊಗಟೆಯನ್ನು ತೆಂಗಿನೆಣ್ಣೆಗೆ ಹಾಕಿ ಬಿಸಿ ಮಾಡಿ, ಆ ಎಣ್ಣೆ ಹಚ್ಚಿದರೆ ಕಡಿಮೆಯಾಗುವುದು” ಎಂಬ ಮಾಹಿತಿ ನೀಡಿದಳು. ಸೇಸಮ್ಮ ಹೇಳಿದ ಇನ್ನೊಂದು ಮಾಹಿತಿ ಹೀಗಿತ್ತು. ಸೇರೆ ಮರದ ಸಂಪರ್ಕದಿಂದಾಗಿ‌ ಅಲರ್ಜಿ‌ ಉಂಟಾದವರು ಸೀದಾ ಹೋಗಿ ಶಾಂತಿಯ ಮರವನ್ನು‌ ಅಪ್ಪಿ ಹಿಡಿದು “ಶಾಂತಿಯಣ್ಣ ಶಾಂತಿಯಣ್ಣ, ನನಗೆ ಮದ್ದುಕೊಡು, ಸೇರೆಯಣ್ಣ ಹೇಳಿದ್ದಾನೆ” ಅಂದರೆ‌ ಅಲರ್ಜಿ ಕಡಿಮೆಯಾಗುತ್ತದಂತೆ. ಮೇಲ್ನೋಟಕ್ಕೆ ಮುಖದಲ್ಲಿ ನಗು ಮೂಡಿದರೂ, ನಮ್ಮ ಹಿರಿಯರು ಪ್ರಕೃತಿಯ ಜೊತೆ ಹೇಗೆ ಬೆರೆತು ಬಾಳುತ್ತಿದ್ದರು, ಪ್ರಕೃತಿಯಲ್ಲಿರುವ ಗಿಡಮರಗಳ ಜೊತೆ ಹೇಗೆ ಸಂಭಾಷಿಸುತ್ತಿದ್ದರು‌ ಅನ್ನುವುದು ವೇದ್ಯವಾಗುತ್ತದೆ. ಒಂದು ದಿನ ಬಿಟ್ಟು‌ಅಮ್ಮನ ಬಳಿ ವಿಚಾರಿಸಿದಾಗಲೂ ಅಮ್ಮ ಹೇಳಿದ್ದೂ ಇದೇ ಶಾಂತಿ ಮರದ ಮದ್ದನ್ನೇ! ಇಲ್ಲಿ ನನಗೆ ಆಶ್ಚರ್ಯತಂದ ವಿಷಯ ಫೋನ್, ಅಂತರ್ಜಾಲ ಇಲ್ಲದ ದಿನಗಳಲ್ಲೂ ಬೇರೆ ಬೇರೆ‌ ಊರಿನಲ್ಲಿದ್ದರೂ ಬಾಯಿಯಿಂದ ಬಾಯಿಗೆ ಹರಿದು ಬಂದ, ಅವಿದ್ಯಾವಂತ ಜನರಲ್ಲಿ‌ ಇರುತ್ತಿದ್ದ ಮಾಹಿತಿಗೆ ತಲೆಬಾಗಿದೆ. ಈ ಚಿಂತನೆಗೆ ಹಚ್ಚಿದ ‘ಸುರಹೊನ್ನೆ’ಗೆ ಶರಣೆನುವೆ.

ನೋಡಿದ‌ ಅಥವಾ ಕೇಳಿದ ವಿಷಯಗಳ ಬಗ್ಗೆ ಅನುಭವ ಲೇಖನಗಳನ್ನು ಬರೆಯುವುದು ನನಗೆ ತುಂಬಾ ಇಷ್ಟ. ಯಾರಾದರೂ, ಆಸಕ್ತಿದಾಯಕ ವಿಷಯಗಳನ್ನು ಹೇಳುತ್ತಿದ್ದರೆ ನನ್ನ ಕಿವಿ ನೆಟ್ಟಗಾಗುವುದು. ನನ್ನೊಬ್ಬರು ಸಹೋದ್ಯೋಗಿ ಹೇಳುವುದು ಹೀಗೆ “ಇವರು ಭಯಂಕರ ಮಾರಾಯರೇ….ಇವರ ಹತ್ತಿರ ಮಾತನಾಡುವಾಗ ಜಾಗ್ರತೆ‌ ಇರಬೇಕು. ಯಾವುದಾದರೂ ವಿಷಯವನ್ನು ಕಚಕ್‌ ಅಂತ ಹಿಡ್ಕೊಂಡುಬಿಡ್ತಾರೆ. ಮತ್ತೆ ಲೇಖನ ಬರೆಯುತ್ತಾರೆ”. ಲೇಖನದ ಮೂಲಕ ಕೆಲವು ವಿಷಯಗಳ ಬಗ್ಗೆ ಸ್ವಲ್ಪವಾದರೂಜಾಗೃತಿ ಮೂಡಿಸಬೇಕೆಂಬುದು ನನ್ನಾಸೆ. ಅದಕ್ಕೆ‌ಒತ್ತಾಸೆಯಾಗಿರುವ ಸುರಹೊನ್ನೆಗೆ ಶರಣು.

ನನ್ನ ಲೇಖನ ಓದಿ ವಾಟ್ಸಾಪಿನಲ್ಲಿಯೋ‌ ಅಥವಾ ಲೇಖನದ ಕೊಂಡಿ‌ ಇರುವಲ್ಲಿಯೋ ಪ್ರತಿಕ್ರಿಯೆ ನೀಡುವವರಿದ್ದಾರೆ. ಇನ್ನು ಕೆಲವರು ಲೇಖನ ಓದಿರುತ್ತಾರೆ‌ ಆದರೆ ಪ್ರತಿಕ್ರಿಯೆ ನೀಡಿರುವುದಿಲ್ಲ. ಎದುರು ಕಾಣಸಿಗುವಾಗ “ನಿಮ್ಮ ಲೇಖನ ಓದಿದೆ. ಪ್ರತಿಕ್ರಿಯೆ ನೀಡಲು ನನಗೆ ಬರುವುದಿಲ್ಲ. ಚಂದ ಬರೆಯುತ್ತೀರಿ. ಬರೆದಾಗ ನನಗೂ ಲೇಖನದ ಕೊಂಡಿ ಕಳುಹಿಸಿ” ಅನ್ನುವರು. ಇದಕ್ಕಿಂತಲೂ ಖುಷಿಯ ವಿಷಯ‌ ಇನ್ನೊಂದಿದೆ. “ಯಾವುದೋ ವಿಷಯದ ಬಗ್ಗೆ ಮಾಹಿತಿ ಹುಡುಕುವಾಗ ನಿಮ್ಮ ಲೇಖನವೂ ಸಿಕ್ಕಿ, ಅದರಿಂದ ಮಾಹಿತಿ ಪಡೆದೆ” ಅನ್ನುವಾಗ ಸುರಹೊನ್ನೆಯ ನೆನಪಾಗದಿದ್ದೀತೇ? ಲೇಖನ ಓದಿ, ತಾವೂ ಪ್ರೇರಿತರಾಗಿ “ನಾನು ಕೂಡಾ ಸುರಹೊನ್ನೆಗೆ ಬರೆಯಬಹುದೇ? ನಾನು ಬರೆದಿರುವುದನ್ನು ಸುರಹೊನ್ನೆಗೆ ಕಳುಹಿಸಬಹುದೇ?” ಅಂತ ಕೇಳಿ ತಾವೂ ಬರೆಯಲು ಶುರುಮಾಡಿರುವುದನ್ನು ಕಂಡು ಮನಸ್ಸು ತುಂಬಿ ಬಂದಾಗ ಸುರಹೊನ್ನೆಯನ್ನು ನೆನೆಯದೆ ಹೇಗಿರಲಿ?

ಸುರಹೊನ್ನೆ ಪತ್ರಿಕೆಯನ್ನು ಹೊಗಳಬೇಕೆಂದು ಬರೆದ ಲೇಖನವಂತೂ ಖಂಡಿತಾ‌ ಅಲ್ಲ. ನನ್ನ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳಲು, ಸ್ವಲ್ಪ ಮಟ್ಟಿಗೆ ಗುರುತಿಸಿಕೊಳ್ಳುವಂತಾಗಲು ‘ಸುರಹೊನ್ನೆ’ ಕಾರಣವಾಗಿದೆ. ಸುರಹೊನ್ನೆ ಪತ್ರಿಕೆಯ ಬಗ್ಗೆ ನನಗೆ ಮಾಹಿತಿ ನೀಡಿದ ಶ್ರೀಮತಿ ಜಯಶ್ರೀ ಅವರಿಗೂ, ನಾನು ಲೇಖನ ಕಳುಹಿಸಿದಾಗಲೆಲ್ಲಾ ಸೂಕ್ತ ಚಿತ್ರಗಳ ಸಹಿತ (ಕೆಲವೊಮ್ಮೆ ಒಳ್ಳೆಯ ಶೀರ್ಷಿಕೆ ನೀಡುವುದೂ‌ ಇದೆ), ಪತ್ರಿಕೆಯಲ್ಲಿ ಪ್ರಕಟಿಸುವ ಶ್ರೀಮತಿ ಹೇಮಮಾಲಾ‌ ಅವರಿಗೂ‌ ಅನಂತ ಧನ್ಯವಾದಗಳು.

ಡಾ ಕೃಷ್ಣಪ್ರಭ ಎಂ, ಮಂಗಳೂರು

20 Comments on “‘ಸುರಹೊನ್ನೆ’ಯ ಸೊಬಗಿಗೆ ನಲ್ನುಡಿಯ ಘಮ..

  1. ಮಾತುಗಳನ್ನು ಮುತ್ತಿನಂತೆ ಪೋಣಿಸಿ ಬರೆಯುವ ನಿಮ್ಮ ಕೌಶಲ್ಯಕ್ಕೆ ಶರಣು…. ಮೇಡಂ

  2. 2014ರಲ್ಲಿ ಹವ್ಯಾಸವಾಗಿ ಆರಂಭಿಸಿದ ‘ಸುರಹೊನ್ನೆ’ಅಂತರ್ಜಾಲ ಪತ್ರಿಕೆಯು ಬಹಳಷ್ಟು ಜನರಿಗೆ ತಲಪಿದೆ ಹಾಗೂ ಇದರಿಂದಾಗಿ ನನ್ನ ಸ್ನೇಹವಲಯಕ್ಕೆ ಹಲವಾರು ಮಂದಿ ಸದಭಿರುಚಿಯ ಸಾಹಿತ್ಯಬಂಧುಗಳು ಸೇರ್ಪಡೆಯಾಗಿದ್ದಾರೆ ಎಂಬುದು ನನಗೆ ಬಹಳ ಖುಷಿ ಕೊಡುವ ವಿಚಾರ. ನಿರಂತರವಾಗಿ, ಬರೆಯುತ್ತ, ‘ಸುರಹೊನ್ನೆಯ ಘಮ’ವನ್ನು ಪಸರಿಸುತ್ತಿರುವ ನಿಮ್ಮ ಪ್ರೀತಿ, ಅಭಿಮಾನಕ್ಕೆ ಶರಣು. ನಮ್ಮ ಶ್ರಮ ಸಾರ್ಥಕ ಎನಿಸುತ್ತಿದೆ. ಅನಂತ ಧನ್ಯವಾದಗಳು ಮೇಡಂ.

    1. ನಿಮ್ಮ ಬರಹ ಓದಲು ನನಗೆ ಬಹಳ ಖುಷೀ ಅರ್ಥಪೂರ್ಣ ಬರಹ ಪ್ರಭಾರವರೇ

    2. ಲೇಖನ ಬರೆದು ಕಳುಹಿಸಿದಾಗಲೆಲ್ಲಾ ಅದನ್ನು ಪ್ರೀತಿಯಿಂದ ಪ್ರಕಟಿಸುವ ನಿಮಗೆ ಅನಂತ ಧನ್ಯವಾದಗಳು

  3. ತಮ್ಮಬರಹದ ಬಗ್ಗೆ, ಓದಿದ ಸಹೃದಯರರು ಕೇಳಿದ ಪ್ರಶ್ನೆ ಕೊಡುವ ಉತ್ತರಕ್ಜಾಗಿ ಹುಡುಕಾಟ ಮತ್ತಷ್ಟು ಮಗದಷ್ಟು ಓದಬೇಕೆಂಬ ಹಂಬಲವನ್ನು ಹುಟ್ಟು ಹಾಕಿದ ಸುರಹೊನ್ನೆ ಪತ್ರಿಕೆಗೆ ಧನ್ಯವಾದಗಳನ್ನು ನಿವೇದಿಸಿಕೊಂಡಿರುವ ರೀತಿ ಸೊಗಸಾಗಿ ಬಂದಿದೆ.ಹಾಗೆಯೇ ನಿಮ್ಮ ಬರವಣಿಗೆಯನ್ನುಮುಂದುವರೆಸಿ ಮೇಡಂ.

    1. ಹೌದು ಮೇಡಂ… ಓದುಗರು ಮುಂದಿಡುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಿಜವಾಗಿಯೂ ಖುಷಿಯಾಗುತ್ತದೆ. ಸಮಯ ಸಿಕ್ಕಾಗಲೆಲ್ಲಾ ಖಂಡಿತಾ ಬರೆಯುವೆ

  4. ಸುರಹೊನ್ನೆಯ ಪ್ರತಿ ನಿಮ್ಮ ಪ್ರಾಮಾಣಿಕ ಮಾತುಗಳು ತುಂಬಾ ಚೆನ್ನಾಗಿವೆ. ನಾನೂ ಕೂಡಾ ಸುರಹೊನ್ನೆಗೆ ಕೃತಜ್ಞಳು, ಚಿರಋಣಿ. ಅಲ್ಪ ಸ್ವಲ್ಪ ಬರೆಯಲು ಪ್ರೇರಣೆ ನೀಡಿದ್ದೇ ನನಗೆ ಈ ಸುರಹೊನ್ನೆ

    1. ನನ್ನ ಪ್ರತಿ ಲೇಖನಕ್ಕೂ ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ನೀಡುವ ನಿಮಗೂ ಅನಂತ ಧನ್ಯವಾದಗಳು ನಯನಾ

  5. ಧನ್ಯವಾದ ಸಮರ್ಪಣೆ ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ.

  6. ತುಂಬಾ ಉತ್ತಮವಾದ ಬರವಣಿಗೆ…ನಿಮ್ಮ ಬರವಣಿಗೆಯನ್ನು ಓದುವಾಗ ನೀವು ಎದುರಿನಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದೀರಿ ಅನ್ನುವ ಭಾವನೆ ಉಂಟಾಗುತ್ತದೆ. ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯುವಿರಿ ಅನ್ನುವ ನಿರೀಕ್ಷೆ ನಮಗಿದೆ…☺️ ಧನ್ಯವಾದಗಳು…

    1. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

  7. ಹೌದು…ಸುಮಧುರ ಸುಗಂಧ ಬೀರುವ ನಮ್ಮೆಲ್ಲರ ಪ್ರೀತಿಯ ಸುರಹೊನ್ನೆಯ ಹುಟ್ಟಿಗೆ ಕಾರಣೀಕರ್ತರಾದ ಶ್ರೀಮತಿ ಹೇಮಮಾಲಾ ಅವರು ನಿಮ್ಮಂತಹ, ನನ್ನಂತಹ ಹಲವಾರು ಮಂದಿಯನ್ನು ಹುರಿದುಂಬಿಸಿ, ನಮ್ಮ ಲೇಖನಗಳನ್ನು ಸದಾ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ, ಯಾವುದೇ ಹೆಗ್ಗಳಿಕೆಯನ್ನು ನಿರೀಕ್ಷಿಸದ ,ಅಪರೂಪದ ಅಪೂರ್ವ ಸಾಹಿತಿ…ಬರಹಗಾರ್ತಿ! ಅವರಿಗೆ ನಮ್ಮೆಲ್ಲರ ಪರವಾಗಿ ಇನ್ನೊಮ್ಮೆ ಹೃತ್ಪೂರ್ವಕ ಕೃತಜ್ಞತೆಗಳು.

    1. ಸಧಭಿರುಚಿಯ ಲೇಖನಗಳನ್ನು ಪ್ರಕಟಿಸಿ ನಮ್ಮನ್ನು ಪ್ರೋತ್ಸಾಹಿಸುವ ಹೇಮಮಾಲಾ ಅವರಿಗೆ ನಾವೆಲ್ಲಾ ಋಣಿಗಳು, ಅಲ್ವಾ ಅಕ್ಕ

    2. ಸದಭಿರುಚಿಯ ಲೇಖನಗಳನ್ನು ಪ್ರಕಟಿಸಿ ನಮ್ಮನ್ನು ಪ್ರೋತ್ಸಾಹಿಸುವ ಹೇಮಮಾಲಾ ಅವರಿಗೆ ನಾವೆಲ್ಲಾ ಋಣಿಗಳು, ಅಲ್ವಾ ಅಕ್ಕ

  8. ಸೇರೆ ಮರದ ರಸ ತಾಗಿ ಆಗುವ ತುರಿಕೆಗೆ ನಿಮ್ಮ ಲೇಖನದಿಂದ ಮದ್ದು ತಿಳಿಯುತು .ಲೇಖನ ಓದಿ ದೆ.ನಿಮ್ಮ ಬರವಣಿಗೆ ಹೀಗೇ ಮುಂದುವರಿಯಲಿ.ಶುಭವಾಗಲಿ

    1. ಚಂದದ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ.

  9. ಓದುಗರನ್ನು, ಬರಹಗಾರರನ್ನು ಬೆಳೆಸುತ್ತಿರುವ ಸುರಹೊನ್ನೆ ಹೇಮಮಾಲ ಮೇಡಂಗೆ ಧನ್ಯವಾದಗಳನ್ನು ಹೇಳುವುದು ಅತ್ಯಂತ ಔಚಿತ್ಯಪೂರ್ಣವಾದದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *