ಸಾಗರ….
ಬ್ರಹ್ಮಾಂಡದ ನಿಗೂಢಾಂತರಂಗವೇ ಅಬ್ಧಿ
ಸೃಷ್ಟಿ ಯುಗದ ನಾಂದಿ ಹಾಡಿದ್ದು ಅಂಬುಧಿ
ಸಕಲ ಜೀವಾಂಕುರದ ಬಸಿರು ಈ ಸಾಗರ
ಜೀವ ಚೈತನ್ಯಕ್ಕೆ ಸರ್ವದಾ ಅಪರಿಮಿತ ಆಕರ
ವೇದ ಪುರಾಣಗಳಲ್ಲಿ ಉಲ್ಲೇಖ ಇದರ ಉಕ್ತಿ
ಕ್ಷೀರಸಾಗರದಲ್ಲಿ ಪವಡಿಸಿಹುದು ವೈಷ್ಣವ ಶಕ್ತಿ
ದೇವ ದಾನವರ ಸಮುದ್ರಮಥನದಲ್ಲಿನ ಯುಕ್ತಿ
ಸಿಂಧುವೇ ಮಹಾನ್, ಅದೇ ಸಾಧನೆ, ಅದೇ ಮುಕ್ತಿ
ಜೀವನಕ್ಕೆ ಸೊಗಸಾದ ಉಪಮೆ ಈ ಶರಧಿ
ಆಸೆಯಲೆಗಳ ಪ್ರಹಾರ ಅವಿರತ ಮುಟ್ಟಲು ಪರಿಧಿ
ಹಿತಮಿತವಾಗಿರಲಿ ಎಂದೂ, ಕರುಣಿಸಿರಲು ಆ ವಿಧಿ
ಇಲ್ಲವಾದರೆ ಬದುಕಿನಲಿ ಚಂಡಮಾರುತದ ವಾರಿಧಿ
ಅಂತರಾಳದಿ ಏನೆಲ್ಲಾ ಅಡಗಿಸಿಕೊಂಡಿಹ ರತ್ನಾಕರ
ಜೀವರಾಶಿಗಳಿಗೆ ಆಶ್ರಯದಾತನಾದ ಪಾರಾವಾರ
ಭೂಗೋಳದಲ್ಲಿ ಅಗಾಧವಾಗಿ ವ್ಯಾಪಿಸಿದೆ ನಿನ್ನ ವಿಸ್ತಾರ
ಮುತ್ತು ಹವಳಗಳಂತೆ ಕ್ರೂರ ಜಲಚರಗಳಿಗೂ ಆಗರ
ಸ್ವಾರ್ಥಿ ಮನುಜನ ದುರುಳ ತೆಗೆ ತಲ್ಲಣಿಸಿದೆ ನಿನ್ನೊಡಲು
ಅಣ್ವಸ್ತ್ರ ಕೈಗಾರಿಕಾತ್ಯಾಜ್ಯಗಳು ತುಂಬಿರುವ ಕಡಲು
ಎಲ್ಲಿಯವರೆಗೂ ಸಹಿಸಬೇಕು ಈ ಅನಾಹತ ಘೋರವ
ಮುನಿದು ರೊಚ್ಚಿಗೆದ್ದರೆ ಎಲ್ಲಾ ಸರ್ವನಾಶ ಮಾಡುವ ಆರ್ಣವ.
ಪವಿತ್ರತೆಯೋ, ಪಾವನತೆಯೋ ಪೌರಾಣಿಕತೆಯೋ
ಹಾಳುಗೆಡುವಬಾರದಿದನು ಭವಿಷ್ಯದಮೂಲ್ಯ ನಿಧಿಯನು
ಪರಂಪರೆಯ ಆರ್ಷೇಯತೆಯ ಸಂಪ್ರದಾಯದ ಕುರುಹು
ಜೀವ ಯೋಗ್ಯ ಧರಣಿ,ಸಂಪನ್ನ ಉದಧಿ ಭವಿತವ್ಯದ ಉಳಿವು .
-ಸುಜಾತಾ ರವೀಶ್
ಚೆನ್ನಾಗಿದೆ ಕವನ
ಧನ್ಯವಾದಗಳು ನಯನಾ
ಸುಜಾತಾ ರವೀಶ್
ಸರಳ ಸುಂದರ ಕವನ ಧನ್ಯವಾದಗಳು ಮೇಡಂ
ಶರಧಿಯ ಹಿರಿಮೆ ಗರಿಮೆಗಳನ್ನು ತನ್ನೊಡಲಲ್ಲಿ ತುಂಬಿದ ಸುಂದರ ಕವಿತೆ.
ಧನ್ಯವಾದಗಳು ಮೇಡಂ
ಸುಜಾತಾ ರವೀಶ್
ಧನ್ಯವಾದಗಳು ಮೇಡಂ
ಸುಜಾತಾ ರವೀಶ
ಸಮುದ್ರದ ಅಂತರಂಗವನ್ನು ಇಣುಕಿ ನೋಡುವ ಸುಂದರ ಪ್ರಯತ್ನದಲ್ಲಿ ಸಫಲವಾಗಿರುವ ಕವಿತೆಗಾಗಿ ಅಭಿನಂದನೆಗಳು.