ಸಸ್ಯ ಹಾಗೂ ಲೋಹಗಳ ಸುತ್ತ

Share Button

ಜಗತ್ತಿನಲ್ಲಿ ಸಸ್ಯ ಸಾಮ್ರಾಜ್ಯ ಅಗಾಧವಾದದ್ದು. ಸಾವಿರಾರು ಪ್ರಭೇದಗಳು ಅದರಲ್ಲೂ ಸಾವಿರಾರು ಉಪಪ್ರಭೇದಗಳು ಇದ್ದು ಪ್ರತಿಯೊಂದು ಒಂದು ವೈಶಿಷ್ಟ್ಯ ಪೂರ್ಣ ಗುಣಲಕ್ಷಣಗಳನ್ನು ಹೊಂದಿದೆ. ಸಸ್ಯ ಸಾಮ್ರಾಜ್ಯದಲ್ಲಿ ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ಅನೇಕ ತರದ ಮರಗಳು, ಮಾನವ ಸೇವನೆಗೆ ಉಪಯುಕ್ತ ಗಿಡಗಳು ಇವೆ. ಇದಲ್ಲದೆ ಹಲವಾರು ಗಿಡಮರಗಳಿಗೆ ಮಣ್ಣಿನ ಗುಣಲಕ್ಷಣಗಳನ್ನು ಮಾರ್ಪಡಿಸುವಂತಹ ಶಕ್ತಿಯಿದೆ. ಹಲವು ಸಸ್ಯಪ್ರಭೇದಗಳು ಮಣ್ಣನ್ನು ಪ್ರವೇಶಿಸಿ ಹಾನಿಕಾರಕ ಹಾಗೂ ಘನ ಲೋಹಗಳನ್ನು ಹೀರಿ, ಮಾನವ ದೇಹವನ್ನು ಪ್ರವೇಶಿಸದಂತೆ ತಡೆಗಟ್ಟುತ್ತವೆ. ಘನ ಲೋಹಗಳೆಂದರೆ ಅಣು ಸಂಖ್ಯೆ 20 ಕ್ಕಿಂತ ಅಧಿಕವಾಗಿರುವಂಥಹದು. ಇದು ನಿಜಕ್ಕೂ ವಿಸ್ಮಯಕಾರಕ. ಈ ಪ್ರಬಂಧದ ಮೂಲಕ ಅಂತಹ ಸಸ್ಯಗಳ ಪರಿಚಯ ಹಾಗೂ ಅವುಗಳ ಪಾತ್ರಗಳ ಒಂದು ಅವಲೋಕನದ ಪ್ರಯತ್ನ ಮಾಡೋಣವೇ?

ಎಲ್ಲರಿಗೂ ಪ್ರಿಯವಾದ ಚಿನ್ನದಿಂದ ಪ್ರಾರಂಭಿಸೋಣ. ಚಿನ್ನ ಇತರ ಎಲ್ಲ ಲೋಹಗಳಿಗಿಂತ ಭಿನ್ನ. ಇದು ಮಾತ್ರ ಮೂಲ ವಸ್ತುವಾಗಿಯೇ ಭೂಮಿಯಲ್ಲಿ ಸಿಗುತ್ತದೆ. ಅದನ್ನು ಬೇರ್ಪಡಿಸಲು ಯಾವ ರಾಸಾಯನಿಕ ಪ್ರಕ್ರಿಯೆ ಬೇಕಿಲ್ಲ. ಹಾಗೆಯೇ ಚಿನ್ನ ಬೇರ್ಪಡಿಸಿದ ಮೇಲೆ ಉಳಿದ ಕಲ್ಲಿನ ಚೂರು ಮತ್ತು ಪುಡಿಗಳನ್ನು ಒಂದೆಡೆ ರಾಶಿ ಹಾಕುತ್ತಾರೆ. ಇದರಲ್ಲಿಯೂ ಶೇಷಭಾಗದ ಚಿನ್ನವಿರುತ್ತದೆ ಎಂಬುದು ವಿಶೇಷ. ನ್ಯೂಜಿಲೆಂಡಿನಲ್ಲಿ ಒಂದು ವಿನೂತನ ಪ್ರಯೋಗ ಮಾಡಿದ್ದಾರೆ. ಬ್ರಾಸಿಕ ಜುನ್‌ಸಿಯ (Brasica juncea) ಎಂಬ ಬಹಳ ತ್ವರಿತವಾಗಿ ಬೆಳೆಯುವ ಗಿಡವನ್ನು ಚಿನ್ನ ಹೆಚ್ಚಿರುವ ಮಣ್ಣು ಅಥವಾ ಅದಿರು ಜಾಗಗಳಲ್ಲಿ ನೆಟ್ಟಿದ್ದಾರೆ. ಈ ಗಿಡದ ವಿಶೇಷತೆಯೆಂದರೆ ಇದರ ಬೇರು ಚಿನ್ನವನ್ನು ಹೀರಿಕೊಂಡು ಶೇಖರಿಸುತ್ತದೆ. ಪ್ರತಿ ಗಿಡದ ಶೇಖರಣೆ ಸುಮಾರು ೫೭ ಪಿ.ಪಿ.ಎಮ್ ನಷ್ಟು ಎಂದರೆ ನಿಜಕ್ಕೂ ವಿಸ್ಮಯಕಾರಿ. ಇದರ ಒಂದು ಅಂದಾಜು ಬೇಕಿದ್ದರೆ ಸುಮಾರು ಒಂದು ಹೆಕ್ಟೇರ್‌ನಲ್ಲಿ ಗಿಡ ಬೆಳೆಸಿದರೆ ಒಂದು ಕೆ.ಜಿ. ಚಿನ್ನ ಸಿಗುತ್ತದೆ ಎಂದರೆ ಆಶ್ಚರ್ಯವಲ್ಲವೇ? ಇನ್ನು ಈ ಗಿಡಗಳು ಪೂರ್ತಿಯಾಗಿ ಬೆಳೆದ ಮೇಲೆ ಮಣ್ಣಿಗೆ ಗಂಧಕದ ದ್ರಾವಣವನ್ನು ಸಿಂಪಡಿಸಿದರೆ ಮಣ್ಣಿನಲ್ಲಿರುವ ಉಳಿದ ಚಿನ್ನವನ್ನು ಗಿಡದ ಬೇರುಗಳು ಹೀರಿಕೊಳ್ಳುತ್ತವೆ. ಈಗ ಗಿಡಗಳು ಒಣಗಲು ಪ್ರಾರಂಭವಾಗಿ ಪೂರ್ತಿ ಒಣಗಿದ ಮೇಲೆ ಅವುಗಳನ್ನು ವಿದ್ಯುತ್ ಉತ್ಪಾದನೆ ಅಥವಾ ಬೇರೆ ಕೆಲಸಕ್ಕೆ ಬೆಂಕಿ ಹಚ್ಚಿ ಉಪಯೋಗಿಸುತ್ತಾರೆ. ಉಳಿದ ಬೂದಿಯಲ್ಲಿ ಚಿನ್ನದ ಅಂಶವನ್ನು ಬೇರ್ಪಡಿಸುತ್ತಾರೆ. ಈ ಪದ್ಧತಿಗೆ ಸಸ್ಯ ಗಣಿಗಾರಿಕೆ (Phytomining) ಎನ್ನಬಹುದು. ಇದು ಬಹಳ ಕಡಿಮೆ ಖರ್ಚಿನಲ್ಲಿ ಲೋಹವನ್ನು ಉತ್ಪಾದಿಸಬಹುದಾದಂತಹ ಒಂದು ವಿಧಾನ. ಇದರಲ್ಲಿ ವಾತಾವರಣದ ಯಾವ ಮಾಲಿನ್ಯತೆ ಇರುವುದಿಲ್ಲ. ಮಣ್ಣು ಬಹಳ ಫಲವತ್ತಾಗುತ್ತದೆ. ಒಂದು ಬೆಲೆಬಾಳುವ ವಾಣಿಜ್ಯ ಬೆಳೆ ಎಂದರೆ ತಪ್ಪಾಗಲಾರದು.

ಬ್ರಾಸಿಕ ಜುನ್‌ಸಿಯ (Brasica juncea)

ಫೈಟೋ ರೆಮಿಡಿಯೇಷನ್ (Phyto remediation) ಎಂದರೆ ‘ಸಸ್ಯ ಪರಿಹಾರೋಪಾಯ’. ಈ ಪರಿಹಾರವು ಬಹಳ ಕಡಿಮೆ ಖರ್ಚು ಉಳ್ಳದ್ದು, ಪರಿಸರ ಸ್ನೇಹಿ, ಮಣ್ಣುಗಳನ್ನು ಬಹಳ ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ ಹಾಗೂ ಅಂತರ್ಜಲವನ್ನು ಶುದ್ಧೀಕರಿಸುತ್ತದೆ. ಹಲವಾರು ಸಸ್ಯಗಳು ಭೂಮಿಯಲ್ಲಿರುವ ವಿಷಪೂರಿತವಾದ ಲೋಹಗಳನ್ನು ಹೀರಿಕೊಂಡು ಮಣ್ಣನ್ನು ಸಾರಯುಕ್ತವನ್ನಾಗಿ ಮಾಡಲು ಸಹಕರಿಸುತ್ತವೆ. ಅಲ್ಲದೆ ಸಾವಯವ ವಿಷಪೂರಿತ ವಸ್ತುಗಳಾದ ಪೆಟ್ರೋಲಿಯಂ, ತೈಲ ಇವುಗಳನ್ನು ಹೀರಿ ಮಣ್ಣನ್ನು ಶುದ್ಧೀಕರಿಸುತ್ತವೆ. ಈ ಸಸ್ಯಗಳು ಬೇರುಗಳಲ್ಲಿ ಘನ ಲೋಹಗಳನ್ನು ಶೇಖರಿಸಿ ಮಣ್ಣಿನಿಂದ ಬೇರ್ಪಡಿಸಿ, ಸೋರುವಿಕೆಯನ್ನು ತಡೆಗಟ್ಟಿ ವಿಸರ್ಜಿಸಿ ಶುದ್ಧೀಕರಿಸುತ್ತದೆ. ಇದಲ್ಲದೆ ಸಸ್ಯ ಗಣಿಗಾರಿಕೆ (Phyto extraction), ಸಸ್ಯಸ್ಥಿರತೆ (Phyto stabilisation), ಸಸ್ಯ ಸೋಸುವಿಕೆ (Phyto filteration), ಸಸ್ಯ ಬಾಷ್ಪೀಕರಣ (Phyto volatalisation) ಎಂಬ ವಿಧವಿಧವಾದ ಪ್ರಕ್ರಿಯೆಗಳಿಂದ ಸಸ್ಯಗಳು ಮಣ್ಣಿನಲ್ಲಿರುವ ಲೋಹ ಹಾಗೂ ಇತರೆ ಅಪಾಯಕಾರಿ ಅಂಶಗಳನ್ನು ನಿವಾರಿಸುತ್ತದೆ. ಇವು ಸಸ್ಯಗಳು ಮಾಡುವ ನಾನಾ ಪ್ರಕ್ರಿಯೆಗಳು. ಮಾನವನಿಂದ ಸಾಧ್ಯವಾಗದ ಈ ಕ್ರಿಯೆಗಳನ್ನು ಸಸ್ಯಗಳು ಬಹಳ ಪರಿಣಾಮಕಾರಿಯಾಗಿ ನೆರವೇರಿಸುತ್ತವೆ.

ಮೊದಲಿಗೆ ಐದು ಪ್ರಸಿದ್ಧ ಸಸ್ಯಗಳನ್ನು ಅವಲೋಕಿಸೋಣ. ಸಾಸಿವೆ ಅಥವಾ ಇಂಡಿಯನ್ ಮಸ್ಟರ್ಡ್ (Brassica juncea)) ಬಹಳ ಸಾಮರ್ಥ್ಯವುಳ್ಳ ಒಂದು ಗಿಡ. ಇದು ಬೇರೆ ಗಿಡಗಳಿಗಿಂತ ಮೂರು ಪಾಲು ಅಧಿಕ ಕ್ಯಾಡ್‌ಮಿಯಂ (Cadmium) ಲೋಹವನ್ನು ಮಣ್ಣಿನಿಂದ ಬೇರ್ಪಡಿಸಬಲ್ಲದು. ಹಾಗೆ ಶೇಕಡ 28 ರಷ್ಟು ಸೀಸ (Lead), ಶೇಕಡ 48 ರಷ್ಟು ಸೆಲೆನಿಯಂ (Selenium) ನ್ನೂ ಹೀರಬಲ್ಲದು. ಅಲ್ಲದೆ ಸತು (Zinc), ಪಾದರಸ (Mercury), ತಾಮ್ರ (Copper) ವನ್ನು ಸಾಕಷ್ಟು ಪ್ರಮಾಣದಲ್ಲಿ ಹೀರಬಲ್ಲದು. ಇದರ ವಿಶೇಷತೆ ಎಂದರೆ ರೇಡಿಯೋ ವಿಕಿರಣ ಸಿ-137 ನ್ನು ಕೂಡ ಹೀರಬಲ್ಲದು. ರಷ್ಯಾದ ಚೆರ್ನೋಬಿಲ್ ಅಣು ರಿಯಾಕ್ಟರ್‌ನಲ್ಲಿ ಆದ ಅವಘಡದಲ್ಲಿ ಇದನ್ನು ವಿಶೇಷವಾಗಿ ಬಳಸಿ ವಿಕಿರಣವನ್ನು ಹತೋಟಿಗೆ ತಂದರೆಂಬುದನ್ನು ಇಲ್ಲಿ ನೆನಪಿಸಬಹುದು.

ಎಲ್ಲೋ (Salix Species) ನೀರನ್ನು ಇಷ್ಟಪಡುವ ಸಸ್ಯಗಳು. ಇವು ಕ್ಯಾಡ್‌ಮಿಯಂ ಲೋಹ (Cadmium), ನಿಕ್ಕಲ್ (Nickel), ಸೀಸ (Lead) ಅಲ್ಲದೆ ಡೀಸೆಲ್ ನಂತಹ ವಿಷಕಾರಿ ತೈಲಗಳನ್ನು ಮಣ್ಣಿನಿಂದ ಹೀರಬಲ್ಲದು. ‘ಐಕೊರ್ನಿಯ ಕ್ರಾಸಿಪ್’ (Eichhornia crassipes) ಒಂದು ಜಲಸಸ್ಯ. ಇದೂ ಕೂಡ ಹಲವಾರು ಘನ ಲೋಹಗಳನ್ನು ಹೀರಬಲ್ಲದು. ಈ ಜಲಸಸ್ಯಗಳು ಭಾರಿ ಪ್ರಮಾಣದ ಪಾದರಸವನ್ನು ಹೀರಬಲ್ಲವು.

ಮೂರನೆಯದಾಗಿ ಪೋಪ್ಲಾರ್ ಮರ (Populus deltoides) ಒಂದು ಬಹಳ ಪರಿಣಾಮಕಾರಿ ವೃಕ್ಷ. ಇದು ಸಾವಯವ ವಿಷಕಾರಕ ವಸ್ತುಗಳಾದ ಟ್ರೈಕ್ಲೋರೋ ಇಥಲೀನ್, ಬೆನ್‌ಜಿನ್, ಟೋಲಿನ್, ಕ್ಸೈಲೀನ್, ಕಾರ್ಬನ್ ಟೆಟ್ರಕ್ಲೋರೈಡ್ ಇವುಗಳನ್ನು ಶೇಕಡ 95 ರಷ್ಟು ಮಣ್ಣಿನಿಂದ ಹೀರಿ ಮಣ್ಣನ್ನು ಶುದ್ಧಗೊಳಿಸುತ್ತದೆ. ಪ್ರಾಯಶಃ ಯಾವ ಮರವೂ ಈ ತರಹದ ಕಾರ್‍ಯ ಎಸಗಲಾರದು ಎಂಬ ಮಾತಿದೆ.

ಪೋಪ್ಲಾರ್ ಮರ (Populus deltoides) PC: Internet

ಇಂಡಿಯನ್ ಗ್ರಾಸ್ (Soಡಿghಚಿsಣಡಿoಣum ಟಿuಣಚಿಟಿs) ಒಂದು ಬಹಳ ಪರಿಣಾಮಕಾರಿ ಹುಲ್ಲು. ಇದು ಸುಮಾರು ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳಿಂದ ಮಣ್ಣು ಕಲುಷಿತವಾದರೆ ಅದನ್ನು ಹೀರಿ ಮಣ್ಣನ್ನು ಬೇಸಾಯಕ್ಕೆ ತಯಾರು ಮಾಡುವ ಶಕ್ತಿ ಇರುವಂಥಹ ಸಸ್ಯ.

ಸೂರ್ಯಕಾಂತಿ (Sorghastrotum nutans)ಒಂದು ಮುಖ್ಯವಾದ ಪರಿಣಾಮಕಾರಿ ಗಿಡ ಇದು ಮಣ್ಣಿನಲ್ಲಿರುವ ಹಾನಿಕಾರಕ ಸೀಸ , ಸತು , ಕ್ಯಾಡ್‌ಮಿಯಂ , ತಾಮ್ರ , ಮ್ಯಾಂಗನೀಸ್ ಮತ್ತು ಅರ್ಸೆನಿಕ್ ಗಳನ್ನು ಹೀರಿ ಮಣ್ಣನ್ನು ಶುದ್ಧೀಕರಿಸುತ್ತದೆ. ಅಲ್ಲದೆ, ಹೆಚ್ಚಾಗಿರುವ ಸಾರಜನಕ , ರಂಜಕ , ಪೊಟಾಸಿಯಂ ನ್ನು ತೆಗೆಯಬಲ್ಲದು. ಈ ಸಸ್ಯ ಶೇಕಡ 95% ರಷ್ಟು ವಿಕಿರಣಯುಕ್ತ ಯುರೇನಿಯಂ ಅಲ್ಲದೆ ಸೀಸಿಯಂ ಹಾಗೂ ಸ್ಟ್ರೋನ್ಸ್‌ಶಿಯಂ ನ್ನು ಮಣ್ಣಿನಿಂದ ಬೇರ್ಪಡಿಸಬಲ್ಲದು. ಇದಲ್ಲದೆ ಈ ಕಾರ್ಯವನ್ನು ಓಟ್ (Oat) ಹಾಗೂ ಹೆಸರುಕಾಳಿನ ಸಸ್ಯ ಕೂಡ ಮಾಡಬಲ್ಲದು. ಈ ಎಲ್ಲಾ ಸಸ್ಯಗಳಲ್ಲಿ ಈ ಲೋಹಗಳು ಬೇರಿನಲ್ಲಿ ಕೇಂದ್ರೀಕರಿತವಾಗಿರುವುದರಿಂದ ಬೇರನ್ನು ಕಿತ್ತು ಸುಟ್ಟು ನಾಶ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು. ಇದಲ್ಲದೆ ಇನ್ನು ಹಲವಾರು ಸಸ್ಯಗಳು ಈ ಲೋಹ, ಅಲೋಹ, ನಂಜಿನ ವಿಷಕಾರಿ ಪದಾರ್ಥಗಳನ್ನು ಮಣ್ಣಿನಿಂದ ಹೀರಿ ಮಣ್ಣನ್ನು ಬೇಸಾಯ ಯೋಗ್ಯವಾಗಿ ಮಾಡಬಲ್ಲುದು.

ಅಲ್‌ಪೈನ್ ಪೆನ್ನಿಕ್ರೆಸ್ (Alpine penny cress), ಹೆಂಪ್ (Hemp) ಮತ್ತು ಪಿಗ್‌ವೀಡ್ (Pigweed) ಎಂಬ ಸಸ್ಯಗಳು ಮಣ್ಣಿನಲ್ಲಿರುವ ಹಾನಿಕಾರಕ ಸಾವಯವ ನಂಜಿನ ಪದಾರ್ಥಗಳನ್ನು ಬೇರಿನಲ್ಲಿ ಶೇಖರಿಸಬಲ್ಲವು. ಆಲ್‌ಫಲ್‌ಫ (Alfalfa), ಕೆಲವು ಧಾನ್ಯಗಳ ಸಸಿಗಳು (Corn), ಡೇಟ್‌ಪಾಮ್ಸ್‌ಗಳು (ಖರ್ಜೂರ) ಕೂಡ ಸೂರ್‍ಯಕಾಂತಿಯಷ್ಟೇ ಪರಿಣಾಮಕಾರಿಯಾಗಿ ಲೋಹ, ಅಲೋಹಗಳನ್ನು ಮಣ್ಣಿನಿಂದ ಬೇರ್ಪಡಿಸುವಿಕೆಗೆ ಸಹಕಾರಿಯಾಗಬಲ್ಲವು.

ಸೆಬೆರ್ಟಿಯ ಅಕ್ಯುಮಿನಾಟ (Alpine penny cress),) ಮರವು ಶೇಕಡ 26 ರಷ್ಟು ನಿಕೆಲ್ ಲೋಹವನ್ನು ತನ್ನ ಮರದ ತೊಗಟೆಯ ಹಾಲಿನಲ್ಲಿ ಶೇಖರಿಸಬಲ್ಲುದು. ಸಾಲಿಕ್ಸ್ ಎಂಬ ಸಸ್ಯಗಳ ಪ್ರಭೇದಗಳು ಕ್ಯಾಡ್‌ಮಿಯಂ, ತಾಮ್ರ , ಸೀಸ , ಸತು (ಗಳನ್ನು ಬೇರಿನಲ್ಲಿ ಶೇಖರಿಸಬಲ್ಲವು. ಕ್ಯಾಸ್ಟರ್ ((Castor) ಹರಳು ಸಸ್ಯ ಕಾಡ್‌ಮಿಯಂ ನ್ನು ತೆಗೆಯಬಲ್ಲುದು. ಜೋಳದ ಸಸ್ಯವು ಕಾಡ್‌ಮಿಯಂ, ಸೀಸ, ಸತುವನ್ನು ಮಣ್ಣಿನಿಂದ ಬೇರ್ಪಡಿಸಬಲ್ಲುದು. ಪಾಪ್ಸುಲಸ್ ಪ್ರಭೇದದ ವಿವಿಧ ಸಸ್ಯಗಳು ಕ್ಯಾಡ್‌ಮಿಯಂ, ತಾಮ್ರ, ಸೀಸ, ಸತುವನ್ನು ಹೀರಬಲ್ಲದು. ಜಟ್ರೋಫ (Jatropha curcas) ಸಸ್ಯ ಕ್ಯಾಡ್‌ಮಿಯಂ, ತಾಮ್ರ, ನಿಕೆಲ್, ಸೀಸವನ್ನು ಮಣ್ಣಿನಿಂದ ಬೇರ್ಪಡಿಸಬಲ್ಲವು.

ಪಾಪ್ಯುಲಸ್ ಡೆಲ್‌ಟಾಯ್ಡೆಸ್ (Populus deltoides) ಸಸ್ಯ ಪಾದರಸವನ್ನು ಪರಿಣಾಮಕಾರಿಯಾಗಿ ತೆಗೆಯಬಲ್ಲದು. ಬ್ರಾಸಿಕ ಜ್ಯನ್ಸಿಯ (Brassica Junsea),, ಎಸ್ಟ್ರಾಗಲಸ್ ಬೈಸ್ಕಲ್ಕೇಟಸ್ (Astragalus bisculcatus) ಸಸ್ಯ ಸೆಲೆನಿಯಂ ಎಂಬ ಹಾನಿಕಾರಕ ಲೋಹವನ್ನು ಹೀರಬಲ್ಲದು. ಪಾಪ್ಯುಲಸ್ ಕೋನ್‌ಸೀನ್ಸ್ (Populus conescens) ಸತುವನ್ನು ಪರಿಣಾಮಕಾರಿಯಾಗಿ ಹೀರಬಲ್ಲುದು.

ಸಸ್ಯ ಪ್ರಪಂಚದ ಹಲವಾರು ಪ್ರಭೇದಗಳು ಪರಿಣಾಮಕಾರಿಯಾಗಿ ಪರಿಸರದ ರಕ್ಷಣೆ, ಮಣ್ಣಿನ ಪುನರುಜ್ಜೀವನ, ಸ್ವಚ್ಛಗೊಳಿಸುವಿಕೆಯಲ್ಲಿ ತೊಡಗಿವೆ. ಹಾನಿಕಾರಕ ಲೋಹಗಳು ಹಾಗೂ ರಾಸಾಯನಿಕ ದ್ರವ್ಯಗಳನ್ನು ಇವು ಪರಿಣಾಮಕಾರಿಯಾಗಿ ನಿವಾರಿಸಬಲ್ಲವು. ಲೋಹಗಳ ಉತ್ಪಾದನೆಗೆ ಕೂಡ ಈ ಸಸ್ಯಗಳು ಪ್ರಯೋಜನಕಾರಿ. ಪರಿಸರದ ಸಮತೋಲನ ಕಾಪಾಡುವಲ್ಲಿ ಈ ಸಸ್ಯಗಳ ಪಾತ್ರ ಬಹಳ ಮುಖ್ಯವಾದುದು. ಇಂತಹ ಸಸ್ಯ ಮತ್ತು ಮರಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಸಿದರೆ ಪರಿಸರದ ಕಾಪಾಡುವಿಕೆಯಲ್ಲಿ ಯಾವ ಸಂದೇಹವೂ ಇಲ್ಲ ಎನ್ನುವುದು ಶತಃಸಿದ್ಧ. ಆದ್ದರಿಂದ ಇಂತಹ ಸಸ್ಯಗಳನ್ನು ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಬೇರೆ ದಿನೋಪಯೋಗಿ ಸಸ್ಯಗಳು ಬೆಳಯದ ಜಾಗಗಳಲ್ಲಿ ಬೆಳೆಸಿದರೆ, ಪರಿಸರ, ಅಂತರ್ಜಲ, ಮಣ್ಣು ಇವುಗಳ ದೃಢತೆ, ಶುಚಿತ್ವ, ಇವುಗಳ ವೃದ್ಧಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

-ಕೆ. ರಮೇಶ್ , ಮೈಸೂರು

11 Responses

  1. ನಯನ ಬಜಕೂಡ್ಲು says:

    Beautiful. ಮಾಹಿತಿಪೂರ್ಣ ಬರಹ

  2. ಅತ್ಯುತ್ತಮ ಮಾಹಿತಿಯುಳ್ಳ ಲೇಖನ ಧನ್ಯವಾದಗಳು ಸಾರ್

  3. ಪರಿಸರ ಸ್ನೇಹಿ ಗಿಡಮರಗಳ ಪರಿಚಯ ಮಾಡಿಕೊಟ್ಟ ತಮಗೆ ವಂದನೆಗಳು

  4. Hema says:

    ಅಪರೂಪದ ಮಾಹಿತಿಯುಳ್ಳ ಚೆಂದದ ಬರಹ.

  5. Padma Anand says:

    ಎಷ್ಟೊಂದು ಮಾಹಿತಿಗಳು! ಸಸ್ಯ ಪ್ರಭೇದಗಳು ಪರಿಸರದ ಸಮತೋನಲಕ್ಕೆ ಇಷ್ಟೊಂದು ಸಹಕಾರಿಯಾಗಿದ್ದರೂ ಮನುಷ್ಯ ಅವುಗಳನ್ನು ವಿನಾಶಗೊಳಿಸುವುದು ವಿಷಾದನೀಯ.
    ಚಿನ್ನದ ಗಿಡ ತುಂಬಾ ಕುತೂಹಲಪೂರ್ಣವಾಗಿತ್ತು.

  6. . ಶಂಕರಿ ಶರ್ಮ says:

    ಸಾಮಾನ್ಯವಾಗಿ ಸಸ್ಯಗಳು ಆಮ್ಲಜನಕದ ಉತ್ಪತ್ತಿಗೆ ಸಹಾಯಕವೆಂಬುದು ಗೊತ್ತು. ವಿಷಕಾರಿ ಲೋಹಗಳನ್ನು ಹೀರಿ ಮಣ್ಣನ್ನು ಫಲವತ್ತತೆಗೊಳಿಸುವ ವಿಚಾರ ತಿಳಿದು ಆಶ್ಚರ್ಯ ಹಾಗೂ ನಿಸರ್ಗದ ಇನ್ನೊಂದು ಸೊಗಸಾದ ಮುಖದ ಪರಿಚಯವಾಯಿತು…ಧನ್ಯವಾದಗಳು ಸರ್.

Leave a Reply to ಕೆ. ರಮೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: