ಪರಾಗ

ಯಕ್ಷ ಪ್ರಶ್ನೆ !

Share Button

ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ  ಹುಡುಗ.  ವಿಶ್ವನಾಥ ಮತ್ತು ವಿಶಾಲಮ್ಮನ  ಮುದ್ದಿನ ಮಗ. ಚುರುಕು ಬುದ್ಧಿ  ಪಟಪಟನೆ ಅರಳು ಹುರಿದಂತೆ ಮಾತಾಡಿ ಎಲ್ಲರ ಮನಸ್ಸು ಗೆಲ್ಲುತಿದ್ದ. ಇವನ ಮಾತು ವಿಸ್ಮಯ ಮೂಡಿಸಿ ಪ್ರೀತಿ ಉಕ್ಕಿ ಬರುವಂತೆ ಮಾಡುತಿತ್ತು,

ತನ್ನ ಬುದ್ದಿಗೆ ಏನಾದ್ರು ತೋಚಿದರೆ ಸಾಕು  ಅದು ಏಕೆ? ಹೇಗೆ? ಅಂತ  ಪ್ರಶ್ನೆ ಮಾಡೇ ಬಿಡುತಿದ್ದ. ಪ್ರಶ್ನೆ ಮಾಡುವದು ಇವನ ಹವ್ಯಾಸವಾಗಿ ಹೋಗಿತ್ತು.  ಮಗನ ಪ್ರಶ್ನೆಗೆ ಉತ್ತರ ಕೊಡುವದು ವಿಶ್ವನಾಥನಿಗೆ ಸಾಕಾಗಿ ಹೋಗುತಿತ್ತು. ಉತ್ತರ ಗೊತ್ತಿದ್ದರೆ ಹೇಳುತಿದ್ದ ಇಲ್ಲದಿದ್ದರೆ ಏನಾದರೊಂದು ಹೇಳಿ ನುಣುಚಿಕೊಳ್ಳುತಿದ್ದ. ಉತ್ತರ ಸಿಗುವ ತನಕ ಯಕ್ಷ ವಿರಮಿಸದೆ ತನ್ನ ಪ್ರಯತ್ನ ಹಾಗೇ ಮುಂದುವರೆಸುತಿದ್ದ. 

ಅಮ್ಮನಿಗೂ ಯಕ್ಷ  ಪದೇ ಪದೇ ಇಂತಹ  ಪ್ರಶ್ನೆಗಳೇ ಕೇಳುತಿದ್ದ. ಅವಳು ಉತ್ತರ ಗೊತ್ತಿದ್ದರೆ ಹೇಳುತಿದ್ದಳು ಇಲ್ಲದಿದ್ದರೆ   ನಾನೇನು ನಿಮ್ಮ ಅಪ್ಪನಷ್ಟು ಓದಿದವಳೇ ? ಜಾಸ್ತಿ  ನನಗೀನೂ ಗೊತ್ತಿಲ್ಲ ಅಂತ  ಸಮಜಾಯಿಷಿ ನೀಡಿ ಕಳಿಸುತಿದ್ದಳು.

ಯಕ್ಷ  ಹುಟ್ಟಿದಾಗ ಸಹಜವಾಗಿ ದಂಪತಿಗಳಿಗೆ ಖುಷಿಯಾಯಿತು. ಸಿಹಿ ಹಂಚಿ ಸಂಭ್ರಮಿಸಿದರು. ಮುದ್ದು ಮಗನ  ನಾಮಕರಣ ಅದ್ಧೂರಿಯಾಗಿ ಮಾಡಬೇಕು ಎಲ್ಲರಿಗೂ ಭರ್ಜರಿ ಊಟ ಹಾಕಿಸಬೇಕು ಅಂತ ಯೋಚಿಸಿದರು. ಮಗನಿಗೆ ಹೆಸರೇನಿಡೋದು  ಅಂತ ವಿಶ್ವನಾಥ್ ಹೆಂಡತಿಯ ಕೇಳಿದಾಗ  ಅಧುನಿಕತೆಗೆ ತಕ್ಕಂತೆ  ನಮ್ಮ ಮಗನ  ಹೆಸರಿಡಬೇಕು. ಹಳೆಯ ಹೆಸರು,  ಪೂರ್ವಜರ ಹೆಸರು ಬೇಡವೇ ಬೇಡ ಅಂತ ಸಲಹೆ ನೀಡಿದಳು.

ಯಾವ ಹೆಸರಿಡೋದು? ಅಂತ ವಿಶ್ವನಾಥ್  ಹತ್ತಾರು ಬಾರಿ ಯೋಚಿಸಿದ ಆದರೆ ಯಾವುದೇ ನಿರ್ಧಾರಕ್ಕೆ ಬರಲಾಗದೆ  ಲ್ಯಾಪಟಾಪ ಕೈಗೆತ್ತಿಕೊಂಡು ಸೂಕ್ತ  ಹೆಸರು ಹುಡುಕಲು ಗೂಗಲ್ ಸರ್ಚ್ ಮಾಡಿದ. ಸಾವಿರಾರು ದೇಶಿ ವಿದೇಶಿ ಹೆಸರು  ತೆರೆದುಕೊಂಡವು. ಅವುಗಳಲ್ಲಿ  ಯಕ್ಷ ಅನ್ನುವ ಎರಡಕ್ಛರದ  ಹೆಸರು   ಬಹುವಾಗಿ ಆಕರ್ಷಿಸಿತು.

ಈ ಹೆಸರಿಟ್ಟರೆ ಹೇಗಾಗುತ್ತದೆ? ಅಂತ ಹೆಂಡತಿಗೆ ಪ್ರಶ್ನಿಸಿದ. ಈ ಹೆಸರು ಚನ್ನಾಗಿದೆ ಅತ್ತ  ಪೌರಾಣಿಕತೆಗೂ ಹೊಂದಿಕೊಳ್ಳುವದು. ಇತ್ತ  ಆಧುನಿಕತೆಗು ಹೊಂದಿಕೊಳ್ಳುವದು. ಭವಿಷ್ಯದಲ್ಲಿ ನಮ್ಮ ಮಗ ಜಗತ್ತಿನ ಯಾವ ಮೂಲೆಗೆ ಹೋದರೂ ಈ  ಹೆಸರು ಸುಲಭವಾಗಿ ಹೊಂದಿಕೆಯಾಗಬಲ್ಲದು ಅಂತ  ಸಮ್ಮತಿ ಸೂಚಿಸಿದಳು.

ಒಂದಿನ ಯಕ್ಷ ಅನ್ನುವ ಹೆಸರಿಟ್ಟು ಅದ್ಧೂರಿ  ಸಮಾರಂಭ ಮಾಡಿ ಮುಗಿಸಿದರು. ಯಕ್ಷ ದಿನದಿಂದ ದಿನಕ್ಕೆ ಬೆಳೆಯತೊಡಗಿದ.  ಇವನು ಬೆಳೆದಂತೆ ಪ್ರಶ್ನೆಗಳು ಕೂಡ  ಬೆಳೆಯತೊಡಗಿದವು. ಐದು ವರ್ಷ ತುಂಬಿ ಆರನೇ ವರ್ಷಕ್ಕೆ  ಕಾಲಿಟ್ಟಾಗ ನಮ್ಮ ಮಗ ಶಾಲೆಗೆ ಸೇರುವ  ವಯಸ್ಸಿಗೆ ಬಂದಿದ್ದಾನೆ  ಅಂತ ವಿಶಾಲಮ್ಮ  ನೆನಪಿಸಿದಳು. ನಮ್ಮ ಯಕ್ಷ ಎಷ್ಟು ಬೇಗ ದೊಡ್ಡವನಾದ ! ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ ಅಂತ ವಿಶ್ವನಾಥ್  ಆಶ್ಚರ್ಯ ಹೊರ ಹಾಕಿದ.  ಸಧ್ಯ ಶಾಲೆಗೆ ಸೇರಿಸಬೇಕು ಇಲ್ಲದಿದ್ದರೆ   ಬರೀ ಪ್ರಶ್ನೆ ಕೇಳುವದರಲ್ಲೇ ಕಾಲ ಕಳೆಯುತ್ತಾನೆ ಅಂತ ಸಲಹೆ ನೀಡಿದಳು.

ಮನೆಯ ಹತ್ತಿರವಿರುವ  ಒಂದು ಪ್ರತಿಷ್ಠಿತ ಕಾನ್ವೆಂಟ ಶಾಲೆಗೆ ಕರೆದುಕೊಂಡು ಹೋಗಿ ವಿಶ್ವನಾಥ್ ಮಗನ  ಹೆಸರು  ದಾಖಲಿಸಿದ. ಶಾಲೆಗೆ ಹೋಗಲು ಬೇಕಾಗುವ ಪುಸ್ತಕ ನೋಟಬುಕ್  ಪೆನ್ ಪೆನ್ಸಿಲ್  ಬ್ಯಾಗ್ ಎಲ್ಲ ವ್ಯವಸ್ಥೆ ಮಾಡಿದ. ಇಷ್ಟು ದಿವಸ ಮನೆಯಲ್ಲೇ ಕಾಲ ಕಳೆದ  ಯಕ್ಷನಿಗೆ ಶಾಲೆಗೆ ಹೋಗುವದೆಂದರೆ ಎಲ್ಲಿಲ್ಲದ  ಖುಷಿ ನೀಡಿತು. ದಿನಾ  ತಪ್ಪದೆ  ಶಾಲೆಗೆ ಹೋಗಲು ಶುರು ಮಾಡಿದ. ಸ್ವಲ್ಪೇ  ದಿನದಲ್ಲಿ  ಸಹಪಾಠಿ ಮತ್ತು ಶಿಕ್ಷಕರ ಮೆಚ್ಚುಗೆ ಗಳಿಸಿದ.

ತರಗತಿ ಕೋಣೆಯಲ್ಲೂ ಹತ್ತಾರು ಪ್ರಶ್ನೆ ಕೇಳಿ ಅಲ್ಲಿಯೂ ಆಶ್ಚರ್ಯ ಮೂಡಿಸತೊಡಗಿದ. ಇವನ ಪ್ರಶ್ನೆಗೆ ಶಿಕ್ಷಕರು ಕೂಡ ಆಗಾಗ ನಿರುತ್ತರರಾಗುತಿದ್ದರು. ನಿಮ್ಮ ಮಗ ಬುದ್ದಿವಂತ ಆದರೆ ವಿಚಿತ್ರ ಪ್ರಶ್ನೆ ಕೇಳತಾನೆ ಅಂತ ಶಿಕ್ಷಕರು ವಿಶ್ವನಾಥನ ಮುಂದೆ ಹೇಳಿದಾಗ ಏನು ಮಾಡೋದು ನಮಗೂ  ಹಾಗೇ  ಕೇಳತಾನೆ  ಅಂತ  ಮುಗ್ಳನಗೆ  ಬೀರಿದ.

ಯಕ್ಷ ಸಮಯ ಪಾಲನೆಯಲ್ಲಿ ದೊಡ್ಡವರಿಗೂ ಮೀರಿಸುತಿದ್ದ. ಮುಂಜಾನೆ ಬೇಗ ಎದ್ದು ಅಪ್ಪ ಅಮ್ಮನಿಗೆ ಇವನೇ ಎಬ್ಬಿಸುತಿದ್ದ. ವಾಕಿಂಗ್ ಹೋಗಲು ಒತ್ತಾಯಿಸುತಿದ್ದ. ನಾನು ಬರೋದಿಲ್ಲ ನನಗೆ ಮನೆಯಲ್ಲಿ ಕೆಲಸಾ ಇದೆ ಅಂತ ವಿಶಾಲಮ್ಮ ಸಮಜಾಯಿಷಿ ನೀಡಿ ನುಣುಚಿಕೊಳ್ಳುತಿದ್ದಳು. ಮಗನ ಒತ್ತಾಯಕ್ಕೆ ಒಲ್ಲೆ ಅನ್ನದೆ ವಿಶ್ವನಾಥ್ ತಯಾರಾಗಿ ಹೊರಡುತಿದ್ದ. 

ಅಪ್ಪಮಗನ  ಜೋಡಿ ನೋಡಿ ಅನೇಕರು ಆಶ್ಚರ್ಯ ವ್ಯಕ್ತಪಡಿಸುತಿದ್ದರು. ವಾಕಿಂಗ್ ಸಮಯದಲ್ಲೂ ಯಕ್ಷ  ಕಣ್ಣಿಗೆ ಕಂಡಿದ್ದರ ಬಗ್ಗೆ ಹತ್ತು ಹಲವು ಪ್ರಶ್ನೆ ಕೇಳುತಿದ್ದ.  ವಿಶ್ವನಾಥನಿಗೆ ಇವನ ಪ್ರಶ್ನೆ ಅಲ್ಲಿಯೂ ಸವಾಲಾಗಿ ಪರಿಣಮಿಸುತಿದ್ದವು .

ಅಂದು ವಾಕಿಂಗ್ ಹೋದಾಗ ವಿಶ್ವನಾಥನ  ಗೆಳೆಯ ರಾಜಶೇಖರ ಕೂಡ ವಾಕಿಂಗಿಗೆ ಬಂದಿದ್ದ ಆತ ತನ್ನ ಜೊತೆ ಒಂದು  ಸಾಕು ನಾಯಿಯನ್ನು ಕರೆ ತಂದಿದ್ದ. ಆತನಿಗೆ ನೋಡಿ ವಿಶ್ವನಾಥ್  ನಮಸ್ಕರಿಸಿ ಕುಶಲೋಪರಿ ವಿಚಾರಿಸಿದ. ಯಕ್ಷನ ದೃಷ್ಟಿ  ಮುದ್ದಾದ ಆ ಬಿಳಿ ಬಣ್ಣದ ನಾಯಿಯ ಕಡೆ ಹರಿಯಿತು. ಅದರ  ಕೊರಳಲ್ಲಿ  ಕಟ್ಟಿದ ಕಪ್ಪು ಬಣ್ಣದ ಬೆಲ್ಟ ಆಕರ್ಷಿಸಿತು .

ಅಂಕಲ್ ನಿಮ್ಮ ನಾಯಿಯ  ಬೆಲ್ಟ್ ತುಂಬಾ ಚನ್ನಾಗಿದೆ ಎಷ್ಟು ರುಪಾಯಿ ಕೊಟ್ಟರಿ? ಎಲ್ಲಿ ತಂದರಿ? ಅಂತ ಕುತೂಹಲದಿಂದ  ಪ್ರಶ್ನಿಸಿದ. ಇದು  ಅಂತಿಂಥ ಬೆಲ್ಟ್ ಅಲ್ಲ  ಸ್ಪೇಶಲ ಬೆಲ್ಟ್ ಇದನ್ನು ಆನಲೈನ ಮುಖಾಂತರ ಆರ್ಡರ್ ಮಾಡಿ ತರಿಸಿದ್ದು ಇದರ  ಬೆಲೆ ಮೂರು ಸಾವಿರ ರೂಪಾಯಿ  ಅಂತ  ಹೇಳಿದ.  ಅಬ್ಬಾ ನಾಯಿ ಬೆಲ್ಟಿಗೆ ಮೂರು ಸಾವಿರಾ ? ಅಂತ ಯಕ್ಷ ಆಶ್ಚರ್ಯ ಹೊರ ಹಾಕಿದ. ಮನೆಯಲ್ಲಿ  ಎಷ್ಟು ಜನ ವಾಸವಾಗಿದ್ದೀರಿ? ಅಂತ ವಿಶ್ವನಾಥ್ ಆತನಿಗೆ ಪ್ರಶ್ನಿಸಿದ. ಈ ನಾಯಿ ಸೇರಿ ನಾಲ್ಕು ಜನ ಅಂತ ಹೇಳಿದ. ಈ ನಾಯಿ ಕೂಡ  ಲೆಕ್ಕದಲ್ಲಿ ಹಿಡಿದಿರುವೆಯಲ್ಲ  ? ಅಂತ ವಿಶ್ವನಾಥ್  ಆಶ್ಚರ್ಯ ಹೊರಹಾಕಿದ. ಇದು ಬರೀ ನಾಯಿಯಲ್ಲ  ನಮ್ಮ ಕುಟುಂಬದ ಒಬ್ಬ ಸದಸ್ಯ ಕೂಡ ಹೌದು.  ಅಷ್ಟೇ ಅಲ್ಲದೇ  ನಮ್ಮ ಮನೆಯ  ಮಗನಿದ್ದಂತೆ. ಇದಕ್ಕೆ ನಾವು  ಯಾವ ಕೊರತೆಯೂ ಮಾಡೋದಿಲ್ಲ. ನಿತ್ಯ ಸ್ನಾನ  ಮಾಡಿಸುತ್ತೇವೆ. ನಾವು  ತಿನ್ನುವ ಆಹಾರವೇ ಇದಕ್ಕೂ ತಿನಿಸುತ್ತೇವೆ.  ಇದಕ್ಕಾಗಿಯೇ ಒಂದು ಪ್ರತ್ಯೇಕ  ರೂಮಿನ ವ್ಯವಸ್ಥೆ ಕೂಡ  ಮಾಡಿದ್ದೇವೆ ಅಂತ ವಾಸ್ತವ ಹೇಳಿದ .

ಗೆಳೆಯನ ಮಾತಿಗೆ ವಿಶ್ವನಾಥನಿಗೆ  ಆಶ್ಚರ್ಯ ಮೂಡಿಸಿತು. ಅಂಕಲ್  ನಾಯಿ ಕೂಡ ನಿಮ್ಮಂತೆ ಘಮಘಮ ಸುವಾಸನೆ ಬೀರುತ್ತಿದೆಯಲ್ಲ ? ಅಂತ ಯಕ್ಷ ಮಧ್ಯೆದಲ್ಲಿ ಪ್ರಶ್ನಿಸಿದ. ಹೌದು  ನಾನು ಇದಕ್ಕೆ ದಿನಾಲೂ  ಸೇಂಟ್  ಹಾಕುತ್ತೇನೆ ಅಂತ ರಾಜಶೇಖರ  ಮುಗ್ಳನಗೆ ಬೀರಿದ.  ಸೇಂಟ್ ಹಾಕ್ತೀರಾ? ವಾಹ್  ಅಂತ ಯಕ್ಷ  ಅಪ್ಪನ  ಮುಖ ನೋಡಿ   ಇಬ್ಬರೂ ಮನೆ ಸೇರಿಕೊಂಡರು.

ವಿಶ್ವನಾಥ್  ಮೂಲತಃ ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದವನು ನೌಕರಿ ದೊರೆತ ನಂತರ ನಗರ ಸೇರಿ  ಸುಸಜ್ಜಿತ ಮನೆ ಕಟ್ಟಿಕೊಂಡು ವಾಸವಾಗಿದ್ದ. ಇವನಂತಹ ದೊಡ್ಡ ಹುದ್ದೆ ಹಳ್ಳಿ ಊರಲ್ಲಿ ಯಾರಿಗೂ ಇರಲಿಲ್ಲ. ಕೈತುಂಬಾ  ಸಂಪಾದನೆ ಮಾಡಿ ಸುಖಿ ಜೀವನ ಸಾಗಿಸುತಿದ್ದ. ಕಛೇರಿಗೆ ಬಿಡುವು ಸಿಕ್ಕಾಗ ಹಳ್ಳಿಗೆ ಹೋಗಿ ಹೊಲ ಮನೆ ಕಡೆಗೂ ನಿಗಾವಹಿಸುತಿದ್ದ. ಅಲ್ಲೇ  ಒಂದೆರಡು ದಿನ ಮುಕ್ಕಾಂ ಮಾಡಿ ಕಾಲ  ಕಳೆಯುತಿದ್ದ. ಒಂದು ವಾರಗಳ ಕಾಲ ವಿಶ್ವನಾಥನಿಗೆ  ಹಬ್ಬದ ರಜೆ ಸಿಕ್ಕಿತು.   ಕುಟುಂಬ ಸಮೇತ ಊರಿಗೆ ಹೋಗಿ ಮುಕ್ಕಾಂ ಮಾಡಿದ. ಅಲ್ಲಿಯ ಪರಿಸರ ಯಕ್ಷನಿಗೆ ತುಂಬಾ ಹಿಡಿಸಿತು. ಯಕ್ಷ ಒಂದು ದಿನ ಕೂಡ  ಮನೆಯಲ್ಲಿ ಕೂಡದೇ ಊರಲ್ಲೆಲ್ಲ ತಿರುಗಾಡಿದ. ಹೋಟೆಲು ಕಿರಾಣಿ ಅಂಗಡಿ ಮುಂದೆ ದೇಶಾವರಿ ಮಾತಾಡುವವರ ಹತ್ತಿರ ಹೋಗಿ ಹತ್ತು ಹಲವು ಪ್ರಶ್ನೆ ಕೇಳಿದ. ಚೋಟುದ್ದ ಪೋರನ ಮಾತು ಅವರಿಗೂ ಆಶ್ಚರ್ಯ ತರಿಸಿತು. ನೀನು ನಿಮ್ಮ ಅಪ್ಪನಿಗಿಂತ ಬುದ್ಧಿವಂತ. ಅವನಿಗಿಂತಲೂ ದೊಡ್ಡ ಕೆಲಸಕ್ಕೆ ಸೇರುವೆ ಅಂತ ಹೊಗಳಿ ಬೆನ್ನು ತಟ್ಟಿದರು.

ಆಳುಮಗ ಪರಮಣ್ಮನ  ತೆಗೂ ಯಕ್ಷ ತುಂಬಾ ಸಲುಗೆ ಬೆಳೆಸಿಕೊಂಡಿದ್ದ. ಅಂದು ಆತ  ಹೊಲದ ಕಡೆ ಹೊರಟಾಗ  ನಾನೂ   ಬರ್ತೀನಿ ಅಂತ  ತಯ್ಯಾರಾದ. ನೀನ್ಯಾಕೆ  ಹೋಗತಿ ಅಲ್ಲಿ ನಿನ್ನದೇನು ಕೆಲಸಾ? ಅಂತ ಅಮ್ಮ ಯಕ್ಷನಿಗೆ  ಪ್ರಶ್ನಿಸಿದಳು . ಯಾಕೆ ನಾನು ಹೋಗಬಾರದೇ? ನನಗೂ ಹೊಲ ನೋಡುವ ಆಸೆ ಇರೋದಿಲ್ಲವೇ? ಅಂತ  ಪ್ರಶ್ನಿಸಿದ. ನೀನು ಇನ್ನೂ ಸಣ್ಣವನು ದೊಡ್ಡವನಾದಮೇಲೆ ಹೋಗಬೇಕು ಅಂತ ಹೇಳಿದಾಗ  ನಾನು  ದೊಡ್ಡವನಾಗಿಲ್ಲವೇ? ದೊಡ್ಡವನಾಗಿದ್ದೇನೆ ಅಂತ  ನೀವೇ ನನಗೆ ಶಾಲೆಗೆ ಸೇರಿಸಿದ್ದೀರಲ್ಲ?  ಅಂತ ಪ್ರಶ್ನಿಸಿದ.  ಮಗನ ಮಾತಿಗೆ ಏನು ಹೇಳಬೇಕು ಅಂತ ತೋಚದೆ ವಿಶಾಲಮ್ಮ ಗಂಡನ ಮುಖ ಪ್ರಶ್ನಾರ್ಥಕವಾಗಿ  ನೋಡಿದಳು. 

“ಹೋದರೆ  ಹೋಗಲಿ ಬಿಡು ಏನೋ ಆಸೆ ಪಡ್ತಿದ್ದಾನೆ” ಅಂತ ವಿಶ್ವನಾಥ್ ಅನುಮತಿ ನೀಡಿದ. ಯಕ್ಷ ಹೊಲಕ್ಕೆ ಹೋದ ಮೇಲೆ ಎಲ್ಲ ಕಡೆ  ತಿರುಗಾಡಿದ ಬೆಳೆಯ ಬಗ್ಗೆ ಪರಮಣ್ಮನಿಗೆ  ಹತ್ತಾರು  ಪ್ರಶ್ನೆ ಕೇಳಿದ. 

“ಇದೆಲ್ಲ ತೆಗೆದುಕೊಂಡು ನೀನೇನು ಮಾಡ್ತಿ ನೀನೇನು ನಮ್ಮಂಗ ಹೊಲದ ಕೆಲಸ ಮಾಡುವವನೇ? ಅಪ್ಪನಂತೆ ಓದಿ  ದೊಡ್ಡ ಕೆಲಸಾ ಮಾಡೋದು ಬಿಟ್ಟು ಅಂತ ಪ್ರಶ್ನಿಸಿದ. ನೀನು ಮಾಡುವ ಕೆಲಸಾ ದೊಡ್ಡದಲ್ಲವೇ? ವರ್ಷ ಪೂರ್ತಿ ದುಡಿದು ದವಸ ಧಾನ್ಯ ಬೆಳೆದು ಎಲ್ಲರ ಹೊಟ್ಟೆ ತುಂಬಿಸುತ್ತಿರುವೆಯಲ್ಲ ಇದರ ಮುಂದೆ ಮತ್ಯಾವ ದೊಡ್ಡ ಕೆಲಸಾ ಇದೆ ಅಂತ ಪ್ರಶ್ನಿಸಿದ.  ವಯಸ್ಸಿಗೂ ಮೀರಿದ ಯಕ್ಷನ ಪ್ರಶ್ನೆ  ಪರಮಣ್ಮನಿಗೆ  ಯೋಚಿಸುವಂತೆ ಮಾಡಿತು.

ವಿಶ್ವನಾಥ ಹಳ್ಳಿಗೆ ಬಂದು ಆಗಲೇ ಐದಾರು ದಿನ ಕಳೆದುಹೋಗಿದ್ದವು. ನಾಳೆ ರಜೆ ಮುಗಿಯುತ್ತವೆ ನಾಡಿದ್ದು ಕಛೇರಿಗೆ ಹಾಜರಾಗಬೇಕು ಅಂತ ಹೆಂಡತಿಗೆ ಹೇಳಿದಾಗ ನಾವು  ಹಳ್ಳಿಗೆ ಬಂದು ಸುಮಾರು ದಿನ ಕಳೆದರೂ  ಹೊಲದ ಕಡೆ ಹೋಗಿ ಬೆಳೆ ನೋಡಿ ಬರೋದು ಆಗಲಿಲ್ಲ ಅಂತ ಹಳಾಳಿಸಿದಳು.  ಇನ್ನೂ ಒಂದು ದಿನ ಟೈಮಿದೆ ನಾಳೆ ಹೋಗಿ ಬೆಳೆ ನೋಡಿ ಬರೋಣ   ಅಂತ ಹೇಳಿದಾಗ ವಿಶಾಲಮ್ಮ ತಲೆಯಾಡಿಸಿ  ಮರುದಿನ  ತರತರಹದ ಅಡುಗೆ ಮಾಡಿ ಬುತ್ತಿ ತಯ್ಯಾರಿಸಿದಳು.

ಯಕ್ಷ ಎಲ್ಲರಿಗಿಂತ  ಮೊದಲೇ ಹೋಗಿ ಎತ್ತಿನ  ಬಂಡಿಯಲ್ಲಿ ಕುಳಿತ. ದಾರಿಯಲ್ಲಿ  ಬರುವಾಗ ವಿಶ್ವನಾಥನ ಗೆಳಯ  ಬಾವಿ ಮನೆ ಶಿವಶಂಕರ ಹಸುವಿನ ಜೊತೆ ಎದುರಾದ  ಬಾಲ್ಯದ ಗೆಳೆಯನಿಗೆ  ನೋಡಿ ವಿಶ್ವನಾಥ್ ತಕ್ಷಣ ಬಂಡಿಯಿಂದ ಕೆಳಗಿಳಿದು  ಆರಾಮಿದ್ದಿಯಾ?  ಏನು  ಮಾಡ್ತಿದ್ದಿಯಾ? ಅಂತ ಪ್ರಶ್ನಿಸಿದ. ನಾನೇನು ಮಾಡೋದು  ಈ ಹಸು ಕಾಯೋ  ಕೆಲಸಾ ಅಷ್ಟೇ  ಅಂತ ಹೇಳಿದ. ಹಸು ಮೇಯಿಸಿದರೆ ಹಾಲು ಮೊಸರು ತುಪ್ಪ ತಿನ್ನಲು ಬರುತ್ತದೆಯಲ್ಲ ಅಂತ ಸಮಜಾಯಿಷಿ ನೀಡಲು ಮುಂದಾದ. ಬರೀ ಹಾಲು ತುಪ್ಪ ತಿಂದರೆ ಸಾಕೇ ನಿನ್ನಂಗ ದೊಡ್ಡ ನೌಕರಿ ಮಾಡಿ  ಹಣ ಗಳಿಸಲು ಆಗ್ತಾದೇನು? ನಾನೂ  ಸರಿಯಾಗಿ ಓದಿದ್ದರೆ ದೊಡ್ಡ ನೌಕರಿ ಮಾಡ್ತಿದ್ದೆ ಅಂತ ಮುಖ ಸಪ್ಪಗೆ ಮಾಡಿ ಹೇಳಿದ. ಅದೆಲ್ಲ ಈಗ್ಯಾಕೆ  ನೆನಪಿಸಿಕೊಂಡು ಸಂಕಟ ಪಡೋದು? ಆದದ್ದು ಆಗಿ ಹೋಯಿತು ಇದ್ದದರಲ್ಲೇ ತೃಪ್ತಿ ಪಡಬೇಕು ಅಂತ  ಸಲಹೆ ನೀಡಿ ಕಳಿಸಿದ. 

ಹೊಲದ ಕಡೆ ಬಂದ ಮೇಲೂ ಶಿವಶಂಕರನ  ಮಾತು ಯಕ್ಷನ ತಲೆಯಲ್ಲಿ ಹಲವಾರು ಪ್ರಶ್ನೆ ಗರಿಗೆದರುವಂತೆ ಮಾಡಿದವು.  ಊಟ ಮುಗಿಸಿ ವಿಶ್ರಾಂತಿಗಾಗ ಕುಳಿತಾಗ  ಕಡಿಮೆ ಓದಿದವರು ಹಸು ಕಾಯ್ತಾರೆ  ಹೆಚ್ಚಿಗೆ ಓದಿದವರು ನಾಯಿ ಕಾಯುತ್ತಾರೆ ಅಲ್ಲವೇ? ಅಂತ ಯಕ್ಷ  ಪ್ರಶ್ನಿಸಿದ. ಮಗನ ಪ್ರಶ್ನೆಯಿಂದ  ವಿಶ್ವನಾಥ  ಕ್ಛಣ ಕಾಲ ಗಲಿಬಿಲಿಗೊಂಡ. ಇದೆಲ್ಲ ನಿನಗ್ಯಾಕೆ ಬೇಕು ಎಲ್ಲದರ  ಬಗ್ಗೆ ಬರೀ ಪ್ರಶ್ನೆ ಕೇಳುವದೇ ಆಯಿತು ಅಂತ ವಿಶ್ವನಾಥ್ ಸಿಡಿಮಿಡಿಗೊಂಡ. ಯಕ್ಷ ಸುಮ್ಮನಾಗದೆ ‘ರಾಜಶೇಖರ್ ಅಂಕಲ್ ಹೆಚ್ಚಿಗೆ ಓದಿದ್ದಾರೆ ನಾಯಿ ಕಾಯ್ತಾರೆ.  ಶಿವಶಂಕರ ಅಂಕಲ್ ಕಡಿಮೆ ಓದಿದ್ದಾರೆ  ಹಸು ಕಾಯ್ತಾರೆ’ ಅದಕ್ಕೆ ಕೇಳಿದೆ ಎಂದನು. ವಿಶಾಲಮ್ಮ ಮುಗ್ಳನಗೆ ಬೀರಿ ಗಂಡನ ಮುಖ ನೋಡತೊಡಗಿದಳು. ವಿಶ್ವನಾಥ್  ಶೂನ್ಯ ದಿಟ್ಟಿಸತೊಡಗಿದ. ಆದರೆ   ಉತ್ತರ ಸಿಗಲಿಲ್ಲ.  ಯಕ್ಷನ  ಪ್ರಶ್ನೆಯಕ್ಷ ಪ್ರಶ್ನೆಯಾಗಿ ನಿರಂತರ  ಕಾಡಿತು !!

ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ

6 Comments on “ಯಕ್ಷ ಪ್ರಶ್ನೆ !

  1. ಕುತೂಹಲಕಾರಿಯಾಗಿವೆ… ಯಕ್ಷನ ಯಕ್ಷಪ್ರಶ್ನೆಗಳು!!

  2. ಚೆನ್ನಾಗಿದೆ ಯಕ್ಷಪ್ರಶ್ನೆ. ಯಕ್ಷಪ್ರಶ್ನೆ ಓದುಗರಿಗೆ ನೀಡಿದವರಿಗೂ ಬಹಳ ಧನ್ಯವಾದಗಳು.

  3. ಯಕ್ಷನ ಪ್ರಶ್ನೆ
    ಹೆಚ್ಚಿಗೆ ಓದಿದವರು ನಾಯಿ ಕಾಯುತಾರೆ/
    ಮೆರೆಯುತ ಮುಗಿಲಿನೆತ್ತರ ವಸತಿಗಳಲ್ಲಿ/
    ಕಡಿಮೆ ಓದಿದವರು ಹಸುವ ಕಾಯುತಾರೆ/
    ದುಡಿಯುತ ಮಣ್ಣಿನತ್ತಿರ ಹೊಲಗದ್ದೆಗಳಲ್ಲಿ/

    ಕೇಳಬೇಡಿ ತರ್ಕಬದ್ಧ ಜೀವನದ ಪ್ರಶ್ನೆಗಳ/
    ವಾಸ್ತವಿಕಕು ವೇದಾಂತಕು ಇರುವುದು ಅಂತರ
    ಯೋಚಿಸಬೇಡಿ ಜನ್ಮಜಾತ ಅನುಬಂಧಗಳ/
    ಧರ್ಮಕು ಕರ್ಮಕು ಇರುವುದು ಅಜಗಜಾಂತರ/

    ನಗರದ ನಾಯಿಗಳಿಗೆ ಅನುದಿನ ಅತ್ಯಾಡಂಬರ ಜೀವನ/
    ಬದುಕುವುದು ಠೀವಿಯಲ್ಲಿ ಭುಜಿಸುತ ಮೃಷ್ಟಾನ್ನ ಭೋಜನವನು/
    ಹಳ್ಳಿಯ ಹಸುಗಳಿಗೆ ಬೂತಾಯಿಯ ಮಮತೆಯ ಆರಾಧನ/
    ಜೀವಿಸುವುದು ದೀನತೆಯಲ್ಲಿ ಮೇಯುತ ಹುಲ್ಲಿನ ಅರೊಗಣೆಯನು/

    ಸಿರಿವಂತಿಕೆಯಲ್ಲಿ ಶ್ವಾನಗಳು ಸಿರಿಸಂಪನ್ನತೆಯ ಪ್ರಧರ್ಶನವು/
    ಶ್ರೀಮಂತರ ವೈಭವೋಪೇತದಲ್ಲಿ ನಾಯಿಗಳು ಗೃಹಾಲಂಕಾರವು/
    ಧಾರ್ಮಿಕತೆಯಲ್ಲಿ ಗೋವುಗಳು ಸುಸಂಸ್ಕೃತಿಯ ಸಂಪ್ರದಾಯವು/
    ರೈತರ ಜೀವನೋಪಾಯದಲ್ಲಿ ಹಸುಗಳು ದೈವತ್ವದ ಅಭಿವ್ಯಕ್ತವು /

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *