ನಾಮಕರಣ
ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್ ಮಾಡುತ್ತೇವೆ, ನೀವೆಲ್ಲರೂ ನೋಡಬಹುದುʼ – ಎಂದಾಗಲೇ.
ಜಾಸ್ತಿ ಜನ ನರ್ಸಿಂಗ್ ಹೋಮಿನಲ್ಲಿ ತುಂಬಿಕೊಳ್ಳುವುದು ಬೇಡ ಎಂದು ಮೊದಲೇ ನಿಶ್ಚಯಿಸಿಕೊಂಡಿದ್ದರಿಂದ, ಅಲ್ಲಿ ಬೀಗಿತ್ತಿಯರಾದ ಯಶೋಧಾ ಮತ್ತು ರಾಜೇಶ್ವರಿ ಮತ್ತು ಅಳಿಯ ವೆಂಕಟೇಶ್ ಮಾತ್ರ ಇದ್ದರು. ಯಶೋಧಾ ಅಳಿಯ ಮತ್ತು ರಾಜೇಶ್ವರಿಯವರಿಗೆ ಬಾಯಲ್ಲಿ ಶುಭಾಶಯ ಕೋರುತ್ತಿದ್ದರೂ, ಮನದಲ್ಲಿ, ನನ್ನ ಮಗಳು ಎಷ್ಟು ನೋವು ತಿಂದಳೋ, ಈಗ ಹೇಗಿದ್ದಾಳೋ, ಅವಳ ಮುಖ ನೋಡುವ ತನಕ ಮನಸ್ಸು ಸಮಾಧಾನವಾಗದು ಎಂದುಕೊಳ್ಳುತ್ತಿದ್ದಳು. ಅವರುಗಳೂ ಯಶೋಧಾಳನ್ನು ಅಜ್ಜಿಯಾದುದಕ್ಕೆ ಅಭಿನಂದಿಸಿದರು.
ವೆಂಕಟೇಶ್ ಆಗಲೇ, ಆಸ್ಪತ್ರೆಯ ರೆಸಿಪ್ಷನ್ನಿನಲ್ಲಿ, ʼಏನಾದರೂ ಕೆಲಸವಿದ್ದರೆ ಹೇಳಿ, ಇಲ್ಲೇ ಕಾಯುತ್ತಿರುತ್ತೇನೆ, – ಎಂದು ಹೇಳಿ ಕಾಯುತ್ತಿದ್ದ, ಪ್ರೀತಿಯ ಮೈದುನ ಸಂತೋಷ, ಮನೆಯಲ್ಲಿ ಕುಳಿತು ಸುಖ ಪ್ರಸವವಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದ ತಂದೆಗೆ, ಟ್ರಾನ್ಸಫರಬಲ್ ಜಾಬ್ ನಿಂದಾಗಿ ದೂರದ ಮೈಸೂರಿನಿಂದೀಗಾಗಲೇ ಹೊರಟು ಬರುತ್ತಿದ್ದ ಮಾವನವರಿಗೆ, ಇನ್ನೂ ಮುಂತಾದವರುಗಳಿಗೆ ಫೋನ್ ಮಾಡಿ ವಿಷಯ ತಿಳಿಸುವ ಹುಮ್ಮಸ್ಸಿನಲ್ಲಿದ್ದರು.
ಮೆತ್ತಗಿದ ಹತ್ತಿಯ ಬಟ್ಟೆಯಲ್ಲಿ ಸುತ್ತಿದ ಮುದ್ದಾದ ಮಗುವನ್ನು ಕೈಯಲ್ಲಿ ಹಿಡಿದು ಮುಚ್ಚಿದ ಬಾಗಿಲಿನಿಂದ ಹೊರ ಬಂದ ನರ್ಸ್ – ನೋಡಿ, ನಿಮ್ಮ ಮನೆಯ ರಾಜಕುಮಾರಿಯನ್ನು, ನಡೆಯಿರಿ, ಎಲ್ಲರೂ ವಾರ್ಡ್ ನಂ.೮ಕ್ಕೆ, ಈಗ ಬಾಣಂತಿ ಸನ್ಮತಿಯನ್ನೂ ಅಲ್ಲಿಗೆ ಶಿಫ್ಟ್ ಮಾಡುತ್ತೇವೆ – ಎನ್ನುತ್ತಾ ವಾರ್ಡ್ ನಂ.೮ರ ಕಡೆ ನಡೆದಳು. ಅಷ್ಟರಲ್ಲಾಗಲೇ ಫೇಡಾ ಡಬ್ಬ ಹಿಡಿದು ಮೇಲೆ ಬಂದಿದ್ದ ಸಂತೋಷ, ನರ್ಸ್ ಆದಿಯಾಗಿ ಎಲ್ಲರಿಗೂ ಸಿಹಿ ಹಂಚತೊಡಗಿದನು.
ರಾಜೇಶ್ವರಿ, ವೆಂಕಟೇಶ ಮಗುವಿನ ಹಿಂದೆಯೇ ವಾರ್ಡ್ ಕಡೆಗೆ ನಡೆದರು. ಯಶೋಧಾ ಗಮನ ಲೇಬರ್ ವಾರ್ಡ್ ಕಡೆಗೇ ಇತ್ತು. ಮುಚ್ಚಿದ ಬಾಗಿಲು ತೆರೆಯಿತು. ಸನ್ಮತಿ ಮಲಗಿದ್ದ ಸ್ರ್ಟೆಚರ್ ಅನ್ನು ತಳ್ಳಿಕೊಂಡು ಹೊರಬಂದ ಆಸ್ಪತ್ರೆಯ ಸಿಬ್ಬಂದಿ ವಾರ್ಡ್ ನಂ.೮ರ ಕಡೆಗೆ ನಡೆದರು. ಮಗಳ ಮುಖ ನೋಡಿದ ಯಶೋಧಳಿಗೆ ಸಮಾಧಾನವಾದಂತೆನಿಸಿತು. ಸ್ರ್ಟೆಚರ್ ನೊಂದಿಗೇ ನಡೆಯುತ್ತಾ, ನಡೆಯುತ್ತಾ, ಕಕ್ಕುಲಾತಿಯಿಂದ ಕೇಳಿದಳು – ʼಹೇಗಿದ್ದೀಯಾ ಮಗಳೇ, ತುಂಬಾ ಕಷ್ಟ ಆಯಿತಾ? ದೇವರ ದಯೆ, ಗೆದ್ದಿ ಬಿಡು.ʼ – ಎಂದಳು. ಅಮ್ಮನ ದುಗುಡ ತುಂಬಿದ ಅಂತಃಕರಣಪೂರಿತ ಮಾತುಗಳನ್ನು ಕೇಳಿದ ಸನ್ಮತಿ -ʼನಾನು ಹುಟ್ಟಿದಾಗ ನಿನಗೆ ಎಷ್ಟು ಕಷ್ಟವಾಯಿತೋ ಅಷ್ಟೇ ಕಷ್ಟವಾಯಿತು ನನಗೂ. ನಿನ್ನ ಮುಖ ನೋಡಿದರೆ ನನಗಿಂತಾ ನೀನೇ ಜಾಸ್ತಿ ನೋವು ತಿಂದ ಹಾಗೆ ಕಾಣುತ್ತೆ. ಈಗ ಸ್ವಲ್ಪ ಪರವಾಗಿಲ್ಲ. ಎಲ್ಲಿ, ನನ್ನ ಗಂಡ? ಆಗಲೇ ಮಗಳ ಪಾರ್ಟಿ ಹಿಡಿದು ಬಿಟ್ಟರಾ?ʼ – ಎಂದು ಕೇಳುವಷ್ಟರಲ್ಲಿ ವಾರ್ಡ್ ಬಂದಾಗಿತ್ತು.
ವೆಂಕಟೇಶ – ʼಇಲ್ಲಾ ಮೇಡಂ,, ನೀವೀಗ ನನ್ನ ಮಗಳ ಹೆಮ್ಮೆಯ ತಾಯಿ. ನಿನ್ನ ಸೇವೆಗೆ ನಾನು ಮುಂದಾಗಿ ಬಂದು ಇಲ್ಲಿ ಎಲ್ಲವೂ ಸರಿಯಿದೆಯೇ ಎಂದು ಚೆಕ್ ಮಾಡುತ್ತಿದ್ದೆ. ಹೇಗಿದ್ದೀಯಾ ಸನ್ಮತಿ?ʼ – ಎನ್ನುತ್ತಾ ಅವಳ ಹಣೆಯ ಮೇಲೆ ಕೈಯಿಡಲು, ಸನ್ಮತಿ ತನ್ನ ಕಣ್ಣೋಟದಲ್ಲೇ ಭಾವ ಸಂಬಾಷಣೆಗೆ ತೊಡಗಿದಳು.
ಮುಂದಿನದೆಲ್ಲಾ ಸರಾಗವಾಗಿ ನಡೆದು ನಾಮಕರಣದ ದಿನ ಹತ್ತಿರ ಹತ್ತಿರವಾಗುತಿತ್ತು. ಯಾವ ಹೆಸರಿಡಬೇಕೆಂಬ ಬಗ್ಗೆ ವಿಪರೀತ ಚರ್ಚೆಯಾಗುತಿತ್ತು.
ಮೊದಲಿಗೆ ರಾಜೇಶ್ವರಿ ಹೇಳಿದರು – ನೀವುಗಳು ದಿನಾ ದಿನಾ, ಏನು ಬೇಕಾದರೂ ಕರೆಯಿರಿ, ಆದರೆ ಮನೆಯ ಹಿರಿಯರ ಹಸರಿಡಬೇಕು – ಎಂದರು.
ಅಲ್ಲೇ ಇದ್ದ ಅವರ ಯಜಮಾನರು – ಇಲ್ಲಾ, ಇಲ್ಲಾ, ಮನೆ ದೇವರ ಹೆಸರಿಡಬೇಕು – ಎಂದರು.
ವೆಂಕಟೇಶ್ – ನನ್ನ ಮಗಳಿಗೆ ಮಾರ್ಡನ್ ಹೆಸರೇ ಬೇಕು – ಎಂದನು.
ಸನ್ಮತಿ – ನನ್ನ ಮಗಳ ಹೆಸರು ಕೂಗಲು ಮುದ್ದಾಗಿ, ಇಂಪಾಗಿ ಇರಬೇಕು – ಎಂದಳು.
ಕೊನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಸಂತೋಷ, – ʼನಮ್ಮ ಅಮ್ಮನನ್ನು ಕೇಳಿ, ಎಲ್ಲರನ್ನೂ ಖುಷಿ ಪಡಿಸುವಂತಹ ಏನೋ ಒಂದು ಪರಿಹಾರದ ಶಾಸ್ರ್ತವನ್ನು ಹೇಳ್ತಾಳೆ. ಆದ್ರೆ, ನಾನು ಹೇಳ್ತೀನಿ, ನಮ್ಮ ಪಾಪುಗೆ, ಚಿಕ್ಕ ಹೆಸರಿರಬೇಕು, ಒತ್ತಕ್ಷರ ಇರಬಾರದು, ಕೂಗಲು ಇನ್ನೂ ಶಾರ್ಟ್ ಮಾಡಿ ಏನೇನೋ ವಿಚಿತ್ರವಾಗಿ ಕೇಳವಂತೆ ಇರಬಾರದು. ಈಗ ಕಾಲ ಬದಲಾಗಿದೆ. ಪ್ರಪಂಚ ಚಿಕ್ಕದಾಗಿದೆ. ಬಿಕಾಸ್ ಆಪ್ ಗ್ಲೋಬಲೈಜ಼ೇಷನ್, ಮುಂದೆ ಯಾವುದೇ ದೇಶ, ಸೀಮೆಗಳಿಗೆ ಹೋದರೂ, ಯಾವ ದೇಶದವರೇ ಪ್ರನೌನ್ಸ್ ಮಾಡಿದರೂ ಅದು ಚೇಂಜ್ ಆಗುವಂತಿರಬಾರದು ಅಂತಹ ಹೆಸರು ಹುಡುಕಬೇಕುʼ – ಎಂದನು.
ವೆಂಕಟೇಶ್ ಮತ್ತು ಸನ್ಮತಿ ಇಬ್ಬರೂ ಒಟ್ಟೊಟ್ಟಿಗೆ, – ʼಹೌದು, ಹೌದುʼ – ಎಂದರು.
ಬೀಗರು ಮತ್ತು ಬೀಗಿತ್ತಿಯವರ ಮುಖ ಚಿಕ್ಕದಾದ್ದನ್ನು ನೋಡಿದ ಯಶೋಧ – ʼಅಯ್ಯೋ ಹೇಗಿದ್ದರೂ ನಮ್ಮ ಪದ್ಧತಿಯಲ್ಲಿ ಐದು ಹೆಸರುಗಳನ್ನು ಇಟ್ಟೇ ಇಡುತ್ತೇವೆ, ಮೊದಲನೆಯದು ಮನೇ ದೇವರ ಹೆಸರು, ಎರಡನೆಯದು, ಮನೆಯ ಹಿರಿಯರ ಹೆಸರು, ಮೂರನೆಯದು, ಮಗು ಗುಂಡು ಕಲ್ಲಿನಂತೆ ಆರೋಗ್ಯಕರವಾಗಿರಲೆಂದು, ಗಂಡು ಮಗುವಾದರೆ ಗುಂಡಪ್ಪ, ಹೆಣ್ಣು ಮಗುವಿಗಾದರೆ ಗುಂಡಮ್ಮ. ನಮ್ಮ ಪಾಪುವಿಗಂತೂ ಗುಂಡಮ್ಮ, ಇನ್ನು ನಾಲ್ಕನೆಯದು ಜನ್ಮ ನಕ್ಷತ್ರಕ್ಕೆ ಬರುವ ಅಕ್ಷರದಿಂದ ಪ್ರಾರಂಭವಾಗುವ ಹೆಸರು, ಐದನೆಯದು ರೂಢಿನಾಮ, ಅಂದ್ರೆ ದಿನಾ ಕರೆಯುವ ಹೆಸರು, ನೀವುಗಳು ಹುಡುಗರು ಏನು ಬೇಕಾದರೂ ಇಟ್ಟುಕೊಳ್ಳಿ, ಜೋಪಾನ ದೊಡ್ಡವಳಾದ ಮೇಲೆ ಅವಳ ಕೈಲಿ ಬೈಸಿಕೊಳ್ಳುವ ಹೆಸರಿಡಬೇಡಿʼ – ಅಂತ ವಾತಾವರಣವನ್ನು ತಿಳಿಗೊಳಿಸಿದಳು.
ಸಂತೋಷ, -ʼನೋಡಿದ್ರಾ, ನೋಡಿದ್ರಾ, ನಾನು ಹೇಳಲಿಲ್ಲವಾ, ನಮ್ಮ ಅಮ್ಮ ಏನಾದರೂ ಒಂದು ಎಸ್ಕೇಪ್ ಶಾಸ್ರ್ತ ಇಟ್ಟಿರುತ್ತಾಳೆ ಅಂತʼ – ಎನ್ನುತ್ತಾ ರೇಗಿಸತೊಡಗಿದ.
ಮಗನ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದೇ ತಮ್ಮ ಜೀವನದ ಧ್ಯೇಯವೆಂಬಂತೆ ಜೀವಿಸುತ್ತಿರುವ ಸರಳ ಮನಸ್ಸಿನ ವೆಂಕಟೇಶನ ತಂದೆ ತಾಯಿಯರಿಗಂತೂ ಬೀಗಿತ್ತಿ ಯಶೋಧಾ ಹೇಳಿದ ಮಾತುಗಳು ಅತ್ಯಂತ ಸಮಾಧಾನ ತಂದಿತ್ತು.
ನಾಮಕರಣ ವಿಜೃಂಬಣೆಯಿಂದ ನೆರವೇರಿತು. ಸಂತೋಷ ಸೆಲೆಕ್ಟ್ ಮಾಡಿದ, ಚಿಕ್ಕದಾದ, ಒತ್ತಕ್ಷರವಿಲ್ಲದ, ಮುಂದೆ ಅಮೆರಿಕನ್ನರು, ಯೂರೋಪಿಯನ್ನರಾರಿಗೂ ಉಚ್ಛರಿಸಲು ಕಷ್ಟವಾಗದ “ದಿಶಾ” ಹೆಸರು ಮಿಕ್ಕ ನಾಲ್ಕು ಹೆಸರುಗಳೊಂದಿಗೆ ರೂಢಿನಾಮವಾಗಿ ಇಡಲ್ಪಟ್ಟಿತು.
ಬಂದವರೆಲ್ಲರೂ – ʼಮಗುವಿನಂತೆಯೇ ಹೆಸರೂ ತುಂಬಾ ಮುದ್ದಾಗಿದೆ, ಚೆನ್ನಾಗಿದೆʼ – ಎಂದು ಹೇಳುವಾಗಲೆಲ್ಲಾ ಸಂತೋಷ, ತುಂಬಾ ಹೆಮ್ಮೆಯಿಂದ ತನ್ನ ನೆಹರೂ ಜುಬ್ಬದ ಕಾಲರ್ ಮುಟ್ಟಿಕೊಳ್ಳುತ್ತಿದ್ದರೆ, ತಮ್ಮಿಬ್ಬರ ಪ್ರೀತಿಯ, ಬೆಣ್ಣೆಯ ಮುದ್ದೆಯಂತಿರುವ ಮಗುವಿಗೆ “ದಿಶಾ” ಹೆಸರು ಅತ್ಯಂತ ಮುದ್ದಾಗಿದೆ ಎಂದೆನಿಸಿದರೂ, ವೆಂಕಟೇಶ ಮತ್ತು ಸನ್ಮತಿಯರಿಗೆ, ʼಈ ಜಂಬದ ಕೋಳಿ ಹೇಳಿದ ಹೆಸರು ಇಡುವಂತಾಯಿತಲ್ಲ, ಇನ್ನು ಲೈಫ್ ಲಾಂಗ್, ನಾನಿಟ್ಟ ಹೆಸರೇ ಬೆಸ್ಟ್ ಅಂತಿರ್ತಾನೆ,ʼ ಅಂತ ಹುಸುಮುನಿಸು ಉಂಟಾಗುತಿತ್ತು.
ʼದಿಶಾʼ ತನ್ನವರಿರುವ ದಶ ದಿಕ್ಕುಗಳಿಗೂ ಖುಷಿ ಕೊಡುತ್ತಾ ಮುದ್ದಾಗಿ ಬೆಳೆಯುತ್ತಿದ್ದಳು.
ಸಂತೋಷ, ಉನ್ನತ ಶ್ರೇಣಿಯಲ್ಲಿ ತನ್ನ ಇಂಜಿನಿಯರಿಂಗ್ ಪದವಿ ಮುಗಿಸಿ, ಮುಂದಿನ ವಿಧ್ಯಾಭ್ಯಾಸಕ್ಕೆಂದು ಅಮೆರಿಕಾಗೆ ಹಾರಿಯಾಯಿತು. ಎರಡು ವರುಷಗಳು ಓದಿ, ನಾಲ್ಕು ವರುಷಗಳು ಕೆಲಸ ಮಾಡಿ, ತನ್ನ ತಂದೆತಾಯಿಯರಿಗೆ ಪೂರ್ತಿ ವಯಸ್ಸಾಗಿ ನಿತ್ರಾಣವಾಗುವ ಮೊದಲೇ ಹಿಂತಿರುಗಿ ಬಂದು ತನ್ನ ವಿದ್ಯಾಭ್ಯಾಸ ಮತ್ತು ಪರಿಣಿತಿಗೆ ತಕ್ಕಂಥಹ ನೌಕರಿಯನ್ನು ಹಿಡಿದು ಇರತೊಡಗಿದನು.
ಯಶೋಧಾ ಮಗನಿಗೆ ಮದುವೆ ಮಾಡುವ ಮಾತೆತ್ತಿದಾಗ – ʼಅಮ್ಮಾ, ನಾನು ಅಮೆರಿಕಾದಲ್ಲಿ ಕೆಲಸ ಮಾಡುತಿದ್ದಾಗ ಪರಿಚಿತಳಾದ ಸ್ನೇಹಾಳನ್ನು ಇಷ್ಟಪಟ್ಟಿದ್ದೇನೆ, ಅವಳಿಗೆ ನಮ್ಮ ಮನೆಯ ಹಿನ್ನೆಲೆ, ಜನರ ಮನೋಭಾವನೆಗಳು ಎಲ್ಲಾ ಹೇಳಿದ್ದೇನೆ. ಅವಳು ನಿನ್ನ ಮುದ್ದಿನ ಸೊಸೆ ಅಗ್ತಾಳೆ. ನಾನು ಅವಳನ್ನೇ ಮದುವೆ ಆಗೋದು. ಅವಳೂ ಅಲ್ಲಿಯ ಕೆಲಸ ಬಿಟ್ಟು ಇಲ್ಲೇ ಬಂದಿರುವ ಆಸಕ್ತಿ ಹೊಂದಿದ್ದಾಳೆ. ನಮ್ಮಿಬ್ಬರ ವೇವ್ ಲೆನ್ತ್ ಸೂಟ್ ಆಗುತ್ತೆ, ಹಾಗಾಗಿ ನಾನು ಅವಳನ್ನೇ ಮದುವೆಯಾಗೋದುʼ – ಎಂದು ವಿನಯಪೂರ್ವಕವಾಗಿ, ಆದರೆ ಅಷ್ಟೇ ಆತ್ಮ ವಿಶ್ವಾಸದಿಂದ ಹೇಳಿದಾಗ, ಯಶೋಧಾಳಿಗೆ ಹೇಳಲು ಏನೂ ಇರಲಿಲ್ಲ.
ಮುಂದಿನದೆಲ್ಲಾ ಸರಸರಾಂತ ನಡೆದು ಹೋಯಿತು. ಸ್ನೇಹಾಳೂ, ಇಲ್ಲೇ ಒಂದು ತನ್ನ ಪ್ರತಿಭೆಗೆ ತಕ್ಕ ಕೆಲಸ ಹುಡುಕಿಕೊಂಡು ಬಂದದ್ದಾಯಿತು. ವಿಜೃಂಬಣೆಯಿಂದ ಮದುವೆ ನೆರವೇರಿಯೇಬಿಟ್ಟಿತು. ಸ್ನೇಹಾ, ಸಂತೋಷರ ಭೇಟಿ ಅಮೆರಿಕಾದಲ್ಲಿ ಆದರೂ, ಅವರಿಬ್ಬರೂ ಇಂಗ್ಲೀಷ್ ಪುಸ್ತಕಗಳನ್ನೋದುವಂತೆಯೇ ಕನ್ನಡ ಪುಸ್ತಕಗಳನ್ನೂ ಓದುವುದೂ, ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತನಾಡುವುದೂ, ಟೆಲಿಫೋನಿನ ರಿಂಗ್ ಟೋನುಗಳಲ್ಲಿಯೂ ಸಹ ಕನ್ನಡ ಹಾಡುಗಳನ್ನೇ ಇಟ್ಟುಕೊಳ್ಳುವುದನ್ನು ನೋಡಿದಾಗ ಯಶೋಧಾ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಳು. ಅವಳಿಗೆ ಆಶ್ಚರ್ಯವಾಗುತಿತ್ತು. ತನ್ನ ಗೆಳತಿಯರನೇಕರು, ವಿದೇಶದಲ್ಲಿರುವ, ವಿದೇಶದಲ್ಲಿದ್ದ ತಮ್ಮ ಮಕ್ಕಳು, ಮೊಮ್ಮಕ್ಕಳು, ಕನ್ನಡ ಓದುವುದು, ಬರೆಯುವುದು ಇರಲಿ, ಮಾತನಾಡಲೇ ಕಷ್ಟಪಡುತ್ತಾರೆ, ಎಂದು ಹೇಳುತ್ತಿದ್ದುದ್ದನ್ನು ಕೇಳಿದ್ದವಳಿಗೆ ತನ್ನ ಮಕ್ಕಳ ಬಗ್ಗೆ ನಿಜಕ್ಕೂ ಸಂತೋಷವಾಗುತಿತ್ತು.
ಒಮ್ಮೊ ಸೊಸೆ ಮುದ್ದು ಬಂದು ಹೇಳಿದಳು – ʼಅಮ್ಮಾ ನನಗೆ ಎರಡು ತಿಂಗಳುಗಳಾಗಿದೆʼ.
ಮತೊಮ್ಮೆ ಮನೆಯಲ್ಲಿ ಸಂತೋಷದ ಅಲೆ ಎದ್ದಿತು.
ಮತ್ತೊಂದು ದಿವಸ ಆಸ್ಪತ್ರೆಯಲ್ಲಿ, ದಿಶಾ ಹುಟ್ಟಿದ ದಿನದಂತೆಯೇ ದುಗುಡ, ಕಾತುರಗಳಿಂದ ಎಲ್ಲರೂ ಕಾಯುತ್ತಿದ್ದರು. ಹೊರಬಂದ ಡಾಕ್ಟರ್ ಹೇಳಿದರು – ʼಹೆರಿಗೆಯಾಯಿತು, ಸಿಸೇ಼ರಿಯನ್ ಮಾಡಬೇಕಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ, ಮುದ್ದಾದ ಹೆಣ್ಣು ಮಗು ಹುಟ್ಟಿದೆ.ʼ
ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತು.
ನಾಮಕರಣ ಹತ್ತಿರ ಬಂದಿತು. ಹೆಸರು ಹುಡುಕುವ ಸಡಗರ.
ಆದರೆ ಈ ಸಲ ಎಲ್ಲರೂ ನಿರಾಳವಾಗಿಬಿಟ್ಟಿದ್ದರು. ಸನ್ಮತಿ ಹೇಳಿದಳು- ʼಆಗ, ಎಂಟು ವರುಷಗಳ ಹಿಂದೆಯೇ ಸಂತೋಷ ಅಷ್ಟೊಂದು ಯೋಚಿಸಿ ʼದಿಶಾʼ ಹೆಸರು ಸೆಲೆಕ್ಟ್ ಮಾಡಿದ್ದ. ಈಗ ಬೇರೆ ಯಾರಿಗೂ ಸೆಲೆಕ್ಟ್ ಮಾಡಲು ಬಿಡುವುದಿಲ್ಲ. ಅವನು ಆಗಲೇ ಹುಡುಕಿಯಾಗಿರುತ್ತದೆ. ಸ್ನೇಹಳೂ ಇವನು ಹೇಳಿದ್ದಕ್ಕೇ “ಹುಂ” ಅಂದಿರ್ತಾಳೆ, ಅಲ್ವೇನೋʼ – ಎನ್ನಲು ಅಲ್ಲೇ ಇದ್ದ ಸಂತೋಷ. – ʼಎಸ್, ಯು ಆರ್ ಕರೆಕ್ಟ್ʼ – ಎಂದ.
ಸ್ನೇಹಳು ಹುಸಿನಗು ನಗುತ್ತಿದ್ದಳು. ಯಶೋಧಾ ಅಂತೂ ಕೇಳುವುದಕ್ಕೇ ಹೋಗಲಿಲ್ಲ. ನಾಲ್ಕು ಹೆಸರುಗಳನ್ನಂತೂ ಸಂಪ್ರದಾಯಬದ್ಧವಾಗಿ ಇಡುವುದು, ರೂಢಿನಾಮ ಅವರಿಗಿಷ್ಟ ಬಂದದ್ದು ಇಟ್ಟುಕೊಳ್ಳಲಿ, ತನಗೇನು ಬೇಕೋ ಅದನ್ನೇ ಕರೆದರಾಯಿತು, ದೇವರು ಇಷ್ಟೆಲ್ಲಾ ನೆಮ್ಮದಿ ಕೊಟ್ಟಿದ್ದಾನಲ್ಲ, ಅಷ್ಟೇ ಸಾಕು, ಎಂದುಕೊಂಡಳು.
ನಾಮಕರಣದ ಹಿಂದಿನ ರಾತ್ರಿ, ಮಾರನೆಯ ದಿನದ ಎಲ್ಲಾ ತಯ್ಯಾರಿಗಳನ್ನೂ ಮುಗಿಸಿ ಮನೆ ಮಂದಿಯೆಲ್ಲಾ ಮಾತನಾಡುತ್ತಾ ಕುಳಿತಾಗ, ಯಶೋಧಾ ಕೇಳಿದಳು –
ಏ, ಸಂತೋಷ, ಏನು ಹೆಸರು ಹುಡುಕಿದ್ದೀಯೋ, ನಮಗೆ, ಮನೆಯವರಿಗೆ ಕೊನೆಯ ಪಕ್ಷ ಒಂದು ದಿನ ಮುಂಚಿತವಾಗಿ ತಿಳಿಸು – ಎನ್ನಲು,
ʼಹುಂ, ಅಮ್ಮ, ನಿಮಗೆಲ್ಲಾ ಆಶ್ಚರ್ಯವಾಗುತ್ತದೆ. ನನ್ನ ವಿಚಾರಧಾರೆ ಬದಲಾಗಿದೆ, ನಮ್ಮ ಮಗಳಿಗೆ ನಾನು ಮತ್ತು ಸ್ನೇಹಾ ಸೇರಿ ಇಡುತ್ತಿರುವ ಹೆಸರು “ನಿಸರ್ಗ”
“ಹಾಂ”, ಆಶ್ಚರ್ಯದಿಂದ ಅಲ್ಲಿದ್ದ ಎಲ್ಲರೂ ಒಟ್ಟಿಗೆ ಉದ್ಗಾರ ತೆಗೆದರು.
ದಿಶಾ ಅಂತೂ, -ʼಸಂತೋಷ್ ಮಾಮ, ನೀವು ನನಗೆ ಹೆಸರಿಡುವಾಗಿನ ಸ್ಟೋರಿ ಎಲ್ಲ ಅಮ್ಮ ನಂಗೆ ತುಂಬ ಸರ್ತಿ ಹೇಳಿದ್ದಾಳೆ. ಎರಡೇ ಅಕ್ಷರಗಳು ಇರೋದು, ಒತ್ತಕ್ಷರ ಇಲ್ಲದೆ ಇರೋದು, ಯೂನಿವರ್ಸಲ್ ಈಜ಼ಿ ಪ್ರನೌನ್ಸಿಯೇಷನ್ ಇರೋ ಹೆಸರನ್ನು ಎಲ್ಲರೂ ಎಕ್ಸಪೆಕ್ಟ್ ಮಾಡ್ತಾ ಇದ್ದೆವುʼ – ಎಂದಳು.
ಎಲ್ಲರೂ – ʼಹೌದು, ಹೌದುʼ – ಎನ್ನಲು, ಸಂತೋಷ ತನ್ನ ಸಮಜಾಯಿಷಿಯನ್ನು ಕೊಟ್ಟನು –
ʼಹೌದು ಎಂಟು ವರುಷಗಳ ಕೆಳಗೆ ನನ್ನ ಯೋಚನಾ ಧಾಟಿ ಹಾಗೆಯೇ ಇತ್ತು. ಆದರೆ ಈಗ ನಾನು ಹಲವಾರು ಹೊರದೇಶಗಳನ್ನು ಸುತ್ತಿ ಬಂದಾದ ನಂತರ, ಆಗಲೇ ಹೇಳಿದ ಹಾಗೆ ನನ್ನ ವಿಚಾರಧಾರೆ ಬದಲಾಗಿದೆ. ನಮಗೋಸ್ಕರ ಬೇರೆ ದೇಶದವರ್ಯಾರೂ ತಮ್ಮ ರೀತಿ ರಿವಾಜುಗಳನ್ನು ಬದಲಾಯಿಸಿಕೊಳ್ಳುತ್ತಾರೆಯೇ? ಇಲ್ಲ, ಮತ್ತೆ ನಾವ್ಯಾಕೆ ಬದಲಾಯಿಸಿಕೊಳ್ಳ ಬೇಕು? ನಾವುಗಳು ಅವರ, ಹೆನ್ರಿ, ಟೋನಿ, ರಾಬರ್ಟ್ ಗಳನ್ನು ಸರಿಯಾಗಿ ಉಚ್ಛರಿಸಲು ಕಲಿತಿರುವಾಗ, ಅವರೂ ನಮ್ಮ ಲಕ್ಮಿ, ರಮ್ಯ, ಸೌಮ್ಯಗಳನ್ನು ಸರಿಯಾಗಿ ಉಚ್ಛರಿಸಲು ಕಲಿಯಲಿ. ಕಲಿಯಲು ಕಷ್ಟವಾದರೆ ಸುಲಭವಾಗಿಸಲು ಸಹಾಯ ಮಾಡೋಣ. ನಮ್ಮ ಭಾಷೆಯ ಸೊಗಡು ನಮ್ಮ ಬಾಯಲ್ಲಿಯೇ ನಲಿದಾಡದಿದ್ದರೆ ಬೇರೆ ಯಾರೋ ಏಕೆ ಆದರಿಸುತ್ತಾರೆ ಅನ್ನಿಸಿತು. ಅಲ್ಲದೆ ನಾನು ಪ್ರಕೃತಿಯನ್ನೇ ದೇವರೆಂದು ನಂಬಿರುವವನು. ಹಾಗಾಗಿ ನಮ್ಮ ಮಗಳು ʼನಿಸರ್ಗʼ – ಎನ್ನುತ್ತಾ, ದಿಶಾಳ ಕಡೆ ತಿರುಗಿ – ʼನನ್ನ ಹಿಂದಿನ ವ್ಯೂ ಏನೇ ಇದ್ದರೂ ನಿನಗೂ ಒಳ್ಳೆಯ ಹೆಸರನ್ನೇ ಇಟ್ಟಿಲ್ವಾ?ʼ – ಎನ್ನಲು,
ಎಲ್ಲರೂ ಒಟ್ಟಿಗೆ, “ಅದಂತೂ ಹೌದು”, ಎನ್ನುತ್ತಾ ನಾಳೆಯ ಸಮಾರಂಭದ ಸಂಭ್ರಮವನ್ನು ಮನದಲ್ಲಿ ತುಂಬಿಕೊಳ್ಳುತ್ತಾ ಮಲಗಲು ಹೊರಟರು.
-ಪದ್ಮಾ ಆನಂದ್
ಸಂಬಂಧಗಳ ಸೊಗಡಿನಿಂದ ತುಂಬಿ ತುಳುಕುವ ಸುಂದರ ಬರಹ.
ಧನ್ಯವಾದಗಳು ನಯನ ಅವರೆ.
ಪ್ರಕಟಿಸಲು ಪರಿಗಣಿಸಿದ್ದಕ್ಕಾಗಿ “ಸುರಹೊನ್ನೆ” ಗೆ ಧನ್ಯವಾದಗಳು.
ವಾಸ್ತವದ ಜೊತೆಗೆ ಸಂಬಂಧ ಹಾಗೂ ನಮ್ಮ ಸಂಕ್ರುತಿಯ ಅನಾವರಣವನ್ನು ನಾಮಕರಣ ಕಥೆ ಯ ಚೌಕಟ್ಟಿನಲ್ಲಿ ಸೊಗಸಾಗಿ ತಂದಿದ್ದೀರಾ…ಅಭಿನಂದನೆಗಳು ಪದ್ಮಾ ಮೇಡಂ.
ಧನ್ಯವಾದಗಳು ನಾಗರತ್ನ ಅವರೆ..
ಚೆಂದದ, ನವಿರಾದ ಕಥೆ..
ಧನ್ಯವಾದಗಳು
ಧನ್ಯವಾದಗಳು.
ಸಂಭ್ರಮ ಸಡಗರ ತುಂಬಿದ ,ಲೇಖನ..ಚೆಂದದ ನಿರೂಪಣೆ..
ಮೆಚ್ಚುಗೆಗಾಗಿ ಧನ್ಯವಾದಗಳು
ಹಳೆಯ ಸಂಸ್ಕೃತಿ, ಸತ್ಸಂಪ್ರದಾಯಗಳು, ಹೀಗೆ ಎಲ್ಲವನ್ನೂ ಕ್ರೋಢೀಕರಿಸಿ ರಚಿಸಿದ ಕಥಾಹಂದರವು ಬಹಳ ಸೊಗಸಾಗಿ ಮೂಡಿಬಂದಿದೆ.
ಮೆಚ್ಚುಗೆಗಾಗಿ ಧನ್ಯವಾದಗಳು ಮೇಡಂ
ಶಿಶುವಿನ ನಾಮಕರಣ
ಅಲಂಕಾರದ ಬೂಷಣ ಶಿಶುವಿನ ನಾಮಕರಣ/
ಸಂಸ್ಕಾರ ಸಂಸ್ಕೃತಿಯ ಸರಳ ಸಮಾರಂಭವು/
ಅಲಂಕಾರದ ಬೂಷಣ ಶಿಶುವಿನ ನಾಮಕರಣ/
ಓಂಕಾರ ಪರಂಪರೆಯ ಸಡಗರ ಸಂಭ್ರಮವು/
ಜನಿಸಿರುವ ಮಗುವಿನ ಅಭಿನ್ನತೆಯ ಪಾವನದ ಆಚರಣೆಯಲ್ಲಿ /
ದೈವಾನುಗ್ರಹವ ಕೋರುತ ಪರಿಪೂರ್ಣಿಸುವ ಸುಕಾರ್ಯವು/
ಭವ್ಯತೆಯ ಭವಿಷ್ಯವ ಬಯಸುತ ಪರಿಶುದ್ಧ ನಾಮದೇಯದಲ್ಲಿ/
ದೈವಾಶಿರ್ವಾದವ ಬೇಡುತ ಸಂಪೂರ್ಣಿಸುವ ಶುಭಕಾರ್ಯವು/
ವ್ಯತ್ಯಾಸವಾಗುವುದೇ ಬದುಕು ನಾಮದೇಯದ ವೈವಿಧ್ಯತೆಯಲ್ಲಿ/
ಬಾಳು ಬಂಗಾರವಾಗುವುದೆ ಬಗೆಬಗೆಯ ಹೆಅರಿನ ಪ್ರಭಾವದಲ್ಲಿ/
ವ್ಯಕ್ತಿತ್ವಗಳು ಬದಲಾಯಿಸುವುದೇ ನಾಮಗಳ ಪ್ರಾಧಾನ್ಯತೆಯಲ್ಲಿ/
ಮರೆಯಬಾರದು ಭಗವಂತನ ಇಚ್ಚೆಯ ನಾಮಕರಣ ಪ್ರಸಂಗದಲ್ಲಿ
ಧನ್ಯವಾದಗಳು