ಶಂಖದ ಮಹಿಮೆ

Share Button

ಶಂಖ ಪುರಾತನ ಕಾಲದಿಂದಲೂ ಪ್ರಸಿದ್ಧಿ. ಹಲವಾರು ಸ್ತೋತ್ರಗಳಲ್ಲಿ ಇದು ಉಲ್ಲೇಖವಾಗಿದೆ. ಮಹಾಲಕ್ಷ್ಮಿಸ್ತೋತ್ರದಲ್ಲಿ ‘ಶಂಖಚಕ್ರಗದಾಹಸ್ತ ಮಹಾಲಕ್ಷ್ಮಿ’ ಎಂದೂ ‘ಚತುರ್ಭುಜಾತ್ತಚಕ್ರಾನಿ ಗದಾ ಶಂಖಾದ್ಯುದಾಯುಧ’ ಎಂದು ಕೃಷ್ಣಸ್ತೋತ್ರದಲ್ಲೂ ಉಲ್ಲೇಖವಾಗಿರುವುದು ಇದಕ್ಕೆ ಸಾಕ್ಷಿ. ಶಂಖಕ್ಕೆ ಅತ್ಯಂತ ಪವಿತ್ರವಾದ ಸ್ಥಾನ ಭಾರತೀಯ ಸಂಸ್ಕೃತಿಯಲ್ಲಿದೆ. ಶಾಸ್ತ್ರಗಳ ಪ್ರಕಾರ ಶಂಖವು ಮನೆಯಲ್ಲಿದ್ದ ಮಾತ್ರದಿಂದಲೇ ಮನೆಯಲ್ಲಿರುವ ಋಣಾತ್ಮಕ ಶಕ್ತಿ, ಉಪಶಮನವಾಗಿ ಧನಾತ್ಮಕ ಕಂಪನಗಳು ಉಂಟುಮಾಡುವುದರಿಂದ ಮನೆಯ ವಾಸ್ತು ದೋಷವು ನಿವಾರಣೆಯಾಗಬಲ್ಲದು. ಇದರಲ್ಲಿ ದೈವ ಶಕ್ತಿ ಇದೆ ಎಂಬ ನಂಬಿಕೆ ಇದೆ.

ಶಂಖಗಳ ಮೂಲದ ಬಗ್ಗೆ ತಿಳಿಯುವುದು ಸೂಕ್ತ ಎನಿಸುತ್ತದೆ. ಶಂಖಗಳು ಸಮುದ್ರದಲ್ಲಿ ದೊರಕುತ್ತವೆ. ಸಮುದ್ರ ಜೀವಿಯಾದ ಒಂದು ಜಾತಿಯ ಮೃದ್ವಂಗಿಗಳಿಂದ ಶಂಖವು ನಿರ್ಮಿತವಾಗುತ್ತದೆ. ಎಲ್ಲಾ ಸಮುದ್ರದಲ್ಲೂ ಶಂಖ ದೊರೆತರೂ ಇಂಡೋ ಫೆಸಿಫಿಕ್ ಸಮುದ್ರದಲ್ಲಿ ಹೆಚ್ಚಾಗಿ ಸಿಗುವುದು ವಿಶೇಷ. ಇದರ ಪ್ರಾಣಿ ವಿಜ್ಞಾನದ ಪ್ರಕಾರದ ಹೆಸರು ಟರ್ಬಿನೆಲ್ಲಾ ಪಿರರಂ ಎಂದು. ಶಂಖಗಳಲ್ಲಿ ಎಡಮುರಿ ಹಾಗೂ ಬಲಮುರಿ ಎಂಬ ಎರಡು ಪ್ರಕಾರಗಳಿವೆ. ದೇವರ ಪೂಜೆಗೆ, ಅಭಿಷೇಕಕ್ಕೆ ಮತ್ತು ದಿನನಿತ್ಯ ಊದಲು ಎಡಮುರಿ ಶಂಖವನ್ನು ಬಳಸುತ್ತಾರೆ. ಬಲಮುರಿ ಶಂಖದಲ್ಲಿ ದೈವಸಾನಿಧ್ಯ ಹೆಚ್ಚಾಗಿರುವುದರಿಂದ ದೇವರ ಪೀಠದಲ್ಲಿಟ್ಟು ಪೂಜಿಸುತ್ತಾರೆ. ಈ ತರದ ಶಂಖಗಳು ತೀರ ವಿರಳ. ಶಂಖವನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಮನೆಗಳಲ್ಲಿ ಮಂಗಾಳರತಿಯ ಮೊದಲು ಊದುವ ಪದ್ಧತಿ ಸಾಮಾನ್ಯ.

ಶಂಖದಿಂದ ವೈದ್ಯಕೀಯ ಉಪಯೋಗಗಳ ಬಗೆಗೆ ಗಮನ ಹರಿಸಿದರೆ, ಅದರ ಪ್ರಭಾವದ ಅರಿವಾದೀತು. ಆಧುನಿಕ ವೈದ್ಯ ಶಾಸ್ತ್ರದಲ್ಲಿ ಶಂಖದ ಉಪಯೋಗಗಳನ್ನು ಅಳವಡಿಸಿರುವುದು ನಿಜಕ್ಕೂ ಸ್ಥುತ್ಯಾರ್ಹ. ಇದಕೋಸ್ಕರವೇ ಸ್ಪೈರೋಮೀಟರ್ (Spirometer) ಎಂಬ ಒಂದು ಉಪಕರಣ ಸಿದ್ಧಪಡಿಸಿದ್ದಾರೆ. ಇದು ಕೈನಲ್ಲಿ ಹಿಡಿಯುವಂಥಹ ಒಂದು ಸಾಧನ. ಇದನ್ನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹಾಗೂ ಶ್ವಾಸಕೋಶದ ಸಮಸ್ಯೆಯಿರುವ ರೋಗಿಗಳಿಗೆ ಅವರ ಶ್ವಾಸಕೋಸದ ಪುನಶ್ಚೇತನಕ್ಕೆ ಇದನ್ನು ಬಳಸುತ್ತಾರೆ. ಇದರಲ್ಲಿ ರೋಗಿಯು ನಿಧಾನವಾಗಿ ಧೀರ್ಘವಾಗಿ ಗಾಳಿಬಿಟ್ಟಾಗ ಚೆಂಡಿನಂತಹ ಒಂದು ವಸ್ತು ಮೇಲೇರುತ್ತದೆ. ಶಂಖ ಊದುವುದರಿಂದ ಕತ್ತಿನ ಸ್ನಾಯುಗಳು, ಎದೆ ಹಾಗು ಮೂತ್ರನಾಳಗಳ ಮತ್ತು ಮೂತ್ರದೋಷಗಳ ಶುದ್ಧಿಗೂ ಸಹಾಯವಾಗುತ್ತದೆ. ಶಂಖ ಊದುವಿಕೆ ಥೈರಾಯ್ಡ್ ಸಮಸ್ಯೆಯವರಿಗೂ ಶಮನ ನೀಡಬಲ್ಲದು ಹಾಗೂ ಧ್ವನಿತಂತು (vocal cord) ವಿನ ಬಲಾಡ್ಯತೆಗೂ ಸಹಕರಿಸುತ್ತದೆ.

PC : Internet

ಶಂಖ ಊದಿದಾಗ ಉತ್ಪತ್ತಿಯಾಗುವ ಓಂಕಾರ ನಾದವು ಮಾನವನ ನರನಾಡಿಗಳನ್ನ ಪ್ರಚೋದಿಸಿ, ಮನಸ್ಸು ಹಗುರವಾಗಿ ಅಧ್ಯಾತ್ಮದ ಕಡೆಗೆ ಒಲವು ಮೂಡಿಸುವುದರಲ್ಲಿ ಸಂಶಯವಿಲ್ಲ. ಅಸ್ತಮಾ ರೋಗಿಗಳು ಶಂಖ ಊದುವುದರಿಂದ ರೋಗ ನಿವಾರಿಸಿಕೊಳ್ಳಬಹುದು. ಇದು ಶ್ವಾಸಕೋಶಗಳಿಗೆ ಅತ್ಯುತ್ತಮ ವ್ಯಾಯಾಮವೂ ಹೌದು. ನಿಗದಿತ ಅವಧಿಯವರೆಗೆ ಉಸಿರು ಬಿಗಿಹಿಡಿದು ಶಂಖವನ್ನು ಊದುವುದರಿಂದ ಶ್ವಾಸಕೋಶದ ಒಳಗೆ ಇರುವ ಮಲಿನವಾದ ವಾಯುವು (ಇಂಗಾಲದ ಡೈ ಆಕ್ಸೈಡ್) ಹಾಗೂ ಸೂಕ್ಷ್ಮಾಣುಗಳು ಹೊರಬಂದು ಒಳ್ಳೆಯ ಗಾಳಿ (ಆಮ್ಲಜನಕ) ಶ್ವಾಸಕೋಶ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಉಂಟಾಗುತ್ತದೆ. ಸಂಗೀತಗಾರರು ಕೆಲವು ವೇಳೆ ತಮ್ಮ ಧ್ವನಿಯನ್ನು ಶೃತಿಗೊಳಿಸಲು ಶಂಖವನ್ನು ಬಳಸುವುದುಂಟು. ಶಂಖನಾದದ ತರಂಗಗಳು ಎಷ್ಟು ದೂರದವರೆಗೆ ಚಲಿಸುವುದೋ ಅಲ್ಲಿಯವರೆಗೆ ರೋಗಾಣುಗಳು, ವಿಷಾಣುಗಳು ನಾಶವಾಗುತ್ತವೆ. ಹಾಗೂ ಗಿಡ, ಮರಗಳಲ್ಲಿನ ಕ್ರಿಮಿಕೀಟಗಳು ನಾಶವಾಗುತ್ತವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಚಿಕ್ಕಮಕ್ಕಳಿಗೆ ಶಂಖ ಊದಿಸಿದರೆ ಮನೋಬಲವು ಹೆಚ್ಚುತ್ತದೆ. ಇನ್ನೊಂದು ಪ್ರಬಲವಾದ ಒಂದು ಉಪಯೋಗವೆಂದರೆ, ಶಂಖ ಊದುವುದರಿಂದ ಉಗ್ಗುವಿಕೆ ನಿವಾರಣೆಯಾಗುತ್ತದೆ. ಶಂಖದಲ್ಲಿ ಪೂಜೆ, ಅಭಿಷೇಕ ಮಾಡಿದ ತೀರ್ಥವು ಪವಿತ್ರ ತೀರ್ಥವೆನ್ನಲಾಗಿದೆ. ಶಂಖದಲ್ಲಿ ರಾತ್ರಿ ಶೇಖರಿಸಿಟ್ಟ ಹಾಲನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಮಕ್ಕಳು ಸೇವಿಸಿದರೆ. ಅವರ ಸ್ಮರಣ ಶಕ್ತಿ ಹೆಚ್ಚುವುದಲ್ಲದೆ, ಕಣ್ಣಿನ ದೋಷವಿದ್ದರೆ ಅದೂ ನಿವಾರಣೆಯಾಗುತ್ತದೆ. ಅಲ್ಲದೇ ಶಂಖದ ನೀರನ್ನು ಬೆಳಗ್ಗೆ ಸೇವಿಸುವುದರಿಂದ ಬಂಜೆತನ ನಿವಾರಣೆಯಾಗುತ್ತದೆಂಬ ನಂಬಿಕೆ ಇದೆ. ಈ ನೀರಿನ ಸೇವನೆ ಹಾಗೂ ಶಂಖ ಊದುವುದರಿಂದ ವೃದ್ಧಾಪ್ಯವನ್ನು ಮುಂದೂಡಬಹುದೆಂಬ ನಂಬಿಕೆ ಸಹ ಇದೆ.

ಇನ್ನೂ ಪುರಾಣದ ಹಲವಾರು ಪ್ರಸಿದ್ಧರಿಗೆ ಸಂಬಂಧಿಸಿದ ಶಂಖಕ್ಕೆ ಅದರದೇ ಹೆಸರಿದೆ. ಕೃಷ್ಣನ ಶಂಖಕ್ಕೆ ವಿಜಯ ‘ಪಾಂಚಜನ್ಯ’, ಧರ್ಮರಾಯನದು ‘ಅನಂತವಿಜಯ’, ಭೀಮನದು ‘ಪೌಂಡ್ರಕ’, ಅರ್ಜುನದು ‘ದೇವದತ್ತ’, ನಕುಲನದು ‘ಸುಘೋಷ’, ಸಹದೇವನದು ‘ಮಣಿ ಪುಷ್ಪಕ’, ಮಹಾಭಾರತ ಯುದ್ಧ ಪ್ರಾರಂಭಕ್ಕೆ ಮುನ್ನ ಪ್ರತಿದಿನ ಶಂಖ ಧ್ವನಿ ಮಾಡುವ ಪರಿಪಾಠವಿತ್ತು. ಕೃಷ್ಣನ ‘ಪಾಂಚಜನ್ಯ’ ಮೊಳಗಿದರೆ ಅಕ್ಷೋಹಿಣಿ ಸೈನ್ಯದ ಜಂಘಾಬಲವೇ ಉಡುಗಿ ಹೋಗುತ್ತಿತ್ತಂತೆ. ಕೆಲವರ ಪ್ರಾಣಪಕ್ಷಿಯೇ ಹಾರಿ ಹೋಗುತ್ತಿತ್ತಂತೆ. ಶಂಖನಾದಕ್ಕೆ ಅಂಥಹ ಶಕ್ತಿ ಇದೆ. ಶಂಖ ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ಕೆಟ್ಟದನ್ನು ಹಾಗೂ ಕಲುಷಿತವನ್ನು ನಿವಾರಣೆ ಮಾಡುವುದು ಎಂಬರ್ಥ. ವಾಸ್ತುಶಾಸ್ತ್ರದ ಪ್ರಕಾರ ಶಂಖವನ್ನು ದೇವರ ಕೋಣೆಯಲ್ಲಿ ಬಲಭಾಗಕ್ಕೆ ಇಡಬೇಕೆಂಬ ಹಾಗೂ ಅದರ ಊದುವ ಭಾಗ ಊರ್ಧ್ವ ಮುಖದಲ್ಲಿರಬೇಕೆಂಬ ನಿಯಮವಿದೆ.

ಹೀಗೆ ಶಂಖದ ಉಪಯೋಗ ವರ್ಣನಾತೀತ. ನಾವೆಲ್ಲರೂ ದಿನವೂ ಶಂಖನಾದ ಮಾಡಿ ಕೃತಾಥರಾಗೋಣವೇ? ನೀವೇನಂತೀರಿ?

-ಕೆ.ರಮೇಶ್ , ಮೈಸೂರು

2 Responses

  1. ಶಂಖದ…ಬಗ್ಗೆ ..ಲೇಖನ.. ಮಾಹಿಪೂರ್ಣವಾಗಿತ್ತು..
    ಅಧ್ಯಾತ್ಮಿಕ… ಜೊತೆಯಲ್ಲಿ ವೈಜ್ಞಾನಿಕ.. ಉಪಯೋಗ…ಪಡಿಮೂಡಿಸಿರುವ ರೀತಿ ಚೆನ್ನಾಗಿದೆ… ಧನ್ಯವಾದಗಳು ಸಾರ್.

    .

  2. ನಯನ ಬಜಕೂಡ್ಲು says:

    ಮಾಹಿತಿ ಪೂರ್ಣ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: