ಬಯಸದೇ ಬರುವ ಭಾಗ್ಯ…..
ಎಪ್ಪತ್ತು ಮಕ್ಕಳಿರುವಂತಹ ಒಂದು ಸರ್ಕಾರಿ ಶಾಲೆ. ಸುಂದರವಾದ ಪರಿಸರ, ಕೇರ್ ತಗಳುವ ಶಿಕ್ಷಕರು ಹೀಗೆ ಬಹಳ ಚೆನ್ನಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಅಕ್ಷರ ಮತ್ತುಅನ್ನ ದಾಸೋಹವೂ ಕೂಡಾ ಸಾಕಷ್ಟು ಚೆನ್ನಾಗಿಯೇ ನಡೆಯುತ್ತಿತ್ತು.
ಅದರಲ್ಲಿ ಎರಡನೇ ತರಗತಿಯಲ್ಲಿ ಒಂದು ಗಣೇಶ ಅನ್ನುವ ಮಗುವೇ ನನ್ನ ಕಥಾನಾಯಕ. ಬಹಳ ಮುದ್ದಾದ ಮಗು, ಅಷ್ಟೇ ಚೂಟಿ,ಚಟುವಟಿಕೆಯಿಂದ ಇರುವ, ಚೆನ್ನಾಗಿ ಕಲಿಯುವ ಮಗು. ಅದೇಕೋ ಊಟದ ಸಮಯ ಬಂದಾಗ ಸ್ವಲ್ಪ ಒತ್ತಡಕ್ಕೆ ಸಿಲುಕಿದಂತೆ ಇರುತ್ತಿದ್ದ.
ನಿತ್ಯವೂ ಊಟಕ್ಕೆ ಸರದಿಯಲ್ಲಿ ಬಂದು ಊಟ ಹಾಕಿಸಿಕೊಂಡು ಸ್ಥಳವಿರುವ ಕಡೆ ಕುಳಿತು ತಿನ್ನಬಹುದಿತ್ತು. ಸಾಲಾಗಿಯೇ ಇಕ್ಕಟ್ಟಿನಲ್ಲಿ ಕುಳಿತು ತಿನ್ನ ಬೇಕು ಎಂಬ ನಿಯಮವೇನೂ ಇರಲಿಲ್ಲ. ಏಕೆಂದರೆ ಆಗಲಾದರೂ ಮಕ್ಕಳು ಬೇರೆಯವರ ಜೊತೆ ಬೆರೆಯಲಿ ಎಂಬ ಉದ್ದೇಶದಿಂದ ಈ ಪಾಲಿಸಿ ಇತ್ತು. ನಮ್ಮ ಗಣೇಶ ಕೂಡ ಸಾಮಾನ್ಯವಾಗಿ ಯಾರೂ ಹೆಚ್ಚು ಸ್ನೇಹಿತರು ಇಲ್ಲದೇ ಇರುವ ಇಷ್ಟ ಬಂದ, ಮರದ ನೆರಳಿನ ಜಾಗದಲ್ಲಿ ಕುಳಿತು ತಿನ್ನಲು ಹೋಗುತ್ತಿದ್ದ. ಒಮ್ಮೆ ಅಲ್ಲ ಮೂರು ಬಾರಿ ಅನ್ನ ಹಾಕಿಸಿಕೊಂಡು ತಿನ್ನುತ್ತಿದ್ದ. ಎಲ್ಲರೂ ಮೊದಲು ಹೆಚ್ಚು ಹಾಕಿಸಿಕೊಂಡು ನಂತರ ಕಡಿಮೆ ಹಾಕಿಸಿಕೊಂಡರೆ ಕೊನೆಗೆ ಹೆಚ್ಚು ಹಾಕಿಸಿಕೊಳ್ಳುತ್ತಿದ್ದ.
ಅಡುಗೆಯವಳಿಗಂತೂ ನಿತ್ಯ ಅನುಮಾನ ತಿನ್ನುವನೋ, ಇಲ್ಲ ತಗೊಂಡು ಹೋಗಿ ಚೆಲ್ಲುವನೋ ಎಂದು. ಆದರೆ ಮೊದಲು ಸ್ವಲ್ಪ ಹಾಕಿಸಿಕೊಂಡು ತಿನ್ನುತ್ತಿದ್ದರಿಂದ ಸುಮ್ಮನೆ ಆದರು.
ಹೀಗೆ ಒಂದು ದಿನ ಗಣೇಶನ ಸ್ನೇಹಿತ ಓಡಿ ಬಂದು, ‘ ಮಿಸ್ ಗಣೇಶ ಅನ್ನದ ಸಮೇತ ತಟ್ಟೆ ಹೊರಗೆ ತಗೊಂಡು ಹೋದ. ಚೆಲ್ಲಿ ಬರುವನು ಮಿಸ್” ಎಂದು ಒಂದೇ ಉಸಿರಿಗೆ ಉಸುರಿದ. “ಹೌದ ನಾಳೆ ನಾನೇ ಗಮನಿಸುವೆ ಬಿಡು”ಎಂದರು.
ಮರುದಿನ ಮರೆಯದೇ ಗಣೇಶನಿಗೆ ಗೊತ್ತಿಲ್ಲದೆ ಗೇಟಿನಿಂದಾಚೆಗೆ, ಯಾರೋ ಪೋಷಕರ ಬಳಿ ವಿವರ ಕೇಳುತ್ತಾ ನಿಂತರು. ಗಣೇಶನ ಮೇಲೆ ತುಂಬಾ ಭರವಸೆ ಇತ್ತು ಅವರಿಗೆ. ಆತ ಹಾಗೆ ಮಾಡಲಾರ ಎಂದು. ಆದರೂ ಒಂದೆರಡು ಬಾರಿ ಚಾಡಿ ಮಾತು ಬಂದಾಗ ಗಮನಿಸಲೇ ಬೇಕೆಂದು ನಿಂತರು. ಅದೂ ತಟ್ಟೆ ತುಂಬಾ ಸುರಿತಾನೆ ಎಂದರೆ ಸಿಟ್ಟು ಬರಲ್ಲವ..
ಊಟದ ಸಮಯ ಮುಗಿಯುತ್ತಾ ಬಂತು. ಗಣೇಶ ಗೇಟಿನ ಬಳಿ ಇರುವ ನಲ್ಲಿ ಹತ್ತಿರ ಬಂದ. ಹಾಗೆ ಒಮ್ಮೆ ಹಿಂದಿರುಗಿ ನೋಡಿದ ಯಾರೂ ಹತ್ತಿರ ಇಲ್ಲ ಅಂತ ಗೊತ್ತಾದ ತಕ್ಷಣ ಗೇಟಿನಿಂದ ಆಚೆ ಓಡಲು ಶುರುಮಾಡಿದ.
ಅವನು ಓಡಿದ ದಿಕ್ಕಿನಲ್ಲಿ ಹತ್ತು ಹೆಜ್ಜೆ ಮುಂದೆ ಹೋದರು. ಅವನು ಎಲ್ಲೂ ಅನ್ನ ಸುರಿಯಲಿಲ್ಲ.. ಮತ್ತೂ ಮುಂದೆ ಬರಬರ ನಡೆದರು. ಗಣೇಶ ಓಡಿ ಹೋಗಿ ಒಂದು ಗುಡಿಸಿಲಿನ ಮುಂದೆ ನಿಂತ. ಅವನನ್ನು ಒಂದು ಪುಟ್ಟ ಹುಡುಗಿ ಎರಡೂ ಕೈಗಳಿಂದ ತಬ್ಬಿಕೊಂಡು ಅವಸರವಾಗಿ ಒಳಗೇ ಕರೆದುಕೊಂಡು ಹೋಯಿತು. ಅವನು ಎಂಜಲ ತಟ್ಟೆಯನ್ನಿಡಿದು ಒಳಗೆ ಹೋದ.
ಶಿಕ್ಷಕರು ಕುತೂಹಲ ತಡೆಯದೆ ಅವನ ಮನೆ ಹತ್ತಿರ ಸರಸರನೆ ಬಂದರು. ಒಳಗೆ ಕಂಡ ದೃಶ್ಯಕ್ಕೆ ಅವಕ್ಕಾಗಿ ನಿಂತರು. ಗಣೇಶ ತನ್ನ ತಂಗಿಗೆ ಊಟ ಮಾಡಿಸುತ್ತಿದ್ದ.
ಬಾಗಿಲ ಬಳಿ ನಿಂತಿದ್ದ ಶಿಕ್ಷಕರನ್ನು ನೋಡಿ ಗಡಗಡನೆ ನಡುಗಲು ಶುರುಮಾಡಿದ. ಒಳಗೆ ಬಂದ ಶಿಕ್ಷಕರು ಪ್ರೀತಿಯಿಂದ ಅವನ ತಲೆ ಸವರಿ ಮಗುವಿಗೆ ಊಟ ಮಾಡಿಸಲು ಹೇಳಿದರು.
ಹೆದರುತ್ತಲೇ ಊಟ ಮಾಡಿಸಿ ಕೈತೊಳೆದುಕೊಂಡು ಬಂದ. ಶಿಕ್ಷಕರು ಅವನ ಕೈ ಹಿಡಿದು ಶಾಲೆಯ ಕಡೆ ಹೆಜ್ಜೆ ಹಾಕಿದರು. ಶಿಕ್ಷಕರು ತುಂಬಾ ಭಾವುಕರಾಗಿದ್ದರು. ಅವನ ಬಗ್ಗೆ ಗೊತ್ತಿಲ್ಲವೆಂದಲ್ಲ. ಆದರೆ ಪೂರ್ತಿ ವಿಚಾರ ತಿಳಿಯಲು ಪ್ರಯತ್ನಿಸಿದೇ ಇದ್ದುದಕ್ಕೆ ತಮಗೆ ತಾವೇ ನೋವು ಅನುಭವಿಸುತ್ತಿದ್ದರು.
ಗಣೇಶ ಅವರ ಗಂಭೀರ ವದನ ನೋಡಿ , ಬಹುಶಃ ಕೋಪ ಮಾಡಿಕೊಂಡಿರಬೇಕು ಎಂದುಕೊಂಡ. ” ಮಿಸ್, ನನಗೆ ಅಮ್ಮ ಇಲ್ಲ. ನನ್ನ ಪುಟ್ಟ ತಂಗಿ ಮತ್ತು ನನ್ನನ್ನು ಬಿಟ್ಟು ದೂರಹೋದಳು. ನನ್ನಪ್ಪ ಅದೇ ಗುಂಗಿನಲ್ಲಿ ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಕುಡಿತದ ದಾಸನಾಗಿ ನಮ್ಮನ್ನು ಸಲಹುವುದನ್ನು ಬಿಟ್ಟ. ಅದಕ್ಕೆಂದೆ ದಿನಾ ನಾನು ಹೆಚ್ಚಿಗೆ ಊಟ ಹಾಕಿಸಿಕೊಂಡು ನಾನು ಹೊಟ್ಟೆ
ತುಂಬಾ ತಿಂದು,ನನ್ನ ತಂಗಿಗೂ ಒಯ್ಯುವೆ. ಅವಳು ನಾ ತರುವ ಅನ್ನಕ್ಕೇ ಕಾಯುವಳು. ರಜಾದಿನಗಳು ಯಾಕಾದರೂ ಬರುವುದೋ ಎಂದು ನೋವಾಗುತ್ತೆ. ರಾತ್ರಿ ಯಾರಾದರೂ ಕೊಟ್ಟರೆ ಉಂಟು ಇಲ್ಲವೇ ಇಲ್ಲ. ನಮಗೆ ಅನ್ನ ಮಾಡಲು ಬಾರದು. ರಜಾದಿನಗಳಲ್ಲಿ ಅಂಗಡಿಯಲ್ಲೋ, ಹೋಟೆಲ್ನಲ್ಲೋ ಕೆಲಸಮಾಡಿ ಅಂದಿನ ಹೊಟ್ಟೆ ತುಂಬಿಸಿಕೊಳ್ಳುವೆವು. ಅಪ್ಪ ಸರಿಯಾಗಿ ಮನೆಗೆ ಬರುವುದಿಲ್ಲ…ಎಲ್ಲೋ ಕುಡಿದು ಮಲಗಿರುತ್ತಾರೆ. ನಾನು ದೊಡ್ಡದಾಗಿ ಓದಿ ಆಫೀಸರ್ ಆಗಿ ನನ್ನ ತಂಗಿನ ತುಂಬಾ ಚೆನ್ನಾಗಿ ನೋಡಿಕೊ ಬೇಕು ಎಂದು ಆಸೆ” ಎಂದು ಟೀಚರ್ ಮುಖ ನೋಡಿದ. ಅವರ ಮುಖ ನಿರ್ಲಿಪ್ತವಾಗಿಯೇ ಇತ್ತು.
ಅಳುಕುತ್ತಾ ಮಾತು ಮುಂದುವರಿಸಿದ….” ಮಿಸ್ ನನ್ನ ತಂಗಿಗೆ ಶಾಲೆಯಿಂದ ಅನ್ನ ತಗೊಂಡು ಹೋಗಿ ತಿನಿಸಿದ್ದಕ್ಕೆ ಕೋಪನ ಮಿಸ್” ಎಂದ.
ಅಷ್ಟು ಹೊತ್ತು ತಡೆಹಿಡಿದ ಕಂಠ ಮಾತಾಡಿತು..” ಖಂಡಿತ ಇಲ್ಲ ಪುಟ್ಟ. ದಿನಾ ತಗೊಂಡು ಹೋಗು. ಎರಡು ಹೊತ್ತಿಗೂ ತಗೊಂಡು ಹೋಗು ನನಗೇನು ಕೋಪವಿಲ್ಲ. ….ಇಲ್ಲಿ ಬೇಡವೆಂದರೆ ನನ್ನ ಮನೆಗೆ ಇಬ್ಬರೂ ಬನ್ನಿ… ಹೊಟ್ಟೆ ತುಂಬಾ ಉಂಡು ಹೋಗಿ. ಇನ್ನು ಮುಂದೆ ಭಿಕ್ಷೆ ಬೇಡಬೇಡ… ಕೆಲಸಕ್ಕೆ ಹೋಗಬೇಡ…ನಿಮ್ಮಿಬ್ಬರಿಗೂ ಒಂದು ದಾರಿ ಮಾಡುವೆ..ಆದರೆ ನೀ ನಾ ಹೇಳಿದಂತೆ ಕೇಳಬೇಕು. ಇಬ್ಬರೂ ಚೆನ್ನಾಗಿ ಇರಬಹುದು “ಎಂದು ಹೇಳಿದ ಕೂಡಲೆ ….. ‘ಅಮ್ಮ’ ಎಂದು ತನಗರಿವಿಲ್ಲದೆ ಅವರ ಕಾಲುಗಳ ಮಟ್ಟಕ್ಕೆ ತಬ್ಬಿಕೊಂಡ. ಶಾಲೆ ಸಿಕ್ಕಿಂದರಿಂದ ಇಬ್ಬರ ಮಾತು ಬಂದ್ ಆಯಿತು.
ಶಿಕ್ಷಕರು ಆ ಮಕ್ಕಳಿಗೊಂದು ದಾರಿ ತೋರಿಸಬೇಕೆಂದು ಯೋಚಿಸಿ, ಹಾಸ್ಟೆಲ್ ವಾರ್ಡನ್ ರನ್ನು ಭೇಟಿಮಾಡಿ ಗಣೇಶನನ್ನು ಹಾಸ್ಟೆಲ್ ಗೆ ಸೇರಿಸಿದರು. ಇನ್ನು ಅವನ ತಂಗಿಯನ್ನು ಎರಡು ವರ್ಷಗಳ ತನಕ ತಾವೇ ಕೇರ್ ಸೆಂಟರ್ ನಲ್ಲಿ ಬಿಟ್ಟು ನೋಡಿಕೊಂಡು ಬಳಿಕ ಆ ಮಗುವನ್ನು ಹಾಸ್ಟೆಲ್ನಲ್ಲಿ ಬಿಟ್ಟು ಆಗಾಗ್ಗೆ ವಿಚಾರಿಸುತ್ತಿದ್ದರು.ಹೆಚ್ಚುವರಿಯಾಗಿ ಈ ಶಿಕ್ಷಕರ ವರ್ಗವಾಗಿ ಬೇರೆ ಊರಿಗೆ ಬಂದರು. ಕೆಲಸದ ಒತ್ತಡ, ತಮ್ಮ ಮಕ್ಕಳ ಜವಾಬ್ದಾರಿ,ಮನೆಯ ಹೊಣೆಗಾರಿಕೆ ನಡುವೆ ಶಿಕ್ಷಕರು ಆ ಮಕ್ಕಳ ಮೇಲಿನ ಗಮನವನ್ನು ಸ್ವಲ್ಪ ಮರೆತರು.
ಸಮಯ ಹೀಗೇ ಇರುವುದೆ. ಇವರಿಗೂ ಕೂಡ ರಿಟೈರ್ಮೆಂಟ್ ಹತ್ತಿರಕ್ಕೆ ಬಂತು. ಒಂದು ದಿನ ಇದ್ದಕ್ಕಿದ್ದಂತೆ ಕಮೀಷನರ್ ವಿಸಿಟ್ ಇತ್ತು.. ಶಾಲೆಯಲ್ಲಿ ಎಲ್ಲವೂ ಸಿದ್ಧತೆ ನಡೆದಿತ್ತು. ಚಿಕ್ಕವರು ಅದರ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇವರ ಪಾಡಿಗೆ
ಮಕ್ಕಳ ಕಲಿಸುವಿಕೆ ಗಮನ ಹರಿಸಿದ್ದರು. ಕಮೀಷನರ್, “ನೇರವಾಗಿ ನಾನು ಶಾಲೆಯನ್ನು ನೋಡಬೇಕು”ಎಂದು ತರಗತಿಗಳ ವೀಕ್ಷಣೆಗೆ ಹೋದರು.
ಅವರ ಹಿಂದೆ ಕೇಳಬೇಕೆ ಒಂದು ದಂಡೇ ಇತ್ತು. ಹಾಗೇ ಕೊಠಡಿಗಳನ್ನು ನೋಡಿಕೊಂಡು ಬರುವಾಗ ಈ ಶಿಕ್ಷಕರ ಕೊಠಡಿ ಎದುರಾಯಿತು..ಶಿಕ್ಷಕರಿಗೆ ಅವರು ಬಂದದ್ದು ತಿಳಿದ ಕೂಡಲೆ ‘ನಮಸ್ಕಾರ ಸರ್’ ಎಂದು ಹೇಳಿದ್ದೇ ತಡ…ಆ ಕಮೀಷನರ್ ಓಡಿ ಬಂದು ಅವರ ಮುಗಿದ ಕೈಗಳನ್ನು ಬಿಡಿಸಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಮಂಡಿಗಾಲಲ್ಲಿ ಕುಳಿತು ‘ಅಮ್ಮ ‘ಎಂದು ಅಪ್ಪಿದರು.ಶಿಕ್ಷಕರಿಗೆ ಇವನು ಗಣೇಶ ಎಂದರಿವಾಗಿ ಬಹಳ ಸಂತೋಷಪಟ್ಟರು.
ಗಣೇಶ ಎಲ್ಲರೆದುರಿಗೂ ಇವರ ಕಾರ್ಯವೈಖರಿಯನ್ನು ಶ್ಲಾಘಿಸಿದನು. ಇಂದಿನ ಸ್ಥಿತಿಗೆ ನೀವೇ ಕಾರಣ….ನನ್ನ ತಂಗಿ ಕೂಡ ನಿಮ್ಮನ್ನು ತುಂಬಾ ನೆನಪು ಮಾಡಿಕೊಂಡಿರುವಳು….ಈಗ ತಾನೆ ಮೆಡಿಕಲ್ ಮುಗಿಸಿ ರಜೆಯ ಮೇಲೆ ನಿಮ್ಮಲ್ಲಿಗೆ ಬರುತ್ತಿರುವುದು…. ಎಂದಾಗ ಆನಂದಬಾಷ್ಪ ಅವರ ಕಣ್ಣಲ್ಲಿ ಜಿನುಗಿತ್ತು.
“ಬಿಸಿ ಊಟದ ಚಿಂತನೆಯನ್ನು ಉತ್ತಮ ಗೊಳಿಸುವುದಾಗಿ, ನನ್ನಂತಹ ಬಡ ಮಕ್ಕಳಿಗೆ ಇದು ವರದಾನವಾಗಿದೆ “ಎಂದು ತಿಳಿಸಿ…. ಕೊನೆಗೆ “ಇಂತಹ ಎಲೆಮರೆಯ ಶಿಕ್ಷಕರ ಕಾರ್ಯವೈಖರಿಯನ್ನು ಯಾರೂ ಗುರ್ತಿಸುವುದಿಲ್ಲ. ಸಾವಿರಾರು ಮಕ್ಕಳು ಇಂತಹ ಶಿಕ್ಷಕರ ಕೈಗೆ ಸಿಕ್ಕಿ ತಮ್ಮಭವಿಷ್ಯವನ್ನೇ ಬದಲಿಸಿಕೊಂಡಿದ್ದಾರೆ. ಅವರೆಲ್ಲ ತಮ್ಮನ್ನು ಭೇಟಿಯಾಗಿ ಗೌರವಿಸಲಿದ್ದಾರೆ.
ನೀವು ದಯವಿಟ್ಟು ನಿರಾಕರಿಸದೆ ಬರಬೇಕು “ಎಂದು ಕರೆದು ಹೋದನು.
ಮರುದಿನ ಅದೊಂದು ಅದ್ದೂರಿ ಕಾರ್ಯಕ್ರಮ. ಅಲ್ಲಿಗೆ ಆಗಮಿಸಿದ ಶಿಕ್ಷಕಿಯನ್ನು ಗೌರವ ಪೂರ್ವಕವಾಗಿ ಅಭಿನಂದಿಸಿದ್ದು, ರಾಜ್ಯಪ್ರಶಸ್ತಿಯ ಕಿರೀಟದೊಂದಿಗೆ. ನಿಸ್ವಾರ್ಥವಾಗಿ ಮಾಡಿದ ಕೆಲಸಗಳು ನಿರೀಕ್ಷಿಸದೇ ಇಂದಿನ ಗೌರವಕ್ಕೆ ಭಾಜನರಾಗಿಸಿದ್ದವು. ಇವರ ವಿದ್ಯಾರ್ಥಿಗಳೆಲ್ಲಾ ಉನ್ನತ ಹುದ್ದೆಯಲ್ಲಿದ್ದು ಇವರಿಗೊಂದು ಚಂದದ ಮನೆಯನ್ನು
ಉಡುಗೊರೆಯಾಗಿ ನೀಡಿದರು.
” ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚ” ನದ ವಾಕ್ಯ ಅವರ ಬಾಯಲ್ಲಿ ಹರಿದು ಹೋಯಿತು.
-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ.
ವಿದ್ಯೆ ಕಲಿಸಿದ ಗುರು, ಅನ್ನವಿಕ್ಕಿದ ಕೈಗಳ ಉಪಯೋಗ ಪಡೆದವರು ಅವರನ್ನು ಯಾವತ್ತು ಮರೆಯಲಾರರು
ಗುರು…ಸಂಬಂಧಗಳ …ಅನಾವರಣ.. ಮಾನವೀಯ ಮೌಲ್ಯಗಳ ನ್ನು ಬಿಂಬಿಸಿರುವ..ಕತೆ.. ಸೊಗಸಾಗಿ ಮೂಡಿಬಂದಿದೆ..
ಧನ್ಯವಾದಗಳು… ಗೆಳತಿ ಭಾಗ್ಯಲಕ್ಷ್ಮಿ..ನಾರಾಯಣ..
ಗುರು ಶಿಷ್ಯರ ವಿಶೇಷ ಅನುಬಂಧವು ಕಣ್ಣಂಚನ್ನು ಒದ್ದೆ ಮಾಡಿಸಿತು. ಸೊಗಸಾದ ನೈಜ ನಿರೂಪಣೆ…ಧನ್ಯವಾದಗಳು ಮೇಡಂ.