ಮಹಾ ಗುರುಭಕ್ತ ‘ಶಾಂತಿ’ಮುನಿ
ಗುರುಶಿಷ್ಯ ಸಂಬಂಧವು ಪವಿತ್ರವಾದುದು, ಸರ್ವಕಾಲಿಕ ಶ್ರೇಷ್ಠವಾದುದು. ಅದು ಕೇವಲ ‘ಬಂದುಂಡು ಹೋಗುವ’ ಸಂಬಂಧವಲ್ಲ. ಬೆಳಗಿ ಬಾಳುವ ಭದ್ರಬುನಾದಿಯನ್ನು ತೋರಿಸುವಂತಾದ್ದು, ಯಾವುದೇ ಪೂಜಾ ಕೈಂಕರ್ಯದಲ್ಲೋ ಒಂದು ಸತ್ಕಾರ್ಯ ಆರಂಭಕ್ಕೋ ತಾಯಿ, ತಂದೆಯರಿಗೆ ಸಂಕಲ್ಪವಾದ ಕೂಡಲೇ ಗುರುವಿನ ಸ್ಥಾನ. ‘ಮಾತೃದೇವೋಭವ’ ‘ಪಿತೃದೇವೋಭವ’, ‘ಆಚಾರ್ಯದೇವೋಭವ’ ಎಂದು ಸಂಕಲ್ಪಿಸಿದ ಮೇಲಷ್ಟೇ ದೇವತಾ ಪ್ರಾರ್ಥನೆ, ಯೋಗ್ಯ ಗುರಿಯನ್ನು ತೋರಿಸುವ ಶ್ರೀಗುರುವಿನ ನೆಲ ನಮಗೆ ಬೇಕು. ಈ ನಿಟ್ಟಿನಲ್ಲಿ ಮಲೆಯಾಳದಲ್ಲೊಂದು ಸೂಕ್ತಿ ಇದ. ‘ಗುರು ನೆಲೆ ಇಲ್ಲಾದೆ ಒರು ನೆಲೆ ಇಲ್ಲ’ ಎಂಬುದಾಗಿ.
ತನ್ನ ಶಿಷ್ಯನಾದವನು ಬುದ್ಧಿವಂತನಾಗಿ ಹೆಸರುವಾಸಿಯಾಗಬೇಕು, ತನ್ನನ್ನು ಮೀರಿಸುವಂತಹ ಮೇಧಾವಿಯಾಗಬೇಕೆಂದು, ಯೋಗ್ಯನಾದ ಗುರು ಬಯಸುತ್ತಾನೆ. ತನ್ನೆಲ್ಲ ವಿದ್ಯೆಯನ್ನು ನಿರ್ವಂಚನೆಯಿಂದ ಆಪ್ತ ಶಿಷ್ಯನಿಗೆ ಧಾರೆಯರೆಯುತ್ತಾನೆ. ಅಲ್ಲದೆ ಹಲವಾರು ಸತ್ವಪರೀಕ್ಷೆಗೊಳಪಡಿಸಿ ಶಿಷ್ಯನ ಬುದ್ಧಿಮತ್ತೆ ಪರೀಕ್ಷಿಸುತ್ತಾನೆ. ಹೀಗೆ ಶಿಷ್ಯನನ್ನು ಒರೆಹಚ್ಚುವ ಪ್ರಸಂಗವು ಪುರಾಣಗಳಿಂದ ಬೇಕಾದಷ್ಟು ಸಿಗುತ್ತದೆ. ಧೌಮ್ಯರು ಅರುಣಿಯನ್ನು ಪರೀಕ್ಷಿಸುವುದು, ಭಾರವಿಯನ್ನು ಅವನ ಗುರುಗಳು ತನ್ನ ಮಗನಿಗಿಂತಲೂ ಹೆಚ್ಚಾಗಿ ಶಿಕ್ಷೆ ಕೊಟ್ಟು ಕಲಿಸುವುದು, ಹಾಗೆಯೇ ಅರ್ಜುನನ ಗುರಿಯನ್ನು ಗುರುಗಳಾದ ದ್ರೋಣರು ಪತ್ತೆ ಹಚ್ಚುವುದು. ಹೀಗೆ ಹಲವಾರು ದೃಷ್ಟಾಂತಗಳು ನಮ್ಮ ನೆನಪಿಗೆ ಬರುತ್ತವೆ. ಗುರುಕೃಪೆಗೆ ಪಾತ್ರರಾದವರಿಗೆ ವರ ಕೊಡುವುದು, ಮುಂದಿನ ಭವಿಷ್ಯ ಸುಗಮಗೊಳ್ಳುವುದಕ್ಕೆ ದಾರಿ ಮಾಡುವುದನ್ನೂ ಓದಿದ್ದೇವೆ. ಯಾವುದೇ ಕಾರಣಕ್ಕೂ ಗುರುಕೋಪ ಕಟ್ಟಿಕೊಳ್ಳಬಾರದು. ಗುರು ನಮ್ಮಲ್ಲಿ ಮುನಿಸದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿ ಗುರುವಿನ ಮೇಲೆ ಭಕ್ತಿ, ಪ್ರೀತಿ ವಿಶ್ವಾಸ
ಗಳಿಸಲೇಬೇಕು. ಇದು ನಮ್ಮ ಸನಾತನ ಪರಂಪರೆಯಿಂದ ಬಂದ ಸಂಸ್ಕೃತಿ, ಗುರುವಿನ ಪ್ರೀತಿಗಾಗಿ, ಆತನ ಆದೇಶ ಪಾಲನೆಗಾಗಿ, ಭಕ್ತಿಪೂರ್ವಕದಿಂದ ತನ್ನ ಹೆಬ್ಬೆರಳನ್ನೇ ದಾನ ಮಾಡಿದ ಏಕಲವ್ಯ ಮಹಾಗುರುಭಕ್ತ. ಆತನ ಹೆಸರು ಆ ಚಂದ್ರಾರ್ಕವಾಗಿ ಉಳಿದಿದೆ. ಏಕಲವ್ಯನ ಕತೆಯನ್ನು ಇದೇ ಅಂಕಣದಲ್ಲಿ ಈ ಮೊದಲೇ ಬರೆದಿರುತ್ತೇನೆ, ಆದರೆ ಈ ಬಾರಿ ಒಂದು ವಿಚಿತ್ರ ಸನ್ನಿವೇಶದಲ್ಲಿ ಒಬ್ಬ ಶಿಷ್ಯೋತ್ತಮನು ತನ್ನ ವೈಯಕ್ತಿಕ ಪ್ರಾರ್ಥನೆಯನ್ನು ಬಿಟ್ಟು ಗುರುವಿನ ಸಾಂಸಾರಿಕ ಪುರೋಭಿವೃದ್ಧಿಗಾಗಿ ಅಗ್ನಿದೇವನಲ್ಲಿ ಮೊರೆಯಿಡುವುದನ್ನು ನೋಡೋಣ.
ಪೂರ್ವಕಾಲದಲ್ಲಿ ‘ಭೂತಿ’ ಎಂಬ ಮಹರ್ಷಿಯೊಬ್ಬನಿದ್ದ. ಆತನಿಗೆ ಮಕ್ಕಳಿರಲಿಲ್ಲ. ಆದರೆ ಅವನಲ್ಲಿ ವೇದಾಧ್ಯಯನ ಮಾಡುವ ಒಳ್ಳೆಯ ಶಿಷ್ಯ ಸಮುದಾಯವಿತ್ತು. ‘ಭೂತಿ’ ಬಹಳ ಕೋಪಿಷ್ಟನಾಗಿದ್ದ. ಈತನಿಗೊಬ್ಬ ಶಾಂತ ಸ್ವಭಾವದ ಶಿಷ್ಯನಿದ್ದ. ಆತನ ಹೆಸರು ‘ಶಾಂತಿ’ ಎಂದಾಗಿತ್ತು. ಈತನು ಅಂಗೀರಸ ಮುನಿಯ ಪುತ್ರ, ಹೀಗಿರಲೊಮ್ಮೆ ‘ಭೂತಿ’ ಮಹರ್ಷಿಗೆ ಬೇರೆ ಕಡೆಗೆ ಯಾಗ ಮಾಡಿಸುವುದಕ್ಕೆ ಹೋಗಬೇಕಾಗಿ ಬಂತು. ಆಗ ಶಿಷ್ಯನಾದ ‘ಶಾಂತಿ’ಯನ್ನು ಕರೆದು ‘ನಾನು ಬರುವುದರೊಳಗೆ ಇಲ್ಲಿಯ ಯಜ್ಞದ ಅಗ್ನಿಯನ್ನು ಸಂರಕ್ಷಣೆ ಮಾಡಿಕೊಂಡು ಅತ್ತಿ ಸಮಿತ್ತುಗಳನ್ನು ಹೋಮಿಸುತ್ತಾ ಇರು’ ಎಂದು ನೇಮಿಸಿ ಹೊರಟು ಹೋಗುತ್ತಾನೆ.
‘ಭೂತಿ’ ಮಹರ್ಷಿ ಹಿಂದಿರುಗಿ ಬರಲು ಕೆಲವಾರು ದಿನಗಳು ಹಿಡಿಯುತ್ತವೆ. ಯಜ್ಞಕ್ಕೆ ಅತ್ತಿ, ಸಮಿತ್ತು, ಫಲಪುಷ್ಪಗಳು ದಿನವಹಿ ಬೇಕಷ್ಟೆ? ಶಾಂತಿಯು ಫಲಪುಷ್ಪಾದಿಗಳನ್ನು ತರಲು ಕಾಡಿಗೆ ಹೋಗುತ್ತಾನೆ. ಶಾಂತಿಯು ಎಲ್ಲವನ್ನೂ ಜೋಡಿಸಿಕೊಂಡು ಬರುವಷ್ಟರಲ್ಲಿ ಅಗ್ನಿಯು ಮಾಯವಾಗಿದ್ದ (ಅಗ್ನಿ ನಂದಿಹೋಗಿತ್ತು). ಈಗ ಏನು ಮಾಡೋಣ. ಆಶ್ರಮದಲ್ಲಿ ಬೇರೆ ಯಾರೂ ಇರಲಿಲ್ಲ. ಶಾಂತನು ಬಹಳ ಚಿಂತಾಕ್ರಾಂತನಾದ. ಹಿಂದಿನ ಕಾಲದಲ್ಲಿ ಈಗಿನಂತೆ ಬೆಂಕಿಕಡ್ಡಿ ಗೀರಿ ಅಗ್ನಿ ಸೃಷ್ಟಿಸುತ್ತಿರಲಿಲ್ಲ. ಯೋಗ್ಯ ದಿನಗಳಲ್ಲಿ, ಯೋಗ್ಯ ವಸ್ತು (ಅರಣಿ ಎಂಬ ಕೊರಡನ್ನು ಘರ್ಷಿಸಿ)ವಿನಿಂದ ಎಲ್ಲರೂ ಸೇರಿ ಅಗ್ನಿ ಉತ್ಪತ್ತಿ ಮಾಡುತ್ತಿದ್ದರು. ಮುಂದೆ ಆ ಅಗ್ನಿಯನ್ನು ಕಾಪಾಡಿಕೊಂಡು ಬರುತ್ತಿದ್ದರು.
ಈಗ ‘ಶಾಂತಿ’ಯು ಭಯವಿಹ್ವಲನಾದ ಗುರುವು ತೆರಳುವಾಗ ಅಗ್ನಿಯನ್ನು ಸಂರಕ್ಷಣೆ ಮಾಡಲು ಸೂಚಿಸಿದ್ದರು. ಹಿಂದಿರುಗಿ ಬಂದಾಗ ವಿಷಯ ತಿಳಿದು ಕೋಪದ ಭರದಲ್ಲಿ ಶಾಪವೇನಾದರೂ ಕೊಟ್ಟರೆ! ತನ್ನ ಉಳಿಗಾಲವಿಲ್ಲ ಎಂದು ಚಿಂತಿಸಿದ ಅವನು ಅಗ್ನಿಯನ್ನು ಸ್ತುತಿಸತೊಡಗಿದ. ಬೇಗನೆ ಅಗ್ನಿಯು ಒಲಿಯಲಿಲ್ಲ. ಏಕಾಗ್ರಚಿತ್ತದಿಂದ ಬೇಡಿದ. ಊಹೂಂ ಅಗ್ನಿ ಪ್ರಸನ್ನನಾಗಲಿಲ್ಲ. ಆದರೆ ‘ಶಾಂತಿ’ಯು ಬಿಡಲಿಲ್ಲ, ಪಟ್ಟು ಬಿಡದೆ ಪ್ರಲಾಪಿಸಿ ಪ್ರಾರ್ಥಿಸಿದ, ಶಾಂತಿಯ ಭಕ್ತಿಗೆ ಕೊನೆಗೂ ಅಗ್ನಿದೇವ ಪ್ರತ್ಯಕ್ಷನಾದ. ಯಜ್ಞಕುಂಡ ಉರಿಯಿತು. ಅಗ್ನಿದೇವ ಅಲ್ಲಿಗೇ ಬಿಡದೆ ಹೀಗೆ ಹೇಳಿದ ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನ್ನ ಸಲುವಾಗಿ ಇಷ್ಟಾರ್ಥಗಳೇನಾದರೂ ಇದ್ದರೆ ಕೇಳು ಕರುಣಿಸುತ್ತೇನೆ’ ಎಂದ.
ಆಗ ‘ಶಾಂತಿ’ಯು ಅಗ್ನಿದೇವಾ…., ನನಗಾಗಿ ಏನೂ ಬೇಡ. ಆದರೆ ನನ್ನ ಗುರುಗಳಿಗಾಗಿ ಒಂದು ವರವನ್ನು ಕರುಣಿಸಬೇಕು’ ಎಂದ. ‘ಇಲ್ಲ…. ನಿನ್ನ ಹೊರತಾಗಿ ಬೇರೆಯವರಿಗೆ ನೀನು ವರವನ್ನು ಕೇಳಬೇಡ’ ಎಂದ ಅಗ್ನಿ, ಆಗ ‘ಶಾಂತಿ’ಯು ‘ಅಗ್ನಿದೇವಾ….. ಗುರುಗಳ ಹಿತ ಕಾಯುವುದು ಶಿಷ್ಯನಾದ ನನ್ನ ಕರ್ತವ್ಯ ತಾನೇ? ನನ್ನ ಇಷ್ಟಾರ್ಥ ಈಡೇರಿಸುತ್ತೇನೆ ಎಂದಿದ್ದೀರಿ. ನನ್ನ ಇಷ್ಟಾರ್ಥವೆಂದರೆ ಗುರುಗಳಿಗೆ ಇದುವರೆಗೆ ಸಂತಾನ ಭಾಗ್ಯ ಇಲ್ಲ. ಅವರಿಗೆ ಸಂತಾನವಾದರೆ ನನ್ನ ಇಷ್ಟಾರ್ಥ ಈಡೇರಿದಂತೆ. ಆದ್ದರಿಂದ ನೀವಿದನ್ನು ಕರುಣಿಸಲೇಬೇಕು’ ಎಂದ. ಈಗ ಅಗ್ನಿದೇವನಿಗೆ ನಿರ್ವಾಹವಿಲ್ಲದಾಯಿತು. ನಿನ್ನ ಇಷ್ಟಾರ್ಥ ಈಡೇರಿಸುತ್ತೇನೆ ಎಂಬುದಾಗಿ ಮಾತು ಕೊಟ್ಟಾಗಿದೆ, ಸರಿ! ತಥಾಸ್ತು ಎಂದ ಅಗ್ನಿದೇವ.
ಕಾಲಕ್ರಮದಲ್ಲಿ `ಭೂತಿ’ಗೆ ಒಬ್ಬ ಪುತ್ರ ಜನಿಸಿದ. ಅಗ್ನಿಯ ಅನುಗ್ರಹದಿಂದ, ಶಿಷ್ಯನ ಪ್ರಾರ್ಥನೆಯಿಂದ ಜನಿಸಿದ ಮಗನೇ ಭೌತ್ಯ, ಇವನು ಮುಂದೆ ಮಹಾ ತಪಸ್ವಿಯಾಗುತ್ತಾನೆ. ಸೂರ್ಯ-ಚಂದ್ರರನ್ನೂ, ಪಂಚಭೂತಗಳನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯು ‘ಭೌತ್ಯ’ನಿಗೆ ಸಿದ್ಧಿಸುತ್ತದೆ. ಈತನು ಮುಂದೆ ಮನ್ವಂತರಾಧಿಪತಿಯಾಗುತ್ತಾನೆ.
‘ಶಾಂತಿ’ಯು ಮೊದಲೇ ಶಾಂತ ಸ್ವಭಾವದವನು. ಆದರೆ ಮುಂದೆ ಕೋಪಿಷ್ಟರು ಸ್ಪರ್ಶಿಸಿದಾಗ ಅವರೂ ತನ್ನಿಂತಾನೇ ಶಾಂತರಾಗುವ ಒಂದು ಮಹಾಗುಣವೂ ಈ ಮಹಾ ಗುರುಭಕ್ತನಿಗೆ ಒದಗುತ್ತದೆ. ‘ಶಾಂತಿ’ ಮುನಿಯಂತಹ ತ್ಯಾಗರೂಪಿ ಶಿಷ್ಯರು ಸದಾಕಾಲವೂ ಪ್ರಾತಃಸ್ಮರಣೀಯರು.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಸುರಹೊನ್ನೆ ಅಡ್ಮಿನರಿಗೆ ಹಾಗೂ ಓದುಗರಿಗೆ ಧನ್ಯವಾದಗಳು.
ಮರೆತು ಹೋಗಿದ್ದ …ಗುರು ಶಿಷ್ಯರ..ನಿಸ್ವಾರ್ಥ… ಅನುಬಂಧದ ಕಥೆ.. ನೀಡಿದ ನಿಮಗೆ.. ಧನ್ಯವಾದಗಳು ಮೇಡಂ.
Nice one
ಗುರು ಶಿಷ್ಯರ ಅತ್ಯಪೂರ್ವ ಸಂಬಂಧವನ್ನು ನಿರೂಪಿಸುವ ಅಪರೂಪದ ಕಥೆ…ಧನ್ಯವಾದಗಳು ವಿಜಯಕ್ಕ.