ಮೂಗುತಿ ಸುಂದರಿಯರ ನಾಡಿನಲ್ಲಿ ಮೂರು ದಿನಗಳು
ಅಂಡಮಾನ್ ದ್ವೀಪಗಳಿಗೆ ನಾವು ಹೋಗಲಿದ್ದೇವೆಂದು ತಿಳಿದಾಗ ಈ ಮೊದಲೇ ಅಲ್ಲಿ ಹೋಗಿ ಬಂದವರು ಸುಮಾರು ಸಲಹೆ,ಸೂಚನೆ ನೀಡಿದ್ದರು.ಜೊತೆಗೇ ಅಲ್ಲಿ ಮುತ್ತು,ಹವಳಗಳು ತುಂಬಾ ಅಗ್ಗವೆಂದೂ ತಿಳಿಸಿದ್ದರು.ಆಗಲೇ ಕಿವಿ ನೆಟ್ಟಗಾಗಿತ್ತು.ಅಲ್ಲಿನ ಏರ್ ಪೋರ್ಟ್ ತಲುಪಿ ಆಚೀಚೆ ಕಣ್ಣು ಹಾಯಿಸಿದರೆ ಅಲ್ಲಿನ ಅಧಿಕಾರಿಗಳ ತಲೆ ಹಿಂದೆ ಕಂಡೂ ಕಾಣದ ಜುಟ್ಟು,ಅಧಿಕಾರಿಣಿಯರ ಮೂಗಿನಲ್ಲಿ ಲಕಲಕಿಸುವ ಮೂಗುತಿ ತುಂಬಾನೇ ಹಿತವಾಯಿತು .
ಮರುದಿನ ಅಲ್ಲಿನ ಸೆಲ್ಲ್ಯುಲರ್ ಜೈಲಿಗೆ ಭೇಟಿ ನೀಡಿದ್ದೆವು.ಕೈದಿಗಳ ಕೈಲೇ ಕೈದಿಗಳಿಗಾಗಿ ಕಟ್ಟಿಸಿದ ಜೈಲು,ಒಂದು ಜೈಲ್ ಗೆ ಬೆನ್ನು ಹಾಕಿ ನಿಂತ ಇನ್ನೊಂದು ಜೈಲು. ಎರಡೂ ಮೂರು ಮಹಡಿಯವು.ಅಲ್ಲಿನ ಕೈದಿಗಳೆಲ್ಲಾ ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಅವರನ್ನು ದಮನಿಸಲು,ಜೊತೆಗೇ ಇತರ ಹೋರಾಟಗಾರರಿಗೆ ಹೆದರಿಸಿ ಮಣಿಸಲು”ಕರಿ ನೀರಿನ ಶಿಕ್ಷೆ”ಜ್ಯಾರಿಯಾಗುತ್ತಿತ್ತು.ಈ ಜೈಲಿನ ಒಳಗೆ ಪ್ರವೇಶಿಸುವಲ್ಲಿ ಅಲ್ಲಿ ಸೆರೆಯಲ್ಲಿದ್ದ ಹೋರಾಟಗಾರರ ಬಗೆಗಿನ ವಿವರಗಳಿವೆ.ಇನ್ನೊಂದು ಸಣ್ಣ ಕೊಠಡಿ ಪ್ರತ್ಯೇಕವಾಗಿ ನಿಂತಿದೆ. ಅಲ್ಲಿ ಮೇಲುಭಾಗಕ್ಕೆ ಸಮಾನಂತರದಲ್ಲಿ ಮೂರು ನೇಣು ಕುಣಿಕೆಗಳಿವೆ.ಸತತ ಉಪಯೋಗದಿಂದ ಈ ಕುಣಿಕೆಗಳು ನಯವಾಗಿದೆ.
ನಿತ್ಯ ಸಂಜೆ ಐದು ಗಂಟೆಗೆ ಇಲ್ಲಿ ”ಸೌಂಡ್ ಆಂಡ್ ಲೈಟ್ ಶೋ”ಕಾರ್ಯಕ್ರಮ ತೋರಿಸುತ್ತಾರೆ.ಅಲ್ಲಿನ ಕೈದಿಗಳ ಮೇಲೆ ನಡೆಸುತ್ತಿದ್ದ ಹಿಂಸಾಚಾರ, ದುಡಿತ, ತೀರಾ ಕಡಿಮೆ ಆಹಾರ, ನಿರ್ದಾಕ್ಷಿಣ್ಯತೆಯಿಂದ ಎಳೆದು ತಂದು ನೇಣಿಗೇರಿಸುತ್ತಿದ್ದ ಕ್ರೌರ್ಯ,ಆ ಸಮಯದಲ್ಲಿ ಇತರೆಲ್ಲಾ ಕೈದಿಗಳೂ ಒಕ್ಕೊರಲಿಂದ ವಂದೇಮಾತರಂ ದನಿಯೆತ್ತಿ ಹೇಳುತ್ತಿದ್ದರು.ವೀರ ಸಾವರ್ಕರ್ ಸಹಿತ ಎಲ್ಲಾ ಸ್ವಾತಂತ್ರ ಹೋರಾಟಗಾರರು ಅನುಭವಿಸಿದ ದಾರುಣ ದಿನಗಳನ್ನು ಈ ”ಶೋ”ದೇಶಭಕ್ತಿಯ ಹಾಡುಗಳ ಸಮೇತ ಎತ್ತರಿಸಿದ ದನಿಯಲ್ಲಿ ಹೇಳುತ್ತಿದ್ದರೆ ಕೇಳಿ ಗಂಟಲು ಗದ್ಗದವಾಗದವರಿಲ್ಲ, ಕಣ್ಣಲ್ಲಿ ನೀರಾಡದ ಜನರಿಲ್ಲ.ತಮ್ಮ ಬಲಿದಾನದಿಂದ ಗಳಿಸಿಕೊಟ್ಟ ಸ್ವಾತಂತ್ರ್ಯ ಬೆಲೆ ಕಟ್ಟಲಾಗದ್ದು. ಹೆತ್ತವರೊಂದಿಗೆ ಬಂದ ಎಳೆಮಕ್ಕಳೂ ಈ ಕಾರ್ಯಕ್ರಮದುದ್ದಕ್ಕೂ ಮೂಕವಾಗಿಬಿಡುತ್ತಾರೆ.ಅಲ್ಲಿ ಮುಕ್ತಾಯವಾಗಿ ಉಳಿಯುವುದು ಗಾಢ ವಿಷಾದವೊಂದೇ!.
ನಾಲ್ಕೂ ದಿಕ್ಕಿಗೂ ಸಮುದ್ರ.ಲೈಮ್ ಕೇವ್ ನೋಡಲು ತುಸು ದೂರ ಸಮುದ್ರದಲ್ಲಿ ಹೋಗಿ ಅಲ್ಲಿ ಸೇರಿದ್ದೆವು.ಆಳವಾದ ಕಣಿವೆಯ ಪರಿಯ ಸ್ಥಳ,ಮೇಲೆ ನೋಡಿದರೆ ಭೀತಿ ಹುಟ್ಟಿಸುವ ರೀತಿಯಲ್ಲಿ ಅಕ್ಕಪಕ್ಕ ಸುಣ್ಣದ ಗೋಡೆಗಳು.ನೆಗೆಟಿವ್ ಫೀಲಿಂಗ್ ವಿಪರೀತ ತುಂಬಿಕೊಂಡಿತ್ತು.ಅಲ್ಲಿಂದ ನಾವು ಕೆಸರಿನ ಜ್ವಾಲಾಮಖಿ ದರ್ಶಿಸಿದ್ದೆವು.ರೋಸ್ ದ್ವೀಪ,ಹವಳದ ದ್ವೀಪ,ನೋಡಿ ಚಾತಮ್ ಸಾ ಮಿಲ್ ತಲಪಿದ್ದೆವು.ಇಲ್ಲಿ ಪುತ್ತೂರು ಮೂಲದ ಮಹಿಳೆಯೊಬ್ಬರು ಹಿರಿಯ ಅಧಿಕಾರಿ.ಹೆತ್ತವರ ಜೊತೆ ಬಾಲ್ಯದಲ್ಲಿಯೇ ಅಲ್ಲಿಯೇ ನೆಲಸಿ ಅಲ್ಲಿಯವರನ್ನೇ ವಿವಾಹವಾದವರು.ಅಂಡಮಾನಿನಲ್ಲಿ ಜೀವದ ಮರಗಳನ್ನು ಕಡಿಯಕೂಡದು.ಹಾಗೆ ಕಾನೂನಿದೆ.ಈ ಮಿಲ್ ನ ಕಟ್ಟಡದ ಒಳಗೆ ಪೂರಾ ಮರದ ಬಳಕೆ.ಅಲ್ಲಿನ ಆತಿಥ್ಯ ಸ್ವೀಕರಿಸಿಹೊರಡುವಾಗ ಆ ಅಧಿಕಾರಿ ಹೊರ ಗೇಟಿನ ತನಕ ನಮ್ಮನ್ನು ಬೀಳ್ಕೊಡಲು ಬಂದಿದ್ದರು.
ಆದಿವಾಸಿಗಳಿರುವ ಕಾಡು ದಾಟಿ ಹವಳದ ದ್ವೀಪ,ಇತರ ಕಡೆ ಹೋಗಬೇಕಾದರೆ ಎಲ್ಲ ವಾಹನಗಳೂ ಒಟ್ಟಿಗೆ ಹೊರಟು ಒಟ್ಟಿಗೆ ಹಿಂದಿರುಗಬೇಕು.ಇಲ್ಲಿ ಬೆಳಗಿನ ನಾಲ್ಕಕ್ಕೇ ಒಳ್ಳೆಯ ಬೆಳಕಾಗುತ್ತದೆ.ಚೆಕ್ ಪೋಸ್ಟ್ ನಲ್ಲಿ ಆ ದಿನ ಹೋಗುವ ವಾಹನಗಳೆಲ್ಲಾ ಆ ಸಮಯಕ್ಕೆ ಇರಬೇಕು. ಮತ್ತಿನ ಪ್ರಯಾಣ ಮರುದಿನವೇ.ಪೋಲೀಸ್ ವಾಹನಗಳು ಪ್ರವಾಸಿಗಳ ವಾಹನಗಳ ಹಿಂದೆ,ಮುಂದೆ, ಮಧ್ಯೆ ಮಧ್ಯೆ ಸಾಗುತ್ತದೆ.ದಟ್ಟ ಕಾಡು,ನಿರ್ಜನ ರಸ್ತೆ,ಎಲ್ಲಿಯೂ ವಾಹನ ನಿಲ್ಲಿಸಕೂಡದು.ಅಲ್ಲಿನ ಮೂಲನಿವಾಸಿಗಳಾದ ಆದಿವಾಸಿ ಜನಾಂಗವನ್ನು ಒಂದೊಮ್ಮೆ ಬ್ರಿಟಿಷರು ಕೋವಿ ಉಡಾಯಿಸಿ ಹೆದರಿಸಿ ಬೆದರಿಸಿ ಕೊಂದು,ರಕ್ತಪಾತವೆಸಗಿ ಓಡಿಸಿ ಆಯಕಟ್ಟಿನ ಜಾಗಗಳನ್ನು ವಶಪಡಿಸಿ ವಾಸವಾಗಿದ್ದರು. ಆ ಸಿಟ್ಟು ಅವರ ಜನಾಂಗಕ್ಕೆಅಳಿಯಲಿಲ್ಲ.ಬಹು ಸಂಖ್ಯೆಯಲ್ಲಿದ್ದ ತಮ್ಮನ್ನು ತಮ್ಮದೇ ನೆಲದಿಂದ ಅಟ್ಟಿದ ಅಸಹಾಯಕ ರೋಷ ನಾಗರಿಕ ಜನಾಂಗದ ಮೇಲೆ ಸಿಡಿಯುತ್ತದೆ.ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ.ಅದಕ್ಕಾಗಿ ಆ ರೀತಿಯ ಭದ್ರ ಪೋಲಿಸ್ ಕಾವಲು.ಹಾದಿ ಮಧ್ಯೆ ಹುಟ್ಟುಡುಗೆಯ ಆದಿವಾಸಿಗಳ ದರ್ಶನವೂ ಆಯಿತು.ಹಿಂದಿರುಗುವಾಗಲೂ ಅದೇ ರೀತಿ.
ಮುತ್ತು ಹವಳಗಳ ನಾಡಿಗೆ ಬಂದು ಹಾಗೇ ಹೋಗುವುದೇ? ಚಿತ್ತಾಕರ್ಷಕ ಒಡವೆಗಳು ಕಣ್ಣು ಕೋರೈಸುತ್ತಿತ್ತು. ಎಲ್ಲವೂ ಮುತ್ತು, ಹವಳಗಳದೇ. ಪ್ರವಾಸೀ ತಾಣ, ಹೇಗೆ ನಂಬುವುದು?ಆದರೂ ಆಸೆ ಬಿಡದು.ಹವಳದ ಬಳೆಗಳು,ಕಿವಿಯ ಓಲೆಗಳು, ಮುತ್ತು,ಜೇಡ್ ಸೇರಿಸಿದ ನೆಕಲೇಸ್ ಇತ್ತ್ಯಾದಿ ಖರೀದಿಸಿದ್ದೆವು. ಊರಿಗೆ ಬಂದು ಪರಿಚಿತ ಜ್ಯುವೆಲ್ಲರಿಯವರಿಗೆ ತೋರಿಸಿದಾಗ ಅರ್ಧಕ್ಕರ್ಧ ನಕಲಿ!!
ಅನ್ನಪೂರ್ಣ ರೆಸ್ಟುರಾದ ಉತ್ತಮ ಆಹಾರ ಚೆನ್ನಾಗಿತ್ತು.ಬಹುತೇಕ ರೆಸ್ಟುರಾಗಳಲ್ಲಿ ಯುವತಿಯರದೇ ಮಾಲಕತ್ವ. ಅಲ್ಲಿ ಶಿವಮೊಗ್ಗದವರೊಬ್ಬರು ಕೆಲಸ ಮಾಡುತ್ತಿದ್ದರು.ಆತ ನಾವು ಕನ್ನಡದವರೆಂದು ತಿಳಿದಾಗ ನಮ್ಮ ಟೇಬಲ್ ಬಳಿ ಹೆಚ್ಚು ಹೊತ್ತು ನಿಲ್ಲುವುದು ಗಮನಿಸಿದ ಮಾಲಕಿ ಮರುದಿನವೇ ಆತನ ಜಾಗ ಬದಲಾಯಿಸಿದ್ದಳು.
ಮೂರು ದಿನಗಳ ಕಾಲ ಅಂಡಮಾನ್ ನಲ್ಲಿದ್ದು ಅಲ್ಲಿಂದ ಬೀಳ್ಕೊಂಡಿದ್ದೆವು.ಇಲ್ಲಿನ ಜನರಲ್ಲಿ ತಮಿಳರು ತುಂಬಾ ಮಂದಿ ಇದ್ದಾರೆ. ತಾಜಾ ತಾಜಾ ಕರ್ನಾಟಕದ ದಕ್ಷಿಣ ಕನ್ನಡದಂತೆ ಕಾಣುವ ಜನರು,ಅದೇ ರೀತಿಯ ತೋಟ ಗದ್ದೆಗಳು,ಉಡುಗೆ ತೊಡುಗೆ ಸೀರೆಗೇ ಹೆಚ್ಚು ಪ್ರಾಧಾನ್ಯತೆ ಕೊಡುವ ಹೆಣ್ಣುಮಕ್ಕಳು,ಮೂಗುತಿಪ್ರಿಯರು.ಅಲ್ಲಿಂದ ನೇರವಾಗಿ ಕೋಲ್ಕತ್ತಾಕ್ಕೆ ಹಾರಿದೆವು.
– ಕೃಷ್ಣವೇಣಿ ಕಿದೂರು
ತುಂಬಾ ಚೆನ್ನಾಗಿ ಬರೆಯುತ್ತೀರಿ. ಇನ್ನೂ ವಿವರವಾದ ಪ್ರವಾಸ ಕಥನ ಪ್ರಕಟಿಸಿದರೆ ಚೆನ್ನಾಗಿರುತ್ತದೆ
ನಾನು 2010 ರಲ್ಲಿ ಅಂಡಮಾನ್ ಗೆ ಹೋಗಿದ್ದೆ. ನಿಮ್ಮ ಲೇಖನ ಓದಿದಾಗ ಅವೆಲ್ಲ ನೆನಪಾದುವು. ಸೆಲ್ಯುಲಾರ್ ಜೈಲ್ ನ ಧ್ವನಿ-ಬೆಳಕು ಕಾರ್ಯಕ್ರಮ ನೋಡಿದಾಗ ಕಣ್ಣಲ್ಲಿ ನೀರು, ಮನಸ್ಸು ಭಾರ. ಭಾರತೀಯರೆಲ್ಲರೂ ಒಂದು ಬಾರಿ ಹೋಗಬೇಕಾದ ಸ್ಥಳ ಅದು.
very nice ಮೇಡಂ.