ಒಂದು ಚಕ್ ಪ್ರಕರಣ !

Share Button

ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು.  ಕಂಟೆಪ್ಪನಿಗೆ ಚಕ್ ಬಂದಿದೆ ಅನ್ನುವ ಸುದ್ದಿ  ಊರಲ್ಲಿ ಒಂದು ರೀತಿ ಸಂಚಲನ ಮೂಡಿಸಿತು. ಮೊದಲೇ ಲಿಂಗಾಪೂರ  ಸಣ್ಣ ಹಳ್ಳಿ ಸುದ್ದಿ ಹರಡಲು ಬಹಳ ಸಮಯ ಬೇಕಾಗಲಿಲ್ಲ .

ಕಂಟೆಪ್ಪ ದೊಡ್ಡ ಜಮೀನ್ದಾರಾ? ಸರಕಾರಿ ನೌಕರನಾ? ವ್ಯಾಪಾರ ಉದ್ಯೋಗಸ್ತನಾ? ಮಾಮೂಲಿ ಒಂದು ಎಕರೆ ಹೊಲಾ ಇರೊ ಬಡವ. ಇವನಿಗ್ಯಾಕ ಈ  ಚಕ್ ಬಂತು ಇವನೇನು ಅಂತಹ ಘನಂದಾರಿ ಕೆಲಸ ಮಾಡ್ಯಾನ. ಅವನ ಹೊಲ ಮಳೀ  ಹೆಚ್ಚಾದ್ರ ಹಳ್ಳಾ ಒತ್ತೇರಿ  ಬೆಳೆ ಜೊತಿ ಮಣ್ಣನೂ  ಹರಕೊಂಡು ಹೋಗುತಾದ,  ಅವನಂಗ ಹೊಲಾನೂ ಗತಿಗೆಟ್ಟಿದ್ದು ಅಂತ ಎಲ್ಲರ ಬಾಯಿಂದಲೂ ತಿರಸ್ಕಾರದ  ಮಾತುಗಳೇ ಕೇಳಿ ಬಂದವು. 

ಎಂಥಾ ವಿಚಿತ್ರ! ಯಾರಿಗೂ ಬಾರದ  ಚಕ್ ಅವನಿಗೆ ಬಂದಾದೆಂದರೆ ಏನೋ ಮಿಸ್ಟೇಕ ಆಗಿ ಬಂದಿರಬೇಕು.  ನನಗೆ ನೂರಾರು ಎಕರೆ ಜಮೀನು ಇದ್ದರೂ. ಒಂದೇ ಒಂದು ಚಕ್ ಬಂದಿಲ್ಲ, ಇವನಿಗೆ ಹ್ಯಾಂಗ ಬಂತು ಅಂತ ದೊಡ್ಡ ರೈತ ರೇವಣ್ಣ  ಹೋಟಲಿನಲ್ಲಿ ಚಹಾ ಕುಡಿಯಲು ಕುಳಿತವರ ಮುಂದೆ ಅಳಲು ತೋಡಿಕೊಂಡ. ಅದು  ಚಕ್ ಇರ್ಲಿಕ್ಕಿಲ್ಲ ಯಾರೋ ಬೇಕಂತಲೇ ಅವನಿಗೆ ಕಾಡಿಸುವ ಸಲುವಾಗಿ ಡೂಪ್ಲಿಕೇಟ ಚಕ್  ಮಾಡಿ ನಖರಾ ಮಾಡಿರಬೇಕು. ಅದನ್ನು ತೊಗೊಂಡು  ಬ್ಯಾಂಕಿಗಿ ಹೋದಾಗ ಮಂಗಳಾರತಿ ಮಾಡಿ ಕಳಿಸ್ತಾರೆ ಬಿಡು ಅಂತ  ಕಲ್ಲಪ್ಪ ಬೀಡಿ ಎಳೆದು ಮೂಗಿನಿಂದ ಹೊಗೆ ಬಿಡುತ್ತಾ ಕುಹಕವಾಡಿ ಹೇಳಿದ.

ನನಗೂ ಹಂಗೇ ಅನಿಸ್ತಾದೆ, ಅದು ಚಕ್ ಅಲ್ಲವೇ ಅಲ್ಲ, ಅಂತ ನಾಗಪ್ಪ ಕೂಡ ಊಹೆ ಮಾಡಿ ಸಮರ್ಥಿಸಿದ. ಊರಾಗ  ಯಾರೋಬ್ಬರೂ ಇವನಿಗೆ ಬಂದ ಆ ಚಕ್ ಬಗ್ಗೆ ನಂಬಲು ತಯ್ಯಾರಿರಲಿಲ್ಲ.

ಅಂದು  ಮುಂಜಾನೆ ಕಂಟೆಪ್ಪ ಬೇಗ ಎದ್ದು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ  ತಣ್ಣೀರಿಂದ  ಮುಖ ತೊಳೆದು “ನಾನು  ಹೊರಗ ಹೋಗಿ ಬರ್ತೀನಿ ಬಂದು ಹೊಲದ ಕಡೆ ಹೋಗತೀನಿ, ಬರೋದರೊಳಗ ಬುತ್ತಿ ಕಟ್ಟಿಡು ಅಂತ  ಹೆಂಡತಿ ಯಲ್ಲವ್ವಗ ಹೇಳಿದಾಗ ಅವಳು ಧೂಸರಾ ಮಾತಾಡದೇ ತಲೆಯಾಡಿಸಿದ್ದಳು.

ಕಂಟೆಪ್ಪ  ಹೋಟಲಿನ್ಯಾಗ ಒಂದು ಕಪ್  ಚಹಾ ಕುಡಿದು. ಮಲ್ಲೂನ ಪಾನಬಿಡಾ ಅಂಗಡ್ಯಾಗ ಚೀಟ ಅಡಕಿ ಬಾಯಿಗ ಹಾಕೊಂಡು ಮೆಲೆಯುತ್ತಾ  ಅಗಸಿ ಹತ್ರಾ ಇರೊ ಆಲದ ಮರಕ್ಕೆ ಬೆನ್ನು ಹಚ್ಚಿ  ಕುಳಿತುಕೊಂಡ. ಸೂರ್ಯ  ಆಗತಾನೆ ಮೂಡಿ ತನ್ನ ಹೊಂಬಿಸಿಲು ಸೂಸುತಿದ್ದ ಅದು ಮೈಗೆ  ಹಿತ ನೀಡಿತು.  ಮ್ಯಾಗೇರಿ ತೆಳಗೇರಿ ಕಡೆಯಿಂದ ಕೆಲವರು ಹಾಜರಾಗಿ ಇವನ ಜೊತೆ  ಮಾತುಕತೆಯಲ್ಲಿ  ತೊಡಗಿದರು. ಆವಾಗಲೇ  ಸೀನಪ್ಪ ಇವನ ಹತ್ತಿರ ಬಂದು ”ಸಾಹೇಬ್ರು ನಿನಗ ಚಕ್   ಕೊಟ್ಟು ಬರಲು  ಹೇಳ್ಯಾರ”  ಅಂತ ಗುಲಾಬಿ ಬಣ್ಣದ ಚೆಕ್ ಇವನ  ಕೈಗಿಟ್ಟು ಮುಗ್ಳನಗೆ ಬೀರಿದ.  ಚಕ್  ನೋಡಿ ಕಂಟೆಪ್ಪ ಏಕದಮ್ ಚಕಿತನಾದ ಏನಿದು ಚಕ್ ?  ನನಗ್ಯಾಕ ಬಂತು ಅಂತ ಕೆಲ ಹೊತ್ತು ಗಾಬರಿಯಾಗಿ ಯೋಚಿಸಿದ.

ಚಕ್  ಯಾವ ಬ್ಯಾಂಕಿಂದು ಎಷ್ಟು ರುಪಾಯಿದು? ಅಂತ ಕೆಲವರು ಒಂದೇ ಸವನೇ  ಪ್ರಶ್ನಿಸಿದರು. ಇವನು ಉತ್ತರ ಕೊಡಲಾಗಿದೆ ಪರಿತಪಿಸಿದ.  ನಿನ್ನ ಅದೃಷ್ಟ ಛೊಲೋ ಮುಂಜ ಮುಂಜಾನೆ ಲಕ್ಷ್ಮಿ  ಕೈ ಸೇರಿದಳು  ಅಂತ  ಕರಿಬಸ್ಸಪ್ಪ  ಹೊಗಳಿಕೆಯ ಮಾತನಾಡಿದ . ಇದು  ಸುಮ್ಮನೆ ಬಂದಿದ್ದಲ್ಲ  ಹೋದ ವರ್ಷ ನೀರು ಹೊಕ್ಕು ಇದ್ದಬದ್ದ  ಬೆಳೆ ಲುಕ್ಸಾನ ಆಗಿತ್ತಲ್ಲ  ಅದಕ್ಕೇ ಬಂದಿದೆ ಅಂತ ಸೀನಪ್ಪ ವಾಸ್ತವ ಹೇಳಿದಾಗ ಓ ಹೌದಾ  ಇಂಥಹ ಅಡಚಣ ಸಮಯದಾಗ ಚಕ್  ಬಂದಿದ್ದು ಛೊಲೊ ಆಯಿತು ಅಂತ  ಖುಷಿ ಹೊರಹಾಕಿದರು.

ಕಂಟೆಪ್ಪನಿಗೆ  ಚಕ್ ಆಗಲಿ  ಬ್ಯಾಂಕ ವ್ಯವಹಾರವಾಗಲಿ ಯಾವುದೂ  ಗೊತ್ತಿರಲಿಲ್ಲ   ಮುಂಜಾನೆ  ಸೀದಾ  ಹೊಲದಕಡೆ  ಹೋದರೆ  ಸಾಯಂಕಾಲವೇ ಮನೆಗೆ ಬರುತ್ತಿದ್ದ ಏಕಾಏಕಿ ಈ ಚಕ್  ಗಾಬರಿ ಮೂಡಿಸಿತು.  

ಚಕ್   ಅಂದರೆ ಏನಂತ ತಿಳಿದೀದಿ ಇದು ರುಪಾಯಿ ಇದ್ದಂಗೋ ಮಾರಾಯ ಒಯ್ದು ಬ್ಯಾಂಕಿನ್ಯಾಗ  ಕೊಟ್ಟರ ಇದರಾಗ ಬರೆದಷ್ಟು ರೊಕ್ಕಾ  ಕೊಡ್ತಾರೆ ಅಂತ ಬಸವಂತಪ್ಪ ಚಕ್ಕಿನ ಮಹಿಮೆ ಬಿಚ್ಚಿಟ್ಟು ಮಾಹಿತಿ ನೀಡಲು ಮುಂದಾದ ಆಗ ಕಂಟೆಪ್ಪನ ಮುಖ ಅರಳಿ ಹೂವಿನಂತಾಯಿತು.

ಇದೇನು ಭಾರೀ  ಚಕ್ ಅಲ್ಲ ಬರೀ ಐನೂರು ರುಪಾಯಿದು. ಈಗಿನ ಜಮಾನಾದಾಗ ಯಾವುದಕ್ಕ ಸಾಕಾಗ್ತಾದೆ ಹೆಚ್ಚಿಗಿ ಕೊಟ್ಟಿದ್ದರೆ ಹಳ್ಳದ ಹೊಲಕ್ಕೆ ಒಡ್ಡಾದರು  ಹಾಕಿ ಬಂದೋಬಸ್ತ ಮಾಡಿಸಬಹುದಾಗಿತ್ತು, ಅಂತ  ಮಾರುತಿ ಚಕ್ ನೋಡಿ  ಅಭಿಪ್ರಾಯ ವ್ಯಕ್ತಪಡಿಸಿದ .

ಇಷ್ಟಾದ್ರು ಯಾರು ಕೊಡ್ತಾರೆ? ಏನೋ ಪುಣ್ಯಕ್ಕೆ ಬಂದಿದೆ  ಅದೇ ಸಂತೋಷ ಪಡಬೇಕು  ಅಂತ ಶಿವಲಿಂಗ ಸಮಜಾಯಿಷಿ ನೀಡಲು ಮುಂದಾದ. ಆಗ ಕಂಟೆಪ್ಪನಿಗೆ ಚಕ್ ಬಗ್ಗೆ  ಸಂಪೂರ್ಣ ಮನವರಿಕೆಯಾಗಿ ಇದೇ ಖುಷಿಯಲ್ಲಿ  ತನ್ನ ಬಳಿಯಿದ್ದ   ಐವತ್ತರ ನೋಟು ಖರ್ಚು ಮಾಡಿ ಎಲ್ಲರಿಗೂ  ಚಹಾ  ಕುಡಿಸಿದ. ಚಕ್ಕಿನ  ರೊಕ್ಕಾ ಬಂದ ಮ್ಯಾಲ ಎಲ್ಲರಿಗೂ  ಹೊಟ್ಟೆ ತುಂಬಾ ಸುಸಲಾ ತಿನಸ್ತೀನಿ ಅಂತ ಭರವಸೆಯೂ  ನೀಡಿದ.

ನಮ್ಮ ಕಂಟೆಪ್ಪ  ದಿಲದಾರ ಮನುಷ್ಯ. ಚಕ್ ಬಂದರೂ ಅಷ್ಟೇ ಬರದೇ ಇದ್ದರೂ ಅಷ್ಟೇ ಹಂಚಿ ತಿನ್ನೋ ಗುಣದವನು.  ಇವನ  ಸ್ವಭಾವ ಹ್ಯಾಂಗ ಅದಾ ಅಂತ ನಮಗೆಲ್ಲ  ಗೊತ್ತು  ಅಂತ ಶಿವರಾಚಪ್ಪ ಗುಣಗಾನ ಮಾಡಿದ. ಆತನ  ಮಾತಿಗೆ ಕಂಟೆಪ್ಪ ಮತ್ತಷ್ಟು  ಉಬ್ಬಿ ಹೋದ .

ಚಕ್ ಬಂದ ವಿಷಯ ಹೆಂಡತಿಗೂ ತಿಳಿಸಬೇಕು ಅವಳೂ ಖುಷಿ ಪಡ್ತಾಳೆ ಅಂತ  ಮನೆಗೆ ಹೊಗಲು  ತಯ್ಯಾರಾದ.  ಆಗಲೇ ಹೊರಟಿಯಲ್ಲ ಇನ್ನೂ ಸ್ವಲ್ಪ ಹೊತ್ತು ಕುಳಿತುಕೊ ಅಂತ ಎಲ್ಲರೂ ಒತ್ತಾಯ ಪಡಿಸಿದರು. ಆಮ್ಯಾಲ ಬರ್ತೀನಿ ಅಂತ  ಹೇಳಿ  ಮನೆಯ ದಾರಿ ಹಿಡಿದ. ದಾರಿಯುದ್ದಕ್ಕೂ ಚಕ್ ಬಗ್ಗೆ ತರ ತರಹದ ಕನಸು ಕಾಣತೊಡಗಿದ. ಮನೆಗೆ ಬಂದು ಅತ್ತ ಇತ್ತ ಕಣ್ಣು ಹಾಯಿಸಿದಾಗ ಹೆಂಡತಿ  ಅಡುಗೆ  ಮನೆಯಲ್ಲಿ  ಒಲೆ ಮ್ಯಾಲ ಹೆಂಚಿಟ್ಟು  ರೊಟ್ಟಿ ಬೇಯಿಸುತಿದ್ದಳು . ” ಏ ಬಾ ಇಲ್ಲಿ  ನಿನಗೊಂದು ಸುದ್ದಿ  ಹೇಳ್ಬೇಕು ಅಂತ ಹೊರ ಪಡಸಾಲ್ಯಾಗ ನಿಂತು ಜೋರು ಧ್ವನಿಯಲ್ಲಿ  ಕೂಗಿದ. ಗಂಡನ  ಧ್ವನಿ ಕೇಳಿಸಿಕೊಂಡ ಅವಳು ನಿನ್ನ ಸುದ್ದಿ ಕೇಳಾಕ ನನಗೆಲ್ಲಿ ಪುರುಸೊತ್ತದಾ? ರೊಟ್ಟಿ ಬಡಿಯೋದು ಇನ್ನೂ ಮುಗಿದಿಲ್ಲ ಅಂತ  ಹೇಳಿದಳು .

” ಹೊರಗೆ ಬಂದಾದರೂ ನೋಡು ನಿನಗೇ ಖುಷಿ ಆಗ್ತಾದೆ” ಅಂತ  ಪುನಃ ಒತ್ತಾಯ ಮಾಡಿದಾಗ ಅವಳು ರೊಟ್ಟಿ ಬಡಿಯೋದು ಬಿಟ್ಟು ಏನದು ಜಲ್ದಿ ಹೇಳು ಅಂತ ಸೀರೆ ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ  ಮುಂದೆ ಬಂದು ನಿಂತಳು.

ಹೆಂಡತಿ  ಕೈಗೆ ಆ  ಚಕ್ ಕೊಟ್ಟು ‘ಇದು ರೊಕ್ಕಿದ್ದಂಗ ಬ್ಯಾಂಕಿಗೆ ಒಯ್ದು ಕೊಟ್ಟರ ರೊಕ್ಕಾ ಕೊಡ್ತಾರ’  ಅಂತ ಭಾವುಕನಾಗಿ  ಹೇಳಿದ. ಯಲ್ಲವ್ವಗ  ಎಲ್ಲಿಲ್ಲದ  ಖುಷಿಯಾಗಿ ”ಹಬ್ಬದ ಮುಂದ ಚಕ್  ಬಂದದ್ದು  ಮನೀಗಿ ಲಕ್ಷ್ಮಿ  ಬಂದಂಗ ಆಯ್ತು  ಇದರಾಗ  ನನಗೂ ಒಂದು  ಸೀರೆ ಕುಬಸಾ  ತಂದು ಕೊಡು” ಅಂತ ಮನದಾಸೆ ಬಿಚ್ಚಿಟ್ಟಳು.

ಹೆಂಡತಿಯ ಮಾತಿಗೆ ಕಂಟೆಪ್ಪ  ದೂಸರಾ ಮಾತಾಡದೆ  ತಲೆಯಾಡಿಸಿ ಮುಗ್ಳನಗೆ ಬೀರಿದ. ಯಲ್ಲವ್ವ ತನ್ನ  ಎಲಿ ಚಂಚ್ಯಾಗಿನ  ನೂರರ ನೋಟು ಹೊರ ತೆಗೆದು ”ಖರ್ಚಿಗೆ ಇಟ್ಕೊ  ಬ್ಯಾಂಕಿನ ರೊಕ್ಕ ಬಂದಮ್ಯಾಲ  ವಾಪಸ್ ಕೊಡು” ಅಂತ  ತಾಕೀತು ಮಾಡಿದಳು.  ಚಕ್ಕಿನ ಉಮೇದಿಯಲ್ಲೇ ಕಂಟೆಪ್ಪ  ಬಸ್ ಹತ್ತಿ  ಪ್ಯಾಟಿಗಿ ಬಂದ.  ಅಲ್ಲಿನ ಜನದಟ್ಟಣೆ ವಹಾನ ಸಂಚಾರ ನೋಡಿ   ದಿಗಿಲು ಮೂಡಿತು . ಯಾವುದೊ  ಹೊಸ ಲೋಕಕ್ಕೆ ಬಂದಂತೆ ಭಾಸವಾಯಿತು .  ಈ  ಬ್ಯಾಂಕ ಎಲ್ಲಿ ಬರ್ತಾದೆ  ಅಂತ  ಅವರಿವರಿಗೆ ವಿಳಾಸ  ಕೇಳತೊಡಗಿದ.

ಅಷ್ಟರಲ್ಲಿ ಅಟೋದವನೊಬ್ಬ ಹತ್ತಿರ ಬಂದು  ಕಾಕಾ ನೀನು ಎಲ್ಲಿಗೆ ಹೋಗಬೇಕು ದಾಗ ಈ ಬ್ಯಾಂಕಿಗಿ ಹೋಗಬೇಕು   ಅಂತ ಚಕ್ ಮೇಲಿನ  ವಿಳಾಸ ತೋರಿಸಿದ .

” ಫುಲ್ ಸೀಟಿನ ರೊಕ್ಕಾ ನೂರು  ಕೊಟ್ಟರ ಕರಕೊಂಡು ಹೋಗ್ತೀನಿ  ಅಂತ  ಹೇಳಿದಾಗ ನೂರು ರುಪಾಯಿನಾ?  ನನ್ನ  ಹತ್ರಾ ಅಷ್ಟು ರೊಕ್ಕಾ ಇಲ್ಲವಲ್ಲ ಅಂತ ಯೋಚಿಸತೊಡಗಿದ.  ‘ಹಾಗಾದರೆ  ಸೂಪರ್ ಮಾರ್ಕೆಟಿನ ತನಕ ಬಿಡ್ತೀನಿ  ಇಪ್ಪತ್ತು ರುಪಾಯಿ ಕೊಡು. ಅಲ್ಲಿಂದ ಬ್ಯಾಂಕ ಸಮೀಪ ಆಗ್ತಾದೆ  ನಡೆದುಕೊಂಡ ಹೋಗು ‘  ಅಂತ ಸಲಹೆ ನೀಡಿದ. ಆತನ ಮಾತಿಗೆ ಕಂಟೆಪ್ಪ   ಕೋಲೆ ಬಸವನಂಗ ತಲೆಯಾಡಿಸಿ  ಅಟೋ ಹತ್ತಿದ . ಐದು ನಿಮಿಷ ಕಳೆಯುವದರಲ್ಲೇ   ಸೂಪರ್ ಮಾರ್ಕೆಟ್ ಬಂದು ಬಿಟ್ಟಿತು.  ಅಟೋದವನು ಅಟೋ ನಿಲ್ಲಿಸಿ. ಹೀಗೇ  ನೇರವಾಗಿ ಹೋಗಿ ಬಲಕ್ಕೆ ಹೊಳ್ಳು ಅಲ್ಲೊಂದು ದೊಡ್ಡ ಆಲದ ಮರ ಇದೆ ಅದರ ಪಕ್ಕ ನಾಲ್ಕು ಬಿಲ್ಡಿಂಗ್ ಬಿಟ್ಟು ಐದನೇ ಬಿಲ್ಡಿಂಗದಾಗೇ  ಈ ಬ್ಯಾಂಕ ಕಾಣತಾದೆ  ಅಂತ ಸೂಚಿಸಿದ.

ಕಂಟೆಪ್ಪ ಆತನ ಕೈಗೆ  ಇಪ್ಪತ್ತರ ಕೆಂಪು ನೋಟು ಕೊಟ್ಟು ಸೀದಾ ಬ್ಯಾಂಕಿಗೆ ಬಂದ  ಬಿಸಿಲಿನ ತಾಪಕ್ಕೆ ದಣಿದು ಹೋಗಿದ್ದ. ಅಲ್ಲಿನ  ಎ ಸಿ ಗಾಳಿ ಮೈಮನಕ್ಕೆ ಹಿತ ನೀಡಿತು . ಚಕ್ಕಿನ ಬಗ್ಗೆ  ಯಾರಿಗೆ ಕೇಳಬೇಕು  ಅಂತ ಮೆಲ್ಲಗೆ ಹೆಜ್ಜೆ ಹಾಕಿ   ಮೂರನೇ ಕೌಂಟರಾಗೆ ಬಂದು ಗಾಬರಿಯಾಗಿ ನಿಂತುಕೊಂಡ.

 ” ಏನು ವಿಷಯ”  ಅಂತ  ಸಿಬ್ಬಂದಿಯೊಬ್ಬಳು ವಿಚಾರಿಸಿದಳು  ತನ್ನ  ಕಿಸೆಯಿಂದ ಚೆಕ್ ಹೊರ ತೆಗೆದು ಇದು ತೊಗೊಂಡು ರೊಕ್ಕ ಕೊಡ್ರಿ ಅಂತ ಕೇಳಿದ. ‘ಇದು ಅಕೌಂಟ್ ಪೇ ರೊಕ್ಕಾ  ನಗದಾಗಿ ಕೊಡಲು ಬರೋದಿಲ್ಲ/ ನಿನ್ನ  ಅಕೌಂಟ್ ಇದ್ದರೆ ಅದರಲ್ಲಿ ಜಮಾ ಮಾಡಬಹುದು’ ಅಂತ  ಸಲಹೆ ನೀಡಿದಳು.

‘ ಅಕೌಂಟ್ ಅಂದರೆ ಏನ್ರೀ’  ಅಂತ  ಪ್ರಶ್ನಿಸಿದ .  ‘ಬ್ಯಾಂಕಿನ್ಯಾಗ  ರೊಕ್ಕಾ ಇಡೋದು ತೆಗೆಯೋದು ಮಾಡಿಲ್ಲೇನು? ‘ ಎಂದಾಗ   ಇಲ್ಲ ಅಂತ  ತಲೆಯಾಡಿಸಿದ.   ಐನೂರು ರುಪಾಯಿ ಡೆಪೂಸಿಟ್ ಇಟ್ಟು ಹೊಸ ಅಕೌಂಟ್  ಮಾಡಿಸು  ಆಧಾರ ಕಾರ್ಡೋ ರೇಶನ ಕಾರ್ಡೋ ಯಾವದಾದರೂ ಒಂದು ಬೇಕು ಅದರ ಜೊತೆ  ಎರಡು ಫೋಟೋ ಕೊಡು ಆವಾಗ ನಿನ್ನ ಹೊಸ  ಅಕೌಂಟ ಆಗ್ತಾದೆ ಎಂದಾಗ ಇವನಿಗೆ  ದಿಕ್ಕೇ  ತೋಚದಂತಾಯಿತು.

ಆ ಎಲ್ಲ  ಕಾಗದ ಪತ್ರ ಈಗ ಎಲ್ಲಿಂದ ತರಲಿ  ಈ ಚಕ್ ಹೋಗಿ  ರೊಕ್ಕಾ ಆಗೋದು ಕನಸಿನ ಮಾತು ಅಂತ ಮೆಲ್ಲಗೆ  ಹೆಜ್ಜೆ  ಹಿಂದೆ ಸರಿಸಿ ಉಸ್ಸಂತ ಗೋಡೆಗೆ ಹಾಕಿದ.  ಬೆಂಚಿನ ಮೇಲೆ  ಕುಳಿತು ಕಿಸೆಯಲ್ಲಿ ಕೈ ಹಾಕಿಕೊಂಡ. ಒಂದಿಷ್ಟು  ಚಿಲ್ಲರೆ ರೊಕ್ಕ    ಸಪ್ಪಳ ಮಾಡಿದವು. ಬಸ್ಸು ಅಟೋ ಅಂತ ಆಗಲೇ ತಂದ ರೊಕ್ಕ ಖರ್ಚಾಗಿವೆ  ಮುಂದೇನು ಮಾಡೋದು ಅಂತ ಮೇಲ್ಛಾವಣಿ  ದಿಟ್ಟಿಸಿದ. ಫ್ಯಾನು  ಗರಗರ ಅಂತ  ಒಂದೇ ಸವನೆ ತಿರುಗುತಿತ್ತು. ಅದರ ಜೊತೆ ತಲೆಯೂ  ತಿರುಗಿದಂತಾಯಿತು.

ಸಧ್ಯ ಇಲ್ಲಿ ಕೂಡೋದು ಬೇಡ. ಹೊಟ್ಟೆ ಬೇರೆ ಹಸೀತಿದೆ ರೊಕ್ಕಾ ಬಂದಿದ್ರೆ ಪೂರಿ, ಭಜಿ,  ತಿಂದು ಊರ ಕಡೆ ಹೋಗುತಿದ್ದೆ   ಅಂತ ಯೋಚಿಸಿ ಕಾಲ್ನಡಿಗೆಯಿಂದ  ಬಸ್ನಿಲ್ದಾಣದ  ಕಡೆ ಹೊರಟ. ಅದೇ ಸಮಯ ಊರ ಮನುಷ್ಯ  ಶಾಣಪ್ಪ  ಎದುರಾಗಿ  ನೀನು ಯಾವಾಗ ಬಂದೆ ಊರ ಕಡೆ ಎಲ್ಲರೂ ಆರಾಮ ಇದ್ದಾರಾ? ಅಂತ  ಪ್ರಶ್ನಿಸಿದ.

ಶಾಣಪ್ಪನ ದರ್ಶನ ಆದದ್ದು ಇವನಿಗೆ ಧೈರ್ಯ ಮೂಡಿಸಿತು. ಚಕ್ಕಿನ ವಿಷಯ ಆತನ ಮುಂದೆ ಎಳೆ ಎಳೆಯಾಗಿ  ಬಿಚ್ಚಿಟ್ಟ.   ‘ಇದೇನು ಮಹಾ ಕೆಲಸಾ  ಒಂದಿಷ್ಟು ಲಂಚ ಕೊಟ್ಟರೆ ಮುಗೀತು ನಿನ್ನ ಕೆಲಸಾ ಆಗ್ತಾದೆ’  ಅಂತ  ಹೇಳಿದ.

ಲಂಚಾನಾ?  ಹಂಗಂದ್ರ ಏನು ಅಂತ  ಪ್ರಶ್ನಿಸಿದ.  ಲಂಚಾ ಅಂದರೆ ಅವರು ಮಾಡಿ ಕೊಡುವ ಕೆಲಸಕ್ಕೆ  ಪ್ರತಿಯಾಗಿ  ಕೈಮುಚ್ಚಿ ಕೊಡೊ ಭಕ್ಛೀಸು ಅಂತ ಹಳ್ಳಿ  ಭಾಷೆಯಲ್ಲೇ  ಉತ್ತರಿಸಿದ. ಆತನ   ಮಾತು  ಕಂಟೆಪ್ಪನಿಗೆ ಸ್ವಲ್ಪ ಕೋಪ ತರಿಸಿತು.

 ‘ಇದೇನು ಹಂಥಾ ಹೈರಾಣ ಕೆಲಸಾನಾ?  ನಮ್ಮ ಹಳ್ಯಾಗ ಎಂಥಾ ಹೈರಾಣ ಕೆಲಸಾ ಇದ್ದರು  ಒಂದು ಕಪ್ ಚಹಾದ ಮ್ಯಾಲೇ ಎಲ್ಲ  ಮಾಡಿಕೊಡ್ತಾರೆ’ ಅಂತ ಹೇಳಿದ.  ‘ಇದು ನಮ್ಮಂಗ ಹಳ್ಳಿಯಲ್ಲೋ ಮಾರಾಯ ಇದು ದೊಡ್ಡ ಸಿಟೀ ಇಲ್ಲಿ ಎಲ್ಲದಕ್ಕೂ ರೊಕ್ಕ ಕೊಡಬೇಕು ರೊಕ್ಕ ಇಲ್ಲದೆ ಯಾವುದೂ ಆಗೋದಿಲ್ಲ ‘ ಅಂತ ಶಾಣಪ್ಪ ಮನವರಿಕೆ ಮಾಡಿಕೊಟ್ಟ. 

 ‘ನನ್ನ ಹತ್ರಾ ಸಧ್ಯ   ರೊಕ್ಕಾ ಇಲ್ಲವಲ್ಲ ಏನು ಮಾಡಲಿ?’ ಅಂತ  ಖಾಲಿ ಕಿಸೆ ತೋರಿಸಿದ . ಸಧ್ಯ  ನೀನೇನೂ  ರೊಕ್ಕಾ ಕೊಡಬ್ಯಾಡ . ಆಮ್ಯಾಲ ಕೊಡು ಅಂತ ಶಾಣಪ್ಪ ಇವನಲ್ಲಿರುವ ಆ ಚಕ್ ತೆಗೆದುಕೊಂಡು ಹೋಗಿ  ಅರ್ಧ ತಾಸಿನಲ್ಲೇ  ರೊಕ್ಕದೊಂದಿಗೆ  ವಾಪಸ್ಸಾದ.

 ‘ಅಬ್ಬಾ ! ಈ ಲಂಚದ ಮಹಿಮೆ ಎಂಥಾದು ‘? ಅಂತ ಕಂಟೆಪ್ಪ ಆಶ್ಚರ್ಯ ವ್ಯಕ್ತಪಡಿಸಿದಾಗ ‘ಇದನ್ನು ಮಾಡಿ ಕೊಡಲು ಇನ್ನೂರು ರುಪಾಯಿ ತೊಗೊಂಡ್ರು’ ಅಂತ ಶಾಣಪ್ಪ ಹೇಳಿದ.  ಬಂದಿದ್ದು ಐನೂರು  ತೊಗೊಂಡಿದ್ದು ಇನ್ನೂರಾ?  ಛೊಲೊ ಆಯ್ತಲ್ಲ ಅಂತ ಕಂಟೆಪ್ಪ ಗಾಬರಿಯಾಗಿ ಪ್ರಶ್ನಿಸಿದ.

ಸಮಯ ಸಂದರ್ಭದಂತೆ ಹೆಜ್ಜೆ ಇಟ್ಟರೆ ಮಾತ್ರ ಕೆಲಸ ಆಗ್ತಾದೆ  ಅಂತ ಶಾಣಪ್ಪ ಸಮಜಾಯಿಷಿ ನೀಡಿದ. ನಾನು  ಬರುವಾಗ ಮನೆಯಿಂದ ನೂರು ರುಪಾಯಿ ತಂದಿದ್ದೆ ಈಗ ಹೋಗುವಾಗ ಮತ್ತೆ ನೂರು ಬೇಕು ಲಂಚಾ ಅಂತ ಅವರಿಗೆ  ಕೊಟ್ಟದ್ದು ಇನ್ನೂರು ರುಪಾಯಿ ಎಲ್ಲಾ  ಸೇರಿಸಿದರೆ  ನಾನೂರಾಯ್ತು ಉಳಿದಿದರಾಗ ಹೆಂಡತಿಗೆ ಸೀರೆ ಹಬ್ಬದ ಸಂತಿ ಹ್ಯಾಂಗ ಖರೀದಿ ಮಾಡಲಿ?  ಮನೀಗಿ ಹೋದಮ್ಯಾಲ ಅವಳು  ಕೇಳಿದರ ಏನು ಹೇಳಲಿ? ಅಂತ ಕಂಟೆಪ್ಪ  ಯೋಚನೆಯಲ್ಲಿ ಮುಳುಗಿದ .

ಅಂಥ ಯೋಚನೆ ಏನು ಮಾಡ್ತಿ ಬಿಡು ಮಾರಾಯ ಸಾಯೋಮುಂದ ಈ ರೊಕ್ಕ ರುಪಾಯಿ ಸಂಗಾಟ ತೊಗೊಂಡು ಹೋಗ್ತೀವಾ ಇರೋದರೊಳಗೇ ಉಂಡು ತಿಂದು ಉಟ್ಟು ತೊಟ್ಟು  ಜೀವನ ನಡೆಸಬೇಕು ಸಧ್ಯ  ಹೋಟಲಿಗಾದರೂ  ಹೋಗೋಣ ನಡೀ   ಮುಂಜಾನೆಯಿಂದ ಏನೂ ತಿಂದಿಲ್ಲ  ಅಂತ ಉಪದೇಶ ನೀಡಿದ . ಆತನ ಮಾತಿಗೆ ಆಗಲಿ ನಡೀ ಅಂತ   ಕಂಟೆಪ್ಪ  ತಲೆಯಾಡಿಸಿ ಹೋಟಲಿಗೆ ಕರೆದುಕೊಂಡು ಹೋದ  ಇಬ್ಬರೂ ಸೇರಿ  ಹೊಟ್ಟೆ ತುಂಬಾ ತಿಂದು ಮೇಲೆದ್ದರು. ವೇಟರ ತಂದು ಕಂಪ್ಯೂಟರ್ ಬಿಲ್ ಕೈಗಿಟ್ಟ  ಕೌಂಟರ ಹತ್ತಿರ ಬಂದು ಕಂಟೆಪ್ಪ  ಬಿಲ್ ಚುಕ್ತಾ ಮಾಡಿ ಗಾಬರಿಯಾದ.

ನಾನೀಗ ಬರ್ತೀನಿ ಕೆಲಸಂತೂ ಆಯಿತು , ನಾನು ಸಿಕ್ಕಿದ್ದು ಕೆಲಸಾ ಮಾಡಿ ಕೊಟ್ಟಿದ್ದು  ಊರಾಗ ಎಲ್ಲರಿಗೂ ಹೇಳು   ಅಂತ  ಹೇಳಿದಾಗ  ಹ್ಞೂಂ ಅಂತ ತಲೆಯಾಡಿಸಿದ. ಆಗಲೇ  ಊರಿಗೆ ಹೋಗುವ ಬಸ್ಸಿನಲ್ಲಿ ನಿಲ್ದಾಣದಲ್ಲಿ ನಿಂತಿತ್ತು  ಬಸ್ ಹತ್ತಿ ಸೀಟಿನ ಮೇಲೆ  ಕುಳಿತ  ಕಂಡಕ್ಟರ್  ಟಿಕೆಟ್ ಟಿಕೇಟು ಎಂದಾಗ  ಕಿಸೆಯಲ್ಲಿ ಕೈ ಹಾಕಿದ ಆಗ  ಕಿಸೆ  ಖಾಲಿಯಾಗಿದ್ದು ಕಂಡು  ಎದೆ ಧಸಕ್ ಎಂದಿತು.  ಈ ಚಕ್ ಯಾಕಾದರೂ ಬಂತು? ಎಲ್ಲ ಕೆಲಸ ಕೆಡಿಸಿ ಬಿಟ್ಟಿತು   ಇನ್ನೊಂದು ಸಲ ಈ ಚಕ್ಕಿನ  ಸಹವಾಸವೇ ಬೇಡ  ಅಂತ ಸೀದಾ  ಬಸ್ಸಿನಿಂದ ಕೆಳಗಿಳಿದು   ಕಾಲ್ನಡಿಗೆಯಿಂದ  ಊರ ಕಡೆ ಹೆಜ್ಜೆ ಹಾಕಿದ.   !!!

ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ

5 Responses

  1. ಚೆಕ್..ಪ್ರಸಂಗ.. ತೆಳುವಾದ ಹಾಸ್ಯ ಲೇಪನ…ಜೊತೆಗೆ… ಮುಗ್ದಜನರನ್ನು…ಯಾಮಾರಿಸುವ…ರೀತಿ… ಬಹಳ ಚೆನ್ನಾಗಿ ಅನಾವರಣ ಗೊಂಡಿದೆ…ಧನ್ಯವಾದಗಳು ಸರ್..
    .

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಶಂಕರಿ ಶರ್ಮ says:

    ಪಾಪ ಕಂಟೆಪ್ಪ… ದೂಸ್ರಾ ಮಾತಿಲ್ಲದೆ ಮನೆಗೆ ನಡಕೊಂಡೇ ಹೋದ..
    ಚೆನ್ನಾಗೈತೆ ಕಥೆ.

  4. ಸಚಿನ್‌ಕುಮಾರ ಬ. says:

    ಇಂದಿನ ಕಾಲದ ಮುಗ್ಧತೆ ಅದನ್ನು ನಗದಾಗಿಸುವ ಕೌಟಿಲ್ಯತೆ ಕಥೆಯುದ್ದಕ್ಕೂ ಚೆನ್ಮಾಗಿ ಮೂಡಿ ಬಂದಿದೆ‌ ಸರ್… ಉತ್ತಮ ಕಥೆ..

  5. Padmini Hegde says:

    ಕಥೆ ಚೆನ್ನಾಗಿದೆ, ವಾಸ್ತವತೆಯೂ ಹೀಗೇ ಇದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: