ಅವಿಸ್ಮರಣೀಯ ಅಮೆರಿಕ-ಎಳೆ 23

Share Button

ಗೋಲ್ಡನ್ ಗೇಟ್ ಬ್ರಿಡ್ಜ್ ಮೇಲೆ….

ಆ ದಿನ ಶನಿವಾರ… ಮಧ್ಯಾಹ್ನ ಹೊತ್ತಿಗೆ, ನಮ್ಮ ಮನೆಯಿಂದ ಒಂದು ತಾಸು ಪ್ರಯಾಣದಷ್ಟು ದೂರವಿರುವ ಸ್ಯಾನ್ ಫ್ರಾನ್ಸಿಸ್ಕೋ (SFO)ಗೆ, ಅಲ್ಲಿರುವ ಅಮೆರಿಕದ ಜಗತ್ಪ್ರಸಿದ್ಧ ಗೋಲ್ಡನ್ ಗೇಟ್ ಬ್ರಿಡ್ಜ್ (Golden Gate Bridge) ಮತ್ತು ಇತರ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೊರಡುವುದೆಂದು ತಿಳಿದಾಗ, ನನಗಂತೂ ಬಹಳ ಕುತೂಹಲ…  ಬರೇ ಚಿತ್ರಗಳಲ್ಲಿ ಮಾತ್ರ ನೋಡಿದ್ದ ಸೇತುವೆಯನ್ನು ಖುದ್ದಾಗಿ ನೋಡುವ ಅವಕಾಶ! 

ನಾವು ಮನೆಯಿಂದ  ಮಧ್ಯಾಹ್ನದ ಊಟವನ್ನು ಸ್ವಲ್ಪ ಬೇಗನೆ ಮುಗಿಸಿ, ಒಂದು ಗಂಟೆಗೆ ಸ್ಯಾನ್ ಫ್ರಾನ್ಸಿಸ್ಕೋ (SFO) ತಲಪಿದೆವು. ಸ್ಯಾನ್ ಫ್ರಾನ್ಸಿಸ್ಕೋ ಎಂದ ಕೂಡಲೇ ಜೊತೆ ಜೊತೆಗೇ, ಇಲ್ಲಿಯ ಪ್ರಮುಖ ಆಕರ್ಷಣೆಯಾದ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡಾ ನೆನಪಾಗುವುದು ಅಲ್ಲವೇ? ಹೌದು.. ಇದು ಇಲ್ಲಿಯ ಹೆಗ್ಗುರುತುಗಳಲ್ಲೊಂದಾಗಿದೆ.  ಇಲ್ಲಿಯ ವಿಶೇಷವಾದ ಈ ತೂಗುಸೇತುವೆಯನ್ನು ನೋಡಲು ನಮ್ಮ ಕಾರು ಆ ಕಡೆಗೆ ಚಲಿಸಿತು.

SFO ಪಟ್ಟಣದ ಉತ್ತರ ಭಾಗದ ಭೂಖಂಡ ಮತ್ತು ಮರಿನ್ ಪ್ರಾಂತ್ಯದ ಮಧ್ಯೆ ಇರುವ ಅಗಾಧ ಕೊಲ್ಲಿ ಪ್ರದೇಶವನ್ನು ದಾಟಲು 1820ರಷ್ಟು ಹಿಂದೆಯೇ ದೋಣಿಗಳನ್ನು ಬಳಸಲಾಗುತ್ತಿತ್ತು. 1933ನೇ ಇಸವಿಯಲ್ಲಿ ಈ ಸೇತುವೆಯ ನಿರ್ಮಾಣವು ಪ್ರಾರಂಭಗೊಂಡು, ನಿರ್ಮಾಣ ಹಂತದಲ್ಲಿ, 1935ರಲ್ಲಿ ತೀವ್ರ ಭೂಕಂಪದಿಂದಾಗಿ ಕೆಲಸವು ಸ್ವಲ್ಪ ಕಾಲ ಸ್ಥಗಿತಗೊಂಡರೂ, 1937ರಷ್ಟು ಅತ್ಯಲ್ಪ ಸಮಯದಲ್ಲಿ ಪೂರ್ಣಗೊಂಡಿತು.  1.7ಮೈಲುಗಳಷ್ಟು ಉದ್ದ ಹಾಗೂ 90ಅಡಿಗಳಷ್ಟು ಅಗಲವಿರುವ ಈ ಅದ್ಭುತ ತೂಗುಸೇತುವೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಬೃಹದಾಕಾರದ ಉಕ್ಕಿನ ಹಗ್ಗಗಳ ಉದ್ದವು, 1964ರಲ್ಲಿ ನ್ಯೂಯಾರ್ಕ್ ನಗರದಲ್ಲಿ ತೂಗುಸೇತುವೆ ನಿರ್ಮಾಣಗೊಳ್ಳುವ ವರೆಗೆ, ಜಗತ್ತಿನ ತೂಗುಸೇತುವೆಗಳಲ್ಲಿಯೇ ಅತ್ಯಂತ ಉದ್ದದ ಹಗ್ಗವಾಗಿತ್ತು. 2019ರಲ್ಲಿ ಜಪಾನಿನಲ್ಲಿ ನಿರ್ಮಾಣಗೊಂಡ ತೂಗುಸೇತುವೆಯ ಹಗ್ಗವು ಸದ್ಯಕ್ಕೆ ಪ್ರಪಂಚದಲ್ಲೇ ಅತ್ಯಂತ ಉದ್ದವಾಗಿದೆ. ಪ್ರಾರಂಭದಲ್ಲಿ ಈ ಸೇತುವೆ ಮೇಲೆ ವಾಹನದಲ್ಲಿಓಡಾಡಲು ಎರಡೂ ತುದಿಗಳಲ್ಲಿ ಟೋಲ್ ಶುಲ್ಕ ವನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ  ಒಂದು ಕಡೆಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಸೇತುವೆಯ ಉದ್ಘಾಟನಾ ದಿನದಂದು ಸುಮಾರು ಎರಡು ಲಕ್ಷ ಜನರು ಇದರ ಮೇಲೆ ನಡೆದು ಆನಂದಿಸಿ ದಾಖಲೆ ಸ್ಥಾಪಿಸಿದರು!

ಅತ್ಯಧಿಕ ರಭಸದಿಂದ ಬೀಸುವ ಗಾಳಿಯನ್ನು ತಡೆಯುವ ಶಕ್ತಿಯುಳ್ಳ ಈ ತೂಗುಸೇತುವೆಯನ್ನು ಆಧರಿಸಿದ ಉಕ್ಕಿನ ಹಗ್ಗಗಳಲ್ಲಿ ಅತೀ ದೊಡ್ಡದಾದ ಹಗ್ಗವು 1,300ಮೀ ಉದ್ದವಿದೆ. ಇದರ ವ್ಯಾಸವು 93 ಸೆಂ.ಮೀಗಳಷ್ಟಿದ್ದು,  27, 572 ಸಪೂರವಾದ  ಉಕ್ಕಿನ ತಂತಿಗಳನ್ನು ಒಳಗೊಂಡಿದೆ. ಇದರ ಒಟ್ಟು ಉದ್ದವೇ ಸುಮಾರು 80,000 ಮೈಲುಗಳಷ್ಟು.. ಅಂದರೆ ನಮ್ಮ ಭೂಮಿಗೆ ಮೂರು ಸುತ್ತು ಹಾಕುವಷ್ಟು! 746 ಅಡಿ ಎತ್ತರದ ಎರಡು ಬಲಿಷ್ಠ ಸ್ತಂಭಗಳಿಂದ ಈ ತಂತಿಗಳು ಆಧರಿಸಲ್ಪಟ್ಟಿವೆ. ಕೊಲ್ಲಿಯ ನೀರಿನ ಏರಿಳಿತಗಳಿಗೆ ಅನುಗುಣವಾಗಿ, ಇತರ ಯಾವುದೇ ಹವಾಮಾನದ ವೈಪರೀತ್ಯಗಳನ್ನು ತಡೆಯುವ ಶಕ್ತಿಯುಳ್ಳ ಈ ಸೇತುವೆಯ  ಭಾರವೇ ಸುಮಾರು 8,87,000 ಟನ್ನುಗಳಷ್ಟು!   ಮೂವತ್ತೈದು ಮಿಲಿಯ ಡಾಲರುಗಳಷ್ಟು ನಿರ್ಮಾಣ ವೆಚ್ಚ ತಗಲಿದ ಈ ಸೇತುವೆಯಲ್ಲಿ ನಾಲ್ಕು ಲೇನ್ ಗಳಿದ್ದು(ಚತುಷ್ಪಥ), ದಿನದಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ವಾಹನಗಳು ಸಂಚರಿಸುತ್ತವೆ. ವಾಹನಗಳು ಅತ್ಯಂತ ರಭಸದಿಂದ, ಬಲ ಬದಿಯ ಎರಡು ಲೇನ್ ಗಳಲ್ಲಿ ಹೋಗುತ್ತಾ, ಎಡ ಬದಿಯ ಎರಡು ಲೇನ್ ಗಳಲ್ಲಿ  ಬರುತ್ತಾ ಇರುವುದನ್ನು ನೋಡುವುದೇ ರೋಚಕ ಅನುಭವ. ಆಗಾಗ ಮುಸುಕುವ ದಟ್ಟ ಮಂಜಿನ ಕಣ್ಣುಮುಚ್ಚಾಲೆಯಾಟದ ಕಿತಾಪತಿಯಿಂದಾಗಿ, ಅಲ್ಲಿಯ ವಾಹನಗಳು  ಸದಾ ದೀಪ ಬೆಳಗಿಸಿಕೊಂಡೇ ಓಡಾಡಬೇಕಾಗುತ್ತದೆ.

ಪೆಸಿಫಿಕ್ ಮಹಾಸಾಗರವನ್ನು ಸೇರುವ ಈ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ, ಸುಮಾರು ಒಂದೂವರೆ ಮೈಲಿ ಅಗಲದ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿದ ಈ ತೂಗುಸೇತುವೆಯು, ಉತ್ತರದ ನೆರೆಹೊರೆಯವರೊಂದಿಗೆ ಸಂಪರ್ಕಿಸುವ ಕನಸನ್ನು ನನಸಾಗಿಸಿದೆ. ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಸ್ಥಿರವಾದ ಉದ್ಯೋಗಾವಕಾಶವನ್ನು ಕಲ್ಪಿಸಿದ ಇಂಜಿನಿಯರಿಂಗ್ ಅದ್ಭುತವಾಗಿದೆ ಈ ಸೇತುವೆ.  ಈ ಸೇತುವೆಯು ನಿರ್ಮಾಣ ಹಂತದಲ್ಲೇ ಹಲವಾರು ವಿಶೇಷತೆಗಳನ್ನು ಹೊಂದಿದೆ. SFO ಪಟ್ಟಣದ ಉತ್ತರ ಭಾಗದ ಭೂಖಂಡವನ್ನು, ಮರಿನ್ ಪ್ರಾಂತ್ಯಕ್ಕೆ ಜೋಡಿಸುವ 101ನೇ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, 1ನೇ ರಾಜ್ಯ ಹೆದ್ದಾರಿಯೂ ಆಗಿದೆ.

ಇಲ್ಲಿ ಸುತ್ತಾಡುವಾಗ ಅಗತ್ಯಕ್ಕಾಗಿ,  ಸ್ವಲ್ಪ ಹಣವನ್ನು ನಮ್ಮ ಬಳಿ ಇರಿಸಿಕೊಳ್ಳಲು ಅಳಿಯ ಕೈಗಿತ್ತಿದ್ದ. ಹಾಗೆಯೇ ನನ್ನ ಕೈಚೀಲದ್ದಲ್ಲಿದ್ದವು… ಇಪ್ಪತ್ತು ಡಾಲರ್ ಗಳು. ಸೇತುವೆಯ ಬಳಿ ಪ್ರವಾಸಿಗರ ಬಳಕೆಗಾಗಿ ಸ್ವಚ್ಛವಾದ ಮಹಿಳೆಯರ ವಿಶ್ರಾಂತಿ ಕೋಣೆಯ ಪಕ್ಕದಲ್ಲಿ ನನ್ನ ಕೈಚೀಲವನ್ನಿರಿಸಿ, ನಾನೊಬ್ಬಳೇ ಮುಖ ತೊಳೆಯಲು ಹೋದೆ… ಯಾಕೆಂದರೆ, ಅಲ್ಲಿ ಕಳ್ಳರು(ಕಳ್ಳಿಯರು?) ಯಾರೂ ಇರಲಾರರೆಂಬ ದೃಢವಾದ ನಂಬಿಕೆಯಿಂದ. ಐದು ನಿಮಿಷಗಳಲ್ಲಿ ಬಂದು ನೋಡಿದರೆ, ಕೈಚೀಲದ ಬಾಯಿ ದೊಡ್ಡದಾಗಿ ತೆರೆದಿತ್ತು!  ಗಾಬರಿಯಿಂದ ನೋಡಿದಾಗ, ಅದರಲ್ಲಿದ್ದ ಇಪ್ಪತ್ತು ಡಾಲರ್ ನಾಪತ್ತೆ! ನನಗಾದ ಗಾಬರಿ ಅಷ್ಟಿಷ್ಟಲ್ಲ. ಜೊತೆಗೇ, ಅಲ್ಲಿಯ ಜನರಲ್ಲಿದ್ದ ನಂಬಿಕೆ ಸುಳ್ಳಾಯಿತಲ್ಲಾ ಎಂದು ಬಹಳ ಬೇಸರವಾಯ್ತು. ಮಗಳಲ್ಲಿ ವಿಷಯ ತಿಳಿಸಿದಾಗ, ಈ ನಗರದಲ್ಲಿ ಅದು ಮಾಮೂಲು ಮಾತ್ರವಲ್ಲದೆ, ಇಲ್ಲಿಗೆ ಬೇರೆ ಕಡೆಯಿಂದ ಬರುವ ಪ್ರವಾಸಿಗರ ಕೈಚಳಕವೂ ಬಹಳವಿದೆ ಎಂದು ತಿಳಿದಾಗ ನಿಬ್ಬೆರಗಾದೆ.. ನನ್ನ ಬೇಜವಾಬ್ದಾರಿ ತನಕ್ಕೆ ಸರಿಯಾದ ಪಾಠವೊಂದನ್ನು ಕಲಿತ ಅನುಭವವಾಯ್ತು…ಅಷ್ಟೆ!

ಅಲ್ಲೇ ಪಕ್ಕದಲ್ಲಿರುವ ಪುಟ್ಟ ಉದ್ಯಾನವನದಲ್ಲಿ, ಸೇತುವೆ ಬಗ್ಗೆ ವಿಶೇಷ ಮಾಹಿತಿಗಳೊಂದಿಗೆ ಅದರಲ್ಲಿ ಬಳಸಲಾದ ವಸ್ತುಗಳ ಪ್ರದರ್ಶನವು ನಮಗೆ ವಿಶೇಷ ಅನುಭವವನ್ನು ನೀಡುತ್ತದೆ. ಅಲ್ಲಿಯೇ ನಮ್ಮ ವಾಹನವನ್ನು ನಿಲ್ಲಿಸಿ ಸೇತುವೆ ಮೇಲೆ ಹೋದಾಗ, ಬಲವಾದ ಕುಳಿರ್ಗಾಳಿಯು ನಮ್ಮನ್ನು ಎತ್ತಿ ಒಗೆಯುವಂತೆ ಬೀಸುತ್ತಿತ್ತು. ನಮ್ಮ ಮೈಮೇಲಿದ್ದ ದಪ್ಪನೆಯ ಚಳಿ ಉಡುಪು ಯಾವ ಮೂಲೆಗೂ ಸಾಲದೆ, ಗದಗುಟ್ಟಿ ನಡುಗುತ್ತಾ ಸೇತುವೆಯತ್ತ ಸಾಗುತ್ತಿದ್ದಾಗಲೇ ಮಧ್ಯಾಹ್ನ ಎರಡು ಗಂಟೆಯ ಸಮಯ… ಮುಸುಕಿದ್ದ ದಟ್ಟ ಮಂಜು ಕರಗಿ, ಬೃಹದಾಕಾರದ ಗೋಲ್ಡನ್ ಗೇಟ್ ಬ್ರಿಡ್ಜ್ , ಗಾಢ ಕೆಂಪು ಬಣ್ಣ ಹೊತ್ತು ನಮ್ಮ ಕಣ್ಮುಂದೆ ತನ್ನೆಲ್ಲಾ ಬೆಡಗನ್ನು ಹರಡಿ ನಿಂತಿತ್ತು. ಈ ಬಣ್ಣವು ಅಂತಾರಾಷ್ಟ್ರೀಯ ಕಿತ್ತಳೆ ಬಣ್ಣ ಎಂದೂ  ಕರೆಯಲ್ಪಡುತ್ತದೆ. ನಾನು ಆ ಕ್ಷಣದಲ್ಲಿ, ಜಗತ್ಪ್ರಸಿದ್ಧ  ತೂಗುಸೇತುವೆಯೊಂದರ ಮೇಲೆ ನಿಂತಿರುವೆನೆಂಬುದನ್ನು ನಂಬಲಾಗಲೇ ಇಲ್ಲ! ಜೀವನದಲ್ಲಿ, ಕಾಣದ ಕನಸೊಂದು ನನಸಾಗುವುದೆಂದರೆ ಇದೇ ಅಲ್ಲವೇ?!

ಗೋಲ್ಡನ್ ಗೇಟ್ ಬ್ರಿಡ್ಜ್

ತೂಗು ಸೇತುವೆಯ ಎರಡೂ ಪಕ್ಕಗಳಲ್ಲಿ ಅಗಲವಾದ ಕಾಲುದಾರಿಯು ಪ್ರವಾಸಿಗರಿಂದ ಕಿಕ್ಕಿರಿದಿತ್ತು. ಪಾದಚಾರಿಗಳ ಸುರಕ್ಷತೆಗಾಗಿ, ಸುಮಾರು ಆರು ಅಡಿಗಳಷ್ಟು ಎತ್ತರದ, ಉಕ್ಕಿನ ತಂತಿಯ ಬಲವಾದ ಬೇಲಿಯು ಸೇತುವೆಯ ಎರಡೂ ಪಕ್ಕಗಳಲ್ಲಿ ಎದ್ದು ನಿಂತಿತ್ತು. ಈ ಬೇಲಿಯಲ್ಲಿ ಅಲ್ಲಲ್ಲಿ ಸಾರ್ವಜನಿಕ ದೂರವಾಣಿಗಳನ್ನು ಲಗತ್ತಿಸಿರುವುದನ್ನು ಕಂಡು ಆಶ್ಚರ್ಯವಾಯ್ತು. ಮಾತ್ರವಲ್ಲ, ಅದರ ಬಳಕೆಯ ಬಗ್ಗೆ ತಿಳಿದಾಗ ಗಾಬರಿಯೂ ಆಯ್ತು! ಎಲ್ಲಾ ಕಡೆಗಳಂತೆ, ಇಲ್ಲಿಯೂ ಸೇತುವೆ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಾಮೂಲಿಯಾದರೂ, ಅವರಿಗಾಗಿ ಒಂದು ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿರುವುದು ನಿಜಕ್ಕೂ ಮೆಚ್ಚುವಂತಹುದು. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯು ಕೊನೆ ಕ್ಷಣದಲ್ಲಿ ಯಾರೊಡನೆಯಾದರೂ ಮಾತಾಡಲು ಇಚ್ಛಿಸಿದಲ್ಲಿ ಅದನ್ನು ಬಳಸಬಹುದಾಗಿದೆ. ಇದರಿಂದಾಗಿ ಅವರ ಮನಸ್ಸು ಬದಲಾಗುವ ಸಾಧ್ಯತೆ ಇರುವುದರಿಂದ, ಇವುಗಳನ್ನು “ಜೀವರಕ್ಷಕ ದೂರವಾಣಿ” ಎಂದೂ ತಿಳಿಯಲಾಗುವುದು. ಇವುಗಳನ್ನು ನೋಡಿದಾಗ, ಇದರಿಂದಾಗಿ ಅದೆಷ್ಟು ಜನರ ಜೀವ ಉಳಿದಿದೆಯೋ ಎಂದು ನೆನೆದು ಭಾವುಕಳಾದೆ. ಇಲ್ಲಿ ಇಂದಿಗೂ ಸಾವಿರಾರು ಯುವ ಜನರು, ಈ ಸೇತುವೆಯ ಮೇಲಿಂದ ಧುಮುಕಿ ಜೀವಕಳೆದುಕೊಳ್ಳುತ್ತಿರುವುದು, ಅಲ್ಲಿಯ ಯುವ ಜನರ ಮನದ ಅಸಮತೋಲನಕ್ಕೆ ಹಿಡಿದ ಕನ್ನಡಿ  ಎಂಬ ಘೋರ ಸತ್ಯವು ಮನಸ್ಸನ್ನು ಹಿಂಡಿತು.

ಸೇತುವೆ ಕೆಳಗಡೆಗೆ ರಭಸದಿಂದ ಹರಿಯುವ ನೀರಿನಲ್ಲಿ ಓಡಾಡುವ ಸಣ್ಣ ದೊಡ್ಡ ಯಾಂತ್ರೀಕೃತ ದೋಣಿಗಳು ಸೂರ್ಯ ಬೆಳಕಿಗೆ ಮಿಂಚುತ್ತಿದ್ದವು. ಬಹು ವಿಶಾಲವಾಗಿ ಹರಡಿರುವ ಕೊಲ್ಲಿಯ ನೀಲಿ ನೀರಿನ ಹಿನ್ನೆಲೆಯಲ್ಲಿ, ಸ್ಯಾನ್ ಫ್ರಾನ್ಸಿಸ್ಕೋ ನಗರದ ಗಗನಚುಂಬಿ ಕಟ್ಟಡಗಳು ಆಗಸದೆತ್ತರಕ್ಕೆ ಮೈ ಚಾಚಿ ನಿಂತಿರುವ ಸೊಬಗು ಕಣ್ಮನ ಸೆಳೆದುವು. ಮಾನವನು ತನ್ನ ಅನುಕೂಲತೆಗೋಸ್ಕರ ರೂಪಿಸಿದ ಈ ಅಭೂತಪೂರ್ವ ನಿರ್ಮಾಣವು ಪ್ರಕೃತಿಯೊಂದಿಗೆ ಮಿಳಿತಗೊಂಡು, ಅತ್ಯಂತ ತನ್ಮಯತೆಯಿಂದ, ಘನ ಗಂಭೀರತೆಯಿಂದ ಮೈಚಾಚಿ ಮಲಗಿರುವುದು ನಿಜಕ್ಕೂ ನೋಡುಗರನ್ನು ಇನ್ನಿಲ್ಲದಂತೆ ತನ್ನತ್ತ ಸೆಳೆಯುವುದು ಸುಳ್ಳಲ್ಲ! ಸುಮಾರು ಒಂದೂವರೆ ಗಂಟೆಗಳ ಕಾಲ ಸೇತುವೆ ಮೇಲೆ ಓಡಾಡಿ, ಅದರ ಹಾಗೂ ಸುತ್ತಲಿನ ಪ್ರಕೃತಿ ವೈಭವವನ್ನು ಕಣ್ತುಂಬಿಕೊಂಡುದು ಮರೆಯಲಾರದ ಅನುಭವಗಳಲ್ಲೊಂದಾಗಿದೆ. ಮುಂದಕ್ಕೆ ಹೊರಟೆವು..ಸ್ವಲ್ಪ ದೂರದಲ್ಲಿರುವ ಇನ್ನೊಂದು ವಿಶೇಷ ಸ್ಥಳ ವೀಕ್ಷಣೆಗೆ….

ಮುಂದುವರಿಯುವುದು…..

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ  : http://surahonne.com/?p=35423

–ಶಂಕರಿ ಶರ್ಮ, ಪುತ್ತೂರು. 

8 Responses

  1. ನಯನ ಬಜಕೂಡ್ಲು says:

    Nice

  2. ಅಮೆರಿಕ ಪ್ರವಾಸ ಕಥನ ವಿವರಣಾತ್ಮಕ ವಾಗಿದ್ದುಓದಿಸಿಕೊಂಡು ಹೋಗುತ್ತಿದೆ..
    ನಾವು ನಿಮ್ಮ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುವಂತೆ ಮಾಡಿದೆ… ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.

  3. Hema says:

    ಕುತೂಹಲ ಹುಟ್ಟಿಸುವ ಪ್ರವಾಸ ಕಥನ ಚೆನ್ನಾಗಿ ಮೂಡಿ ಬರುತ್ತಿದೆ.

    • . ಶಂಕರಿ ಶರ್ಮ says:

      ಲೇಖನವನ್ನು ಸೊಗಸಾಗಿ ಪ್ರಕಟಿಸಿ, ಮೆಚ್ಚುಗೆಯ ನುಡಿಗಳನ್ನಾಡಿದ ಹೇಮಮಾಲಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

  4. Padma Anand says:

    ಪೂರ್ಣ ವಿವರಗಳನ್ನೊಳಗೊಂಡ ಜಗತ್ಪ್ರಸಿದ್ಧ ಗೋಲ್ಡನ್ ಗೇಟ್ ಸೇತುವೆಯ ಸೊಗಸಾದ ವರ್ಣನೆಯಿಂದ ಲೇಖನ ಮುದ ನೀಡಿತು.

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: