ಕಾದಂಬರಿ: ನೆರಳು…ಕಿರಣ 16
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಗಣಪತಿಯ ಪೂಜೆಯೊಂದಿಗೆ ಶುರುವಾದ ಕಾರ್ಯಗಳು ಮನೆತನದ ಮುಖ್ಯದೇವರ ಆರಾಧನೆ, ವಂಶಾವಳಿಯ ಪರಿಚಯ, ಪ್ರಾರ್ಥನೆ, ಹುಡುಗ ಹುಡುಗಿಯ ಎದುರಿನಲ್ಲಿ, ಗುರುಹಿರಿಯರ ಸಮ್ಮುಖದಲ್ಲಿ ಮೇ ತಿಂಗಳ ಇಪ್ಪತ್ತಾರನೆಯ ತಾರೀಖಿನಂದು ವರಪೂಜೆ, ಮಾರನೆಯ ದಿನ ಧಾರಾಮುಹೂರ್ತ, ಅದೇ ದಿನ ಸಂಜೆಗೆ ಆರತಕ್ಷತೆ ಎಂದು ನಿರ್ಧರಿಸಿ ಲಗ್ನಪತ್ರಿಕೆಯನ್ನು ಬರೆಸಿ ಅದನ್ನು ಫಲತಾಂಬೂಲ ಸಹಿತ ಪರಸ್ಪರ ವಿನಿಮಯ ಮಾಡಿಕೊಂಡರು. ವಧೂವರರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು, ಬೆರಳಿಗೆ ಉಂಗುರ ತೊಡಿಸಿದರು, ವಸ್ತ್ರಗಳ ಉಡುಗೊರೆಯನ್ನು ಕೊಟ್ಟುಕೊಂಡರು. ನಂತರ ಹುಡುಗಿಗೆ ಐದುಜನ ಮುತ್ತೈದೆಯರು ಮಡಿಲು ತುಂಬಿ ಶುಭ ಹಾರೈಸಿದರು. ಆರತಿ ಬೆಳಗಿದರು.
ಸಹಜವಾಗಿಯೇ ಅಂದವಾಗಿದ್ದ ಇಬ್ಬರೂ ಸರಳವಾಗಿ ಅಲಂಕರಿಸಿಕೊಂಡಿದ್ದರೂ ನೋಡುವವರಿಗೆ ವಾವ್ ! ಎಂಥಹ ಜೋಡಿ ಎಂದು ಉದ್ಗಾರ ತೆಗೆಯುವಂತೆ ಕಾಣುತ್ತಿದ್ದರು.
ಊಟದ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಎಲ್ಲವೂ ಮುಗಿದು ರಾಹುಕಾಲ ಮುಗಿಯುವುದರೊಳಗೆ ಮನೆ ಮುಟ್ಟಬೇಕೆಂದು ಜೋಯಿಸರು ತಮ್ಮ ಕುಟುಂಬ, ಬಂಧುಗಳ ಸಮೇತ ತೆರಳಿದರು.
ಅವರುಗಳು ಹೋದ ಸ್ವಲ್ಪ ಹೊತ್ತಿನ ನಂತರ ಭಟ್ಟರ ಚಿಕ್ಕಪ್ಪಂದಿರೂ ತಮ್ಮ ಕುಟುಂಬದವರೊಡನೆ ಹೊರಡಲು ಸಿದ್ಧರಾದರು. ಅವರಿಗೆಲ್ಲ ತಾಂಬೂಲ, ಹೆಣ್ಣುಮಕ್ಕಳಿಗೆ ಅರಿಸಿನ ಕುಂಕುಮದ ಜೊತೆ ಕಣವಿರಿಸಿ ಕೊಟ್ಟು ಅವರಿಗೆ ನಮಸ್ಕರಿಸುವಂತೆ ಮಗಳು ಭಾಗ್ಯಳಿಗೆ ಹೇಳಿದಳು ಲಕ್ಷ್ಮಿ. ಅವಳೂ ಅಮ್ಮ ಹೇಳಿದಂತೆ ಮಾಡಿದಳು. ಸಂತೋಷದಿಂದ ಒಳ್ಳೆಯದಾಗಲೆಂದು ಎಲ್ಲರೂ ಹಾರೈಸಿದರು. ಆಗಲೂ ಭಟ್ಟರ ಹಿರಿಯ ಚಿಕ್ಕಮ್ಮ ಮಾತ್ರ “ಲಕ್ಷ್ಮೀ ನೀವು ಮದುವೆಗೆ ಗೊತ್ತುಮಾಡಿರುವ ಛತ್ರ ‘ಶ್ರೀರಾಮ ಕಲ್ಯಾಣ ಮಂಟಪ’ ನಿಮ್ಮ ಬೀಗರಾಗುವ ಜೋಯಿಸರ ಹಿರಿಯರು ಕಟ್ಟಿಸಿದ್ದಲ್ಲವಾ?” ಎಂದು ಕೇಳಿದರು.
“ಹೂ..ಹೌದು ಅತ್ತೆ,” ಅಲ್ಲಿಯೇ ಮಾಡಬೇಕೆಂದು ಮಾಡಿರುವ ಏರ್ಪಾಡುಗಳ ಬಗ್ಗೆ ಚುಟುಕಾಗಿ ತಿಳಿಸಿದಳು ಲಕ್ಷ್ಮಿ.
“ಭೇಷಾತು ಬಿಡು, ಒಳ್ಳೆಯ ಸಂಬಂಧವೇ ಸಿಕ್ಕಿದೆ. ನಿಶ್ಚಿತಾರ್ಥ ಕಾರ್ಯವೂ ಆಧುನಿಕತೆಯ ಮೆರುಗನ್ನು ಪಡೆದಿತ್ತು. ಈಗ ನೀನು ಹೇಳಿದ ವ್ಯವಸ್ಥೆ ಕೇಳಿದರೆ ನಿನ್ನ ಸೋಮಾರಿ ಗಂಡನಿಗೆ ಹೇಳಿ ಮಾಡಿಸಿದಂತಿದೆ” ಎಂದು ಮೊನಚಾಗಿ ಚುಚ್ಚಿದರು.
ಇದರಿಂದ ಭಟ್ಟರು, ಲಕ್ಷ್ಮಿ ಪೆಚ್ಚಾದುದನ್ನು ಕಂಡ ಆಕೆಯ ಗಂಡ, ಮಕ್ಕಳು ಕಣ್ಣು ಸನ್ನೆಯಲ್ಲೇ ಕ್ಷಮಿಸಿ ಎಂದು ಕೇಳಿಕೊಳ್ಳುತ್ತಾ ಇನ್ನೂ ಇದ್ದರೆ ಇಡೀ ವಾತಾವರಣವನ್ನೇ ಕೆಡಿಸಿಬಿಟ್ಟಾರೆಂದು ಹೆದರಿ ಬಲವಂತವಾಗಿ ಅವರನ್ನು ಹೊರಡಿಸಿಕೊಂಡು ಸ್ಥಳ ಖಾಲಿಮಾಡಿದರು.
ಮಿಕ್ಕವರು ಅಲ್ಲಿ ಹರಡಿದ್ದ ಸಾಮಾನು ಸರಂಜಾಮುಗಳನ್ನೆಲ್ಲ ಯಥಾಸ್ಥಾನಗಳಲ್ಲಿರಿಸಿ ರಾತ್ರಿಯವರೆಗೂ ಇದ್ದು ಊಟವನ್ನೂ ಮುಗಿಸಿ ಇನ್ನೇನಾದರೂ ಸಹಾಯ ಬೇಕಿದ್ದರೆ ಸಂಕೋಚವಿಲ್ಲದೆ ಕೇಳಿ ಎಂದು ಒಳ್ಳೆಯದಾಗಲೆಂದು ಬಾಯಿತುಂಬ ಹರಸಿ ತಮ್ಮತಮ್ಮ ಮನೆಗಳಿಗೆ ತೆರಳಿದರು.
ಬಂದವರೆಲ್ಲರೂ ಹಿಂದಿರುಗಿದ ಮೇಲೆ ಮನೆಯಲ್ಲೇ ಉಳಿಯಲು ಬಂದಿದ್ದ ಹಿರಿಯರಾದ ಅಜ್ಜ, ಅಜ್ಜಿ “ಲಕ್ಷ್ಮೀ ನಿನ್ನ ಗಂಡನ ಬಗ್ಗೆ ಅವರ ಹಿರಿಯ ಚಿಕ್ಕಮ್ಮ ಮಾತನಾಡಿದ್ದು ಸರಿಯಲ್ಲ. ಅಲ್ಲಾ ಮನೆಗೆ ಹಿರಿಯರು ನ್ಯಾಯವಾಗಿ ತಾವೇ ಮುಂದಾಗಿ ನಿಂತು ಎಲ್ಲ ಕಾರ್ಯವನ್ನೂ ನಡೆಸಿಕೊಡಬೇಕು ಅಂತಹುದರಲ್ಲಿ ಹೀಗಾ ಅನ್ನುವುದು” ಎಂದರು.
“ಅವರುಗಳ ಮಾತನ್ನು ಅಷ್ಟಕ್ಕೇ ತಡೆಯುತ್ತಾ ಬಿಡಿ ಅಜ್ಜಯ್ಯ ಅವರ ಸ್ವಭಾವವೇ ಹಾಗೆ. ಕೇಳಿದಾಕ್ಷಣ ಕೆಟ್ಟದೆನಿಸಿ ನೋವಾಗುತ್ತೆ. ಕೆಲವು ಸಾರಿ ಕೋಪವೂ ಬರುತ್ತದೆ. ‘ಬಡವಾ ನೀನು ಮಡಗಿದಂಗಿರು’ ಅಂತ ನಾವು ಸುಮ್ಮನಿದ್ದುಬಿಡ್ತೇವೆ. ಆಶೀರ್ವಾದ ಅಂತ ತಿಳಿದುಕೊಂಡರಾಯ್ತು. ಸದ್ಯ ಯಾವ ಅಡಚಣೆ ಬರದಂತೆ ಎಲ್ಲವೂ ಸುಸೂತ್ರವಾಗಿ ಮುಗಿಯಿತಲ್ಲ. ಬೆಳಗಿನಿಂದ ಓಡಾಡಿ, ಕುಳಿತು, ಎದ್ದು ಸಾಕಾಗಿದ್ದೀರಿ. ಮಲಗಿಕೊಳ್ಳಿ, ಮಕ್ಕಳೇ ನೀವೂ ಅಷ್ಟೇ” ಎಂದು ಹೇಳುತ್ತಾ ತಮ್ಮ ಕೊಠಡಿಗೆ ಹೋದಳು.
ಚಿಕ್ಕತಂಗಿಯರಿಬ್ಬರೂ ಆಗಲೇ ನಿದ್ರಾದೇವಿಯ ವಶವಾಗಿದ್ದರು. ಭಾಗ್ಯ ಹಾಸಿಗೆಯ ಮೇಲೆ ಕುಳಿತು ದಿಂಬನ್ನು ತೊಡೆಯಮೇಲಿಟ್ಟುಕೊಂಡು ಯಾವುದೋ ಲೋಕದಲ್ಲಿರುವಂತೆ ಕಂಡಳು. ಮುಖದಲ್ಲಿ ಮುಗುಳುನಗೆಯಿತ್ತು. ಆಹಾ ! ನನಗೆ ಮದುವೆ ಬೇಡ, ನಾನೇನೊ ಓದಿ ಕಡಿದುಕಟ್ಟೆ ಹಾಕ್ತೀನಿ ಅಂತ ಇದ್ದೆಯಲ್ಲಾ ಈಗ ಹೇಳು ಅಂತ ಛೇಡಿಸೋಣವೇ ಎಂದುಕೊಂಡಳು ಭಾವನಾ. ಬೇಡ, ಅದು ಮತ್ತೇನಾದರೂ ಅನರ್ಥಕ್ಕೆ ಕಾರಣವಾದೀತು ಎಂದುಕೊಂಡು “ಏನಕ್ಕಾ ಇನ್ನೂ ಮಲಗಿಲ್ಲವೇ?” ಎಂದು ಕೇಳಿದಳು.
“ಓ..ಭಾವನಾ, ಅಜ್ಜ, ಅಜ್ಜಿಗೆ ಮಲಗಲು ಅಣಿಮಾಡಿಕೊಡಲು ಹೋಗಿದ್ದೆಯಲ್ಲಾ, ನೀನು ಬರಲಿ ಎಂದು ಹಾಗೇ ಸುಮ್ಮನೆ ಕುಳಿತಿದ್ದೆ” ಎಂದಳು ಭಾಗ್ಯ.
“ಕುಳಿತಿದ್ದೆಯಾ ಅಥವಾ ನಿನ್ನ ರಾಜಕುಮಾರನ ಕನಸು ಕಾಣುತ್ತಿದ್ದೆಯೋ? ಹೋಗಲಿ ಬಿಡು, ಇವತ್ತಂತೂ ನೀನು ತುಂಬ ಚೆನ್ನಾಗಿ ಕಾಣಿಸುತ್ತಿದ್ದೆ. ರಾಮೂತಾತನ ಸೊಸೆ ರಜನಿಯಕ್ಕ ನಿನ್ನನ್ನು ತುಂಬ ಚೆನ್ನಾಗಿ ಸಿಂಗರಿಸಿದ್ದರು. ಉಡಿಸಿದ್ದ ಸೀರೆ, ತುಂಬ ಬೆಲೆಯದಲ್ಲದಿದ್ದರೂ ನೋಡಲು ತುಂಬ ಆಕರ್ಷಕವಾಗಿತ್ತು. ನಿನ್ನ ಎತ್ತರದ ನಿಲುವಿಗೆ, ಬಣ್ಣಕ್ಕೆ ಚೆನ್ನಾಗಿ ಒಪ್ಪಿತ್ತು. ಕೈತುಂಬ ಕೆಂಪು ಗಾಜಿನ ಬಳೆಗಳು ಮುಂದಕ್ಕೆ ಹಳೇ ನಮೂನೆಯ ಚಿನ್ನದ ಬಳೆ, ಕಿವಿಯಲ್ಲಿ ಕೆಂಪು ಮುತ್ತಿನ ಓಲೆ, ಝುಮುಕಿ, ಮಾಟಿ, ಕತ್ತಿಗೆಅದೇ ಕಾಂಬಿನೇಷನ್ನಿನ ಪದಕದ ಚೈನು, ಉದ್ದವಾದ ಕೂದಲನ್ನು ಒಪ್ಪವಾಗಿ ಬಾಚಿ ಹೆಣೆದಿದ್ದ ಜಡೆ, ಮುಡಿಸಿದ್ದ ಮಲ್ಲಿಗೆಮಾಲೆ, ನಿನ್ನ ಕೊರಳಿನ ಅಕ್ಕಪಕ್ಕ ಸ್ವಲ್ಪ ಇಳಿಬಿಟ್ಟು ಝುಮುಕಿಯ ಜೊತೆಗೆ ಸ್ಫರ್ಧೆಗಿಳಿದಂತಿತ್ತು. ಮುಖಕ್ಕೆ ಹದವಾಗಿ ಹಚ್ಚಿದ್ದ ಪೌಡರ್, ತೀಡಿದ ಹುಬ್ಬು, ಹಣೆಗಿಟ್ಟ ತಿಲಕ, ಅದರ ಕೆಳಗೆ ಸಣ್ಣಗಿನ ಗುಂಡಾದ ಕುಂಕುಮದ ಬೊಟ್ಟು. ನಿನ್ನ ವಿಶಾಲವಾದ ಕಣ್ಣುಗಳಿಗೆ ತೆಳುವಾಗಿ ಹಚ್ಚಿದ್ದ ಕಾಡಿಗೆ, ದೈವದತ್ತವಾಗಿ ಬಂದಿರುವ ಗಲ್ಲದ ಮೇಲಿನ ಕಪ್ಪುಚುಕ್ಕೆ, ಒಂದಕ್ಕೊಂದು ಮೀರಿಸುವಂತಿದ್ದವು. ಇನ್ನು ನನ್ನ ಭಾವನಾಗುವವರು ಇವತ್ತೇ ನಿನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿಬಿಡುತ್ತಾರೇನೋ ಎಂಬಂತೆ ಆಗಿಂದಾಗ್ಗೆ ಕದ್ದು ಓರೆಗಣ್ಣಿಂದ ನೋಡುತ್ತಿದ್ದ ರೀತಿ ಮನಮೋಹಕವಾಗಿತ್ತು. ರೇಷಿಮೆಯ ಜುಬ್ಬ, ರೇಷಿಮೆಯ ಪಂಚೆ. ಮೇಲೊಂದು ರೇಷಿಮೆಯ ಅಂಗವಸ್ತ್ರ, ಶಾಂತ ಮುಖಮುದ್ರೆ. ಹೊತ್ತು ಕುಳಿತಿದ್ದ ರೀತಿ..ವಾಹ್ !”
“ಏ..ಮಹಾರಾಯಿತಿ, ಕವಿಯಾಗುತ್ತಿದ್ದೀಯಾ ಹೇಗೆ, ‘ಉಟ್ಟರೆ ತೊಟ್ಟರೆ ಪುಟ್ಟಕ್ಕನೂ ಚಂದ’ ಅನ್ನೊ ಗಾದೆ ಕೇಳಿಲ್ಲವಾ, ನಿನ್ನನ್ನು ಹೀಗೇ ಬಿಟ್ಟರೆ ರಾತ್ರಿಯೆಲ್ಲಾ ವಟಗುಟ್ಟುತ್ತಲೇ ಇರುತ್ತೀಯಾ. ಹೊತ್ತಾಗಿದೆ ಮಲಗು.” ಎಂದು ತಂಗಿಯನ್ನು ಪ್ರೀತಿಯಿಂದ ಗದರಿಸಿದರೂ ಮನಸ್ಸಿನಲ್ಲಿ ಅವಳು ಹೇಳಿದ ಮಾತುಗಳು ಮುದ ತಂದಿದ್ದವು. ಅದೇ ಗುಂಗಿನಲ್ಲಿ ನಿದ್ರೆಗೆ ಜಾರಿದಳು ಭಾಗ್ಯ.
ಇತ್ತ ನಿಶ್ಚಿತಾರ್ಥ ಮುಗಿಸಿಕೊಂಡು ತಮ್ಮ ಕುಟುಂಬದವರೊಡನೆ ವ್ಯಾನಿನಲ್ಲಿ ಹೊರಟಿದ್ದರು ಜೋಯಿಸರು. ಅದರೊಳಗಿದ್ದವರೆಲ್ಲಾ ಆ ದಿನದ ಸಮಾರಂಭದ ಬಗ್ಗೆ ಮಾತನಾಡಬೇಕೆಂಬ ಹಂಬಲವಿದ್ದರೂ ಹೊರಡುವ ಮುನ್ನ ಜೋಯಿಸರು ಹೇಳಿದ್ದ ಮಾತುಗಳು ನೆನಪಿಗೆ ಬಂದು ಮೌನಕ್ಕೆ ಶರಣುಹೋಗಿದ್ದರು. ಏಕೆಂದರೆ “ನೋಡಿ ನಾವು ನಿಶ್ಚಿತಾರ್ಥಕ್ಕೆ ಹೋಗುವಾಗ ಮತ್ತು ಅಲ್ಲಿಂದ ಹಿಂದಕ್ಕೆ ಬರುವಾಗಲಾಗಲೀ ಹುಡುಗಿಯ ಬಗ್ಗೆ, ಅವರ ಮನೆಯವರ ಬಗ್ಗೆಯಾಗಲೀ ಯಾರೂ ಮಾತನಾಡಬೇಡಿ. ಕಾರಣವಿಷ್ಟೇ, ನನ್ನ ದೊಡ್ಡಪ್ಪ ಬರುತ್ತಿರುವುದರಿಂದ ಅವರಿಗೆ ಅಗಿಯಲು ಕವಳವನ್ನು ನಾವೇ ಒದಗಿಸಿ ಕೊಟ್ಟಂತಾಗುತ್ತದೆ. ಅವರನ್ನು ಕರೆಯದೇ ಇರಲೂ ಆಗದು. ನಮ್ಮ ಕಡೆ ಉಳಿದಿರುವ ಹಿರಿಯರೆಂದರೆ ಅವರೊಬ್ಬರೇ. ಅನ್ಯಥಾ ಭಾವಿಸಬೇಡಿ.”ಎಂದು ವಿನಂತಿಸಿಕೊಂಡಿದ್ದರು. ಅದು ಒಂದು ರೀತಿಯ ಎಚ್ಚರಿಕೆ ಇದ್ದ ಹಾಗಿತ್ತು.
ಸ್ವಲ್ಪ ದೂರ ಹೋಗುತ್ತಿದ್ದಂತೆ ಜೋಯಿಸರ ದೊಡ್ಡಪ್ಪನವರು “ವೆಂಕೂ, ಸೀತಾ ನಾನು ಹೀಗೆ ಹೇಳ್ತೀನಿ ಅಂತ ತಪ್ಪು ತಿಳಿಯಬೇಡಿ.” ಎಂದು ಪೀಠಿಕೆ ಹಾಕುತ್ತಾ ತಮ್ಮ ಮಾತಿಗಾರಂಭಿಸಿದರು. ಅವರಿಬ್ಬರೂ ಏನೆಂದು ಪ್ರಶ್ನಿಸದಿದ್ದರೂ ತಾವೇ “ಅಲ್ಲಾ ನಮ್ಮ ಆಚಾರ ವಿಚಾರಗಳಿಗೆಲ್ಲ ಆ ಹುಡುಗಿ ಹೊಂದಿಕೊಳ್ಳುತ್ತಾಳಾ ಅಂತ. ಕರೆದಾಗ ಬಂದು ಕುಳಿತುಕೊಂಡ ರೀತಿ, ಕೇಳಿದ್ದಕ್ಕೆಲ್ಲ ಉತ್ತರಿಸಿದ್ದು, ಆ ಕೇಶವಯ್ಯನೂ ಪೂಜೆ ಪುನಸ್ಕಾರಗಳನ್ನು ಶಾಸ್ತ್ರೋಕ್ತವಾಗಿ ಮಾಡಿದರೂ ಅದರಲ್ಲಿ ಸ್ವಲ್ಪ ಆಧುನಿಕತೆಯ ಲೇಪವಿತ್ತು. ಹುಡುಗ, ಹುಡುಗಿ ..ನಮ್ಮಲ್ಲಿ ಇದೆಲ್ಲಾ ಇದೆಯಾ? ಸ್ವಲ್ಪ ಅತಿ ಎನ್ನಿಸಲಿಲ್ಲವಾ? ಹುಡುಗಿಯಂತೂ ಸ್ವಲ್ಪ ಜೋರಿದ್ದಾಳೆ ಎನ್ನಿಸಿತು. ಸಂಭಾಳಿಸುವುದು ಕಷ್ಟ ಕಷ್ಟ. ಹೆಣ್ಣುಮಕ್ಕಳು ತಗ್ಗಿಬಗ್ಗಿ ನಡೆಯಬೇಕು. ಅಂಗ್ರೇಜಿ ಬೇರೆ ಕಲಿತಿದ್ದಾಳಂತೆ. ಇಷ್ಟೆಲ್ಲ ಶಾಸ್ತ್ರ ಸಂಪ್ರದಾಯದಲ್ಲಿ ಮುಳುಗಿರುವ ನೀನು ಸುಮ್ಮನಿದ್ದದ್ದು ನೋಡಿ ನನಗೆ ಅಚ್ಚರಿಯಾಯಿತು” ಎಂದರು.
ಅವರ ಮಾತಿಗೆ ಯಾರೂ ಉತ್ತರಿಸದಿದ್ದುದರಿಂದ ಬಾಯಿಗೆ ಬೀಗ ಜಡಿದವರಂತೆ ಬಿಮ್ಮನೆ ಕುಳಿತರು. ತನ್ನ ತಂದೆಯ ದೊಡ್ಡಪ್ಪ ನನಗೆ ಅಜ್ಜನಾಗಬೇಕಾದವರ ಮಾತುಗಳನ್ನು ಕೇಳಿದ ಶ್ರೀನಿವಾಸ ಈ ಹಿರಿಯರು ಯಾವಾಗಲೂ ಏನಾದರೊಂದು ಕೊಂಕು ಮಾತನಾಡುತ್ತಾರೆ. ‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಅಂದಹಾಗೆ ತಾವು ತೋರಿಸಿದ ಹುಡುಗಿಯರಲ್ಲಿ ಯಾರನ್ನೂ ನಾವು ಒಪ್ಪಲಿಲ್ಲವೆಂಬ ಅಸಮಾಧಾನ. ಸದ್ಯ ಅವು ತಪ್ಪಿದ್ದೇ ಒಳ್ಳೆಯದಾಯಿತು. ಇಲ್ಲವೆಂದರೆ ನಾನೇ ತೋರಿಸಿದ ಹೆಣ್ಣು, ಇವರ ಮಗನಿಗೆ ಕೊಡಲು ಶಿಫಾರಸ್ಸು ಮಾಡಿದ್ದೆನೆಂದು ಬಂಧುಬಳಗ, ಸ್ನೇಹಿತರಿಗೆಲ್ಲ ಟಾಂಟಾಂ ಹೊಡೆದು ಬಿಡುತ್ತಿದ್ದರು. ಏನೇ ಆದರೂ ಆ ಹುಡುಗಿ ಮೊದಲ ನೋಟಕ್ಕೇ ನನ್ನ ಮನಸ್ಸಿನಲ್ಲಿ ನೆಲೆಯೂರಿಬಿಟ್ಟಿದ್ದಾಳೆ. ಒಳ್ಳೆಯ ಜನ. ತಮ್ಮ ಶಕ್ತಿಮೀರಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಯಾವ ಮೀಡಿಯಮ್ಮಿನಲ್ಲಿ ಓದಿದರೇನು ಮನುಷ್ಯತ್ವವಿದ್ದರೆ ಸಾಕು. ‘ವಿದ್ಯಾ ದಧಾತಿ ವಿನಯಂ’ ಎನ್ನುವಂತೆ ಇದ್ದರೆ ಅಷ್ಟೇ ಸಾಕು. ನನಗೇನೋ ಹುಡುಗಿಗೆ ಅಹಂ ಇದ್ದಂತೆ ಕಾಣಿಸಲಿಲ್ಲ. ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆನ್ನಿಸುತ್ತದೆ. ಹುಡುಗಿಯ ತಾಯಿಯೇ ದಾಷ್ಟಿಕ ಮಹಿಳೆಯ ತರಹ ಕಾಣಿಸುತ್ತಾರೆ. ಅದು ಮಕ್ಕಳಿಗೂ ಬಂದಿರಬಹುದು. ಅದಕ್ಕೆ ನಾವು ಬೇರೊಂದೇ ಅರ್ಥಕಲ್ಪಿಸಲಾಗದು. ಏನಾದರಾಗಲೀ ಸರಳತೆಯನ್ನು ಮೈಗೂಡಿಸಿಕೊಂಡಿರುವ ಜನ. ನಿಶ್ಚಿತಾರ್ಥ ಕಾರ್ಯದಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಒಗ್ಗೂಡಿ ಸಹಕರಿಸಿಕೊಂಡು ಗೌಜುಗದ್ದಲವಿಲ್ಲದೆ ಕಾರ್ಯಕ್ರಮ ನಡೆಸಿಕೊಟ್ಟರು. ಹೆತ್ತವರಿಗೂ ಸಂತೋಷವಾಗಿದೆ. ನನಗದಷ್ಟು ಸಾಕು. ಎಂದು ಮನಸ್ಸನಲ್ಲೇ ಚಿಂತನೆ ಮಾಡುತ್ತಿದ್ದವನಿಗೆ ಮನೆ ಸಮೀಪಿಸಿದ್ದು ಅರಿವಾಗದ ರೀತಿಯಲ್ಲಿ ದಾರಿ ಸವೆದಿತ್ತು.
ವ್ಯಾನಿನಿಂದ ಎಲ್ಲರೂ ಜೋಯಿಸರ ಮನೆಯ ಮುಂದೆ ಇಳಿದರು. ಆದರೆ ಅವರ ದೊಡ್ಡಪ್ಪ ಇಳಿಯದೆ ಅಲ್ಲೇ ಕುಳಿತಿದ್ದುದನ್ನು ಕಂಡು ಜೋಯಿಸರು “ನಂಜುಂಡ ನಮ್ಮ ದೊಡ್ಡಪ್ಪನವರನ್ನು ಅವರ ಮನೆಗೆ ಮುಟ್ಟಿಸಿ ಬಾ. ಆ ನಂತರ ನಿನಗೆ ಬಾಡಿಗೆಯನ್ನು ಕೊಡುತ್ತೇನೆ” ಎಂದು ಹೇಳಿ ತಮ್ಮ ಪಾಡಿಗೆ ತಾವು ಮನೆಯೊಳಕ್ಕೆ ನಡೆದರು.
ಇದರಿಂದ ನಿರಾಸೆಗೊಂಡ ಜೋಯಿಸರ ದೊಡ್ಡಪ್ಪ “ಹುಂ ಈಗಿನವರಿಗೆ ಹಿರಿಯರ ಮಾತುಗಳು ಪಥ್ಯವಾಗೊಲ್ಲ ನಡೆ” ಎಂದರು. ನಂಜುಂಡನ ವಾಹನ ದೊಡ್ಡಪ್ಪನವರ ಮನೆಯ ಹಾದಿ ಹಿಡಿಯಿತು.
ಮದುವೆಯ ಆಮಂತ್ರಣ ಪತ್ರಿಕೆ ಸಿದ್ಧವಾಗುವಷ್ಟರಲ್ಲಿ ಭಟ್ಟರ ಮನೆಯು ಸುಣ್ಣಬಣ್ಣಗಳಿಂದ ಸಿಂಗಾರಗೊಂಡಿತು. ಯಾರ್‍ಯಾರಿಗೆ ಕೊಡಬೇಕಾದ ಜವಳಿಯನ್ನು ತಂದು ಅವುಗಳನ್ನು ಮಕ್ಕಳ ಸಹಾಯದಿಂದ ಪ್ರತ್ಯೇಕವಾಗಿ ಪ್ಯಾಕ್ ಮಾಡಿಸಿದ್ದಾಯಿತು. ಜೋಯಿಸರ ಮನೆಯಿಂದ ಎಷ್ಟು ಜನ ಬರಬಹುದು, ನಮ್ಮವರೂ ಸೇರಿ ಎಷ್ಟಾಗಬಹುದೆಂದು ಅಂದಾಜು ಮಾಡಿದ್ದಾಯಿತು. ಆಗಲೂ ಕೇಶವಯ್ಯನವರೇ ಜೋಯಿಸರನ್ನು ಭೇಟಿಮಾಡಿ ನಿಖರವಾದ ವಿವರಗಳನ್ನು ಕೇಳಿಕೊಂಡು ಬಂದು ಭಟ್ಟರಿಗೆ ತಿಳಿಸಿದರು. ಇದರಿಂದ ಸುಮಾರು ಎರಡೂ ಕಡೆಯಿಂದ ಸೇರಿ ಸುಮಾರು ನೂರೈತ್ತರಿಂದ ಇನ್ನೂರು ಜನರಾಗಬಹುದೆಂದು ಲೆಖ್ಖ ಸಿಕ್ಕಿತು. ಅದನ್ನು ಛತ್ರದವರಿಗೆ ತಿಳಿಸಿ ಯಾವುದೇ ಲೋಪವಾಗದಂತೆ ನಿಭಾಯಿಸಲು ಕೋರಿಕೊಂಡು ಮತ್ತಷ್ಟು ಹಣವನ್ನು ಮುಂಗಡವಾಗಿ ಕೊಟ್ಟು ಬಂದರು.
ಲಗ್ನಪತ್ರಿಕೆ ಬರುತ್ತಿದ್ದಂತೆ ಹತ್ತಿರವಿದ್ದವರನ್ನು ಮುದ್ದಾಂ ಹೋಗಿ ಕರೆಯುವುದು, ದೂರವಿರುವವರಿಗೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವುದು, ಅದರೊಟ್ಟಿಗೆ ತಮ್ಮ ವೈಯಕ್ತಿಕ ವಿನಯಪೂರ್ವಕ ಮನವಿಯನ್ನು ಲಗತ್ತಿಸುವುದು, ತಾವೇ ಬರಲಾಗದ್ದಕ್ಕೆ ಕಾರಣ ತಿಳಿಸಿ ಆಹ್ವಾನಿಸುವುದು. ಎಂದು ತೀರ್ಮಾನಿಸಿದರು.
ಹೀಗೇ ಒಂದುದಿನ ಸುಮಾರು ಹನ್ನೊಂದರ ಸಮಯದಲ್ಲಿ ಪತ್ರಿಕೆಗಳನ್ನು ಕಳುಹಿಸುವ ಸಿದ್ಧತೆಯಲ್ಲಿದ್ಧಾಗ ಮನೆಯ ಮುಂದೆ ವಾಹನವೊಂದು ನಿಂತ ಸದ್ದು ಕೇಳಿಸಿತು. ಅದನ್ನಾಲಿಸಿದ ಲಕ್ಷ್ಮಿ “ರೀ ಬಸವನ್ನೇನಾದರೂ ಬರಹೇಳಿದ್ದಿರಾ?” ಎಂದು ಕೇಳಿದರು.
“ಇಲ್ಲ ಲಕ್ಷ್ಮೀ, ಅವನೇನಿದ್ದರೂ ಐದರ ನಂತರ ಬರುತ್ತಾನೆ, ಏಕೆ?” ಎಂದರು ಭಟ್ಟರು.
“ಏನಿಲ್ಲ ಹೊರಗಡೆ ಗಾಡಿನಿಂತ ಸದ್ದಾಯಿತು. ಅದಕ್ಕೇ ಕೇಳಿದೆ” ಎಂದಳು.
ಅವರಿಬ್ಬರ ಮಾತುಕತೆ ನಡೆಯುತ್ತಿದ್ದಾಗಲೇ ಬಾಗಿಲನ್ನು ಬಡಿದ ಸದ್ದಾಯಿತು. ಯಾರಿರಬಹುದೆಂದು ಯೋಚಿಸಿದ ಭಟ್ಟರು ಅಂಗಡಿ ಸಾಮಾನುಗಳನ್ನು ಬಾಡಿಗೆಗೆ ಕೇಳುವವರ್‍ಯಾರಾದರೂ ಬಂದಿರಬಹುದು ಎಂದುಕೊಳ್ಳುತ್ತಾ ಎದ್ದು ಮುಂಭಾಗಿಲ ಹತ್ತಿರ ಹೋದರು. ಕಿಟಕಿಯಿಂದಲೇ ಹಣಿಕಿದರು .ಬಂದಿದ್ದ ವ್ಯಕ್ತಿ ಜೋಯಿಸರ ಶಿಷ್ಯ ನಂಜುಂಡ. “ಬಾಗಿಲು ತೆಗೆಯಲಿಲ್ಲವೇ?” ಎಂದು ಇನ್ನೊಂದು ಧ್ವನಿ ಕೇಳಿ ಆಕಡೆ ನೋಡಿದಾಗ ಕಾಣಿಸಿದ್ದು ನಾರಣಪ್ಪ. ಜಗುಲಿಕಟ್ಟೆಯ ಮೇಲಿಟ್ಟಿದ್ದ ಕೊಳದಪ್ಪಲೆಯ ನೀರಿನಿಂದ ಕಾಲ್ತೊಳೆದುಕೊಳ್ಳುತ್ತಿದ್ದಾರೆ. ಅರೇ ಇಬ್ಬರು ಬಂದಿದ್ದಾರೆ, ಅಥವಾ ಇನ್ಯಾರಾದರೂ ಅಂದುಕೊಳ್ಳುವಷ್ಟರಲ್ಲಿ “ಅದೇನು ಬಾಗಿಲು ಹತ್ತಿರ ನಿಂತು ಕಟಕಿಯಲ್ಲಿ ಬಗ್ಗಿ ನೋಡುತ್ತಾ ಏನು ಮಾಡುತ್ತಿದ್ದೀರಿ? ಬಂದವರ್‍ಯಾರು?” ಎಂದು ಕುಳಿತಲ್ಲಿಂದಲೇ ಕೇಳಿದಳು ಲಕ್ಷ್ಮಿ.
ಅವಳಿಗೆ ಬಳಿಗೆ ಬರುವಂತೆ ಸನ್ನೆ ಮಾಡುತ್ತಾ ಭಟ್ಟರು ತಡಮಾಡದೆ ಬಾಗಿಲನ್ನು ತೆರೆದರು. ಹೊರಗೆ ನಂಜುಂಡ ಬಟ್ಟೆಯ ಗಂಟೊಂದನ್ನು ಹಿಡಿದು ನಿಂತಿದ್ದ. ಅಷ್ಟರಲ್ಲಿ ಹೆಗಲ ಮೇಲಿನ ವಸ್ತ್ರದಿಂದ ಕೈ ಒರೆಸಿಕೊಳ್ಳುತ್ತಿದ್ದ ನಾರಣಪ್ಪನೂ ಬಂದರು.
“ಬನ್ನಿ ಬನ್ನಿ ಇದೇನು ಇದ್ದಕ್ಕಿದ್ದಂತೆ ಗಂಟನ್ನು ಹೊತ್ತು ಬಂದಿದ್ದೀರಿ? ಮತ್ಯಾರಾದರೂ ಬಂದಿದ್ದಾರಾ?” ಎಂದು ವಿಚಾರಿಸಿದಳು ಲಕ್ಷ್ಮಿ.
“ಇಲ್ಲಮ್ಮಾ ನಾನೇ ಬಂದಿರುವುದು. ಎನ್ನುತ್ತಾ ನಂಜುಂಡನ ಕೈಯಲ್ಲಿದ್ದ ಗಂಟನ್ನು ತನ್ನ ಕೈಯಿಗೆ ತೆಗೆದುಕೊಂಡು ಅವನಿಗೆ ಸ್ವಲ್ಪ ಹೊತ್ತು ಕಾರಿನಲ್ಲೆ ಕುಳಿತಿರಿ ನಾನು ಕರೆಯುತ್ತೇನೆಂದು ಹೇಳಿ ಅವನನ್ನು ಕಳುಹಿಸಿ ತಾವು ಒಳಕ್ಕೆ ಬರಬಹುದೇ ಎಂದು ಕೇಳಿದರು ನಾರಣಪ್ಪ.
“ಅಯ್ಯೋ ನಿಮ್ಮನ್ನು ಅನಿರೀಕ್ಷಿತವಾಗಿ ನೋಡಿ ನಮಗೆ ಆಶ್ಚರ್ಯವಾಗಿ ಏನು ಮಾಡಬೇಕೆಂದು ತೋಚಲಿಲ್ಲ.. ಕ್ಷಮಿಸಿ ದಯವಿಟ್ಟು ಬನ್ನಿ ಎಂದು ಅವರನ್ನು ಮನೆಯೊಳಕ್ಕೆ ಸ್ವಾಗತಿಸಿದರು. ಭಟ್ಟರು ದಂಪತಿಗಳು ಪಡಸಾಲೆ ದಾಟಿ ನಡುಮನೆಗೆ ಕರೆತಂದರು. ಅಲ್ಲಿ ಹಾಸಿದ್ದ ಮಂದಲಿಗೆಯ ಮೇಲೆ ತಾವು ತಂದಿದ್ದ ಗಂಟನ್ನು ಇಟ್ಟು ಕುಳಿತುಕೊಂಡರು ನಾರಣಪ್ಪ. ಜೇಬಿನಿಂದ ಒಂದು ಪತ್ರವನ್ನು ತೆಗೆದು “ಭಟ್ಟರೇ, ಲಕ್ಷ್ಮಮ್ಮನವರೇ ತಗೊಳ್ಳಿ ಇದನ್ನು ಸೀತಮ್ಮನವರು ನಿಮಗೆ ಕೊಡಲು ಹೇಳಿದರು. ಅದನ್ನು ಓದಿ ನಿಮಗೆಲ್ಲ ಅರ್ಥವಾಗುತ್ತದೆ” ಎಂದು ಅವರ ಕೈಗೆ ಕೊಟ್ಟರು.
ಪತ್ರದಲ್ಲಿ “ಲಕ್ಷ್ಮಿಯವರಿಗೆ, ನಾವು ನಮಗೆ ಗೊತ್ತಿರುವ ಅಂಗಡಿಯಿಂದ ಕೆಲವು ಸೀರೆಗಳನ್ನು ಆರಿಸಿ ಕಳುಹಿಸಿದ್ದೇವೆ. ಅವುಗಳಲ್ಲಿ ಭಾಗ್ಯಳಿಗೆ ಯಾವ್ಯಾವುದು ಇಷ್ಟವಾಗುತ್ತದೆಯೋ ಅವುಗಳನ್ನು ಒಂದು ಗಂಟಿನಲ್ಲಿ ಕಟ್ಟಿ ನಾರಣಪ್ಪನವರಿಗೆ ಕೊಟ್ಟು ಕಳುಹಿಸಿ. ಉಳಿದವುಗಳನ್ನು ಬೇರೆ ಗಂಟಿನಲ್ಲಿರಲಿ. ನಮ್ಮ ಕಡೆಯಿಂದ ವಧುವಿಗೆ ಕೊಡುವ ಐದು ಸೀರೆಗಳಲ್ಲಿ ನಾಲ್ಕು ಭಾಗ್ಯಳಿಗೆ ಒಂದು ನಿಮಗಾಗಿ. ಹೀಗೇಕೆ ಕೇಳಿದೆನೆಂದು ತಪ್ಪಾಗಿ ಭಾವಿಸಬೇಡಿ. ನಾನು ಮದುವೆಯಾಗುವಾಗ ನನ್ನ ಗಂಡನ ಮನೆಯವರು ಆಯ್ಕೆಮಾಡಿ ತಾವೇ ತಂದಿದ್ದ ಸೀರೆಗಳನ್ನು ಹೊರಲಾರದಂತೆ ಹೊತ್ತು ಉಟ್ಟು ಬವಣೆ ಪಟ್ಟಿದ್ದೇನೆ. ಅವುಗಳನ್ನು ಈಗ ಬರಿಯ ಪೂಜಾಸಮಯದಲ್ಲಿ ಮಾತ್ರ ಉಡಲು ಸೀಮಿತವಾಗಿವೆ. ಎಲ್ಲವೂ ಹದಿನಾರು ಮೊಳದವು. ಹಾಗಾಗಬಾರದೆಂದು ಯೋಚಿಸಿ ಜೋಯಿಸರ ಜೊತೆ ಪ್ರಸ್ತಾಪ ಮಾಡಿದ್ದೆ. ಅದಕ್ಕವರು ಶಾಸ್ತ್ರಕ್ಕೋಸ್ಕರ ಒಂದು ಹದಿನಾರು ಮೊಳದ್ದನ್ನು ಆಯ್ಕೆ ಮಾಡಿ ಮಿಕ್ಕವೆಲ್ಲ ಆರುಗಜವಿದ್ದರೆ ಸಾಕು ಎಂದರು. ಅವುಗಳ ಆಯ್ಕೆಯನ್ನು ಭಾಗ್ಯಳಿಗೇ ವಹಿಸಿಬಿಡು, ಉಡುವವಳು ಅವಳೇ ತಾನೇ. ಅಂತೂ ಉಪಯೊಗವಾಗಬೇಕು ಎಂದರು. ನಾನೇ ನಿಮ್ಮ ಮನೆಗೆ ಬರುವುದಾಗಲೀ, ಭಾಗ್ಯಳನ್ನೇ ಪೇಟೆಗೆ ಕರೆದುಕೊಂಡು ಹೋಗುವುದಾಗಲೀ ಆಗದ ಕೆಲಸ. ಅದಕ್ಕೇ ಈ ಏರ್ಪಾಡು ಮಾಡಿದೆವು. ಅನ್ಯಥಾ ಭಾವಿಸಬೇಡಿ. ಈ ವಿಚಾರವನ್ನು ಬೆರೆ ಯಾರಲ್ಲೂ ಹಂಚಿಕೊಳ್ಳಲು ಹೋಗಬೇಡಿ. ನಮ್ಮಲ್ಲಿನ ಸೂಕ್ಷ್ಮತೆಗಳು ನಿಮಗೆ ಗೊತ್ತಲ್ಲ. ವಂದನೆಗಳು” ಎಂದು ಮುಕ್ತಾಯ ಮಾಡಿದ್ದರು.
ಪತ್ರವನ್ನೋದಿದ ಲಕ್ಷ್ಮಿ ಮನದಲ್ಲಿ ಅಬ್ಬಾ ! ನನಗೆ ಬುದ್ಧಿ ತಿಳಿದಾಗಿನಿಂದಲಾಗಲೀ, ನನ್ನ ಮದುವೆಯ ಸಮಯದಲ್ಲಾಗಲೀ. ನಮ್ಮ ನೆಂಟರಿಷ್ಟರ ಮದುವೆಯಲ್ಲಾಗಲೀ ಈ ರೀತಿ ಇಲ್ಲವೇ ಇಲ್ಲ. ಇದೂ ಒಂದು ಅಪರೂಪದ ಆಹ್ವಾನ ಎಂದು ಹಿಡಿಸಲಾರದಷ್ಟು ಹಿಗ್ಗು ಮೂಡಿತು.
“ಹಾ ! ದಂಪತಿಗಳಿಗೆ ಅರ್ಥವಾಯಿತೆಂದು ಕಾಣುತ್ತದೆ. ಮಗಳು ಬಾಗ್ಯಮ್ಮನನ್ನು ಕರೆಯಿರಿ” ಎಂದರು ನಾರಣಪ್ಪ. ಅವರ ಮಾತು ಮುಗಿಯುತ್ತಿದ್ದಂತೆ ಲಕ್ಷ್ಮಿ ಎದ್ದು ಮಕ್ಕಳ ರೂಮಿನ ಕಡೆ ಹೋದಳು., ಹೊರಗಿನ ರೂಮಿನಲ್ಲಿ ಬಟ್ಟೆ ಹೊಲಿಯುವ ಕೆಲಸದಲ್ಲಿ ಭಾಗ್ಯ ನಿರತಳಾಗಿದ್ದರೆ, ಮಿಕ್ಕವರು ಹೊಲಿದ ರವಿಕೆ, ಚಿಕ್ಕ ಸೋದರಿಯರ ಲಂಗಕ್ಕೆ ಹುಕ್ಸ್, ಗುಂಡಿ ಹಾಕುವ ಕೆಲಸದಲ್ಲಿ ನಿರತರಾಗಿದ್ದರು ಒಳಬಂದ ಲಕ್ಷ್ಮಿ ಮೆಲುದನಿಯಲ್ಲಿ ಬಂದಿರುವ ಅತಿಥಿಗಳ ಬಗ್ಗೆ ವಿಷಯ ತಿಳಿಸಿ ಹಿರಯವರಾದ ಭಾಗ್ಯ, ಭಾವನಾರನ್ನು ಕರೆದುಕೊಂಡು ಚಿಕ್ಕವರಿಬ್ಬರಿಗೂ ಅಲ್ಲೇ ಇರಲು ಹೇಳಿ ಗಲಾಟೆ ಮಾಡದಿರಲು ತಿಳಿಸಿ ನಡುಮನೆಗೆ ಬಂದರು. ಜೋಡಿಯಾಗಿ ಬಂದು ನಿಂತ ಸಹೋದರಿಯರನ್ನು ನೋಡಿದ ನಾರಣಪ್ಪ “ಓಹೋ ! ಈ ಮನೆಯ ಹೆಣ್ಣುಮಕ್ಕಳನ್ನು ಬ್ರಹ್ಮ ಪುರುಸೊತ್ತಾಗಿ ತಿದ್ದಿ ತೀಡಿ ಕಳುಹಿಸಿದ್ದಾನೆ” ಎಂದುಕೊಂಡರು.
“ಬನ್ನಿ ಭಾಗ್ಯಮ್ಮ, ಅಮ್ಮ ಕಳುಹಿಸಿದ್ದಾರೆ ಎಂದು ಚಿಕ್ಕ ಗಂಟನ್ನು ಬಿಚ್ಚಿದರು. ಅದರೊಳಗೆ ಇದ್ದ ಚೀಲವೊಂದನ್ನು ಭಾಗ್ಯಳ ಕೈಗೆ ಕೊಡುತ್ತಾ ಇದು ಸಿಹಿ, ಅದರೊಳಗೆ ಸ್ವಲ್ಪ ಖಾರಾನೂ ಇದೆ. ನಾನೇ ಮಾಡಿದ್ದು ಮಕ್ಕಳಿರುವ ಮನೆಗೆ ಬರಿಕೈಯಲ್ಲಿ ಹೋಗಬಾರದು ಏನಾದರೂ ಮಾಡಿ ಎಂದರು. ಅರ್ಜೆಂಟಿಗೆ ರವೆಉಂಡೆ, ಅವಲಕ್ಕಿ ಚೂಡಾ ಮಾಡಿ ತಂದಿದ್ದೇನೆ. ಇದನ್ನು ಪಕ್ಕಕ್ಕಿಡಿ. ಈಗ ನೀವು ನೋಡಿ ಆರಿಸಬೇಕಾದದ್ದು ಇವು.” ಎಂದು ಒಂದೊಂದೇ ಸೀರೆಗಳನ್ನು ಮಂದಲಿಗೆಯ ಮೇಲೆ ಇರಿಸಿದರು.
ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಹಾಗೇ ಅವುಗಳು ಹೆಚ್ಚಾದ ಬೆಲೆಯುಳ್ಳವು ಎಂದು ಬಾಗ್ಯಳಿಗೆ ಮನವರಿಕೆಯಾಯಿತು. ಏಕೆಂದರೆ ಎರಡೇ ದಿವಸಗಳ ಹಿಂದೆ ತಂದೆತಾಯಿಗಳೊಡನೆ ತನ್ನ ಮದುವೆಗೆ ಸೀರೆಗಳನ್ನು ಆಯ್ಕೆ ಮಾಡುವ ಸಲುವಾಗಿ ಹೋದಾಗ ಇಂಥಹ ಸೀರೆಗಳನ್ನು ನೋಡಿದ್ದಳು. ಹೆತ್ತವರಿಗೆ ಹೆಚ್ಚು ಹೊರೆಯಾಗದಂತೆ ಅವರ ಬಜೆಟ್ ಎಷ್ಟೆಂದು ಕೇಳಿ ಅದನ್ನು ಮೀರದಂತೆ ಆಕೆ ಖರೀದಿಸಿದ್ದಳು. ಈಗ ತಂಗಿ, ತಾಯಿಯ ಸಹಾಯದೊಂದಿಗೆ ಆಕೆಗೆ ನಾಲ್ಕು, ತಾಯಿಗೆ ಒಂದು ಸೀರೆಗಳನ್ನು ಆಯ್ಕೆ ಮಾಡಿದಳು. ಅವುಗಳಲ್ಲಿ ಒಂದು ಮಾತ್ರ ಹನ್ನೆರಡು ಗಜದ್ದಾಗಿತ್ತು. ನಾರಣಪ್ಪ ಭಾಗ್ಯ ಆರಿಸಿದ ಸೀರೆಗಳನ್ನು ಪ್ರತ್ಯೇಕವಾಗಿಟ್ಟು ಗಂಟುಕಟ್ಟಿದರು.
ಲಕ್ಷ್ಮಿಯು “ತಾವು ಪಾನಕ, ಕಾಫಿ, ಟೀ ಏನನ್ನು ತೊಗೋತೀರಾ?” ಎಂದು ಕೇಳಿದಳು. “ಕಷಾಯವೂ ಇದೆ” ಎಂದು ಸೇರಿಸಿದಳು. “ನನಗೆ ಅವುಗಳ ಅಭ್ಯಾಸವೇ ಇಲ್ಲ. ಕಷಾಯವೂ ದಿನಕ್ಕೊಂದೇ ಸಾರಿ. ತಪ್ಪು ತಿಳಿಯಬೇಡಿ. ನಾನಿನ್ನು ಬರಲೇ?” ಎಂದು ಹೊರಟರು. ಭಟ್ಟರು ಭಾವನಾಳಿಂದ ಒಂದೆರಡು ರಸಬಾಳೆ ಹಣ್ಣುಗಳನ್ನು ತರಿಸಿ “ನಾರಣಪ್ಪನೋರೇ ಹಣ್ಣನ್ನು ತೆಗೆದುಕೊಳ್ಳಬಹುದಲ್ಲಾ” ಎಂದು ಒತ್ತಾಯಿಸಿದರು. ನಾರಣಪ್ಪನೂ ಹೆಚ್ಚು ಉಪಚಾರ ಹೇಳಿಸಿಕೊಳ್ಳದೇ ಹಣ್ಣನ್ನು ತಿಂದು ಹಿತ್ತಲಕಡೆಯಲ್ಲಿ ತಟ್ಟೆಯನ್ನಿಟ್ಟು ಕೈತೊಳೆದು ಬಂದರು. ಅಷ್ಟರಲ್ಲಿ ನಂಜುಂಡ ಬಂದ ಹಾಗಾಯಿತು. “ನಾರಣಪ್ಪಾ ಆಯಿತೇ ಹೊರಡೋಣವೇ” ಎಂದು ಹೊರ ಬಾಗಿನಿಂದ ಕರೆದನು. ಭಾವನಾ ಅವನನ್ನೂ ಒಳಕ್ಕೆ ಕರೆದಳು. “ಇಲ್ಲಮ್ಮಾ ನನಗೆ ಬೇರೆ ಕೆಲಸವಿದೆ ನಾರಣಪ್ಪನವರ ಕೆಲಸವಾಗಿದ್ದರೆ ಅವರನ್ನು ಕಳುಹಿಸಿ. ಇಲ್ಲವೇ ತಡವಾಗುವುದಾದರೆ ಹೊರಗೆ ಹೋಗಿ ಬರುತ್ತೇನೆ” ಎಂದು ಕೇಳಿದನು. ಅದನ್ನು ಕೇಳಿಸಿಕೊಂಡ ಭಟ್ಟರು ಬಟ್ಟೆಯ ಗಂಟನ್ನು ಕೈಯಲ್ಲಿ ಹಿಡಿದು ತಡವಾಗಿದ್ದರೆ ಕ್ಷಮಿಸಿ” ಎಂದು ಗಂಟನ್ನು ಅವರ ಕೈಗೆ ವರ್ಗಾಯಿಸಿದರು. ಮತ್ತೊಮ್ಮೆ ಎಲ್ಲರಿಗೂ ಬರುತ್ತೇನೆಂದು ಹೇಳಿ ನಾರಣಪ್ಪ ನಂಜುಂಡನೊಡಗೂಡಿ ಹೊರಟರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35308
–ಬಿ.ಆರ್.ನಾಗರತ್ನ, ಮೈಸೂರು
ಬಹಳ ಚಂದ
ಪ್ರತಿ ಕ್ರಿಯೆಗೆ ಅನಂತ ಧನ್ಯವಾದಗಳು ಮೇಡಂ
ಕಥೆ ಓದಲು ಬಹಳ ಆಪ್ತವೆನಿಸುತ್ತಿದೆ. ಜರತಾರಿ ಸೀರೆಗಳನ್ನು ನೋಡಿ ಮದುವೆ ಮನೆಗೇ ಬಂದಂತಾಯ್ತು!
ಸಾಂಗೋಪಾಂಗವಾಗಿ ನಿಶ್ಚಿತಾರ್ಥವನ್ನು ಮುಗಿಸಿ ಮದುವೆಯ ತಯ್ಯಾರಿಗಳು ಶುರುವಾದದ್ದರ ವರ್ಣನೆ, ನಾವುಗಳೂ ಸಮಾರಂಭಕ್ಕೆ ಹೋಗಿ ಬಂದಂಥಹ ಭಾವವನ್ನು ಮನದಲ್ಲಿ ಮೂಡುವಂತೆ ಮಾಡಿತು. ನೈಜತೆಯ ನಿರೂಪಣೆಗಾಗಿ ಅಭಿನಂದನೆಗಳು ನಿಮಗೆ.
ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಾ ಮೇಡಂ.ನಿಮ್ಮ ಗಳ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಚೇತನ.