ಅವಿಸ್ಮರಣೀಯ ಅಮೆರಿಕ-ಎಳೆ 25
SFO ದಂಡಯಾತ್ರೆ…!
ಮಳೆಕಾಡಿನೊಳಗೆ ನಡೆದು, ಕ್ರೂಕೆಡ್ ಸ್ಟ್ರೀಟ್ ನ ಅಂದವನ್ನು ಸವಿದು, ಬಳಿಕ ಅಲ್ಲಿಯ ಅತಿ ಹಳೆಯ ಸಾಂಪ್ರದಾಯಿಕ ಕೇಬಲ್ ರೈಲು ಪಯಣದ ಸವಿಯನ್ನು ಪಡೆದೆವು. ಇದೊಂದು ವಿಚಿತ್ರ ರೀತಿಯಲ್ಲಿ ಚಲಿಸುವ ರೈಲಾಗಿದೆ(ಟ್ರಾಂ). ಮಕ್ಕಳ ರೈಲಿನಂತೆ ಎಲ್ಲಾ ಕಡೆಗೆ ತೆರೆದಿದ್ದು, ಬಸ್ಸಿನಷ್ಟು ದೊಡ್ಡದಾಗಿದೆ. SFO ಪಟ್ಟಣವು ಎತ್ತರವಾದ ಬೆಟ್ಟಗಳಿಂದ ಕೂಡಿದ್ದು, ಅಲ್ಲಿ ಪಯಣಿಸಲು ಅನುಕೂಲವಾಗುವಂತಹ ಕೇಬಲ್ ರೈಲುಗಳನ್ನು 1873ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಇದು ಐತಿಹಾಸಿಕ ಮಹತ್ವವುಳ್ಳದ್ದಾಗಿದ್ದು, ಇಡೀ ಜಗತ್ತಿನಲ್ಲಿಯೇ, ಸದ್ಯಕ್ಕೆ ಇಲ್ಲಿ ಮಾತ್ರ ಬಳಕೆಯಲ್ಲಿದೆ. 1964ರಲ್ಲಿ ಇದನ್ನು ಐತಿಹಾಸಿಕ ಸ್ಮಾರಕವೆಂದು ಘೋಷಿಸಿ, ಆಯ್ದ ಸ್ಥಳಗಳಲ್ಲಿ ಮಾತ್ರ ಸಾರ್ವಜನಿಕ ಸಾಗಾಣಿಕೆಗೆ ಉಪಯೋಗಿಸಲ್ಪಡುತ್ತಿದೆ.
ವಿಶೇಷವೆಂದರೆ, ಇದರ ಚಾಲನೆಗೆ ಯಾವುದೇ ಇಂಧನವು ಬಳಕೆಯಾಗುವುದಿಲ್ಲ. ಇದರ ಹಳಿಗಳು ಇತರ ವಾಹನಗಳು ಚಲಿಸುವ ರಸ್ತೆ ಮೇಲೆಯೇ ಇರುವುದಲ್ಲದೆ, ಇತರ ವಾಹನಗಳ ಜೊತೆ ಜೊತೆಗೇ ಸಾಗುತ್ತದೆ..ಬಹಳ ನಿಧಾನವಾಗಿ. ಹಳಿಯ ಕೆಳಗಡೆಗಿರುವ ಭೂಗತ ಕೇಬಲ್ ಗಳು, ಮುಖ್ಯ ವಿದ್ಯುದಾಗಾರದಿಂದ ದೊರೆಯುವ ವಿದ್ಯುಚ್ಛಕ್ತಿಯಿಂದ ನಿರಂತರ ಸುತ್ತುತ್ತಿರುತ್ತದೆ. ರೈಲು ಚಾಲಕನು ವಾಹನದಲ್ಲಿರುವ ಬಲವಾದ ಹಿಡಿತವನ್ನು, ಸುತ್ತುತ್ತಿರುವ ಕೇಬಲ್ ನೊಂದಿಗೆ ಹೆಣೆದಾಗ ರೈಲು ಚಲಿಸುತ್ತದೆ ಮತ್ತು ಹಿಡಿತವನ್ನು ಸಡಿಲಿಸಿದಾಗ ರೈಲು ನಿಲ್ಲುತ್ತದೆ. ಇದೇ ತರಹದಲ್ಲಿ ವೇಗವನ್ನೂ ನಿಯಂತ್ರಿಸುವರು. ರೈಲು ನಿಲ್ಲುವಾಗ ಮತ್ತು ಚಲಿಸಲಾರಂಭಿಸುವಾಗ, ಗಟ್ಟಿಯಾದ ಗಂಟೆ ಸದ್ದು ಮಾಡುವುದು ಕೂಡಾ ಅವನ ಕೆಲಸಗಳಲ್ಲೊಂದು. ಇದರ ಚಾಲಕನಿಗೆ Grip Man ಎನ್ನುವರು. ಈ ತೆರೆದ ಟ್ರಾಂನಲ್ಲಿನ ಹತ್ತು ನಿಮಿಷಗಳ ಪಯಣದಲ್ಲಿ ನಾವು ಕೂಡಾ ಪುಟ್ಟ ಮಕ್ಕಳಂತಾದುದು ಸುಳ್ಳಲ್ಲ. ಇಂದಿನ ಆಧುನಿಕ ಯುಗದಲ್ಲೂ, ವರ್ಷದಲ್ಲಿ ಸುಮಾರು 13ಮಿಲಿಯ ಜನರು ಇದರಲ್ಲಿ ಪ್ರಯಾಣಿಸುವರು ಎಂದರೆ ಆಶ್ಚರ್ಯವಾಗುವುದಲ್ಲವೇ? ಇದರ ಓಡಾಟಕ್ಕಾಗಿ, ಸಮತಟ್ಟು ಪ್ರದೇಶದಲ್ಲಿ 4.7 ಮೈಲು ಉದ್ದದ ಹಳಿಗಳಿದ್ದರೆ, ಎತ್ತರದ ಪ್ರದೇಶದಲ್ಲಿ ಸುಮಾರು 75 ಮೈಲು ಉದ್ದದ ಹಳಿಗಳಿವೆ. ಈ ಹಳಿಗಳ ಮೇಲೆ ಈ ಕೇಬಲ್ ರೈಲುಗಳು ಇಂದಿಗೂ ಚಲಿಸುತ್ತವೆ!
ಯೂನಿಯನ್ ಸ್ಕ್ವೇರ್(Union Square)
ಪಟ್ಟಣದ ಮಧ್ಯ ಭಾಗದಲ್ಲಿರುವ ಹಾಗೂ ಹಲವಾರು ಅತ್ಯುತ್ತಮ ವ್ಯಾಪಾರೀ ಮಳಿಗೆಗಳು ಮತ್ತು ಹೋಟೇಲುಗಳಿಂದ ಸುತ್ತುವರಿದ, ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಹರಡಿಕೊಂಡಿರುವ ಪ್ರದೇಶವಾಗಿದೆ.. ಇಲ್ಲಿಯ ಯೂನಿಯನ್ ಸ್ಕ್ವೇರ್. ಇದರ ಪ್ರಸಿದ್ಧಿಯಿಂದಾಗಿ, ಇದು ಇಲ್ಲಿಯ ಹೆಗ್ಗುರುತು(Land mark) ಕೂಡಾ ಆಗಿರುತ್ತದೆ. ಮುಂಭಾಗದ ವಿಶಾಲವಾದ ಮೆಟ್ಟಲುಗಳನ್ನೇರಿ ಹೋದರೆ, ಇದರ ಮಧ್ಯ ಭಾಗದಲ್ಲಿರುವ ಧ್ವಜ ಸ್ತಂಭದಲ್ಲಿ ಹಾರಾಡುವ ಬಾವುಟ, ಅಲ್ಲಲ್ಲಿ ಆರಾಮವಾಗಿ ಕುಳಿತಿರುವ ವಿರಳ ಜನ..ಅತ್ಯಂತ ಸ್ವಚ್ಛ, ಸುಂದರ, ಶಾಂತ ಪರಿಸರ. ಒಂದು ಕಡೆಗೆ, ಕೆಲವು ಚಿತ್ರಗಾರರು, ತಾವು ಬರೆದ ಬಹು ಚಂದದ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದರು. ಪಕ್ಕದಲ್ಲಿದ್ದ ಅಂಗಡಿಯಿಂದ ಐಸ್ ಕ್ರೀಂ ತಂದು, ಅಲ್ಲಿ ಕುಳಿತು ಸವಿದೆವು. ನಮ್ಮ ಆ ದಿನದ ಸುತ್ತಾಟ ಮುಗಿಸಿ ಮನೆ ಸೇರುವಾಗ ರಾತ್ರಿ ಹನ್ನೊಂದು ಗಂಟೆ.
ಸ್ವಲ್ಪ ದಿನಗಳಲ್ಲಿಯೇ ನಮಗೊಂದು ಆಶ್ಚರ್ಯ ಕಾದಿತ್ತು. ನಾವಿಬ್ಬರೇ SFO ಗೆ ರೈಲಿನಲ್ಲಿ ಹೋಗಿ ಸುತ್ತಾಡಿ ಬರಲು ಅಳಿಯ ಸಲಹೆ ನೀಡಿದ. ಆದರೆ ಇಬ್ಬರಿಗೂ ಧೈರ್ಯ ಅಷ್ಟಕ್ಕಷ್ಟೇ! ಎಲ್ಲಿಯಾದರೂ ಕಳೆದುಹೋದರೆ ಎನ್ನುವ ಭಯ! ಆದರೆ ಇದನ್ನು ಅವನಲ್ಲಿ ಹೇಳಲಾದೀತೇ? ನಾವು ಹಿಂದೆ ಮುಂದೆ ನೋಡಿದಾಗ, ಇಬ್ಬರೂ ತುಂಬಾ ಧೈರ್ಯ ತುಂಬಿ, ಸ್ಥಳೀಯ ರೈಲಿನಲ್ಲಿ ಹೋಗುವ ಪ್ರತೀ ಹಂತವನ್ನೂ ಚೆನ್ನಾಗಿ ಪಾಠಮಾಡಿ ನಮ್ಮನ್ನು ತಯಾರು ಮಾಡಿದರೆನ್ನಿ.
ಅಂತೂ ಬೆಳಗ್ಗಿನ ತಿಂಡಿ ಮುಗಿಸಿ, ಮಧ್ಯಾಹ್ನದ ಊಟಕ್ಕಾಗಿ ಮೊಸರನ್ನ ಕಟ್ಟಿಕೊಂಡು ಸ್ವಲ್ಪ ಆತಂಕದಲ್ಲೇ ಪ್ರಾರಂಭವಾಯ್ತು ನಮ್ಮ ಪಯಣ. ಅಲ್ಲಿ ಖರ್ಚು ಮಾಡಲು ಬೇಕಾದಷ್ಟು ಹಣವನ್ನೂ ಕೈಯಲ್ಲಿರಿಸಿದರು. ಮನೆ ಹತ್ತಿರದ ರೈಲು ನಿಲ್ದಾಣದಲ್ಲಿ ನಮ್ಮನ್ನಿಳಿಸಿ ಅಳಿಯ ಹೊರಟು ಹೋದ. ಹಳ್ಳಿ ಗಮಾರರನ್ನು ಮುಂಬೈ ಪಟ್ಟಣದ ಮಧ್ಯೆ ತಂದು ನಿಲ್ಲಿಸಿದಂತಾಗಿತ್ತು ನಮ್ಮ ಪರಿಸ್ಥಿತಿ! ನಿಲ್ದಾಣದಲ್ಲಿ ಯಾವುದೇ ಟಿಕೆಟ್ ಕೌಂಟರ್ ಇರಲಿಲ್ಲ… ಎಲ್ಲಾ ಯಾಂತ್ರೀಕೃತ. ಹೇಗೂ ನೀರಿಗೆ ಇಳಿದಾಗಿದೆ, ಈಜಿಯೇ ಬಿಡೋಣವೆಂದುಕೊಂಡು, ಆಚೀಚೆ ನಿರುಕಿಸಿದಾಗ, ಅಲ್ಲೇ ಮುಂಭಾಗದಲ್ಲೇ ಇತ್ತು.. ರೈಲುಗಳು ಆ ನಿಲ್ದಾಣದ ಮೂಲಕ ಹಾದು ಹೋಗುವ ಸಮಯ, ರೈಲು ಹೋಗುವ ಊರುಗಳು ಮತ್ತು ದರದ ಪಟ್ಟಿ. SFOಗೆ ನಮೂದಿಸಿದ್ದ ಟಿಕೆಟ್ ದರಗಳನ್ನು ನೋಡಿಕೊಂಡು, ಅದರ ಪಕ್ಕದಲ್ಲಿದ್ದ ಯಂತ್ರದಲ್ಲಿ, ನಾವು ಹೋಗಲಿರುವ ಸ್ಥಳದ ಹೆಸರನ್ನು ನಮೂದಿಸಿ, ದುಡ್ಡನ್ನು ಹಾಕಿದಾಗ, ಕ್ಷಣ ಮಾತ್ರದಲ್ಲಿ ಉಳಿದ ಹಣ ನಮಗೆ ಚಿಲ್ಲರೆ ಸಹಿತ ವಾಪಾಸು ಬಂದಾಗ ಆಶ್ಚರ್ಯ! ಇದು ದಶಕದ ಹಿಂದಿನ ಮಾತು ಆದ್ರಿಂದ ಹೀಗೆ..ಈಗ ನಮ್ಮಲ್ಲೂ ಇದೆ ಎನ್ನಿ. ಹಿಂತಿರುಗುವ ಟಿಕೆಟ್ ಕೂಡಾ ಜೊತೆಗೇ ಖರೀದಿಸಿದೆವು.
ಅಲ್ಲಿ, ಸ್ಥಳೀಯ ರೈಲುಗಳಿಗೆ, ಕಾಲ್ ಟ್ರೈನ್(Caltrain) ಎನ್ನುವರು. ಅತ್ಯಂತ ಸುವ್ಯವಸ್ಥಿತ, ಸ್ವಚ್ಛ ವಿದ್ಯುತ್ ರೈಲು, ಅಲ್ಲಲ್ಲಿ ನಿಲ್ದಾಣಗಳಲ್ಲಿ ನಿಂತು, ಪ್ರಯಾಣಿಕರನ್ನು ಏರಿಸಿ, ಇಳಿಸಿಕೊಂಡು ಮುಂದುವರಿಯುವಾಗ ಅದರ ನಿರ್ವಾಹಕರ ಮುತುವರ್ಜಿಯನ್ನು ಮೆಚ್ಚಲೇ ಬೇಕು. ಅಂಗವಿಕಲರಿಗಾಗಿ, ರೈಲಿನ ತಳಭಾಗದಿಂದ ಸಮತಲದ ಮೆಟ್ಟಲೊಂದು ಪ್ಲಾಟ್ ಫೋರ್ಮ್ ಮೇಲಕ್ಕೆ ಬರುತ್ತದೆ. ಅದರಲ್ಲಿ ವ್ಯಕ್ತಿಯನ್ನು ಅವರೇ ಗಾಲಿಕುರ್ಚಿಸಹಿತ ಕುಳ್ಳಿರಿಸಿದ ತಕ್ಷಣ ಆ ಮೆಟ್ಟಲು ರೈಲಿನ ಒಳಗೆ ಅವರನ್ನು ಬಿಡುತ್ತದೆ. ಅದಷ್ಟೂ ಆದ ಬಳಿಕ, ನಿರ್ವಾಹಕರು ಪೂರ್ತಿ ಪ್ಲಾಟ್ ಫೋರ್ಮ್ ನಲ್ಲಿ ಬೇರೆ ಯಾರಾದರೂ ಪ್ರಯಾಣಿಕರು ಇರುವರೇ ಎಂದು ಸರಿಯಾಗಿ ಪರೀಕ್ಷಿಸಿದ ಬಳಿಕವೇ ರೈಲು ಮುಂದೆ ಹೋಗುವುದು. ಇದನ್ನು ನೋಡುವಾಗ, ‘ನಮ್ಮಲ್ಲೂ ಈ ತರಹದ ವ್ಯವಸ್ಥೆ ಇದ್ದರೆ ಎಷ್ಟು ಚೆನ್ನಾಗಿತ್ತು!’ ಅನ್ನಿಸದೆ ಇರಲಿಲ್ಲ. ಕುತೂಹಲ, ಅಚ್ಚರಿ, ಸಂತಸ ತುಂಬಿದ ಈ ರೈಲು ಪ್ರಯಾಣದ ನೆನಪು ಇಂದಿಗೂ ಖುಷಿಕೊಡುತ್ತದೆ.
ಬೆಳಗ್ಗೆ ಹನ್ನೊಂದು ಗಂಟೆಯಾಗಿತ್ತು, ನಾವು SFO ತಲಪುವಾಗ. SFO ರೈಲು ನಿಲ್ದಾಣದಿಂದ ಪಟ್ಟಣಕ್ಕೆ ಸಿಟಿ ಬಸ್ಸು ಹಿಡಿದೆವು. ಪಟ್ಟಣದೊಳಗೆ ಎಲ್ಲೇ ಎಷ್ಟು ದೂರ ಪಯಣಿಸಿದರೂ ಟಿಕೆಟ್ ದರ, ಒಬ್ಬರಿಗೆ ಎರಡು ಡಾಲರ್. ಇಳಿಯುವ ಸ್ಥಳ ಬಂದಾಗ ತಿಳಿಸಬೇಕೆಂದು ಚಾಲಕನಲ್ಲಿ ಹೇಳಿದ್ದೆವು. ಆದರೆ ಅವರು ಹೇಳಿದಾಗ ನಮಗೆ ತಿಳಿಯದೆ ನಾವು ಒಂದು ಸ್ಟಾಪ್ ಮುಂದೆ ಇಳಿಯುವಂತಾಯಿತು. ಅಲ್ಲೇ ವಿಚಾರಿಸಿಕೊಂಡು, ಪುನ: ಒಂದು ಭೂಗತ ರಸ್ತೆಯ ಮೂಲಕ ಯೂನಿಯನ್ ಸ್ಕ್ವೇರ್ ಗೆ ತಲಪಿ, ನಮ್ಮ ಮೊಸರನ್ನದ ಡಬ್ಬ ಖಾಲಿ ಮಾಡಿದೆವು. ಇಡೀ ದಿನ ಯಾವುದೇ ವಾಹನದಲ್ಲಿ ಸುತ್ತಾಡಲು ಪಾಸ್ ದರ ಒಬ್ಬರಿಗೆ $13 ತೆತ್ತು, ಅಲ್ಲೇ ಪಕ್ಕದಲ್ಲಿದ್ದ ಟ್ರಾಂನಲ್ಲಿ ಸುತ್ತಿ, ಪಿಯರ್ 39 ಮತ್ತೊಮ್ಮೆ ವೀಕ್ಷಿಸಿ, ಘಿರಾರ್ ಡೆಲ್ಲಿಯಲ್ಲಿ ಐಸ್ ಕ್ರೀಂ ತಿಂದು, ಅಲ್ಲಿಯ ಸುಂದರವಾದ ಸಸ್ಯ ಶಾಸ್ತ್ರೀಯ ಉದ್ಯಾನವನವನ್ನು (Botanical Park) ನೋಡಲು ಹೊರಟೆವು.
ಸುಮಾರು 55ಎಕರೆ ಪ್ರದೇಶದಲ್ಲಿ ಪಸರಿಸಿರುವ ಈ ಬೃಹತ್ ಉದ್ಯಾನವನವು 9000ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳನ್ನೊಳಗೊಂಡಿದೆ. 1880ರಲ್ಲೇ ಇದನ್ನು ಸಸ್ಯ ಶಾಸ್ತ್ರೀಯ ಉದ್ಯಾನವನವೆಂದು ಘೋಷಿಸಲ್ಪಟ್ಟಿದ್ದರೂ, 1937ರಲ್ಲಷ್ಟೇ ವಿಶೇಷ ಸಸ್ಯಗಳನ್ನು ನೆಟ್ಟು ಸಂರಕ್ಷಿಸಲು ಪ್ರಾರಂಭಿಸಲಾಯಿತು. ಟಿಕೆಟ್ ಖರೀದಿಸಿ ಓಳ ಹೋದಾಗ, ಆಕಾಶದೆತ್ತರ ಬೆಳೆದ ಹೆಮ್ಮರಗಳು ನಮ್ಮನ್ನು ಸ್ವಾಗತಿಸಿದವು. ಅತಿ ವಿರಳವಾಗಿತ್ತು ಜನಗಳ ಓಡಾಟ. ಅದಾಗಲೇ ಸಂಜೆ 3:30; ಮುಂದುವರಿದಂತೆ ಕಂಡ ದೃಶ್ಯ ಅತ್ಯಂತ ಚೇತೋಹಾರಿಯಾಗಿತ್ತು. ವಿಶಾಲವಾದ ಆಯತಾಕಾರದ ಸಮತಟ್ಟು ಬಯಲಿನಲ್ಲಿ ನಿಗದಿತ ಅಂತರದಲ್ಲಿ, ನಿಗದಿತ ಎತ್ತರಕ್ಕೆ ಅಚ್ಚುಕಟ್ಟಾಗಿ ಕತ್ತರಿಸಿದ ಒಂದೇ ರೀತಿಯ ನೂರಾರು ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿ ಗಿಡದ ಕೆಳಗಡೆಗೆ ಕುಳಿತುಕೊಳ್ಳಲು ಕಬ್ಬಿಣದ ಆಸನದ ವ್ಯವಸ್ಥೆ ಇದೆ. ಎದುರು ಭಾಗದಲ್ಲಿ ದೊಡ್ಡದಾದ ಬಯಲು ರಂಗಮಂದಿರವಿದ್ದರೆ, ಬಯಲಿನ ಇನ್ನೊಂದು ತುದಿಯಲ್ಲಿ ಅಮೃತಶಿಲೆಯಲ್ಲಿ ಕಡೆದ ಮಾತೆ ಮೇರಿಯ ಸುಮಾರು ಹತ್ತು ಅಡಿ ಎತ್ತರದ ವಿಗ್ರಹವಿದೆ.
ರಂಗಮಂದಿರದಲ್ಲಿ ಯಾವುದೋ ಆಂಗ್ಲ ನಾಟಕದ ಅಭ್ಯಾಸ ನಡೆಯುತ್ತಿತ್ತು. ಜೋರಾಗಿ ಬೀಸುವ ಶೀತಗಾಳಿಯು ಮೈ ಕೊರೆಯಲು ಪ್ರಾರಂಭವಾದರೂ, ಸ್ವಲ್ಪ ಹೊತ್ತು ಅವರ ನಾಟಕವನ್ನು ನೋಡಿ ಮುಂದುವರಿದಾಗ ಕಣ್ಣಿಗೆ ಬಿತ್ತು.. ಬಯಲಿನ ಮಧ್ಯಭಾಗದಲ್ಲಿರುವ ಪುಟ್ಟ ಕಾರಂಜಿ ಕೊಳ ಹಾಗೂ ಅದರ ಸುತ್ತಲೂ ಕುಳಿತುಕೊಳ್ಳಲು ಹಾಕಿದ್ದ ಉದ್ದುದ್ದ ಆಸನಗಳು. ಬಯಲಿನ ಒಂದು ಪಕ್ಕದಲ್ಲಿರುವ ವಿಜ್ಞಾನ ಮಂದಿರವನ್ನು ಸಮಯದ ಅಭಾವದಿಂದ ನೋಡಲಾಗಲಿಲ್ಲ. ಬಯಲಿನ ಮುಂದಕ್ಕೆ ಎತ್ತರದಲ್ಲಿ ಪುಟ್ಟ ಪಾರಂಪರಿಕ ಕಟ್ಟಡದಲ್ಲಿ; ಮುಖ್ಯವಾಗಿ ಮಕ್ಕಳಿಗಾಗಿ, ಗೊಂಬೆಗಳು, ಚಿತ್ರಗಳು, ಪುಸ್ತಕಗಳಂತಹ ತರೆಹೇವಾರು ವಸ್ತುಗಳು ಮಾರಾಟಕ್ಕಿದ್ದವು. ಅದರ ಒಳಹೋಗಿ ಕಣ್ಣಾಡಿಸಿ, ಅಲ್ಲಿಂದ ಮುಂದಕ್ಕಿದ್ದ ಪುಟ್ಟ ಮೆಟ್ಟಲಿಳಿದು ಹೋದಾಗ… ಜಪಾನೀಯರ ಟೀ ತೋಟ ನಮ್ಮ ಕಣ್ಮುಂದೆ!
ನೂರಾರು ಟೀ ಗಿಡಗಳು ಚೊಕ್ಕವಾಗಿ ಕತ್ತರಿಸಿಕೊಂಡು ಹೆಮ್ಮೆಯಿಂದ ನಿಂತಿವೆ.. ಅವುಗಳ ನಡುವೆ ಪುಟ್ಟ ಝರಿಯೊಂದು ಹರಿಯುತ್ತಿದೆ. ಅದರಲ್ಲಿ ವಿಶೇಷ ತರಹದ ಬಣ್ಣದ ಮೀನುಗಳು, ಆಮೆಗಳು ಉಲ್ಲಾಸದಿಂದ ಈಜುತ್ತಾ ವಿಹರಿಸುವುದು ನೋಡಲು ಬಹು ಉಲ್ಲಾಸದಾಯಕ! ಮುಂದಕ್ಕೆ, ಹಲವು ಮೆಟ್ಟಲನ್ನೇರಿ ಹೋದರೆ ಎತ್ತರಕ್ಕಿದೆ ಸುಂದರ ಪಗೋಡ. ಬಣ್ಣದ ಈ ಪಗೋಡವು, ದಟ್ಟ ಮರಗಳ ಸುಂದರ ಪರಿಸರದ ಮಧ್ಯೆ ಧ್ಯಾನಾಸಕ್ತವಾಗಿದ್ದಂತೆ ನಿಂತಿದೆ. ಅಲ್ಲಲ್ಲಿ ಅರಳಿ ನಿಂತ ಬಹುಬಣ್ಣಗಳ ಹೂ ಪೊದೆಗಳು, ಅಲ್ಲಲ್ಲಿ ತೊರೆಗೆ ಕಟ್ಟಿದ ಸಣ್ಣ ದೊಡ್ಡ ಅಲಂಕಾರಿಕ ಸೇತುವೆಗಳು ಪರಿಸರದ ಸೊಬಗನ್ನು ಇಮ್ಮಡಿಗೊಳಿಸಿವೆ. ಲಭ್ಯವಿದ್ದ ಸಮಯದಲ್ಲಿ ಆದಷ್ಟು ಹೆಚ್ಚು ನೋಡುವ ಆತುರದಿಂದ, ಲಗುಬಗನೆ ನಮ್ಮ ವೀಕ್ಷಣೆ ನಡೆದಿತ್ತು. ಉದ್ಯಾನವನವು ಮುಚ್ಚುವ ಸಮಯವಾಗಿದ್ದಲ್ಲದೆ, ಕತ್ತಲಾವರಿಸತೊಡಗಿತು. ಆಗಲೇ ನಮಗೆ ನೆನಪಾದುದು… ನಾವಿಬ್ಬರೇ ರೈಲಿನಲ್ಲಿ ಹಿಂತಿರುಗಬೇಕಿತ್ತೆಂದು! ನಸುಗತ್ತಲೆಯಲ್ಲಿಯೇ, ಬಸ್ಸು ಹಿಡಿದು ರೈಲು ನಿಲ್ದಾಣಕ್ಕೆ ತೆರಳಿ ನಾವಿದ್ದ ಮೌಂಟೆನ್ ವ್ಯೂಗೆ ಹೋಗುವ ರೈಲು ಹಿಡಿದು ಕುಳಿತಾಗ, ನಮ್ಮ ಆ ದಿನವು, ಏನೂ ತೊಂದರೆಯಾಗದೆ, ಸಾಧ್ಯವಾದುದನ್ನೆಲ್ಲಾ ನೋಡಿ ಖುಷಿಪಟ್ಟ ನೆಮ್ಮದಿ. ಹಾಗೆಯೇ ಸ್ವಲ್ಪ ಹೆಮ್ಮೆಯೂ ಆಯಿತೆನ್ನಿ! ರೈಲು ಇಳಿದಾಗ ದಟ್ಟ ಕತ್ತಲು. ಅಳಿಯ ಕಾರು ತಂದು ಕಾದು ನಿಂತಿದ್ದ. ಬಹಳ ಹೊತ್ತಾದರೂ ನಮ್ಮನ್ನು ಕಾಣದೆ ಸ್ವಲ್ಪ ಗಾಬರಿಯೂ ಆದಂತಿತ್ತು. ಆದರೆ ನಮ್ಮ ಈ ದಂಡಯಾತ್ರೆಯು ಸಂಪೂರ್ಣ ಯಶಸ್ವಿಯಾದುದು ಮಾತ್ರ ನಿಜ..!
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35498
–ಶಂಕರಿ ಶರ್ಮ, ಪುತ್ತೂರು.
ನಿಮಗಾದ ಅನುಭವ ಆಸಕ್ತರಿಗೆ ಮಾರ್ಗದರ್ಶನ.
ಧನ್ಯವಾದಗಳು ಮೇಡಂ.
ಪ್ರಸಾರದ ಅನುಭವ ದ ಅಭಿವ್ಯಕ್ತಿ ಚೆನ್ನಾಗಿದೆ.. ಮೇಡಂ..
ಧನ್ಯವಾದಗಳು.
ಧನ್ಯವಾದಗಳು ನಾಗರತ್ನ ಮೇಡಂ..
ಹಲವಾರು ಕೌತುಕಗಳ ವಿವರಗಳು ಮತ್ತು ನಿಮ್ಮ ಸಾಹಸಗಳನ್ನೊಳಗೊಂಡ ಪ್ರವಾಸ ಕಥನ ಚಂದಿದೆ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.
ಪ್ರವಾಸ ಕಥನ ತುಂಬಾ ಚೆನ್ನಾಗಿ ಮುಂದುವರಿಯುತ್ತಿದೆ. ಜೊತೆಗೆ ಚಂದದ ಪಟಗಳು ಮನ ಸೆಳೆಯುತ್ತವೆ