ಕಾದಂಬರಿ: ನೆರಳು…ಕಿರಣ 26
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಭಾಗ್ಯಳು ಗೌರಿಯಮ್ಮನ ಆಣತಿಯಂತೆ ನಾಲ್ಕು ವರ್ಷಗಳ ಸತತ ಕಲಿಕೆ, ಅಭ್ಯಾಸಗಳನ್ನು ಮಾಡಿದ ನಂತರವೇ ವಿದ್ವತ್ ಪರೀಕ್ಷೆಯನ್ನು ತೆಗೆದುಕೊಂಡು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿ ಎಲ್ಲರಿಗೂ ಸಂತೋಷವನ್ನು ತಂದಿತ್ತಳು. “ನಾನು ನಿನಗೆ ಕಲಿಸಿದ್ದಕ್ಕೂ ಸಾರ್ಥಕವಾಯಿತು. ಇನ್ನು ಮುಂದೆ ನೀನೂ ಈ ವಿದ್ಯೆಯನ್ನು ಉಳಿಸಿಕೊಂಡು ನಾಲ್ಕು ಜನರಿಗೆ ಹಂಚಿ ಸಾರ್ಥಕ ಪಡಿಸಿಕೋ”ಎಂದು ಹೃತ್ಪೂರ್ವಕವಾಗಿ ಆಶಿರ್ವದಿಸಿದರು ಗೌರಿಯಮ್ಮ. ಭಾಗ್ಯಳ ಅತ್ತೆ, ಮಾವನವರು, ಪತಿ ಎಲ್ಲರೂ ಕೂಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ಬಂಧುಬಳಗದವರನ್ನು, ಆಪ್ತೇಷ್ಟರನ್ನು ಆಹ್ವಾನಿಸಿ ಭೂರಿಭೋಜನವನವನ್ನೇ ಮಾಡಿಸಿ ತಮಗಾದ ಆನಂದವನ್ನು ಹಂಚಿಕೊಂಡರು.
ಆಗ ಆಗಮಿಸಿದ ಬಂಧುಗಳಲ್ಲಿ ಹಿರಿಯಜ್ಜ, ಸೀತಮ್ಮನ ಅಣ್ಣನ ಮಕ್ಕಳು ಒಂದೆರಡು ದಿನದ ಮಟ್ಟಿಗೆ ಅಲ್ಲಿಯೇ ಉಳಿದರು. ಅವರುಗಳು ಅಲ್ಲಿನ ಊಟ ತಿಂಡಿಗಳನ್ನು ಬಾಯ್ತುಂಬ ಹೊಗಳುತ್ತಿದ್ದರು. “ನಾರಾಣಪ್ಪ ನೀನು ತುಂಬಾ ಸುಧಾರಿಸಿದ್ದೀಯೆ. ನಳಮಹಾರಾಜನನ್ನು ಹಿಂದಿಕ್ಕುವಂತೆ ಚತುರನಾಗಿದ್ದೀ” ಎಂದು ಹೊಗಳಿದರು ಹಿರಿಯಜ್ಜ.
ಅಲ್ಲಿಯೇ ಇದ್ದ ಜೋಯಿಸರು “ಹೆ.ಹೇ ಇದೆಲ್ಲ ನನ್ನ ಸೊಸೆಯ ತರಬೇತಿ. ನಯ, ನಾಜೂಕು, ಶುಚಿ, ರುಚಿ, ಅಳತೆ ಎಲ್ಲವನ್ನೂ ಒಂದು ಮಟ್ಟಕ್ಕೆ ತಂದಿರಿಸಿದ್ದಾಳೆ. ಅಷ್ಟೇ ಅಲ್ಲ ಅವಳು ಹಿಂದುಗಡೆ ಮಾಡಿರುವ ಕೈತೋಟ, ಹಸುಗಳ ಕೊಟ್ಟಿಗೆಯ ವ್ಯವಸ್ಥೆಯನ್ನು ಬದಲಾಯಿಸಿದ ಸಲಹೆ, ಮಿಗಿಲಾಗಿ ಶೀನನ ಜೊತೆಗೂಡಿ ಜಮೀನಿನ ಕಡೆಗೂ ಹೋಗಿ ಅಲ್ಲಿನ ಬೆಳೆಗಳನ್ನು ಹಾಕುವಲ್ಲಿ ಹೊಸತನ, ತೋಟದ ಉಸ್ತುವಾರಿಕೆ, ನಮ್ಮ ಜವಾಬ್ದಾರಿ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಿದ್ದಾಳೆ.” ಎಂದು ಬಾಯ್ತುಂಬ ಪ್ರಶಂಸಿಸಿದರು.
“ತಾತಾ, ಇವರಿಗೆ ಸೊಸೆಯನ್ನು ಹೊಗಳಲು ಬಿಟ್ಟರೆ ಸಾವಿರ ನಾಲಿಗೆಯುಳ್ಳ ಆದಿಶೇಷನನ್ನೂ ಮೀರಿಸಿತ್ತಾರೆ” ಎಂದು ತಂದೆಯನ್ನು ಛೇಡಿಸಿದ ಶ್ರೀನಿವಾಸ.
“ಅದಿರಲಿ ವೆಂಕೂ, ಅದೇನೋ ಕೊಟ್ಟಿಗೆಯ ಸ್ವಚ್ಛತೆಯ ಬಗ್ಗೆ ಹೇಳಿದೆಯಲ್ಲ. ಅದೇನು? ನನ್ನ ಬಂಟನಿಗೂ ಹೇಳುತ್ತೇನೆ. ಯಾವಾಗ ನೋಡಿದರೂ ಗಂಜಲ, ಸಗಣಿ ಮಧ್ಯದಲ್ಲೇ ಹಸುಗಳು ಒದ್ದಾಡುತ್ತಿರುತ್ತವೆ. ಎನಾದರೂ ಕೇಳಿದರೆ ಸಿಕ್ಕಾಪಟ್ಟೆ ಅಳತೆಮೀರಿ ನುಂಗಿಬಿಡುತ್ತವಜ್ಜಾ ಈ ಹಸುಗಳು ಎನ್ನುತ್ತಾನೆ ಆ ಮಡ್ಡಿ ಶಿಖಾಮಣಿ” ಎಂದು ಕೇಳಿದರು.
ಆಗ ಭಾಗ್ಯ “ಅದೇನೂ ಅಂತಹ ಬ್ರಹ್ಮವಿದ್ಯೆಯಲ್ಲಾ ಅಜ್ಜಯ್ಯಾ, ಮೊದಲು ಕೊಟ್ಟಿಗೆಯಲ್ಲಿ ಹಸುವಿನ ಗಂಜಲ ಸರಿಯಾಗಿ ಹರಿದು ಹೋಗುವಂತೆ ಕಾಲುವೆ ಮಾಡಿಸಬೇಕು. ನಂತರ ಸಗಣಿಯನ್ನು ಬಾಚಿ ಹೊರಹಾಕಿದ ಮೇಲೆ ಒಲೆಯ ಬೂದಿಯನ್ನು ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟುವ ಜಾಗದಲ್ಲಿ ಚೆನ್ನಾಗಿ ಹರಡಬೇಕು. ಸ್ವಲ್ಪ ಹೊತ್ತು ಬಿಟ್ಟು ಕಡ್ಡಿಪೊರಕೆಯಿಂದ ಗುಡಿಸಿದರೆ ಅಲ್ಲಿ ಅಂಟಿಕೊಂಡಿದ್ದ ಸಗಣಿ, ಗಂಜಲದ ಕರೆಯೆಲ್ಲಾ ಹೋಗುತ್ತದೆ. ನೀರು ಹಾಕಿ ತೊಳೆದರೆ ಸ್ವಚ್ಛವಾಗುತ್ತದೆ. ಹಿತ್ತಲ ಕೊನೆಯಲ್ಲಿ ಒಂದು ಗುಂಡಿ ತೆಗೆದು ಅದರಲ್ಲಿ ಗುಡಿಸಿದ ಕಸವನ್ನು ಹಾಕಿ ಒಂದು ಮುಚ್ಚಳದಿಂದ ಮುಚ್ಚಬೇಕು. ಆಗಿಂದಾಗ್ಗೆ ಸೊಳ್ಳೆ, ನೊಣ ಬಾರದಂತೆ ಔಷಧವನ್ನು ಸಿಂಪಡಿಸಬೆಕು. ಇದಕ್ಕೆ ರಾಸಾಯನಿಕ ಔಷಧಿಗಳಿಗಿಂತ ಶುಂಠಿ, ಉಪ್ಪು, ನಾಗದಾಳಿ ಸೊಪ್ಪು, ಬೇವಿನ ಸೊಪ್ಪು ಎಲ್ಲವನ್ನೂ ಚೆನ್ನಾಗಿ ಒಣಗಿಸಿ ಪುಡಿಮಾಡಿ ಇಟ್ಟುಕೊಂಡರೆ, ಇದನ್ನು ನೀರಿಗೆ ಬೆರೆಸಿ ಸಿಂಪಡಿಸಿದರೆ ವಾಸನೆಯೂ ಅಷ್ಟು ಬರುವುದಿಲ್ಲ. ಕ್ರಿಮಿಕೀಟಗಳ ತೊಂದರೆಯೂ ನಿವಾರಣೆಯಾಗುತ್ತದೆ” ಎಂದು ಹೇಳಿದಳು.
“ಭೇಷ್, ರೂಪು, ವಿದ್ಯೆ, ಗುಣ, ಜಾಣತನ ಎಲ್ಲವನ್ನೂ ಒಂದುಗೂಡಿಸಿಕೊಂಡಿದ್ದೀಯೆ ತಾಯಿ. ಭಗವಂತ ನಿನಗೆ ಒಳ್ಳೆಯದು ಮಾಡಲಿ.” ಎಂದು ಬಾಯ್ತುಂಬ ಹೊಗಳಿದರು.
ಅವರೆಲ್ಲರೂ ಇದ್ದಾಗ ಹಾಡು, ಪಾಡು, ನಗೆ, ಔತಣಗಳು, ಪರಸ್ಪರ ಮಾತುಕತೆಗಳಿಂದ ಮನೆಯೆಲ್ಲ ಗಲಗಲ ಎನ್ನುತ್ತಿತ್ತು. ಅವರು ಊರಿಗೆ ಹೋದನಂತರ ಮನೆ ಭಣಗುಟ್ಟುತ್ತಿತ್ತು. ಅವರೆಲ್ಲರನ್ನೂ ಬೀಳ್ಕೊಡುವ ಹಿಂದಿನ ರಾತ್ರಿ ಹಿರಿಯಜ್ಜನಿಗೆ ಹಾಸಿಗೆ ಹಾಸಿ ಹೊದಿಕೆ ಸರಿಮಾಡಿಟ್ಟು, ಕುಡಿಯಲು ನೀರಿಟ್ಟು ರೂಮಿನಿಂದ ಹೊರಹೋಗಲು ಅಣಿಯಾಗಿದ್ದ ಭಾಗ್ಯಳನ್ನು ಕರೆದು ತಮ್ಮೆದುರಿಗೆ ಕೂಡಿಸಿಕೊಂಡರು.
“ಮಗೂ ಭಾಗ್ಯಾ, ನಾನು ಹೀಗೆ ಹೇಳುತ್ತಿದ್ದೇನೆಂದು ಬೇಸರಪಟ್ಟುಕೊಳ್ಳಬೇಡ. ಈ ಮನೆಗೊಂದು ಹೊಸಜೀವ ಬರಲಿ. ಆ ಕಡೆಗೆ ಗಮನ ಕೊಡು. ನಿನ್ನ ಸೋದರಿಯರೆಲ್ಲರಿಗೂ ವಿವಾಹಗಳಾಯಿತೆಂದು, ಅವರುಗಳ ಮಡಿಲು ತುಂಬಿದ ಸಂಗತಿಯೂ ತಿಳಿಯಿತು. ಎಲ್ಲ ಬಾಗ್ಯವನ್ನು ಕೊಟ್ಟ ದೇವರು ಈ ಭಾಗ್ಯ ಕೊಡಲು ಏಕೆ ತಡಮಾಡಿದ್ದಾನೋ ನಾ ತಿಳಿಯೇ. ಆದರೂ ದಂಪತಿಗಳು ಇದರ ಬಗ್ಗೆ ಯೋಚಿಸಿದರೆ ಒಳ್ಳಿತು. ಇದು ಈ ಅಜ್ಜನ ಆಶಯ. ಬೇಗ ನೆರವೇರುವಂತಾಗಲಿ” ಎಂದು ಮೆಲುದನಿಯಲ್ಲಿ ಹೇಳಿದ ಮಾತುಗಳು ಭಾಗ್ಯಳ ನೆನಪಿಗೆ ಬಂದವು.
ಎಲ್ಲರ ಮುಂದೆ ಬಾಯಿಬಿಡದೆ ತನ್ನೊಡನೆ ಮಾತ್ರ ಹಂಚಿಕೊಂಡ ಅಭಿಲಾಷೆ, ಕೊಟ್ಟ ಎಚ್ಚರಿಕೆ, ಹಾರೈಸಿದ ರೀತಿ ಭಾಗ್ಯಳಿಗೆ ಅವರಲ್ಲಿ ಪೂಜ್ಯಭಾವನೆಯನ್ನು ಹುಟ್ಟಿಸಿತ್ತು.
ಹುಂ ಈವಿಷಯ ಇತ್ತೀಚೆಗೆ ಭಾಗ್ಯಳಿಗೆ ಹೆಚ್ಚು ಕಾಡಿಸುವುದಾಗಿತ್ತು. ಯಾವುದಾದರೂ ಶುಭಕಾರ್ಯಗಳಾದ ನಾಮಕರಣ, ಮಕ್ಕಳ ಹುಟ್ಟುಹಬ್ಬ,ಗಳಿಗೆ ಹೋದಾಗ ಅಲ್ಲಿ ಸೇರುವ ಹೆಂಗಳೆಯರು, ಅದರಲ್ಲೂ ಹಿರಿತಲೆಗಳು ಆಡುವ ನಾಲಿಗೆಗೆ ಭಾಗ್ಯ ಆಹಾರವಾಗುತ್ತಿದ್ದಳು.
ಒಮ್ಮೆ ಭಾಗ್ಯ ತಾಯಿಯ ಮನೆಗೆ ಹೋಗಿದ್ದಾಗ ಲಕ್ಷ್ಮಿ “ಮಗಳೇ ನಿನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಕಡೆ ಹೆಚ್ಚಿನ ಗಮನ ಹರಿಸಿದಂತೆ ಮಕ್ಕಳ ಕಡೆ…” ಅವರ ಮಾತನ್ನು ಕೇಳಿದ ಭಾಗ್ಯಳಿಗೆ ಹೃದಯ ಹಿಂಡಿದಂತಾಯಿತು. ಈ ವಿಷಯದ ಬಗ್ಗೆ ಮನೆಯಲ್ಲಿ ಅನೇಕ ಬಾರಿ ಮಾತುಕತೆಗಳಾಗಿದ್ದು ನೆನಪಿಗೆ ಬಂದವು. ಆಗೆಲ್ಲ ಅತ್ತೆ ಮಾವ “ಆಗುತ್ತೇ ಬಿಡಮ್ಮಾ ಕೆಲವರಿಗೆ ದೂರದ ಫಲ. ನಾನು ನಿನ್ನ ಜಾತಕ ಪರಿಶೀಲಿಸಿದ್ದೇನೆ. ಸಂತಾನ ಭಾಗ್ಯವಿದೆ. ಬೇರೆಯವರ ಮಾತಿಗೆ ಏಕೆ ಬೆಲೆ ಕೊಢುತ್ತೀಯಾ. ನಾವೇನಾದರೂ ಎಂದಾದರೂ ಇದನ್ನು ಎತ್ತಿ ಮಾತನಾಡಿದ್ದಿದೆಯಾ?” ಎಂದು ಸಮಾಧಾನ ಪಡಿಸಿದರೆ ತನ್ನ ಪತಿ ಶ್ರೀನಿವಾಸ “ಏ ಭಾಗ್ಯಾ ನೀನ್ಯಾಕೆ ಇದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೀಯಾ. ನಾವೇನು ಮುದುಕರಾಗಿಬಿಟ್ಟಿದ್ದೇವೆಯೇ? ಅದಕ್ಕೆಲ್ಲ ಕಾಲ ಕೂಡಿ ಬರಬೇಕೆಂದು ರಮಿಸುತ್ತಿದ್ದ.
ಈಗ ತನ್ನ ಹೆತ್ತಮ್ಮನ ಬಾಯಲ್ಲೂ ಈ ಮಾತುಗಳು, ಒಡಹುಟ್ಟಿದವಳಾದ ಭಾವನಾಳಿಂದ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ, ಭಾಗ್ಯ ಯಾವುದಕ್ಕೂ ಉತ್ತರಿಸದೆ ಮೌನವಹಿಸಿದ್ದಳು. ಈ ತಾಕಲಾಟದಲ್ಲಿ ಮತ್ತೆರಡು ವರ್ಷಗಳು ಉರುಳಿದಾಗ ಭಾಗ್ಯಳಿಗೂ ಅವರೆಲ್ಲರ ಮಾತುಗಳ ಹಿಂದೆ ಇದ್ದ ಕಾಳಜಿ ಅರ್ಥವಾಗಿ ತಾನೂ ತಾಯಿಯ ಮನೆಗೆ ಬಂದಾಗಲೇ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡಳು. ತನ್ನ ದೇಹದಲ್ಲೇನೂ ದೋಷವಿಲ್ಲ ಎಂಬುದು ತಿಳಿಯಿತು. ವೈದ್ಯರು ಹಾಗೇ ನಿಮ್ಮವರನ್ನೂ ಒಮ್ಮೆ ಕರೆತನ್ನಿ, ಅವರನ್ನೂ ಪರೀಕ್ಷಿಸಿ ಏನಾದರೂ ನ್ಯೂನತೆ ಕಂಡುಬಂದರೆ ಚಿಕಿತ್ಸೆ ಮಾಡಬಹುದೆಂದು ಹೇಳಿದರು. ಅಲ್ಲದೆ ಕೆಲವು ಕಿವಿಮಾತುಗಳನ್ನೂ ಅವಳಿಗೆ ಹೇಳಿದರು. ಅವುಗಳನ್ನೆಲ್ಲ ಕೇಳಿದ ಭಾಗ್ಯ ಹಾಗೇ ಆಲೋಚಿಸಿದಾಗ ಇದು ಸಾಧ್ಯವೇ? ಜ್ಯೋತಿಷ್ಯದಲ್ಲಿ ಅತಿಯಾದ ನಂಬಿಕೆಯುಳ್ಳ ವ್ಯಕ್ತಿ ಆತ. ಅಲ್ಲದೆ ತನ್ನೊಡನೆ ಸಂಪರ್ಕ ಮಾಡುವಾಗಲೂ ಆ ದಿನಗಳಿಗೆ ಮುಹೂರ್ತವನ್ನು ಲೆಕ್ಕಹಾಕಿ ಬರುತ್ತಾರೆ. ಏನಾದರೂ ಪ್ರಶ್ನಿಸಿದರೆ ಯಾವ್ಯಾವುದೋ ಮುಹೂರ್ತದಲ್ಲಿ ಕೂಡಿದರೆ ಅದರಿಂದಾಗುವ ವ್ಯತಿರಿಕ್ತ ಪರಿಣಾಮಗಳು, ಜನಿಸಿದ ಮಕ್ಕಳ ಪ್ರವರಗಳನ್ನು ಪುರಾಣ ಕಥೆಗಳಿಂದ ಹೆಕ್ಕಿ ತೆಗೆದು ಹೇಳುತ್ತಾರೆ. ಇಂಥಹವರಿಗೆ ನಾನು ವೈದ್ಯರ ಬಳಿ ಪರೀಕ್ಷೆಗೆ ಬನ್ನಿ ಎಂದು ಕರೆದುಕೊಂಡು ಬರುವುದು ಸಾಧ್ಯವೇ?. ಅವ್ವಯ್ಯಾ ! ನೆನೆಸಿಕೊಂಡರೇ ಭಯವಾಗುತ್ತೆ. ಮದುವೆಯಾದ ನಂತರ ಮೊದಲ ರಾತ್ರಿಗೆ ಮುಹೂರ್ತವಿಟ್ಟೇ ತಾನೇ ಕಳುಹಿಸುವುದು ಸಂಪ್ರದಾಯ. ಹೂಂ ಸಿನಿಮಾ, ಕಥೆ ಕಾದಂಬರಿಗಳಲ್ಲಿ ಚಿತ್ರಿಸುವಂತೆ ನಾಯಕ, ನಾಯಕಿಯರು ಒಂದು ಸಾರಿ ಸಂಪರ್ಕ ಮಾಡಿದ್ದರಿಂದಲೇ ಒಡಲು ತುಂಬುವುದನ್ನು ನೋಡಿದಂತೆ, ಓದಿದಂತೆ ತನಗೇಕೆ ಆಗುತ್ತಿಲ್ಲ. ನನ್ನ ಹಣೆಯಲ್ಲಿ ಬರೆದಹಾಗೆ ಆಗಲಿ. ಎಂದುಕೊಂಡು ಗಟ್ಟಿ ಮನಸ್ಸು ಮಾಡಿಕೊಂಡು ತನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಳು ಭಾಗ್ಯ. ಈಗೀಗ ಹಿರಿಯರ ಬಾಯಿಂದಲೂ ನಿಡಿದಾದ ನಿಟ್ಟುಸಿರುಗಳು ಹೊರಹೊಮ್ಮುತ್ತಿದ್ದವು. ಅದನ್ನು ಸೂಕ್ಷ್ಮವಾಗಿ ಗಮನಿಸುತ್ತ ಮೂಕಳಂತೆ ಎತ್ತಲೋ ನೋಡುತ್ತ ನಿಂತಿದ್ದವಳನ್ನು ಕಂಡು ಆ ಹಿರಿಯರು “ ಮಗೂ, ನಾನು ಹೀಗೆ ಕೇಳಿದೆನೆಂದು ನೊಂದುಕೊಳ್ಳಬೇಡ. ಸಹಜವಾಗಿ ಹೇಳಿದೆ. ಹೋಗು ಶ್ರೀನಿವಾಸ ಕಾಯುತ್ತಿರಬಹುದು” ಎಂದು ತಮ್ಮ ಕೊಠಡಿಯಿಂದ ಹೊರಗೆ ಕಳುಹಿಸಿಕೊಟ್ಟರು.
ಹಿರಿಯರ ರೂಮಿನಿಂದ ಹೊರಬಂದು ಭಾಗ್ಯ ಅಡುಗೆಮನೆಗೆ ಹೋಗಿ ನೀರುತುಂಬಿದ ಜಗ್ಗೊಂದನ್ನು ಕೈಯಲ್ಲಿ ಹಿಡಿದು ಭಾರವಾದ ಮನಸ್ಸಿನಿಂದ ತನ್ನ ರೂಮಿನ ಕಡೆ ನಡೆದಳು. ಮಹಡಿ ಹತ್ತಿಬಂದ ಭಾಗ್ಯಳಿಗೆ ಅಲ್ಲಿನ ಪೋರ್ಟಿಕೋದಲ್ಲಿ ಶ್ರೀನಿವಾಸ ಒಂದಿಬ್ಬರು ಬಂಧುಗಳೊಡನೆ ಮಾತುಕತೆಯಲ್ಲಿ ತೊಡಗಿರುವುದು ಕಾಣಿಸಿತು.
ಸದ್ದಾಗದಂತೆ ತನ್ನ ರೂಮನ್ನು ಹೊಕ್ಕು ನೀರಿನ ಜಗ್ಗನ್ನು ಅಲ್ಲಿದ್ದ ಮೇಜಿನಮೇಲಿಟ್ಟು ಹಾಗೇ ಹಾಸಿಗೆಯನ್ನು ಝಾಡಿಸಿ ಸೊಳ್ಳೆಪರದೆಯನ್ನು ಕಟ್ಟೋಣವೆಂದು ನೋಡಿದರೆ ಅದಾಗಲೇ ಸಜ್ಜಾಗಿತ್ತು. ಅದನ್ನು ನೋಡಿ ಆಸಾಮಿ ಸದ್ಯಕ್ಕೆ ಮಲಗಲು ಬರಲಾರರೆಂದು ಅರ್ಥೈಸಿಕೊಂಡು ರೂಮಿನ ಬಾಗಿಲನ್ನು ಸ್ವಲ್ಪ ಮುಂದಕ್ಕೆ ಮಾಡಿ ಹಾಸಿಗೆಯ ಮೇಲೆ ಉರುಳಿಕೊಂಡಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35794
–ಬಿ.ಆರ್.ನಾಗರತ್ನ, ಮೈಸೂರು
ನಿಮ್ನ ಲೇಖನ ಚೆನ್ನಾಗಿ ಮೂಡಿ ಬರುತ್ತಿದೆ. ಮುಂದೆಯೂ ಇದೇ ರೀತಿ ಹೆಚ್ಚು ಹೆಚ್ಚು ಕೃತಿಗಳು ಹೊರಹೊಮ್ಮಲೆಂದು ಆಶಿಸುತ್ತೇನೆ ಶು ಭವಾಗಲಿ ಗೆಳತಿ
ತುಂಬಾ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಪೂರ್ಣಿಮಾ ಮೇಡಂ..ಹಾಗೂ ನಯನಮೇಡಂ.
ಬಹಳ ಸೊಗಸಾದ, ಆತ್ಮೀಯವಾದ ನಿರೂಪಣಾ ಶೈಲಿಯಲ್ಲಿ ಸಾಗುತ್ತಿರುವ ಕಥೆಗಾಗಿ ಧನ್ಯವಾದಗಳು ಮೇಡಂ.
ಧನ್ಯವಾದಗಳು ಶಂಕರಿ ಮೇಡಂ.
ಸೊಗಸಾಗಿ ಕಥೆ ಸಾಗುತ್ತಿದೆ.
ಧನ್ಯವಾದಗಳು ಪದ್ಮಿನಿ ಮೇಡಂ.
ಅತಿ ಸೂಕ್ಮ ವಿಚಾರಗಳಿಗೂ ಲೇಖಕಿ ಗಮನ ಹರಿಸಿರುವುದು ಕಾದಂಬರಿಯ ಓಘಕ್ಕೆ ಪೂರಕವಾಗಿದೆ.