ನನ್ನ ಮೊದಲ ಸೈಕಲ್ ಸವಾರಿ
ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ ಅಂದರೆ ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ .
ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ ಪುಟ್ಟ ಸೀಟ್ ನಲ್ಲಿ ಮೊದಲು ಕೂರಿಸಿಕೊಂಡು ಹೋಗುತ್ತಿದ್ದರು. ನಂತರ ತಂಗಿ ಬಂದಮೇಲೆ ನನಗೆ ಹಿಂದುಗಡೆಗೆ ಡಿಮೋಶನ್. ಅವಳನ್ನು ಮುಂದೆ ಕೂಡಿಸಿಕೊಳ್ಳುತ್ತಿದ್ದರು. ಅಂತೂ ಜುಮ್ಮಂತ ಹೋಗುವುದು ಒಂದು ತರಹ ಖುಷಿ ಕೊಡುತ್ತಿತ್ತು ಆಗ. ಸ್ವಲ್ಪ ದೊಡ್ಡವರಾದ ಮೇಲೆ ಎಲ್ಲರಿಗೂ ಸೈಕಲ್ ಕಲಿಯುವ ಆಸೆ . ನಾನೂ ಅದಕ್ಕೇನು ಹೊರತಲ್ಲ. ಅಲ್ಲದೆ ಸುತ್ತಮುತ್ತ ಇದ್ದ ನನ್ನ ಆಟದ
ಪಾರ್ಟ್ನರ್ಸ್ ಗಳು ಎಲ್ಲರೂ ಕಲಿತಾಗಿದ್ದು ಆಗ ನಾನೊಬ್ಬಳೇ ಆಡ್ ಮ್ಯಾನ್ ಔಟ್. ಬೇಗ ಕಲೀಬೇಕು ಅನ್ನೋ ಆಸೆಗೆ ಆಜ್ಯ ಹೊಯ್ದಿತ್ತು.
ನಾನಾಗ 8—9 ವರ್ಷದವಳಿರಬಹುದು. ಬೇಸಿಗೆ ರಜೆಯಲ್ಲಿ ಸೈಕಲ್ ಕಲಿಯುವ ಹುಚ್ಚು ತಲೆಗೇರೀತು. ತಲೆಗೆ ಏನಾದರೂ ಹುಳು ಹೊಕ್ಕಿತೆಂದರೆ ಶತಾಯ ಗತಾಯ ಮಾಡೇ ತೀರುವ ಜಾಯಮಾನದವಳು ನಾನುˌ ಸರಿ ಅಮ್ಮನ್ನ ಒಪ್ಪಿಸಾಯ್ತು. ಅಣ್ಣ ಬೈತಾರೆ ಅಂತ ಅವರು ಆಫೀಸಿಗೆ ಹೋದಾಗ ಅಂತ ಸಮಯವೂ ನಿಗದಿಯಾಯ್ತು. ನಮ್ಮ ಏರಿಯಾದ ಏಕಮಾತ್ರ ಸೈಕಲ್ ಶಾಪ್ ನಲ್ಲಿ ಓಡಿಸೋಕೆ ಬರುತ್ತಾ ಅಂತ ನೋಡೇ ಬಾಡಿಗೆಗೆ ಕೊಡ್ತಿದ್ದುದು.
ಹಾಗಾಗಿ ಎದುರುಮನೆ ಹರ್ಷನಿಗೆ ಸೈಕಲ್ ತರಲು ಹಾಗೂ ಕಲಿಸಲು ದಮ್ಮಯ್ಯ ಗುಡ್ಡೆ ಹಾಕಿ ಒಪ್ಪಿಸಾಯ್ತು. 10 ಗಂಟೆಗೆ ಹೋದವನು 12 ಗಂಟೆಗೆ ಬಂದ. 30ಪೈಸೆ ಬಾಡಿಗೆ. ನನ್ನ ತಂಗಿಯರು ಮತ್ತಿತರ ಚಿಳ್ಳೆ ಪಿಳ್ಳೆಗಳೇ ನನ್ನ ಮಹಾನ್ ಸಾಹಸದ ಪ್ರೇಕ್ಷಕ ಪ್ರೋತ್ಸಾಹಕರು. ಸರಿ ಸೀಟ್ ಮೇಲೆ ಆಸೀನಳಾದೆ. ಸೈಕಲ್ ಬೀಳದಂತೆ ಹರ್ಷ ಹಿಡಿದು ಕೊಂಡಿದ್ದ. ಹಾಗೇ ನಿಧಾನಕ್ಕೆ ಎರಡು ರೌಂಡ್ ಹೊಡೆದ್ನಾ. ಆಹಾ ಬಂದೇ ಬಿಡ್ತು balance ಅನ್ನೋ ಹುಮ್ಮಸ್ಸಿನಲ್ಲಿ speed ಆಗಿ
ಹೊಡೆಯಕ್ಕೆ ಶುರು.
ಗಾಳಿಯಲ್ಲಿ ತೇಲ್ತಿದೀನಿ ಅಂದ್ಕೊಂಡು ಹಿಂದೆ ತಿರುಗಿದೆ ಅವರೆಲ್ಲಾ ಎಲ್ಲೋ ದೂರದಲ್ಲಿ. ಎಷ್ಟು ದೂರ ಹಿಂದೇನೇ ಓಡಕ್ಕಾಗುತ್ತೆ? ನನಗೋ ಸೈಕಲ್ ಯಾರೂ ಹಿಡ್ಕೊಂಡಿಲ್ಲ ಅಂತ ಗೊತ್ತಾಗಿ ಗಾಬರಿ. ರೋಡ್ ಡೌನುˌ ಹಿಂದೆ ತಿರುಗಿದಾಗ ಹ್ಯಾಂಡಲ್ ಬಲಕ್ಕೆ ತಿರುಗಿ ಸೈಕಲ್ ರೋಡು ಬಿಟ್ಟು ಫುಟ್ಬಾತಿಗೆ ಇಳೀತಾ. ಬ್ರೇಕ್ ಹಾಕಕ್ಕೂ ತೋಚಲಿಲ್ಲ. ನೇರ ಹೋಗಿ ಅಂಬಿಕಮ್ಮ ಅವರ ಮನೆ ಕಾಂಪೌಂಡಿಗೆ ಡಿಕ್ಕಿ. ಸೈಕಲ್ ಒಂದು ದಿಕ್ಕು. ನಾನು ಒಂದು ದಿಕ್ಕುˌಚರಂಡಿಯ
ಚಪ್ಪಡಿ ಕಲ್ಲು ತಾಕಿ ಮಂಡಿಯೊಡೆದು ರಕ್ತ ಸುರಿಯಲು ಶುರುˌ ಅಷ್ಟರಲ್ಲಿ ನನ್ನ ಹಿಂಬಾಲಕರ ಪಡೆ ಹಾಜರ್.
ನನ್ನ ತಂಗಿಯರು ಛಾಯ ಮತ್ತು ವೈಶಾಲಿಯರ ಜೋಡಿ ವಾಲಗ ಶುರು ಆಗಿತ್ತು. ಹರ್ಷನದು ಸೈಕಲ್ spot inspection. ಮುರಿದು ಹೋಗಿದ್ರೆ ಬೈಸಿಕೊಳ್ಳೋನು ಅವನೇ ಅಲ್ವಾ ಪಾಪ! ಮನೆಯೊಳಗಿಂದ ಅಂಬಿಕಮ್ಮ ಅರಿಸಿನ ಕಾಫಿಪುಡಿ ತಂದು ಮೆತ್ತಿದ್ರು. ಬೀದಿಯ ಕೊನೆಯಲ್ಲಿದ್ದ ನಮ್ಮ ಮನೆಯಿಂದ ಅಮ್ಮ ಬಂದ್ರು. ಅವರ ಹೆಗಲಿನಾಸರೆಯಲ್ಲಿ ಕುಂಟುತ್ತಾ ಮನೆ ಸೇರಿದೆ. ಅಣ್ಣ ಬಂದ ಮೇಲೆ ಇನ್ನೊಂದು ರೌಂಡ್ ಬೈಗುಳ ತಿಂದಾಯ್ತು.ಅಲ್ಲಿಗೆ ನನ್ನ ಸೈಕಲ್ ಸವಾರಿ ಕನಸಿಗೆ ತಿಲಾಂಜಲಿ.
ಜುಂ ಅಂತ ಸೈಕಲ್ಲಲ್ಲಿ ತಿರುಗೋ ನನ್ನ ಕನಸು ಇಂದಿಗೂ ನನಸಾಗಿಲ್ಲ. ಈಗ two wheeler ಕಲಿತು ಓಡಿಸ್ತಿದ್ರೂ ಸೈಕಲ್ ಮಾತ್ರ ಹತ್ತಿಲ್ಲ ಇದುವರೆಗೂ.
ಅದಕ್ಕೆ ಸ್ವಲ್ಪನಾದ್ರೂ ಕಾಂಪೆನ್ಸೇಷನ್ ಮಾಡ್ಕೊಳ್ಳೋಣ ಅಂತ ಈ ಲೇಖನ ಬರೆದೇಬಿಟ್ಟೆ.
–ಸುಜಾತಾ ರವೀಶ್
Very nice.
ಚಂದದ ಬರಹ
ಸೈಕಲನ ಸವಾರಿ ಲೇಖನ ನಾನು ರೀತಿಯನ್ನು ನೆನಪಿಸಿತು ಧನ್ಯವಾದಗಳು ಮೇಡಂ
ಚಂದದ ಲೇಖನ
ತುಂಬಾ ಸಹಜವಾಗಿ ಸರಳವಾಗಿ ಸವಾರಿಯ
ಅನುಭವವನ್ನು ಕಟ್ಟಿ ಕೊಟ್ಟಿದೆ
ಸೈಕಲ್ ಬ್ಯಾಲೆನ್ಸ್ ಬರದಿದ್ದರೂ ನೀವು ಬರೆದ ಅನುಭವ ಲೇಖನ ಚೆನ್ನಾಗಿದೆ.
ಚಂದದ ಅನುಭವ ಲೇಖನ
ಸೈಕಲ್ ಕಲಿಕೆಯ ದಿನಗಳ ಚಂದದ ವಿವರಣೆ. ಈಗ ಖಂಡಿತಾ ನೀವು ಸೈಕಲ್ ಓಡಿಸಬಹುದು