ಸಾವೆಂಬ ಸಂಗಾತಿ
ಮೊನ್ನೆ ಕಂಡವರು ಇಲ್ಲೆ ಕುಳಿತವರು
ತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರು
ಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿ
ನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆ
ತಲೆಯ ಒಲೆತದ ಭಂಗಿ ಕಣ್ತುಂಬಿ ನಿಂತಿದೆ
ಪರಿಚಿತದ ಮೈಗಂಧ ನಾಸಿಕವ ಬಿಟ್ಟಿರದು
ಸ್ನೇಹ ಸ್ಪರ್ಶದ ಬಿಸುಪು ಆರದಿಹುದು
ಮೈಕುಲುಕು ನಗೆಯ ಅಲೆ ವರ್ತುಲದಿ ಸುತ್ತಿಹುದು
ಸಾವೆಂಬ ಸಂಗಾತಿ ಕರೆದ ಮಾತ್ರಕೆ ಹೀಗೆ ತೆರಳುವುದೆ?
ಹಿಂದಿರುಗಿ ನೋಡದೆಯೆ ಹೀಗೆ ತೆರಳುವುದೆ?
ಜೀವನದ ಸಂಗಾತಿ ಏರುಗಂಟಲ ಶೋಕದುಮ್ಮಳದಿ ತತ್ತರ
ಎಲ್ಲಿ ಹೋದೆಯೋ ಸಖನೆ ಒಡಲಕುದಿಯನು ತಣಿಸೆ ಬಾಹತ್ತರ
ಅದೆ ಸೂರ್‍ಯ ಅದೆ ಭೂಮಿ, ಅದೆ ಗಾಳಿ ಅದೆ ಆಕಾಶ
ಸುತ್ತಮುತ್ತಲು ಸುಳಿವ ಮಂದಿ ನೂರು
ವಿಲವಿಲದ ಒಡಲ ಉರಿ ಆರಿಸುವರ್ಯಾರು?
ಕೈನೀಡಿ ಕರೆದೆತ್ತಿ ಬಾಳ ನಾವೆಯನೇರಿ
ಶೂನ್ಯಸಾಗರ ಮಧ್ಯೆ ಮರೆಯಾದೆಯಲ್ಲೊ
ಕನಸಿಲ್ಲ ಮನಸಿಲ್ಲ ಭೋರ್ಗರೆವ ಶೂನ್ಯ
ಬರುವಾಗಲೂ ಒಂಟಿ ತೆರಳುವಾಗಲು ಒಂಟಿ
ಜನಸಮುದ್ರದ ಮಧ್ಯೆ ತೀರ ಒಂಟಿ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರಮೇಲಣ ಗುಳ್ಳೆ ನಿಜವಲ್ಲ ಹರಿಯೇ!
–ಡಾ.ಮಹೇಶ್ವರಿ.ಯು
ಅಧ್ಯಾತ್ಮಿಕ ..ನೆಲಗಟ್ಟಿನ..ಮೇಲೆ ಸುತ್ತುವರದ..ಕವನ..ಬರುವಾಗ ಲೂ ಒಂಟಿ…ಹೋಗುವಾಗಲೂ..ಒಂಟಿ… ಗೊತ್ತಿದ್ದೂ ಬಡಿದಾಡುತ್ತೇವೆ…ನಿರಾಯಾಸ ಮರಣ….ಸಿಕ್ಕವರೇ …ಪುಣ್ಯವಂತರು..ಚಂತನೆಗೆ ಹಚ್ಚಿದ..ಕವನ ಧನ್ಯವಾದಗಳು ಮೇಡಂ
ಚೆನ್ನಾಗಿದೆ ಕವನ
ಈ ಸಾವೇ ಹೀಗೆ *ಸುಳಿವು ನೀಡದೆ ಸುಳಿದು ಬಿಡುತ್ತದೆ.ಚೆನ್ನಾದ ಕವನ
ಧನ್ಯವಾದಗಳು ಎಲ್ಲರಿಗೂ
ಕವನ ಚೆನ್ನಾಗಿದೆ.
ಚೆನ್ನಾಗಿದೆ.
Super kavithe by U Maheshwari.
ಮನಕಲಕುವ ಪದಪುಂಜಗಳನ್ನೊಳಗೊಂಡ ಭಾವನಾತ್ಮಕ ಕವಿತೆ.