“ಮಗನಿಗೊಂದು ಪತ್ರ”

Spread the love
Share Button

ಬರೆದಿರುವೆ ನನ್ನ ಕೊನೆಯ ಪತ್ರ
ನಿನಗೆ ಒಂದಲ್ಲ ಒಂದು ದಿನ ತಲುಪುವುದೆಂದು ಪುತ್ರ

ನೀನು ನಿನ್ನ ಪುಟ್ಟ ತಂಗಿ ಒಳಗೊಂಡ ನಮ್ಮ ಚಿಕ್ಕ ಸಂಸಾರ
ವಿಶಾಲ ಎದೆಯ ಗಿರಿಜಾ ಮೀಸೆಯ ನನ್ನ ಗಂಡ ಸರದಾರ

ಉಟ್ಟು ಉಡಲು ಕಷ್ಟವಿರಲಿಲ್ಲ
ಅನ್ನ ಮೇಲೋಗರಗಳಿಗೆ ಬರವಿರಲಿಲ್ಲ
ಬಯಸಿದ್ದು ಕೊಳ್ಳುವಷ್ಟು ಶಕ್ತಿ ನಮ್ಮಲ್ಲಿ ಇಲ್ಲದೆ ಇರಲಿಲ್ಲ

ನಿಮ್ಮ ಲಾಲನೆ ಪಾಲನೆಗಾಗಿ ಬಂದ ಕೆಲಸವ ತೊರೆದೆ
ಕೈ ರುಚಿಯಲಿ ನಿಮ್ಮ ಅಪ್ಪನ ಮನವ ಗೆಲ್ಲಲು ಬಯಸಿದೆ

ನಸುಕಲ್ಲಿ ಬರುವ ನಿದ್ರೆಯ ಬದಿಗೊತ್ತಿ
ಮನೆಗೆಲಸ‌ ಪೂರೈಸಿ ಶಾಲೆಗೆ ನಿಮ್ಮನ್ನು ಕಳುಹಿಸಿ
ದಿನಪತ್ರಿಕೆಯಲಿ ಮುಳುಗಿದ ಇನಿಯನಿಗೆ ಕಾಫಿ ಕೊಟ್ಟು ಎಚ್ಚರಿಸಿ
ಉಸ್ಸೆಂದು ಕುಸಿದು ಕುಳಿತಾಗ
ಮತ್ತೆ ನೆನಪಾಗುತ್ತಿತ್ತು ಅರ್ಧಕ್ಕೆ ಬಿಟ್ಟ ಕೆಲಸ

ಧಾವಂತದ ಬೆಳಗಿನ ಈ ಗಂಟೆಗಳು ಕಳೆದ ಮೇಲೆ
ಮನೆಯಲಿ ಹೆಪ್ಪುಗಟ್ಟಿದ ಅಸಹನೀಯ ಮೌನ
ಶಾಲೆಯಿಂದ ಓಡೋಡಿ ಬರುವ ನಿಮಗಾಗಿ ಕಾಯುತ್ತಿತ್ತು ಮನ

ನಿನ್ನ ತಂಗಿಯ ತೊದಲು ಮಾತುಗಳು
ನಿನ್ನ ಸಾಹಸ ರೋಚಕದ ಕಲ್ಪನೆಗಳು

ಕಾಡುವ ಬೇಸರ ದೂರ‌ ಸರಿಸಿತ್ತು
ಬಳಲಿದ ನನಗೆ ಮತ್ತೇ ಚೈತನ್ಯ ತುಂಬುತ್ತಿತ್ತು

ಮನೆಗೆ ಬಂದ ಅವರೊಡನೆ ತೃಪ್ತಿಯಾಗುವಷ್ಟು ಮಾತನಾಡಬೇಕು
ನಿಮ್ಮ ಸಾಧನೆಗಳೆಲ್ಲಾ ಬಣ್ಣಿಸಿ ಹೇಳಬೇಕು ಎನಿಸುತ್ತಿತ್ತು
ವ್ಯವಹಾರದ ಗುಂಗಲ್ಲೇ ಮುಳುಗಿದ ಅವರನ್ನು ಕಂಡು ಮನ ಮುದುಡುತ್ತಿತ್ತು

ಎದೆಯಾಳದ ನುಡಿಗಳಿಗೆ ನೀವೇ ಕಿವಿಯಾಗಿದ್ದೀರಿ
ಈಗ ಬೆಳೆದು ದೊಡ್ಡವರಾದೀರಿ
ಓದಿನಲಿ ಚುರುಕಾಗಿದ್ದ ನಿನ್ನ ತಂಗಿ ಮದುವೆಯಾಗಿ ವಿದೇಶ ಸೇರಿದಳು

ತಂದೆಯ ಪಡೆಯಚ್ಚಾಗಿದ್ದ ನೀನು ವ್ಯವಹಾರ ಮುಂದುವರಿಸಿದೆ
ಭವ್ಯ ಬಂಗಲೆ ಈಗ ಖಾಲಿ ಖಾಲಿ
ಒಬ್ಬಳೇ ಕಳೆದೆ ಜೀಕುತ ಜೀವನ ಜೋಕಾಲಿ

ಜವಾಬ್ದಾರಿಗಳ ಮುಗಿಸಿದ ನಿಮ್ಮಪ್ಪ ಈಗಲಾದರೂ
ನನ್ನ ಜೋಡಿ ಮಾತನಾಡುವುರು ಎಂದು ಕಾದೆ
ಅವರಿಗೆ ಇನ್ನೂ ದುಡ್ಡಿನ ಹಿಂದೆ ಓಡುವ ಹುಚ್ಚಿತ್ತು
ಇಳಿ ವಯಸ್ಸಿನಲ್ಲೂ ಸಂಪತ್ತಿನ ಮದವಿತ್ತು

ಪುಟ್ಟ ಮನೆಯ ಕಟ್ಟಿಸುತಾ ಅದರ ಬಗ್ಗೆ ಮಾತನಾಡಲು ಹಾತೊರದೆ
ಎಲ್ಲ ಮಾತುಗಳ ಮರೆಸಿತು ದೊಡ್ಡ ಮನೆ
ನಿಮ್ಮ ಮದುವೆಗಳ ಬಗ್ಗೆ ಸಂಬಂಧಗಳ ಬಗ್ಗೆ ಮಾತನಾಡಬೇಕೆಂದುಕೊಂಡೆ
ನಿನ್ನ ತಂದೆಯ ಸ್ನೇಹ ಅದಕ್ಕೂ ಕಲ್ಲು ಹಾಕಿತು

ಪಿಸುಗುಟ್ಟುವ ಬೆಚ್ಚಗಿನ ನುಡಿಗಳ ಬಚ್ಚಿಟ್ಟು ಕಾದೆ
ನನ್ನ ಧ್ವನಿಗೆ ನಿನ್ನ ತಂದೆ ಎಂದು ಕಿವಿಯಾಗುವುರೆಂದು
ಹಚ್ಚನೆ ಹುಲ್ಲ ಮೇಲೆ ಮೆಲ್ಲನೆ ಕೋಲುರುತಾ ನನ್ನ ಕೂಡ ನಡೆಯುವರೆಂದು

ಆರೋಗ್ಯ ಹದಗೆಟ್ಟು ಹೊರ ಹೋಗುವುದು ನಿಂತು
ಹುಲಿಯಂತ ನಿನ್ನ ತಂದೆ ಹಾಸಿಗೆ ಹಿಡಿದಾಗ
ಆರೈಕೆ ಮಾಡುತಾ ಕಾಯುತ್ತಿದ್ದೇ ನಿನ್ನ  ತಂದೆಯ ಮಾತುಗಳಿಗೆ

ಸುಬ್ಬುಲಕ್ಷ್ಮಿಯ ಸಂಗೀತ ಕೇಳುವ ಅವರ ಕರ್ಣಗಳು
ನನ್ನ ಪಾಲಿಗೆ ಕಿವುಡಾಗಿತ್ತು
ಸೂರು ದಿಟ್ಟಿಸುವ ಅವರ ಕಂಗಳು ಎನ್ನ ಕಾಣದಾಗಿತ್ತು

ಬರೀ ನಿರೀಕ್ಷೆಯಲಿ ಈ ಬದುಕ ಕಳೆದಿರುವೆ ಕಂದಾ
ಇಂದಲ್ಲ ನಾಳೆ ನನ್ನ ಭಾವನೆಗಳಿಗೆ ಬೆಲೆ ಸಿಗಬಹುದು ಎಂದು

ಈಗ ಅವೆಲ್ಲಾ ನಿನ್ನ ತಂದೆಯ ಚಿತೆಯಲ್ಲೇ ಸುಟ್ಟು ಬೂದಿಯಾದವು
ನಾ ಬಯಸಿದ ನಾಳೆಗಳು ಬಾರದಾದವು

ಹೊರಗೆ ಜೊತೆಗೂಡಿ ಸುತ್ತಲಿಲ್ಲ
ದೇವರಲಿ ಹರಕೆ ತೀರಿಸಲಿಲ್ಲ

ಸಂಜೆ ಕಾಫಿ ಹೀರುತಾ ಹರಟಲಿಲ್ಲ
ಬಟ್ಟೆ ಸೀರೆಗಾಗಿ ಅಂಗಡಿಗಳ ಎಡತಾಕಲಿಲ್ಲ

ಕೈ ತುಂಬಾ ಹಣ ಕಣ್ಣು ಕುಕ್ಕುವ ಶ್ರೀಮಂತಿಕೆ
ಎಮ್ಮಯ ಬಾಳ ಬೆಳಗದು
ಮನೆಯಲಿ ದುಡಿಯುವ ನಮಗೂ ಮನಸ್ಸಿದೆ ಎಂದು ನೀವು ಅವಶ್ಯ ಅರಿಯುವುದು

ಎನಗೇ ಬಂದ ಪಾಡು ನನ್ನ ಸೊಸೆಗೆ ಬಾರದಿರಲಿ
ಅವಳ ಮನದಾಳದ ಮಾತುಗಳು ಒಳಗೆ ಹೂತು ಹೋಗದಿರಲಿ

ಹುಸಿ ಅಭಿಮಾನದ ಬದುಕು ಇನ್ನೊಬ್ಬ ಹೆಣ್ಣುಮಗಳ ವ್ಯಕ್ತಿತ್ವವ ಬಲಿ
ತೆಗೆದುಕೊಳ್ಳದಿರಲಿ…..ತೆಗೆದುಕೊಳ್ಳದಿರಲಿ

ಕೆ.ಎಂ ಶರಣಬಸವೇಶ

7 Responses

 1. ಮಹಿಳೆಯ ಅಂತರಂಗದ ಪಿಸುದನಿಯ ಅನಾವರಣ…ಮಗನಮುಂದೆ ಪತ್ರದ ಮೂಲಕ ನಿವೇದಿಸಿಕೊಂಡು ..ಅವನು ತನ್ನ ಬಾಳ ಸಂಗಾತಿಯ ಭಾವನೆಗಳ ಬಗ್ಗೆ ಸ್ವಲ್ಪ ಯೋಚಿಸುವಂತೆ ಮಾಡುವ ಪ್ರಯತ್ನವನ್ನು ಕವನದ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ.. ಧನ್ಯವಾದಗಳು..ಸಾರ್

  • ಧನ್ಯವಾದಗಳು ಮೇಡಂ. ಒಬ್ಬ ಮಹಿಳೆಯ ಭಾವನೆಗಳ ಕಟ್ಟಿಕೊಡುವ ಪ್ರಯತ್ನ…. ನೀವು ಓದಿ ಪ್ರತಿಕ್ರಿಯೆ ನೀಡಿದ್ದು ತುಂಬಾ ಖುಷಿಯಾಯಿತು

 2. ನಯನ ಬಜಕೂಡ್ಲು says:

  ಕವನದೊಳಗೆ ಇಡೀ ಬದುಕಿನ ಸಾರವೇ ಅಡಗಿದೆ. ತುಂಬಾ ಚೆನ್ನಾಗಿದೆ

 3. Padma Anand says:

  ಕೆಲವೊಮ್ಮೆ ಮೌನ ಎಷ್ಟು ಅಸಹನೀಯ ಎಂಬ ಭಾವವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸುಂದರ ಕವಿತೆ. ತನಗಾದ ನಿರಾಶೆ ಮುಂದಿನ ಪೀಳಿಗೆಗೂ ಮುಂದುವರೆಯದಿಲಿ ಎಂಬ ಸದಾಶಯ ಇಷ್ಟವಾಯಿತು.

 4. Niranjanamurthy balawadimath says:

 5. . ಶಂಕರಿ ಶರ್ಮ says:

  ಒಂಟಿ ಜೀವನದ ಮೌನ…. ಅಸಹನೀಯತೆಯನ್ನು ಬಿಂಬಿಸಿದ, ಮಹಿಳೆಯ ಅಂತರಾಳದ ಭಾವಗಳ ಬಿಚ್ಚಿಟ್ಟ ಕವನ ಮನಮುಟ್ಟಿತು.

 6. Mittur Nanajappa Ramprasad says:

  ಬರೆಯಿತಿರುವೆ ನಿನಗೊಂದು ಕಾಗದವ ಮುದ್ದು ಮಗನೆ/

  ಬರೆಯಿತಿರುವೆ ನಿನಗೊಂದು ಕಾಗದವ ಮುದ್ದು ಮಗನೆ/
  ಆಸ್ಪೋಟಿಸುವ ಭಾವಗಳ ಅಭಿವ್ಯಕ್ತಿಸಿರುವೆ ಮುಕ್ತಿಗಾಗಿ/
  ಬರೆಯಿತಿರುವೆ ನಿನಗೊಂದು ಕಾಗದವ ಮುದ್ದು ಮಗನೆ/
  ಒಳಗೊಳಗಿನ ಅನಿಸಿಕೆಗಳ ತಿಳಿಸಿತಿರುವೆ ನೆಮ್ಮದಿಗಾಗಿ

  ನಿರೀಕ್ಷೆಯ ನಾಳೆಗಳಲ್ಲಿ ನಿರಾಶೆಯ ನಿಮಿಷಗಳಲ್ಲಿ/
  ಕಾಣದಾಯಿತು ನಗುವು ಒತ್ತಾಸೆಯಾಯಿತು ಕರ್ತವ್ಯವು/
  ನಿರೀಕ್ಷೆಯ ನಾಳೆಗಳಲ್ಲಿ ನಿರಾಶೆಯ ನಿಮಿಷಗಳಲ್ಲಿ/
  ಬರುಡಾಯಿತು ಭಾವವು ಬಾಡಿ ಹೋಯಿತು ಬಡಜೀವವು/

  ಮಡದಿಯಾಗಿ ಮನೆ ಸೇರಿದೆ ತಾಯಿಯಾಗಿ ದಿನವೂ ದುಡಿದೆ/
  ಬದುಕಿನ ಅಲೆ ಅಲೆಗಳಲ್ಲಿ ಸಂಸಾರದ ನೌಕೆಯ ಮುನ್ನೆಡೆಸಿದೆ/
  ನೋವು ನಲಿವಿನ ಏರುಪೇರುಗಳಲ್ಲಿ ಜೀವನವನು ಎದುರಿಸಿದೆ/
  ಪತಿಯ ಸೇವೆಯಲ್ಲಿ ಮಕ್ಕಳ ಏಳಿಗೆಯಲ್ಲಿ ತೃಪ್ತಿ ಸಂತೃಪ್ತಿ ಪಡೆದೆ/

  ಯಾವ ಅತಿಯಾಶೆಯಿಲ್ಲದೆ ಇರುವುದರಲ್ಲಿ ಹರ್ಷದ ಹಣತೆಯ ಹಚ್ಚಿದೆ/
  ಪ್ರತಿಫಲಗಳ ಬಯಸದೆ ಮಮತೆಯ ಮಡಿಲಾದೆ ಪ್ರೀತಿಯ ಕಡಲಾದೆ/
  ಹತಾಶೆಯ ಕಿಡಿಗಳು ಹೊಗೆಯಾಗಿ ಬೆಂಕಿಯಾಗದಂತೆ ನಿಯಂತ್ರಿಸಿದೆ/
  ಒಮ್ಮೆಯಾದರೂ ನನ್ನ ಬಾಳಿಗೆ ಮನ್ನಣೆಯು ಸಿಗಬಹುದೆಂದು ಆಶಿಸಿದೆ/

Leave a Reply to SHARANABASAVEHA K M Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: