ಪುಸ್ತಕ ಪರಿಚಯ: ಸಾರ್ಥಕ ಮನಗಳು
ಪುಸ್ತಕ :- ಸಾರ್ಥಕ ಮನಗಳು(ಕಥಾ ಸಂಕಲನ)
ಲೇಖಕರು :- ಸುಪ್ರೀತಾ ವೆಂಕಟ್
ಪ್ರಕಾಶಕರು :- ಸ್ವ- ಪ್ರಕಾಶನ
ಬೆಲೆ – 100/-
ಹವ್ಯಾಸವೆನ್ನುವುದು ಬದುಕಿನ ಪಯಣದಲ್ಲಿ ಎಲ್ಲಾ ಜಂಜಾಟಗಳಿಂದ ತುಸು ವಿರಾಮ ಇತ್ತು ಮತ್ತೆ ಮುಂದೆ ಸಾಗಲು ಪ್ರೇರಣೆ ನೀಡುವಂಥದ್ದು. ನಿರಂತರವಾಗಿ ಉರುಳುವ ಕಾಲದಲ್ಲಿ, ನಿಭಾಯಿಸಬೇಕಾದ ಜವಾಬ್ದಾರಿಗಳ ನಡುವೆ ಬಹಳಷ್ಟು ಬಾರಿ ನಮ್ಮ ಹವ್ಯಾಸಗಳು ಮೂಲೆಗುಂಪಾಗುವುದೇ ಹೆಚ್ಚು. ಆದರೆ ಕೆಲವೊಮ್ಮೆ ಕೆಲವರ ಬದುಕಲ್ಲಿ ಮರೆತ ಹವ್ಯಾಸಗಳನ್ನು ಮತ್ತೆ ಅಳವಡಿಸಿಕೊಳ್ಳುವ ಅವಕಾಶ ದೊರೆಯುವುದುಂಟು. ಹೀಗೆ ದೊರೆಯುವ ಅವಕಾಶಗಳಿಂದ ನಾವು ನಮಗಾಗಿಯು ಕಾಲನ ಗಡಿಯಾರದಲ್ಲಿ ಕೆಲವು ಗಂಟೆಗಳನ್ನು ಮೀಸಲಿಡುವ ಸಂದರ್ಭಗಳು ಕೆಲವರಿಗಷ್ಟೇ ಸಿಗುತ್ತದೆ. ಬಿಡುವಿಲ್ಲದ ಸಂಸಾರದ ಜಂಜಾಟದಲ್ಲಿ ನಮ್ಮನ್ನು ಸಂತೋಷವಾಗಿ ಇಡಬಲ್ಲ ಒಂದು ವಿಚಾರವೆಂದರೆ ಅದು ನಮ್ಮ ಹವ್ಯಾಸಗಳು. ಇಲ್ಲಿ ನಮಗೆ ಅರಿವಿಲ್ಲದಂತೆಯೇ ನಾವು ಸಾಧನೆಯನ್ನು ಮಾಡುತ್ತಾ ಸಾಗುತ್ತೇವೆ. ಇಂತಹ ಸಾಧನೆ ಯಾವತ್ತೂ ಅಹಂಕಾರವನ್ನು ತರಲಾರದು. ಬದಲಾಗಿ ಇನ್ನಷ್ಟು ಮುನ್ನುಗ್ಗುವ ಛಲವನ್ನು ತುಂಬುತ್ತದೆ. ತನ್ನ ನೆಚ್ಚಿನ ಹವ್ಯಾಸವನ್ನು ಬದುಕಲ್ಲಿ ಮತ್ತೆ ಅಳವಡಿಸಿಕೊಳ್ಳುವ ಮೂಲಕ ಸಾಧನೆಯ ಪಥದಲ್ಲಿ ಹೆಜ್ಜೆ ಇರಿಸ ಹೊರಟ ಹೆಣ್ಣೊಬ್ಬಳ ಕಥೆ- “ಅವಳ ಛಲ”. ಹೀಗೆ ಮತ್ತೆ ನಾವು ಇಷ್ಟಪಟ್ಟು ಬೆಳೆಸಿಕೊಳ್ಳುವ ಹವ್ಯಾಸಗಳು ಬದುಕಿನಲ್ಲೊಂದು ಭರವಸೆಯನ್ನು ಮೂಡಿಸುತ್ತವೆ, ಧೈರ್ಯ ತುಂಬುತ್ತವೆ, ಮಾನಸಿಕವಾಗಿ ನಮ್ಮನ್ನು ಗಟ್ಟಿಗೊಳಿಸುತ್ತವೆ.
ಒಂದು ಕೂಡು ಕುಟುಂಬವಿದ್ದಲ್ಲಿ ಅಲ್ಲಿ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಅದರಲ್ಲೂ ಅತ್ತೆ ಸೊಸೆ ಸಂಬಂಧದ ನಡುವಿನ ಹೊಂದಾಣಿಕೆ ಬಹಳ ಕಷ್ಟ. ಕಾರಣ ಪ್ರತಿಯೊಂದು ವಿಷಯದಲ್ಲೂ ಬರುವ ಭಿನ್ನಾಭಿಪ್ರಾಯ, ವಿಚಾರಬೇಧ. ಅತ್ತೆ ಯಾವತ್ತೂ ಅಮ್ಮ ಆಗಲಾರಳು ಅನ್ನುವುದೇ ಸತ್ಯ. ಏನೋ ಮಾತಿಗೆ ಅತ್ತೆ ಅತ್ತೆಯಲ್ಲ ಅಮ್ಮ ಅನ್ನುವವರು ಸಿಗುತ್ತಾರೆ ಅಷ್ಟೆ. ಹೀಗಂದವರ ಬದುಕಲ್ಲೇ ಆ ಸತ್ಯ ಇರುವುದಿಲ್ಲ ಅನ್ನುವುದು ವಾಸ್ತವ. ಹಾಗೊಂದು ವೇಳೆ ಅಂತಹ ಬಾಂಧವ್ಯ ಇದ್ದರೂ ಅದು ಬೆರಳೆಣಿಕೆಯ ಮಂದಿಯ ಬದುಕಲ್ಲಷ್ಟೇ ಇರಬಹುದು. ಅಮ್ಮ ಮಗಳ ಸಂಬಂಧದ ನಡುವೆ ಯಾರು ಎಷ್ಟೇ ಬಿರುಕು ಮೂಡಿಸಲು ಪ್ರಯತ್ನಿಸಿದರು ಅದು ಒಡೆಯಲಾರದು. ಯಾಕೆಂದರೆ ಅದು ಕರುಳಬಳ್ಳಿಯ ಸಂಬಂಧ, ಒಡಲ ಸಂಬಂಧ, ಅಂತರಂಗದಿಂದಲೇ ಅದು ಬೆಸೆಯಲ್ಪಟ್ಟಿದೆ. ಹಾಗೊಂದು ವೇಳೆ ಭಿನ್ನಾಭಿಪ್ರಾಯ ಮೂಡಿದರೂ ಆ ಮಗಳು ಅಮ್ಮನಾದಾಗ ಬೇರೊಂದು ಮನೆಯ ಸೊಸೆಯಾದಾಗ ಅವಳ ಅಮ್ಮ ಅವಳಿಗೆ ಅರ್ಥವಾಗುತ್ತಾಳೆ. ಅಮ್ಮ ಮಗಳ ಬಾಂಧವ್ಯದ ಗಟ್ಟಿತನ ಎಷ್ಟು ಅನ್ನುವುದನ್ನು ಹೇಳುವ ಹೃದಯಸ್ಪರ್ಶಿ ಸುಂದರ ಕಥೆ – ‘ಶ್ರುತಿ ಸೇರುವಳೇ ಪಲ್ಲವಿ?‘.
ಚಿನ್ನ ಹಣ ಕದ್ದು ಹೋಗಬಹುದು. ಆಸ್ತಿ ಅಂತಸ್ತು ಇನ್ನೊಬ್ಬರ ಪಾಲಾಗಬಹುದು. ಭೂಮಿಯನ್ನು ಬೇರಾರೊ ಸ್ವಾಧೀನ ಪಡಿಸಿಕೊಳ್ಳಬಹುದು. ಆದರೆ ಯಾರೂ ಕದಿಯಲಾರದ, ಆಕ್ರಮಿಸಿ ಕೊಳ್ಳಲಾಗದ ನಿಜವಾದ ಸಂಪತ್ತು ಎಂದರೆ ಅದು ಜ್ಞಾನ. ಅದು ವಿದ್ಯೆಯ ರೂಪದಲ್ಲೂ ಇರುತ್ತದೆ, ಅನುಭವದ ರೂಪದಲ್ಲೂ ಇರುತ್ತದೆ. ಎಂತಹದೇ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮನ್ನು ಕೈ ಹಿಡಿಯುವಂಥದ್ದು ನಮ್ಮ ಅನುಭವ ಜ್ಞಾನ ಮಾತ್ರ. ವಿದ್ಯೆಯನ್ನು ಎಲ್ಲರೂ ಸಂಪಾದಿಸಲು ಆಗದೇ ಇರಬಹುದು ಆದರೆ ಜ್ಞಾನ ಹಾಗಲ್ಲ ಇದನ್ನು ಯಾರು ಬೇಕಾದರೂ ತಮ್ಮದಾಗಿಸಿಕೊಳ್ಳಬಹುದು. ವಿದ್ಯೆ ಹಾಗೂ ಜ್ಞಾನ ಎರಡನ್ನೂ ಪಡೆಯುವ ಒಂದೇ ಮಾರ್ಗ ಕಲಿಕೆ ಆಗಿದೆ. ಈ ಎಲ್ಲಾ ಆಲೋಚನೆಗಳನ್ನು ಹುಟ್ಟುಹಾಕುವ ಕಥೆ – ‘ಜ್ಞಾನವೆಂಬ ಸಂಪತ್ತು’.
ಈ ಕಥೆ ಇಷ್ಟವಾಗಲು ಇನ್ನೊಂದು ಕಾರಣ ಇದರಲ್ಲಿ ವಿವರಿಸಲ್ಪಟ್ಟ ಕೃಷಿಯ ಮಹತ್ವ. ಎಷ್ಟೇ ಹಣ ಸಂಪಾದಿಸಬಹುದು ಆದರೆ ಹೊಟ್ಟೆ ತುಂಬುವ ಹಿಡಿ ಅನ್ನ ದೊರೆಯುವದು ಕಷ್ಟಪಟ್ಟು ದುಡಿಯುವ ವ್ಯವಸಾಯದಿಂದ, ಕೃಷಿಯಿಂದ ಮಾತ್ರ. ರೈತ, ನಮ್ಮ ಅನ್ನದಾತ ವ್ಯವಸಾಯವನ್ನು ಬಿಟ್ಟ ದಿನ,ಬೆಳೆ ಬೆಳೆಯುವುದನ್ನು ನಿಲ್ಲಿಸಿದ ದಿನ ಎಲ್ಲರೂ ಉಪವಾಸದಿಂದ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಇದು ಕೃಷಿಗಿರುವ ಮಹತ್ತ್ವ. ಹಲವಾರು ಉದ್ಯೋಗಗಳು ಕೃಷಿಯ ಮೇಲೆಯೇ ಅವಲಂಬಿತ. ಕಥೆಯಲ್ಲಿ ತಾರಸಿ ಕೃಷಿಯ ಕುರಿತಾಗಿ ನೀಡಿದ ವಿವರಣೆ ಒಂದು ಉಪಯುಕ್ತ ಮಾಹಿತಿಯೇ ಸರಿ.
ಶಾಲೆ ಕಾಲೇಜುಗಳಲ್ಲಿ ಪಡೆಯುವ ಅಂಕಗಳೇ ಬದುಕಿನ ಅಂತಿಮ ನಿಲ್ದಾಣಗಳಲ್ಲ. ಇವುಗಳ ಹೊರತಾಗಿಯೂ ಜಗತ್ತಿನಲ್ಲಿ ಹಲವಾರು ವಿಷಯಗಳಿವೆ. ಜೀವಿಸುವ ದಾರಿಗಳಿವೆ. ವಿದ್ಯೆ, ಓದು, ಅಂಕಗಳೆಲ್ಲವೂ ನಮ್ಮ ಕಣ್ಣು ತೆರೆಸಲು, ಬದುಕಿನ ದಾರಿ ತೋರಿಸಲು ಇರುವ ಮಾರ್ಗಗಳಷ್ಟೆ. ಹಾಗೆಂದು ನಾವು ಪಡೆಯುವ ಅಂಕಗಳ ಮೇಲೆಯೇ ನಮ್ಮ ಜೀವನ ಅವಲಂಬಿತವಲ್ಲ. ಅಂಕಗಳ ಜೊತೆ ನಾವು ಈ ಸಮಾಜದಲ್ಲಿ ಜೀವಿಸಲು ಜನರ ಒಡನಾಟ, ಸಮಾಜಮುಖಿಗಳಾಗಿ ಇರುವುದು ಕೂಡ ಬಹಳ ಮುಖ್ಯ. ಇವುಗಳ ಹೊರತಾಗಿ ಜೀವಿಸುವುದೆಂದರೆ ಅದು ಯಾಂತ್ರಿಕತೆಯೆ ಸರಿ.
ಸುಪ್ರೀತಾ ವೆಂಕಟ್ ಅವರು ಉದಯೋನ್ಮುಖ ಬರಹಗಾರ್ತಿ. ನೋಡು ನೋಡುತ್ತಿದ್ದಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಇವರು ಬರವಣಿಗೆಯ ಮೂಲಕ ಬೆಳೆಯುತ್ತ ಸಾಗುತ್ತಿದ್ದಾರೆ. ಈ ಬೆಳವಣಿಗೆಯು ಸಾಹಿತ್ಯಾಸಕ್ತರಿಗೆ ಖುಷಿ ತರುವಂತಹದ್ದು. ಬೇರೆ ಬೇರೆ ಪತ್ರಿಕೆಗಳಲ್ಲೂ ಇವರ ಲೇಖನಗಳು ಪ್ರಕಟವಾಗುತ್ತಿವೆ. ಅತಿರಂಜಿತ ಅನ್ನಿಸದ ಇವರ ಕಥೆಗಳು ಮನಸಿಗೆ ಮುದ ನೀಡುತ್ತವೆ. ಯಾಕೆಂದರೆ ನಮ್ಮ ಸುತ್ತಮುತ್ತಲೂ ನಡೆಯುವ ಘಟನೆಗಳೇ ಇಲ್ಲಿ ಹಾಸುಹೊಕ್ಕಂತೆ ಇವೆ. ಸಾಮಾನ್ಯ ಬದುಕು ಅನ್ನೋದು ಏನಿದೆಯೋ ಅದು ಇಲ್ಲಿ ಕಥಾ ರೂಪ ಪಡೆದಿವೆ.
ಈ ಉದಯೋನ್ಮುಖ ಪ್ರತಿಭೆಯಿಂದ ಇನ್ನೂ ಹೊಸ ಹೊಸ ಕೃತಿಗಳು ಪ್ರಕಟಗೊಂಡು ಓದುಗರನ್ನು ತಲುಪಲಿ ಅನ್ನುವ ನಲ್ವರಕೆಗಳು.
-ನಯನ ಬಜಕೂಡ್ಲು
ಪುಸ್ತಕ ಪರಿಚಯ ಮಾಡುವುದು ಒಂದು ಕಲೆ…ಅದು ನಿಮಗೆ ಒಲಿದಿದೆ…ಕಾಪಾಡಿಕೊಳ್ಳಿ…ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಮೇಡಂ
ಸೊಗಸಾದ, ವಿಮರ್ಶಾತ್ಮಕ ಪುಸ್ತಕ ಪರಿಚಯ.