ಬೇಸಗೆ ರಜೆಯ ಸುರಂಗಯಾನ

Share Button

ಶಾಲಾ ಕಾಲೇಜುಗಳಿಗೆ ರಜಾಕಾಲ   ಶುರುವಾಗಿದೆ.  ನಗರಗಳಲ್ಲಿ ಅಲ್ಲಲ್ಲಿ ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ ಇರುವ ಮೈದಾನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಆಡುವ ಮಕ್ಕಳ ಕಲರವ ಕೇಳಲು, ನೋಡಲು ಹಿತವಾಗಿದೆ. ಮೈದಾನ  ಇಲ್ಲದ ಕೆಲವೆಡೆ ಮಕ್ಕಳು ಬೀದಿಯಲ್ಲಿಯೇ ಕ್ರಿಕೆಟ್ ಆಡುವರು. ಕ್ರಿಕೆಟ್  ಬಾಲ್ ಪಕ್ಕದ ಮನೆಯವರ ಮನೆಯವರ ಕಿಟಿಕಿ  ಗಾಜನ್ನು ಒಡೆಯುವುದು,  ಹಿಂದಿನ ಮನೆಯ ತಾರಸಿಯ ಮೇಲೆ ಬಿದ್ದ ಬಾಲ್ ಅನ್ನು ಪದೆಡುಕೊಳ್ಳಲು ಅನುಮತಿ ಬೇಡುವುದು, ರಸ್ತೆಯಲ್ಲಿ ‘ವಿಕೆಟ್ ರೂಪಿ’ ಯಾಗಿ ಇರಿಸಲಾದ ಕಲ್ಲುಗಳಿಂದಾಗಿ ಕಾರು ಚಲಾಯಿಸುವವರಿಗೆ ಕಿರಿಕಿರಿಯಾಗಿ ಅವರು ಹಾರ್ನ್ ಮೊಳಗಿಸುವುದು…ಹೀಗೆ ವಿವಿಧ ವಿಘ್ನಗಳ ನಡುವೆಯೂ ಬಿಸಿಲಿನಲ್ಲಿ ಸ್ವಚ್ಚಂದವಾಗಿ ಆಡುವ ಮಕ್ಕಳು ಒಂದೆಡೆಯಾದರೆ, ಮನೆಯವರ ಎಚ್ಚರಿಕೆಯಿಂದಲೋ, ತನ್ನ ಆಯ್ಕೆಯಾಗಿಯೋ  ಕಂಪ್ಯೂಟರ್ , ಮೊಬೈಲ್ ಫೋನ್ ಗಳ ಒಡನಾಟದಲ್ಲಿರುವವರು ಇನ್ನು ಕೆಲವರು. ಇನ್ನೂ ಚಿಕ್ಕ ವಯಸ್ಸಿನ ಮಕ್ಕಳು ತಮ್ಮ ಮನೆ ಸುತ್ತುಮುತ್ತಲು ಓರಗೆಯ ಸ್ನೇಹಿತರೊಂದಿಗೆ ದುಡುದುಡು ಓಡುತ್ತಾ ಐಸ್-ಪೈಸ್ , ಜೂಟಾಟ, ಕಂಪ್ಯೂಟರ್ ಗೇಮ್ಸ್ ಇತ್ಯಾದಿ ಮನೆಯ ಒಳಗೂ ಹೊರಗೂ ಆಡುತ್ತಿದ್ದಾರೆ.  ಸಂಗೀತ, ನೃತ್ಯ , ಅಬಾಕಸ್, ಡ್ರಾಯಿಂಗ್ ಇತ್ಯಾದಿ ಕಲಿಯಲು ಹೊರಡುವವರು ಕೆಲವರಾದರೆ,  ಇಷ್ಟ ಇದ್ದರೂ, ಇಲ್ಲದಿದ್ದರೂ ಪೋಷಕರು ಸೇರಿಸಿದ ಬೇಸಗೆ ಶಿಬಿರಕ್ಕೆ ಹಾಜರಾಗುವ ಅನಿವಾರ್ಯತೆ ಇನ್ನು ಕೆಲವರದು.

ಇವೆಲ್ಲಾ ಅನುಕೂಲತೆಯುಳ್ಳ ಇಂದಿನ ನಗರವಾಸಿ ಮಕ್ಕಳಿಗೆ ಅನ್ವಯ. 1980 ರ  ಆಸುಪಾಸಿನಲ್ಲಿ, ಕೇರಳದ ಕಾಸರಗೋಡು ಜಿಲ್ಲೆಯ  ಪುಟ್ಟಹಳ್ಳಿಯಲ್ಲಿ  ಶಾಲಾ ವಿದ್ಯಾರ್ಥಿಗಳಾಗಿದ್ದ ನಮಗೆ   ಬೇಸಗೆ ಶಿಬಿರದ ಕಲ್ಪನೆಯೂ ಇದ್ದಿರಲಿಲ್ಲ. ರಜಾದಿನಗಳಲ್ಲಿ ಬರೆಯಲೆಂದೇ ಕೊಟ್ಟಿರುವ ಕಾಪಿ ಬರೆಯುವ ಕೆಲಸಗಳನ್ನು ಮುಗಿಸುತ್ತಿದ್ದೆವು.   ದೊಡ್ಡವರೊಂದಿಗೆ ಎಡತಾಕುತ್ತಾ , ಅವರು ಮಾಡುತ್ತಿದ್ದ  ಹಪ್ಪಳ ಸಂಡಿಗೆ ತಯಾರಿಯಂತಹ  ಕೆಲಸಗಳಲ್ಲಿ   ನಮಗೆ ವಹಿಸಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಖುಷಿಯಿರುತ್ತಿತ್ತು. ಆಮೇಲೆ ಗೇರುಬೀಜ, ನೇರಳೆಹಣ್ಣು, ರೆಂಜೆಹೂವು, ಕೊಡಸಿಗೆ ಹೂವು  ಇತ್ಯಾದಿಗಳನ್ನು ಹುಡುಕುವ ನೆಪದಲ್ಲಿ  ಗುಡ್ಡಗಳಲ್ಲಿ ಸುತ್ತಾಡುವುದು,  ಮರವೇರಿ ಕುಳಿತುಕೊಳ್ಳುವುದು, ಓರಗೆಯವರೊಂದಿಗೆ ಚೆನ್ನೆಮಣೆ, ಕುಂಟೇಬಿಲ್ಲೆ ಆಡುವುದು, ಹಬ್ಬ, ದೇವಸ್ಥಾನ, ಸಮಾರಂಭಗಳಿಗೆ ಹೋಗುವುದು,  ನಮಗಿಂತ ಒಂದು ವರ್ಷ ಮೇಲಿನ ಕ್ಲಾಸಿನಲ್ಲಿರುವವರ ಪುಸ್ತಕಗಳನ್ನು ಕೇಳಿ ಪಡೆದು, ಹಳೆಯ ಕ್ಯಾಲೆಂಡರ್ ಹಾಳೆಯ  ಬೈಂಡ್ ಮಾಡಿ ಇಡುವುದು, ಅಪರೂಪಕ್ಕೆ ಅಡಿಕೆ ಹೆಕ್ಕುವುದು……..ಹೀಗೆ ಯಾವುದೇ ನಿಶ್ಚಿತ ರೂಪುರೇಖೆಗಳಿಲ್ಲದ ತರಾವರಿ ಕೆಲಸಗಳಲ್ಲಿ ಸಣ್ಣಪುಟ್ಟ ಪರಿಣತಿಯನ್ನು ನಮಗರಿವಿಲ್ಲದೆಯೇ  ಪಡೆಯುತ್ತಿದ್ದೆವು. ಹೀಗೆಲ್ಲಾ ಕಾಲಕ್ಷೇಪ ಆಗುತ್ತಿದ್ದಂತೆ ಎರಡು ತಿಂಗಳ ರಜಾ ಕಾಲ ಮುಗಿದೇ ಹೋಗುತ್ತಿತ್ತು.  ಇವೆಲ್ಲದರೆ ಜೊತೆಗೆ ನನಗೆ ಮತ್ತು ನನ್ನ ಅಣ್ಣನಿಗೆ ವಿಶೇಷವಾಗಿ ಭೂಗರ್ಭದಲ್ಲಿರುವ ಸುರಂಗಯಾನವೂ ಲಭಿಸುತ್ತಿತ್ತು. ಅದರ ಹಿನ್ನೆಲೆ ಮತ್ತು ಅನುಭವಗಳು ಬಲು ರೋಚಕ.

ಆ ದಿನಗಳಲ್ಲಿ ಕೇರಳದ ಹಳ್ಳಿಗಳಲ್ಲಿ, ಮನೆ ಹಾಗೂ ಕೃಷಿಯ ನೀರಿನ ಅಗತ್ಯಗಳಿಗಾಗಿ  ಬಾವಿ, ನದಿ ಅಥವಾ ಅಡ್ಡಸುರಂಗಗಳನ್ನು ಅವಲಂಬಿಸುತ್ತಿದ್ದರು. ಆಗಲೇ ಆಲ್ಲಲ್ಲಿ   ಬೋರ್ ವೆಲ್ ಕೊರೆಯುವ ಪದ್ಧತಿ ಆರಂಭವಾಗಿತ್ತಾದರೂ, ನಮ್ಮ ಅಜ್ಜನಮನೆ ಇದ್ದ ಹಳ್ಳಿಯಲ್ಲಿ ಇನ್ನೂ ಬೋರ್ ವೆಲ್  ಬಂದಿರಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ  ಬೆಟ್ಟದ ಬುಡದಲ್ಲಿ   ಅಡ್ಡ ಸುರಂಗವಿತ್ತು.  ಮುತ್ತಾತ ಕೊರೆಸಿದ ಸುಮಾರು 500  ಮೀಟರ್ ಉದ್ದ ಇದ್ದಿರಬಹುದಾದ ಆ ಸುರಂಗದಲ್ಲಿ ವರ್ಷದ ಎಲ್ಲಾ ಋತುಗಳಲ್ಲೂ ಸಿಹಿ ನೀರಿನ ಒರತೆ ಲಭ್ಯವಿತ್ತು. ಸುರಂಗದ ಆರಂಭದಲ್ಲಿ ಒಂದೆರಡು ಕೊಡ ನೀರು ಸಂಗ್ರಹವಾಗುವಷ್ಟು ದೊಡ್ಡ ಹೊಂಡವಿತ್ತು.  ಅಡಕೆ ಮರಗಳನ್ನು ಉದ್ದಕ್ಕೆ ಸೀಳಿ, ಅರ್ಧಚಂದ್ರಾಕಾರದ ಕೊಳವೆಯಂತೆ  ಮಾಡಿ ಅವುಗಳನ್ನು ಉದ್ದಕ್ಕೂ ಜೋಡಿಸಿಟ್ಟ ಅಪ್ಪಟ ದೇಸಿ ವ್ಯವಸ್ಥೆಯಿತ್ತು.   ಹೀಗೆ ಕಾಡಿನ ಸುರಂಗದಿಂದ ಹರಿದುಬರುತ್ತಿದ್ದ ನಿಸರ್ಗದತ್ತ ಸಿಹಿನೀರು , ತೆರೆದ ಅಡಿಕೆ ಮರದ ದಂಬೆಯ ಮೂಲಕ ಹರಿದು ಬಂದು ಮನೆಯಂಗಳದಲ್ಲಿ ಅಖಂಡ  ಜಲಧಾರೆ ಸೃಷ್ಟಿಸುತ್ತಿತ್ತು.   ಇದಕ್ಕೆ ‘ಅಬ್ಬಿ’ ಎಂಬ ಹೆಸರಿತ್ತು. ಈಗಿನಂತೆ ಪೈಪ್, ನಲ್ಲಿ, ಸಂಸ್ಕರಿಸಿದ ಬಾಟಲಿ ನೀರು ಇತ್ಯಾದಿಗಳ ಕಲ್ಪನೆಯೇ ಇಲ್ಲದಿದ್ದ ಆ ಕಾಲದಲ್ಲಿ, ಅಬ್ಬಿ ನೀರಿಗೆ ಕೈಯೊಡ್ಡಿ ಕುಡಿಯುತ್ತಿದ್ದರೂ, ತಲೆ ಮೈ ಒದ್ದೆ ಮಾಡಿಕೊಂಡು ಆಟವಾಡುತ್ತಿದ್ದರೂ ಅದರಿಂದಾಗಿ ಅಸೌಖ್ಯತೆ  ಬಂದ ನೆನಪಿಲ್ಲ.

ಮಳೆಗಾಲದಲ್ಲಿ ಅಂತೂ ಸುರಂಗದ ಪಕ್ಕ ಭೋರ್ಗರೆಯುವ ಜಲಪಾತವೇ ಸೃಷ್ಟಿಯಾಗುತ್ತಿತ್ತು. ಈ ಸುರಂಗದ ನೀರು ನಮ್ಮ ಅಜ್ಜನಮನೆಯವರಿಗೆ ಮಾತ್ರವಲ್ಲದೆ, ಅಕ್ಕಪಕ್ಕದ ಕೆಲವು ಮನೆಯವರಿಗೂ ನೀರಿನ ಮೂಲವಾಗಿತ್ತು.  ಹೊಂಡದಲ್ಲಿ ಸಂಗ್ರಹವಾಗಿ  ಹರಿದು ಹೋಗುತ್ತಿದ್ದ ಹೆಚ್ಚುವರಿ ನೀರನ್ನು ಕುಡಿಯಲೆಂದು  ಮೇಯಲು ಹೋಗಿದ್ದ ಹಸು ಕರುಗಳು, ಕಾಡಿನ ಅಸಂಖ್ಯಾತ ಪ್ರಾಣಿ, ಪಕ್ಷಿಗಳೂ ಬರುತ್ತಿದ್ದುವು.  ಇಂತಿಪ್ಪ ಸುರಂಗ ನೀರಿನ ಒರತೆ ಎಪ್ರಿಲ್-ಮೇ ತಿಂಗಳಲ್ಲಿ  ಕಡಿಮೆಯಾಗಿ, ಅಬ್ಬಿಯ  ಜಲಧಾರೆ ಕ್ಷೀಣವಾಗುತ್ತಿತ್ತು.  ಕೃಷಿಯ ಬಗ್ಗೆ ಅಪಾರ ಕಾಳಜಿಯಿದ್ದ  ನಮ್ಮ ಅಜ್ಜ ನವರು ತೋಟಕ್ಕೆ  ನೀರು ಕಡಿಮೆ ಆಗಬಾರದೆಂದು ಬೇಸಗೆಯಲ್ಲಿ ಸುರಂಗದ ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿದರು. ಸುರಂಗದ ಒಳ ಹೊಕ್ಕು ಅಲ್ಲಲ್ಲಿ ಕಪ್ಪೆ, ಏಡಿಗಳು ಮಾಡಿರಬಹುದಾದ ಬಿಲಗಳ ಮೂಲಕ  ನೀರು ಹರಿಯುವುದನ್ನು ತಡೆಯುವುದು,  ಮಣ್ಣು ಕುಸಿದು ಹೂಳು ತುಂಬಿದ್ದರೆ ಅದನ್ನು ಸರಿಪಡಿಸುವುದು,   ನೀರು ಹರಿದು ಬರುವ ದಾರಿಯಲ್ಲಿ ತುಂಬಿರುವ ಕಸಕಡ್ಡಿ, ಒಣಗಿದ ಎಲೆಗಳನ್ನು ತೆಗೆದು ನೀರಿನ ಹರಿವನ್ನು  ಸುಗಮಗೊಳಿಸುವುದು  ಇವಿಷ್ಟು ಸುರಂಗಯಾನದ ಉದ್ದೇಶಗಳಾಗಿದ್ದುವು.

ಅಜ್ಜನವರು ಇಬ್ಬರು ಕೃಷಿಕಾರ್ಮಿಕರನ್ನು ಕರೆದುಕೊಂಡು , ತಾವೂ ಸೊಂಟಕ್ಕೊಂದು ಬೈರಾಸು ಸುತ್ತಿಕೊಂಡು  ಹಾರೆ, ಗುದ್ದಲಿ, ಕತ್ತಿ, ಬಾಲ್ದಿ, ಪೈಪ್  ಮೊದಲಾದ ಸಲಕರಣೆಗಳು, ಸುರಂಗದ ಒಳಗೆ ಬೆಳಕಿಗಾಗಿ ಒಂದು ಟಾರ್ಚ್ ಲೈಟ್ , ಉರಿಸಿದ ಲಾಟೀನು, ಬೆಂಕಿಪೊಟ್ಟಣ ಇವಿಷ್ಟನ್ನು ಸಿದ್ಧಗೊಳಿಸುತ್ತಿದ್ದಂತೆ  ಸುರಂಗಕ್ಕೆ ಹೋಗಲು ಅಣಿಯಾಗುತ್ತಿದ್ದಾರೆ  ಎಂದು ನನಗೂ ಅಣ್ಣನಿಗೂ ಅರ್ಥವಾಗುತ್ತಿತ್ತು. ‘ನಾವೂ ಬರಲೇ’ ಎಂದು ಕೇಳುತ್ತಿದ್ದೆವು. ಕಾರಣವಿಷ್ಟೆ. ಹೊರಗಿನ ಬಿಸಿಲಿನ ಝಳವಿದ್ದರೆ ಸುರಂಗದೊಳಗೆ ಬಹಳ ತಂಪಿರುತ್ತಿತ್ತು ,ಮಕ್ಕಳಾದ ನಮಗೆ  ಒಬ್ಬರಿಗೆ   ಟಾರ್ಚ್ ಮೂಲಕ ಬೆಳಕು ಬೀರುವ ಕೆಲಸವಾದರೆ, ಇನ್ನೊಬ್ಬರಿಗೆ ಲಾಟೀನನ್ನು ಹಿಡಿಯುವ ಕೆಲಸವಿರುತ್ತಿತ್ತು. ಸುರಂಗದ ಒಳಗೆ ಹರಿಯುತ್ತಿದ್ದ ನೀರಿನ ಮೇಲೆ ಬರಿಗಾಲಿನಲ್ಲಿ  ನಡೆಯುವಾಗಿನ ಚಳ-ಪಳ ಸಪ್ಪಳ , ನಮ್ಮ ಆಗಮನದಿಂದ ಗಾಬರಿಗೊಂಡು  ತಟ್ಟೆಂದು ಹಾರುವ ಕಪ್ಪೆ, ಒಮ್ಮೊಮ್ಮೆ ಹಾರಾಡುವ ಬಾವಲಿ, ಎಲ್ಲಿಂದಲೋ ಬರುವ ಒರತೆ ನೀರಿನ ಸೆಲೆಗಳ ಸದ್ದು, ಇವೆಲ್ಲಾ ನಮಗೆ ಪುಳಕದ ವಿಷಯಗಳಾಗಿದ್ದುವು. ಪ್ರತಿ ಬಾರಿಯೂ ಚಾಲಾಕಿತನದಿಂದ ನನ್ನ ಅಣ್ಣ ಟಾರ್ಚ್ ಅನ್ನು ತಾನೇ ಮೊದಲಾಗಿ ಹಿಡಿತುಕೊಂಡು ಬೆಳಕನ್ನು ಝಳಪಿಸುತ್ತಾ ಇದ್ದರೆ , ಅನಿವಾರ್ಯವಾಗಿ ಲಾಟೀನು ಹಿಡಿದುಕೊಳ್ಳಬೇಕಾಗಿದ್ದ ನನಗೆ ಕೋಪ ಬರುತ್ತಿತ್ತು. ಅವನನ್ನು ಕಾಡಿ, ಬೇಡಿ, ನಾನೂ ಸ್ವಲ್ಪ ಸಮಯದ ಕಾಲ ಟಾರ್ಚ್ ನಲ್ಲಿ ಆಟವಾಡುವ ಸಂತಸ ಪಡೆಯುತ್ತಿದ್ದೆ.

ಒಂದಾಳು ಎತ್ತರದ, 3-4 ಅಡಿ ಅಗಲವಿದ್ದ ಆ ಸುರಂಗದ ಮೇಲ್ಭಾಗದಲ್ಲಿ ಗಟ್ಟಿಯಾದ ಕಲ್ಲಿನ ಚಪ್ಪರವಿದ್ದು, ಭೂ ಕುಸಿತದ ಭಯವಿರಲಿಲ್ಲ ಎಂದು ಕೇಳಿದ್ದೆ .  ಒಂದೆರಡು ಕಡೆ ಮಾತ್ರ್  ದೊಡ್ಡವರು ಬಾಗಿ ಹೋಗುವಷ್ಟು  ಎತ್ತರವಿತ್ತು. ಸುಮಾರು 500 ಮೀಟರ್ ಇದ್ದಿರಬಹುದಾದ ಆ ಸುರಂಗದಲ್ಲಿ   ಸರಾಸರಿ  100 ಮೀಟರ್ ಗೆ ಒಂದರಂತೆ  ತೆರೆದ  ಬಾವಿಗಳಿದ್ದುವು.  ಸುರಂಗ ಕೊರೆಯುವ ಸಂದರ್ಭದಲ್ಲಿಯೇ  ಆಮ್ಲಜನಕದ ಸರಬರಾಜಿಗಾಗಿ ಈ ಬಾವಿಗಳನ್ನು ಕೊರೆಸಿರಬಹುದು. ಸುರಂಗದ ಅಂತ್ಯ ಭಾಗದಲ್ಲಿ ಪುಟ್ಟ ಮೈದಾನದಂತಹ ಜಾಗವಿತ್ತು ಹಾಗೂ ಅಲ್ಲಿ  ಅರ್ಧ ಗಂಟೆಗೂ ಹೆಚ್ಚು  ಕಾಲ ದುರಸ್ತಿ ಕೆಲಸ ಮಾಡುತ್ತಿದ್ದರು.

ಬಹುಶ:   ನೆಲದ ಮೇಲ್ಮಟ್ಟದಿಂದ  20 ಅಡಿ ಆಳದಲ್ಲಿ ಇದ್ದಿರಬಹುದಾದ ಆ ಸುರಂಗದಲ್ಲಿ  ತಂಪು ವಾತಾರವಣವಿರುತ್ತಿತ್ತು.  ಗವ್ವೆನ್ನುವ ನಿಶ್ಶಬ್ದವಾಳುತ್ತಿದ್ದ ಸುರಂಗದಲ್ಲಿ  ಹಾರೆ , ಗುದ್ದಲಿಗಳ ಸದ್ದು, ಪಾದ ಮುಳುಗುವಷ್ಟಿರುತ್ತಿದ್ದ ನೀರಿನಲ್ಲಿ ನಡೆಯುವ ಸಪ್ಪಳ, ಅಜ್ಜನವರು ಸಹಾಯಕರಿಗೆ ಕೊಡುತ್ತಿದ್ದ ನಿರ್ದೇಶನಗಳು ಪ್ರತಿಧ್ವನಿಗೊಂಡು ದೊಡ್ಡದಾಗಿ ಕೇಳಿಸುತ್ತಿದ್ದುವು,  ಬೆಳಕು ಹಾಗೂ  ನಮ್ಮೆಲ್ಲರ ಆಗಮನದಿಂದ ಗಲಿಬಿಲಿಗೊಳಗಾಗುತ್ತಿದ್ದ ಅಲ್ಲಿನ ನಿವಾಸಿಗಳಾದ  ಅಲ್ಲಿದ್ದ  ಕಪ್ಪೆ, ಬಾವಲಿ, ಏಡಿಗಳು ಆತ್ತಿತ್ತ ಓಡಾಡಿ ಇನ್ನಷ್ಟು ರೋಚಕ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದುವು.

ಅಜ್ಜನವರು ಆಗಾಗ ಲಾಟೀನು ಧಗಭಗ ಅನ್ನುವಷ್ಟ್ರರಲ್ಲಿ ನಾವು ಇಲ್ಲಿಂದ ಹೊರಡಬೇಕು’ ಅನ್ನುತ್ತಿದ್ದರು. ಲಾಟೀನಿನ ಆರೋಗ್ಯಕ್ಕೂ, ನಾವು  ಹೊರಡುವುದಕ್ಕೂ ಸಂಬಂಧವೇನೆಂದು ಅವರಾಗಿ ಹೇಳಿರಲಿಲ್ಲ . ಹತ್ತು, ಹನ್ನೆರಡು ವಯಸ್ಸಿನವರಾಗಿದ್ದ ನನಗೂ ಅಣ್ಣನಿಗೂ ಕಾರಣ ಕೇಳಬೇಕೆಂದು   ಅನಿಸಿರಲಿಲ್ಲ.  ಲಾಟೀನು ಆರಿದರೇನಾಯಿತು, ಟಾರ್ಚ್ ಇದೆಯಲ್ಲ, ಅದಕ್ಕೇಕೆ ಅಷ್ಟು ಮಹತ್ವ ಕೊಡಬೇಕು ಅಂದುಕೊಳ್ಳುತ್ತಿದ್ದೆವು. ಮುಂದಿನ  ದಿನಗಳಲ್ಲಿ, ಇಂಧನಗಳು ಉರಿಯಲು ಆಮ್ಲಜನಕ ಬೇಕು, ಉರಿಯುವಿಕೆಯಿಂದಾಗಿ ಕಾರ್ಬನ್ ಡಯೋಕ್ಸೈಡ್   ಬಿಡುಗಡೆಯಾಗುತ್ತದೆ, ಸೀಮಿತ ಜಾಗದಲ್ಲಿ ಆಮ್ಲಜನಕದ ಕೊರತೆಯುಂಟಾದಾಗ   ವಿಷಪೂರಿತವಾದ ಕಾರ್ಬನ್  ಮೊನೋಕ್ಸೈಡ್  ಆಗಿ ಪರಿವರ್ತನೆಯಾಗಿ ಮನುಷ್ಯರಿಗೆ ಅಪಾಯ ಎಂಬ ವಿಚಾರ ತಿಳಿದಾಗ ಅಜ್ಜನವರು  ಲಾಟೀನು  ಧಗಭಗ ಅನ್ನುವುದನ್ನು’ ಯಾಕೆ ಗಮನಿಸುತ್ತಿದ್ದರು ಎಂದು ಮನವರಿಕೆಯಾಯಿತು. ನಮ್ಮ ಅಜ್ಜನವರು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ನಾಲ್ಕನೆಯ ತರಗತಿ ವರೆಗೆ ಕಲಿತವರಾದರೂ, ಅವರಿಗಿದ್ದ ಬಹುಮುಖ ಪ್ರತಿಭೆ, ಪ್ರಯೋಗಶೀಲತೆ ಹಾಗೂ  ದೇಸಿ ಜ್ಞಾನ ಅಪಾರ.

ಅಂತೂ ದುರಸ್ತಿ ಕೆಲಸ ಮುಗಿಸಿ ಎಲ್ಲರೂ ಸುರಂಗದಿಂದ ಹೊರಬಂದಾಗ  ನಮ್ಮ ಬಟ್ಟೆಗಳಿಗೆ ಕೆಸರು ಮಣ್ಣಿನ ಲೇಪನವಿರುತ್ತಿತ್ತು. ಆಮೇಲೆ ಸ್ನಾನದ ನೆಪದಲ್ಲಿ  ,  ತೋಟದ  ಆಳವಿಲ್ಲದ ಕೆರೆಯ ನೀರಿನಲ್ಲಿ ಮನಸಾರೆ  ಆಟವಾಡಿದರೆ ನಮ್ಮ ಮಟ್ಟಿಗೆ ಒಂದು ದಿನದ ಕೆಲಸ ಮುಗಿದಂತೆ.  ಟ್ಯಾಂಕ್, ಸಂಪ್ ಗಳಲ್ಲಿ ಸಂಗ್ರಹವಾಗುವ ನೀರು, ಕೊಳಾಯಿಗಳಲ್ಲಿ ಹರಿದು ಬರುವ ನೀರನ್ನು ನಲ್ಲಿಯ ಮೂಲಕ  ನಿಯಂತ್ರಿಸುವ  ವಿಧಾನಗಳನ್ನು ಮಾತ್ರ ನೋಡಿರುವ,   ನಗರಗಳಲ್ಲಿ ಬೆಳೆವ ಹೆಚ್ಚಿನ ಮಕ್ಕಳಿಗೆ ಅಡ್ಡಸುರಂಗಗಳ ಒರತೆ, ಅಡಕೆ ಮರದ ದಂಬೆಗಳಲ್ಲಿ ಹರಿದು ಬರುವ, ನಲ್ಲಿಯೇ ಇಲ್ಲದ ಅಖಂಡ ಜಲಧಾರೆಯನ್ನು ಕಲ್ಪಿಸಿಕೊಳ್ಳಲೂ ಕಷ್ಟವೆನಿಸಬಹುದು.  ಮೇಲಾಗಿ, ಬಹಳಷ್ಟು ಆಳಕ್ಕೆ  ಬೋರ್ ವೆಲ್ ಕೊರೆದರೂ ನೀರು ಸಿಗದ ಇಂದಿನ ದಿನಗಳಲ್ಲಿ  ಇಂತಹ  ಕೃಷಿ ಸಂಬಂಧಿ ಕೆಲಸಗಳು ಅಪ್ರಸ್ತುತ. ಕೃಷಿಕೆಲಸದಲ್ಲಿ ಆಸಕ್ತಿ ತೋರುವ ಜನರೂ ಕಡಿಮೆ, ಹಾಗಾಗಿ ಈಗಿನ ಮಕ್ಕಳಿಗೆ   ಸುರಂಗಯಾನದ ನೈಜ ಅನುಭವವು ಬಹುತೇಕ ಸಿಗಲಾರದು.

– ಹೇಮಮಾಲಾ.ಬಿ

18 Responses

  1. Bharathi says:

    ನಮ್ಮೂರ ಹಳ್ಳಿ ಪರಿಸರದ , ಬಾಲ್ಯದ ರೋಚಕ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ !!! ಹೇಮಕ್ಕ ಲಾಟೀನು ಧಗಭಗ … ಓದುವಾಗ ನಗು ಉಕ್ಕಿಸಿದ್ರೂ ಹಿರಿಯರ ವೈಜ್ಞಾನಿಕ ಚಿಂತನೆಗೆ ಶರಣಾಗುವಂತೆ ಮಾಡಿತು . ಸುರಂಗಯಾನದ ಮಜಾ ಅನುಭವಿಸಿದವರಿಗೆ ಮಾತ್ರ ವೇದ್ಯ … Lovely ….

  2. Jayashree Girish says:

    ಚೆನ್ನಾಗಿದೆ ಕೆಲವು ಸಾಲುಗಳು ನಮ್ಮ ಬಾಲ್ಯದ ನೆನಪುಗಳು ಹಸಿರಾಯಿತು.

  3. Jayalaxmi Rao says:

    ನಮ್ಮೂರಲ್ಲೂ ಇಂತಹ ಸುರಂಗಗಳಿದ್ದವು

  4. Vijayalaxmi Patwardhan says:

    ಸುರಂಗದ ನೀರಿನ ಬಗ್ಯೆ ಕೇಳಿದ್ದೆ.ನಿಮ್ಮ ಲೇಖನದಿಂದ ವಿವರ ತಿಳಿದು ಖುಶಿ ಆಯ್ತು.

  5. ಸಾವಿತ್ರಿ ಭಟ್ says:

    ಲೇಖನ ಓದಿ ಸುರಂಗ ಯಾನ ಮಾಡಿದಂತೆಯೇ ಆಯಿತು. ಬಾಲ್ಯದ ನೆನಪು ಮರುಕಳಿಸಿತು

  6. Hema says:

    ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂

  7. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಸುರಂಗಯಾನದ ಕತೆ ಈಗ ಪ್ರಸ್ತುತಃ ಇತ್ತೀಚೆಗೆ ಕೊಳವೆಬಾವಿ ಬಿಟ್ಟರೆ; ಬಾವಿತೋಡುವವರೂ ಇಲ್ಲ. ನನ್ನ ತಂಗಿಯಂದಿರಿಬ್ಬರ ಮನೆಯಲ್ಲಿ ಸುರಂಗದ ನೀರನ್ನು ಬಳಸುವುದು ನೋಡಿದ್ದೆ. ಪರಿಶುದ್ಧ ಜಲವದು…ಸುರಂಗದ ಒಂದು ಮೀಟರಿನಷ್ಟು ಮಾತ್ರ ಒಳಗೆ ಹೋಗಿದ್ದೆ.. ಬಾಲ್ಯದ ಸಿಹಿಅನುಭವ ಹಂಚಿಕೊಂಡ ಹೇಮಮಾಲಾ ನಿಮಗೆ ಧನ್ಯವಾದಗಳು.

  8. Pushpalatha Mudalamane says:

    ಸುರಂಗದಿಂದ ನೀರು ಹರಿಸುವುದನ್ನು ನೋಡಿಲ್ಲ ! ಆದರೆ ಕೊಡಚಾದ್ರಿ ಯಲ್ಲಿ ಗುಡ್ಡದಿಂದ ಹರಿದು ಬರುವ ನೀರನ್ನು ಅಡಿಕೆ ಮರದ ದೋಣಿಗಳಲ್ಲಿ ಹರಿಸುವುದನ್ನು ನೋಡಿದ್ದೆ

  9. Anonymous says:

    ನಮಸ್ಕಾರ.ಬಹಳ ಚೆನ್ನಾಗಿದೆ. ವಿಜ್ಞಾನವನ್ನು ಅರಿತಿದ್ದ ಹಿರಿಯರಿಗೆ ನಮಸ್ಕಾರ. ನಾನು ಸುರಂಗದಲ್ಲಿ ಹೋಗಿ ಬಂದ ಹಾಗೆ ಆಯಿತು.

    • Hema says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

  10. ವಾವ್ ಈ ರೀತಿಯ ಸುರಂಗದ ಬಗ್ಗೆ ಇತಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅಲ್ಪಸ್ವಲ್ಪ ತಿಳಿದಿದ್ದೆ ಆದರೆ ಹಳ್ಳಿ ಗಾಡಿನಲ್ಲಿ ..
    ಹಿರಿತಲೆಯ …ಈವಿಚಾರ ಅದನ್ನು ಅನುಷ್ಠಾನಕ್ಕೆ ತಂದ ಬಗ್ಗೆ ಅದರಲ್ಲಿ ನಿಮ್ಮ ಅನುಭವ. ನಿರೂಪಣೆ ಸೂಪರ್ ಧನ್ಯವಾದಗಳು ಗೆಳತಿ ಹೇಮಾ

    • Hema, hemamalab@gmail.com says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

      • ಕೆ. ರಮೇಶ್ says:

        ಓದಿದಾಗ ನನ್ನ ಬಾಲ್ಯದ ನೆನಪಾಯಿತು ಕೊಡಗಿನ ಸುಂದರ ಪರಿಸರದಲ್ಲಿ!ಧನ್ಯವಾದಗಳು ಮೇಡಂ

        • Hema says:

          ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

  11. ನಯನ ಬಜಕೂಡ್ಲು says:

    ಪ್ರಕೃತಿ ಬಹಳ ಸುಂದರ. ಅದರ ಜೊತೆಗಿನ ಒಡನಾಟಗಳ ಕುರಿತಾದ ಬರಹ ಇನ್ನೂ ಸುಂದರ.

  12. . ಶಂಕರಿ ಶರ್ಮ says:

    ನಮ್ಮನ್ನು ಚಿಕ್ಕಂದಿನ ದಿನಗಳಿಗೆ ಒಯ್ದ ಲೇಖನವು ಬಹಳ ಆಪ್ತವೆನಿಸಿತು. ನಮ್ಮ ಅಜ್ಜನ ಮನೆಯಲ್ಲೂ ಇಂತಹ ಸುರಂಗದೊಳಕ್ಕೆ ನಾವು ಚಿಳ್ಳೆ ಪಿಳ್ಳೆ ಮಕ್ಕಳು ಹೋಗಿ ಹೊರಬಂದ ನೆನಪು ಹಸಿರಾಯಿತು!…ಧನ್ಯವಾದಗಳು ಹೇಮಾ ಅವರಿಗೆ.

  13. Padma Anand says:

    ಸುಂದರ ಪ್ರಕೃತಿಯಲ್ಲಿ ಸುರಂಗಯಾನದ ಅನುಭವ ಓದುವುದಕ್ಕೇ ಇಷ್ಟು ರೋಚಕವಾದರೆ, ಅದನ್ನು ಅನುಭವಿಸಿದ ನೀವೆಷ್ಟು ಪುಣ್ಯವಂತರು. ಸುಂದರ ಲೇಖನವನ್ನೋದಿದಾಗ ಪ್ರಕೃತಿಯಲ್ಲಿ ಮಿಂದೆದ್ದ ಅನುಭವವಾಯಿತು. ಅಭಿನಂದನೆಗಳು ನಿಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: