ಸೇಫ್ ಆಗಿ ಸೇವ್ ಮಾಡಿ ಹೆಸರು!

Share Button

ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು  ಬಂದಾಗ ನಮಗೆ ನೆನಪಾಗುವುದು ಜೋಕಿಮ್ ಅವರು. ಜೋಕಿಮ್ ಅವರಿಗೆ ಕರೆ ಮಾಡಬೇಕೆಂದುಕೊಂಡರೆ ಅವರ ಹೆಸರೇ ನೆನಪಿಗೆ ಬರಲೊಲ್ಲದು. ಅವರನ್ನು ಮನೆಗೆ ಕರೆಯದೇ ವರ್ಷಗಳ ಮೇಲಾಗಿತ್ತು. ಐದು ನಿಮಿಷ ಏಕಾಗ್ರತೆಯಿಂದ ನೆನಪಿಸಿಕೊಂಡರೂ “ಊಹ್ಞೂಂ”. “ಸರಿ, ಮತ್ತೆ ನೆನಪಾದಾಗ ಕರೆ ಮಾಡುವೆ ” ಅಂತ ತೀರ್ಮಾನಿಸಿ ಕಾಲೇಜಿಗೆ ಹೊರಟೆ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಸುಮ್ಮನೆ ಕಾರಿನಲ್ಲಿ ಕುಳಿತಾಗ ಥಟ್ ಅಂತ ನೆನಪಿಗೆ ಬಂತು ನೋಡಿ “ಜೋಕಿಮ್” ಹೆಸರು . ಮರು ದಿನ ಅವರಿಗೆ ಕರೆ ಮಾಡಿದ್ದೂ ಆಯಿತು, ಬಂದು ಫ್ಯಾನ್, ಸ್ವಿಚ್ಚು ರಿಪೇರಿ ಮಾಡಿಸಿಯೂ ಆಯ್ತು. ಅವರ ಬಳಿ ಅಂದೆ “ಮೊನ್ನೆ ನಿಮಗೆ ಕರೆ ಮಾಡಬೇಕೆಂದು ಕೊಂಡಾಗ ನಿಮ್ಮ ಹೆಸರೇ ಜ್ಞಾಪಕಕ್ಕೆ ಬರಲಿಲ್ಲ. ನನಗೆ ವಯಸ್ಸಾಗ್ತಿದೆ ಅನ್ನುವುದು ಸ್ವಲ್ಪ ಸ್ವಲ್ಪ ಅನುಭವಕ್ಕೆ ಬರುತ್ತಿದೆ” ಅಂತ ಹೇಳಿ ನಕ್ಕೆ. “ಅದು ಮೇಡಂ, ಹೆಸರಿನ ಮುಂದೆ ಎಲೆಕ್ಟ್ರಿಶಿಯನ್ ಅಂತ ಬರೆದರೆ ಈಗಿನ ಸ್ಮಾರ್ಟ್ ಫೋನಿನಲ್ಲಿ ಸರ್ಚ್ ಕೊಟ್ಟರೆ ಹುಡುಕಲಿಕ್ಕೆ ಆಗ್ತದೆಯಂತೆ ಅಲ್ವಾ?” ಅಂದರು ಜೋಕಿಮ್. ಹೌದೆಂದು ತಲೆಯಲ್ಲಾಡಿಸಿದೆ. ಮೊಬೈಲ್ ಫೋನಿನಲ್ಲಿ ಹೆಸರು ಸೇವ್ ಮಾಡಿಕೊಳ್ಳುವಾಗಲೂ ಒಂದು ಲಾಜಿಕ್ ಖಂಡಿತಾ ಅಗತ್ಯವಿದೆ ಅನ್ನುವುದು ಎಷ್ಟೋ ಸಲ ಅನುಭವಕ್ಕೆ ಬಂದಿದೆ. ಮೊಬೈಲ್ ಫೋನಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಮೊಬೈಲ್ ಸಂಖ್ಯೆಯ ಜೊತೆ ಹೆಸರು ಬರೆದಿಟ್ಟುಕೊಳ್ಳುವ/ವರ ಬಗ್ಗೆ (ನನ್ನನ್ನೂ ಸೇರಿಸಿ) ಈ ಲೇಖನ.

ಹೌದು. ಮೊಬೈಲಿನಲ್ಲಿ ಮೊಬೈಲ್ ಸಂಖ್ಯೆ ಸೇವ್ ಮಾಡುವಾಗ ನಮಗೆ ನೆನಪಿಡಲು ಸಹಾಯವಾಗುವ ಹಾಗೆ ಉಪಾಯ ಹುಡುಕಬೇಕಾಗುತ್ತದೆ.  ಪ್ರಸಾದ್ ಕಂಪ್ಯೂಟರ್ ಅಂದರೆ ಕಂಪ್ಯೂಟರ್ ರಿಪೇರಿಯ ಪ್ರಸಾದ್ ಅಂದರ್ಥ. ಮುತ್ತು ಇಸ್ತ್ರಿ ಅಂದರೆ ನೀವೇ ಊಹಿಸಬಲ್ಲಿರಿ. ನನ್ನ ದೂರದ ಸಂಬಂಧಿಗಳದೇ ಮಿಸ್ಡ್ ಕಾಲ್ (ತಪ್ಪಿದ ಕರೆ) ಬಂದಾಗ ಮಿಸ್ಕಾಲ್, ಮಿಸ್ಕಾಲ್ 14 ಅಕ್ಟೋಬರ್, ಮಿಸ್ಕಾಲ್ ಮಾರ್ಚ್ 3, ಮಿಸ್ಕಾಲ್ 17/9 ಅಂತಲೇ ಹೆಸರಿದ್ದರೂ ಅವರಾರೆಂದು ಸರಿಯಾಗಿ ನೆನಪಿದೆ. ಗ್ರಾಹಕ ಸ್ನೇಹಿ ಕೇಂದ್ರದಿಂದ ಆಗಾಗ ಬರುವ ಕರೆಗಳ ಭರಾಟೆಗೆ ಸೋತು ಅವುಗಳನ್ನು ಉಪದ್ರ1, ಉಪದ್ರ2, ಉಪದ್ರ 3,… ಹಾಗೆ ಜೋಪಾನ ಮಾಡಿದ ನಂತರ ಅಂತಹ ಉಪದ್ರ ಕರೆಗಳನ್ನು ಕಂಡ ತಕ್ಷಣ ಗೊತ್ತಾಗಿ ಬಿಡುತ್ತದೆ.  ನನ್ನ ಸ್ನೇಹಿತರೊಬ್ಬರು ಹೇಳಿದ ಸಂಗತಿ ಇದು. ಆಗಾಗ ಕರೆ ಮಾಡಿ ತಲೆ ತಿನ್ನುವ ಸ್ನೇಹಿತನ ಹೆಸರನ್ನು ಅವರು ಉಪದ್ರ ಅಂತ ಸೇವ್ ಮಾಡಿದ್ದರಂತೆ!

ನಾನು ನನ್ನ ಆತ್ಮೀಯರಿಬ್ಬರನ್ನು ಕಂಡಿದ್ದೇನೆ. ಮೊಬೈಲಿನಲ್ಲಿ ಹೊಸ ಸಂಖ್ಯೆ ಸೇರಿಸುವಾಗ ಅವರದೇ ಒಂದು ಲಾಜಿಕ್. ಅವರು ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೋ ಆ ಸಂಸ್ಥೆಯ ಹೆಸರಿನ  ಸಂಕ್ಷಿಪ್ತ ರೂಪ  ಮೊದಲು ಬರೆದು ಅನಂತರ ಸಂಬಂಧಪಟ್ಟವರ ಹೆಸರನ್ನು ಹಾಕಿದ್ದರು. ಒಂದೇ ರೀತಿಯ ಎರಡು ಹೆಸರು ಇದ್ದರೆ ಆಗ ಅವರ ವಿಭಾಗವನ್ನು ಸೂಚಿಸುವ ಕೆಲವು ಅಕ್ಷರಗಳನ್ನು ಸೇರಿಸುತ್ತಿದ್ದರು. ಆದರೆ ಒಂದಂತೂ ಸತ್ಯ. ಯಾರ ಯಾರ ಹೆಸರನ್ನು ಹೇಗೆ ಸೇವ್ ಮಾಡಿಕೊಂಡಿದ್ದೇವೆ ಅನ್ನುವುದು ಮಾತ್ರ ನೆನಪಲ್ಲಿ ಇರಬೇಕು. ನನಗಂತೂ ಇದನ್ನೆಲ್ಲಾ ನೋಡುವಾಗ ಕಾಲದೊಂದಿಗೆ ನಾವು ಕೂಡಾ ಹೇಗೆ ಬದಲಾಗಿದ್ದೇವೆ ಅನ್ನುವುದು ವೇದ್ಯವಾಗುತ್ತದೆ. ಮೊಬೈಲ್ ಬರುವ ಮುನ್ನ ಸುಮಾರು ನೂರಕ್ಕಿಂತಲೂ ಸಂಖ್ಯೆಗಳನ್ನು ಪಟ ಪಟ ಹೇಳುತ್ತಿದ್ದ ನಾನು ಈಗ ಮೊಬೈಲ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಮೊಬೈಲಿನಲ್ಲಿ ಇದೆಯಲ್ಲಾ ಅನ್ನುವ ಧೈರ್ಯ! ಎಷ್ಟೋ ಜನರಿದ್ದಾರೆ- ಅವರದೇ ಮೊಬೈಲ್ ಸಂಖ್ಯೆಯನ್ನು ಯಾರಾದರೂ ಕೇಳಿದರೆ ಮೊಬೈಲ್ ನೋಡಿಯೇ ಕೊಡುವರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಾವು ಮೊಬೈಲಿಗೆ ಮೊರೆ ಹೋಗಿದ್ದೇವೆ.

ಇನ್ನು ಪ್ರೇಮಿಗಳು ತಾವು ಪ್ರೇಮಿಸಿದವರ ಹೆಸರನ್ನು ಯಾವ ತರಹ ಸೇವ್ ಮಾಡುತ್ತಾರೆ ಅನ್ನುವುದು ಅವರ ಪ್ರೀತಿಯ ಭಾವತೀವ್ರತೆಯನ್ನು ಸೂಚಿಸುತ್ತದೆ. ಹಾಗೆಯೇ ಗಂಡ ತನ್ನ ಮೊಬೈಲಿನಲ್ಲಿ ಹೆಂಡತಿಯ ಹೆಸರನ್ನು ಹೇಗೆ ಬರೆಯಬಹುದು ಅಥವಾ ಹೆಂಡತಿ ಗಂಡನ ಹೆಸರನ್ನು ಹೇಗೆ ಬರೆಯಬಹುದು ಅನ್ನುವುದಕ್ಕೆ ಅನೇಕ ಹಾಸ್ಯ ಲೇಖನಗಳು ಬರುತ್ತವೆ. ಓರ್ವ ಗಂಡ ತನ್ನ ಹೆಂಡತಿ ಹೆಸರನ್ನು “ತಲೆನೋವು” ಅಂತ ಸೇವ್ ಮಾಡಿದ್ದನಂತೆ! ಹಾಗೆಯೇ ಓರ್ವ ಹೆಂಡತಿ ತನ್ನ ಗಂಡನ ಹೆಸರನ್ನು “ಇರಿಟೇಶನ್” ಅಂತ ಸೇವ್ ಮಾಡಿದ್ದಳಂತೆ!

ಇದು ನಿಜವಾಗಿಯೂ ನಡೆದ ಘಟನೆ. ಓರ್ವ ಹುಡುಗ ಓರ್ವಳನ್ನು ತುಂಬಾ ಪ್ರೀತಿಸುತ್ತಿದ್ದನಂತೆ. ತನ್ನ ಪ್ರೀತಿಯ ಹುಡುಗಿ ಹೇಳಿದ ಎಲ್ಲಾ ಹೋಟೆಲ್ಲುಗಳಿಗೆ ಅವಳನ್ನು ಕರೆದುಕೊಂಡು ಹೋಗಿ ಅವಳಿಗೆ ತನ್ನದೇ ಖರ್ಚಿನಲ್ಲಿ ಬೇಕು ಬೇಕಾದದ್ದನ್ನೆಲ್ಲಾ ಕೊಡಿಸುತ್ತಿದ್ದನಂತೆ. ಹೀಗಿರುವಾಗ ಸ್ನೇಹಿತನೊಬ್ಬ ಅವನ ಬಳಿ ಅಂದನಂತೆ “ನಿನಗೆ ಗೊತ್ತಿಲ್ವಾ? ಆ ಹುಡುಗಿ ನಿನ್ನನ್ನು ಪ್ರೀತಿಸುವ ನಾಟಕ ಮಾಡುತ್ತಿದ್ದಾಳೆ ಅಷ್ಟೇ. ಚಲನಚಿತ್ರ ನೋಡಲು ಒಬ್ಬನ ಜೊತೆ ಪ್ರೀತಿ, ಮೊಬೈಲಿಗೆ ಕರೆನ್ಸಿ ಹಾಕಲು ಇನ್ನೊಬ್ಬನ ಜೊತೆ ಪ್ರೀತಿ, ಹೋಟೆಲ್ಲಿಗೆ ಹೋಗಲು ನಿನ್ನ ಜೊತೆ ಪ್ರೀತಿ,… ಹೀಗೆ”. ಆ ಹುಡುಗನಿಗೆ ನಂಬಲಾಗಲಿಲ್ಲ. ಆದರೂ ಪರೀಕ್ಷಿಸಿಯೇ ಬಿಡೋಣವೆಂದು ಒಂದು ದಿನ ಹೋಟೆಲ್ಲಿನಲ್ಲಿ ಅವಳ ಬಟ್ಟೆಯ ಮೇಲೆ ಕಾಫಿ ಬೀಳುವಂತೆ ಮಾಡಿದ. ಆ ಹುಡುಗಿ ವಾಶ್-ರೂಮಿಗೆ ಹೋದಾಗ ತನ್ನ ಮೊಬೈಲಿನಿಂದ ಅವಳ ಮೊಬೈಲಿಗೆ ಕರೆ ಮಾಡಿದಾಗ ಆ ಹುಡುಗನ ಹೆಸರಿನ ಜೊತೆ ಹೋಟೆಲ್ ಬರುತ್ತಿದ್ದುದನ್ನು ನೋಡಿ ಅವನಿಗೆ ನಿಜಸಂಗತಿ ತಿಳಿದು ಅವಳಿಂದ ದೂರವಾದನಂತೆ.

ಯಾರು ಹೇಗೆ ಬೇಕಾದರೂ ಹೆಸರು ಸೇವ್ ಮಾಡಿಕೊಳ್ಳಿ,  ಹಾಸ್ಯಾಸ್ಪದವಾಗದಂತಿರಲಿ. ಅಥವಾ ತಪ್ಪಿ ಎದುರು ಸಿಕ್ಕಿ ಆ ಹೆಸರು ಅನಾವರಣಗೊಳ್ಳುವಾಗ, ಎದುರಿರುವ ವ್ಯಕ್ತಿಗೆ ಮುಜುಗರವಾಗದಂತಿರಲಿ. ಸೇವ್ ಮಾಡುವ ಹೆಸರು ಅನುಮಾನಗಳನ್ನು ಹುಟ್ಟು ಹಾಕದಂತಿರಲಿ. ತಮಾಷೆ ಮಾಡಲು ಹೋಗಿ, ತಮಾಷೆಯ ಪರಿಣಾಮ ಗಂಭೀರ ರೂಪ ತಾಳದಿರಲಿ. ನಿಮಗೊಂದು ಕಿವಿಮಾತು – ಸೇಫ್ ಆಗಿ ಸೇವ್ ಮಾಡಿ ಹೆಸರು!

ಡಾ ಕೃಷ್ಣಪ್ರಭ ಎಂ, ಮಂಗಳೂರು

13 Responses

  1. ಸೇಪ್ ಆಗಿ ಸೇವ್ ಮಾಡಿ ಲೇಖನ..
    ಚೆನ್ನಾಗಿದೆ… ಇನ್ನೂ ಮುಂದುವರೆಸಬಹುದಿತ್ತು..ಎಂದೆನಿಸಿತು…ಮೇಡಂ… ಧನ್ಯವಾದಗಳು

    • Dr Krishnaprabha M says:

      ಮೆಚ್ಚುಗೆಗೆ ಧನ್ಯವಾದಗಳು ಮೇಡಂ… ವಿಷಯ ಇನ್ನೂ ಇತ್ತು. ನಿಮ್ಮ ಅನಿಸಿಕೆಗೆ ಧನ್ಯವಾದಗಳು

  2. ಸಂತೋಷ್ ಕುಮಾರ್ ಶೆಟ್ಟಿ says:

    ಗಂಡ ಹೆಂಡತಿ ಹೆಸರು , ಹೆಂಡ್ತಿ ಗಂಡನ ಹೆಸರು irritation ಅಂತ ಬರೆಯೋದು ಅಷ್ಟು ಸುಲಭ ಅಲ್ಲ due to easy accessibility.

    Any way ಲೇಖನ ಚೆನ್ನಾಗಿದೆ.. ಮುಂದುವರೆಸಬಹುದಿತ್ತು

    • Dr Krishnaprabha M says:

      ಎಷ್ಟೋ ಮನೆಗಳಲ್ಲಿ ಹೆಂಡತಿ ಗಂಡನ ಮೊಬೈಲನ್ನು ಅಥವಾ ಗಂಡ ಹೆಂಡತಿ ಮೊಬೈಲನ್ನು ಮುಟ್ಟದ ಪರಿಸ್ಥಿತಿ ಇರುತ್ತದೆ. ಅನಿಸಿಕೆಗೆ ಧನ್ಯವಾದಗಳು

  3. Hema says:

    ‘ಉಪದ್ರ’ ಕೊಡುವ ನಂಬರ್ ಗಳು ಹಲವಾರಿವೆ.. ಒಳ್ಳೆಯ ಐಡಿಯಾ ಕೊಟ್ರಿ..ಚೆಂದದ ಬರಹ ಮೇಡಂ.

    • Dr Krishnaprabha M says:

      ಲೇಖನ ಪ್ರಕಟಿಸಿದ ಹಾಗೂ ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ಸುರಹೊನ್ನೆಯ ಒಡತಿಗೆ ಧನ್ಯವಾದಗಳು

  4. Prajwal says:

    ತುಂಬಾ ಚೆನ್ನಾಗಿದೆ ಮಾಮ್ ನಿಮ್ಮ ಲೇಖನ

  5. ನಯನ ಬಜಕೂಡ್ಲು says:

    ಸ್ಮಾರ್ಟ್ ಫೋನ್ ಒಂದು ಮಾಯಾಪೆಟ್ಟಿಗೆ. ಇದರಲ್ಲಿ ಕಲಿಯಲು ಇರುವ ವಿಚಾರಗಳು ಹಲವಾರು. Nice article

    • Dr Krishnaprabha M says:

      ಖಂಡಿತವಾಗಿಯೂ ಹೌದು. ಸ್ಮಾರ್ಟ್ ಫೋನಿನಲ್ಲಿ ಕಲಿಯುವುದು ಸಾಕಷ್ಟಿದೆ. ಮೆಚ್ಚುಗೆಗೆ ಧನ್ಯವಾದಗಳು ನಯನಾ

  6. . ಶಂಕರಿ ಶರ್ಮ says:

    ಹಾಂ .. ಇದೇ ಕ್ರಮವನ್ನು ನಾನೂ ಅನುಸರಿಸುತ್ತಿರುವೆ… ಆದರೆ ಉಪದ್ರ ..ಇತ್ಯಾದಿಗಳನ್ನು ಇನ್ನೂ ಉಪಯೋಗಿಸಿಲ್ಲ , ಯಾಕಂದ್ರೆ ಅಂತಹ ಪರಿಸ್ಥಿತಿ ಬಂದಿಲ್ಲ ಮಾರಾಯ್ರೇ… ಉತ್ತಮ ಲೇಖನ ಮೇಡಂ.

  7. ಅಮ್ಮನಿಗೆ ಮಗಳು ಡೇಂಜರ್ ಎಂದು ಸೇವ್ ಮಾಡಿರುವ ಳು
    ಸೊಗಸಾಗಿದೆ ಹರಟೆ ಧನ್ಯವಾದಗಳು

  8. ಸುವರ್ಣಮಾಲಿನಿ says:

    ಅನುಭವ ಲೇಖನ ಅನುಭವ ಇರುವವರಿಗೆ ಮೆಲುಕು ಹಾಕುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: