ಪುಸ್ತಕ-ನೋಟ

ಪುಸ್ತಕ : ‘Millefeuille’ (ಮಿಲ್ಫಾಯ್), ಲೇ: ಅವಂತಿ ರಾವ್

Share Button
ನಯನ ಬಜಕೂಡ್ಲು

ಪುಸ್ತಕ :- ”Millefeuille”_ (ಮಿಲ್ಫಾಯ್)
ಲೇಖಕರು :- ಅವಂತಿ ರಾವ್

ಸಂಬಂಧಗಳು ಬೆಸೆಯುವ ಪರಿಯೇ ಒಂದು ವಿಚಿತ್ರ, ಅಮೋಘ. ಅದೂ  ನಮ್ಮದು ಅನ್ನುವ  ಮಮಕಾರ, ಸೆಳೆತವಂತೂ ಎಂದಿಗೂ ಮನುಷ್ಯನನ್ನು ಬಿಡದ ಭಾವ. ನಮ್ಮವರು ಅನ್ನುವವರು ಯಾರೇ ಇರಲಿ, ಎಲ್ಲಿಯೇ ಇರಲಿ ವಂಶಸ್ಥರು ಅನ್ನುವ ಒಂದು ಕುರುಹು ಆಗಿದ್ದರೂ ಸಾಕು ಮನಸ್ಸು ಅವರನ್ನು ಹುಡುಕಿಕೊಂಡು ಹೋಗಿ ಬಿಡುತ್ತದೆ. ಇಂತಹುದೇ ಪಯಣದಲ್ಲಿ ಜೊತೆಯಾದ ಒಬ್ಬರು ಗೆಳತಿ, ಅಮ್ಮನ ಸಮದವರು  ಹೇಮಾ ರಾವ್ ಅವರು. ಇವರು ನನಗೆ ಪರಿಚಯಿಸಿದ ಇವರ ಮಗಳು ಅವಂತಿ ರಾವ್ ಅವರು ಬರೆದ ಒಂದು ಆಂಗ್ಲ ಸಾಹಿತ್ಯ “Millefeuille – The Layers that shape our identity”. ಅವರು ವಿದೇಶದಲ್ಲಿ ನೆಲೆಸಿರುವ ಕಾರಣ ಈ ಪುಸ್ತಕವು ನಮ್ಮ ಭಾರತದಲ್ಲಿ ತೆರೆಮರೆಯಲ್ಲಿ ಉಳಿಯುವಂತಾಗಿದೆ.

ಆಂಗ್ಲ ಸಾಹಿತ್ಯವನ್ನು ಮುಟ್ಟದೆ ಅವೆಷ್ಟೋ ವರ್ಷಗಳಾಗಿವೆ ನಾನು. ಕಾಲೇಜು ದಿನಗಳಲ್ಲೇ ಕೊನೆ ನನ್ನ ಆಂಗ್ಲ ಸಾಹಿತ್ಯದ ಜೊತೆಗಿನ ಪಯಣ. ಇವತ್ತು ನನ್ನ ನಿಕಟವರ್ತಿಗಳ ಮಗಳೇ ಈ ಪುಸ್ತಕವನ್ನು ಬರೆದಿದ್ದಾರೆ ಎನ್ನುವ ವಿಚಾರ ನಾನೂ ಹೆಮ್ಮೆಯ ಭಾವವನ್ನು ಅನುಭವಿಸುವಂತೆ ಮಾಡಿದೆ. ಪುಸ್ತಕದ ಸಬ್ ಟೈಟಲೇ ಸೂಚಿಸುವಂತೆ ಈ ಪ್ರಪಂಚದಲ್ಲಿ ನಮ್ಮ ಗುರುತಿಸುವಿಕೆ ಯಾವ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಅನ್ನುವುದನ್ನು  ನಮ್ಮೆದುರು ತೆರೆದಿಡುವ ಪುಸ್ತಕ.

“Millefeuille”_ (ಮಿಲ್ಫಾಯ್ – #ಬರೆಯುವ ಶಬ್ದಗಳಲ್ಲೂ ಅವನ್ನು ಉಚ್ಚರಿಸುವ ರೀತಿಗೂ ತುಂಬಾ ವ್ಯತ್ಯಾಸ ಇರುತ್ತದೆ ) ಅನ್ನುವುದೊಂದು  ಫ್ರೆಂಚ್ ಪದ ಹಾಗೂ ರುಚಿಕರವಾದ ಪದರ ಪದರವಾದ ಬೇರೆ ಬೇರೆ ಆಕಾರವನ್ನು ಹೊಂದಿ ಕ್ರೀಮ್ ಅನ್ನು ಒಳಗೊಂಡಿರುವಂತಹ ಸಿಹಿ ತಿನಿಸು.

ನಮ್ಮ ವ್ಯಕ್ತಿತ್ವವು ಹೇಗೆ ವಿಭಿನ್ನ ಅಂಶಗಳಿಂದ ಖಾಸಗಿ ಕ್ಷೇತ್ರ ಅಥವಾಸಮಾಜದಲ್ಲಿ ಪದರ ಪದರವಾಗಿ ರೂಪಿಸಲಾಗಿದೆ ಅನ್ನುವುದನ್ನು ಈ ಪುಸ್ತಕ ಹಂತ ಹಂತವಾಗಿ ವಿವರಿಸಿದೆ.

ಈ ಪುಸ್ತಕವು ನಮ್ಮ ವ್ಯಕ್ತಿತ್ವ ವಿಕಸನದ- ಭಾಷೆ, ಗೋಚರತೆ, ಭೌಗೋಳಿಕ, ರಾಜಕೀಯ, ಲಿಂಗ ಹೀಗೆ 9 ಪದರಗಳನ್ನು ಅಂಶವನ್ನು ಕುರಿತಾದ ವಿವರಗಳನ್ನೊಳಗೊಂಡು  ಬಹಳ ಕುತೂಹಲಕಾರಿಯಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳು, ಪದ್ಧತಿಗಳು ಹೇಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಾಯಕ ಅನ್ನುವುದನ್ನು ನಾವು ಇದರಲ್ಲಿ ಕಾಣಬಹುದು.

ನಮ್ಮ ಭವಿಷ್ಯವನ್ನು ರೂಪಿಸುವ ಕೀಲಿಯು ಅರ್ಥ ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ ಅನ್ನುತ್ತಾರೆ ಇಲ್ಲಿ ಲೇಖಕಿ ಅವಂತಿ ರಾವ್ ಅವರು. ಬಹಳ ಪುರಾತನ ಕಾಲದ ಸಂಪ್ರದಾಯಗಳು , ಆಗಿನ ಆಚರಣೆಗಳು ಹೇಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಾಯಕ ಅನ್ನುವ ಕುರಿತಾಗಿಯೂ ಬಹಳಷ್ಟು ವಿಚಾರಗಳು ಇಲ್ಲಿ ಹಾದು ಹೋಗುತ್ತವೆ. ಒಟ್ಟಿನಲ್ಲಿ ಒಂದು ಸುಂದರವಾದ ಆಂಗ್ಲ ಸಾಹಿತ್ಯವನ್ನು ನನ್ನದಾಗಿಸಿಕೊಂಡ ತೃಪ್ತಿ, ಸಂತಸ ನನ್ನದು ಈಗ.

ಬಹಳ ಅದೃಷ್ಟಾವಶಾತ್ ಒಂದು ಸುಂದರವಾದ ಇತಿಹಾಸ ಸಮಾನವಾದ ಶ್ರೀಮಂತ ವಿಚಾರಗಳನ್ನು ಹೊಂದಿರುವ ಸಾಹಿತ್ಯ ಇವತ್ತು ನನ್ನ ಪುಸ್ತಕ ಸಂಗ್ರಹದೊಳಗೆ ಸೇರಿದ ಸಂತಸ. ಒಂದೇ ಸಲಕ್ಕೆ ಈ ಪುಸ್ತಕವನ್ನು ಓದಿ ಮುಗಿಸಲು ಸಾಧ್ಯವಿಲ್ಲ. ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಆಸಕ್ತಿ ಅನ್ನುವುದೊಂದಿದೆಯಲ್ಲ  ಅದಕ್ಕೆ ಯಾವುದರ ಪರಿವೆಯೂ ಇರುವುದಿಲ್ಲ.

ಉನ್ನತ ಪದವಿಯ ಓದಿಗೆ ಸಂಬಂಧಿಸಿದಂತೆ ರೆಫರ್ ಮಾಡಬಹುದಾದಂತಹ ಪುಸ್ತಕಗಳ ಸಾಲಿಗೆ ಸೇರಿಸಬಹುದಾದಂತಹ  ಸಾಹಿತ್ಯ ಇದು ಅನ್ನುವ ಭಾವ ನನ್ನದು. ಇಂತಹ ಒಂದು ಒಳ್ಳೆಯ ಸಾಹಿತ್ಯವನ್ನು ಪರಿಚಯಿಸಿದ ಹೇಮಾ ರಾವ್ ಹಾಗೂ ಲೇಖಕಿ ಅವಂತಿ ವಿಕ್ಟರಿ ರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು .

-ನಯನ ಬಜಕೂಡ್ಲು

4 Comments on “ಪುಸ್ತಕ : ‘Millefeuille’ (ಮಿಲ್ಫಾಯ್), ಲೇ: ಅವಂತಿ ರಾವ್

  1. ಪುಸ್ತಕ ಪರಿಚಯದ ಅನಾವರಣ ಚೆನ್ನಾಗಿ ಬಂದಿದೆ… ಮೇಡಂ..ನೀವೇ ಹೇಳಿರುವಂತೆ…ಕಾಲೇಜು ದಿನಗಳು ಮುಗಿದ ನಂತರ ಓದಿನ ಹವ್ಯಾಸ ಮುಂದುವರೆಸಿಕೊಂಡು ಹೋಗುತ್ತಿದ್ದೇನಾದರೂ, ಕನ್ನಡದ ಹತ್ತು ಪುಸ್ತಕ …ಓದಿದರೆ..ಆಂಗ್ಲ ಪುಸ್ತಕ. ಒಂದೋ ಎರಡೋ… ಒಮ್ಮೊಮ್ಮೆ ಅದೂ..ಇಲ್ಲ… ಇತ್ತೀಚಿಗೆ ನನ್ನಆಂಗ್ಲ ಭಾಷಾ ವ್ಯಾವೋಹಿ ಕೆಲವು ಗೆಳತಿ ಯರು ಸಿಕ್ಕಿ..ಅವರುಗಳ ಬಲವಂತಕ್ಕೆ…ಅಲ್ಪ ಸ್ವಲ್ಪ… ಈಗ ನೀವು ಪರಿಚಯಿಸಿರುವ ಪುಸ್ತಕ ..ಅವರ ಮೂಲಕ ಸಿಗಬಹುದೇನೋ…ನೋಡುತ್ತೇನೆ.. ತಿಳಿಸಿದಕ್ಕೆ ಧನ್ಯವಾದಗಳು ಮೇಡಂ.

  2. ಮಾನವ ಸಂಬಂಧಗಳ ಕುರಿತ ಅಪರೂಪದ ಆಂಗ್ಲ ಹೊತ್ತಗೆಯ ಬಗ್ಗೆ ವಿಶ್ಲೇಷಣಾತ್ಮಕ ಲೇಖನವು ಬಹಳ ಚೆನ್ನಾಗಿದೆ.

  3. ವ್ಯಕ್ತಿತ್ವ ವಿಕಸನಕ್ಕೆ ಒಂಭತ್ತು ಪದರಗಳ ಕವಚವಿದೆ ಎಂಬ ಕೌತುಕವನ್ನು ಬಿಚ್ಚಿಟ್ಟ ಪುಸ್ತಕದ ಸುಂದರ ಪರಿಚಯ.

  4. ಮಾನವ ಸಂಬಂಧಗಳ ಕುರಿತ ಅಪರೂಪದ ಪುಸ್ತಕದ ಪರಿಚಯ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *