ಅವಿಸ್ಮರಣೀಯ ಅಮೆರಿಕ-ಎಳೆ 18
ಯೂಸೆಮಿಟಿ ಒಳಹೊಕ್ಕು….
ಅದ್ಭುತ ಯೂಸೆಮಿಟಿಗೆ ತಲಪಿದ ಸಂಭ್ರಮ. ಪಾರ್ಕಿನ ಒಳ ಭಾಗದ ರಸ್ತೆಯು ನಿಬಿಡವಾದ ಚೂಪು ಮೊನೆ ವೃಕ್ಷಗಳ ಕಾಡಿನ ಮಧ್ಯೆ ಸಾಗುತ್ತಿತ್ತು…ಕಾರೊಳಗಿದ್ದ ನಮ್ಮ, ಕೂಗುತ್ತಿದ್ದ ಉದರವನ್ನು ಸಮಾಧಾನಗೊಳಿಸಲು ಅನುಕೂಲಕರವಾದ ನೀರಿನ ಆಸರೆಯ ಯೋಗ್ಯ ಸ್ಥಳಕ್ಕಾಗಿ ಕಣ್ಣುಗಳು ಹುಡುಕುತ್ತಿದ್ದವು. ಅದೋ… ರಸ್ತೆ ಪಕ್ಕದಲ್ಲಿಯೇ ಹರಿಯುವ ಹೊಳೆಯು ನಮ್ಮನ್ನು ಕೈಬೀಸಿ ಕರೆಯಿತು. ಲಗುಬಗನೆ ನಮ್ಮ ತಿಂಡಿ ಪೊಟ್ಟಣದಿಂದ ಹೊರಬಂದ ಟೊಮೆಟೋ ಬಾತ್ ಮತ್ತು ಸಹ ಮಿತ್ರರ ಬ್ಯಾಗಿನಿಂದ ಇಣುಕಿದ ಪರೋಟ ನಿಮಿಷದಲ್ಲಿ ಖಾಲಿಯಾಯಿತೆಂದು ನಾನೇನೂ ಹೇಳಬೇಕಾಗಿಲ್ಲ… ಅಲ್ಲವೇ? ಕುಳಿತುಕೊಳ್ಳಲು, ಇಂತಹ ಪ್ರವಾಸದ ಸಮಯದಲ್ಲಿ ಉಪಯೋಗಿಸಲು ಹಾಗೂ ಸಾಗಣಿಕೆಗೆ ಬಹಳ ಅನುಕೂಲಕರವಾದ ಮಡುಚುವ ಬಟ್ಟೆಯ ಕುರ್ಚಿಗಳು ತಮ್ಮ ಸಹಕಾರವನ್ನು ನೀಡಿದವು. ಹರಿಯುತ್ತಿದ್ದ ನೀರು ಬಹಳ ಸ್ವಚ್ಛವಾಗಿತ್ತೆಂದು ಕೈತೊಳೆಯಲು ಹೋದರೆ, ಸ್ಪರ್ಶಿಸಲಾಗದಷ್ಟು ಶೀತದಿಂದ ಕೊರೆಯುತ್ತಿತ್ತು…ಹಿಮ ಕರಗಿ ಬಂದ ನೀರು. ಆದರೂ, ಪುಟ್ಟ ಮಗುವಿನ ಪಾದವನ್ನು ಆ ನೀರಲ್ಲಿ ಮುಳುಗಿಸ ಹೊರಟ ಅಳಿಯನಿಗೆ ನಾವೆಲ್ಲಾ ತರಾಟೆ ತಗೊಂಡೆವೆನ್ನಿ.
ಉದರ ಪೋಷಣೆಯ ಬಳಿಕ, ಮುಂದಕ್ಕೆ ಸಾಗುತ್ತಿದ್ದಂತೆಯೇ, ಪ್ರವಾಸಿಗರ ದಂಡುಗಳ ಆಗಮನದಿಂದ ಆದ ಜನದಟ್ಟಣೆಯ ಅನುಭವ ಆಗತೊಡಗಿತು. ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಗುಡಾರಗಳನ್ನು ನಿರ್ಮಿಸಿ, ಕೆಲಮಂದಿ ಪ್ರವಾಸಿಗರು, ತಮಗೆ ಉಳಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡಿರುವುದು ಗಮನಕ್ಕೆ ಬಂತು. ನಮ್ಮೊಂದಿಗಿರುವ ಪುಟ್ಟ ಕಂದನ ಅನುಕೂಲಕ್ಕಾಗಿ ಮಲಗುವ ವ್ಯವಸ್ಥೆ ಮಾತ್ರವಿದ್ದ ಸಣ್ಣ ಗುಡಾರವನ್ನು ನಮಗಾಗಿ ಮುಂಗಡವಾಗಿ ಕಾದಿರಿಸಲಾಗಿತ್ತು. ಆದರೆ ಅದನ್ನು ಪಡೆಯಲು ಕೌಂಟರಿನಲ್ಲಿ ರಶೀದಿಯನ್ನು ತೋರಿಸಿ ಬರಲು, ಸ್ವಲ್ಪ ಸಮಯ ಕಾಯಬೇಕಾಗಿ ಬಂತು. ಆ ಸಂದರ್ಭದಲ್ಲಿ ನನಗಾದ ಅನುಭವವೊಂದನ್ನು ಮರೆಯುವಂತೆಯೇ ಇಲ್ಲ.
ಕಾರಿನಲ್ಲಿ , ನನ್ನೊಬ್ಬಳನ್ನು ಹೊರತುಪಡಿಸಿ ಎಲ್ಲರೂ ಇಳಿದು ಹೋದರು… ಹೇಗೂ ಅರ್ಧ ತಾಸು ಕಾಯಬೇಕಾಗಿತ್ತೆಂದು, ನಾನು ಆರಾಮವಾಗಿ ಕಾರಿನೊಳಗಡೆಯೇ ಕುಳಿತೆ. ಸ್ವಲ್ಪ ಹೊತ್ತಲ್ಲಿ ಬೇಸರ ಬಂದು ನಾನೂ ಇಳಿಯೋಣವೆಂದುಕೊಂಡು, ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದರೆ, ಅದು ಬರಲೇ ಇಲ್ಲ…ಯಾವ ಬಾಗಿಲುಗಳೂ ತೆರೆಯಲಾಗದಂತೆ ಭದ್ರವಾಗಿ ಸ್ವಯಂಚಾಲಿತ ಬೀಗ ಜಡಿದುಬಿಟ್ಟಿತ್ತು…. ಬಾಗಿಲುಗಳ ಗಾಜೂ ಮುಚ್ಚಿ ಬಿಟ್ಟಿತ್ತು! ತೆರೆಯುವುದು ಹೇಗೆಂದು ತಿಳಿಯದೆ, ಗಾಬರಿಯಲ್ಲಿ, ಕಾರಿನೊಳಗೆ ಗಾಳಿ ಕಡಿಮೆಯಾದಂತೆ, ನನ್ನ ಉಸಿರು ಸಿಕ್ಕಿಹಾಕಿಕೊಡಂತೆ ಭಾಸವಾಗತೊಡಗಿತು. ಆಯಿತು.. ನನ್ನ ಕಥೆ ಮುಗಿಯಿತು ಎಂದುಕೊಂಡು ಬೆವತು ಹೋದೆ! ಹೊರಗಡೆಗೆ, ಅಕ್ಕಪಕ್ಕ ನೋಡಿದರೆ ಯಾರೂ ಕಾಣ್ತಾ ಇಲ್ಲ! ಕೆಲವು ಕ್ಷಣಗಳ ಬಳಿಕ ನನ್ನನ್ನು ನಾನೇ ತಹಬಂದಿಗೆ ತೆಗೆದುಕೊಂಡು ಶಾಂತವಾಗಿ ಕುಳಿತು, ನಮ್ಮವರು ಬರುವರೇನೋ ಎಂದು ಕಾದುಕುಳಿತೆ. ಕ್ಷಣಗಳು ಗಂಟೆಗಳಂತೆ ಭಾಸವಾಗತೊಡಗಿತ್ತು. ಅಷ್ಟರಲ್ಲಿ ಅಳಿಯ ಬಂದು ಬಾಗಿಲು ತೆಗೆದಾಗ ವಿಷಯ ತಿಳಿಸಿದೆ. ಅವನೋ..ಗಹಗಹಿಸಿ ನಕ್ಕು, “ಇದೋ ನೋಡಿ, ಎಷ್ಟು ಸುಲಭ!” ಎಂದು ಕಾರಿನ ಒಳಗಡೆಯೇ ಇದ್ದ ಬಟನ್ ಒತ್ತಿ ತೆರೆಯುವುದನ್ನು ತಿಳಿಸಿದ. ಹತ್ತು ವರ್ಷಗಳ ಹಿಂದೆ ನಮ್ಮಲ್ಲಿ ಆ ತರಹದ ಕಾರುಗಳು ಇರದುದರಿಂದ, ನಾನು ಬೆಪ್ಪಳಾಗುವ ಪ್ರಸಂಗ ಬಂದಿತ್ತು ನಿಜ… ಆದರೆ ಆ ಕ್ಷಣಗಳಲ್ಲಿ ನನಗಾದ ಭಯ..!?? ಈಗ ಯೋಚಿಸಿದರೆ ಮುಜುಗರದೊಂದಿಗೆ ನಗು ಬರುತ್ತಿದೆ.
ನಮಗಾಗಿ ಕಾದಿರಿಸಿದ ನಾಲ್ಕು ಮಂದಿ ಮಲಗಿಕೊಳ್ಳಬಹುದಾದಂತಹ, ಸಣ್ಣ ಕೋಣೆಯಂತಿರುವ ಡೇರೆಯು ಬಹಳ ಚಂದ ಹಾಗೂ ಅನುಕೂಲಕರವಾಗಿತ್ತು. ಸ್ನಾನಾದಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯು ಡೇರೆಯಿಂದ ಸ್ವಲ್ಪ ದೂರದಲ್ಲಿ, ಪ್ರವಾಸಿಗಳಿಗೆಲ್ಲರಿಗೂ ಸಾಮಾನ್ಯವಾಗಿತ್ತು. ಬೆಚ್ಚನೆಯ ನೀರು, ಶುಚಿಯಾದ ಬಚ್ಚಲು ನೋಡಿ ಸಂತಸವಾದರೂ, ಅಲ್ಲಿಯ ಉದ್ದನೆಯ ಕ್ಯೂ ನಲ್ಲಿ ಕಾಯುವ ಕೆಲಸ ಇತ್ತೆನ್ನಿ.
ಸುತ್ತಲೂ ಎತ್ತರೆತ್ತರ ಬೆಟ್ಟಗಳ ಸಾಲು, ಮಧ್ಯದಲ್ಲಿ,ಸುಮಾರು 6 ಚ. ಮೈಲು ವಿಸ್ತೀರ್ಣದ ಬೋಗುಣಿಯಾಕಾರದಲ್ಲಿರುವ ಸಮತಟ್ಟಾದ ಪ್ರದೇಶದಲ್ಲಿ ದಟ್ಟ ಸೂಜಿಮೊನೆ ಎಲೆಯ ಕಾಡು…ಅದರಲ್ಲಿಯೇ ಪ್ರವಾಸಿಗಳಿಗಾಗಿ ಅಚ್ಚುಕಟ್ಟಾದ ವಸತಿ ವ್ಯವಸ್ಥೆ. ಸಾವಿರಾರು ಜನರಿದ್ದರೂ, ಎಲ್ಲೂ ಗಜಿಬಿಜಿ ಇಲ್ಲ.. ಎಲ್ಲೆಲ್ಲೂ ಸ್ವಚ್ಛ..ಸುಂದರ! ಪಾರ್ಕಿನ ಒಳಗಡೆ ವೀಕ್ಷಣೆಗೆ ಏನೆಲ್ಲಾ ಲಭ್ಯವಿದೆ ಎನ್ನುವ ಚಂದದ ಪುಸ್ತಕ ರೂಪದ ಕೈಪಿಡಿಯಲ್ಲಿ, ನಾವೆಲ್ಲಿರುವೆವು, ಅಲ್ಲಿಂದ ನಾವು ನೋಡಬೇಕಾದ ಸ್ಥಳದ ದೂರದ ನಕಾಶೆ ಸಹಿತದ ಪೂರ್ಣ ವಿವರವಾದ ಮಾಹಿತಿಯಿರುವುದು ಬಹಳ ಅನುಕೂಲ. ಪಾರ್ಕ್ ನ ಒಳಗಡೆಯ ಸುತ್ತಾಟಕ್ಕೆ ಉಚಿತ ಬಸ್ಸಿನ ವ್ಯವಸ್ಥೆಯಿದೆ. ಕೈಯಲ್ಲಿ ಸಾಕಷ್ಟು ಕಾಸಿದ್ದರೆ ಸಾವಿರಗಟ್ಟಲೆ ಚ. ಮೈಲು ವಿಸ್ತೀರ್ಣದ ಯೂಸೆಮೆಟಿಯನ್ನು ಪೂರ್ತಿ, ಮೇಲ್ಗಡೆಯಿಂದ ಹೆಲಿಕಾಪ್ಟರ್ ನಲ್ಲಿ ವೀಕ್ಷಿಸಬಹುದು! ನಡೆದಾಡುವ ಕಾಲುದಾರಿಯು ರಸ್ತೆಯಷ್ಟೇ ಅಗಲವಾಗಿದ್ದು, ನಿರಾತಂಕವಾಗಿ ಅಡ್ಡಾಡಬಹುದು. ಅಲ್ಲಿ ಎಲ್ಲಾ ಕಡೆಗೆ ಕಾಣಸಿಗುತ್ತಿದ್ದ, ನಮ್ಮಲ್ಲಿರುವ ಅಳಿಲಿನಂತಹ ಪ್ರಾಣಿ ನೋಡಲು ಬಹಳ ಮುದ್ದಾಗಿದೆ..ಆದರೆ ಅದರ ಬೆನ್ನ ಮೇಲೆ ಮೂರು ಗೆರೆಗಳು ಇಲ್ಲದೆ ಖಾಲಿ ಖಾಲಿ ಎನಿಸಿತು. ಗಾತ್ರದಲ್ಲಿ ಅಳಿಲಿಗಿಂತ ಸ್ವಲ್ಪ ದೊಡ್ಡದಾಗಿದೆ. (ಲಂಕೆಗೆ ಸೇತುವೆ ನಿರ್ಮಿಸುವಾಗ, ಶ್ರೀ ರಾಮನಿಗೆ ಸಹಾಯ ಮಾಡಿ, ಮೂರು ಚಂದದ ಗೆರೆಯ ಉಡುಗೊರೆ ಪಡೆದ ನಮ್ಮೂರ ಅಳಿಲೇ ಚಂದ…ಅಲ್ಲಿಯ ಅಳಿಲು ಸೇತುವೆ ಕಟ್ಟುವ ಕೆಲಸಕ್ಕೆ ಬರಲಿಲ್ಲವಾದ್ದರಿಂದ, ರಾಘವನ ಉಡುಗೊರೆ ಭಾಗ್ಯ ಅಮೆರಿಕದ ಅಳಿಲಿಗೆ ಸಿಗಲಿಲ್ಲವೆಂದು ನನ್ನ ಅನಿಸಿಕೆ!) ಮನುಷ್ಯರ ಬಗ್ಗೆ ಕೊಂಚವೂ ಭಯವಿಲ್ಲದೆ, ಸಲುಗೆಯಿಂದ, ತಿಂಡಿ ಕೊಟ್ಟರೆ ಆರಾಮವಾಗಿ ತಿಂದುಬಿಡುತ್ತದೆ.
ಮೊದಲಿಗೆ ನಮ್ಮ ಭೇಟಿ, ಕಾಲ್ನಡಿಗೆ ದೂರದಲ್ಲಿರುವ ರಿಬ್ಬನ್ ಜಲಪಾತ (Ribbon Fall)ದ ಬಳಿಗೆ. ಇದು ನೇರವಾಗಿ, ಅಗಲವಾಗಿ ರಿಬ್ಬನಿನ ರೀತಿಯಲ್ಲಿ ಇರುವುದರಿಂದ ಇದಕ್ಕೆ ಈ ಹೆಸರು. ಅಚ್ಚ ಬಿಳಿ ನೊರೆ ತುಂಬಿ ಸುಮಾರು 1,600ಅಡಿಗಳಷ್ಟು ಎತ್ತರದಿಂದ ಕೆಳಗಡೆ ಬಂಡೆಗಳ ರಾಶಿಗೆ ಈ ಬಿಳಿ ರಿಬ್ಬನ್ ಬಿದ್ದು, ಮುಂದಕ್ಕೆ ಪುಟ್ಟ ತೊರೆಯಾಗಿ ಹರಿಯುತ್ತದೆ. ಅದರ ಅಡ್ಡಲಾಗಿ ಕಟ್ಟಿದ ಚಂದದ ಸೇತುವೆಯ ಮೂಲಕ ದಾಟುವಾಗ, ಕಿವಿಗಡಚಿಕ್ಕುವ ಸದ್ದಿನೊಂದಿಗೆ ರಭಸದಿಂದ ಬೀಳುವ ಜಲಪಾತದ ನೀರಿನ ಒತ್ತಡದ ಸೆಳೆತಕ್ಕೆ ಸಿಕ್ಕಿಬಿಡುತ್ತೇವೆ.. ಇದರಿಂದಾಗಿ, ಪೂರ್ತಿ ಒದ್ದೆಯಾಗುವ ಸಂಭವವೇ ಹೆಚ್ಚು! ಅಲ್ಲಿಯ ಸೊಬಗನ್ನು ಕಣ್ತುಂಬಿಕೊಂಡಾಗಲೇ ಸಂಜೆಯಾಯಿತು. ಕತ್ತಲಾವರಿಸಿದ ಬಳಿಕ ಯಾರೂ ಸುತ್ತಾಡಲು ಹೋಗಬಾರದೆಂಬ ಕಡ್ಡಾಯ ನಿಯಮವಿದೆ. ಕಾಡಿನ ಮಧ್ಯೆ ಇರುವುದರಿಂದ ಕಾಡುಪ್ರಾಣಿಗಳಿಗೆ ತೊಂದರೆಯಾಗಬಾರದೆಂದು ಗಟ್ಟಿಯಾದ ಶಬ್ದಗಳಿಗೆ ಅವಕಾಶವಿಲ್ಲ.. ಏರು ದನಿಯಲ್ಲಿ ಮಾತನಾಡಲೂಬಾರದು.. (ನಮ್ಮಲ್ಲಿ ಉಲ್ಟಾ..ಅವುಗಳಿಂದ ನಮಗೆ ತೊಂದರೆಯೆಂದು ಅವುಗಳನ್ನು ದೂರ ಓಡಿಸುತ್ತೇವೆ!) ರಾತ್ರಿ ವೇಳೆ, ತಿಂಡಿಗಳನ್ನು ಡೇರೆಯಲ್ಲಿ ಇಡುವಂತಿಲ್ಲ. ಅದಕ್ಕಾಗಿಯೇ ಇರುವ ಕಬ್ಬಿಣದ ಭದ್ರವಾದ ಕಪಾಟಲ್ಲಿ ಇಡಬೇಕಾಗುತ್ತದೆ. ರಾತ್ರಿ ವೇಳೆ ಆಹಾರದ ವಾಸನೆಗೆ ಕಾಡುಪ್ರಾಣಿಗಳು ಬರುವ ಅಪಾಯವನ್ನು ತಪ್ಪಿಸಲು ಈ ತಂತ್ರ.
ಕ್ಯಾಂಪ್ ಫೈರ್…
ಕತ್ತಲಾಗುತ್ತಿದ್ದಂತೆಯೇ, ಡೇರೆಯ ಮುಂಭಾಗದಲ್ಲಿ, ಅದಕ್ಕಾಗಿಯೇ ಇರುವ ದೊಡ್ಡದಾದ ಅಗ್ಗಿಷ್ಟಿಗೆಯಲ್ಲಿ ಬೆಂಕಿ ಢಾಳಾಗಿ ಉರಿಯುತ್ತದೆ. ಅದರ ಸುತ್ತಲೂ ಎಲ್ಲರೂ ಕುಳಿತು ಏನಾದರೂ ತಿನ್ನುತ್ತಾ, ಕುಡಿಯುತ್ತಾ, ಸಣ್ಣದಾಗಿ ಹಾಡು ಹಾಕಿಕೊಂಡು ಕಾಡುಹರಟೆಯಲ್ಲಿ ಕಾಲಕಳೆಯಬಹುದು.. ಆ ಸಮಯದಲ್ಲಿ ಅಗ್ಗಿಷ್ಟಿಗೆಯ ಮಂದ ಬೆಳಕು ಮಾತ್ರವಿರುವುದರಿಂದ ಅಹ್ಲಾದವೆನಿಸುತ್ತದೆ. ಈ ಬೆಂಕಿಯನ್ನು, ಮಲಗುವ ಮೊದಲೆ ಚೆನ್ನಾಗಿ ಆರಿದೆಯೆಂದು ಖಾತ್ರಿ ಪಡಿಸಿಕೊಳ್ಳುವುದು ಮಾತ್ರ ಅತೀ ಅಗತ್ಯ… ಬೆಂಕಿ ಅವಘಡಗಳು ಸಂಭವಿಸದಂತೆ ಈ ಮುಂಜಾಗ್ರತೆ. ಇಂತಹದೊಂದು ಸಂತೋಷ ಕೂಟವು ನನಗೆ ಮೊದಲ ಬಾರಿಯಾದ್ದರಿಂದ, ವಿಶೇಷವಾದ ಅನುಭವವಾದುದಂತೂ ನಿಜ. ಹೊರಗಡೆ ಚಳಿಯಿದ್ದುದರಿಂದ, ಅಗ್ಗಿಷ್ಟಿಗೆಯ ಬೆಂಕಿಗೆ ಕೈಯೊಡ್ಡಿ ಬೆಚ್ಚನೆಯ ಸುಖ ಅನುಭವಿಸಿದೆವು .. ಜೊತೆಗೇ, ರಾತ್ರಿಯೂಟದ ತಯಾರಿಗೆ ನಮ್ಮ ನಳ ಮಹಾಶಯರ ಕೈಗಳು ಸಿದ್ಧಗೊಂಡವು. ಉದ್ದನೆಯ ಕಡ್ಡಿಗೆ ಟೊಮೆಟೊ, ಬಟಾಟೆ, ಎಳೆ ಜೋಳದ ತೆನೆ, ನೀರುಳ್ಳಿ, ಇತ್ಯಾದಿಗಳ ದಪ್ಪನೆಯ ತುಂಡುಗಳನ್ನು ಪೋಣಿಸಿ, ಎಣ್ಣೆ ಸವರಿ, ಉರಿಯುವ ಬೆಂಕಿಗೆ ಒಡ್ಡಿ ಸುಟ್ಟು, ಅದರ ಮೇಲೆ, ಉಪ್ಪು, ಮೆಣಸಿನ ಪುಡಿ ಉದುರಿಸಿ ತಿನ್ನುವುದು(Barbecue).. ಅಲ್ಲಿಯ ವಿಶೇಷ ತಿನಿಸು. ಎಲ್ಲರ ಜೊತೆಗೆ ಹೊಸರುಚಿ ಸವಿದು, ಮೊಸರನ್ನ ಉಂಡು, ಡೇರೆಗೆ ನುಗ್ಗಿದ ನಾನು, ಮರುದಿನದ ಜಲಪಾತ ದರ್ಶನದ ಸವಿಗನಸು ಕಾಣುತ್ತಾ ಮಲಗಿದೆ…ಆದರೆ.. ನಿದ್ರಾದೇವಿಗೆ ಶರಣಾದುದೇ ತಿಳಿಯಲಿಲ್ಲ….
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ :http://surahonne.com/?p=35152
ಮುಂದುವರಿಯುವುದು….
–ಶಂಕರಿ ಶರ್ಮ, ಪುತ್ತೂರು.
ಸೊಗಸಾಗಿ ಸಾಗಿತ್ತಿದೆ ಪ್ರವಾಸ ಕಥನ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು… ನಯನಾ ಮೇಡಂ.
ಪ್ರವಾಸದ ಅದ್ಭುತ ವರ್ಣನೆ ಹಾಗೂ ಕಾರಿನಲ್ಲಿ ಬಂದಿಯಾಗಿ ಅನುಭವಿಸಿದ ಗಲಿಬಿಲಿ
ಚೆನ್ನಾಗಿ ಮೂಡಿ ಬಂದಿದೆ
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
ಅಮೆರಿಕ ಪ್ರವಾಸ ದ ಜೊತೆ ಜೊತೆಯಲ್ಲಿ ಸಾಗುತ್ತಿರುವ ಅನುಭವ ದ ಅಭಿವ್ಯಕ್ತಿ ಹೆಚ್ಚು ಮುದ ಕೊಡುವಂತಿದೆ..ಧನ್ಯವಾದಗಳು ಮೇಡಂ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
ಪ್ರತಿಯೊಂದು ಕ್ಷಣದ ವರ್ಣನೆ ಅತಿ ಚಂದ
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು,
ಸುಂದರ ವರ್ಣನೆಯಿಂದ ಕೂಡಿ ಸೊಗಸಾಗಿ ಸಾಗುತ್ತಿದೆ ಅನುಭವ ಕಥನ