ಕಾದಂಬರಿ: ನೆರಳು…ಕಿರಣ 9
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಮಲಗಿದ್ದ ಲಕ್ಷ್ಮಿಗೆ ಮನೆಯ ಹೊರಗಡೆ ಏನೋ ಸದ್ದುಗದ್ದಲ ಕೇಳಿಸಿ ಥಟ್ಟನೆ ಎಚ್ಚರಿಕೆಯಾಯಿತು. ಹಾಗೇ ಸದ್ದಿಗೆ ಕಿವಿಕೊಟ್ಟಳು. “ಷ್..ನಿಮ್ಮನ್ನು ಇಷ್ಟುಬೇಗ ಎದ್ದುಬನ್ನಿ ಎಂದು ಯಾರು ಹೇಳಿದರು? ಹೋಗಿ ಇನ್ನೂ ಸ್ವಲ್ಪ ಹೊತ್ತು ಮಲಗಿ. ಅಪರೂಪಕ್ಕೆ ಅಮ್ಮ ಮಲಗಿದ್ದಾರೆ. ಗಲಾಟೆ ಮಾಡಬೇಡಿ” ಭಾವನಾ ತನ್ನ ಕಿರಿಯರಿಗೆ ಎಚ್ಚರಿಕೆ ನೀಡುತ್ತಿದ್ದಾಳೆ. ನೋಡಿದರೆ ಪಕ್ಕದಲ್ಲಿ ಮಲಗಿದ್ದ ಗಂಡನ ಸುಳಿವಿಲ್ಲ. ಹಾಗಾದರೆ ನನಗೇನು ಬಂತು ಇಷ್ಟು ಹೊತ್ತು ಮಲಗಿಬಿಟ್ಟಿದ್ದೇನೆ. ಅವರು ಹೇಳಿದಂತೆ ಪಾಯಸದ ಪ್ರಭಾವ ಇರಬೇಕು. ಎಲ್ಲರಿಗೂ ಬಡಿಸಿದ ನಂತರ ನನಗೆ ಉಳಿದಿದ್ದು ಎಷ್ಟು. ಅದರಿಂದಲೇ ಇಷ್ಟು ಗಡದ್ದಾದ ನಿದ್ರೆ. ಹಿರಿಯರ ನೆನಪಿನಿಂದ ಹಾರಿಹೋಗಿದ್ದ ನಿದ್ರೆ ನನ್ನನ್ನು ಯಾವಾಗ ಆವರಿಸಿಕೊಂಡಿತೋ ಕಾಣೆ ಎಂದುಕೊಂಡು ‘ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ, ಕರೆಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ’ ಹೇಳಿಕೊಂಡು ಎರಡೂ ಕೈಗಳನ್ನು ಜೋಡಿಸಿ ಕಣ್ಣಿಗೊತ್ತಿಕೊಂಡು ಮಾಂಗಲ್ಯಕ್ಕೆ ನಮಿಸಿ ಹಾಸಿಗೆಯಿಂದ ಮೇಲೆದ್ದಳು. ತಲೆಗೂದಲು, ಬಟ್ಟೆ ಒಪ್ಪಓರೆ ಮಾಡಿಕೊಂಡು ಹಾಸಿಗೆ ಸುತ್ತಿಟ್ಟು ರೂಮಿನಿಂದ ಹೊರಬಂದಳು.
‘ ಮಕ್ಕಳೇ, ನಾನು ಎದ್ದು ಕೂಗುವ ವರೆಗೂ ಏಳದ ನೀವುಗಳು ಇವತ್ತು?’ ಎಂದು ಕೇಳಿದಳು ಲಕ್ಷ್ಮಿ.
“ಅಮ್ಮಾ ನೀವು ದಿನವೂ ಏಳಿಸುತ್ತಿದ್ದ ಹೊತ್ತಿಗೇ ಎದ್ದು ರೂಢಿಯಾಗಿದ್ದ ಭಾಗ್ಯ ನೀವು ಇವತ್ತು ಬರದೇ ಇದ್ದದ್ದು ನೋಡಿ ತಾನೇ ನನ್ನನ್ನು ಎಬ್ಬಿಸಿದಳು. ನಾವಿಬ್ಬರೂ ಹೊರಗೆ ಬರುವಷ್ಟರಲ್ಲಿ ಅಪ್ಪ ಎದ್ದಿರುವುದು ಕಂಡಿತು. ಬಹುಶಃ ಜಮೀನಿನ ಕಡೆ ಹೋಗಬಹುದು ಎಂದು ಏನೂ ಕೇಳದೆ ನಾವು ನಮ್ಮ ಕೆಲಸಗಳಲ್ಲಿ ತೊಡಗಿಕೊಂಡೆವು. ಚಿಕ್ಕವರೆಲ್ಲ ಅವರೇ ಎದ್ದು ಗಲಾಟೆ ಮಾಡುತ್ತಿದ್ದರು. ಅದಕ್ಕೆ ನಾನವರನ್ನು ಬೈದೆ” ಎಂದಳು ಭಾವನಾ.
“ಹೌದಾ ! ಇವತ್ತು ಅವರೇನೂ ಜಮೀನಿನ ಹತ್ತಿರ ಹೋಗಲ್ಲ.” ಎದಳು ಲಕ್ಷ್ಮಿ.
“ಹಾ..ಬಸವಪ್ಪ ಯಾರದ್ದೋ ಜೊತೆಯಲ್ಲಿ ಬಂದಿದ್ದಾನೆ. ಅಂಗಡಿಯಲ್ಲಿ ಅಪ್ಪ ಅವರುಗಳ ಜೊತೆಯಲ್ಲಿ ಮಾತನಾಡುತ್ತಿದ್ದಾರೆ.” ಎಂದು ಹೇಳಿದ ಭಾವನಾ ಚಿಕ್ಕ ತಂಗಿಯರ ಕಡೆ ತಿರುಗಿ “ಅಮ್ಮ ಎದ್ದಾಯಿತಲ್ಲ, ನಿಮ್ಮ ಪ್ರಾಥಃವಿಧಿಗಳನ್ನು ಮುಗಿಸಿ ಸ್ನಾನ ಮಾಡಿಕೊಂಡು ಬನ್ನಿ” ಎಂದು ಯಜಮಾನಿಯಂತೆ ಹೇಳಿದ್ದನ್ನು ನೋಡಿ ಲಕ್ಷ್ಮಿಗೆ ನಗುಬಂತು. “ಈಗ ನಾನೇನು ಮಾಡಬೇಕು ಮೇಡಂ?” ಎಂದು ಅವಳನ್ನೇ ಕೇಳಿದಳು. “ನೀವೂ ಅಷ್ಟೇ” ಎಂದಳು ಭಾವನಾ.
“ಹೌದೇ..ಭಾಗ್ಯ ಎಲ್ಲಿ?” ಎಂದು ಕೇಳಿದಳು ಲಕ್ಷ್ಮಿ.
“ಅಕ್ಕಾ ನಾನೂ ಸೇರಿ ಮನೆಯನ್ನೆಲ್ಲ ಗುಡಿಸಿ ಸಾರಿಸಿ ಮುಗಿಸಿ ಸ್ನಾನವನ್ನೂ ಮಾಡಿದ್ದೇವೆ. ಅಕ್ಕ ಅಡುಗೆ ತಯಾರಿ ನಡೆಸಿದ್ದಾಳೆ. ಅವಳಿಗೆ ಸಹಾಯಕ್ಕಾಗಿ ನಾನೂ ಹೊರಟೆ. ಇವತ್ತಿನ ಅಡುಗೆ ನಮ್ಮದೇ” ಎಂದು ಬಿಂಕದಿಂದ ಹೇಳಿ ಅತ್ತ ನಡೆದಳು ಭಾವನಾ.
ಚಿಕ್ಕಮಕ್ಕಳಿಬ್ಬರೂ ಇನ್ನೂ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ನೋಡಿ ತಾನೂ ಹಿತ್ತಲ ಕಡೆ ನಡೆದಳು ಲಕ್ಷ್ಮಿ. ಮಗಳು ಭಾವನಾ ಹೇಳಿದಂತೆ ತನ್ನೆಲ್ಲಾ ಕಾರ್ಯಕ್ರಮ ಮುಗಿಸಿ ಸ್ನಾನದ ಮನೆಗೆ ಹೋದಳು. ಅವಳು ಉಪಯೋಗಿಸುತ್ತಿದ್ದ ಟವೆಲ್, ಸ್ನಾನದ ನಂತರ ಹಾಕಿಕೊಳ್ಲುವ ಉಡುಪುಗಳನ್ನು ಅಲ್ಲಿಯೇ ಇದ್ದ ಗಳುವನ್ನಲಂಕರಿಸಿದ್ದವು. ಹಂಡೆಯಲ್ಲಿ ನೀರು ಕಾದು ಸಿದ್ಧವಾಗಿತ್ತು. ಹೊರಗೆ ಬಂದಿದ್ದ ಉರಿಯುವ ಕೊಳ್ಳಿಯನ್ನು ಒಲೆಯೊಳಕ್ಕೆ ತಳ್ಳಿ ಮತ್ತೊಂದು ಸೌದೆತುಂಡನ್ನು ಇಟ್ಟು ಸರಿಪಡಿಸಿದಳು. ಶಾಲೆಗೆ ರಜೆಯಿದ್ದಾಗ ಗಂಡನೊಡನೆ ಜಮೀನಿನ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ಅಡುಗೆಯ, ಇತರ ಕೆಲಸಗಳನ್ನು ಮಕ್ಕಳು ನೋಡಿಕೊಳ್ಳುತ್ತಿದ್ದರು. ಇದೇನೂ ಹೊಸದಲ್ಲ. ಆದರೂ ಅವನ್ನೆಲ್ಲ ಲಕ್ಷ್ಮಿಯ ಹೇಳಿಕೆಯಂತೆ ಮಾಡುತ್ತಿದ್ದರು. ಆದರೆ ಈದಿನ ತಾವೇ ಮುಂದಾಗಿ ಎದ್ದು ಏನೂ ಹೇಳದೇ ತಯಾರಿ ನಡೆಸಿದ್ದಾರೆ. ಅದೇನು ಮಾಡುತ್ತಿದ್ದಾರೋ ಎಂದುಕೊಂಡು ಸ್ನಾನ ಮುಗಿಸಿ ಮಡಿಯುಟ್ಟು ದೇವರ ಕೋಣೆಗೆ ಬಂದಳು ಲಕ್ಷ್ಮಿ. ಅಲ್ಲಿ ಕಂಡಿದ್ದೇನು ! ಪೂಜೆ ಮುಗಿದಿತ್ತು. ದೀಪ ಉರಿಯುತ್ತಿತ್ತು. ಹಾಗಾದರೆ ಇವರು ಎಂದಿನಂತೆ ಎದ್ದು.. ಛೇ.. ನನಗೇನಾಗಿತ್ತು? ಇಷ್ಟೆಲ್ಲ ಗದ್ದಲವಾದರೂ ಎಚ್ಚರಿಕೆಯಾಗಿಲ್ಲ ಎಂದುಕೊಂಡು ಒಂದೆರಡು ಶ್ಲೋಕಗಳನ್ನು ಹೇಳಿಕೊಂಡು ದೇವರಿಗೊಂದು ಕೈಮುಗಿದು ಹೊರಬಂದವಳೇ ತಲೆಗೂದಲು ಸಿಕ್ಕುಬಿಡಿಸಿ ಜಡೆ ಹೆಣೆದು ಕೂದಲಿನ ಒಂದೆಳೆ ತೆಗೆದು ಗಂಟುಹಾಕುತ್ತಿದ್ದಾಗ ಅವರ ಅಜ್ಜಿಯು ಹೇಳುತ್ತಿದ್ದ ಮಾತು ನೆನಪಿಗೆ ಬಂದವು. “ಹೆಂಗಸರು ಸ್ನಾನಕ್ಕೆ ಹೋಗುವ ಮುಂಚೆ ತಲೆಬಾಚಿ ಗಂಟುಹಾಕಿಕೊಂಡರೆ ಮಾರನೆಯ ದಿನ ಸ್ನಾನ ಮಾಡುವವರೆಗೆ ಕಟ್ಟಿದ್ದ ಗಂಟನ್ನು ಬಿಚ್ಚುವಂತಿರಲಿಲ್ಲ. ಸೀರೆಯ ನೆರಿಗೆ ಎಲ್ಲರೆದುರು ಚಿಮ್ಮಿಸಿಕೊಂಡು ಓಡಾಡುವ ಹಾಗಿರಲಿಲ್ಲ. ಇನ್ನು ಪೂಜೆಯ ವಿಷಯಕ್ಕೆ ಬಂದರೆ ದೇವರ ಕೋಣೆ ಸ್ವಚ್ಛಗೊಳಿಸುವುದು, ದೀಪಕ್ಕೆ ಎಣ್ಣೆಬತ್ತಿ ಹಾಕುವುದು, ಹೂಬಿಡಿಸಿಡುವುದು, ಧೂಪ, ತುಪ್ಪದಾರತಿ, ನೈವೇದ್ಯ ಇವೆಲ್ಲವನ್ನು ಅಣಿಮಾಡಿಕೊಡುವುದಷ್ಟೇ ಹೆಣ್ಣುಮಕ್ಕಳ ಕೆಲಸ.
ಹಾಗಾದರೆ ನೀವೇನು ಪೂಜೆ ಮಾಡುತ್ತಿದ್ದಿರಿ ಎಂದು ಕೇಳಿದರೆ, ಹೂ..ಮದುವೆ ಸಮಯದಲ್ಲಿ ತವರಿನವರು ಕೊಡ್ತಾರಲ್ಲ ಗೌರೀಪೂಜೆ ಪೆಟ್ಟಿಗೆ ಅದರಲ್ಲಿ ಅನ್ನಪೂರ್ಣೆ, ಸ್ವರ್ಣಗೌರಿ, ಕುಬೇರ, ಹಸುಕರು..ಹೀಗೆ ಅನುಕೂಲವಂತರು ಅವನ್ನೆಲ್ಲ ಬೆಳ್ಳಿಯಲ್ಲಿ ಮಾಡಿಸಿ ಕೊಡುತ್ತಿದ್ದರು. ಮಿಕ್ಕವರು ಪಂಚಲೋಹದಲ್ಲಿ ಮಾಡಿಸುತ್ತಿದ್ದರು ಅದನ್ನೇ ಪೂಜೆಮಾಡುತ್ತಿದ್ದೆ. ನಾನೇನು ನಮ್ಮಲ್ಲಿನ ಹೆಣ್ಣುಮಕ್ಕಳಿಗೆಲ್ಲ ಅಷ್ಟೇ ಲಭ್ಯ. ವ್ರತ..ವಿಶೇಷ ಪೂಜೆದಿನಗಳಲ್ಲಿ ಪುರೋಹಿತರು, ವೇದಾಧ್ಯಯನ ಮಾಡಿದವರು ಬಂದು ಕೈಹಿಡಿದವರಿಂದ ಸಂಕಲ್ಪ ಮಾಡಿಸಿಕೊಂಡು ಅವರ ಮೂಲಕ ಆಚರಣೆ, ನಾವು ತುಳಸಿ, ಹೊಸ್ತಿಲ ಪೂಜೆ ಮಾಡಬಹುದಿತ್ತು. ನಿಮ್ಮ ತಾತ ಈ ಲೋಕದಿಂದ ಸರಿದು ಹೋದಮೇಲೆ ಮನೆತನದಿಂದ ಬಂದಿದ್ದ ಸಾಲಿಗ್ರಾಮದ ಸಂದೂಕವನ್ನು ಪೂಜೆಮಾಡಲೆಂದೇ ಒಬ್ಬ ಭಟ್ಟರನ್ನು ಮನೆಯ ಹಿರಿಯರು ನೇಮಕ ಮಾಡಿದ್ದರು. ಆದರೆ ಆ ಪುಣ್ಯಾತ್ಮ ನನ್ನ ಮೇಲೇ ಕಣ್ಣಿಟ್ಟ ವಿಷಯ ತಿಳಿದ ಮೇಲೆ ಅವರಿಗೆ ಗೇಟ್‌ಪಾಸ್ ನೀಡಿ ಸಾಲಿಗ್ರಾಮ ಪೆಟ್ಟಿಗೆಯನ್ನೇ ದೇವಸ್ಥಾನಕ್ಕೆ ಕೊಟ್ಟುಬಿಟ್ಟರು. ಅದನ್ನು ನಾನು ಪೂಜೆ ಮಾಡುವುದಿರಲಿ, ಕೈಯಿಂದ ಮುಟ್ಟುವುದಕ್ಕೂ ಹೆಂಗಸರಿಗೆ ಅಧಿಕಾರವಿರಲಿಲ್ಲ. ಹಾಗೇನಾದರೂ ಮಾಡಿದರೆ ಕುಟುಂಬಕ್ಕೆ ಅಪಚಾರ ಬಗೆದಂತೆ, ಕೇಡಾಗುತ್ತದೆಂಬ ಬಲವಾದ ನಂಬಿಕೆಯಿತ್ತು. ಆದ್ದರಿಂದ ಯಾರೂ ಅದರ ತಂಟೆಗೇ ಹೋಗುತ್ತಿರಲಿಲ್ಲ. ತಿಂಗಳು ಹೊರಗಾದಾಗಲಂತೂ ನಮ್ಮ ಪಾಡು ಹೇಳತೀರದು ಕೂಸೇ. ಯಾಕಾದರೂ ಹೆಣ್ಣಾಗಿ ಹುಟ್ಟುತ್ತೇವೆ ಎನ್ನಿಸಿಬಿಡುತ್ತಿತ್ತು. ಹುಂ ಆ ಅವಸ್ಥೆಯನ್ನು ಮದುವೆಯಾಗುವವರೆಗೂ ಲಕ್ಷ್ಮಿಯೂ ಅನುಭವಿಸಿದ್ದಳು. ಹಳೆಯ ಮನೆಯ ಹಿಂಭಾಗದಲ್ಲಿದ್ದ ಒಂದು ಕತ್ತಲುಕೋಣೆಯಲ್ಲಿ ಮೂರುದಿನ ವಾಸ. ಯಾರ ಕಣ್ಣಿಗೂ ಬೀಳದೆ ಅವರು ಮೇಲಿನಿಂದ ಹಾಕುವ ನೀರುನಿಡಿ, ತಟ್ಟೆಯಲ್ಲಿಟ್ಟು ಆಹಾರವನ್ನು ತಳ್ಳುತ್ತಿದ್ದ ರೀತಿ ..ಅಬ್ಬಾ! ಲಕ್ಷ್ಮಿ ಮದುವೆಯಾಗಿ ಬೇರೆಮನೆಗೆ ಸೇರಿದಮೇಲೆ ಅಲ್ಲಿ ಇದಕ್ಕೆಲ್ಲಾ ಬಿಡುಗಡೆಯಾಗಿತ್ತು. ವಾಸಕ್ಕೆ ಪ್ರತ್ಯೇಕವಾದ ಒಂದು ಕೊಠಡಿ, ಅಲ್ಲಿಯೇ ಹಂಡೆ, ಒಲೆಯಿತ್ತು. ನೀರು ತುಂಬಿಸಿಟ್ಟುಕೊಳ್ಳಲು ಒಂದು ತೊಟ್ಟಿಯೂ ಇತ್ತು. ಸೌದೆ ಇತರ ಸಾಮಾನುಗಳಿಟ್ಟುಕೊಳ್ಳಲು ಒಂದು ಅಟ್ಟವಿತ್ತು. ಹೊರಕ್ಕೆ ಹೋಗಲು ಹಿತ್ತಲಿಂದ ಒಂದು ಬಾಗಿಲಿತ್ತು. ಮಡಿಹುಡಿಗಳ ನೀತಿನಿಯಮವಿದ್ದರೂ ತೊಂದರೆಯಾಗುತ್ತಿರಲಿಲ್ಲ. ಇಷ್ಟೊಂದು ಅನುಕೂಲ ಒದಗಲು ಒಂದು ಕಾರಣವಿತ್ತಂತೆ. ಅದನ್ನು ತಿಳಿಯುವ ಕುತೂಹಲದಿಂದ ಲಕ್ಷ್ಮಿಯು ತನ್ನ ಅತ್ತೆಯವರನ್ನು ಕೇಳಿದಾಗ ಅವರು ಅದೊಂದು ದೊಡ್ಡಕಥೆ. ಬಹಳ ಹಿಂದೆ ನಮ್ಮ ಮನೆತನಕ್ಕೆ ಸೇರಿದ ಒಬ್ಬ ಹೆಣ್ಣುಮಗಳನ್ನು ಅಷ್ಟವರ್ಷೇ ಭವೇತ್‌ಕನ್ಯಾ ಎನ್ನುವಂತೆ ಮೈನೆರೆಯುವುದಕ್ಕೂ ಮೊದಲೇ ಮದುವೆ ಮಾಡಿದ್ದರಂತೆ. ಆಕೆ ಗಂಡನ ಮನೆಗೆ ಪ್ರಥಮ ಬಾರಿ ಹೋಗುವಾಗಲೇ ಗಾಡಿ ಮಗುಚಿಬಿದ್ದು ಆಕೆಯ ಪತಿ ಹರಹರಾ ಎಂದನಂತೆ. ಆ ನಂತರ ಹುಡುಗಿ ಮೈನೆರೆದು ದೊಡ್ಡವಳಾದಳು, ಹಾಗೇ ಮಡಿಯೂ ಆಗಿಬಿಟ್ಟಳು. ತುಂಬಿದ ಮನೆ, ಆಕೆಗೆ ತುಂಬಿದ ಪ್ರಾಯ. ಹೊರಗಾದಾಗ ಪದ್ಧತಿಯ ಪ್ರಕಾರ ಹೊರಕೋಣೆಯಲ್ಲಿ ವಾಸ. ಊರವರು ಏಳುವುದಕ್ಕೂ ಮುಂಚೆ ಜಮೀನಿನಲ್ಲಿದ್ದ ಕಲ್ಯಾಣಿಯಲ್ಲೋ, ಊರಿನ ಕೆರೆಯಲ್ಲಿಯೋ ಮಿಂದು ತನ್ನ ಬಟ್ಟೆಯನ್ನೆಲ್ಲ ಮಡಿಮಾಡಿಕೊಂಡು ಬರಬೇಕಾಗಿತ್ತು. ಅವಳು ಬಂದಾಗ ತಲೆಬಾಗಿಲಲ್ಲೇ ನಿಲ್ಲಿಸಿ ತಲೆಯಮೇಲೆ ತಣ್ಣೀರು ಸುರಿದು ಒಳಗೆ ಕರೆದುಕೊಳ್ಳುತ್ತಿದ್ದರಂತೆ. ಒಂದುದಿನ ಯಾರೋ ಒಬ್ಬ ಫಟಿಂಗ ಪಡ್ಡೆ ಹುಡುಗ ನಸುಕಿನಲ್ಲಿ ಅವಳನ್ನು ಕೆಣಕಿದನಂತೆ. ಆಕೆ ರಕ್ಷಣೆಗೋಸ್ಕರ ಕೈಗೆ ಸಿಕ್ಕಿದ ವಸ್ತುವಿನಿಂದ ಬೀಸಿ ಅವನಿಗೆ ಹೊಡೆದಳು. ಪೆಟ್ಟು ಎಲ್ಲಿಗೆ ಬಿತ್ತೋ ಅವನು ಬಿದ್ದು ಹೆಣವಾಗಿಬಿಟ್ಟ. ಈಕೆ ಹಿಂದಿರುಗಿ ನೋಡದಂತೆ ಓಡಿಬಂದು ಮನೆ ಸೇರಿದಳು. ಆ ಹೆಣ್ಣು ಇದಕ್ಕೊಂದು ಪರಿಹಾರ ಕಂಡು ಹಿಡಿಯಬೇಕೆಂದು ಮುಷ್ಕರ ಹೂಡಿ ಉಪವಾಸ ಸತ್ಯಾಗ್ರಹ ಮಾಡಿದಳಂತೆ. ನಂತರ ಈಗಿರುವ ಏರ್ಪಾಡು ಮಾಡಿದರಂತೆ. ಇದು ಹಿಂದಿನ ಕೇಳಿದ ಕಥೆ ಎಂದು ಹೇಳಿದ್ದರು. ಆ ಮಹಾತಾಯಿಗೆ ದೊಡ್ಡ ನಮಸ್ಕಾರಗಳು ಸಲ್ಲಬೇಕು. ಹಾಗೇ ಇನ್ನೂ ಕೆಲವು ನಿಯಮಗಳನ್ನು ಸಡಿಲಿಸಿದ್ದನ್ನು ಹೇಳಿದ್ದರು.
ಇನ್ನು ನಮ್ಮ ಮಕ್ಕಳನ್ನು ಮದುವೆ ಮಾಡಿ ಕೊಡುವವರ ಮನೆಯಲ್ಲಿ ಏನೇನು ನಿರ್ಬಂಧಗಳಿರುತ್ತವೆಯೋ ದೇವರೇ ಬಲ್ಲ ಎಂದುಕೊಂಡಳು ಲಕ್ಷ್ಮಿ. ಅವಳ ಹಿರಿಮಗಳು ಭಾಗ್ಯ ಬೆಳಗಾಗೆದ್ದು ಹೇಳುವ ಶ್ಲೋಕದಿಂದ ಪ್ರತಿಯೊಂದಕ್ಕೂ ಅದೇಕೆ ಹೀಗೆ? ಇದೇಕೆ ಹಾಗೆ? ಎಂದು ಪ್ರಶ್ನಿಸುವುದರೊಂದಿಗೆ, ಹೆಣ್ಣು ಮಕ್ಕಳೇಕೆ ದೇವರ ಪೂಜೆ ಮಾಡಬಾರದು? ಹೊರಗಾದಾಗ ಮೂರುದಿನ ಮನೆಯೊಳಕ್ಕೆ ಏಕೆ ಇರಬಾರದು? ಇತರರನ್ನು ಅವಳು ಮುಟ್ಟಿದರೆ ಏನಾಗುತ್ತದೆ? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಯನ್ನೇ ಕೇಳಿ ತಲೆತಿನ್ನುತ್ತಿದ್ದಳು. ಪುಣ್ಯಕ್ಕೆ ಇತ್ತೀಚೆಗೆ ಇಂತಹ ತರ್ಕಗಳು ನಿಂತಿವೆ. ಅವಳಿಗೇ ಅನಾವಶ್ಯಕ ವಾದವಿವಾದಗಳಿಂದ ಏನೂ ಪ್ರಯೋಜನವಿಲ್ಲವೆಂಬುದು ಅರ್ಥವಾಗಿರಬೇಕು. ಇನ್ನು ಆಚಾರವಿಚಾರಗಳು ಜೋಯಿಸರ ಮನೆಯಲ್ಲಿ ಹೇಗೋ? ಎಂದುಕೊಂಡು ತನ್ನ ಮಕ್ಕಳು ಏನು ನಡೆಸಿದ್ದಾರೆ ನೋಡೋಣವೆಂದು ತನ್ನ ಕೋಣೆಯಿಂದ ಹೊರಬಂದಳು ಲಕ್ಷ್ಮಿ. ಹೊರಗಿನಿಂದ “ಭಾಗ್ಯಾ” ಎಂದು ಕೂಗುತ್ತಲೇ ಕೈಯಲ್ಲಿ ಒಂದು ಚೀಲ ಹಿಡಿದು ಒಳಕ್ಕೆ ಬಂದರು ಭಟ್ಟರು. ಅಲ್ಲಿ ಹೆಂಡತಿಯನ್ನೂ ಕಂಡು “ಓ ಲಕ್ಷ್ಮೀ, ಎದ್ದೆಯಾ? ಸ್ನಾನಮುಗಿಸಿದಂತಿದೆ. ನಮ್ಮ ಬಸವಾ ನಾನು ಹೇಳಿದ್ದ ಹೂ, ಹಣ್ಣುಗಳನ್ನು ತಂದಿದ್ದಾನೆ. ನೋಡಿ ಇನ್ನೇನಾದರೂ ಬೇಕಾ ಹೇಳು?” ಎಂದು ಕೈಯಲ್ಲಿದ್ದ ಚೀಲವನ್ನು ಅವಳಿಗೆ ಕೊಟ್ಟರು. ಚೀಲದೊಳಗಿನ ಪದಾರ್ಥಗಳನ್ನು ಈಚೆಗೆ ತೆಗೆದಳು ಲಕ್ಷ್ಮಿ. ಒಂದು ಚಿಪ್ಪು ಬಾಳೆಹಣ್ಣು, ಕಿತ್ತಳೆ, ಒಂದೆರಡು ಮೊಳ ಹೂ ಇದ್ದವು. ಅಡಿಕೆ, ವೀಳ್ಯದೆಲೆ, ತೆಂಗು ಮನೆಯಲ್ಲಿವೆ. ಅರಿಸಿನ ಕುಂಕುಮ ಇವಿಷ್ಟು ಸಾಕು. ತಲೆಯೆತ್ತಿ “ಇನ್ನೇನೂ ಬೇಡವೆಂದು ಅವನಿಗೆ ಹೇಳಿಬಿಡಿ. ಬೆಳಿಗ್ಗೇನೇ ಬಂದುಬಿಟ್ಟಿದ್ದಾನಲ್ಲಾ,” ಎಂದು ಕೇಳಿದಳು ಲಕ್ಷ್ಮಿ.
“ಹೂ..ಯಾರದ್ದೋ ಸಮಾರಂಭದ ಕಾರ್ಯಕ್ಕೆ ಸಾಮಾನುಗಳು ಬೇಕಿತ್ತಂತೆ. ಹಾಗೇ ಬರುತ್ತಾ ಹಣ್ಣು ಹೂ ತೆಗೆದಿಟ್ಟಿದ್ದನ್ನೂ ತಂದ. ಅವರನ್ನೂ ಕರೆದುಕೊಂಡು ಅಂಗಡಿಗೆ ಬಂದಿದ್ದ. ಅವನನ್ನು ಕಳುಹಿಸಿ ಬರುತ್ತೇನೆ” ಎಂದು ಅಂಗಡಿಗೆ ಹೋದರು.
ಇತ್ತ ಲಕ್ಷ್ಮಿ ಹಣ್ಣು ಹೂವನ್ನು ಬುಟ್ಟಿಯಲ್ಲಿಟ್ಟು ನೀರುಸುರಿದು, ಹೂವನ್ನು ಚೌಕದಲ್ಲಿ ಸುತ್ತಿಟ್ಟು, ಹಣ್ಣುಗಳನ್ನು ತಟ್ಟೆಯಲ್ಲಿಟ್ಟು ಊಟದ ಮನೆಯಲ್ಲಿದ್ದ ಗೂಡಿನಲ್ಲಿಟ್ಟಳು. ಚೀಲವನ್ನು ಒಗೆಯಲು ಹಾಕಿ ಅಡುಗೆ ಮನೆ ಹೊಕ್ಕಳು. ಹಪ್ಪಳ ಸುಟ್ಟ ವಾಸನೆ ಮೂಗಿಗೆ ಬಡಿಯಿತು. ತರಕಾರಿ ಏನೂ ಇರಲಿಲ್ಲ. ಚಿತ್ರಾನ್ನ, ಮೊಸರನ್ನ ಮಾಡಿಬಿಡೋಣ. ಸಂಜೆಗೆ ಏನಾದರೂ ತಂದು ಬೇರೆ ಮಾಡಿದರಾಯಿತು ಎಂದುಕೊಂಡಿದ್ದೆ. ಈ ಹುಡಿಗೀರು ಏನು ಮಾಡಿದ್ದಾರೋ ಎಂದುಕೊಂಡೇ “ಭಾಗ್ಯಾ” ಎಂದು ಕೂಗಿದಳು.
ಅಮ್ಮನ ಕರೆಗೆ ತಿರುಗಿದಳು ಭಾಗ್ಯ, ಲಂಗಧಾವಣಿಯಲ್ಲಿದ್ದ ಮಗಳನ್ನು ಒಂದು ಕ್ಷಣ ಎವೆಯಿಕ್ಕದೆ ನೋಡಿದಳು ಲಕ್ಷ್ಮಿ. ಲಂಗವನ್ನು ತುಸು ಮೇಲಕ್ಕೆತ್ತಿ ಸಿಕ್ಕಿಸಿದ್ದಾಳೆ. ತನ್ನ ನೀಳಜಡೆಯನ್ನು ಧಾವಣಿಯ ಸೆರಗಿನೊಳಕ್ಕೆ ಸೇರಿಸಿ ಅದನ್ನೂ ಸಿಕ್ಕಿಸಿದ್ದಾಳೆ. ಒಲೆಯ ಮುಂದಿದ್ದ ಅವಳ ಮುಖದಲ್ಲಿ ಬೆವರಿನ ಹನಿಗಳು ಮುತ್ತು ಪೋಣಿಸಿದಂತೆ ಕಂಡವು. ಒಲೆ ಉರಿಯ ಶಾಖಕ್ಕೆ ಕೆಂಪಗಾದ ಮುಖ, ಹಣೆಯಲ್ಲಿ ಕುಂಕುಮದ ಬೊಟ್ಟು ಸ್ವಲ್ಪ ಚದುರಿದಂತೆ ಕಂಡಿತು. ಕೈತುಂಬ ಹಸಿರು ಬಳೆಗಳು, ಕಿವಿಯಲ್ಲಿ ಚಿಕ್ಕ ಓಲೆಗಳ ಹೊಳಪು ಒಂದಕ್ಕೊಂದು ಸ್ಪರ್ಧಿಸುತ್ತಿರುವಂತೆ ಕಂಡವು.
“ಏನಮ್ಮಾ ಕೂಗಿ ಹಾಗೇ ನನ್ನನ್ನು ನೋಡುತ್ತಾ ನಿಂತುಬಿಟ್ಟೆ? ನನ್ನ ಮುಖದಲ್ಲಿ ಎಲ್ಲಿಯಾದರೂ ಮಸಿಗಿಸಿ ಅಂಟಿದೆಯಾ?” ಎಂದು ಕೇಳಿದಳು ಭಾಗ್ಯ. ಮಗಳ ಪ್ರಶ್ನೆಗೆ ಲಕ್ಷ್ಮಿ ನಸುನಗುತ್ತಾ “ಏನಿಲ್ಲ, ಹಾಗೇ ಸುಮ್ಮನೆ ನೋಡುತ್ತಾ ನಿಂತೆ. ಅದಿರಲಿ ತರಕಾರಿ ಏನೂ ಇರಲಿಲ್ಲ. ನನ್ನ ಎಬ್ಬಿಸಲೂ ಇಲ್ಲ. ಏನು ತಯಾರಿ ಮಾಡಿದ್ದೀ?” ಎಂದಳು.
“ನಿಮ್ಮನ್ನು ಕೇಳಲೆಂದು ಬರುತ್ತಿದ್ದೆ, ಅಪ್ಪ ಬೇಡ ನಿಮ್ಮಮ್ಮ ರಾತ್ರಿ ನಿದ್ರೆ ಮಾಡಿದ ಹಾಗಿಲ್ಲ. ಈಗ ಮಲಗಿದಂತಿದೆ. ನಿಮಗೇನು ತೋಚುತ್ತದೋ ಅದನ್ನೇಮಾಡಿ ಎಬ್ಬಿಸಬೇಡಿ ಎಂದು ತಡೆದುಬಿಟ್ಟರು” ಅದಕ್ಕೆ ಹಿತ್ತಲಿಗೆ ಹೋಗಿ ತಡಕಾಡಿದೆ. ಅಲ್ಲಿ ಸೌತೇಕಾಯಿ, ಟೊಮ್ಯಾಟೋ ಅಷ್ಟೇ ಸಿಕ್ಕಿದ್ದು. ಸೌತೇಕಾಯಿ ಪಚ್ಚಡಿ, ತಿಳಿಸಾರು, ಹೆಸರುಬೇಳೆ ತೊವ್ವೆ, ಅನ್ನ ಮಾಡಿದ್ದೇನೆ. ಮೊಸರಿಗೆ ಒಗ್ಗರಣೆ ಕೊಟ್ಟಿದ್ದೇನೆ. ಮಜ್ಜಿಗೆ ಹದಮಾಡಿದ್ದೇನೆ. ಹಪ್ಪಳಸುಟ್ಟಿದ್ದೇನೆ. ಸರಿಯಾ?” ಎಂದು ಪ್ರಶ್ನಿಸಿದಳು ಬಾಗ್ಯ.
“ಭಲೇ ಮಗಳೇ, ಬುದ್ಧಿ ಉಪಯೋಗಿಸಿ ಇಷ್ಟು ಮಾಡಿದ್ದೀಯಲ್ಲ ಸಾಕು. ಹೋಗು ಕೈಕಾಲುಮುಖ ತೊಳೆದುಕೊಂಡು ಹಣೆಗೆ ಕುಂಕುಮದ ಬೊಟ್ಟಿಟ್ಟುಕೋ. ಸೆಖೆಯಿಂದ ಕಲಸಿಕೊಂಡಂತಾಗಿದೆ. ಅಪ್ಪನೂ ಬರಲಿ ಎಲ್ಲರೂ ಒಟ್ಟಿಗೆ ಊಟಕ್ಕೆ ಕೂರುವಿರಂತೆ. ಭಾವನಾ ಎಲ್ಲಿಹೋದಳು? ನಿನಗೆ ಸಹಾಯ ಮಾಡುತ್ತೇನೆಂದು ಬಂದಳು” ಎಂದು ಕೇಳಿದಳು ಲಕ್ಷ್ಮಿ.
“ಹೌದು ಬಂದಿದ್ದಳು, ನಾನು ಹೇಳಿದ್ದನ್ನು ಮಾಡಿಕೊಟ್ಟು ಬಟ್ಟೆ ತೊಳೆಯಲು ಹೋಗಿದ್ದಾಳೆ”ಎಂದು ಹೇಳಿದಳು.
ಅಡುಗೆ ಮನೆಯ ಕಿಟಕಿಯಿಂದಲೇ ಹಣಿಕಿ ಹಾಕಿದ ಲಕ್ಷ್ಮಿಗೆ ಭಾವನಾ ಬಟ್ಟೆ ಮಡಿಮಾಡಿ ಚಿಕ್ಕ ತಂಗಿಯರೊಡಗೂಡಿ ಒಣಗಲು ಹರವಿ ಹಾಕುತ್ತಿದ್ದರು. “ಅಮ್ಮಾ ಹಿಡಿ ನಿಮ್ಮ ಕಷಾಯ” ಎಂದು ಲೋಟವೊಂದನ್ನು ಮುಂದೆ ಹಿಡಿದಳು ಭಾಗ್ಯ.
ಮನೆಯಲ್ಲಿ ಹಿರಿಯರಿದ್ದಾಗ ಬೆಳಗ್ಗೆ ಕಾಫಿ ಮಾಡುವ ರೂಢಿಯಿತ್ತು. ಆನಂತರ ಲಕ್ಷ್ಮಿಯ ಕೈಗೆ ಯಜಮಾನಿಕೆ ಬಂದ ಲಾಗಾಯ್ತು ಕಾಫಿಗೆ ಚುಟ್ಟಿ ಕೊಟ್ಟಾಗಿತ್ತು. ಒಣಗಿದ ಶುಂಠಿ, ಜೀರಿಗೆ, ಅಜವಾನ, ಮೆಂತ್ಯಗಳನ್ನು ಚೆನ್ನಾಗಿ ಹುರಿದು ಪುಡಿಮಾಡಿ ಒಂದು ಡಬ್ಬದಲ್ಲಿ ತುಂಬಿಡುತ್ತಿದ್ದರು. ಬೆಳಗ್ಗೆ ಒಂದುಲೋಟ ಬಿಸಿನೀರಿಗೆ ಕಾಲುಚಮಚ ಪುಡಿ ಹಾಕಿ ಬೆರೆಸಿ ಕುಡಿಯುವ ಅಬ್ಯಾಸ ಮಾಡಿಸಿದ್ದಳು ಲಕ್ಷ್ಮಿ. ಭಟ್ಟರಿಗೂ ಕಾಫಿಯ ಚಟವೇನೂ ಇರಲಿಲ್ಲ. ಆದ್ದರಿಂದ ಅವರೂ ಕಷಾಯವನ್ನೇ ಕುಡಿಯುತ್ತಿದ್ದರು. ಮಕ್ಕಳಿಗೆ ಹಾಲು, ಅವರಾಗಿಯೇ ಇಷ್ಟಪಟ್ಟರೆ ಕಷಾಯ. ಎಲ್ಲಿಯಾದರೂ ಹೋದರೆ ಅನಿವಾರ್ಯ ಎನಿಸಿದಾಗ ಅಥವಾ ಯಾರಾದರೂ ಅತಿಥಿಗಳು ಮನೆಗೆ ಬಂದಾಗ ಅವರಿಗೆ ಕಾಫಿ ಮಾಡಿಕೊಡುವ, ಕುಡಿಯುವ ಪರಿಪಾಠವಾಯ್ತು.
ಕಷಾಯ ಕುಡಿದು ಮುಗಿಸಿ ಲೋಟವನ್ನು ಬಚ್ಚಲಿಗೆ ಹಾಕಿದ ಲಕ್ಷ್ಮಿ ಕೈತೊಳೆದುಕೊಂಡು ಊಟದ ಮನೆಯಲ್ಲಿ ಎಲ್ಲರೂ ಕೂಡುವ ಹಾಗೆ ಸ್ಥಳ ಸಿದ್ಧಪಡಿಸಿದಳು. ಭಟ್ಟರು ಅಂಗಡಿಯ ಬಾಗಿಲು ಮುಚ್ಚಿ ಮನೆಯೊಳಕ್ಕೆ ಬರುತ್ತಿದ್ದುದನ್ನು ಕಂಡು ಲಕ್ಷ್ಮಿ ಎಲ್ಲರನ್ನೂ ಊಟಕ್ಕೆ ಬನ್ನಿರೆಂದು ಕರೆದಳು. ಕೈಕಾಲು ತೊಳೆದುಕೊಂಡು ಭಟ್ಟರು ಊಟದ ಮನೆಗೆ ಅಡಿಯಿಟ್ಟರು. ಸಾಲಾಗಿ ಕುಳಿತ ಮಕ್ಕಳನ್ನು ನೋಡುತ್ತಾ ತಮಗಾಗಿ ಸಿದ್ಧಪಡಿಸಿದ್ದ ಜಾಗದಲ್ಲಿ ಕುಳಿತರು. ತಟ್ಟೆಗೆ ಬಡಿಸಿದ ಪದಾರ್ಥಗಳನ್ನು ಗಮನಿಸಿದ ಭಟ್ಟರು ಪರಿಶೇಚನೆ ಮಾಡುತ್ತಾ “ಏನು ಮಗಳೇ ತರಕಾರಿ ಇಲ್ಲದ ಅಡುಗೆ ಇದ್ದ ಹಾಗಿದೆ” ಎಂದರು.
“ಹೂ ಅಪ್ಪಾ, ಆದರೆ ಊಟಮಾಡಿ ಹೇಗಾಗಿದೆ ಹೇಳಿ. ಅಕ್ಕ ಬುದ್ಧಿ ಉಪಯೋಗಿಸಿ ತಯಾರು ಮಾಡಿದ್ದಾಳೆ. ನಾನು ಸಹಾಯ ಮಾಡಿದ್ದೇನೆ” ಎಂದಳು ಭಾವನಾ. ಭಟ್ಟರು ನಸುನಗುತ್ತಾ ಹೆಂಡತಿಯ ಕಡೆ ನೋಡಿದರು. ‘ಹೌದುರೀ, ಇವೆಲ್ಲ ಅವಾಂತರಗಳು ನನ್ನಿಂದಲೇ ಆಗಿದೆ. ನೆನ್ನೆ ಸಂಜೆ ಯಾವುದೋ ಜ್ಞಾನದಲ್ಲಿ ತರಕಾರಿ ತರಿಸುವುದನ್ನು ಮರೆತೆ. ರಾತ್ರಿ ಊಟಮಾಡಿದಮೇಲೆ ತುಂಬ ಹೊತ್ತಾಗಿದೆಯೆಂದು ಬೆಳಗ್ಗೆ ನೋಡೋಣವೆಂದು ಮಲಗಿಬಿಟ್ಟೆ. ಎದ್ದದ್ದೇ ತಡವಾಗಿ. ಹೀಗೆಲ್ಲ ಆಯಿತು.” ಎಂದು ವಿವರಣೆ ನೀಡಿದಳು ಲಕ್ಷ್ಮಿ.
“ಇರಲಿ ಬಿಡು ಸುಮ್ಮನೆ ಗಮ್ಮತ್ತು ಮಾಡಿದೆ. ಮಕ್ಕಳೇನೋ ನಿನ್ನ ಎಬ್ಬಿಸಿ ಕೇಳಲೆಂದು ಬರುತ್ತಿದ್ದುದನ್ನು ನಾನೇ ತಡೆದು ಏನಿದೆಯೋ ಅದರಲ್ಲೇ ಮಾಡಿ ಎಂದುಹೇಳಿದ್ದೆ.” ಎಂದರು. ಅಷ್ಟಕ್ಕೇ ಸುಮ್ಮನಾಗದೇ ಪ್ರತಿ ತುತ್ತು ಬಾಯಿಗಿಟ್ಟಾಗಲೂ ಭೇಷ್..ಅಮೃತ..ಎನ್ನುತ್ತಾ ಬಾಯಿ ಚಪ್ಪರಿಸುತ್ತಿದ್ದರು. “ಅಂತೂ ಅಮ್ಮನ ಗರಡಿಯಲ್ಲಿ ಚೆನ್ನಾಗಿ ಪಳಗಿದ್ದೀಯೆ ಮಗಳೇ. ನೀನು ಮದುವೆಯಾಗಿ ಹೋದ ಮನೆಯವರು ಪುಣ್ಯಮಾಡಿದ್ದಾರೆ. ಏನಿರುತ್ತೋ ಅದರಲ್ಲಿ ನಳಪಾಕ ಮಾಡಿ ಬಡಿಸುತ್ತೀಯೆ.” ಎಂದು ಮನಃಪೂರ್ವಕವಾಗಿ ಅಡುಗೆಯನ್ನು ಹೊಗಳಿದರು.
“ಹಾ..ಹಾ.. ಭಟ್ಟರೇ, ನಿಲ್ಲಿಸುತ್ತೀರಾ ನಿಮ್ಮ ತಾರೀಫನ್ನು. ನಮ್ಮಲ್ಲಿ ಮದುವೆಯಾಗಿ ಹೋದ ಮನೆಯಲ್ಲಿ ಹಿರಿಯರ್‍ಯಾರಾದರೂ ಇದ್ದರೆ ಅವರುಗಳು ತಮ್ಮನ್ನು ‘ಒಲೆಗೇ ದಾರೆ ಎರೆದುಕೊಟ್ಟಿದ್ದಾರೆಂಬಂತೆ ಆಡುತ್ತಾರೆ. ಅವರುಗಳಿಗೇನಾದರೂ ಸ್ವಾಸ್ತ್ಯವಿಲ್ಲದಿದ್ದರೆ , ಇಲ್ಲವೇ ಹೊರಗೆ ಕುಳಿತ ದಿನಗಳಲ್ಲಿ , ಇನ್ಯಾರೂ ಹಿರಿಯರಿಲ್ಲದಿದ್ದರೆ ಮಾತ್ರ ಅಡುಗೆಮನೆ ಛಾರ್ಜು ಚಿಕ್ಕವರಿಗೆ. ನಾನು ಈ ಮನೆಗೆ ಬಂದಾಗಲೂ ಈಮನೆಯಲ್ಲಿ ನಿಮ್ಮ ಅಜ್ಜಿ ನಾನೇ ತೊಳೆದಿಟ್ಟ ಪಾತ್ರೆಗಳಿಗೂ ಹುಣಿಸೇಹುಳಿ ಹಾಕಿ ತೊಳೆದು ಇಟ್ಟುಕೊಳ್ಳುತ್ತಿದ್ದರು. ಇನ್ನು ಅಡುಗೆ ಮಾಡೋದಂತೂ ಕನಸೇ ಆಗಿತ್ತು. ಈಗ ನಾನೇ ಯಜಮಾನಿ. ಹಾಗೆಂದು ಅವರಂತೆ ಒಲೆಗೇ ಅಂಟಿಕೊಂಡು ಕೂಡದೆ ಮಕ್ಕಳಿಗೂ ಬಿಟ್ಟುಕೊಟ್ಟ್ಟು ಕಲಿಸಿಕೊಡುತ್ತಿರುತ್ತೇನೆ. ಅವರಿಗೆ ಎಲ್ಲವೂ ಗೊತ್ತಿರಬೇಕೆಂಬ ಉದ್ದೇಶದಿಂದಷ್ಟೇ.”ಎಂದಳು ಲಕ್ಷ್ಮಿ.
“ಹೋಗಲಿ ಬಿಡು ಲಕ್ಷ್ಮೀ, ಅದೇನೋ ಹಿರಿಯರು ಮೊದಲಿನಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದರು. ಅವರ ರೂಢಿಯ ಪದ್ಧತಿ. ಈಗ ನಮ್ಮ ಮನೆಯಲ್ಲೇ ಎಷ್ಟೋ ಬದಲಾವಣೆಗಳನ್ನು ತಂದಿದ್ದೇವಲ್ಲ. ನಮ್ಮ ಮಕ್ಕಳ ಕಾಲಕ್ಕೆ ಇನ್ನೂ ಹೆಚ್ಚಿನ ಬದಲಾವಣೆಗಳಾಗಬಹುದು. ‘ಕಾಲಾಯ ತಸ್ಮೈ ನಮಃ’. ಒಟ್ಟಿನಲ್ಲಿ ನನ್ನ ಮಗಳು ಜಾಣೆ. ಬದುಕು ನಡೆಸಬಲ್ಲಳು.”ಎಂದು ಹೇಳುತ್ತಾ ಊಟ ಮುಗಿಸಿ ಆಪೋಷನ ತೆಗೆದುಕೊಂಡು ಮೇಲಕ್ಕೆದ್ದರು ಭಟ್ಟರು.
ಹೆತ್ತವರ ಮಾತುಕತೆ ಕೇಳುತ್ತಾ ಊಟ ಮುಗಿಸಿದ್ದ ಮಕ್ಕಳೂ ಅಪ್ಪ ಏಳುತ್ತಲೇ ತಾವೂ ಎದ್ದು ತಟ್ಟೆಗಳನ್ನು ತೆಗೆದು ತೊಳೆದಿಟ್ಟು, ಊಟಮಾಡಿದ ಸ್ಥಳವನ್ನು ಗೋಮಯಮಾಡಿ ಹೊರನಡೆದರು. ಹಿರಿಯಳಾದ ಭಾಗ್ಯ ತಾಯಿಯ ಊಟಕ್ಕೆ ಅಣಿಮಾಡಿದಳು. ಊಟ ಮುಗಿಸಿದ ಲಕ್ಷ್ಮಿಗೂ ಗಂಡ ಹೇಳಿದ ಮಾತುಗಳಲ್ಲಿ ಅತಿಶಯವಿಲ್ಲವೆನ್ನಿಸಿತು. ನಿಜಕ್ಕೂ ಅಳತೆಗೆ ತಕ್ಕಂತೆ ಉಪ್ಪು, ಹುಳಿ , ಖಾರ ಹದವಾಗಿ ಬೆರೆತಿತ್ತು. ಮೊಸರು ಒಗ್ಗರಣೆಯ ಘಮಲು, ಬೆರೆಸಿದ್ದ ಮಜ್ಜಿಗೆ, ನೆಂಚಿಕೊಳ್ಳಲು ಸೌತೆಕಾಯಿಯ ಪಚ್ಚಡಿ, ಹಪ್ಪಳ ರುಚಿಯಾಗಿದ್ದವು. “ಅಡುಗೆ ಚೆನ್ನಾಗಿ ಮಾಡಿದ್ದೀ ಭಾಗ್ಯ” ಎಂದು ಹೇಳಿ ಅವಳ ತಲೆ ಸವರಿದಳು. ಹಾಗೇ ಮಧ್ಯಾನ್ಹ ಕೇಶುಮಾಮನ ಮನೆಗೆ ಹೋಗುವ ವಿಷಯವನ್ನು ಮತ್ತೊಮ್ಮೆ ಜ್ಞಾಪಿಸಿ ಹೊರಬಂದಳು ಲಕ್ಷ್ಮಿ.
ದಂಪತಿಗಳಿಬ್ಬರೂ ಅಲ್ಲಿಗೆ ಹೋದಾಗ ಅವರುಗಳ ಸಮ್ಮುಖದಲ್ಲಿ ಏನೇನು ಮಾತನಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿದ್ದರಿಂದ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಜೋಯಿಸರ ಮನೆಗೆ ತೆಗೆದುಕೊಂಡು ಹೋಗುವ ಫಲತಾಂಬೂಲಗಳನ್ನು ಒಂದು ಚೀಲದಲ್ಲಿ ಹಾಕಿಟ್ಟು ತಾವುಗಳು ಬಟ್ಟೆ ಬದಲಾಯಿಸಿಕೊಂಡು ಸಿದ್ಧರಾದರು. ಇತ್ತ ಮಕ್ಕಳೂ ಕೇಶುಮಾಮನವರ ಮನೆಯಲ್ಲಿ ಹೆತ್ತವರು ಹಿಂದಿರುಗಿ ಬರುವ ತನಕ ಏನೇನು ಆಟಗಳನ್ನು ಆಡಬಹುದು, ಅವರ ಮನೆಯಲ್ಲಿರುವ ಗೆಳತಿ ಶಾಂತಾಳ ಹತ್ತಿರ ಯಾವ ಆಟದ ಸಾಮಾನುಗಳಿವೆ, ನಾವು ಇಲ್ಲಿಂದ ಯಾವುವನ್ನು ತೆಗೆದುಕೊಂಡು ಹೋಗಬೇಕೆಂದು ಪಟ್ಟಿಮಾಡಿ ಅವುಗಳನ್ನು ಬ್ಯಾಗಿಗೆ ಹಾಕಿಕೊಂಡು ಸಿದ್ಧರಾದರು. ಎಲ್ಲರೂ ಜೊತೆಯಾಗಿ ಕೇಶವಯ್ಯನವರ ಮನೆ ತಲುಪಿದರು.
ಮನೆಯ ಬಾಗಿಲನ್ನು ತೆರೆದ ಸುಬ್ಬಣ್ಣ “ಭಾಗ್ಯಮ್ಮನ ಮದುವೆಯಾಗುವವರೆಗೂ ನಮ್ಮ ನಿಮ್ಮ ಮನೆಗೆ ಉಡುಕೆ ನಡೀತಿರುತ್ತೆ. ಒಂದು ರೀತಿ ಖುಷಿಕೊಡುತ್ತಿದೆ ಬನ್ನಿ ಭಟ್ಟರೇ, ಲಕ್ಷ್ಮಮ್ಮ” ಎಂದು ಸ್ವಾಗತಿಸಿದ. ಸದ್ದು ಕೇಳಿ ಓಡಿಬಂದಿದ್ದ ಶಾಂತಾ “ಅಣ್ಣಾ ನೀನೇನು ಹೇಳಿದ್ದು ಅರ್ಥವಾಗಲಿಲ್ಲ” ಎಂದು ಕೇಳಿದಳು.
“ಹೇ..ನೀನು ಮಹಾ ಬುದ್ಧಿವಂತೆ ಅಂತ ಜಂಬಪಡುತ್ತೀ, ಇಷ್ಟು ಗೊತ್ತಾಗಲಿಲ್ಲವೇ? ನಮ್ಮ ಮನೆಗೆ ಅವರು, ಅವರ ಮನೆಗೆ ನಾವು ಹೋಗೋದು ಬರೋದೂ, ಅದಕ್ಕೆ ಉಡುಕೆ ಎನ್ನುತ್ತಾರೆ” ಎಂದ ಸುಬ್ಬು. ಅವನ ಮಾತುಗಳನ್ನು ಕೇಳಿಸಿಕೊಂಡ ರಾಧಮ್ಮ “ತಲೆ ಹರಟೆ, ಹೋಗೋ ಒಳಕ್ಕೆ” ಎಂದು ಮಗನನ್ನು ಗದರಿಸುತ್ತಾ “ಬನ್ನಿ ಭಟ್ಟರೇ, ಲಕ್ಷ್ಮೀ, ಮಕ್ಕಳೇ” ಎಂದು ಮತ್ತೊಮ್ಮೆ ಒಳಕ್ಕೆ ಕರೆದರು. ಭಾಗ್ಯ ತನ್ನ ಸೋದರಿಯರೊಡಗೂಡಿ ಶಾಂತಳ ಕೋಣೆಗೆ ಹೋದಳು. ಭಟ್ಟರು ಲಕ್ಷ್ಮಿಗೆ ಕುಳಿತುಕೊಳ್ಳಲು ಹೇಳಿದರು.
“ಕೇಶವಣ್ಣಾ ನಾವುಗಳು ಬಸ್ಸೇ, ಅಥವಾ ರಿಕ್ಷಾ ಹಿಡಿದು ಹೋಗಬೇಕಾಗುತ್ತಲ್ಲಾ, ಬೇಗ ಮನೆ ಬಿಟ್ಟರೆ ಒಳ್ಳೆಯದಲ್ಲವೇ?” ಎಂದು ಕೇಳಿದಳು ಲಕ್ಷ್ಮಿ.
“ಅದರ ಯೋಚನೆ ಬೇಡ ಲಕ್ಷ್ಮೀ, ಜೋಯಿಸರನ್ನು ಕರೆತಂದಿದ್ದನಲ್ಲ ಅವರ ಶಿಷ್ಯ ನಂಜುಂಡ ಅವನನ್ನೇ ಕಳುಹಿಸುತ್ತಾರಂತೆ. ಆತ ಕಾರು ತೆಗೆದುಕೊಂಡು ಬರುತ್ತಾನೆ. ಬೆಳಗ್ಗೆ ಇವರು ದೇವಸ್ಥಾನಕ್ಕೆ ಹೋಗಿದ್ದಾಗ ಅವರು ಹೇಳಿದರಂತೆ. ಹೇಗಿದ್ದರೂ ನಮ್ಮ ಮನೆಯಿಂದಲೇ ಹೊರಡುವುದಲ್ಲವಾ ಅಂತ ನಾನು ಮಕ್ಕಳ ಹತ್ತಿರ ಹೇಳಿಕಳುಹಿಸಲಿಲ್ಲ. ನೀವೇನಾದರೂ ಹಾಗೇ ಹೋಗುವುದಾಗಿದ್ದರೆ ಸುಬ್ಬು ಹತ್ತಿರ ಹೇಳಿಕಳುಹಿಸುತ್ತಿದ್ದೆ” ಎಂದರು ರಾಧಮ್ಮ.
“ಓ ಹೌದೇ ರಾಧಕ್ಕಾ, ಅವರಿಗೆ ತೊಂದರೆ ಯಾಕೇಂತ” ಅಂದರು ಭಟ್ಟರು.
“ನೀವು ಸುಮ್ಮನಿರಿ ಭಟ್ಟರೇ, ನೀವೇನು ಕೇಳಿದ್ದಿರಾ? ಅವರಾಗಿಯೇ ಹೇಳಿರುವಾಗ ಏನು ತೊಂದರೆ.” ಎಂದು ಹೇಳುತ್ತಾ ತಮ್ಮ ಕೋಣೆಯಿಂದ ಹೊರಬಂದರು ಕೇಶವಯ್ಯ. ಅಲ್ಲಿಯೇ ಇದ್ದ ಕುರ್ಚಿಯಮೇಲೆ ಕುಳಿತರು.
“ಅಂದಹಾಗೆ ಅಲ್ಲಿಗೆ ಹೋಗುವ ಮೊದಲು ಒಂದು ಮಾತಿದೆ ನಿಮಗೆ ತಿಳಿಸಲೇಬೇಕು” ಎಂದರು.
“ಏನು ಕೇಶವಣ್ಣಾ ಹೇಳಿ” ಎಂದಳು ಲಕ್ಷ್ಮಿ. ಮದುವೆ ಮಾಡಿಕೊಡುವ ನಿಮ್ಮ ಸಾಧ್ಯಾನುಸಾಧ್ಯತೆಯ ಬಗ್ಗೆ ಸ್ಪಷ್ಟವಾಗಿ ನಿಮ್ಮ ಅಭಿಪ್ರಾಯವನ್ನು ಅವರಿಗೆ ತಿಳಿಸಿದ್ದೇನೆ. ಆಗ ಅವರು ತೀರಾ ಕಷ್ಟಪಡುವುದುಬೇಡ, ಅವರೇನೂ ತಿಳಿದುಕೊಳ್ಳದಿದ್ರೆ ಬಂಧುಬಳಗದವರೊಂದಿಗೆ ಬಂದು ಕನ್ಯಾದಾನ ಮಾಡಿಕೊಡಲಿ. ಮದುವೆಯ ಎಲ್ಲ ಜವಾಬ್ದಾರಿಯನ್ನೂ ನಾವೇ ವಹಿಸಿಕೊಳ್ಳುತ್ತೇವೆ. ಕೇಳಿನೋಡಿ ಎಂದರು. ನೀವೇನು ಹೇಳುತ್ತೀರಾ?” ಎಂದು ಕೇಳಿದರು ಕೇಶವಯ್ಯ.
“ಅಣ್ಣಾ ಸ್ವಪ್ರತಿಷ್ಠೆಯ ಹೆಣ್ಣುಮಗಳೆಂದು ತಪ್ಪು ಭಾವಿಸಬೇಡಿ, ನಾವು ಮೊದಲು ಏನು ತೀರ್ಮಾನ ತೆಗೆದುಕೊಂಡಿದ್ದೆವೋ ಅದೇ ಆಗಲಿ. ಸರಳವಾಗಿ ಶಾಸ್ತ್ರೋಕ್ತವಾಗಿ ವರೋಪಚಾರ ಮಾಡಿ ಹೆಣ್ಣನ್ನು ಮನೆತುಂಬಿಸಿ ಕೊಡುವುದು. ಏಕೆಂದರೆ ಮುಂದೆ ಈ ವಿಷಯದಲ್ಲಿ ನನ್ನ ಮಗಳಿಗೆ ಒಂದು ಮಾತು ಬರಬಾರದು” ಎಂದು ಕಳಕಳಿಯಿಂದ ಹೇಳಿದಳು ಲಕ್ಷ್ಮಿ. ಭಟ್ಟರು ಹೆಂಡತಿಯ ಮಾತನ್ನು ಅನುಮೋದಿಸಿದರು.
ಇಬ್ಬರ ಮಾತುಗಳನ್ನೂ ಕೇಳಿದ ಕೇಶವಯ್ಯ ಹೆಂಡತಿಯ ಕಡೆ ನೋಡುತ್ತಾ “ನೋಡಿದೆಯಾ ರಾಧಾ ಲಕ್ಷ್ಮಮ್ಮನ ಮುಂದಾಲೋಚನೆ, ಆಯಿತು ಇಲ್ಲೇ ಮಾತನಾಡಿಕೊಂಡು ಹೊಗಬೇಕೆಂದೇ ಕೇಳಿದ್ದು. ಇದನ್ನೇ ಅಲ್ಲಿ ಕೂಡ ಧೈರ್ಯವಾಗಿ ಹೇಳಿ” ಎಂದರು.
ಅಷ್ಟರಲ್ಲಿ ಮುಂಭಾಗಿಲನ್ನು ತಟ್ಟುವ ಸದ್ದು ಕೇಳಿಸಿತು. “ಸುಬ್ಬೂ ಸ್ವಲ್ಪ ನೋಡಪ್ಪಾ, ಯಾರಾದರೂ ನನ್ನನ್ನು ಕೇಳಿಕೊಂಡು ಬಂದಿದ್ದರೆ ಅಪ್ಪಯ್ಯ ಯಾವುದೋ ಜರೂರು ಕೆಲಸಕ್ಕೆಂದು ಹೊರಗೆ ಹೋಗಿದ್ದಾರೆ, ಬೆಳಗ್ಗೆ ಬನ್ನಿ ಎಂದು ಹೇಳು. ತೀರಾ ಅರ್ಜೆಂಟಿದ್ದರೆ ಸಂಜೆ ಏಳುಗಂಟೆಗೆ ಬರಲು ತಿಳಿಸು” ಎಂದರು ಕೇಶವಯ್ಯ.
ಬಾಗಿಲ ಹತ್ತಿರ ಹೋದವನೇ ಪಕ್ಕದಲ್ಲಿರುವ ಕಿಂಡಿಯಲ್ಲಿ ನೋಡಿ ಹಿಂತಿರುಗಿ ಬಂದು “ಅಪ್ಪಯ್ಯಾ ಜೋಯಿಸರ ಮನೆಯವರು ಕಳುಹಿಸುತ್ತೇನೆಂದು ಹೇಳಿದ್ದರಲ್ಲ, ಆದಿನ ನಮ್ಮ ಮನೆಗೆ ಬಂದಿದ್ದರಲ್ಲ ಅವರು ಬಂದಿದ್ದಾರೆ” ಎಂದು ತಗ್ಗಿದ ಧ್ವನಿಯಲ್ಲಿ ಹೇಳಿದನು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=34978
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಹಳೆಯ ಸಂಸ್ಕೃತಿ, ಪದ್ದತಿ ಗಳ ಪರಿಚಯ ಮಾಡಿಸುತ್ತ ಸಾಗುತ್ತಿರುವ ಕಾದಂಬರಿ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ನಯನ ಮೇಡಂ
ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನ್ನ ಚಿಕ್ಕ ವಯಸ್ಸಿನಲ್ಲಿಯ ಅನೇಕ ಪ್ರಸಂಗಗಳು ಕಣ್ಮುಂದೆ ಬಂದಂತಾಯಿತು, ಬ್ರಾಹ್ಮಣರ ಸಂಪ್ರದಾಯ ಚೆನ್ನಾಗಿ ಬಿಂಬಿಸುತ್ತದೆ, ನಿಜಕ್ಕೂ ಆ 3 ದಿನ ಮಹಿಳೆಗೆ ಕಷ್ಟವೇ…. ತುಂಬಾ ಚೆನ್ನಾಗಿ ಓದಿಸಿಕೊಂಡಿತು.
ನಮ್ಮ ಬಾಲ್ಯದ ಕಾಲದ ವಾತಾವರಣ, ಸಂಸ್ಕೃತಿ, ಅಡುಗೆ -ಆತಿಥ್ಯ ಇತ್ಯಾದಿ ನೆನಪಿಸುತ್ತಾ ಕಾದಂಬರಿಯು ಸೊಗಸಾಗಿ ಮೂಡಿ ಬರುತ್ತಿದೆ.
ಒಂದು ರೀತಿಯ ಆತಂಕ ಇಲ್ಲದ ಕಥೆ.ಈಗಿನ ಕಾಲಕ್ಕೆ ರಿಲಾಕ್ಸ್ ಆಗಲು ಚೆನ್ನಾಗಿದೆ.
ಸುಂದರ ವರ್ಣನೆಯೊಂದಿಗೆ ಚಂದದ ಕಥಾ ಸರಣಿ ಓದುವ ಮುದ ನೀಡುತ್ತಿದೆ.
ಧನ್ಯವಾದಗಳು ಸುಧಾ ಮೇಡಂ
ಧನ್ಯವಾದಗಳು ಭಾರತಿ,ಹೇಮಾ,ಪದ್ಮಾ ರವರುಗಳಿಗೆ
ನಮ್ಮ ಚಿಕ್ಕಂದಿನ ದಿನಗಳನ್ನು ನೆನಪಿಸುತ್ತಾ ಸಾಗುತ್ತಿರುವ ಕಥೆಯು ಬಹಳ ಅಪ್ಯಾಯಮಾನವಾಗಿದೆ…ಧನ್ಯವಾದಗಳು ನಾಗರತ್ನಾ ಮೇಡಂ ಅವರಿಗೆ.
ಧನ್ಯವಾದಗಳು ಶಂಕರಿ ಮೇಡಂ