ಪಾರ್ಲರಿನಲ್ಲೊಂದು ದಿನ…

Share Button

ಮುಂದಿನ ಬುಧವಾರ ಗುರುವಾರ ಎರಡು ದಿನ ಮದುವೆಯೊಂದಕ್ಕೆ ಹೋಗುವುದಿತ್ತು. ವಾರದ ಮಧ್ಯದ ದಿನಗಳಲ್ಲಿ ಯಾವುದಾದರು ಕಾರ್ಯಕ್ಕೆ ಹಾಜರಾಗಲು ಹಿಂದಿನ ಭಾನುವಾರವೇ ಸೀರೆ,ಒಡವೆ ಎಲ್ಲಾ ಸಿದ್ಧ ಮಾಡಿಕೊಂಡು ಇದ್ದರೆ ಸರಿ, ಇಲ್ಲದೇ ಹೋದರೆ ಕೆಲಸದ ನಡುವೆ ತಯಾರಾಗಲು ಪುರುಸೊತ್ತೇ ಸಿಗೊಲ್ಲ. ನಾನೇನೂ ಮೇಕಪ್ ಗೀಕಪ್ ಅಂತೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ ಒಂದಿಷ್ಟು ಹುಬ್ಬು ತೀಡಿಸಿಕೊಂಡು,ತಲೆಗೂದಲು ಟ್ರಿಂ ಮಾಡಿಸಿಕೊಂಡು,ನೀಟಾಗಿ ಸೀರೆಯುಟ್ಟು,ಚಿಕ್ಕ ಪುಟ್ಟ ಒಡವೆ ಹಾಕಿಕೊಂಡು ಸುಮಾರಾಗಿಯಾದರೂ ಕಾಣುವಂತೆ ಹೋಗಬೇಕು. ಇಲ್ಲದೇ ಹೋದರೆ ಈಚೀಚಿನ ಅಬ್ಬರದ,ವೈಭವದ, ಫ್ಯಾಷನ್ ಶೋಗಳ ಪಡಿಯಚ್ಚಿನಂತೆ ಕಾಣುವ ಮದುವೆ ಕಾರ್ಯಗಳಲ್ಲಿ ಗುಂಪಿಗೆ ಸೇರದ ಪದವಾಗಿ ಬಿಡುತ್ತೇವೆ ಅಷ್ಟೇ. ಹೇಗೋ ” ಕಾಲಕ್ಕೆ ತಕ್ಕ ಕೋಲ” ಎನ್ನುವಂತೆ ಸಿದ್ಧಗೊಂಡು ಹೋಗಬೇಕು.

ಹಾಗೆಯೇ ಆ ಭಾನುವಾರ ಸಂಜೆ ನಮ್ಮ ಮನೆ ಸಮೀಪದ ಸಹನಾಳ ಪಾರ್ಲರ್ ಗೆ ಹೊರಟೆ. ಆ ಪಾರ್ಲರ್ ನಮ್ಮ ಬಡಾವಣೆಯ ಅಂಚಿನಲ್ಲಿದೆ. ಬಡಾವಣೆಯ ಮಧ್ಯಮವರ್ಗದ ಮನೆಗಳು ಹಾಗೂ ಅದಕ್ಕೆ ಸೇರಿರುವಂತಹ ನಗರದಂಚಿನ ಒಂದು ಹಳ್ಳಿಯನ್ನು ಬೇರ್ಪಡಿಸುವಂತಿರುವ ಒಂದು ರಸ್ತೆಯ ಬದಿಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿದೆ. ಹಾಗಾಗಿ ಅವಳ ಬಳಿ ಬರುವವರಲ್ಲಿ ನಗರ,ಹಳ್ಳಿ ಎರಡೂ ಕಡೆಯ ವಿವಿಧ ವಯೋಮಾನದ, ಬೇರೆ ಬೇರೆ ಅಭಿರುಚಿ ,ರೂಪ ಲಾವಣ್ಯಗಳ ಹೆಂಗಸರು, ಹೆಣ್ಣು ಮಕ್ಕಳು ಎಲ್ಲಾ ಬರುತ್ತಾರೆ. ಅವಳು ಮಾತ್ರ ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಅವಳರಿವಿಗೇ ಬಾರದ ಸಮಚಿತ್ತೆ, ಸ್ಥಿತಪ್ರಜ್ಞೆ.

ಆ ಪಾರ್ಲರ್ ಒಂದೇ ಒಂದು ದೊಡ್ಡ ಕೋಣೆಯಲ್ಲಿದೆ. ಅದರಲ್ಲೇ ಅವಳ ಉದ್ಯೋಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಉಪಕರಣಗಳು, ಕುರ್ಚಿಗಳು,ಕನ್ನಡಿಗಳು, ಒಂದು ಚಿಕ್ಕಅಗಲದ ದೊಡ್ಡ ಎತ್ತರದ ಮಂಚ, ಮೂಲೆಯಲ್ಲಿ ಒಂದು ಸಿಂಕ್, ಎಲ್ಲವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಕೊಂಡಿದ್ದಾಳೆ. ಅವಳ ಜೊತೆಗೆ ಒಬ್ಬಳು ಸಹಾಯಕಿ ಯಾವಾಗಲೂ ಇರುತ್ತಾಳೆ. ಆ ಸಹಾಯಕರು ಮಾತ್ರ ಕೆಲಸ ಕಲಿತ ಬಳಿಕ ಬೇರೆಡೆಗೆ ಹೋಗುವುದರಿಂದ, ಪ್ರತೀ ಬಾರಿಯೂ ಹೊಸ ಹೊಸ ಸಹಾಯಕರು ನೋಡಲು ಸಿಗುತ್ತಾರೆ. ಅವರಲ್ಲದೆ ಪ್ರತೀ ಸಂಜೆ ಶಾಲೆ ಮುಗಿದ ಬಳಿಕ ಅಮ್ಮನ ಪಾರ್ಲರ್ ಗೆ ಬಂದು, ಒಂದು ಬದಿ ನೆಲದಲ್ಲೇ ಕುಳಿತು, ತನ್ನ ಪಾಡಿಗೆ ತಾನು ಹೋಮ್ ವರ್ಕ್ ಮಾಡುತ್ತಾ ಅವಳ ಮಗಳು ಸಿಂಚು ಕುಳಿತಿರುವ ದೃಶ್ಯ ಅಲ್ಲಿಯ ಇನ್ನೊಂದು ಸಾಮಾನ್ಯ ಸಂಗತಿ.

ಆ ಪಾರ್ಲರ್ ಗಿಂತ ದೊಡ್ಡ,ಇನ್ನೂ ಆಧುನಿಕ ಪಾರ್ಲರ್ ಗಳು,ಸ್ಪಾಗಳು ನಮ್ಮ ಬಡಾವಣೆಯಲ್ಲೇನೋ ಇವೆ. ಆದರೆ ನಾನಂತೂ ಅವಳ ಹತ್ತಿರ ಮಾತನಾಡುವ ಚಪಲಕ್ಕಾಗಿಯೇ ಅರ್ಧ ಅಲ್ಲಿಗೆ ಹೋಗೋದು. ಮಾತನಾಡುವಾಗಲೆಲ್ಲ ಕಣ್ಣರಳಿಸಿಕೊಂಡು, ಮುಖದ ತುಂಬಾ ನಗು ತುಂಬಿಕೊಂಡು , ಏನೋ ಗುಟ್ಟು ಹೇಳುವವಳಂತೆ ಮೆಲು ದನಿಯಲ್ಲಿ ಮಾತನಾಡುವ ಅವಳು ಹರಟೆಗೆ ಒಳ್ಳೆಯ ಸಂಗಾತಿ. ಒಮ್ಮೊಮ್ಮೆ ನನ್ನ ಜೊತೆ ಬರುವ ನನ್ನ ಮಗಳು ಹಾಗೂ ಅವಳ ಮಗಳು, ಇಬ್ಬರೂ ನಮ್ಮ ಗಾಸಿಪ್ ಗಳಿಗೆ ಜೊತೆಯಾಗುತ್ತಾರೆ. ಬಡಾವಣೆಯ ಎಲ್ಲಾ ಸಂಗತಿಗಳನ್ನು ಹರಟುತ್ತಾ,ನಕ್ಕು ಒಂದಷ್ಟು ಹೊತ್ತು ಹಗುರಾಗಿ ಬರಲು ಒಂದು ನೆಪವಾಗಿಬಿಟ್ಟಿದೆ ಅವಳ ಪಾರ್ಲರ್.

ಹಾಗೆಯೇ ಅವತ್ತು ಹೊರಟಾಗ ನನ್ನ ಮಗಳು ಕೂಡ ಹೊರಟು ಜೊತೆಯಲ್ಲಿ ಬಂದಳು. ಪಾರ್ಲರ್ ತಲುಪಿ ನೋಡಿದರೆ ಸ್ವಲ್ಪ ಜನ ಸಂದಣಿ ಇತ್ತು.ನಮ್ಮನ್ನು ನೋಡಿದ ಸಹನಾ ಮುಗುಳ್ನಕ್ಕು,”ಒಂದತ್ತು ನಿಮಿಷ ಕಾಯಬೇಕಲ್ಲ,” ಎಂದಾಗ ,”ಆಗಲಿ” ಎಂದು ಅಲ್ಲೇ ಗೋಡೆ ಬದಿಯಲ್ಲಿ ಹಾಕಿದ್ದ ಬೆಂಚೊಂದರ ಮೇಲೆ ಕುಳಿತೆವು.

ಅಲ್ಲಿ ಒಂದು ದೊಡ್ಡ ಗೋಡೆಯ ಮೇಲ್ಭಾಗ ಪೂರ್ತಿ ಆವರಿಸಿದ್ದ ಕನ್ನಡಿ ಎದುರಿನ ಎತ್ತರದ ಎರಡು ಕುರ್ಚಿಗಳು ಭರ್ತಿಯಾಗಿದ್ದವು. ಒಂದರಲ್ಲಿ ಒಬ್ಬಾಕೆ ಮಲಗಿದಂತೆ ಒರಗಿ ಕುಳಿತು, ತನ್ನ ತಲೆಯನ್ನು ಸಹನಾಳ ಕೈಗೆ ಒಪ್ಪಿಸಿ ಹುಬ್ಬಿನ ಆಕಾರ ತಿದ್ದಿಸಿಕೊಳ್ಳುತ್ತಿದ್ದಳು. ಸಹನಾ ಥ್ರೆಡ್ ನ ಒಂದು ತುದಿ ಹಲ್ಲಿನಲ್ಲಿ ಕಚ್ಚಿ ಹಿಡಿದು, ಇನ್ನೊಂದು ಬದಿಯನ್ನು ಎರಡೂ ಕೈಗಳ ಹೆಬ್ಬೆರಳು ತೋರುಬೆರಳುಗಳಲ್ಲಿ ಸುತ್ತಿಹಿಡಿದು ಚಕ ಚಕನೆ ಹುಬ್ಬುಗಳ ಕೂದಲು ಕಿತ್ತು ತೆಗೆಯುತ್ತಿದ್ದಳು. ಇನ್ನೊಂದು ಕುರ್ಚಿಯಲ್ಲಿ ಒಬ್ಬಾಕೆ ತನ್ನ ತೋಳು, ಕಾಲುಗಳನ್ನು ಸಹಾಯಕಿ ಸುಮಾಳ ಕೈಗೊಪ್ಪಿಸಿ, ಕೈಕಾಲುಗಳ ರೋಮ ತೆಗೆಸಿಕೊಳ್ಳಲು ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಿದ್ದಳು. ಈ ಥ್ರೆಡ್ಡಿಂಗ್, ವ್ಯಾಕ್ಸಿಂಗ್ ಗಳನ್ನ ಜೀವನದಲ್ಲಿ ಒಮ್ಮೆ ಮಾಡಿಸಿಕೊಂಡು ನೋಡಿ, ಖಂಡಿತವಾಗಿಯೂ ಸಾವಿನ ನಂತರದ ನರಕದ, ಅಲ್ಲಿಯ ಶಿಕ್ಷೆಯ ಭಯ ಹೊರಟು ಹೋಗಿ ಬಿಡುತ್ತದೆ. ಎಷ್ಟೇ ನೋವಾದರೂ ಬಿಡದೆ ಈ ಎಲ್ಲಾ ಸೌಂದರ್ಯ ಚಿಕಿತ್ಸೆಗಳಿಗೆ ತಮ್ಮನ್ನು ತಾವು ಕೊಟ್ಟು ಕೊಳ್ಳುವ ನಮ್ಮ ಹೆಣ್ಣು ಮಕ್ಕಳು ಆಧುನಿಕ ವೀರ ನಾರಿಯರೇ ಸರಿ.

ಅಂತೆಯೇ ಆ ಇಬ್ಬರು ವೀರ ಮಹಿಳೆಯರ ನಂತರದ ನಮ್ಮ ಸರದಿಗಾಗಿ ಕಾಯುತ್ತಾ ನಾವಿಬ್ಬರೂ ಬೆಂಚಿನ ಮೇಲೆ ಕುಳಿತೆವು. ನನ್ನ ಮಗಳ ಪಕ್ಕ ಒಂದು ನಾಲ್ಕೈದು ವರ್ಷದ ಚಿಲ್ಟು ಕುಳಿತುಕೊಂಡು ಮೊಬೈಲ್ ಗೇಮ್ ನಲ್ಲಿ ಮುಳುಗಿ ಹೋಗಿತ್ತು. ಅಲ್ಲಿದ್ದ ಇಬ್ಬರಲ್ಲಿ ಒಬ್ಬಳ ಮಗುವಿರಬೇಕು ಅಂದುಕೊಂಡೆ.ಅಷ್ಟರಲ್ಲಿ ಚಿಲ್ಟುವಿನ ಮೊಬೈಲ್ ರಿಂಗಣಿಸಿತು. ಕರೆ ತೆಗೆದುಕೊಂಡು ”ಹಲೋ” ಎಂದ ಚಿಲ್ಟುವಿಗೆ ಆ ಬದಿಯಲ್ಲಿ ಒಬ್ಬರು, “ಚಿಕ್ಕಮ್ಮನಿಗೆ ಕೊಡೋ ಚಿಂಟು,” ಎಂದಿದ್ದು ನಮಗೂ ಕೇಳಿಸಿತು. ಈ ಚಿಂಟು ಏನಂದ ಗೊತ್ತೇ! “ಚಿಕ್ಕಪ್ಪ,ಚಿಕ್ಕಮ್ಮ ಕಣ್ಣಾಪರೇಶನ್ ಮಾಡುಸ್ಕೊಳ್ತಾ ಇದೆ ,ಆಮೆಲ್ ಫೋನ್ ಮಾಡಿ,” ಎಂದು ಬಿಟ್ಟ. ಹುಬ್ಬು ಕಿತ್ತಿಸಿಕೊಳ್ಳುತ್ತಿದ್ದ ಅವನ ಚಿಕ್ಕಮ್ಮ”ಲೋ,ಫೋನ್ ಕೊಡೋ ಇಲ್ಲಿ,” ಅಂತ ಕಿರುಚಿ ಕೊಂಡೇ ಬಿಟ್ಟಳು. ಆ ಬದಿಯಲ್ಲಿ ಇದ್ದವರೂ ಗಾಬರಿಯಿಂದ ಜೋರಾಗಿ ಕೇಳುತ್ತಾ ಇದ್ದದ್ದು ಕೇಳಿಸಿತು.”ಲೋ ಈಗ್ತಾನೆ ಮನೆಯಿಂದ ಚೆನ್ನಾಗ್ ಹೋದ್ಲು, ಎಲ್ಲಿದ್ದಿರೋ!, ಯಾವ ಆಸ್ಪತ್ರೆಯೋ,!” ಅನ್ನುವಷ್ಟರಲ್ಲಿ ಆ ಚಿಕ್ಕಮ್ಮ ಚಿಂಟುವಿನಿಂದ ಫೋನ್ ತೆಗೆದುಕೊಂಡು ಸರಿಯಾಗಿ ವಿವರಿಸಿ ಹೇಳಿದ ಮೇಲೆ ಆ ಬದಿಯ ಚಿಕ್ಕಪ್ಪನಿಗೆ ಸಮಾಧಾನವಾಯಿತು. ನಮಗೆಲ್ಲಾ ನಗುವೋ ನಗು. ಚಿಂಟು ಮಾತ್ರ ಕೂಲಾಗಿ ಚಿಕ್ಕಮ್ಮನ ಮಾತು ಮುಗಿದ ಬಳಿಕ ಫೋನ್ ತೊಗೊಂಡು ಮತ್ತೆ ಗೇಮ್ಸ್ ನಲ್ಲಿ ಮುಳುಗಿ ಹೋದ.

ಅಂತೂ ಚಿಕ್ಕಮ್ಮ ಹುಬ್ಬು ಕಿತ್ತಿಸಿಕೊಂಡು, ತಲೆಗೂದಲು ಕತ್ತರಿಸಿಕೊಂಡು, ಸಹನಾಳ ಹಣ ಪಾವತಿಸಿ, ಚಿಂಟುವನ್ನು ಎಳೆದುಕೊಂಡು ಹೊರಟಳು.”ಈಗ ನೀವು ಬನ್ನಿ,” ಎಂದು ನನ್ನನ್ನು ಕರೆದಾಗ ನಾನು ಇನ್ನೇನು ಕುರ್ಚಿಯೇರಬೇಕು ಆಗ ಪಾರ್ಲರ್ ಬಾಗಿಲು ತಳ್ಳಿಕೊಂಡು ಬಂದ ಒಬ್ಬಾಕೆ, “ಸಹನಾ ಒಂಚೂರು ಅರ್ಜೆಂಟ್ ಕಣ್ರೀ, ಒಂದು ಕಾರ್ಯಕ್ಕೆ ಹೊರ್ಟಿದಿನಿ, ಬೇಗ ಐ ಬ್ರೋ ಶೇಪ್ ಮಾಡಿಕೊಡಿ,” ಎಂದಾಗ ನಿರ್ವಾಹವಿಲ್ಲದೆ ನಾನು ಮರಳಿ ಬೆಂಚ್ ಮೇಲೆ ಕುಳಿತೆ.

ಸಹನಾ ಅವಳ ಹುಬ್ಬು ತೀಡಿ ಕಳುಹಿಸುವಾಗ ಯಾಕೋ ಕುತೂಹಲವಾಗಿ,”ಅಲ್ಲಾ ಕಾರ್ಯಕ್ಕೆ ಅಂತ ಹೊರಟಿದ್ದೀರಿ,ಇದೇನು ಸುಮಾರಾಗಿರೋ ಸೀರೆ ಉಟ್ಟಿದೀರಲ್ಲ,” ಎಂದು ಕೇಳಿದಳು. ಆ ಮಹಿಳೆ ತನ್ನ ಹುಬ್ಬುಗಳನ್ನು ಕನ್ನಡಿಯಲ್ಲಿ ಹತ್ತಿರದಿಂದ ನೋಡಿ ಕೊಳ್ಳುತ್ತಾ,”ನಮ್ಮನೆಯವರ ಕಡೆಯ ಒಂದು ಸಾವು ಕಣ್ರೀ, ದೊಡ್ಡವರ ಮನೆ ಸಾವು, ಹೆಂಗ್ ಹೆಂಗೋ ಹೋಗಕ್ಕಾಗಲ್ಲ,ಅದಕ್ಕೆ ಬಂದೆ,” ಎಂದು ಸಹನಾಳಿಗೆ ದುಡ್ಡು ಕೊಟ್ಟು ಹೊರಟು ಹೋದಳು. ನಾನೂ ನನ್ನ ಮಗಳು ಮುಖ ಮುಖ ನೋಡಿಕೊಂಡು, ಉಕ್ಕಿ ಬಂದ ನಗು ತಡೆದುಕೊಂಡು ಕುಳಿತವರು, ಆಕೆ ಹೋದ ಬಳಿಕ ,ಸಹನಾಳ ಜೊತೆಗೂಡಿ ಬಿದ್ದು ಬಿದ್ದು ನಕ್ಕೆವು. ಸಹನಾಳ ಮಗಳು ಸಿಂಚು,”ಆ ಆಂಟಿ ಮಲ್ಕೋಬೇಕಾದ್ರೂ ಮೇಕಪ್ನಲ್ಲೇ ಮಲ್ಕೋಬಹುದು ಅಲ್ವೇನಮ್ಮ, ಕನಸಲ್ಲಿ ಏನಾದ್ರೂ ಯಾವುದಾದ್ರು ಫಂಕ್ಷನ್ ಗೆ ಹೋಗ್ಬೇಕಾಗಿ ಬಂದ್ಬಿಟ್ರೆ,” ಎಂದು ನಮ್ಮ ನಗುವಿಗೆ ಇನ್ನೂ ತುಪ್ಪ ಸುರಿದಳು.

ಹೊಟ್ಟೆ ತುಂಬಾ ನಕ್ಕ ಬಳಿಕ, ಕುರ್ಚಿಯೇರಿ ಕುಳಿತು ಸಹನಾಳಿಗೆ ತಲೆಯೊಡ್ಡಿ, ಹುಬ್ಬು ಕಿತ್ತಿಸಿಕೊಳ್ಳುತ್ತಾ ಕುಳಿತೆ. ನನ್ನ ಮಗಳು ಸಿಂಚು ಪಕ್ಕ ಕುಳಿತುಕೊಂಡು ಅವಳೊಟ್ಟಿಗೆ ಹರಟಲು ಶುರು ಹಚ್ಚಿಕೊಂಡಳು. ಅಷ್ಟರಲ್ಲಿ ಪಕ್ಕದ ಕುರ್ಚಿಯವಳ ಕೈ ಕಾಲುಗಳ ವ್ಯಾಕ್ಸಿಂಗ್ ಎಲ್ಲಾ ಮುಗೀತು. ಅವಳು ಸಹನಾಳ ಕಡೆ ತಿರುಗಿ,”ಸ್ವಲ್ಪ ಮುಖನೂ ತೊಳ್ಕೊಟ್ಬಿಡಿ, ಎಷ್ಟ್ ತಗೊತಿರ” ಅಂದ್ಲು. ನನಗೆ ಆಶ್ಚರ್ಯವಾಯ್ತು. ಮುಖ ತೊಳ್ಕೊಳಕೆ ಕೂಡ ಪಾರ್ಲರ್ ಗೆ ಬರ್ಬೇಕಾ ಅಂದುಕೊಳ್ಳುವಷ್ಟರಲ್ಲಿ ಸಹನಾ ಕೂಲಾಗಿ, “ಮುನ್ನೂರೈವತ್ತು ರೂಪಾಯಿ ಆಗುತ್ತೆ, ಆದ್ರೆ ಇವತ್ತು ಬೇಡ,ಅದಕ್ಕೆ ಸ್ವಲ್ಪ ಟೈಮ್ ಬೇಕು. ಇನ್ನೊಂದ್ ದಿನ ಬೆಳಗ್ಗೆಯೇ ಬನ್ನಿ “ಎಂದಳು. ನಾನು ಇನ್ನೂ ಕಕ್ಕಾಬಿಕ್ಕಿ. “ಇದೇನಪ್ಪಾ ಮುಖ ತೊಳೆಯೋಕೂ ಮುನ್ನೂರು ರೂಪಾಯಿಯಾ!” ಅಂದುಕೊಂಡು, ಆಕೆ ಹೋಗುವವರೆಗೂ ಸುಮ್ಮನಿದ್ದು ನಂತರ ಕೇಳಿಯೇ ಬಿಟ್ಟೆ. ಸಹನಾ ನಕ್ಕು,”ಅಯ್ಯೋ ಅದು ಅವ್ರಿಗೆ ಫೇಶಿಯಲ್ ಎಂದು ಹೇಳಕ್ಕೆ ಬರ್ತಾ ಇಲ್ಲ.ಅದಕ್ಕೆ ಆ ರೀತಿ ಕೇಳಿದ್ರು,” ಎಂದಳು.

ನನಗೆ ಇನ್ನೂ ಆಶ್ಚರ್ಯ,” ಫೇಶಿಯಲ್ ಅನ್ನೋಕೂ ಯಾಕೆ ಗೊತ್ತಿಲ್ಲ ಸಹನಾ, ಆ ಲೇಡಿ ಅಷ್ಟು ಚೆನ್ನಾಗಿದ್ರು. ದೊಡ್ಡ ಮನೆಯವ್ರ ಹಾಗಿದ್ರು,” ಎಂದು ಸಹನಾಳಿಗೆ ಒಡ್ಡಿದ್ದ ತಲೆ ಅಲ್ಲಾಡಿಸದೆ ಕುಳಿತು, ಮಾತನಾಡಲು ಕಷ್ಟವಾಗುತ್ತಿದ್ದರೂ ಕೇಳಿದೆ. ಅವಳು,” ದೊಡ್ಡ ಮನೆಯವ್ರು ಅಂತ ಈಗ ಆಗಿರೋದು.ಮುಂಚೆಯೆಲ್ಲ ಸುಮಾರಾಗೇ ಇದ್ರು. ಅವರ ಕುಟುಂಬದವರು, ದಾಯಾದಿಗಳು ಎಲ್ಲರಿಗೂ ಸೇರಿದ್ದ ಹೊಲಗಳನ್ನೆಲ್ಲ ನಗರಪಾಲಿಕೆಯವರು ತೊಗೊಂಡು ಈ ಬಡಾವಣೆ ಸೈಟ್ ಗಳನ್ನ ಮಾಡಿರೋದು. ಹಂಗಾಗಿ ಮಸ್ತಾಗಿ ದುಡ್ಡು ಸಿಕ್ಕಿದೆ. ಏನ್ ಬೇಕೊ ಅದಕ್ಕೆಲ್ಲಾ ಖರ್ಚ್ ಮಾಡ್ತರೆ . ಅವರ ಮನೆ ಕಡೆ ಹೆಂಗಸ್ರೆಲ್ಲ ತಿಂಗಳಲ್ಲಿ ಒಂದ್ ಸರಿಯಾದ್ರೂ ಇಲ್ಲಿಗೆ ಬಂದು ಎಲ್ಲಾ ತರ ಸೇವೆ ಮಾಡುಸ್ಕೊಂಡ್ ಹೋಗ್ತರೆ .ಅವರಿಗೇನು ಬೇಕೋ ಅದಕ್ಕೆ ಅವರಿಗೆ ತೋಚಿದ ಹಾಗೆ ಕೇಳ್ತರೆ, ನಂಗೂ ರೂಢಿಯಾಗಿ ಬಿಟ್ಟಿದೆ”ಎಂದು ವಿವರಿಸಿದಳು.

ಅಂತೂ ನನ್ನ ಹುಬ್ಬು ಕಿತ್ತುವಿಕೆ ಮುಗಿದು, ತಲೆಗೂದಲು ಟ್ರಿಂ ಮಾಡಿಬಿಡು ಎನ್ನುವಷ್ಟರಲ್ಲಿ ಅವಳ ಫೋನ್ ರಿಂಗಣಿಸಿತು. ಕರೆ ತೆಗೆದುಕೊಂಡ ಸಹನಾ ಮಾತನಾಡಿದ ಬಳಿಕ,”ಮೇಡಂ ನಾನು ಸ್ವಲ್ಪ ಮನೆಗೆ ಹೋಗಿ ಬರ್ತಿನಿ, ನನ್ನ ಗಂಡ ಬೆಳಿಗ್ಗೆ ಮನೆ ಕೀ ತೊಗೊಂಡು ಹೋಗೋದು ಮರೆತು ಬಿಟ್ರಂತೆ.ಕೊಟ್ಟು ಬಂದ್ ಬಿಡ್ತಿನಿ. ನಿಮಗೆ ತಡ ಆಗೋದಾದ್ರೆ ನಮ್ಮ ಸುಮಂಗೆ ಹೇಳಲಾ,” ಎಂದಳು. “ಹೇಗೋ ಆಗಲೇ ಕತ್ತಲಾಗಿದೆ, ಬರೀ ಟ್ರಿಮ್ಮಿಂಗ್ ಅಲ್ವಾ ಯಾರು ಮಾಡಿದರೇನು” ಅನ್ನಿಸಿ ಹೂಂ ಗುಟ್ಟಿದೆ. ಅವಳು ತನ್ನ ಸಹಾಯಕಿ ಸುಮಾಳಿಗೆ “ಇವರನ್ನು ಅಟೆಂಡ್ ಮಾಡು,” ಎಂದು ಹೇಳಿಹೋದಳು.

ಸುಮಾ ಇನ್ನೂ ಇಪ್ಪತ್ತು ಇಪ್ಪತ್ತೆರಡು ವಯಸ್ಸಿನ,ಚುರುಕಾದ, ಬಲು ಮಾತಿನ ಹುಡುಗಿ. ನನ್ನ ಬಳಿ ಕತ್ತರಿ ತೊಗೊಂಡು ಬಂದವಳು, ಬಟ್ಟೆ ಮೇಲೆ ಕೂದಲು ಬೀಳದ ಹಾಗೆ ಮೇಲೊಂದು ಹೊದಿಕೆ ಹೊದಿಸಿ,” ಆಂಟಿ,ನಿಮ್ಮ ತಲೆಗೂದಲು ಎಷ್ಟು ದಟ್ಟವಾಗಿದೆ ಒಂದೆರಡು ಸ್ಟೆಪ್ ಕಟ್ ಮಾಡಿ ಬಿಡ್ತಿನಿ, ತುಂಬಾ ಚೆನ್ನಾಗಿ ಕಾಣುತ್ತೆ,” ಎಂದು ರೈಲು ಹತ್ತಿಸಿದಳು. ಸರಿ ನಾನು ಹೊಗಳಿಕೆಯ ಹೊನ್ನ ಶೂಲಕ್ಕೇರಿದೆ. ಹೊಗಳಿಕೆಗೆ ಉಬ್ಬದ ಜೀವಿ ಯಾವುದಿದೆ! “ಆಯ್ತು ಮಾಡಪ್ಪ,”ಎಂದು ಅವಳಿಗೂ ತಲೆಯೊಪ್ಪಿಸಿ ಕುಳಿತೆ. ಟಕ್ ಟಕ್ ಟಕ್ ಟಕ್ ಅಂತ ಸುಮಾರು ಹೊತ್ತು ತಲೆ ಹಿಂದೆ ಕತ್ತರಿ ಆಡಿಸಿದವಳು ಕಾಲು ಗಂಟೆ ಬಳಿಕ ತಲೆಯ ಹಿಂದೆ ಒಂದು ಕನ್ನಡಿ ಹಿಡಿದು “ಮುಂದಿನ ಕನ್ನಡಿಯಲ್ಲಿ ನಿಮ್ಮ ಕಟ್ ನೋಡಿಕೊಳ್ಳಿ” ಎಂದಳು.

PC : Internet

ನೋಡಿದಾಗ ಚೆನ್ನಾಗಿಯೇ ಕಂಡಿತು. ನನ್ನ ಮಗಳು,ಸಿಂಚು ಇಬ್ಬರೂ “ಹೂಂ ಚೆನ್ನಾಗಿದೆ,” ಎಂದು ಸರ್ಟಿಫಿಕೇಟ್ ಕೂಡ ಕೊಟ್ಟು ಬಿಟ್ಟರು .ಆದರೆ ತಲೆಗೆ ಹೇರ್ ಕ್ಲಿಪ್ ಹಾಕಲು ಹೋದಾಗಲೇ ಗೊತ್ತಾಗಿದ್ದು ಎಷ್ಟು ಗಿಡ್ಡವಾಗಿ ಬಿಟ್ಟಿದೆ ಅಂತ. ನನ್ನ ಮಗಳು, ಸಿಂಚು ಇಬ್ಬರೂ,”ಅದಕ್ಕೇನಂತೆ,ತಲೆಗೂದಲು ಬಿಟ್ಕೊಂಡು ಇದ್ರಾಯ್ತಪ್ಪಾ,” ಎಂದು ಮುಸಿ ಮುಸಿ ನಗಲು ಆರಂಭಿಸಿದರು. ಸುಮ ಕೂಡ ಹಲ್ಲು ಕಿರಿಯುತ್ತಾ,”ಹೂಂ ಆಂಟಿ,ಇನ್ನೂ ಸೂಪರ್ ಆಗಿ ಕಾಣಿಸುತ್ತೆ,” ಎಂದಾಗ ಮೈಯುರಿದು ಹೋಯಿತು. ಆದ್ರೂ ಕಾಲ ಮಿಂಚಿ ಹೋಗಿತ್ತು.ಹೆಂಗೋ ಕಷ್ಟದಲ್ಲಿ ಎಲ್ಲಾ ಕೂದಲು ಎಳೆದು ಕ್ಲಿಪ್ಪಿಗೆ ಸೇರಿಸಿದೆ. ಆದರೂ ಎರಡೂ ಕಿವಿ ಪಕ್ಕ ಸ್ಪಾನಿಯಲ್ ತಳಿಯ ನಾಯಿಯ ಕಿವಿಗಳಂತೆ ತುಂಡು ಗೂದಲು ಇಳಿಬಿದ್ದವು.ಅದಕ್ಕೆ ಸುಮಾಳೇ ಎರಡು ಹೇರ್ ಪಿನ್ ಹಾಕಿ ಅದುಮಿ ಕೂರಿಸಿದಳು. ಗೊಣಗುತ್ತಲೇ ಅವಳ ಶುಲ್ಕ ಕೊಟ್ಟು ಮನೆಗೆ ಹಿಂದಿರುಗಿದೆ.ನನ್ನ ಮಗಳು ಮನೆಯಲ್ಲಿ ಬಿದ್ದು ಬಿದ್ದು ನಗುತ್ತಾ,” ಅಮ್ಮ ಇನ್ಮೇಲೆ ನಾನು ಯಾವ ಪಿಚ್ಚರ್ಗೂ ಹೋಗಲ್ಲ, ನಿನ್ ಜೊತೆ ತಪ್ಪದೇ ಪಾರ್ಲರ್ ಗೆ ಬರ್ತೇನೆ,ಒಳ್ಳೆ ಎಂಟರ್ಟೈನ್ಮೆಂಟ್,” ಎಂದು ಕಾಲೆಳೆದಳು.

ಆದರೆ ನನ್ನ ಕಷ್ಟ ನನಗೆ. ಹಿಡಿತಕ್ಕೆ ಸಿಗದ ತಲೆಗೂದಲಿಗೆ ಎಷ್ಟು ಸಾಧ್ಯವೋ ಅಷ್ಟು ಹೇರ್ ಪಿನ್ನುಗಳ ಸಿಕ್ಕಿಸಿಕೊಂಡು ಕಷ್ಟದಲ್ಲಿ ಕ್ಲಿಪ್ ಹಾಕಿಕೊಂಡು ಹೇಗೋ ನಿಭಾಯಿಸುತ್ತಿದ್ದೇನೆ. ಮತ್ತೊಮ್ಮೆ ಸಹನಾಳ ಪಾರ್ಲರ್ ಗೆ ಹೋಗಲು ತಲೆಗೂದಲು ಬೆಳೆಯುವುದನ್ನು ನಾನು ನನ್ನ ಮಗಳು ಇಬ್ಬರೂ ಕಾಯುತ್ತಾ ಇದ್ದೇವೆ.

-ಸಮತಾ.ಆರ್‍

16 Responses

  1. Asha says:

    Super akka

  2. Malavika.R says:

    Beauty parlour nalli ನೆಡೆದ ಘಟನೆಗಳನ್ನು ನಗೆ ಉಕ್ಕುವ ಹಾಗೆ ವಿವರಿಸಿದ ಸಮತಾ
    Madam suuuuuper

  3. ಟಿ. ವಿ ಶೈಲಾ says:

    ಸರಳವಾಗಿ ನೈಜತೆಯಿಂದ ಕೂಡಿದೆ

  4. ನಯನ ಬಜಕೂಡ್ಲು says:

    Nice

  5. Latha says:

    ತುಂಬಾ ಚೆನ್ನಾಗಿ ಬಂದಿದೆ ಸಮತ

  6. Dr geethashree dm says:

    Good samatha

  7. ಪಾರರ್ಲರನ..ಒಂದು.. ಅನುಭವದ ಅಭಿವ್ಯಕ್ತಿ.‌.ಸೊಗಸಾದ ನಿರೂಪಣೆ… ಅಭಿನಂದನೆಗಳು ಮೇಡಂ…

  8. Jayakala DL says:

    ಸಮತ,ಇನ್ನು ಬರಹ ಇರಬೇಕು ಅನ್ನಿಸ್ತು. ಓಡುತಿರುವಾಗಲೆ ಅಯ್ಯೋ ಮುಗಿತಾ ಅಂತ ಅಯ್ತು. ಹಾಸ್ಯ ಬರಹ, ನೈಜ ಘಟನೆ, ಮನಮುಟ್ಟುವ ಭಾಷೆ, ಲೇಖನ ತುಂಬಾ ಚೆನ್ನಾಗಿದೆ. ಇಂತಹ ಅನೇಕ ಬರಹಗಳ ನಿರೀಕ್ಷೆ ನನ್ನದಾಗಿದೆ.

  9. Asha K says:

    Superb Madam

  10. Krishnaprabha says:

    ಚಂದದ ಬರಹ

  11. Divya says:

    Naija ghataneya hasyada thunukugalu manassige mudaneeduvanthiddavu,
    Sarala hagu sundara Baraha

  12. . ಶಂಕರಿ ಶರ್ಮ says:

    ತಿಳಿಹಾಸ್ಯ ಮಿಶ್ರಿತ ಬರಹವು ಚೆನ್ನಾಗಿದೆ.

  13. Anonymous says:

    ಓದಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  14. padmini Hegade says:

    ಹಾಸ್ಯ ಬರಹ ಚೆನ್ನಾಗಿದೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: