ಪುಸ್ತಕ ನೋಟ:’ನಮ್ಮಯ ಹಕ್ಕಿ ಬಿಟ್ಟೇ…. ಬಿಟ್ಟೆ’, ಲೇ: ವಿವೇಕಾನಂದ ಕಾಮತ್
ಪುಸ್ತಕ :– ನಮ್ಮಯ ಹಕ್ಕಿ ಬಿಟ್ಟೇ…. ಬಿಟ್ಟೆ
ಲೇಖಕರು :- ವಿವೇಕಾನಂದ ಕಾಮತ್
ಪ್ರಕಾಶಕರು:- ಪಾಂಚಜನ್ಯ ಪಬ್ಲಿಕೇಷನ್ಸ್
ಕಾದಂಬರಿ ಪ್ರಾರಂಭವಾಗುವುದಕ್ಕೂ ಮೊದಲು “ಹಕ್ಕಿಯನ್ನು ಹಾರಲು ಬಿಡುವ ಮುನ್ನ…..” ಅನ್ನುವ ಒಂದು ಭಾಗ. ಇಲ್ಲಿ ಲೇಖಕರು ಈ ಕತೆಯ ಕುರಿತಾಗಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕಾದಂಬರಿ ಒಂದು ನೈಜ ಘಟನೆ ಆಧಾರಿತ, ಹಾಗೂ ಬದುಕಿನಲ್ಲಿ ಸೋತು ಧೃತಿಗೆಟ್ಟ ಹೆಣ್ಣು ಅವಳ ತಾಯಿಯ ನೆರವಿನ ಮೂಲಕ ಹೇಗೆ ಬದುಕನ್ನು ಕಟ್ಟಿಕೊಳ್ಳುತ್ತಾಳೆ ಅನ್ನುವ ಕತೆ. ಇಲ್ಲಿ ಈ ಕಥೆಯ ಮೂಲಕ ಲೇಖಕರು ಒಬ್ಬ ತಾಯಿಯ ನೋವಿಗೆ ಅಕ್ಷರ ರೂಪ ಕೊಟ್ಟಿದ್ದೇನೆ ಅನ್ನುತ್ತಾರೆ. ಇದು ಲೇಖಕರ ವಿಶಾಲ ಮನೋಭಾವವನ್ನು ತೋರಿಸುತ್ತದೆ. ಇಲ್ಲಿ ಅವರು ಪ್ರತಿಯೊಬ್ಬ ಹೆಣ್ಣಿನಲ್ಲೂ ತಮ್ಮ ಬರಹದ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಅನ್ನುವುದು ನನ್ನ ಮನಸ್ಸಿಗೆ ಬಂದ ವಿಚಾರ.
ವಿವೇಕಾನಂದ ಕಾಮತ್ ಅವರು ಬಹಳ ಸಣ್ಣ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು, ಸಾಧನೆಯನ್ನು ಮಾಡಿದವರು. ನನ್ನ ಕಾಲೇಜು ದಿನಗಳಲ್ಲೂ ಇವರ ಹಲವಾರು ಕಥೆಗಳನ್ನು ಓದಿದ್ದೇನೆ. ಇವರು ಬರೆದ “ಯಾವ ಮೋಹನ ಮುರಲಿ ಕರೆಯಿತು” ನನ್ನ ಮೆಚ್ಚಿನ ಕಥೆ, ಒಂದು ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಈ ಧಾರಾವಾಹಿಯನ್ನು ಓದುವುದಕ್ಕೋಸ್ಕರ ನಾನು ತಪ್ಪದೇ ಆ ಪತ್ರಿಕೆಯನ್ನು ಖರೀದಿಸುತ್ತಿದ್ದೆ. ಆ ಕಾಲದಿಂದಲೇ ವಿವೇಕಾನಂದ ಕಾಮತ್ ಅವರು ಅಂದರೆ ಮೆಚ್ಚಿನ ಲೇಖಕ, ಅವರೆಂದರೆ ಬಹಳ ಅಭಿಮಾನ. ಇವತ್ತು ಫೇಸ್ಬುಕ್ ಪ್ರಪಂಚ ಒಬ್ಬ ಒಳ್ಳೆಯ ಗೆಳೆಯನ ರೂಪದಲ್ಲಿ ಅವರನ್ನು ನನಗೆ ಪರಿಚಯಿಸಿದೆ. ಬಹಳ ಸೀದಾ ಸಾದಾ ಮನುಷ್ಯ, ನಿಗರ್ವಿ, ಸರಳತೆ, ಸಹಜತೆಯ ಮೂರ್ತಿ , ಹೆಣ್ಣು ಮಕ್ಕಳ ಪ್ರತಿ ಅಪಾರ ಗೌರವ ಹೊಂದಿರುವಾತ. ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದರೂ ಸ್ವಲ್ಪವೂ ಜಂಭವಿಲ್ಲದ ಲೇಖಕ ಎಲ್ಲರಿಗೂ ಇಷ್ಟವಾಗುತ್ತಾರೆ. ‘ದೂರ ದಾರಿಯ ತೀರ’, ‘ಸ್ವೀಕಾರ’, ‘ಪುತ್ರಿ ಕಾಮೇಷ್ಟಿ’ ಇವರ ಇನ್ನೂ ಕೆಲವು ಕಾದಂಬರಿಗಳು. ತ್ರಿ ಕಾಮೇಷ್ಟಿ ಇತ್ತೀಚೆಗೆ ಬಹಳ ಹೆಸರು ಮಾಡಿರುವ ಕೃತಿ. ಇವರ ಬರಹಗಳ ತುಂಬಾ ಒಂದು ಅಂತಃಕರಣ ತುಂಬಿರುತ್ತದೆ, ಒಳ್ಳೆ ಒಳ್ಳೆಯ ಸಂದೇಶವಿರುತ್ತದೆ, ಎಲ್ಲೂ ಮಿತಿ ಮೀರಿದ ಸಾಲುಗಳಿರುವದಿಲ್ಲ ಒಟ್ಟಲ್ಲಿ ಬಹಳ ಸುಂದರ ಇವರ ಬರಹಗಳು.
ಈ ಕಾದಂಬರಿಯ ಉದ್ದೇಶವೂ ಅಷ್ಟೇ ಇದನ್ನು ಓದುವುದರ ಮೂಲಕ ಬೇರೆಯವರ ಬದುಕಲ್ಲಿ ಬೆಳಕು ಮೂಡಲಿ ಅನ್ನುವುದು ಲೇಖಕರ ಆಶಯ. ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ನಿಜ, ಆದರೂ ಕೆಲವೊಂದು ವಿಚಾರದಲ್ಲಿ ಹೆಣ್ಣು ಹಾಗೂ ಗಂಡಿನ ನಡುವೆ ಒಂದು ಗೆರೆ ಇದೆ. ಎಲ್ಲ ಕ್ಷೇತ್ರಗಳಲ್ಲೂ ಇವತ್ತು ಹೆಣ್ಣುಮಕ್ಕಳು ಗಂಡಿನಂತೆಯೇ ದುಡಿಯುತ್ತಾರೆ. ಆದರೆ ಮನೆ ಸಂಸಾರದ ವಿಚಾರ ಬಂದಾಗ ಹೆಣ್ಣು ಮೆತ್ತಗಾಗುತ್ತಾಳೆ, ಇಲ್ಲಿಯೂ ಅವಳ ಜವಾಬ್ದಾರಿಗಳು ಗಂಡಿಗಿಂತ ಹಿರಿದು. ಎಲ್ಲರನ್ನು ಕೂಡಿಸಿಕೊಂಡು, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಗುರುತರ ಹೊಣೆ ಯಾರು ಹೇಳದೆಯೇ ಅವಳ ಹೆಗಲೇರಿರುತ್ತದೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಅವಳ ಹೆತ್ತವರು ಮೊದಲೇ ಅವಳನ್ನು ಗಟ್ಟಿಗೊಳಿಸಬೇಕಾಗುತ್ತದೆ, ರೀತಿನೀತಿಗಳನ್ನು ಕಲಿಸಬೇಕಾಗುತ್ತದೆ ಅನ್ನುವ ವಿಚಾರದೊಂದಿಗೆ ಪ್ರಾರಂಭವಾಗುವ ಕಥೆ.
ಹೆಣ್ಣು ಯಾವತ್ತಿದ್ದರೂ ಹುಟ್ಟಿದ ಮನೆ ತೊರೆದು ಹೊಕ್ಕ ಮನೆ ಬೆಳಗಲು ಇರುವ ನಂದಾದೀಪ ಅನ್ನುವುದು ಸಾರ್ವಕಾಲಿಕ ಸತ್ಯ. ಹೆಣ್ಣಿಗೆ ಬಾಲ್ಯದಲ್ಲಿ ಹೆತ್ತವರ ಆಸರೆ,ಯೌವ್ವನದಲ್ಲಿ ಗಂಡನ ಆಸರೆ, ಮುಪ್ಪಿನಲ್ಲಿ ಮಕ್ಕಳ ಆಸರೆ ಅನ್ನುವುದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ ಸಾರುತ್ತ ಬಂದಿದೆ. ಇದು ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆ ನಿಜವಲ್ಲ.
ಒಂದು ಹೆಣ್ಣು ಮದುವೆ ವಯಸ್ಸಿಗೆ ಬಂದಾಗ ಅವಳಿಗೆ ಗಂಡು ಹುಡುಕುವ ನಿಟ್ಟಿನಲ್ಲಿ ಹೆತ್ತವರಲ್ಲಿ ಆಗುವ ತಳಮಳ, ಆತಂಕ, ಆವೇಗ, ಜವಾಬ್ದಾರಿಗಳು, ನೋಡಿದ ಗಂಡಿನ ಹಾಗೂ ಅವನ ಮನೆಯವರ ಕುರಿತಾಗಿ ಎಷ್ಟು ಹೇಗೆ ತಿಳಿದುಕೊಂಡರೂ ಮತ್ತೆ ಮಗಳ ಭವಿಷ್ಯದ ಕುರಿತಾಗಿ ಹೆತ್ತವರ ಮನದಲ್ಲಿ ಏಳುವ ಚಿಂತೆಯ ಅಲೆಗಳು, ಹೀಗೆ ಹಲವಾರು ತವಕ ತಲ್ಲಣಗಳನ್ನು ಈ ಕಥೆಯಲ್ಲಿ ಅನಾವರಣಗೊಳಿಸಿದ ರೀತಿ ಅದ್ಭುತ. ಇಲ್ಲಿರುವ ಒಂದೊಂದು ಸಾಲು ಪ್ರತಿಯೊಬ್ಬರ ಬದುಕಿನ ವಾಸ್ತವ.
ಕಥೆಯಲ್ಲಿ ಒಂದು ಉಡುಗೊರೆಯನ್ನು ನೀಡುವ ವಿಚಾರ. ಉಡುಗೊರೆಯನ್ನು ಕೊಡುವಲ್ಲಿ ಆ ಉಡುಗೊರೆಯ ಬೆಲೆ ಎಷ್ಟು ಅನ್ನುವುದಕ್ಕಿಂತ ಅದರ ಹಿಂದಿರುವ ಭಾವನಾತ್ಮಕ ಪ್ರೀತಿಯ ಬೆಲೆ ಏನು ಅನ್ನುವುದನ್ನು ಮನ ತಟ್ಟುವಂತೆ ವಿವರಿಸುವ ಒಂದು ಸನ್ನಿವೇಶ. ಸಣ್ಣ ಅತಿ ಸಣ್ಣ ಭಾವನೆಗಳನ್ನು ಕಾಳಜಿಯನ್ನು ಅದ್ಭುತ ಅರ್ಥಗಳ ಸಹಿತ ವಿವರಿಸುವ ಪರಿಯಿಂದಲೇ ವಿವೇಕಾನಂದ ಕಾಮತ್ ಅವರ ಬರಹ ಓದುಗರಿಗೆ ಬಹಳ ಇಷ್ಟವಾಗುವುದು.
ಅಮ್ಮ ಎಂಬ ಸೃಷ್ಟಿ. ಹೌದು ಅವಳೇ ಪ್ರತಿಯೊಬ್ಬನ ಸೃಷ್ಟಿಕರ್ತೆ. ಅಮ್ಮ ಎಂದರೆ ಪ್ರಕೃತಿ. ಒಂದು ಹೆಣ್ಣಿನ ಭವಿಷ್ಯ ರೂಪಿಸುವಲ್ಲಿ ಅಂತೂ ಅಮ್ಮ ಅವಳು ಆ ಮಗುವಿನ ಹುಟ್ಟಿನಿಂದ ತನ್ನ ಉಸಿರು ನಿಲ್ಲುವವರೆಗೂ ಒದ್ದಾಡುತ್ತಾಳೆ, ಕಾಳಜಿ ವಹಿಸುತ್ತಾಳೆ, ಹೆಜ್ಜೆ ಹೆಜ್ಜೆಗೂ ಬೆಂಬಲವಾಗಿ ನಿಲ್ಲುತ್ತಾಳೆ, ಮಗಳ ಬದುಕಿನ ಹೂದೋಟವನ್ನು ಸಂತಸದ ಹೂಗಳಿಂದ ಅಲಂಕಾರಗೊಂಡು ಅರಳುವುದನ್ನು ಕಂಡು ಸಂಭ್ರಮಿಸುತ್ತಾಳೆ. ನೋವಲ್ಲಿ ಧೈರ್ಯ ತುಂಬಿ ಮುನ್ನಡೆಸುತ್ತಾಳೆ. ಅದು ಮಗನಾಗಿದ್ದರೂ ಅಷ್ಟೇ. ಅಮ್ಮ ಎಂದರೆ ಮಕ್ಕಳ ಪಾಲಿನ ಪ್ರಿಯಸಖಿ. ಮಕ್ಕಳ ನೋವನ್ನು ಕಂಡು ಕರುಳು ಹಿಂಡಿ ಹೋಗುವಷ್ಟು ಮರುಗುವವಳು ಅವಳೊಬ್ಬಳೇ. ಅದೇ ಮಕ್ಕಳು ಉನ್ನತಿಯನ್ನು ಹೊಂದಿದಾಗ ನಿಧಿ ಸಿಕ್ಕಿದಷ್ಟು ಸಂಭ್ರಮಿಸುವವಳು ಅವಳೇ. ಅಮ್ಮನಿಗೆ ಬೇರಾವುದು ಸಾಟಿ ಇಲ್ಲ ಅನ್ನುವುದನ್ನು ತುಂಬಾ ಚೆನ್ನಾಗಿ ಅಕ್ಷರ ರೂಪದಲ್ಲಿ ಅರುಹಿದ್ದಾರೆ ಇಲ್ಲಿ ಲೇಖಕ.
ಮುಖವಾಡಗಳು……. ಜಗದ ತುಂಬಾ ಮುಖವಾಡಗಳು, ವಿಧವಿಧದ ಮುಖವಾಡಗಳು….. ಈ ಮುಖವಾಡಗಳು ಒಳ್ಳೆಯ ಮನಸ್ಥಿತಿಯದಾದರೆ ಬದುಕು ಸುಂದರ, ಇಲ್ಲದಿದ್ದರೆ ನಂಬಿಕೆ ದ್ರೋಹದ ಉದ್ದೇಶ ಹೊಂದಿದ್ದವು ಗಳಾದರೆ ಬದುಕು ಸರ್ವನಾಶ. ಮದುವೆಯ ವಿಚಾರದಲ್ಲಂತೂ ನಂಬಿಕೆ ಬಹಳ ಮುಖ್ಯ. ಇಲ್ಲಿ ಒಮ್ಮೆ ನಂಬಿಕೆ ಕಳೆದುಕೊಂಡರೆ ಮುಗಿಯಿತು ಅದು ಒಡೆದ ಕನ್ನಡಿಯಂತೆ ಮತ್ತೆ ಜೋಡಿಸಲಾಗದು. ಇಲ್ಲಿ ದ್ರೋಹವಾದರೆ ಚೂರಾಗುವ ಮನಸ್ಸುಗಳು ಒಂದೆರಡಲ್ಲ ಮನೆ ಮಂದಿಯದ್ದು ಎಲ್ಲರದ್ದು. ಸುಳ್ಳಿಗೆ ಪ್ರಾಮಾಣಿಕತೆಗೆ ಯಾವತ್ತೂ ಹೆಚ್ಚು ಬದುಕು ಇಲ್ಲ, ಅದು ಬೇಗ ಬೆಳಕಿಗೆ ಬಂದೇ ಬರುತ್ತದೆ. ಮದುವೆ ಎಂಬ ಬಂಧನದಲ್ಲಿ ಬಂಧಿಗಳಾದ ಮೇಲೆ ಪರಸ್ಪರ ವಿಶ್ವಾಸ,ಪ್ರೀತಿ, ನಂಬಿಕೆಗಳು ಇರಬೇಕಾದದ್ದು ಬಹಳ ಮುಖ್ಯ. ಇಲ್ಲದಿದ್ದರೆ ಆ ಸಂಬಂಧ ತುಂಬಾ ದೂರದವರೆಗೆ ಸಾಗಲಾರದು.
ಮದುವೆ ಮಾಡಿ ಕೊಟ್ಟಾಗಿದೆ. ಈಗ ಸಂಬಂಧವನ್ನು ಮುರಿಯಲು ಹೋದರೆ ಕೆಟ್ಟ ಹೆಸರು, ಅಪವಾದಗಳನ್ನು ಅಪ್ಪ ಅಮ್ಮ ಎದುರಿಸಬೇಕಾಗುತ್ತದೆ. ಅಪ್ಪ ಅಮ್ಮ ಎಷ್ಟು ಅನ್ಯೋನ್ಯತೆಯಿಂದ ಇದ್ದಾರೆ ಹಾಗಾಗಿ ಇಲ್ಲಿ ತಾನೇ ಅನುಸರಿಸಿಕೊಂಡು ಹೋಗಬೇಕೆಂದು ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಅಂದುಕೊಳ್ಳುವ ಒಂದು ಸನ್ನಿವೇಶ. ಇಲ್ಲಿ ಮಕ್ಕಳು ಹೇಗೆ ತಂದೆ ತಾಯಿಯನ್ನು ಆದರ್ಶವಾಗಿ ಇಟ್ಟುಕೊಂಡು ಸಾಗುತ್ತಾರೆ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಹೆತ್ತವರು ಎಷ್ಟು ಜಾಗರೂಕರಾಗಿ ಇದ್ದರೂ ಸಾಲದು. ಅವರೇ ಹಲವಾರು ಸನ್ನಿವೇಶಗಳಲ್ಲಿ ಮಕ್ಕಳಿಗೆ ಆದರ್ಶವಾಗುತ್ತಾರೆ.
ಮಗಳಿಗೆ ಒಳ್ಳೆಯ ಮನೆತನವೆಂದು ಅಂದುಕೊಂಡು ಮದುವೆ ಮಾಡಿಕೊಟ್ಟು ಮೋಸ ಹೋದ ನಂತರ ಪರಿತಪಿಸುವ ಒಂದು ಹೆಣ್ಣು ಹಾಗೂ ಅವಳ ತಂದೆ ತಾಯಿಯ ಕಾರುಣ್ಯದ ಕತೆ. ಇಂತಹ ಒಂದು ಘಟನೆ ಒಬ್ಬರ ಬದುಕಿನಲ್ಲಿ ನಿಜವಾಗಿಯೂ ನಡೆದದ್ದು ಅನ್ನುವುದೇ ಆಘಾತ ತರುವ ಸಂಗತಿ. ಆದರೂ ಆ ಹುಡುಗಿಯ ತಾಯಿ ತನ್ನ ಮಗಳನ್ನು ಸೋಲಲು ಬಿಡದೆ ಛಲದಿಂದ ಜೊತೆಯಾಗಿ ನಿಂತು ಮಗಳನ್ನು ಒಲ್ಲದ ಮದುವೆಯ ಬಂಧದಿಂದ ಹೊರತರುವ ಹೋರಾಟ ನಡೆಸಿ ಮಗಳು ಸ್ವತಂತ್ರವಾಗಿ ಬದುಕನ್ನು ರೂಪಿಸುವವರೆಗೆ ನಡೆಸಿದ ಹೋರಾಟದ ಯಶೋಗಾಥೆ.
ಸುತ್ತಲ ಈ ಪ್ರಪಂಚದಲ್ಲಿ ಸುಳ್ಳಿನ ಸರಮಾಲೆಗಳನ್ನು ಹೆಣೆದು ಪಾಪದ ಹೆಣ್ಣುಮಕ್ಕಳನ್ನು ಹರಕೆಯ ಕುರಿಗಳನ್ನಾಗಿಸುವ ಕಟುಕರು ಇದ್ದಾರೆ ಅನ್ನುವ ವಿಚಾರವೇ ಹೇಸಿಗೆ ತರುವಂಥದ್ದು. ಇಲ್ಲಿ ಛಲ ತುಂಬಿ ತನ್ನ ಮಗಳನ್ನು ರಕ್ಷಿಸುವ ಆ ತಾಯಿಯ ಪ್ರತಿಯೊಂದು ನಡೆಯೂ ಒಂದೊಂದು ಪಾಠ ಹೇಳುತ್ತದೆ. ಈ ಇಡೀ ಕಥೆಗೆ ಹೋಲಿಕೆ ಹಕ್ಕಿಗೂಡು. ಹಕ್ಕಿ ಮೊಟ್ಟೆಯಿಟ್ಟು ಮರಿಯಾದ ಮೇಲೆ ಆ ಮರಿಗಳನ್ನು ಜತನ ಮಾಡಿ ಹಾರಲು ಬಿಟ್ಟು ಬಿಡುವ, ಪ್ರೋತ್ಸಾಹಿಸುವ ಉದಾಹರಣೆ, ಇಲ್ಲಿ ನಾವು ಲೇಖಕರ ಅದ್ಭುತ ಕಲ್ಪನಾ ಸಾಮರ್ಥ್ಯ ಅದು ವಾಸ್ತವಕ್ಕೆ ಹತ್ತಿರವಾದಂತಹದ್ದನ್ನು ಕಾಣಬಹುದು. ಮದುವೆ, ವಿವಾಹಿತರ ನಡುವೆ ಪ್ರೀತಿ ಪ್ರೇಮ, ಗಂಡ ಹೆಂಡತಿಯ ನಡುವೆ ಇರಬೇಕಾದ ನವಿರಾದ ಸಂಬಂಧ ಎಲ್ಲವೂ ಇದೆ ಇಲ್ಲಿ, ಆದರೆ ಯಾವುದನ್ನೂ ಅಶ್ಲೀಲ, ಅತಿರಂಜಿತ ಅನ್ನುವ ರೀತಿಯಲ್ಲಿ ಚಿತ್ರಿಸಿಲ್ಲ ಲೇಖಕರು. ಎಲ್ಲವನ್ನೂ ಅಶ್ಲೀಲತೆಯ ಸೋಂಕಿಲ್ಲದೇ ಪೂಜ್ಯಭಾವದಿಂದ ನೋಡುವ ಲೇಖಕರ ಈ ಗುಣ ಇಷ್ಟವಾಗುತ್ತದೆ. ಆರಂಭದಿಂದ ಕೊನೆಯವರೆಗೂ ಎಲ್ಲಿಯೂ ಬೋರ್ ಅನಿಸುವ ಸಂಗತಿಗಳಿಲ್ಲ. ಅದೂ ಅಲ್ಲದೆ ಸತ್ಯ ಘಟನೆಯಾದ ಕಾರಣ ಇಂತಹ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ ಎನ್ನುವ ಅಂಶವನ್ನು ಮುಂದೆ ಇಟ್ಟುಕೊಂಡು ಸೊಗಸಾಗಿ ಕತೆಯನ್ನು ಹೆಣೆದ ಲೇಖಕರ ಕಾಳಜಿ ಓದುಗರನ್ನು ಸೆಳೆಯುತ್ತದೆ.
ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಬೆಳೆಸುವಾಗ ಆದಷ್ಟು ಸ್ವತಂತ್ರವಾಗಿ ಇಡೀ ಪ್ರಪಂಚ ಹೇಗಿದೆ ಅನ್ನುವುದನ್ನು ತಿಳಿದುಕೊಳ್ಳುವ ಸಾಮರ್ಥ್ಯ ಅವರಲ್ಲಿ ಹುಟ್ಟುವ ರೀತಿ, ಜಗತ್ತಿನ ಆಗು ಹೋಗುಗಳ ಅರಿವು ಮೂಡಿ ಅವುಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವ ಧೈರ್ಯ ಅವರಲ್ಲಿ ಮೂಡುವಂತೆ ಅವರನ್ನು ಬೆಳೆಸಬೇಕು ಅನ್ನುವ ಒಂದು ಬದುಕಿನ ಪಾಠ. ಹೌದು ಹೆಣ್ಣು ಯಾವತ್ತೂ ಬೆಳೆದ ಹಾಗೂ ಹೊಕ್ಕಿದ ಎರಡು ಮನೆ ಮನಗಳನ್ನು ಬೆಳಗಲಿ ರುವವಳು. ಹಾಗಿರುವಾಗ ಅವಳಲ್ಲಿ ಆತ್ಮವಿಶ್ವಾಸ, ಭರವಸೆ, ಎಲ್ಲವನ್ನೂ ಕೆಚ್ಚೆದೆಯಿಂದ ಎದುರಿಸುವ ಧೈರ್ಯಗಳನ್ನು ತುಂಬುತ್ತಾ ಬೆಳೆಸುವುದು ಹೆತ್ತವರಾದ ವರ ಕರ್ತವ್ಯ.
ಆರಂಭದಿಂದ ಅಂತ್ಯದವರೆಗೂ ಮನವನ್ನು ಆಕರ್ಷಿಸುತ್ತ ಸಾಗುವ, ಸತ್ಯ ಘಟನೆಯನ್ನು ಕಾದಂಬರಿ ರೂಪದಲ್ಲಿ ಬರೆದು ಜನರನ್ನು ಎಚ್ಚರಿಸ ಹೊರಟ ಒಳ್ಳೆಯ, ಸುಂದರ ಮನಸ್ಸಿನ ಲೇಖಕ ವಿವೇಕಾನಂದ ಕಾಮತ್ ಅವರಿಗೆ ಧನ್ಯವಾದಗಳು. ಹಾಗೆಯೇ ಕೇವಲ ಒಂದು ವಾಟ್ಸಪ್ ಮೆಸೇಜಿಗೆ ಸ್ಪಂದಿಸಿ ಪುಸ್ತಕವನ್ನು ತಲುಪಿಸಿದ ಜಾಗೃತಿ ಪ್ರಿಂಟರ್ಸ್ ನ ಮಹೇಶ್ ಅವರಿಗು ಹೃತ್ಪೂರ್ವಕ ಧನ್ಯವಾದಗಳು .
-ನಯನ ಬಜಕೂಡ್ಲು
ಧನ್ಯವಾದಗಳು ಹೇಮಕ್ಕ
ಪುಸ್ತಕ ಪರಿಚಯ ..ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು ಮೇಡಂ.
ಪುಸ್ತಕ ವಿಮರ್ಶೆ ಹಾಗೂ ಪರಿಚಯ ಲೇಖನ ಚೆನ್ನಾಗಿದೆ.
ಪರಿಚಯ ಲೇಖನ ಚೆನ್ನಾಗಿದೆ.
ಕಥೆಯ ಸಾರಾಂಶ, ಉದ್ದೇಶ, ಲೇಖಕರ ಬಗೆಗಿನ ವಿಚಾರಗಳನ್ನು ಅಚ್ಚುಕಟ್ಟಾಗಿ ವಿಮರ್ಶಿಸಿದ್ದೀರಿ,
ನಿಮ್ಮ ವಿಮರ್ಶೆಯ ಲೇಖನ ಚೆನ್ನಾಗಿದೆ ಮೇಡಮ್