ಬಯಲಿನ ಬಾಳು
ಎಳೆಕಿರಣಗಳ ಎಡತಾಕಿಸಿಕೊಂಡ ತೆಂಗಿನ ಗರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗಾಯಿತೆಂದರೆ ನಾನಾ ಹಕ್ಕಿಗಳು, ತರೇವಾರಿ ಕೂಗಿನೊಂದಿಗೆ ತನ್ನ ಗರಿಗಳ ಮೇಲೆ ಕುಳಿತು ಬೆಳಗನ್ನು ಆಸ್ವಾದಿಸುವ ಸಮಯಕ್ಕೆ ಕಾಯುತ್ತಿರುತ್ತದೆ ಈ ತೆಂಗಿನ ಮರ. ಹಳ್ಳಿ ಗುಡಿಸಲುಗಳಲ್ಲಿ ಏನಿಲ್ಲವೆಂದರು ಅಂಗಳದಂಚಿಗೆ ಒಂದೆರಡು ತೆಂಗಿನಮರಗಳು ಸಾಮಾನ್ಯ. ಗೂನಡ್ಕದಲ್ಲಿರುವ ಸುಬ್ಬಪ್ಪಜ್ಜನ ಗುಡಿಸಲು ಇದಕ್ಕೆ ಹೊರತಾಗಿಲ್ಲ. ಗುಡಿಸಲೆಂದರೆ ಮಣ್ಣಿನ ನಾಲ್ಕು ಗೋಡೆಯಷ್ಟೆ. ಹಂಚಿನ ಬದಲಾಗಿ ಒಣಗಿದ ಹುಲ್ಲು, ಒಣಗಿದ ತೆಂಗಿನ ಗರಿಗಳನ್ನಷ್ಟೆ ಹಾಕಿದ್ದಾರೆ. ಅದರೊಳಗೆ ನಜ್ಜುಗುಜ್ಜಾದ ಒಂದೆರಡು ಅಲ್ಯುಮಿನಿಯಂ ಪಾತ್ರೆಗಳು, ಒಂದು ಅರೆಯುವ ಕಲ್ಲು ,ಹಳೆಯ ತೊಟ್ಟಿಲು ಹಾಗು ತೇಪೆ ಹಾಕಿದ ಚಾಪೆಯೊಂದಿಗೆ ಬಟ್ಟೆಗಳು. ಹಳೆಯ ಕಾಲದ ಹಳ್ಳಿ ಜೀವವಾದ್ದರಿಂದ ಸುಬ್ಬಪ್ಪಜ್ಜನ ಪ್ರಾಯ ಅರವತ್ತಮೂರಾದರು ಮೂವತ್ತಾರರಂತಹ ಕೆಲಸಗಳಲ್ಲಿ ನಳನಳಿಸುತ್ತಿದೆ. ನಸುಕಿನಲ್ಲಿಯೇ ಎದ್ದು ನಿತ್ಯಕರ್ಮಗಳಿಗೆ ತಮ್ಮ ಆರು ವರ್ಷದ ಮಗಳು ಅಶ್ವಿನಿಯೊಂದಿಗೆ ನಮ್ಮೂರಿನ ಜೀವನದಿ ಪಯಸ್ವಿನಿಗೆ ತೆರಳುತ್ತಾರೆ. ನಂತರ ಅಶ್ವಿನಿ ತೆಂಗಿನ ಮರದಲ್ಲಿ ಕುಳಿತ ಪಕ್ಷಿಗಳನ್ನು ನೋಡುವುದರಲ್ಲಿ ಮಗ್ನಳಾಗುತ್ತಾಳೆ. ಹೆಂಡತಿ ತುಂಗಮ್ಮ ಅವಸರದಲ್ಲಿ ಗಂಜಿ ಮಾಡಿ ಮಗಳಿಗೆ ಉಣಬಡಿಸಿ, ತಾನು ತಿಂದು ಸನಿಹದ ಮನೆಯೊಂದಕ್ಕೆ ಕೆಲಸಕ್ಕೆ ಹೋಗಲು ಅಣಿಯಾಗುತ್ತಾಳೆ. ಸುಬ್ಬಪ್ಪಜ್ಜನು ತಿಂದುಂಡು ನಮ್ಮ ಮನೆಗೆ ತೋಟದ ಕೆಲಸಕ್ಕೆ ಬರುವುದು ದಿನನಿತ್ಯದ ವಾಡಿಕೆ.
ವರಸೆಯಲ್ಲಿ ನನಗಿವರು ನನ್ನ ತಂದೆಯ ತಾಯಿಗೆ ಚಿಕ್ಕಪ್ಪನ ಮಗನಾಗಬೇಕು. ಸಂಬಂಧದಲ್ಲಿ ನನಗಿವರು ಅಜ್ಜ. ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದೆಂಬಂತೆ ಪಿತ್ರಾರ್ಜಿತವಾಗಿ ಬಂದಿದ್ದ ಹತ್ತು ಎಕರೆ ಜಮೀನನ್ನು ತನ್ನ ಕುಡಿತದ ಚಟದಿಂದ ಮತ್ತು ಹಣ ಪೋಲು ಮಾಡುವ ಕೆಟ್ಟ ಚಾಳಿಯಿಂದಾಗಿ ಕಳೆದುಕೊಂಡು ಇತರರ ಮನೆಗಳಲ್ಲಿ ಕೆಲಸ ಮಾಡುವ ಹಂತಕ್ಕೆ ತಲುಪಿದರು. ಕೆಲವು ನೈಜ್ಯವಾದ ಉತ್ತಮ ಗುಣಗಳು ಇವರಲ್ಲಿ ಮನೆಮಾಡಿದ್ದರು, ವಿಪರೀತ ಸುಳ್ಳು ಹೇಳುವುದರಿಂದ ಇವರ ಒಳ್ಳೆಯತನಗಳು ಇತರರಿಗೆ ನಗಣ್ಯವಾದ ಅಂಶವಾಗಿದೆ. ಈಗಿರುವ ಪತ್ನಿ ತುಂಗಮ್ಮ ಇವರ ನಾಲ್ಕನೆಯ ಹೆಂಡತಿ. ಮೊದಲನೆ ಹೆಂಡತಿ ಕ್ರಮದಿಂದ ಸಂಸಾರ ಮಾಡುತ್ತಿದ್ದಂತೆ ಅದೆನಾಯಿತೋ ತಿಳಿಯಲಿಲ್ಲ ಅಕ್ರಮ ಸಂಬಂಧದ ಬಲೆಗೆ ಸಿಲುಕಿ ಹೋದದ್ದೆ ಸುಬ್ಬಪ್ಪಜ್ಜ ಆಕೆಯನ್ನು ಕೈ ಬಿಡಬೇಕಾಯಿತು ಅಂತ ಬಲ್ಲವರು ಹೇಳುತ್ತಾರೆ. ಸುಮಾರು ಹನ್ನೆರಡು ವರುಷಗಳ ಕಾಲ ಬೇರ್ಪಟ್ಟು ಇದ್ದ ನಂತರ ತನ್ನಿಂದತಾನೆ ಅದು ವಿಚ್ಛೇದನವೆಂದು ಸಾಬೀತಾಯಿತು. ಆಕೆ ಈಗಲೂ ತನ್ನ ತವರು ಮನೆಯಲ್ಲಿ ಇದ್ದಾಳೆಂದು ಸುಬ್ಬಪ್ಪಜ್ಜ ಹೇಳಿದ ನೆನಪು. ಎರಡನೆ ವಿವಾಹವಾದ ಹೆಂಗಸಿಗೆ ಏನೋ ಮಾರಣಾಂತಿಕ ಖಾಯಿಲೆ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು. ನನಗೆ ಇವರ ಯಾರ ಹೆಸರುಗಳು ತಿಳಿದಿಲ್ಲ. ನಂತರದ ಮೂರನೇ ಮದುವೆ ಪ್ರಸವ ಸಮಯದಲ್ಲಿ ಆಕೆಯ ಮೃತ್ಯುವೊಂದಿಗೆ ಪರ್ಯಾವಸನಗೊಂಡಿತು. ಇಷ್ಟೆಲ್ಲಾ ಆದರೂ ಕಿಂಚಿತ್ತು ಧೃತಿಗೆಡದ ಮನುಷ್ಯ ಸುಬ್ಬಪ್ಪ. ನನಗೆ ಇವರ ಪರಿಚಯವಾದದ್ದು ನಾವು ಗೂನಡ್ಕ ಗ್ರಾಮಕ್ಕೆ ಬಂದು ನೆಲೆಸಿದ ನಂತರ .ಆಗಲೇ ಇವರ ಮೂರು ಮದುವೆ ಮುರಿದು ಮುಗಿದು ಹೋದ ಕತೆಯಾಗಿ ಒಂಟಿ ಅಲೆಮಾರಿಯಾಗಿದ್ದರು. ನನಗಿವರ ಪರಿಚಯವಾಗಿ ಐದು ವರುಷದ ನಂತರ ಮತ್ತೆ ನಾಲ್ಕನೆಯ ಮದುವೆಯ ಸಂಭ್ರಮ ಅವರಿಗೂ…….. ಜೊತೆಗೆ ನಮಗೂ! ಮದುವೆ ಗಾದಿಯಲ್ಲಿ ಸುಬ್ಬಪ್ಪಜ್ಜನಿಗೆ ಪ್ರವಾಹದ ವಿರುದ್ಧವಾಗಿ ಈಜುವುದು ಈಗ ಸಲೀಸಾಗಿ ಒಲಿದಿತ್ತು. ಅವರದೇ ಊರಿನಲ್ಲಿ ನಲ್ಲಿ ವಿಧವೆಯಾಗಿ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದ ತುಂಗಮ್ಮಳ ನೆಂಟಸ್ಥಿಕೆ ಕುದುರಿಸಿದರು. ಸುಬ್ಬಪ್ಪಜ್ಜನ ಐವತ್ತೆಂಟನೇ ವಯಸ್ಸಿಗೆ ಈ ಮದುವೆ ನಡೆಯಿತು. ತುಂಗಮ್ಮಳಿಗೆ ಸುಮಾರಾಗಿ ಮೂವತ್ತೆಂಟಾಗಿರಬಹುದೆಂದು ನನ್ನ ಊಹೆ.
ಈ ತುಂಗಮ್ಮಳಲ್ಲಿ ವಾಚಾಳಿತನದ ಪರಮಾವಧಿಯೇ ಅಡಗಿತ್ತು. ಶಾಲೆಯ ಹೊಸ್ತಿಲು ತುಳಿದವಳೇ ಅಲ್ಲ. ಕೇವಲ ಹೆಬ್ಬೆಟ್ಟಿನ ಸಹಿಯೊಂದಿಗೆ ತುಳು ಹೊರತಾಗಿ ಬೇರೆ ಭಾಷೆ ಬರುತ್ತಿರಲಿಲ್ಲ. ತುಳುವಿನಲ್ಲಿ ಸಂಖ್ಯೆಗಳನ್ನು ಹೇಳಿದರೆ ಸ್ವಲ್ಪ ಮಟ್ಟಿಗೆ ಹಣದ ವಿಚಾರ ತಿಳಿಯುತ್ತಿತ್ತು. ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ತರ್ಕಿಸುವ ಮಹಿಳೆ. ತನ್ನ ಮಾತಿನ ಚಾಳಿಯಿಂದಾಗಿ, ಊರಿನ ಹೊರತಾಗಿ ಸಂಪೂರ್ಣ ಸುಳ್ಯ ತಾಲೂಕಿನಲ್ಲಿಯೇ ಪ್ರತಿಯೊಬ್ಬರನ್ನು ಪರಿಚಯಿಸಿಕೊಂಡಿದ್ದಳು.
ಯಾವುದೇ ವ್ಯಕ್ತಿಯ ವಿಚಾರ ಹೇಳಿದರು ಮಾರುದ್ಧದ ಸಂಬಂಧ ಹೇಳಿ ನೆಂಟರು ಎನ್ನುತ್ತಿದ್ದಳು. ಪರಿಚಯಸ್ಥರ ಮನೆಗಳಿಗೆ ಆಗಾಗ್ಗೆ ತೆರಳಿ ಸ್ವಲ್ಪ ದಿನಗಳ ಕಾಲ ಉಳಿದುಕೊಳ್ಳುತ್ತಿದ್ದಳು. ಈ ವಿಚಾರಗಳನ್ನೆಲ್ಲಾ ನಾನು ಕಣ್ಣಾರೆ ನೋಡಿ ತಿಳಿದುಕೊಂಡದ್ದು ಸುಬ್ಬಪ್ಪಜ್ಜ ಮತ್ತು ತುಂಗಮ್ಮ ದಂಪತಿಗಳು ನಮ್ಮ ಮನೆಗೆ ಕೆಲಸಕ್ಕೆ ಬಂದು ಸೇರಿದ ನಂತರ. ನಾನು ಮದುವೆಯಾಗಿ ಬಂದ ಆರು ತಿಂಗಳಿಗೆ ನನ್ನ ತಂದೆ ಇವರನ್ನು ಖಾಯಂ ಕೆಲಸಕ್ಕೆಂದು ಗೂನಡ್ಕದಿಂದ ಚೆಂಬು ಗ್ರಾಮಕ್ಕೆ ಕೆರೆತಂದರು ಅವರಿಗಾಗಲೇ ಆರು ಮಗಳು ಅಶ್ವಿನಿಯಿದ್ದಳು.
ಹೊಸತರಲ್ಲಿ ಎಲ್ಲವು ಅಂದ ಚೆಂದವೆಂಬಂತೆ ಬಂದ ಪ್ರಾರಂಭದಲ್ಲಿ ಸುಬ್ಬಪ್ಪಜ್ಜ ದಂಪತಿಗಳು ಮತ್ತು ನಾವು ಚೆನ್ನಾಗಿ ಹೊಂದಿಕೊಂಡು ಎಲ್ಲಾ ಕೆಲಸ ಕಾರ್ಯಗಳನ್ನು ಸಾಗಿಸುತ್ತಿದ್ದೆವು. ನಮ್ಮ ಮನೆಯಲ್ಲಿಯೆ ಒಕ್ಕಲು ಇದ್ದುದರಿಂದ ಹೆಚ್ಚಿನ ಕೆಲಸವು ಆಗುತ್ತಿತ್ತು. ಆದರೆ ಆಕೆ ತನ್ನ ವಾಚಾಳಿತನವನ್ನು ನಮ್ಮ ಮನೆಯಲ್ಲಿ ಪ್ರವಹಿಸತೊಡಗಿದಳು. ಅವಳ ಕೆಲಸದಲ್ಲಿ಼ನ ಯಾವುದೇ ತಪ್ಪನ್ನು ನಾವು ಅರುಹಿದರೆ ಸಾಕು ಅವರಿಗೆ ಉಳಿದುಕೊಳ್ಳಲು ಕೊಟ್ಟ ಕೊಣೆಯಲ್ಲು ಹೊರಗೆ ಅಂಗಳದಲ್ಲಿಯು ಬಂದು ಬೊಬ್ಬಿರಿಯುತ್ತಿದ್ದುದು ಮುಗಿಲಿಗೆ ಮುಟ್ಟುತ್ತಿತ್ತು. ಸುಬ್ಬಪ್ಪಜ್ಜ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದರು. ಇವಳ ಅವಗುಣಗಳನ್ನು ಹಿಂಬಾಲಿಸುವ ಅಶ್ವಿನಿಯನ್ನ ವಿದ್ಯಾಭ್ಯಾಸ ಮಾತ್ರವೆ ಬದಲು ಮಾಡಬೇಕು. 1 ನೇ ತರಗತಿ ನಮ್ಮ ಚೆಂಬು ಗ್ರಾಮದ ಪ್ರಾಥಮಿಕ ಶಾಲೆಗೆ ಸೇರಿದಳು. ಸುಬ್ಬಪ್ಪಜ್ಜನಿಗೆ ಆರು ವರ್ಷದ ಮಗಳೆಂದರೆ ಯಾರು ನಂಬುತ್ತಿರಲಿಲ್ಲ. ಹುಡುಗಿಯ ನಗು ತುಂಬು ಚಂದಿರನಂತೆ ಬಲು ಮುಗ್ಧತೆಯಿಂದ ಕೂಡಿತ್ತು.
ಒಂದು ದಿನ ಸುಬ್ಬಪ್ಪಜ್ಜ ವಿಪರೀತ ಕುಡಿದು ತೂರಾಡುತ್ತಾ ಮನೆಗೆ ಬಂದರು. ತುಂಗಮ್ಮಳಂತು ಬರುವ ಮೊದಲೇ ಜಗಳಕ್ಕೆ ಕಾಯುತ್ತಾ ಕುಳಿತವಳಂತೆ ಇದ್ದಳು.ಜೋರಾಗಿ ದಂಪತಿಗಳಲ್ಲಿ ಕಲಹ ಪ್ರಾರಂಭವಾಯಿತು. ಜಗಳ ತಾರಕ್ಕೇರುತ್ತಾ ಜೊತೆಜೊತೆಗೆ ನನಗೂ ಸೇರಿಸಿ ಬಯ್ಯುತ್ತಿದ್ದಳು. ಯಾಕೆಂದರೆ ನನ್ನ ಹೆಚ್ಚಿನ ಅನುಕಂಪ ಯಾವಾಗಲೂ ಸುಬ್ಬಪ್ಪಜ್ಜನ ಪರವಾಗಿತ್ತು. ಆ ದಿನ ತುಂಗಮ್ಮ ಅವರಿಗೆ ಗಂಜಿಯನ್ನು ಕೊಡಲಿಲ್ಲ. ರಾತ್ರಿ ಹೊರಗಡೆ ಕುಳಿತ್ತಿದ್ದವರಿಗೆ ನಾವು ಊಟ ಕೊಟ್ಟಿದ್ದೆವು. ಮರುದಿನ ಬೆಳ್ಳಂಬೆಳಗೆ ಸುಬ್ಬಪ್ಪಜ್ಜ ಸಿಟ್ಟಿನಿಂದ ಮನೆಯಿಂದ ಹೊರಟವರು 15 ದಿನಗಳು ಕಳೆದವು. ತಿರುಗಿ ಬರಲಿಲ್ಲ. ತುಂಗಮ್ಮ ದಿಗಿಲಾದರು ತೋರ್ಪಡಿಸಿಕೊಳ್ಳದೇ ಪ್ರತಿ ದಿನ ದನಗಳಿಗೆ ಹುಲ್ಲು ಮಾಡುತ್ತಾ ದಾರಿಯೆದುರು ನೋಡುತ್ತಿದ್ದಳು. ಅವರ ಅಕ್ಕನ ಮನೆಗಲ್ಲದೆ ಬೇರೆಲ್ಲು ಹೋಗಿರಲಾರಲು ಎನ್ನುತ್ತಿದ್ದಳು. ಸುಬ್ಬಪ್ಪಜ್ಜನ ಸುಳಿವಿಲ್ಲದ ದಿನಗಳುರುಳಿದಂತೆ ಈಕೆಯ ರಂಪಾಟ ಕಡಿಮೆಯಾಗಿ ಬರಲಿಲ್ಲವೆಂಬ ಕಾಳಜಿ ಹೆಚ್ಚಾಯಿತು.ಸುಬ್ಬಪ್ಪಜ್ಜ ಮನೆಗೆ ಬಂದೊಡನೆ ದೇವರಿಗೆ ಒಂದು ಕೊಂಡೆ ಎಳ್ಳೆಣ್ಣೆ ಕೊಡುವುದಾಗಿ ಹರಕೆಯನ್ನು ಹೊತ್ತಳು. ಹರಕೆ ಹೇಳಿದ ಮರುದಿನನೇ ಸುಬ್ಬಪ್ಪಜ್ಜ ಪ್ರತ್ಯೆಕ್ಷರಾದರು.
ತದನಂತರ ಗಂಡ ಹೆಂಡತಿ ಕಲಹ ನಮ್ಮೊಂದಿಗೆ ಮುನಿಸುಗಳು ಸಾಮಾನ್ಯವಾಗಿ ನಡೆಯುತ್ತಲೇ ಇದ್ದವು. ಒಂದು ದಿನ ಬಂಧುಗಳ ಮನೆಗೆ ಹೋಗಿದ್ದವಳು ತಡರಾತ್ರಿ ಮಗಳೊಂದಿಗೆ ಮನೆಗೆ ಬಂದಳು.ಸುಬ್ಬಪ್ಪಜ್ಜ ಮನೆಯಲ್ಲಿ ಇರಲಿಲ್ಲ. ಮರುದಿನ ಬೆಳಗ್ಗೆ ಆಕೆಯ ಕಿರುಚಾಟ ಪ್ರಾರಂಭವಾಗಿತ್ತು. ಕಾರಣವೆನೆಂದರೆ ರಾತ್ರಿ ಬಂದವರಿಗೆ ನಾವು ಊಟ ಕೊಡಲಿಲ್ಲವೆಂಬುದು ಆಕೆಯ ವಾದವಾಗಿತ್ತು. ವಾಸ್ತವವಾಗಿ ಅವಳು ಬಂದದ್ದೆ ನಮಗೆ ತಿಳಿದಿರಲಿಲ್ಲ. ಇನ್ನು ಇಲ್ಲಿರುವಂತೆ ನಾವು ಒತ್ತಾಯಪಡಿಸುವುದಿಲ್ಲ. ನಿನ್ನಿಷ್ಟದಂತೆ ಮಾಡು ಎಂದು ಹೇಳಿದ ದಿನವೇ ತುಂಗಮ್ಮ ಮಹಾತಾಯಿ ಕೊನೆಯದಾಗಿ ನಮ್ಮ ಮನೆಯಂಗಳ ದಾಟಿದಳು. ಸುಬ್ಬಪ್ಪಜ್ಜ ಮನೆಗೆ ಬಂದಾಗ ಹೆಂಡತಿ ಹೋಗಿರುವ ವಿಷಯ ತಿಳಿದು ಎಲ್ಲಿಗಾದರೂ ಹೋಗಲಿ ನಾನು ಇಲ್ಲಿಯೇ ಇರುತ್ತೇನೆ. ಎಂದು ಮನೆಯಲ್ಲಿಯೇ ಉಳಿದುಕೊಂಡರು. ಮಗಳ ಮೇಲಿನ ಮಮತೆಯಿಂದ ಅವರಿಗೆ ನೆಮ್ಮದಿಯಾಗಿ ಇರಲು ಆಗುತ್ತಿರಲಿಲ್ಲ. ಸುಬ್ಬಪ್ಪಜ್ಜನ ಅಂತರಂಗ ಭೋರ್ಗೆರೆಯುತ್ತಿದ್ದರು. ಮುಖದ ಮಂದಹಾಸ ಶಾಂತವಾಗಿತ್ತು.
ನಂತರ ಸರಿಸುಮಾರು ಹತ್ತು ದಿನಗಳ ತರುವಾಯ ನಮ್ಮ ಗ್ರಾಮದ ಬಾಲಂಬಿ ಎಂಬಲ್ಲಿ ತುಂಗಮ್ಮ ಪ್ರತ್ಯಕ್ಷಕೊಂಡಳು. ಅಲ್ಲಿ ನಮ್ಮೂರಿನ ಸೊಸೈಟಿ, ಅಂಚೆ ಕಛೇರಿ, ಒಂದೆರಡು ಅಂಗಡಿಗಳು ಒಂದು ಹೋಟೆಲ್ ಮತ್ತು ಒಂದು ಟೈಲರ್ ಅಂಗಡಿ ಇದೆ. ಇಲ್ಲಿ ರಸ್ತೆ ಎರಡು ಕವಲುಗಳಾಗಿ ಒಡೆದು ಒಂದು ದಬ್ಬಡ್ಕಕ್ಕೆ ಹೋದರೆ ಇನ್ನೊಂದು ಕುದ್ರೆಪಾಯ ಗ್ರಾಮಗಳಿಗೆ ತೆರಳಿತ್ತಿತ್ತು. ಇಲ್ಲಿ ಜೋರಾಗಿ ಅಳುತ್ತಾ ಒಂದೆರಡು ಜನರನ್ನು ಕಲೆಹಾಕಿ ನಾನಿದ್ದ ಮನೆಯಲ್ಲಿ ದಿನವೊಂದಕ್ಕೆ ಇಪ್ಪತೈದು ರೂಪಾಯಿ ಸಂಬಳ ನೀಡಿ ಕತ್ತೆಯಂತೆ ದುಡಿಸುತ್ತಾರೆ, ನನ್ನ ಗಂಡನನ್ನು ಕಳುಹಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಾ ಒಂದೇ ಸಮನೆ ಗೋಗರೆದು ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದಳು. ನಮ್ಮದೇ ಊರಾಗಿದ್ದರಿಂದ ದೂರಾವಾಣಿ ಮೂಲಕ ವಿಷಯ ತಿಳಿಯಿತು. ಆಕೆಯ ನಡತೆ ಗೊತ್ತಿದ್ದರು ಸ್ವಲ್ಪ ರಾಜಕೀಯದ ಗುಂಪುಗಾರಿಕೆಯು ಸೇರಿ ಅವಳಿಗೆ ಬೆಂಬಲವು ಸಿಕ್ಕಿತ್ತು. ಅವಳ ಉದ್ದೇಶ ನಮ್ಮಿಂದ ಹೆಚ್ಚಿನ ಹಣ ಕೀಳುವುದು. ಮತ್ತು ಗಂಡನನ್ನು ಬರ ಮಾಡಿ ಕೊಳ್ಳುವುದಾಗಿತ್ತು. ಸುಬ್ಬಪ್ಪಜ್ಜನೇ ಹೋಗಿ ನೀನೆಲ್ಲಿಗಾದರೂ ಹೋಗು ನಾನಿಲ್ಲೆ ಇರುತ್ತೇನೆ ಎಂದ ನಂತರ ಅಲ್ಲಿಂದ ಹೊರಟಳು. ಇಲ್ಲಿಗೆ ಆಕೆಗೆ ನಮ್ಮ ಮನೆಯ ಒಡನಾಟದ ಎಲ್ಲಾ ಅದ್ಯಾಯವು ಮುಕ್ತಾಯಗೊಂಡಿತ್ತು. ಸುಬ್ಬಪ್ಪಜ್ಜ 1 ತಿಂಗಳಾದರು ಹೋಗುವ ಲಕ್ಷಣ ಕಾಣದಿದ್ದಾಗ ನಾವೇ ಹೋಗುವಂತೆ ಕೇಳಿಕೊಂಡೆವು. ಏಕೆಂದರೆ ತುಂಗಮ್ಮನ ಹಾವಳಿ ಮುಂದಕ್ಕೆ ಬಾರದಿರಲಿ ಎಂಬ ದೃಷ್ಟಿಯಿಂದ. ಸುಬ್ಬಪ್ಪಜ್ಜನನ್ನು ಸಾಮಾನು ಸಹಿತ ಗೂನಡ್ಕಕ್ಕೆ ಬಿಟ್ಟು ಬಂದೆವು.
ಅತ್ಯಂತ ಶ್ರೀಮಂತಿಕೆಯಲ್ಲಿದ್ದ ಸುಬ್ಬಪ್ಪಜ್ಜ ಈಗಿನ ದಯನೀಯ ಪರಿಸ್ಥಿತಿ ನೋಡಿದರೆ ಎಂತವರಿಗೂ ಕನಿಕರ ಉಂಟಾಗುತ್ತದೆ. ಸಾಲದ್ದಕ್ಕೆ ಇಳಿಪ್ರಾಯದಲ್ಲಿ ಮದುವೆಯಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೆಲಸ ಮಾಡಲು ದೇಹದಲ್ಲಿ ಕಸುವು ಇಲ್ಲದಂತಾಗಿದೆ. ಗೂನಡ್ಕದಲ್ಲಿ ವರ್ಷಂಪ್ರತಿ ನಡೆಯುವ ಪತ್ತನಾಜೆಯಲ್ಲಿ ಇವರು ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಪತ್ತನಾಜೆಗೆ ಹೋಗಿದ್ದಾಗ ನಾನು ಭೇಟಿಯಾಗಿದ್ದೆ. ಮಾತಿನಲ್ಲಿ ತಿಳಿಯುವಂತಹ ಸುಳ್ಳು ಗೋಚರಿಸುತ್ತಿತ್ತು. ತುಂಗಮ್ಮ ಯಾವುದೇ ಮನೆಯಲ್ಲಿ ಖಾಯಂ ನಿಲ್ಲಲಾಗದೆ ಊರೂರು ಅಲೆಯುತ್ತಿದ್ದಾಳೆ ಎಂದು ಅವರಾಗಿಯೆ ಹೇಳುತ್ತಿದ್ದರು. ಮಗಳನ್ನು ನೋಡುವುದಕ್ಕಾಗಿ ಆಗಾಗ್ಗೆ ನಾನು ಹೋಗಿ ಬರುತ್ತೇವೆ ಎಂದು ಹೇಳಿಕೊಂಡರು. ತುಂಗಮ್ಮನ ಜೀವನ ಮಲಿನವಾದರು ಲೆಕ್ಕಿಸದೆ ಹರಿಯುವ ತುಂಗಾನದಿಯಂತೆ ಸಾಗುತ್ತಲೇ ಇದೆ. ಬದುಕಿಗೆ ಯಾವುದೇ ಕಟ್ಟಳೆಗಳು ಇಲ್ಲದಿದ್ದರೆ ಬಾಳು ಬಯಲಿನಂತಾಗದೆ ಇನ್ನೇನಾಗುತ್ತದೆ ಹೇಳಿ? ಬದುಕು ಎಂದ ಮೇಲೆ ಅದಕೊಂದು ಸುಂದರವಾದ ಚೌಕಟ್ಟು ಇರಬೇಕು. ಮನುಷ್ಯ ಜೀವನದಲ್ಲಿ ಸಂಪಾದಿಸಬೇಕಿರುವುದು ಹಣ ಅಲ್ಲ ಗುಣ ಎಂಬ ತಾತ್ವಿಕತೆ ಇಲ್ಲದಿದ್ದರೆ ತುಂಗಮ್ಮಳಂತಹ ಬಟಾಬಯಲು ಜೀವನದಲ್ಲಿ ದಕ್ಕುವುದಾದರೂ ಏನು? ಈಗ ಸುಬ್ಬಪ್ಪಜ್ಜ, ತುಂಗಮ್ಮ ದಂಪತಿಗಳು ಪರಸ್ಪರ ಬೇರೆ ಬೇರೆಯಾಗಿ ಸಂಸಾರ ಸಾಗಿಸುತ್ತಿದ್ದಾರೆ. ಕವಲೊಡೆದ ದಾರಿಯಲ್ಲಿ ಈರ್ವರು ಏನೂ ಬದಲಾವಣೆ ಹೊಂದಿಲ್ಲ. ಒಂದಾಗಿರಲು ಗಂಡಸಿನ ಚಟ ಮತ್ತು ಹೆಂಗಸಿನ ಹಟ ಅಡ್ಡಗಾಲು ಹಾಕುತ್ತಿದೆ. ಗೂನಡ್ಕಕ್ಕೆ ಹೋದಾಗಲೆಲ್ಲಾ ಸುಬ್ಬಪ್ಪಜ್ಜ ಕಾಣಸಿಗುತ್ತಾರೆ ಹಿಂದಕ್ಕೆ ಕೈ ಕಟ್ಟಿ ನಡೆಯುತ್ತಾ………………..
– ಸಂಗೀತಾ ರವಿರಾಜ್ , ಮಡಿಕೇರಿ