ಅವಿಸ್ಮರಣೀಯ ಅಮೆರಿಕ-ಎಳೆ 17
ಧರೆಗಿಳಿದ ಸ್ವರ್ಗ…!
ಯಾವಾಗಿನಂತೆ, ವಾರಾಂತ್ಯ ಶನಿವಾರ ಮತ್ತು ಆದಿತ್ಯವಾರಗಳಂದು ರಜೆ ಇರುವುದರಿಂದ, ಹೆಚ್ಚಾಗಿ ಎರಡು ದಿನಗಳ ಸಣ್ಣ ಪಿಕ್ ನಿಕ್ ನಿಗದಿಯಾಗಿರುವುದು ನಮ್ಮಲ್ಲಿ ಮಾಮೂಲಿಯಾಗಿತ್ತು. ಹಾಗೆಯೇ, ಜಲಪಾತಗಳ ಜಗುಲಿಯಾದ ಯೂಸೆಮೆಟಿ ರಾಷ್ಟ್ರೀಯ ಉದ್ಯಾನವನವೇ (Yosemite National Park) ನಮ್ಮ ಮುಂದಿನ ಪ್ರವಾಸ ತಾಣ… ನಾವಿದ್ದ ಮೌಂಟೆನ್ ವ್ಯೂನಿಂದ ಸುಮಾರು 300 ಕಿ.ಮೀ ದೂರವಿರುವ ಇಲ್ಲಿಗೆ ಮೂರು ಗಂಟೆಯ ಪ್ರಯಾಣ.
ನಮ್ಮಲ್ಲಿ ಉದ್ಯಾನವನವೆಂದರೆ ಮಾಮೂಲಾಗಿ ಹೂವಿನ ತೋಟ ಅಂದುಕೊಳ್ತೇವೆ. ಆದರೆ ಯೂಸೆಮೆಟಿಯು ಅಮೆರಿಕದ ಪ್ರಸಿದ್ಧ ಪ್ರಾಕೃತಿಕ ಪ್ರವಾಸಿತಾಣಗಲ್ಲೊಂದಾಗಿದೆ. ಇದು, ಆಳವಾದ ಕಣಿವೆಗಳು, ವಿಶೇಷವಾದ ಗ್ರಾನೈಟ್ ಶಿಲೆಯ ಬೃಹದಾಕಾರದ ಬೆಟ್ಟಗಳು, ದಟ್ಟಕಾಡು, ಸುಮಾರು 25 ಜಲಪಾತಗಳು, ಈ ಜಲಪಾತಗಳಿಂದ ಉಂಟಾದ ಸುಂದರ ನದಿಗಳು ಇತ್ಯಾದಿ ಅತಿ ವಿಶೇಷತೆಗಳನ್ನು ಒಳಗೊಂಡಿದೆ. ಇಲ್ಲಿರುವ ಜಲಪಾತಗಳಲ್ಲಿ, 100 ಅಡಿಗಳಷ್ಟು ಎತ್ತರದ ಸಣ್ಣ ಜಲಪಾತದಿಂದ ತೊಡಗಿ, 2,425 ಅಡಿಗಳಷ್ಟು ಎತ್ತರದ ಜಲಪಾತವಿರುವುದು ವಿಶೇಷ!
ಪಾರ್ಕ್ ನ ಈ ತರಹದ ವೈವಿಧ್ಯಮಯ ಭೌಗೋಳಿಕ ರಚನೆಯಿಂದಾಗಿ, 400ಕ್ಕೂ ಹೆಚ್ಚು ಜೀವ ವೈವಿಧ್ಯಗಳಿಗೆ ಇದು ಆಶ್ರಯತಾಣವಾಗಿದೆ. ಇವುಗಳಲ್ಲಿ , ಕೆಂಪುನರಿ, ವಿವಿಧ ರೀತಿಯ ಪಕ್ಷಿಗಳು, ಸರೀಸೃಪಗಳು, ಉಭಯಚರಗಳು ಬಹಳ ಮುಖ್ಯವಾದುವುಗಳು. ಈ ಪ್ರಾಕೃತಿಕ ಸೋಜಿಗದ ಜಾಗವನ್ನು, ಅದರ ಪ್ರಕೃತಿ ಸಹಜ ಸುಂದರತೆಯನ್ನು ಯಥಾಸ್ಥಿತಿಯಲ್ಲಿ ಕಾಪಿಡುವ ನಿಟ್ಟಿನಲ್ಲಿ, ಸರಕಾರವು 1864ರಲ್ಲಿ ಇದನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಆ ಬಳಿಕ 1890ನೇ ಅಕ್ಟೋಬರ 1 ರಂದು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. ಆ ದಿನಗಳಲ್ಲಿಯೇ ಇದು ಪ್ರವಾಸಿಗರ ಅತ್ಯಂತ ಪ್ರೀತಿಯ ಆಕರ್ಷಕ ತಾಣವೆಂದು ಪ್ರಸಿದ್ಧಿ ಪಡೆದಿದ್ದು, ಅದೇ ಆಕರ್ಷಣೆ ಹಾಗೂ ಪ್ರಸಿದ್ಧಿಯನ್ನು ಈಗಲೂ ಉಳಿಸಿಕೊಂಡು ಬಂದಿದೆ. ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೆ ಈ ಪಾರ್ಕ್ , ವೀಕ್ಷಣೆಗೆ ಯೋಗ್ಯವಾಗಿದೆ. ಇಲ್ಲಿಗೆ ಬರುವ ಮುಕ್ಕಾಲು ಭಾಗದಷ್ಟು ಪ್ರವಾಸಿಗರು ಇದೇ ಸಮಯಕ್ಕೆ ಭೇಟಿ ಕೊಡುತ್ತಾರೆ. ಉಳಿದಂತೆ, ಚಳಿಗಾಲದಲ್ಲಿ, ಜಲಪಾತಗಳಲ್ಲಿ ನೀರಿನ ಹರಿವು ಬಹಳ ಕಡಿಮೆಯಾಗಿರುವುದರಿಂದ ಹಾಗೂ ಹವೆಯು ಪ್ರವಾಸಕ್ಕೆ ಯೋಗ್ಯವಾಗಿಲ್ಲದಿರುವುದರಿಂದ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ.
ಸುಮಾರು 1,100 ಚ. ಮೈಲು ವಿಸ್ತೀರ್ಣವಿರುವ ಯೂಸೆಮೆಟಿಯಲ್ಲಿ, 6 ಚ. ಮೈಲುಗಳಷ್ಟು ಜಾಗ ಮಾತ್ರ ಸುತ್ತಾಟಕ್ಕೆ ಯೋಗ್ಯವಾಗಿದೆ. ಯಾಕೆಂದರೆ, ಉಳಿದ ಜಾಗವು ಎತ್ತರದ ಬೆಟ್ಟ, ಆಳವಾದ ಕಂದಕಗಳಿಂದ ಕೂಡಿದೆ. ಪಶ್ಚಿಮದ ಸ್ವಿಝರ್ಲೇಂಡ್ ಎಂದೇ ಹೆಸರಾಗಿರುವ ಇದು ಬೇಸಿಗೆ ಕಾಲದ ವಿಶ್ರಾಂತಿಧಾಮವೂ ಹೌದು. ಇಲ್ಲಿಯ ಗ್ರಾನೈಟ್ ಶಿಲೆಗಳ ಬೆಟ್ಟಗಳ ಮೇಲೆ ಬೀಳುವ ಸೂರ್ಯನ ಕಿರಣಗಳಿಂದಾಗಿ, ಇಡೀ ಬೆಟ್ಟವೇ ಬೆಂಕಿಯುಂಡೆಯಂತೆ ಗೋಚರಿಸುವುದೊಂದು ಅತ್ಯಂತ ವಿಹಂಗಮ ನೋಟವಾಗಿದೆ. ಸಾಹಸೀ ಚಾರಣಗರಿಗೆ ಅತಿ ಪ್ರಿಯವಾದ, ಆಕರ್ಷಕ ತಾಣವಾದ Half Dome ಬೆಟ್ಟವು ಅರ್ಧ ಗುಮ್ಮಟಾಕಾರದಲ್ಲಿದ್ದು, ಇದು ಭಾಸ್ಕರನ ಬೆಳಕಿಗೆ ಕೆಂಪು ಕಿತ್ತಳೆ ಬಣ್ಣದಲ್ಲಿ ಕಂಗೊಳಿಸುತ್ತದೆ.
ಚಳಿಗಾಲದಲ್ಲಿ ಸುರಿಯುವ ಹಿಮದಿಂದಾಗಿ, ದೊಡ್ಡದಾದ ಹಿಮಬೆಟ್ಟಗಳು ರೂಪುಗೊಳ್ಳುತ್ತವೆ. ಇದರಲ್ಲಿ ಆಯೋಜಿಸಲ್ಪಡುವ, ಸ್ಕೇಟಿಂಗ್, ಹಿಮನಾಯಿಗಳಿಂದ ಎಳೆಯಲ್ಪಡುವ ಜಾರುಬಂಡಿಗಳಲ್ಲಿ ವಿಹಾರ, ಇತ್ಯಾದಿ ಮನೋರಂಜನಾ ಹಿಮಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಇಂದಿಗೂ ಬಹಳಷ್ಟು ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಕಲ್ಲಿನ ಬೆಟ್ಟಗಳನ್ನು ಏರುವ ಸಾಹಸ ಕ್ರೀಡೆಗಾಗಿ ಇದು ಅತ್ಯಂತ ಪ್ರಸಿದ್ಧಿ. ವಸಂತಕಾಲದಲ್ಲಿ ಕೆಲವೊಮ್ಮೆ ದಿಢೀರಾಗಿ ಕಾಣಿಸಿಕೊಳ್ಳುವ ಅತಿ ಚಳಿಯಿಂದಾಗಿ ಭೋರ್ಗರೆಯುವ ಜಲಪಾತಗಳು ಅಲ್ಲಲ್ಲೇ ಹೆಪ್ಪುಗಟ್ಟುವ ಪ್ರಕೃತಿ ಸೋಜಿಗವನ್ನೂ ಇಲ್ಲಿ ಕಾಣಬಹುದು. ಹರಿಯುವ ನದಿಗಳ ಮೇಲ್ಭಾಗವಿಡೀ ಹಿಮದಿಂದ ತುಂಬಿದರೆ, ಕೆಳಗಡೆಗೆ ಕೊರೆಯುವ ಚಳಿನೀರು ಹರಿಯುತ್ತಿರುತ್ತದೆ. ಇಲ್ಲಿಯ ಅದ್ಭುತ ಜಲಪಾತಗಳಲ್ಲಿ ರಾತ್ರಿ ಹೊತ್ತಿಗೆ ಅಪರೂಪಕ್ಕೆ ಕಾಣುವ ಅತ್ಯಪೂರ್ವ ಕಾಮನಬಿಲ್ಲು ಜಗತ್ಪ್ರಸಿದ್ಧ! ಸ್ವಚ್ಛ ಆಗಸದ ಹುಣ್ಣಿಮೆಯಂದು, ಜಲಪಾತದ ತುಂತುರು ನೀರ ಹನಿಗಳ ಮೇಲೆ ರಾತ್ರಿ ಹೊತ್ತಲ್ಲಿ ಚಂದ್ರನ ಬೆಳಕು ಬಿದ್ದು ಉಂಟಾಗುವ ಕಾಮನಬಿಲ್ಲು ಅತ್ಯಂತ ಸುಂದರ! ವರ್ಷವೊಂದಕ್ಕೆ ಸುಮಾರು 4ಮಿಲಿಯ ಪ್ರವಾಸಿಗರು ಇಂದಿಗೂ ಇಲ್ಲಿಗೆ ಭೇಟಿ ಕೊಡುತ್ತಿರುವುದು ಇಲ್ಲಿಯ ಹೆಗ್ಗಳಿಕೆ.
ಬೆಂಕಿಯ ಜಲಪಾತವು(Firefall) ಇಲ್ಲಿಯ ಇನ್ನೊಂದು ವಿಶೇಷತೆಯಾಗಿದೆ. ಪ್ರವಾಸಿಗರನ್ನು ಆಕರ್ಷಿಸಲೋಸುಗ; 1872ರ ಸುಮಾರಿಗೆ 3000 ಅಡಿಗಳಷ್ಟು ಎತ್ತರದಿಂದ ಉರಿಯುವ ಕೆಂಡಗಳನ್ನು, ವಾರದ ಏಳೂ ದಿನಗಳಲ್ಲಿ ರಾತ್ರಿ 9 ಗಂಟೆಯ ಹೊತ್ತಿನಲ್ಲಿ ಜಲಪಾತದ ಮೇಲ್ಭಾಗದಿಂದ ಕೆಳಕ್ಕೆ ಸುರಿದು ವಿಶೇಷವಾದ ಆಕರ್ಷಕ ನೋಟವನ್ನು ಸೃಷ್ಟಿಸಲಾಗುತ್ತಿತ್ತು. ಆಗ ಹೊಂಬಣ್ಣದಿಂದ ಹೊಳೆಯುವ ಜಲಪಾತವನ್ನು ದೂರದಿಂದ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿತ್ತು. ಈ ದೃಶ್ಯಾವಳಿಯು ಅಲ್ಲಿಯ Glacier Point Hotel ನ ಮಾಲಿಕರಿಂದ ರಚಿಸಲ್ಪಡುತ್ತಿತ್ತು. ಜಲಪಾತದ ತಳದಲ್ಲಿ ನಿಂತ ಮಾಲಿಕರು ಮೇಲಿನವರಿಗೆ “Let the fire fall” ಎಂಬುದಾಗಿ ಆಜ್ಞಾಪಿಸಿದ ಬಳಿಕ ಮೇಲಿನಿಂದ ಉರಿಯುವ ಇದ್ದಿಲಿನ ಪ್ರವಾಹವು ನಿಯಮಿತ ಸಮಯದ ವರೆಗೆ ಕೆಳಗೆ ಹರಿಯುತ್ತಿತ್ತು. ಇದು ಸುಮಾರು 100 ವರ್ಷಗಳ ಕಾಲ ಎಡೆಬಿಡದೆ ನಡೆಯುತ್ತಿದ್ದು ನಿಜಕ್ಕೂ ಆಶ್ಚರ್ಯ! ಇದು ನೈಸರ್ಗಿಕವಾಗಿ ನಡೆಯದೆ ಕೃತ್ರಿಮವಾಗಿ ಸೃಷ್ಟಿಸುವ ಘಟನೆಯಾದ್ದರಿಂದ ಹಾಗೂ ಇದಕ್ಕಾಗಿ ಆಗಮಿಸುವ ಅಗಾಧ ಸಂಖ್ಯೆಯ ಪ್ರವಾಸಿಗರಿಂದಾಗಿ ನಿಸರ್ಗದ ಮೇಲೆ ಆಗುವ ದುಷ್ಪರಿಣಾಮಗಳನ್ನು ಮನಗಂಡು 1968ರಲ್ಲಿ ಈ ಕಾರ್ಯಕ್ರಮಕ್ಕೆ ತಡೆ ಒಡ್ಡಲಾಯಿತು. ಬಳಿಕ ಸುಮಾರು 18 ತಿಂಗಳುಗಳ ಬಳಿಕ ಆ ಹೋಟೇಲ್ ಬೆಂಕಿಗೆ ಆಹುತಿಯಾದುದು ಮಾತ್ರ ಕಾಕತಾಳೀಯ ಎನ್ನಬಹುದು. ಅಲ್ಲದೆ ಹೋಟೇಲ್ ಪುನರ್ನಿಮಾಣಗೊಳ್ಳಲಿಲ್ಲ.
ಆದರೆ ಈಗ ನೈಸರ್ಗಿಕವಾಗಿ ಈ ದೃಶ್ಯವು Horsetail ಜಲಪಾತದಲ್ಲಿ ಮಾತ್ರ; ಅಕ್ಟೋಬರಿನಿಂದ ಫೆಬ್ರವರಿ ತಿಂಗಳಿನ ವರೆಗೆ ಕಾಣಸಿಗಬಹುದಾದರೂ, ಸಾಧಾರಣವಾಗಿ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಮೂಡಿಬರುತ್ತದೆ. ಇದಕ್ಕಾಗಿ ಕೂಡಿಬರಬೇಕಾದ ಸಂಗತಿಗಳು ಹಲವಾರು. ಸೂರ್ಯಾಸ್ತದ ಸಮಯದಲ್ಲಿ ಸರಿಯಾದ ನಿಚ್ಚಳ ಹವಾಗುಣವಿದ್ದು ಸೂರ್ಯನ ಕಿರಣಗಳು ಪಶ್ಚಿಮ ದಿಕ್ಕಿನಿಂದ ಜಲಪಾತದ ಮೇಲೆ ಸರಿಯಾದ ಕೋನದಲ್ಲಿ ಬೀಳುವಾಗ ಮಾತ್ರ ಈ ಅದ್ಭುತ ದೃಶ್ಯ ವೈಭವವನ್ನು ವೀಕ್ಷಿಸಬಹುದು.
ಈ ರೀತಿ, ಹಲವಾರು ವಿಶೇಷತೆಗಳಿಂದ ಕೂಡಿದ ಯೂಸೆಮೆಟಿ ರಾಷ್ಟ್ರೀಯ ಉದ್ಯಾನವನವನ್ನು ವೀಕ್ಷಿಸಲು, ಇನ್ನೆರಡು ಕುಟುಂಬ ಸ್ನೇಹಿತರೊಡನೆ ಒಂದು ಶನಿವಾರ ಬೆಳಗಿನ ಹೊತ್ತಿಗೆ ಹೊರಟೆವು. ಅಮೆರಿಕದಲ್ಲಿ ಎಲ್ಲರ ಬಳಿ ಕಾರುಗಳಿದ್ದರೂ, ಇಂತಹ ಪುಟ್ಟ ಪ್ರವಾಸಗಳಿಗೆ ಜೊತೆಗೂಡಿ ಹೋಗುವ ಸಂದರ್ಭಗಳಲ್ಲಿ, ದೊಡ್ಡದಾದ ಒಂದು ಕಾರನ್ನು ಬಳಸುವುದು ರೂಢಿ… ಅದಕ್ಕೆ Car pooling ಎನ್ನುವರು. ಅಂತೆಯೇ ನಮ್ಮ ಮೂರು ಕುಟುಂಬಗಳು ಒಂದೇ ಕಾರಲ್ಲಿ ಪ್ರಯಾಣ ಆರಂಭಿಸಿದೆವು. ಪುಟ್ಟ ಮಗುವನ್ನು ಅದಕ್ಕಾಗಿಯೇ ಇರುವ ಆಸನದಲ್ಲಿ ಕೂರಿಸಿ, ಅದನ್ನು ಕಾರಿನ ಸೀಟಿನಲ್ಲಿ ಹಿಂದು ಮುಂದಾಗಿರಿಸಿ , ಜೋಪಾನವಾಗಿ ಬೆಲ್ಟಿನಿಂದ ಬಿಗಿಯಲಾಯಿತು. ಕಾರಿನಲ್ಲಿ ಕುಳಿತ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಲೇಬೇಕು. ನಾನಂತೂ ಪ್ರತಿಸಲವೂ ಮರೆತುಬಿಡುವುದು, ನನ್ನಳಿಯ ನನ್ನನ್ನು ಎಚ್ಚರಿಸುವುದು ಮಾಮೂಲಿ! ಎರಡು ದಿನಗಳು ನಾವು ಪಾರ್ಕಿನಲ್ಲಿ ಉಳಕೊಳ್ಳಲಿರುವುದರಿಂದ ಸಣ್ಣಪುಟ್ಟ ಅಡುಗೆ ತಯಾರಿಗೂ ಸಿದ್ಧಗೊಂಡು ಹೊರಟಿದ್ದೆವು.
ನಮಗಿಲ್ಲಿ ಊಹಿಸಲೂ ಆಗದಂತಹ ಸೊಗಸಾದ ರಸ್ತೆ ಪಯಣ.. ಸಣ್ಣ ಪುಟ್ಟ ಹಳ್ಳಿಗಳಲ್ಲಿನ ಅತಿ ವಿರಳ ಜನವಸತಿ… ಎಲ್ಲಿ ನೋಡಿದರೂ ಹಸಿರು ಹೊದೆಸಿದ ಸುಂದರ ಬೆಟ್ಟಗಳು, ಹೊಲಗಳು.. ನೋಡಿದಷ್ಟು ಕಣ್ಣು ತಣಿಯದು! ಮಧ್ಯ ಮಾರ್ಗದಲ್ಲಿ Old Priest Ground ಎಂಬಲ್ಲಿಯ ಬಹಳ ವಿಶಾಲವಾದ ಸರೋವರವು ಗಮನಸೆಳೆಯಿತು. ಅಲ್ಲಿಂದ ಮುಂದಕ್ಕೆ ಅತ್ಯಂತ ಕ್ಲಿಷ್ಟ ತಿರುವುಗಳಿರುವ ಏರು ರಸ್ತೆಯ ಪ್ರಯಾಣದಲ್ಲಿಯೂ ಆಯಾಸವೆಂಬುದೇ ಇಲ್ಲದುದಕ್ಕೆ ಕಾರಣ, ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾದ ರಸ್ತೆಯ ದೀರ್ಘ ತಿರುವುಗಳು. ಈ 300ಕಿ. ಮೀ ರಸ್ತೆಯ ಪ್ರಯಾಣದಲ್ಲಿ ಎಲ್ಲಿಯೂ ರಸ್ತೆ ಹಾಳಾಗಿದ್ದು ಗೋಚರಿಸಲಿಲ್ಲ. ಹೆದ್ದಾರಿಯಿಂದ ಒಳ ರಸ್ತೆಗಳಿಗೆ ಹೋಗಲು, ನಿರ್ಗಮನ(EXIT) ಸೂಚಕಗಳು ಖಚಿತವಾದ ಸಂಖ್ಯೆಯನ್ನು ಹೊಂದಿದ್ದು, ಅದರ ಇರುವಿಕೆಯನ್ನು ಸಾಕಷ್ಟು ಮೊದಲೇ ಸೂಚನೆ ನೀಡುತ್ತದೆ..ರಸ್ತೆ ಬದಿಯಲ್ಲಿರುವ ಮಾರ್ಗ ಸೂಚಿಗಳು ಮತ್ತು ಕರಾರುವಕ್ಕಾಗಿರುವ ಮಾರ್ಗಸೂಚಕ…GPS.
ಸರಿಯಾಗಿ ಮಧ್ಯಾಹ್ನ ಒಂದು ಗಂಟೆಗೆ ಯೂಸೆಮೆಟಿಯ ಹೊರಭಾಗಕ್ಕೆ ತಲಪಿದೆವು. ಪಾರ್ಕಿನ ಒಳಗಡೆ ಹೋಗಲು ಒಂದು ಕಾರಿಗೆ $25/- ಅಥವಾ ಇಡೀ ವರ್ಷಕ್ಕಾಗಿ ಕಾದಿರಿಸುವುದಾದಲ್ಲಿ $80/- ತೆರಬೇಕಾಗುತ್ತದೆ. ನಮ್ಮಲ್ಲಿ ವಾರ್ಷಿಕ ಪಾಸ್ ಇದ್ದುದರಿಂದ ಅದನ್ನು ತೋರಿಸಿದಾಗ, ನೇರವಾಗಿ ಒಳ ಹೋಗಲು ಅನುಮತಿ ದೊರೆಯಿತು… ಅದಾಗಲೇ ಮಧ್ಯಾಹ್ನ 1:30.. ಹೊಟ್ಟೆ ಚುರುಗುಟ್ಟಲು ಪ್ರಾರಂಭವಾಯಿತು…
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35090
ಮುಂದುವರಿಯುವುದು….
-ಶಂಕರಿ ಶರ್ಮ, ಪುತ್ತೂರು.
ಅಮೆರಿಕದ ಪ್ರವಾಸ ದಲ್ಲಿ ವಾರಾಂತ್ಯ ದ ಸುತ್ತ ಮುತ್ತ ಲ ತಿರುಗಾಟ ದಲ್ಲಿ ಈ ಸಾರಿ ಉದ್ಯಾನವನ ಹಾಗೂ ಜಲ ಪಾತದ ಬಗ್ಗೆ ಹಿನ್ನೆಲೆಯನ್ನು ತಳಿಸಿರುವ ರೀತಿ ಮುದ ತಂದಿತು ಮತ್ತು ಅಲ್ಲಿ ನ ವ್ಯವಸ್ಥೆ ಹಾಗೂ ಅದರಲ್ಲಿ ತಮ್ಮ ಅಭಿಪ್ರಾಯ ವನ್ನು..
ಹೇಳಿ ಮುಂದಿನ ಕಂತಿಗೆ ಕಾಯುವಂತೆ ಮಾಡಿ ದೆ ಧನ್ಯವಾದಗಳು ಮೇಡಂ
ಪ್ರೋತ್ಸಾಹಕ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನ ಮೇಡಂ.
ಯೋಸಿ ಮಿಟಿಯ ಅದ್ಭುತವಾದ ವರ್ಣನೆಯನ್ನು ಕೇಳಿ ಸಂತಸವಾಯಿತು ವಂದನೆಗಳು
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು, ಗಾಯತ್ರಿ ಮೇಡಂ.
ನಾವು ಸ್ವತಃ ಅಲ್ಲಿದ್ದು ಎಲ್ಲವನ್ನು ಸವಿದ ಭಾವವನ್ನು ನೀಡುವಂತಹ ಬರಹ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಯನಾ ಮೇಡಂ.
ಮನ ಸೂರೆಗೊಳ್ಳುವ ಜಲಪಾತಗಳ ಸಮೂಹದ ಉದ್ಯಾನವನದ ವಿವರಣೆ ಮುಂದಿನ ಭಾಗದ ಬಗ್ಗೆ ಕುತೂಹಲ ಹುಟ್ಡು ಹಾಕಿತು. ಚಂದದ ಪ್ರಕೃತಿಯ ವಿವರಣೆಗಾಗಿ ಅಭಿನಂದನೆಗಳು
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.