ಹೆಸರಲ್ಲೇನಿದೆ?????

Share Button

ಸ್ವತಃ ಸಾಹಿತ್ಯಾಭಿಮಾನಿಯಾದ ನಮ್ಮಣ್ಣ (ನಾವು ತಂದೆಯನ್ನು ಅಣ್ಣಾ ಎಂದೇ ಕರೆಯುತ್ತಿದ್ದು) ನಾವು ಮೂವರು ಅಕ್ಕ-ತಂಗಿಯರಿಗೆ ಸಾಹಿತ್ಯಾಭಿಮಾನ ಬೆಳೆಸಿದ್ದು ಚಿಕ್ಕಂದಿನಿಂದಲೇ. ಸುಧಾ, ಪ್ರಜಾಮತ ಈ ಪತ್ರಿಕೆಗಳಲ್ಲಿ ಬರುವ ಮಕ್ಕಳ ಕಥೆಗಳನ್ನು ಓದುತ್ತಾ ಬೆಳೆದದ್ದು ನಾನು. ಈ ಕಥೆಗಳು ಎಷ್ಟು ಹಾಸುಹೊಕ್ಕಾಗಿತ್ತು ಜೀವನದಲ್ಲಿ ಎಂದರೆ, ನಮ್ಮ ಶಾಲೆಯಲ್ಲಿ (ನಾನು ಓದಿದ್ದು ಸೆಂಟ್ ಥಾಮಸ್ ಶಾಲೆ, ಮೈಸೂರು) ಯಾವುದಾದರು ಅಧ್ಯಾಪಕರು ರಜೆಯಿದ್ದು ತರಗತಿಗಳಿಗೆ ಬಿಡುವಿತ್ತೆಂದರೆ ನಾನು ಆ ತರಗತಿಗೆ ಹೋಗಿ ಕಥೆ ಹೇಳುತ್ತಿದ್ದೆ. ನಾನು ಓದಿದ ಎಲ್ಲಾ ಕಥೆಗಳನ್ನು ಸ್ವಲ್ಪ ನನ್ನ ಮಸಾಲೆಯನ್ನು ಸೇರಿಸಿಯೇ ಅವರುಗಳಿಗೆ ಉಣಬಡಿಸುತ್ತಿದ್ದದ್ದು. ಈ ರೀತಿಯ ಅಸೈನ್ಮಂಟ್ ನೀಡುತ್ತಾರೆಂದೇ ತುಂಬಾ ಕಥೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ. ಈ ವಾರಪತ್ರಿಕೆಗಳಲ್ಲದೆ ಅಣ್ಣ ಸಂಗ್ರಹಿಸಿಟ್ಟಿದ್ದ ಸೋವಿಯತ್ ರಷ್ಯಾ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಕಥೆಗಳೂ ಸಹಾ ನನ್ನ ಕಥಾರುಚಿಯ ಒಗ್ಗರಣೆಗೆ ಆಹಾರವಾಗುತ್ತಿತ್ತು. ಯಾವ ಯಾವ ತರಗತಿಗಳಲ್ಲಿ ಯಾವ ಕಥೆಗಳನ್ನು ಹೇಳುತ್ತಿದ್ದೆಯೆಂದು ನನಗೆ ಈಗಲೂ ನೆನಪಿದೆ. ಹಾಗಂತ ನನ್ನ ನೆನಪಿನ ಶಕ್ತಿ ಬಗ್ಗೆ ಹೆಮ್ಮೆ ಪಡಲು ನನಗೆ ಸಾದ್ಯವಾಗುತ್ತಿಲ್ಲ. ಯಾಕೆ ಗೊತ್ತಾ? ನನಗೊಂದು ರೀತಿಯ ವಿಚಿತ್ರ ಮರೆವಿನ ಕಾಯಿಲೆಯಿದೆ. ಅಯ್ಯೋ ಕಾಯಿಲೇನಾ ???? ಎಂದು ಆಶ್ಚರ್ಯ ಪಡಬೇಡಿ. ಈ ರೋಗ ಯಾವ ರೀತಿಯದ್ದು ಅಂದರೆ ಹೆಸರಿನ ಮರೆವೆ ಅದೂ ಬೇಕಾದ ಸಂದರ್ಭದಲ್ಲಿ ಮಾತ್ರ ಕೈಕೊಡುವಂತದ್ದು!   ಹೌದು.. ವ್ಯಕ್ತಿ, ಸ್ಥಳ ಹಾಗೂ ಅವುಗಳಿಗೆ ಸಂಬಂಧಿಸಿದ ಘಟನೆಗಳ ಎಲ್ಲಾ ನೆನಪೂ ನನ್ನ ಮನದಲ್ಲಿ ಯಥಾವತ್ತಾಗಿ ಹುದುಗಿದ್ದರೂ, ವ್ಯಕ್ತಿ ಹೆಸರು ಮಾತ್ರ ಬೇಕಾದ ಸಂದರ್ಭಗಳಲ್ಲಿ ಮರೆತು ಹೋಗುತ್ತದೆ.

ಹೆಸರಿನಲ್ಲೇನಿದೆ ಅಂತ ಯಾಕೆ ಮೂಗೆಳೆಯುತ್ತೀರಾ? ಹೆಸರಲ್ಲೇ ಎಲ್ಲಾ ಇದೆ.  ಹೆಸರಲ್ಲೇನಿದೆ ಅನ್ನೋರು ತಮ್ಮ ಮಕ್ಕಳಿಗೆ ಹಿಡಂಬಿ, ರಾವಣ, ಶೂರ್ಪಣಕಿ ಎಂದು ನಾಮಕರಣ ಮಾಡುತ್ತಾರ? ಹೀಗಂತಾ ನಾನೇ ಪ್ರಶ್ನಿಸುತ್ತೇನೆ.  ಆದರೆ ಐಡೆಂಟಿಟಿಗೆ ಪೂರಕವಾದ ಹೆಸರು, ಗುರುತಿಸಲು ಪ್ರಮುಖ ಪಾತ್ರ ವಹಿಸುವ ಹೆಸರು ನನಗೆ ಮಾತ್ರ ಅವಶ್ಯ ಸಂದರ್ಭಗಳಲ್ಲಿ ನೆನಪಿಗೆ ಬರುವುದಿಲ್ಲ.

ಮಕ್ಕಳ ಕಥೆಗಳ ವಾಚನದ ಹಂತ ಪೂರ್ಣಗೊಂಡ ನಂತರ, ನಾನು ಓದಿದ ಮೊದಲ ಸಣ್ಣ ಕಥೆಯೆಂದರೆ ದಿವಂಗತ ತ್ರಿವೇಣಿಯವರ “ನನ್ನ ಹೆಂಡತಿ ಹೆಸರು”.  ಕಥಾ ನಾಯಕನಿಗೆ ತಾನು ಮದುವೆಯಾದ ಹೆಂಡತಿ ಹೆಸರು ಏನು ಮಾಡಿದರೂ ನೆನಪಿಗೆ ಬರುವುದಿಲ್ಲ. ನೆನಪಿಸಿಕೊಳ್ಳುವ ಗೊಡವೆ ಏಕೆಂದು ಹೆಂಡತಿ ಹೆಸರನ್ನೇ ಬದಲಾಯಿಸುವ ನಿರ್ಧಾರ ಕೈಗೊಳ್ಳುತ್ತಾನೆ. ಆದರೆ ಆ ನಾಯಕನಿಗೆ ಮರೆತುಹೋಗಿದ್ದು ತನ್ನ ಹೆಂಡತಿ ಹೆಸರು ಅದನ್ನು ಬದಲಾಯಿಸಲು ಅವನಿಗೆ ಸ್ವಾತಂತ್ರ್ಯವಿತ್ತು. ಬದಲಾಯಿಸಿದ. ಆದರೆ ನನಗೆ ಆ ಸ್ವಾತಂತ್ರ್ಯವೂ ಇಲ್ಲ.. ಬೇಕಾದ ಸಂದರ್ಭಗಳಲ್ಲಿಯೇ ಅದು ಕೈಕೊಡತ್ತೆ. ಕೆಲವೊಮ್ಮೆ ಈ ನನ್ನ ಬಲಹೀನತೆ ನನ್ನನ್ನು ಪೇಚಿಗೆ ಸಿಲುಕಿಸಿದೆ.

ನನ್ನ ಅಮ್ಮ ಮತ್ತು ಅಣ್ಣನ ದೂರದ ಸಂಬಂಧಿಕರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿದ್ದಾರೆ.  ಸಂಬಂಧಿಕರ ಮದುವೆ, ಮುಂಜಿ ಕಾರ್ಯಕ್ರಮದಲ್ಲಿ ಇವರುಗಳ ಭೇಟಿ ಆಗುತ್ತಿರುತ್ತದೆ.  ಆದರೆ ತುಂಬಾ ಅಪರೂಪ.  ಇವರುಗಳು ಯಾರೆಂದು ನನಗೆ ಚೆನ್ನಾಗಿಯೇ ಗೊತ್ತು.  ಆದರೆ ಹೆಸರುಗಳು??????  ಅದನ್ನು ಮಾತ್ರ ಕೇಳಬೇಡಿ.

PC:Internet

ಒಮ್ಮೆ ಹೀಗೆ ಮದುವೆಯೊಂದರಲ್ಲಿ ನಮ್ಮಮ್ಮನ ಕಸಿನ್ ಒಬ್ಬರು ಬಂದಿದ್ದರು. ನನ್ನಕ್ಕ ಸುಜಾತ ಇವರೊಂದಿಗೆ ಮಾತನಾಡುತ್ತಾ ಕುಳಿತಿದ್ದಳು.ನಾನೂ ಅಲ್ಲಿಗೆ ಹೋದೆ.  ಅವರು ”ಓ ವೈಶಾಲಿ ಹೇಗಿದ್ದಿಯಮ್ಮ? ನಾನು ಯಾರು ಗೊತ್ತಾಯಿತಾ?” ಎಂದರು. ನನಗೆ ಪಕ್ಕನೆ ಅವರ ಹೆಸರು ಮರೆತುಹೋಯಿತು.  ”ಗೊತ್ತು” ಎಂದು ಹೇಳಿ ಬೇರೆ ವಿಷಯ ಮಾತನಾಡುತ್ತಾ ಸರಿದೂಗಿಸಿಕೊಂಡೆ. ಈರೀತಿ ಹೆಸರಿನ ಅವಶ್ಯಕತೆಯೇ ಇಲ್ಲದೆ ಸಂವಹನ ಮುಂದುವರೆದರೇನೋ ಪರವಾಗಿಲ್ಲ, ಆದರೆ ಯಾರಿಗಾದರು ಪರಿಚಯಿಸಬೇಕೆಂದಾಗ ಮಾತ್ರ ಫಜೀತಿ.

ದಿನಾ ಬೆಳಗಾದರೆ ನೋಡುವ ನನ್ನ ಸಹೋದ್ಯೋಗಿಯ ಹೆಸರು ಮರೆತುಹೋದರೆ ಏನು ಮಾಡಬೇಕು ಹೇಳಿ? ಒಮ್ಮೆ ಹೀಗೆ ಪತಿಯೊಡನೆ ಶಾಪಿಂಗ್ ಹೋದ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಕುಟುಂಬದೊಡನೆ ಬಂದಿದ್ದರು.  ಅವರನ್ನು ನನ್ನ ಪತಿಗೆ ಪರಿಚಯಿಸುವಾಗ ಅವರ ಹೆಸರೇ ಮರೆತುಹೋಯಿತು. ಇವರು —- ಇವರು —– ಎಂದು ನಾನು ತೊದಲತೊಡಗಿದಾಗ ಅವರಿಗೆ ಅರ್ಥವಾಗಿ ನನ್ನ ಪತಿಯ ಕೈಕುಲುಕಿ ತಮ್ಮ ಪರಿಚಯ ತಾವೇ ಮಾಡಿಕೊಂಡರು.  ಆ ನಂತರ ಎರಡು ದಿನಗಳು ಆಫೀಸ್ನಲ್ಲಿ ಅವರ ಮುಖ ನೋಡಲು ನನಗೆ ಸಾದ್ಯವಾಗಲಿಲ್ಲವೆಂದು ಹೇಳಬೇಕಾಗಿಲ್ಲ ಅಲ್ಲವೇ? ಈಗ ಅವರು ನಮ್ಮ ಆಫೀಸ್ನಲ್ಲಿ ಇಲ್ಲ. ಆದರೂ ದೇವರಾಣೆ! ಈ ಲೇಖನ ಬರೆಯುತ್ತಿರುವ ಸಂದರ್ಭದಲ್ಲೂ ನನಗೆ ಅವರ ಹೆಸರು ನೆನಪಿಗೆ ಬರುತ್ತಿಲ್ಲ.

ನನ್ನ ರೀತಿ ಹೆಸರು ಮರೆಯುವ ಜನರು ಸಾಕಷ್ಟಿದ್ದಾರೆ. ಒಮ್ಮೆ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಹೀಗೆ ಒಬ್ಬರು ಪರಿಚಿತರು ಸಹಪ್ರಯಾಣಿಕರಾದರು. ಅವರ ಹೆಸರು ನನಗೆ ನೆನಪಿಗೆ ಬರಲಿಲ್ಲ.  ಮಾತಿನ ಓಘದಲ್ಲಿ ಎಲ್ಲಿಯೂ ಅವರ ಹೆಸರು ಹೇಳುವ ಪ್ರಮೇಯ ಬರದಿರುವ ಹಾಗೆ ಬುದ್ದಿವಂತಿಕೆಯ ಮಾತುಕತೆ ನಡೆಸಿದೆ. ಸದ್ಯ ಇವರ ಹೆಸರು ಹೇಳದೆ ಪಾರಾದೆ ಎಂದುಕೊಳ್ಳುತ್ತಿರುವ ಹಾಗೆಯೇ ಚನ್ನಪಟ್ಟಣ ರೈಲು ನಿಲ್ದಾಣ ಬಂದಿತ್ತು. ಪರಿಚಿತರು ಇಳಿಯಲು ಸಿದ್ದತೆ ನಡೆಸುತ್ತಾ, ನನಗೆ ಏನೂ ತಿಳಿದುಕೊಳ್ಳಬೇಡಿ ನಿಮ್ಮ ಹೆಸರು ಮರೆತುಹೋಗಿದೆ ಎಂದರು. ಆಗ ನನಗಾದ ಸಂತೋಷ ಮಾತ್ರ ತಿಳಿಸಲಸಾದ್ಯ. ಇಬ್ಬರೂ ಪರಸ್ಪರ ಹೆಸರು ಹೇಳಿಕೊಂಡು ನಗಾಡಿದೆವು. ಆದರೆ ನನ್ನ ಪಕ್ಕ ಕುಳಿತಿದ್ದ ಮಹಾಶಯರೊಬ್ಬರು, ನಂತರ ನನ್ನನ್ನು ಕೇಳಿದ್ದು ‘ಅಲ್ಲಾ ಮೇಡಂ, ಇಬ್ಬರೂ ಹೆಸರು ಗೊತ್ತಿಲ್ಲದೆ ಮೈಸೂರಿನಿಂದ ಚನ್ನಪಟ್ಟಣದವರೆಗೆ ನಾನ್ಸ್ಟಾಪ್ ಮಾತಾಡುತ್ತಿದ್ದರಲ್ಲಾ, ಇನ್ನು ಹೆಸರು ತಿಳಿದಿದ್ದರೆ ನಿಮ್ಮಿಬ್ಬರ ಮಾತುಕತೆ ಯಾವ ಮಟ್ಟಕ್ಕೆ
ಹೋಗುತ್ತಿತ್ತು ಅಂತ ಯೋಚನೆ ಮಾಡಿದರೆ ಭಯವಾಗತ್ತೆ”.

ನನ್ನ ಈ ಬಲಹೀನತೆ ಈಗಾಗಲೇ ತುಂಬಾ ಜನರಿಗೆ ಗೊತ್ತಾಗಿದೆ.  ಅಪರೂಪಕ್ಕೆ ಭೇಟಿಯಾಗುವವರು ”ನಾನು ಯಾರು ಗೊತ್ತಾಯಿತಾ? ಎಂದು ಕೇಳುವುದರ ಜೊತೆಗೆ ಹೆಸರೇನು ಹೇಳು” ಅಂತಾನೂ ಕೊಸರು ಸೇರಿಸುತ್ತಾರೆ.  ನಾನೀಗ ಒಂದು ಉಪಾಯ ಕಂಡುಕೊಂಡಿರುವೆ.  ನನ್ನ ಅಮ್ಮನ ಬಳಗದವರ ಹೆಸರಿನ ಬಗ್ಗೆ ಕೇಳಲು ನನ್ನಕ್ಕಂದಿರಾದ  ಸುಜಾತ ಮತ್ತು ಛಾಯಾ ಮೊರೆ ಹೋಗುವುದು. ಅಣ್ಣ (ಅಪ್ಪನ) ಬಳಗದವರ ಬಗ್ಗೆ ನನ್ನ ಚಿಕ್ಕಪ್ಪ ಮತ್ತು ನನ್ನ ಪತಿ ಬಳಗದವರ ಹೆಸರು ಮರೆತಲ್ಲಿ ನನ್ನ ಪತಿಯಿಂದ ನೆರವು ಪಡೆಯುತ್ತಾ ಸರಿದೂಗಿಸುತ್ತಿದ್ದೇನೆ.  ಆದರೂ ಯಾರಾದರು ಪರಿಚಯದವರು ದಾರಿಯಲ್ಲಿ, ಸಮಾರಂಭಗಳಲ್ಲಿ, ಬಸ್ಸಿನಲ್ಲಿ ಸಿಕ್ಕಿದರೆ ಮಾತ್ರ ನಾನು ಮೊದಲು ಯೋಚಿಸುವುದೇ ಸದ್ಯ ಇವರು ಹೆಸರೇನು ಹೇಳು ಎಂದು ಕೇಳದಿದ್ದರೆ ಸಾಕಪ್ಪ ಅಂತ.

ಕೊನೆಗುಟುಕುಃ  ಹೆಸರು ಐಡೆಂಟಿಟಿಗೆ ಪೂರಕ.  ಆದರೆ ಹೆಸರು ಮರೆತರೂ ವ್ಯಕ್ತಿತ್ವ ಮರೆಯುವುದಿಲ್ಲವಾದ್ದರಿಂದ, ವ್ಯಕ್ತಿತ್ವದ ಭಾಗವಷ್ಟೆ ಆದ ಹೆಸರು ಮರೆತರೆ ಬಾಧಕವೇನಲ್ಲ ಅಲ್ಲವೆ?  ನೀವೇನಂತಿರಾ?

-ವೈಶಾಲಿ ನರಹರಿ ರಾವ್.

7 Responses

  1. ನಯನ ಬಜಕೂಡ್ಲು says:

    Nice article

  2. ಹೆಸರಲ್ಲೇನಿದೆ…ಲೇಖನ… ನಮ್ಮ ನೆನಪು ಗಳನ್ನು ಕೆದಕಿತು..
    ಓ ನಮ್ಮಂತೆ… ಇದ್ದಾರೆ ಎನ್ನುವ.. ಸಮಾಧಾನವೂ ಆಯಿತು.. ಧನ್ಯವಾದಗಳು ಮೇಡಂ.

  3. . ಶಂಕರಿ ಶರ್ಮ says:

    ಹೆಸರನ್ನು ಮರೆಯುವ ರೋಗ ಸಾರ್ವತ್ರಿಕ ಎಂಬುದು ನನ್ನ ವಾದ! ಯಾಕೆಂದರೆ, ನಾನೂ ಅದೇ ಪಾರ್ಟಿಗೆ ಸೇರಿದವಳು. ಚಂದದ ನಗೆ ಲೇಖನ.

  4. SHARANABASAVEHA K M says:

    ಓದಿಸಿಕೊಂಡು ಹೋಗುವ ನವಿರು ಹಾಸ್ಯದ ಲೇಖನ…..ತುಂಬಾ ಚೆನ್ನಾಗಿದೆ

  5. Padma Anand says:

    ತಿಳಿಹಾಸ್ಯದಿಂದ ಕೂಡಿದ ಸರಳ ನೈಜ ಲೇಖನ

  6. Samatha.R says:

    ನನ್ನದೂ ಇದೇ ಸಮಸ್ಯೆ ಮೇಡಂ…ಹೇಗೋ ಅಣ್ಣ, ಅಕ್ಕ ಅಂತ ಮಾತನಾಡಿಸಿ ಪಾರಾಗುತ್ತೇನೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: