ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 6
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಸಂಸ್ಥೆಗಳ ಸ್ಥಾಪನೆ:
1784ರಲ್ಲಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಸಂಸ್ಥೆ ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಸ್ಥಾಪಿತವಾಯಿತು. ಇದರ ಸ್ಥಾಪಕ ನಿರ್ದೇಶಕರು ಸರ್ ವಿಲಿಯಂ ಜೋನ್ಸ್. ಇದು ಏಷ್ಯಾದ ಎಲ್ಲಾ ವಿಜ್ಞಾನ ವಿಭಾಗಗಳ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶದಿಂದ ಆರಂಭವಾಗಿತ್ತು. ಇದು ಇಂದಿಗೂ ತನ್ನ ಗುಣಮಟ್ಟದ ಕಾರ್ಯಕ್ಷಮತೆಯಿಂದ ಪ್ರಪಂಚದಾದ್ಯಂತ ಮರ್ಯಾದಿತವಾಗಿದೆ. ಈ ಸಂಸ್ಥೆಯ ಸ್ಥಾಪನೆಯೊಂದಿಗೆ ಭಾರತದಲ್ಲಿ ಪಾಶ್ಚಾತ್ಯ ವಿಜ್ಞಾನದ ಅಧ್ಯಯನವನ್ನು ಸಾಂಸ್ಥೀಕರಿಸುವ ಯುಗ ಆರಂಭವಾಯಿತು.
ಭಾರತೀಯರಲ್ಲಿ ಕ್ರಮಬದ್ಧ ಶಿಕ್ಷಣ ಮತ್ತು ವಿಜ್ಞಾನಗಳ ತಿಳುವಳಿಕೆಯ ಬಗೆಗೆ ಆಸಕ್ತಿಯನ್ನು ಮೂಡಿಸಲು ಭಾರತೀಯರು ಮತ್ತು ಯೂರೋಪಿಯನ್ನರಿಬ್ಬರೂ ಪರಿಶ್ರಮಿಸಿದರು. ಅವರು ಮೊದಲಿಗೆ ಶಾಲಾ ಪಠ್ಯ ಮತ್ತು ದೇಶೀ ಶಿಕ್ಷಣಗಳ ನಡುವೆ ಸಾಮರಸ್ಯತೆಯನ್ನು ಉಂಟುಮಾಡುವ ಉದ್ದೇಶದಿಂದ ಸಂಘ ಸಂಸ್ಥೆಗಳನ್ನು ಆರಂಭಿಸಿದರು. 1804ರಲ್ಲಿ “ಲಿಟೆರರಿ ಸೊಸೈಟಿ ಆಫ್ ಬಾಂಬೆ”, 1818ರಲ್ಲಿ ಲಿಟೆರರಿ ಅಂಡ್ ಸೈಂಟಿಫಿಕ್ ಸೊಸೈಟಿ ಆಫ್ ಮದ್ರಾಸ್, 1820ರಲ್ಲಿ “ಅಗ್ರಿಕಲ್ಚರಲ್ ಅಂಡ್ ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಇಂಡಿಯಾ”, 1823ರಲ್ಲಿ “ಮೆಡಿಕಲ್ ಅಂಡ್ ಫಿಸಿಕಲ್ ಸೊಸೈಟಿ ಆಫ್ ಕಲ್ಕತ್ತ”, 1851ರಲ್ಲಿ “ಅಗ್ರಿಕಲ್ಚರಲ್ ಅಂಡ್ ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಪಂಜಾಬ್”, “ಬಿಹಾರ್ ಅಂಡ್ ಒರಿಸ್ಸಾ ರಿಸರ್ಚ್ ಸೊಸೈಟಿ”,, ‘ಪಂಜಾಬ್ ಹಿಸ್ಟ್ರಿ ಸೊಸೈಟಿ” ಮುಂತಾದವುಗಳು ಸಾರ್ವಜನಿಕರಲ್ಲಿ ಹೊಸ ರೀತಿಯ ಚಿಂತನಕ್ರಮವನ್ನು ಮೂಡಿಸಲು ಆರಂಭಗೊಂಡವು. ವಿವಿಧ ಸರ್ಕಾರಿ ವಿಜ್ಞಾನ-ವಿಭಾಗ (ಡಿಪಾರ್ಟ್‌ಮೆಂಟ್)ಗಳು ಕೈಗೆತ್ತಿಕೊಂಡ ವೈಜ್ಞಾನಿಕ ಪ್ರಾಜೆಕ್ಟ್‌ಗಳನ್ನು ಸಮರಸಗೊಳಿಸಲು ಮತ್ತು ಅವು ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳಲು ಸರ್ಕಾರ “ಸೈಂಟಿಫಿಕ್ ಅಡ್ವೈಸರಿ ಬೋರ್ಡ”ನ್ನು ನೇಮಿಸಿತು.
ಪ್ರಾರಂಭದಲ್ಲಿ ಎಲ್ಲಾ ವೈಜ್ಞಾನಿಕ ಸೊಸೈಟಿಗಳೂ ಯೂರೋಪಿಯನ್ನರ ಮುಂದಾಳ್ತತನದಲ್ಲಿಯೇ ಕೆಲಸ ಮಾಡುತ್ತಿದ್ದವು. ಇದಕ್ಕೆ ಅಪವಾದ 1848ರಲ್ಲಿ ಆರಂಭವಾದ “ಸ್ಟೂಡೆಂಟ್ಸ್ ಲಿಟೆರರಿ ಅಂಡ್ ಸೈಂಟಿಫಿಕ್ ಸೊಸೈಟಿ”, 1883ರಲ್ಲಿ ಆರಂಭವಾದ “ಬಾಂಬೆ ನ್ಯಾಚುರಲ್ ಹಿಸ್ಟ್ರಿ” ಎನ್ನುವ ಸೊಸೈಟಿಗಳು. ಇವು ಭಾರತೀಯರ ಮತ್ತು ಯೂರೋಪಿಯನ್ನರ ಸಹಯೋಗದಲ್ಲಿ ಕೆಲಸ ಮಾಡಲಾರಂಭಿಸಿದ್ದವು. ಈ ಎಲ್ಲಾ ಸೊಸೈಟಿಗಳೂ ಬಹು ಮಟ್ಟಿಗೆ ಪ್ರಾದೇಶಿಕ ಸಂಗತಿಗಳಿಗೆ, ಕಾಲೋನಿಯಲ್ ಇಂಪೆರಟೀವ್‌ಗಳಿಗೆ ಪೂರಕವಾದ ಸಂಗತಿಗಳಿಗೆ ಸೀಮಿತವಾಗಿ ಕೆಲಸಮಾಡುತ್ತಿದ್ದವು. ಭಾರತೀಯರನ್ನು ವಿಜ್ಞಾನ-ಪರ ಚಿಂತಕರನ್ನಾಗಿ ಸಂಶೋಧಕರನ್ನಾಗಿ ರೂಪಿಸುವ ಉದ್ದೇಶ ಇವುಗಳಿಗೆ ಮೊದ ಮೊದಲಿಗೆ ಇರಲಿಲ್ಲ.
ಇದಕ್ಕೆ ಅಪವಾದ ನೇರವಾಗಿ ಭಾರತೀಯರನ್ನು ಕೇಂದ್ರೀಕರಿಸಿ ಭಾರತೀಯರೇ ನೇತೃತ್ವವಹಿಸಿ ಕೆಲಸಮಾಡುತ್ತಿದ್ದ 1865ರಲ್ಲಿ ಆರಂಭವಾದ “ಅಲಿಘರ್ ಸೈಂಟಿಫಿಕ್ ಸೊಸೈಟಿ” ಮತ್ತು 1868ರಲ್ಲಿ ಆರಂಭವಾದ “ಬಿಹಾರ್ ಸೈಂಟಿಫಿಕ್ ಸೊಸೈಟಿ”. ಇವು ಯೂರೋಪಿಯನ್ ಸಾಹಿತ್ಯಕ ಮತ್ತು ವೈಜ್ಞಾನಿಕ ಕೃತಿಗಳನ್ನು ಭಾಷಾಂತರಿಸುವ ಮತ್ತು ಜರ್ನಲ್ ಗಳನ್ನು ಪ್ರಕಟಿಸುವ, ಅಪರೂಪದ ಮತ್ತು ಮೌಲ್ಯಯುತ ಭಾರತೀಯ ಪ್ರಾಚೀನ ಕೃತಿಗಳನ್ನು ಮುದ್ರಿಸುವ, ವೈಜ್ಞಾನಿಕ ಪ್ರಯೋಗಗಳ ಮೂಲಕ ಉಪಯುಕ್ತ ವಿಷಯಗಳು ಮತ್ತು ವೈಜ್ಞಾನಿಕ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡವು.
ಇಂತಹುದೇ ಮತ್ತೊಂದು ಗಮನಾರ್ಹ ಸೊಸೈಟಿ ಬಂಗಾಳದ ಆಶುತೋಶ ಮುಖರ್ಜಿಯವರು 1908ರಲ್ಲಿ ಸ್ಥಾಪಿಸಿದ “ಕಲ್ಕತ್ತ ಮ್ಯಾಥೆಮ್ಯಾಟಿಕಲ್ ಸೊಸೈಟಿ”. ಇದರ ಉದ್ದೇಶವು ಗಣಿತ-ಅಧ್ಯಯನವನ್ನು ಸುಧಾರಿಸುವುದು, ಶುದ್ಧ ಗಣಿತ-ಅಧ್ಯಯನವನ್ನು ಪ್ರೋತ್ಸಾಹಿಸುವುದು, ಗಣಿತಜ್ಞಾನವನ್ನು ಅನ್ವಯಿಸುವ ಕ್ಷೇತ್ರಗಳನ್ನು ಗುರುತಿಸಿ ಅನ್ವಯಿಸುವುದು, ಗಣಿತಜ್ಞರ ನಡುವೆ ಸಂಪರ್ಕವನ್ನು ಕಲ್ಪಿಸುವುದು, ಜರ್ನಲ್ ಗಳನ್ನು ಬುಲೆಟಿನ್ ಗಳನ್ನು ಪ್ರಕಟಿಸುವುದು, ಭಾರತೀಯ ಮತು ಯೂರೋಪಿಯನ್ ಗಣಿತ-ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದುವುದು ಹಾಗೂ ಈ ಸಂಸ್ಥೆಗಳ ಕೊಡಿಗೆಯನ್ನು ಪರಿಶೀಲಿಸುವುದು ಮತ್ತು ಹೊಸ ಹೊಸ ವಿಷಯಗಳನ್ನು ಕುರಿತು ಚರ್ಚಿಸುವುದು ಆಗಿತ್ತು.
ಏನಾದರೂ ಭಾರತದಲ್ಲಿ ವೈಜ್ಞಾನಿಕ ಚಟುವಟಿಕೆಗಳು ಸರ್ಕಾರದಲ್ಲಿ ದೊರೆಯುವ ಸೇವಾವಕಾಶಗಳಿಗೆ ಸೀಮಿತವಾಗಿತ್ತು; ಈ ಸೇವೆಗಳು ಹೇರುವ ಔದ್ಯೋಗಿಕ ಶರತ್ತುಗಳ ನಿರ್ಬಂಧಗಳಿಗೆ ಒಳಪಟ್ಟಿತ್ತು. ಈ ಚೌಕಟ್ಟಿನೊಳಗೆ ಭಾರತೀಯರು ವಿಜ್ಞಾನವನ್ನು ವಿಜ್ಞಾನಕ್ಕಾಗಿ ಬೆಂಬಲಿಸುವ, ನೈಜ ವೈಜ್ಞಾನಿಕ ಮನೋಭಾವವನ್ನು ಪ್ರೇರೇಪಿಸುವ ಮತ್ತು ಭಾರತೀಯ ವಿಜ್ಞಾನ ಮತ್ತು ಭಾರತೀಯ ವಿಜ್ಞಾನಿಗಳನ್ನು ಎತ್ತಿ ಹಿಡಿಯುವ ಆಲೋಚನೆಯನ್ನು ಮಾಡಿದರು. ದೇಶದ ಬೌದ್ಧಿಕ ಮತ್ತು ಕೈಗಾರಿಕಾ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸದ ಹೊರತೂ ಯಾವುದೇ ದೇಶದ ರಾಜಕೀಯ ಪುನರುತ್ಥಾನ ಸಾಧ್ಯವಿಲ್ಲ ಎಂದು ಅವರು ನಂಬಿದರು. ಅಭಿವೃದ್ಧಿ ಪಡಿಸಿದ ವಿಜ್ಞಾನದ ಬಲದಿಂದ ಕೀರ್ತಿಯುತ ಭಾರತ ತಲೆಯೆತ್ತುವ ಕನಸನ್ನು ಕಂಡರು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35751
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
ನಿಮ್ಮ. ಸ್ವತಂತ್ರ ಪೂರ್ವದ…ಲೇಖನ ಸೊಗಸಾಗಿ ಮುಂದುವರಿಯುತ್ತಿದೆ..
ಉತ್ತಮ ಮಾಹಿತಿ.
ಧನ್ಯವಾದಗಳು ಮೇಡಂ.
Nice
ತಮ್ಮ ಸ್ವಾತಂತ್ರ್ಯ ಪೂರ್ವದ ವೈಜ್ಞಾನಿಕ ಜಾಗೃತಿ ಲೇಖನವು ಬಹಳಷ್ಟು ಮಾಹಿತಿಗಳನ್ನು ಹೊತ್ತು ತಂದಿದೆ.
ಲೇಖನವನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ ಬಿ.ಆರ್. ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಶಂಕರಿ ಶರ್ಮ ಮೇಡಂಗೆ ಮತ್ತಿತರ ಸಹೃದಯ ಓದುಗರಿಗೆ ಧನ್ಯವಾದಗಳು.