ಅನಾಮಿಕನ ಅವಾಂತರ
ನಗರದ ಹೃದಯ ಭಾಗದಲ್ಲಿರುವ ಆ ಸಾರ್ವಜನಿಕ ಉದ್ಯಾನವನಕ್ಕೆ ನಾನು ಆಗಾಗ ಹೋಗುತಿದ್ದೆ. ಆ ಸಮಯ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ಪದವಿಧರನಾದರು ಯಾವ ಉದ್ಯೋಗವೂ ಸಿಕ್ಕಿರಲಿಲ್ಲ. ಹಾಗಂತ ಕೈಕಟ್ಟಿ ಕೂಡದೆ ಉದ್ಯೋಗಕ್ಕಾಗಿ ನನ್ನ ಪ್ರಯತ್ನ ಮುಂದುವರೆದಿತ್ತು.
ಉದ್ಯಾನವನದ ಪ್ರಶಾಂತ ವಾತಾವರಣ ಹಚ್ಚ ಹಸುರಿನ ಗಿಡ ಮರ, ಮೆದು ಹುಲ್ಲು ಹಾಸು ತಂಪಾದ ಗಾಳಿ ಮನಸ್ಸಿಗೆ ಮುದ ನೀಡುತಿತ್ತು. ನಿತ್ಯ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿ ಪ್ರಚಲಿತದ ಸುದ್ದಿ ತಿಳಿಯುವದು, ಯಾವುದಾದರು ಉದ್ಯೋಗ ಜಾಹಿರಾತು ಗಮನಕ್ಕೆ ಬಂದರೆ ಆ ಹುದ್ದೆಗೆ ಅರ್ಜಿ ಗುಜರಾಯಿಸುವದು ಮಾಡುತಿದ್ದೆ. ಇದು ನನ್ನ ನಿತ್ಯದ ದಿನಚರಿಯಾಗಿತ್ತು.
ನನ್ನಂತೆ ಸುಮಾರು ಜನ ಉದ್ಯಾನವನಕ್ಕೆ ತಪ್ಪದೆ ಬರುತಿದ್ದರು. ಬೇಸಿಗೆ ಬಂದರೆ ಸಾಕು ಉದ್ಯಾನ ವನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿರುತಿತ್ತು. ಸಣ್ಣ ಮಕ್ಕಳು ಹುಲ್ಲುಹಾಸಿನ ಮೇಲೆ ಆಟವಾಡಿ ಕಾಲ ಕಳೆದರೆ ದೊಡ್ಡವರು ಸಿಮೇಂಟ ಆಸನದ ಮೇಲೆ ಕುಳಿತು ವಿಶ್ರಾಂತಿ ಪಡೆಯುತಿದ್ದರು. ಲ್ಲಿನ ಆಸನಗಳು ಖಾಲಿಯಾಗಿರದೆ ಯಾವಾಗಲೂ ಭರ್ತಿಯಾಗಿರುತಿದ್ದವು. ಒಬ್ಬರು ಹೋದರೆ ಆ ಜಾಗದಲ್ಲಿ ಮತ್ತೊಬ್ಬರು ಬಂದು ಕೂಡುತಿದ್ದರು. ಕೆಲವರು ಬೇರೆ ಬೇರೆ ವಿಷಯದ ಬಗ್ಗೆ ಚರ್ಚಿಸುತಿದ್ದರು.
ನನ್ನಂತೆ ಉದ್ಯಾನವನಕ್ಕೆ ಒಬ್ಬ ವ್ಯಕ್ತಿ ಕೂಡ ದಿನಾಲೂ ಬರುತಿದ್ದ. ಆತ ಸದಾ ಶುಭ್ರ ಬಟ್ಟೆ ತೊಟ್ಟು ಇನ್ ಶರ್ಟ ಮಾಡಿರುತಿದ್ದ. ಕಾಲಲ್ಲಿ ಕಪ್ಪು ಬಣ್ಣದ ಬೂಟು, ಕೈಯಲ್ಲಿ ಪೇಪರು ಪುಸ್ತಕ ಇರುತಿದ್ದವು. ಕಪ್ಪು ಬಣ್ಣ ನೀಳಕಾಯ ದುಂಡು ಮುಖ ಗುಂಗುರು ಕೂದಲು ಹೊಂದಿದ್ದ. ಆತನ ವಯಸ್ಸು ನಲವತ್ತರ ಆಸುಪಾಸು. ನೋಡಲು ಆಕರ್ಷಕವಾಗಿ ಕಾಣುತಿದ್ದ , ಒಳ್ಳೆಯ ಸ್ವಭಾವದ ವ್ಯಕ್ತಿ ಅನ್ನುವದು ಮೇಲ್ನೋಟಕ್ಕೆ ಕಂಡುಬರುತಿತ್ತು.
ಆತ ಏಕಾಂತವಾಗೇ ಕುಳಿತು ಪೇಪರ, ಪುಸ್ತಕ ಓದುವದರಲ್ಲಿ ತಲ್ಲೀನನಾಗುತಿದ್ದ. ಎಲ್ಲರಿಗಿಂತ ಆತ ಭಿನ್ನ ಅಂತ ನನಗನಿಸುತಿತ್ತು. ಸಾಯಂಕಾಲ ವಿದ್ಯುತ್ ದೀಪ ಬೆಳಗುತ್ತಲೇ ಇಲ್ಲಿಂದ ಎದ್ದು ಹೋಗುತಿದ್ದ. ಆತನಿಗೆ ನೋಡಿದಾಗ ನನ್ನ ತಲೆಯಲ್ಲಿ ಏನೇನೋ ಆಲೋಚನೆ ಮೂಡಿ ಯೋಚಿಸುವಂತೆ ಮಾಡುತಿದ್ದವು.
ಉದ್ಯಾನವನದ ಸುತ್ತಲು ಅನೇಕ ಸರಕಾರಿ, ಖಾಸಗಿ ಕಟ್ಟಡ ಸುತ್ತುವರೆದು ಮೆರುಗು ಹೆಚ್ಚಿಸುವಂತೆ ಮಾಡಿದ್ದವು. ಮುಂದಿನ ರಸ್ತೆ ನಗರದ ಮುಖ್ಯ ರಸ್ತೆಯಾಗಿತ್ತು. ವಾಹನ ಸಂಚಾರ ಜನ ಸಂಚಾರ ಅಧಿಕವಾಗಿರುತಿತ್ತು. ಪಾದಚಾರಿಗಳು ಒಂದು ಕಡೆಯಿಂದ ಇನ್ನೊಂದು ಕಡೆ ದಾಟಬೇಕಾದರೆ ಪ್ರಯಾಸ ಪಡಬೇಕಾಗಿತ್ತು .
ಉದ್ಯಾನವನಕ್ಕೆ ಹೊಂದಿಕೊಂಡು ಒಂದು ಕಲ್ಯಾಣ ಮಂಟಪಲ್ಲಿ ಸದಾ ಕಾಲ ಒಂದಿಲ್ಲೊಂದು ಕಾರ್ಯಕ್ರಮ ಇದ್ದೇ ಇರುತಿದ್ದವು. ಅಲ್ಲಿಗೆ ಬಂದ ಜನರು ಉದ್ಯಾನವನಕ್ಕೆ ಬಂದೇ ಹೋಗುತಿದ್ದರು. ಇಲ್ಲಿ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಉದ್ಯಾನವನದ ಸೌಂದರ್ಯ ಕಣ್ತುಂಬಿಕೊಂಡು ಹೋಗುತಿದ್ದರು.
ಜನ ಸಂದಣಿ ಜಾಸ್ತಿಯಾವಾಗ ಸಹಜವಾಗಿ ಸಣ್ಣಪುಟ್ಟ ಹೋಟೆಲು ಪಾನ ಬಿಡಾ ಅಂಗಡಿ ಕೂಡ ರಸ್ತೆಯ ಅಕ್ಕ ಪಕ್ಕದಲ್ಲಿ ತಲೆಯತ್ತಿ ವ್ಯಾಪಾರ ವಹಿವಾಟು ನಡೆಸುತಿದ್ದವು. ಅಂದು ನಾನು ಹೋಟಲಿಗೆ ಚಹಾ ಕುಡಿಯಲು ಹೋದಾಗ ಆ ವ್ಯಕ್ತಿ ಕೂಡ ಬಂದಿದ್ದ. ಆದರೆ ಆತ ಚಹಾ ಕುಡಿಯದೇ ಟೇಬಲ್ ಮೇಲಿಟ್ಟ ಎರಡು ಗ್ಲಾಸ್ ನೀರು ಕುಡಿದು ಹಾಗೇ ಹೊರಟು
ಹೋದ ಆತನ ವರ್ತನೆ ಕೆಲವರಿಗೆ ಆಶ್ಚರ್ಯ ತರಿಸಿತು.
‘ಆ ಮನುಷ್ಯ ನಮ್ಮ ಹೋಟಲಿಗೆ ಆಗಾಗ ಬರ್ತಾನೆ. ಆದರೆ ಒಂದೇ ಒಂದು ದಿನ ಚಹಾಕುಡಿಯುವದಿಲ್ಲ. ಬರೀ ನೀರು ಮಾತ್ರ ಕುಡಿದು ಹೋಗುತ್ತಾನೆ’ ಅಂತ ಹೋಟೆಲ ಮಾಲಿಕ ಆತನ ಮೇಲೆ ಸಿಟ್ಟು ಹೊರ ಹಾಕಿದ.
‘ಆತನಿಗೆ ಚಹಾದ ಚಟ ಇರಲಿಕ್ಕಿಲ್ಲ, ಅದಕ್ಕೆ ಆತ ಹಾಗೇ ಹೋಗಿರಬೇಕು’ ಅಂತ ಒಬ್ಬಿಬ್ಬರು ಅಭಿಪ್ರಾಯ ಹೊರ ಹಾಕಿದರು.
‘ಚಹಾ ಕುಡಿಯುವ ಚಟ ಇರದಿದ್ದರೆ ಹೋಟಲಿಗೆ ಯಾಕೆ ಬರಬೇಕು? ಎಲ್ಲಿಗಾದರು ಹೋಗಿ ನೀರು ಕುಡಿಯಬೇಕು. ಸಾಕಷ್ಟು ಕಡೆ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಇದೆ. ಅಂತ ಪುನರುಚ್ಛರಿಸಿದ.
ಹೋಟಲಿನಲಿನವನ ಮಾತು ನನಗೆ ಸರಿ ಕಾಣಲಿಲ್ಲ. ಹೋಟೆಲ ಅಂದಮೇಲೆ ನೀರು, ಚಹಾ ಅಂತ ಸಹಜವಾಗಿ
ಜನ ಬಂದೇ ಬರುತ್ತಾರೆ. ಚಹಾ ಕುಡಿದರೆ ಮಾತ್ರ ನೀರು ಕುಡಿಯಬೇಕೆ ? ಇಲ್ಲದಿದ್ದರೆ ಇಲ್ಲವೇ? ಅಂತ ಯೋಚಿಸಿದೆ.
ಅಂದು ಕಲ್ಯಾಣ ಮಂಟಪದಲ್ಲಿ ಯಾವುದೇ ಕಾರ್ಯಕ್ರಮ ಇರಲಿಲ್ಲ ಅದು ನಿಶ್ಶಬ್ದವಾಗಿತ್ತು. ಮೂರ್ನಾಲ್ಕು ಜನ ಕಾವಲುಗಾರರು ಗೇಟಿನ ಹೊರಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದರು. ದಾರಿಗೆ ಹೋಗುತಿದ್ದ ಆ ವ್ಯಕ್ತಿಗೆ ನೋಡಿ ಕಾವಲುಗಾರರು ಗುಸು ಗುಸು ಮಾತು ಆರಂಭಿಸಿದರು.
ನಾನು ಆ ವ್ಯಕ್ತಿಗೆ ಅನೇಕ ಸಭೆ ಸಮಾರಂಭಗಳಲ್ಲೂ ನೋಡಿದ್ದೆ. ಆಗ ಅರೇ ಆತ ಇಲ್ಲಿಗೂ ಬಂದಿದ್ದಾನಲ್ಲ ? ಅಂತ ಆಶ್ಚರ್ಯವಾಗುತಿತ್ತು.
ಅವತ್ತು ನಮ್ಮ ಸಂಬಂಧಿಕರೊಬ್ಬರ ಮದುವೆ ಇದೇ ಕಲ್ಯಾಣ ಮಂಟಪದಲ್ಲಿತ್ತು .ಆಶ್ಚರ್ಯವೆಂದರೆ ಆತ ಆ ಮದುವೆಯಲ್ಲೂ ಕಾಣಿಸಿಕೊಂಡಿದ್ದ. ಮದುವೆ ಗದ್ದಲ ಕಡಿಮೆಯಾದ ಮೇಲೆ ಆತನಿಗೆ ಮಾತಾಡಿಸಿ ಪರಿಚಯ ಮಾಡಿಕೊಂಡರಾಯಿತು ಅಂತ ನಿರ್ಧರಿಸಿದೆ.
ಮದುವೆ ಮುಗಿದ ನಂತರ ನಾನು ಆತನಿಗೆ ಹುಡುಕಿದೆ. ಆದರೆ ಆತ ಆಗಲೇ ಹೊರಟು ಹೋಗಿದ್ದ . ಈ ಮದುವೆಗೂ ಇವನಿಗು ಏನು ಸಂಬಂಧ ? ಆತ ಯಾರ ಕಡೆಯಿಂದ ಬಂದಿರಬಹು. ಅಂತ ಸುಮಾರು ಹೊತ್ತು ಯೋಚಿಸಿದೆ ಆದರೆ ಯಾವುದೂ ಗೊತ್ತಾಗಲಿಲ್ಲ.
ಮರುದಿನ ನಾನು ಉದ್ಯಾನವನದಲ್ಲಿ ಕುಳಿತಾಗ ಎದುರಿಗಿರುವ ಸಿಮೇಂಟ ಆಸನದ ಮೇಲೆ ಆತ ಬಂದು ಕುಳಿತುಕೊಂಡಿದ್ದ . ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ಥೇಟ್ ಲೀಡರ್ ಕಂಡಂತೆ ಕಾಣುತಿದ್ದ. ಯಾವುದೋ ರಾಜಕೀಯ ಕಾರ್ಯಕ್ರಮಕ್ಕೆ ಹೋಗುವವನಿರಬೇಕು ಅಂತ ನನ್ನಷ್ಟಕ್ಕೆ ನಾನೇ ಯೋಚಿಸಿದೆ.
ಆತನ ಕೈಯಲ್ಲಿ ಒಂದೆರಡು ಕಥೆ ಕಾದಂಬರಿ ಪುಸ್ತಕಗಳಿದ್ದವು . ಇವತ್ತಾದರೂ ಪರಿಚಯ ಮಾಡಿಕೊಳ್ಳಬೇಕು ಅಂತ ಆತನ ಪಕ್ಕ ಬಂದು ಕುಳಿತುಕೊಂಡೆ. ಸುಮಾರು ಹೊತ್ತು ಕಳೆದರೂ ಆತ ನನ್ನ ಕಡೆ ದೃಷ್ಟಿ ಹರಿಸಲಿಲ್ಲ.
‘ಆ ಪೇಪರ್ ಸ್ವಲ್ಪ ಕೊಡ್ತೀರಾ? ಓದಿ ಕೊಡ್ತೀನಿ’ ಅಂತ ನಾನೇ ಕೇಳಿದೆ. ಆತ ತನ್ನ ಓದುವ ದೃಷ್ಟಿ ಬದಲಿಸದೆ ಆ ಪೇಪರ ನನ್ನ ಕೈಗೆ ಕೊಟ್ಟು ತಾನು ಮಾತ್ರ ಕಾದಂಬರಿ ಓದಿನಲ್ಲಿ ತಲ್ಲೀನನಾದ. ಆ ಕಾದಂಬರಿಯ ತಲೆಬರಹ ‘‘ಅನಾಮಿಕನ ಅವಾಂತರ” ಅಂತ ಸ್ಪಷ್ಟವಾಗಿ ಕಾಣುತಿತ್ತು.
‘ನಿಮಗೆ ನಾನು ಬಹಳ ಕಡೆ ನೋಡಿದ್ದೇನೆ. ಪರಿಚಯ ಮಾಡಿಕೊಳ್ಳಲು ಆಗಿರಲಿಲ್ಲ’ ಅಂತ ನಿಧಾನವಾಗಿ ನಾನು ಮಾತು ಆರಂಭಿಸಿದೆ. ನನ್ನ ಮಾತಿನಿಂದ ಆತ ಕ್ಛಣ ಕಾಲ ಗಲಿಬಿಲಿಗೊಂಡ.
‘ಹೌದಾ? ಯಾವಾಗ ನೋಡಿದ್ದೀರಿ ಎಲ್ಲಿ ನೋಡಿದ್ದೀರಿ ”ಅಂತ ಪ್ರಶ್ನಿಸಿದ. ಆತನ ಮುಖದ ಮೇಲೆ ಗಾಬರಿ ಎದ್ದು ಕಾಣುತಿತ್ತು. ಬೆವರ ಹನಿ ಹಣೆಯ ಮೇಲೆ ಗೋಚರಿಸುತಿದ್ದವು.
‘ನಿಮ್ಮ ಹೆಸರೇನು?’ ಅಂತ ಪ್ರಶ್ನಿಸಿದೆ. ಹೆಸರು ಹೇಳಲು ಕೂಡ ಆತ ಹಿಂದೆ ಮುಂದೆ ನೋಡಿದ.ಬಹುಶಃ ಆತನ ಹೆಸರು ಅನಾಮಿಕನೇ ಇರಬೇಕು ಅಂತ ಭಾವಿಸಿ ‘ನಿಮ್ಮ ಮದುವೆ ಆಗಿದೆಯೇ? ಮಕ್ಕಳೆಷ್ಟು’ ಅಂತ ಪುನಃ ಕೇಳಿದೆ.
‘ಮದುವೆನೂ ಇಲ್ಲ ಮಕ್ಕಳೂ ಇಲ್ಲ’ ಅಂತ ಆತ ಮೌನ ಮುರಿದು ಸಣ್ಣ ದನಿಯಲ್ಲಿ ಹೇಳಿದ .
‘ಉದ್ಯೋಗ ಏನು ಮಾಡುತ್ತೀರಿ’ ಎಂದೆ. ‘ಏನೂ ಇಲ್ಲ’ ಅಂತ ತಲೆಯಾಡಿಸಿದ. ಆತನ ಮಾತು ನನ್ನ ಮನಸ್ಸಿಗೆ ಬೇಸರ ಮೂಡಿಸಿತು.
‘ಊಟ ತಿಂಡಿಯ ಸಮಸ್ಯೆ ಆಗುವುದಿಲ್ಲವೇ?’ ಎಂದೆ. ‘ಆಗುತ್ತದೆ ಏನು ಮಾಡೋದು ಅನಿವಾರ್ಯ’ ಅಂತ ನೋವು ಹೊರ ಹಾಕಿದ.
‘ಮನೆಯಲ್ಲಿ ಎಷ್ಟು ಜನ ಇದ್ದೀರಿ’ ಎಂದಾಗ ‘ನನ್ನ ಬಿಟ್ಟು ಯಾರೂ ಇಲ್ಲ. ನಾನು ಸಣ್ಣವನಿದ್ದಾಗಲೇ ವಿಪರೀತ ಮಳೆಯಿಂದಾಗಿ ಮನೆ ಗೋಡೆ ಬಿದ್ದು ತಂದೆ ತಾಯಿ ಇಬ್ಬರೂ ತೀರಿಕೊಂಡರು. ಆಗ ನಾನು ಶಾಲೆಗೆ ಹೋಗಿದ್ದೆ ಬಚಾವಾದೆ ಇಲ್ಲದಿದ್ದರೆ ಅವರ ಜೊತೆ ನಾನೂ ಸಮಾಧಿಯಾಗುತಿದ್ದೆ’ ಎಂದನು.
‘ಹಾಗಾದರೆ ನೀವು ಎಲ್ಲಿ ವಾಸವಾಗಿರುವದು’ ಅಂತ ಪ್ರಶ್ನಿಸಿದೆ.
‘ಮೊದಲು ಹಳ್ಳಿಯ ಮನೆಯಲ್ಲಿ ವಾಸವಾಗಿದ್ದೆ ಆ ಹಿಂದಿನ ಘಟನೆಯ ನೆನಪು ಕಾಡಿ ಮನಸ್ಸಿಗೆ ಬೇಸರವಾಗತೊಡಗಿತು ಬೇರೆ ಎಲ್ಲಿಯಾದರು ಇದ್ದರೆ ದುಃಖ ಮರೆಯಬಹುದು ಅಂತ ಇಲ್ಲೇ ಒಂದು ಸಣ್ಣ ರೂಮ್ ಬಾಡಿಗೆ ಹಿಡಿದು
ವಾಸವಾಗಿದ್ದೇನೆ’ ಅಂತ ವಾಸ್ತವ ವಿವರಿಸಿದ. ಆತನ ಕಣ್ಣು ತೇವಗೊಂಡಿದ್ದವು.
‘ಮದುವೆ ಮಾಡಿಕೊಂಡಿದ್ದರೆ ಯಾವ ಸಮಸ್ಯೆಯೂ ಇರುತಿರಲಿಲ್ಲವಲ್ಲ’ ಅಂತ ಪ್ರಶ್ನಿಸಿದೆ.
‘ಮದುವೆ ಮಾಡಿಕೊಳ್ಳಲು ಕೂಡ ಪ್ರಯತ್ನಿಸಿದೆ ಆದರೆ ನಿರುದ್ಯೋಗಿ, ಜೊತೆಗೆ ಅನಾಥ ಅಂತ ಯಾರೂ ಹೆಣ್ಣು ಕೊಡಲಿಲ್ಲ’ ಎಂದನು. ಆತನ ಒಂದೊಂದು ಮಾತು ಕನಿಕರ ಮೂಡಿಸಿದವು.
ಅಷ್ಟರಲ್ಲಿ ಕತ್ತಲೆ ಕವಿಯಿತು ಮತ್ತೆ ನಾಳೆ ಸಿಗೋಣ ಅಂತ ಹೇಳಿ ನಾನು ಮನೆಕಡೆ ಹೊರಟೆ ದಾರಿಯುದ್ದಕ್ಕೂ ಆತನ ಯೋಚನೆಗಳೇ ಕಾಡಿ ಬೇಸರ ತರಿಸಿತು.
ಮರುದಿನ ಉದ್ಯಾನವನಕ್ಕೆ ಹೋದಾಗ ಆತ ಯಾವ ಆಸನದ ಮೇಲೂ ಕಾಣಿಸಲಿಲ್ಲ ಯಾಕೋ ಆ ಅನಾಮಿಕ ಕಾಣಸ್ತಿಲ್ಲ ಎಲ್ಲಿಗೆ ಹೋಗಿರಬೇಕು ಅಂತ ಯೋಚಿಸಿದೆ. ಅವತ್ತು ರವಿವಾರ ದಿನದಕ್ಕಿಂತಲೂ ಹೆಚ್ಚಿನ ಜನ ಸೇರಿದ್ದರು ಕಲ್ಯಾಣ ಮಂಟಪದಲ್ಲಿ ಯಾವುದೋ ಮದುವೆ ಕಾರ್ಯಕ್ರಮ ನಡೆಯುತಿತ್ತು. ಸದ್ದು ಗದ್ದಲ ಜೋರಾಗಿ ಕೇಳಿಸುತಿತ್ತು. ಅಷ್ಟರಲ್ಲಿ ಕಾವಲುಗಾರರು ಯಾರನ್ನೋ ಜೋರು ದನಿಯಲ್ಲಿ ಬೈಯುತಿದ್ದರು. ಅಲ್ಲಿ ಜಗಳಾ ನಡೀತಿದೆ ಅಂತ ಕೆಲವರು ಗಲಿಬಿಲಿಗೊಂಡರು. ಯಾರ ಜಗಳಾ? ಅಂತ ಉದ್ಯಾನ ವನದಲ್ಲಿ ಕುಳಿತವರು ಅತ್ತ ಕಡೆಸಾಗಿದರು. ನಾನು ಕೂಡ ಅವರ ಹಿಂದೆ ಹೋದೆ.
ಜನರ ದೊಡ್ಡ ಗುಂಪು ಅಲ್ಲಿ ಸೇರಿತ್ತು ಬೈಸಿಕೊಳ್ಳುವ ವ್ಯಕ್ತಿ ಬೇರೆ ಯಾರೂ ಆಗಿರದೆ ಆ ಅನಾಮಿಕನೇ ಆಗಿದ್ದ ಆತನಿಂದ ಯಾವ ಉತ್ತರವೂ ಬರದೇ ಮೂಕನಾಗಿ ನಿಂತಿದ್ದ.
ಆ ಕಾವಲುಗಾರರ ವರ್ತನೆ ನೋಡಿ ನನಗೆ ಸಿಟ್ಟು ಬಂದು ”ನೀವೆಲ್ಲ ಸೇರಿ ಅವನಿಗ್ಯಾಕೆ ಬೈಯತಿದ್ದೀರಿ . ವ್ಯಕ್ತಿಗೆ ನೋಡಿಯಾದರೂ ಗೌರವ ಕೊಡಬಾರದಾ? ” ಅಂತ ಜೋರು ದನಿಯಲ್ಲಿ ಪ್ರಶ್ನಿಸಿದೆ .
”ಇವನಿಗೆ ಗೌರವ ಕೊಡಬೇಕಾ? ಇವನು ಮಾಡುವ ಅವಾಂತರ ನಿಮಗೇನು ಗೊತ್ತು ? ಬಟ್ಟೆ ಬರೆ ಶುಭ್ರ ಹಾಕಿಕೊಂಡರೇ ಆಯಿತಾ? ಲಕ್ಷಾಂತರ ರುಪಾಯಿ ಖರ್ಚು ಮಾಡಿ ಜನ ನಮ್ಮ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ ಮಾಡ್ತಾರೆ ಎಷ್ಟು ಜನ ಬರ್ತಾರೆ ಅನ್ನುವ ಲೆಕ್ಕ ಹಾಕಿ ಊಟ ತಿಂಡಿಯ ವ್ಯವಸ್ಥೆ ಮಾಡಿರ್ತಾರೆ ಇಂಥವರಿಂದ ಕಾರ್ಯಕ್ರಮ ಅಸ್ತವ್ಯಸ್ತವಾದರೆ ಏನ್ಮಾಡಬೇಕು?” ಅಂತ ಪ್ರಶ್ನಿಸಿದರು.
‘ಅದು ಇವನಿಗೇನು ಸಂಬಂಧ? ಸಂಬಂಧ ಇಲ್ಲದ ವಿಷಯ ಕೆದಕಿ ರಾದ್ದಾಂತ ಮಾಡುವದು ಎಷ್ಟು ಸರಿ’ ಅಂತ ಪ್ರಶ್ನಿಸಿದೆ.
“ಸಂಬಂಧ ಇದೆ ಅಂತಲೇ ಬೈಯುವದು ಇಲ್ಲದಿದ್ದರೆ ಯಾರು ಬೈಯುತಿದ್ದರು? ಇವನು ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ ಬರ್ತಾನೆ. ಸಂಬಂಧಿಕರು, ಪರಿಚಯಸ್ಥರು, ಯಾರಾದರೂ ಇದ್ದಿರಬೇಕು” ಅಂತ ಇಲ್ಲಿಯ ತನಕ ಭಾವಿಸಿ ಸುಮ್ಮನಿದ್ದೇವು. ಆದರೆ ಪ್ರತಿ ಸಲ ಬಂದು ಉಂಡು ಹೋಗುವದು ನೋಡಿ ಅನುಮಾನ ಮೂಡಿತು. ಸತ್ಯಾಸತ್ಯತೆ ತಿಳಿಯಲು ವಿಚಾರಣೆ ಮಾಡಿದೇವು ಆಗ ಪುಗಸೆಟ್ಟೆ ಉಂಡು ಹೋಗೋ ವ್ಯಕ್ತಿ ಅಂತ ಗೊತ್ತಾಯ್ತು” ಎಂದರು .
ಕಾವಲುಗಾರರ ಮಾತು ಕೇಳಿ ಆಶ್ಚರ್ಯವಾಯಿತು . ಅನಾಮಿಕನ ಕಡೆ ಪ್ರಶ್ನಾರ್ಥಕವಾಗಿ ನೋಡಿದೆ.
ಅವನು ಮಾತ್ರ ಮುಖ ಸಪ್ಪಗೆ ಮಾಡಿಕೊಂಡು ನಿಂತಿದ್ದ.
“ಹೋಗಲಿ ಬಿಡ್ರಿ ಹಳಸಿ ಹೋಗುವ ಅನ್ನದ ಸಲುವಾಗಿ ಯಾಕೆ ಬೈದು ಅವಮಾನ ಮಾಡ್ತೀರಿ,ಮದುವೆ ಅಂದಮೇಲೆ ಇದೆಲ್ಲ ಮಾಮೂಲು, ಪುಗಸೆಟ್ಟೆ ಉಂಡು ಹೋಗುವವರು ಎಲ್ಲ ಕಡೆ ಇದ್ದೇ ಇರ್ತಾರೆ ” ಅಂತ ಒಬ್ಬಾತ ಸಮಾಧಾನ ಹೇಳಲು ಮುಂದಾದ .
ಗದ್ದಲ ಗೊಂದಲ ಹಾಗೇ ಮುಂದುವರೆಯಿತು. ಯಾಕೋ ಸನ್ನಿವೇಶ ವಿಕೋಪಕ್ಕೆ ಹೋಗುತ್ತಿರುವದು ಗಮನಿಸಿ ಮತ್ತೊಬ್ಬ ಆತನ ರಟ್ಟೆ ಹಿಡಿದು ಸ್ವಲ್ಪ ದೂರ ಎಳೆದೊಯ್ದ. “ನೋಡು ಇನ್ನೊಂದು ಸಲ ಕಲ್ಯಾಣ ಮಂಟಪದಾಗ ಬಂದು ಪುಗಸೆಟ್ಟೆ ಉಂಡು ಹೋದರೆ ನಾವು ಸುಮ್ಮನಿರೋದಿಲ್ಲ. ನಿನಗ ಏನು ಮಾಡಬೇಕೋ ಅದನ್ನು ಮಾಡುತೀವಿ ಪೋಲಿಸರ ಕೈಗೆ ಕೊಡತೀವಿ “ಅಂತ ಜೋರು ದನಿಯಲ್ಲಿ ಎಚ್ಚರಿಸಿದ .
“ಇಂತಹ ವ್ಯಕ್ತಿಗಳಿಗೆ ಸುಮ್ಮನೆ ಬಿಡಬಾರದು. ಪೋಲಿಸರ ಕೈಗೆ ಕೊಡಬೇಕು. ನಾಲ್ಕುಬಾರಿಸಿ ಬುದ್ಧಿ ಕಲಿಸುತ್ತಾರೆ” ಅಂತ ಇನ್ನೂ ಕೆಲವರು ದನಿಗೂಡಿಸಿದರು.
ಇಂತಹ ಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ಯಾರೂ ಬರುವದಿಲ್ಲ .ಅಂತ ಅನಾಮಿಕನಿಗೆ ಗೊತ್ತಾಗುತ್ತಲೇ ಹಾಗೋ ಹೀಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಮಾಯವಾದ.
ಆತ ಹೋದ ಮೇಲೂ ಜನರ ಚರ್ಚೆ ಹಾಗೇ ಮುಂದುವರೆಯಿತು “ಲೋಕದಾಗ ಎಂಥಾ ಜನ ಇರ್ತಾರ ನೋಡರಿ ಆ ವ್ಯಕ್ತಿಗೆ ನೋಡಿದರೆ ಇಂತಹ ಕೆಲಸಾ ಮಾಡ್ತಾನಂತ ಯಾರೂ ಯೋಚನೆ ಮಾಡೋದಿಲ್ಲ ಈಗಿನ ಕಾಲದಾಗ ಯಾರಿಗೆ ನಂಬಬೇಕೊ ಯಾರಿಗೆ ಬಿಡಬೇಕು ಅಂತ ಒಂದೂ ಗೊತ್ತಾಗುವದಿಲ್ಲ” ಅಂತಪರಸ್ಪರ ಮಾತಾಡಿಕೊಂಡರು.
ಅನಾಮಿಕನಿಗೆ ಅನಿವಾರ್ಯತೆ ಎದುರಾಗಿ ಇಂತಹ ಅವಾಂತರ ನಡೆದು ಹೋದದ್ದು ನನಗೆ ಬೇಸರ ತರಿಸಿತು. ಆತ ಮಾಡಿದ್ದು ಹೊಟ್ಟೆಗಾಗಿ ಅಲ್ಲವೇ? ಅಂತ ಯೋಚಿಸಿ ನಿಟ್ಟುಸಿರು ಬಿಟ್ಟೆ.
ಅವತ್ತು ಹೋದ ಆ ಅನಾಮಿಕ ಮತ್ತೊಮ್ಮೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ !!!!!
–ಶರಣಗೌಡ .ಬಿ.ಪಾಟೀಲ ತಿಳಗೂಳ, ಕಲಬುರಗಿ.
ಚೆನ್ನಾಗಿದೆ
ಈ ರೀತಿಯ ವ್ಯಕ್ತಿಗಳು ಅವರ ವರ್ತನೆ ಸಿಕ್ಕಿಬಿದ್ದಾಗ ಆದ ಮುಜುಗರ ಅಸಹಾಯಕತೆ ನಿಜವಾಗಿಯೂ…ಅಯ್ಯೋ ಎನಿಸುತ್ತದೆ ಆದರೆ ತುತ್ತಿಗೆ ಮುತ್ತುಕೊಟ್ಟು ಬಡಿಸಕೊಂಡದೆಲ್ಲಾ ಎಲೆಯಲ್ಲಿ ಬಿಟ್ಟು ಎದ್ದು ಹೋಗುವವರನ್ನು ನೋಡಿ ದಾಗ…ಹಸಿದವರು ಉಂಡುಹೋದರೆ ಏನು ತಪ್ಪು.. ಎನಿಸುವುದಂತು ಸತ್ಯ… ಕಾಯವನ್ನು ಬಗ್ಗಿಸಿ .ದುಡಿದು ತಿನ್ನುವುದು ಉತ್ತಮ.. ಕಂಡು ಕೇಳಿದ ನೋಡಿ ದ ಸಂಗತಿ ಯಾದರೂ ನಿರೂಪಣೆ ಚೆನ್ನಾಗಿ ದೆ ಧನ್ಯವಾದಗಳು ಸಾರ್.
ಕುತೂಹಲದಿಂದ ಓದಿಸಿಕೊಂಡು, ಮರುಕ ಹುಟ್ಟಿಸುವ ಬರಹ. ಕೊನೆಯಲ್ಲಿ ಅನಾಮಿಕನ ಬಗ್ಗೆ ಒಂದು ನಿರಾಶೆಯ ಛಾಯೆ ಉಳಿದುಬಿಡುತ್ತದೆ.
ಕಥಾನಿರೂಪಣೆ ಬಹಳ ಸೊಗಸಾಗಿದೆ…ಹೊಟ್ಟೆ ಹಸಿವು ಏನನ್ನೂ ಮಾಡಿಸಿಬಿಡುತ್ತದೆ.