ಬೊಗಸೆಬಿಂಬ

ಮಾತು ನೋಯಿಸದಿರಲಿ

Share Button

ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ನಮ್ಮ ನಡೆ, ನುಡಿ ಹಾಗೂ ವ್ಯಕ್ತಿತ್ವನ್ನು ನಮ್ಮ ಮಾತು ಹೇಳುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ನುಡಿವಾಣಿಯಂತೆ ನಮ್ಮ ನಡತೆ ಇರಬೇಕು. ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ನುಡಿಯಂತೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೊಬ್ಬರ ಮನಸ್ಸಿಗೆ ನೋವು ಉಂಟು ಮಾಡದೆ, ಅವರಿಗೆ ಮುಜುಗುರ ತರಿಸದೆ ಇರುವಂತ ಮಾತುಗಳು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡು ಹೋಗಬಹುದು. ಕಠೋರವಾದ ಮಾತುಗಳು ಇತರರಿಗೆ ನೋವನ್ನು ಉಂಟು ಮಾಡುವುದಲ್ಲದೆ ಸ್ನೇಹ ಸಂಬಂಧವನ್ನು ಕದಡಿಸಬಹುದು.

ಯಾವತ್ತೂ ಮನಸ್ಸಿಗೆ ಬಂದ ಮಾತನ್ನು ಪಟಕ್ಕನೆ ಹೇಳುವ ಸ್ವಭಾವ ನನ್ನದು. ಎಂದೂ ಯಾರಿಗೂ ಕೇಡನ್ನು ಬಗೆಯದೆ, ಎಲ್ಲರ ಸಂತೋಷದಲ್ಲಿ ಬೆರೆಯುವ ನಿಷ್ಕಳಂಕ ಮನಸ್ಸಿನವಳಾದ ನನಗೆ ಅರಿವಿಲ್ಲದೆಯೇ ಬೇರೆಯವನ್ನು ನೋಯಿಸಿದ ಪ್ರಸಂಗ ಬಂದಾಗ ನನ್ನ ಮನಸ್ಸು ಅಳುಕಿತ್ತು. ನನ್ನ ಒಂದು ಮಾತು ನನ್ನ ಸಹೋದ್ಯೋಗಿಯೊಬ್ಬರ ಮನಸ್ಸಿಗೆ ಘಾತುಕವಾಗಿ ಪರಿಣಮಿಸಿದ ಕಾರಣ ನಾನು ಬಹಳ ನೊಂದುಬಿಟ್ಟೆ. ಬಾಲ್ಯದಿಂದಲೇ ತಮಾಷೆಯ ಸ್ವಭಾವ ನನ್ನದು. ಯಾವ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳದ, ಸಲೀಸಾಗಿ ಹಾಸ್ಯ ಚಟಾಕೆಯನ್ನು ಹಾರಿಸಿ ಎಲ್ಲರಲ್ಲೂ ಬೆರೆಯುತ್ತಿದ್ದ ಸ್ವಭಾವದವಳಾದ ನನಗೆ ಆ ಒಂದು ದಿನ ನಡೆದ ಘಟನೆಯು ನನ್ನ ಬದುಕಿನ ಗತಿಯನ್ನೇ ಬದಲಾಯಿಸಿತ್ತು. ಅದೊಂದು ದಿನ ನನ್ನ ಗೆಳೆಯರೂ ಹಾಗೂ ಸಹೋದ್ಯೋಗಿಯೂ ಆದ ಉಪನ್ಯಾಸಕರೊಬ್ಬರು ಸ್ವಲ್ಪ ದಿನಗಳ ಕಾಲ ರಜೆಯಲ್ಲಿದ್ದರು. ಪ್ರತಿನಿತ್ಯ ನಾವು ಪರಸ್ಪರ ಕ್ಷೇಮ ಸಮಾಚಾರಗಳನ್ನು ವಿನಿಮಯಿಸುತ್ತಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಾಗ ಅವರ ಸಹಾಯ ಲಭಿಸಿ ಕ್ಷಣಮಾತ್ರದಲ್ಲಿಯೇ ಬಗೆಹರಿಸುತ್ತಿದ್ದರು. ಹಾಗೆ ರಜೆ ಮುಗಿಸಿ ಬಂದಾಗ ಯಾಂತ್ರಿಕವಾಗಿ ಏನು ರಜೆ ಮುಗಿಯಿತಾ? ದೂರ ಹೋಗಿದ್ರಾ? ಅಂತ ಪ್ರಶ್ನಿಸಿದ್ದೆ. ಅವರು ಸಹಜವಾಗಿಯೇ ಅಮ್ಮನನ್ನು ಕರೆದು ಕೊಂಡು ಬರಲು ಬೆಂಗಳೂರಿಗೆ ಹೋಗಿದ್ದೆ ಎಂದು ಉತ್ತರಿಸಿದರು. ನನ್ನ ಮನಸ್ಸಿನಲ್ಲಿ ಯಾವ ಆಲೋಚನೆ ಇತ್ತೋ ಗೊತ್ತಿಲ್ಲ, ನನಗೆ ಅರಿವಿಲ್ಲದೆಯೇ ನಾನು ಓಹೋ, ಅಮ್ಮ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರಾ? ಅಂದು ಬಿಟ್ಟೆ. ಅವರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಯಾಕೆ ಮೇಡಂ ಹಾಗಂತೀರಾ? ಅಂದಾಗ ತಪ್ಪು ಮಾತನಾಡಿ ಅವರ ಮನಸ್ಸಿಗೆ ನೋವು ಮಾಡಿಬಿಟ್ಟೆ ಎಂಬ ಸತ್ಯದ ಅರಿವಾಯಿತು. ಒಮ್ಮೆಲೇ ನಾನಾಡಿದ ಮಾತಿನಿಂದಾದ ಪ್ರಮಾದದ ಅರಿವಾಗಿ ಬಹಳ ದುಃಖವಾಯಿತು. ಕೂಡಲೇ ಪಶ್ಚಾತ್ತಾಪಗೊಂಡು ಕ್ಷಮೆಯಾಚನೆ ಮಾಡಿದೆ. ಆದರೆ ಅವರು ಬಹಳ ಬೇಸರದಿಂದ ಕ್ಷಣಮಾತ್ರವೂ ಅಲ್ಲಿ ನಿಲ್ಲದೆ ಹೊರಟು ಹೋದರು. ಮರುದಿನ ಮತ್ತೊಮ್ಮೆ, Sorry ಅಂದಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳದೆ ಅಲ್ಲಿಂದ ಕೂಡಲೇ ನಿರ್ಗಮಿಸಿದರು.

ನನ್ನ ಮನಸ್ಸು ಬಹಳವಾಗಿ ನೊಂದುಬಿಟ್ಟಿತು. ನಾನು ಸುಮ್ಮನೆ ದುಡುಕಿ ಬಿಟ್ಟೆ ಅನಿಸಿತು. ಪ್ರತಿನಿತ್ಯವೂ ನಾನು ತಪ್ಪು ಮಾಡಿದೆ ಎಂಬ ಭಾವನೆ ನನ್ನನ್ನು ಕಾಡತೊಡಗಿತು. ಇನ್ನು ಮುಂದೆ ಆಲೋಚನೆ ಮಾಡಿ ಮಾತಾನಾಡಬೇಕು, ಹಾಗೂ ನನ್ನ ಮಾತಿನಿಂದ ಯಾರೂ ನೋಯಬಾರದು ಅನ್ನುವ ನಿರ್ಧಾರ ದ್ರಢವಾಯಿತು. ಬಹಳ ದಿನಗಳ ನಂತರ ಅವರು ಆ ಘಟನೆಯನ್ನು ಮರೆತು ಮೊದಲಿನಂತಾದರೂ ನನ್ನ ಮನಸ್ಸಿಗೆ ಅವರನ್ನು ಕಂಡಾಗಲೆಲ್ಲಾ‌ಏನೋ ಪಾಪಪ್ರಜ್ಞೆ ಕಾಡುತ್ತಿತ್ತು. ಆದರೆ ಆ ಒಂದು ಘಟನೆ ನನ್ನ ಅಂತರಂಗದ ಕಣ್ಣನ್ನು ತೆರೆಸಿತ್ತು ಹಾಗೂ ಮರೆಯಲಾರದ ಜೀವನ ಪಾಠವನ್ನು ಕಲಿಸಿತ್ತು. ಅಂದಿನಿಂದ ಬಹಳ ಜಾಗರೂಕತೆಯಿಂದ ಮಾತನಾಡುವುದನ್ನು ರೂಢಿಸಿಕೊಂಡಿದ್ದೇನೆ.

-ಶೈಲಾರಾಣಿ. ಬಿ. ಮಂಗಳೂರು.

15 Comments on “ಮಾತು ನೋಯಿಸದಿರಲಿ

  1. ಚಂದದ ಬರಹ. ಹೌದು ನಾವಾಡುವ ಮಾತುಗಳು ಯಾವಾಗಲೂ ಇನ್ನೊಬ್ಬರ ಮನಸ್ಸನ್ನು ಅರಳಿಸುವಂತಿರಬೇಕು, ಘಾಸಿಗೊಳಿಸುವಂತೆ ಅಲ್ಲ.

  2. ಆಡಬೇಕಾದ ಮಾತಿನಲ್ಲಿ ಇರಬೇಕಾದ ಎಚ್ಚರಿಕೆ ಬಗ್ಗೆ ಲೇಖನ ವನ್ನು ತಮ್ಮದೇ ಆದ ಅನುಭವದಿಂದ ಪಡಿಮೂಡಿಸಿರುವ ರೀತಿ ಬಹಳ ಚೆನ್ನಾಗಿದೆ..ಧನ್ಯವಾದಗಳು ಮೇಡಂ

  3. ಚಂದದ ಲೇಖನ. ನಿಮ್ಮನ್ನೇ ನೀವು ಅವಲೋಕಿಸಿ ಬರೆದ ಕಿವಿಮಾತುಗಳು ಎಲ್ಲರಿಗೂ ಮಾರ್ಗದರ್ಶಿ

  4. “ಮಾತಿನಿಂ ನಡೆನುಡಿಯು…ಮಾತಿನಿಂ ಹಗೆಕಳೆಯು..” ಎಂಬ ಸೂಕ್ತಿಯಿದೆ. ಚೆಂದದ ಬರಹ.

  5. ಮಾತು ಮಾಣಿಕ್ಯ…ಮೌನ ಬಂಗಾರವಂತೆ. ಹೌದು, ಇಂತಹ ಅಸಂಬದ್ಧ ಸಂದರ್ಭಗಳು ಎಲ್ಲರಿಗೂ ಆಗಾಗ ಒದಗಿಬರುವುದುಂಟು. ಕಣ್ಣು ತೆರೆಸಿ, ಮನತಿದ್ದುವಂತಹ ಲೇಖನ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *