ಐಕಾಗ್ರ ಐತರೇಯ
ಯಾವುದೇ ಸತ್ ಚಿಂತನೆ, ಆಧ್ಯಾತ್ಮಿಕ ಚಿಂತನೆ, ಸಮಾಜಮುಖಿ ಸೇವೆ ಮೊದಲಾದ ಕಾರ್ಯಗಳನ್ನು ಮಾಡಬೇಕಾದರೆ ಸಾಮರ್ಥ್ಯ, ಚಾಣಾಕ್ಷತೆ, ತಾಳ್ಮೆ, ತ್ಯಾಗಗಳು ಅನಿವಾರ್ಯ ಅಷ್ಟೇ ಅಲ್ಲ, ಸತ್ಫಲ ನೀಡುವ ಕಾರ್ಯಗಳನ್ನು ಮಾಡಿ ಗಣ್ಯವ್ಯಕ್ತಿಗಳಾಗಬೇಕಿದ್ದಲ್ಲಿ ಗುರು ಹಾಗೂ ದೇವರ ಸಂಪೂರ್ಣ ಅನುಗ್ರಹ ಬೇಕಂತೆ. ಈ ಭಾಗ್ಯ ಎಲ್ಲರಿಗೂ ದೊರಕುವುದು ದುರ್ಲಭ ಇಷ್ಟೂ ಅಲ್ಲ, ಅಂತಹವರಿಗೆ ಪೂರ್ವ ಪುಣ್ಯ ಸುಕೃತ ಬೇಕಂತೆ. ಪೂರ್ವ ಪುಣ್ಯದ ಸಂಚಯವಿದ್ದಲ್ಲಿ ಸಂದರ್ಭಾವಕಾಶ ದೊರೆತರೆ ಹೆಡ್ಡನೂ ಸನ್ಮಾನ್ಯನಾಗಬಹುದಂತೆ. ಅದಿಲ್ಲದೆ ಹೋದರೆ ಜನತಾ ಜನಾರ್ಧನ ಸೇವೆಯ ನಿರೀಕ್ಷಿಸಿದ ಫಲ ಪಡೆಯಲು ಅಸಾಧ್ಯ ಎಂಬುದು ಅನುಭವಿಗಳ ಮಾತು. ಇಂತಹ ಪೂರ್ವಜನ್ಮ ಸಂಸ್ಕಾರವಿದ್ದ, ಸಮಾಜವು ಹೆಡ್ಡನೆಂದು ಗುರುತಿಸಿದವ ಲೋಕ ವಿಖ್ಯಾತ ಮಹರ್ಷಿಯಾದ ಬಗೆಯನ್ನು ನೋಡೋಣ.
ಈತನೇ ಐತರೇಯ ಮಹರ್ಷಿ. ‘ಮಾಂಡೂಕಿ’ ಹಾಗೂ ‘ಇತರೆ’ ಎಂಬ ದಂಪತಿಗಳ’ ಪುತ್ರನೇ ಐತರೇಯ. ಬಾಲ್ಯದಲ್ಲೇ ಈ ಬಾಲಕನು ತನ್ನಷ್ಟಕೆ ತಾನೇ ಆಧ್ಯಾತ್ಮ ಚಿಂತನೆಯಲ್ಲಿ ಇರುತ್ತಿದ್ದ. ಸದಾ ಯಾವುದೋ ಗುಂಗಿನಲ್ಲಿದ್ದು ಲೋಕ ವ್ಯವಹಾರಕ್ಕೆ ವಿಮುಖನಾಗಿದ್ದ ಈತನನ್ನು ಅವನ ಹೆತ್ತವರು ಹಾಗೂ ಲೋಕದ ಜನರು ಆತನೊಬ್ಬ ಹೆಡ್ಡನೆಂದು ತಿಳಿದಿದ್ದರು.
ಆದರೆ ಐತರೇಯನು ಸದಾಕಾಲವೂ ಸೂರ್ಯನನ್ನು ದ್ವಾದಶಾಕ್ಷರೀ ಮಂತ್ರದಿಂದ ಜಪಿಸುತ್ತಾ ಕಾಲ ಕಳೆಯುತ್ತಿದ್ದ. ಮಗನ ಇಂತಹ ಪ್ರವೃತ್ತಿಯನ್ನು ನೋಡಿ, ನೋಡಿ ಬೇಸತ್ತ ಮಾಂಡೂಕಿಯು ಈ ಮಗನು ನಿಷ್ಠಯೋಜಕನೆಂದು ತಿಳಿದ ಅಂತೆಯೇ ‘ಪಿಂಗೆ’ ಎಂಬ ಇನ್ನೊಬ್ಬಳನ್ನೂ ಮದುವೆಯಾಗಿ ನಾಲ್ವರು ಮಕ್ಕಳನ್ನು ಪಡೆದ. ಈ ಮಕ್ಕಳಾದರೋ ತಂದೆಯಂತೆಯೇ ವಿದ್ಯಾಸಂಪನ್ನರಾಗಿ ದೇವತಾಕಾರ್ಯ, ಯಜ್ಞ ಯಾಗಾದಿಗಳನ್ನೂ ಮಾಡುತ್ತಾ ಮಾತಾ ಪಿತೃಗಳನ್ನು ಸಂತೋಷಪಡಿಸುತ್ತಾ ಲೋಕದ ಜನರಲ್ಲಿ ಹೊಗಳಿಸಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಐತರೇಯನ ತಾಯಿ ‘ಇತರೆ’ಯು ಮಗನ ಬಳಿ ಬಂದು ತನ್ನಳಲನ್ನು ಹೇಳಿ ಕಣ್ಣೀರು ಮಿಡಿಯುತ್ತಿದ್ದಳು. ಆದರೆ ಮಗನು ಆದಾವುದನ್ನೂ ಲೆಕ್ಕಸದೇ ತಾಯಿಗೆ ಮನಮುಟ್ಟುವಂತೆ ಹೇಳಿ ಸಮಾಧಾನ ಪಡಿಸಿ ತತ್ವ ಮಾರ್ಗವನ್ನು ಬೋಧಿಸುತ್ತಿದ್ದ. ಮಗನ ಬೋಧನೆಯನ್ನು ಆಲಿಸಿದ ತಾಯಿ ಆತನ ಪಾಂಡಿತ್ಯಕ್ಕೆ ತಲೆದೂಗಿ ಹೆಮ್ಮೆ ಪಡುತ್ತಿದ್ದಳು. ತನ್ನ ಮಗ ಸಮಾಜ ಗುರುತಿಸುವಂತಹ ಮಹಾಪುರುಷನಾಗಬೇಕೆಂದು ದಿನನಿತ್ಯ ದೇವರಲ್ಲಿ ಮೊರೆಯಿಡುತ್ತಾಪ್ರಾರ್ಥಿಸುತ್ತಿದ್ದಳು. ತಾಯಿಯ ಪ್ರಾರ್ಥನೆ ಫಲ ಕೊಟ್ಟಿತು. ಮಗನ ಜಪ ಫಲಿಸಿತು.
ಹೀಗಿರಲು ಒಂದು ದಿನ ಐತರೇಯನಿಗೆ ರಾತ್ರಿ ಕನಸಿನಲ್ಲಿ ವಾಸುದೇವ ಮೂರ್ತಿಯನ್ನು ಕಂಡನು. ದೇವರು ಪ್ರತ್ಯಕ್ಷನಾಗಿದ್ದುದನ್ನು ಕಂಡ ಐತರೇಯನಿಗೆ ಜನ್ಮ ಸಾರ್ಥಕವಾದಂತಾಯಿತು. ಉದ್ದಂಡ ನಮಸ್ಕಾರ ಮಾಡಿದ, ಸ್ವಪ್ನ ದರ್ಶನವಾದರೂ ದೇವರ ಸಾಕ್ಷಾತ್ಕಾರ ಅನುಭವ ಐತರೇಯನಿಗೆ. ‘ಮಗೂ ಐತರೇಯ ನೀನು ಪರಿಶುದ್ಧನಾಗಿರುವೆ’ ಗಟ್ಟಿಯಾಗುವೆ. ನಿನ್ನ ಜನನಿಯನ್ನು ಸಂತೋಷ ಪಡಿಸುವುದು ಪುತ್ರನಾದ ನಿನ್ನ ಕರ್ತವ್ಯವೂ ಧರ್ಮವೂ ಹೌದು. ವಿಧಿಯುಕ್ತವಾಗಿ ಮದುವೆಯಾಗಿ ಪ್ರೌತಸ್ಮಾರ್ತ ಕರ್ಮಗಳನ್ನು ಅನುಷ್ಟಿಸಿ ಅದರ ಫಲವನ್ನು ನನಗೆ ಅರ್ಪಣೆ ಮಾಡು. ಸಪ್ತ ಋಷಿಗಳನ್ನು ಉದ್ಧರಿಸಿ ನನ್ನಲ್ಲೇ ಐಕ್ಯನಾಗುವೆ. ಸಕಲ ವೇದ, ವೇದಾಂಗಗಳೂ ನಿನಗೆ ಹೊಳೆಯುತ್ತವೆ’ ಎಂದು ಹೇಳಿ ಕಣ್ಮರೆಯಾದ.
ಐತರೇಯನು ಕೋಟಿತೀರ್ಥದ ಬಳಿ ಹೋಗಿ ಹರಿಮೇಧನೆಂಬ ಬ್ರಾಹ್ಮಣನು ಯಜ್ಞ ಮಾಡುವಲ್ಲಿಗೆ ಹೋಗಿ ತನ್ನ ವೇದಾರ್ಥ ನೈಪುಣ್ಯವನ್ನು ತೋರಿದನು. ಮುಂದೆ ಹರಿಮೇಧನ ಮಗಳನ್ನೇ ಮದುವೆಯಾಗಿ ಪುತ್ರರನ್ನು ಪಡೆದು ಲೋಕವಿಖ್ಯಾತನಾದನು. ಮುಂದೆ ಈತನು ವೇದಕ್ಕೆ ಉಪನಿಷತ್ ಬರೆದಿದ್ದು ಐತರೇಯ ಉಪನಿಷತ್ ಎಂಬುದು ಈತನ ಹೆಸರಿನಿಂದ ಪ್ರಸಿದ್ಧವಾಗಿದೆ. ಐತರೇಯನ ಏಕಾಗ್ರ ಚಿತ್ತವು ಜೊತೆಗೆ ಪೂರ್ವ ಪುಣ್ಯ ಸುಕೃತವು ಆತನಿಗೆ ಯಶೋದುಂದುಭಿಯನ್ನು ತಂದು ಕೊಟ್ಟಿತಲ್ಲದೇ, ವಾಸುದೇವರಲ್ಲಿ ಐಕ್ಯನಾಗುವಂತೆ ಮಾಡಿತು.
–ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಅಡ್ಮಿನರ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
ಮಾಹಿತಿಪೂರ್ಣ
ಅಪರೂಪದ ಕಥೆ ಅಲ್ಪಸ್ವಲ್ಪ ತಿಳಿದಿತ್ತು.. ಓದಿ ಖುಷಿ ಯಾಯಿತು. ಧನ್ಯವಾದಗಳು ಮೇಡಂ
ಏಕಾಗ್ರಚಿತ್ತದಿಂದ ದೇವರಲ್ಲಿ ನಂಬಿಕೆಯಿಟ್ಟು ಸ್ತುತಿಸಿದರೆ ಸತ್ಫಲ ಖಂಡಿತ ಎಂಬುದಕ್ಕೆ ಒಂದು ಉದಾಹರಣೆ ಐತರೇಯನ ಕಥೆ.
ಬಹಳ ಸೊಗಸಾದ ಕಥಾನಿರೂಪಣೆ…ಧನ್ಯವಾದಗಳು ವಿಜಯಕ್ಕಾ.