ಕಾದಂಬರಿ: ನೆರಳು…ಕಿರಣ 8
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
”ರೀ.. ನಾಳೆ ಜೋಯಿಸರ ಮನೆಗೆ ಹೋದಾಗ ಅವರೇನಾದರೂ ಬೇಗ ಲಗ್ನ ಮಾಡಿಕೊಡಿ ಎಂದರೆ ಒಪ್ಪಿಕೊಂಡುಬಿಡೋಣ” ಎಂದಳು ಲಕ್ಷ್ಮಿ.
‘ಲಕ್ಷ್ಮೀ ನಿನಗೆ ಬುದ್ಧಿ ಇದೆಯಾ? ಅದು ಹೇಗೆ ಆಗುತ್ತೇ? ಮನೆಯಲ್ಲಿ ಮೊದಲ ಶುಭಕಾರ್ಯ ನಡೆಸುತ್ತಿರುವುದು, ಮನೆಗೆಲ್ಲಾ ಸುಣ್ಣ ಬಣ್ಣ ಮಾಡಿಸಬೇಕು. ತಿಂಡಿ ಸಾಮಾನುಗಳು, ಒಡವೆ ವಸ್ತ್ರ ಸಿದ್ಧಮಾಡಿಕೊಳ್ಳಬೇಕು. ನೆಂಟರಿಷ್ಟರನ್ನು ಕರೆಯಬೇಕು. ಇಷ್ಟೆಲ್ಲಾ ಇದೆ. ಅದಕ್ಕೆಲ್ಲಾ ಕೊನೆಯಪಕ್ಷ ಒಂದೆರಡು ತಿಂಗಳಾದರೂ ಬೇಡವೇ?” ಎಂದರು ಭಟ್ಟರು.
”ಅವೆಲ್ಲಾ ಅಂಥಹ ದೊಡ್ಡ ಕೆಲಸಗಳಲ್ಲ ಅಂದರೆ ತಪ್ಪಾಗುತ್ತೆ. ಆದರೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಾದದ್ದಲ್ಲ ಎಂದು ಹೇಳಬಲ್ಲೆ” ಎಂದುತ್ತರಿಸಿದಳು ಲಕ್ಷ್ಮಿ.
”ಅದು ಹೇಗೆ ಲಕ್ಷ್ಮೀ, ನನಗಂತೂ ನಿನ್ನ ಮಾತೇ ಅರ್ಥವಾಗುತ್ತಿಲ್ಲ” ಎಂದರು ಭಟ್ಟರು.
”ಇಲ್ಲಿ ಕೇಳಿ ಆಳುಕಾಳುಗಳನ್ನು ಹೆಚ್ಚು ಜನರನ್ನು ಕರೆಸಿದರೆ ಜಟ್‌ಪಟ್ ಅಂತ ಒಂದು ವಾರದೊಳಗೆ ಮನೆಯ ಸುಣ್ಣಬಣ್ಣದ ಕೆಲಸ ಮುಗಿಸಬಹುದು. ಬಟ್ಟೆಬರೆ ಏನೇನು ಬೇಕೆಂದು ಗುರುತು ಹಾಕಿಕೊಂಡು ಒಂದುಸಾರಿ ಅಂಗಡಿಗೆ ಹೋಗಿ ತಂದರಾಯಿತು. ಪೂಜೆಪುನಸ್ಕಾರದ ಸಾಮಾನುಗಳು ಏನೇನು ಬೇಕೆಂದು ಕೇಶವಣ್ಣನವರನ್ನು ಕೇಳಿ ತೆಗೆದಿಡಿಸಿಕೊಳ್ಳುವುದು. ಮದುಮಗಳ, ಮಕ್ಕಳ ಸೀರೆಗೆ ಅಂಚು, ರವಕೆ, ಲಂಗ, ಅದೂ ಇದೂ ಎಲ್ಲ ನಮ್ಮ ಭಾಗ್ಯ, ಭಾವನಾ ಹೊಲಿದು ಸಿದ್ಧಪಡಿಸಿಕೊಳ್ಳುತ್ತಾರೆ. ಇನ್ನು ಲಗ್ನಪತ್ರಿಕೆ ಹಂಚುವ ಕೆಲಸ, ತುಂಬಾ ದೂರ ಇರುವವರಿಗೆ ಒಂದು ಪತ್ರ ಬರೆದು ಅದರೊಡನೆ ಆಹ್ವಾನ ಪತ್ರಿಕೆಯಿರಿಸಿ ಕಳುಹಿಸುವುದು. ಹತ್ತಿರವಿರುವವರನ್ನು ನಾವೇ ಹೋಗಿ ಪತ್ರಿಕೆಕೊಟ್ಟು ಕರೆದುಬರುವುದು. ಬೆಳ್ಳಿ ಸಾಮಾನು, ಒಡವೆಗಳನ್ನು ಹೊಸದಾಗಿ ಮಾಡಿಸುವುದೇನಿಲ್ಲ. ಏನಿದ್ದರೂ ಇರುವುದಕ್ಕೆ ಒಂದಿಷ್ಟು ಪಾಲಿಷ್ ಹಾಕಿಸಿದರಾಯ್ತು. ವರನಿಗೆ ಕೊಡುವ ಉಂಗುರ ಒಂದೇ ಮಾಡಿಸಬೇಕಾಗುತ್ತೆ. ಚಿನ್ನಾಚಾರಿ ಮಾದಯ್ಯನಿಗೆ ಹೇಳಿ ಸಂದರ್ಭ ತಿಳಿಸಿ ಕೇಳಿಕೊಂಡರೆ ನಮ್ಮ ಮಾತನ್ನು ತೆಗದು ಹಾಕಲ್ಲ. ‘ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು’ ಅಂತಾಗಬಾರದು. ಮುಂದಕ್ಕೆ ಹಾಕಿದಷ್ಟು ತೊಂದರೆ. ಜ್ಯೇಷ್ಠಮಾಸ ಬರುತ್ತೆ, ಹಿರೀಮಗಳ ಮದುವೆ ಮಾಡಲು ಆಗುತ್ತದೆಯೇ? ಅವರ ಮನೆಯಲ್ಲಿ ಮಗ ಒಬ್ಬನೇ. ಏನೇನು ಘಳಿಗೆ, ಕಾಲ ನೋಡುತ್ತಾರೋ. ಈ ಮಧ್ಯೆ ಭಾಗ್ಯಳ ಎಸ್.ಎಸ್.ಎಲ್.ಸಿ., ಪರೀಕ್ಷೆಯ ಫಲಿತಾಂಶ ಬಂದು ಮನಸ್ಸು ಬದಲಾಯಿಸಿ ಓದುತ್ತೇನೆಂದು ಹಠಹಿಡಿದರೆ. ಇಷ್ಟೆಲ್ಲ ಮುಂದುವರಿದಿದ್ದಾಗಿದೆ. ಹಣಕಾಸು ಹೊಂದಿಸಿಯಾಗಿದೆ. ಹೇಗೋ ಸಾಧ್ಯವಾಗುತ್ತಲ್ಲವಾ?” ಎಂದಳು ಲಕ್ಷ್ಮಿ.
ಹೆಂಡತಿಯ ಮಾತುಗಳನ್ನು ಕೇಳಿದ ಭಟ್ಟರು ”ಅಬ್ಬಾ ! ಆದಷ್ಟು ಬೇಗ ಮಗಳ ಮದುವೆ ಮಾಡುವ ತರಾತುರಿಯಲ್ಲಿದ್ದಾಳೆ. ಸ್ವಲ್ಪ ಉದಾಸೀನ ಮಾಡಿದರೆ ಎಲ್ಲಿ ಒಳ್ಳೆಯ ಸಂಬಂಧ ಕೈತಪ್ಪಿಹೋಗಿಬಿಡುತ್ತೋ ಎನ್ನುವ ಭಯ. ಎಲ್ಲ ಯೋಚನೆ ಮಾಡಿಯೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾಳೆ. ನಾನು ಇವಳು ಹೇಳಿದಂತೆ ಕೈಜೋಡಿಸುವುದೇ ಉತ್ತಮ” ಎಂದುಕೊಂಡರು ಭಟ್ಟರು.
”ರೀ..ರೀ..ಏಕೆ ಏನೂ ಮಾತನಾಡುತ್ತಿಲ್ಲ? ನಾನು ಹೇಳಿದ್ದು ನಿಮಗೆ ಇಷ್ಟವಾಗಲಿಲ್ಲವೇ?” ಎಂದು ಕೇಳಿದಳು ಲಕ್ಷ್ಮಿ.
”ಹಾಗೇನಿಲ್ಲ ಲಕ್ಷ್ಮೀ, ನೀನು ಇಷ್ಟುಮಟ್ಟಿಗೆ ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದು ಕೇಳಿ ಅಚ್ಚರಿಯಾಯಿತು. ನಮ್ಮ ಮಟ್ಟಕ್ಕೆ ತಕ್ಕಂತೆ ಅವರು ಅಸ್ತು ಅಂದರೆ ಫಟಾಫಟ್ ಮಾಡಿ ಮುಗಿಸಿಬೊಡೋಣ” ಎಂದರು. ಅಷ್ಟರಲ್ಲಿ ಮನೆ ಸಮೀಪಿಸಿದ್ದರಿಂದ ಚರ್ಚೆ ನಿಲ್ಲಿಸಿ ಮಕ್ಕಳನ್ನು ಕೂಗಿ ಬಾಗಿಲು ತೆಗೆಸಿಕೊಂಡು ಇಬ್ಬರೂ ಒಳನಡೆದರು.
”ರೀ..ಕೊಂಚಹೊತ್ತು ಅಂಗಡಿ ಬಾಗಿಲು ತೆರೆಯುತ್ತೀರಾ? ಅಥವಾ ಸ್ವಲ್ಪ ಹೊತ್ತು ಮಲಗುತ್ತೀರಾ?” ಎಂದು ಕೇಳಿದಳು ಲಕ್ಷ್ಮಿ.
”ಇಷ್ಟು ಹೊತ್ತಿನಲ್ಲಿ ಯಾರು ಬರುತ್ತಾರೆ? ಹಾಗೂ ಬಂದರೆ ಕೂಗುತ್ತಾರೆ ಬಿಡು” ಎಂದು ಹೇಳುತ್ತಾ ಹೊದ್ದಿದ್ದ ಶಾಲನ್ನು ತೆಗೆದು ಹಾಲಿನಲ್ಲಿದ್ದ ಕುರ್ಚಿಯ ಮೇಲೆ ಹಾಕಿ ಹಿತ್ತಲಿಗೆ ಹೋಗಿ ಬಚ್ಚಲಲ್ಲಿ ಕೈಕಾಲು ತೊಳೆದುಕೊಂಡು ಬಂದ ಭಟ್ಟರು ತಮ್ಮ ಕೋಣೆಯನ್ನು ಹೊಕ್ಕರು.
”ಹುಂ ಸುಖಪಡುವುದಕ್ಕೂ ಕೇಳಿಕೊಂಡು ಬಂದಿರಬೇಕು” ಎಂದುಕೊಂಡು ಮಕ್ಕಳು ಏನು ಮಾಡುತ್ತಿದ್ದಾರೆಂದು ಗಮನಿಸಲು ಅವರ ಕೋಣೆಗೆ ಹೋದಳು ಲಕ್ಷ್ಮಿ. ”ಸಂಜೆಯ ಭಜನೆ ಮುಗಿಸಿ ಸ್ವಲ್ಪ ಹೊತ್ತು ಎಲ್ಲರೂ ಮಾತನಾಡುತ್ತಾ ಕೂರುತ್ತೇವಲ್ಲಾ ಆಗ ವಿಷಯವನ್ನು ಹೇಳೋಣ ಲಕ್ಷ್ಮಿ” ಎಂದು ಭಟ್ಟರು ಹೇಳಿದ್ದು ನೆನಪು ಮಾಡಿಕೊಂಡು ಲಕ್ಷ್ಮಿ” ಭಾಗ್ಯಾ ಕೆಲಸವೆಲ್ಲಾ ಮುಗಿಸಿದಿರಾ?” ಎಂದು ಕೇಳಿದರು.
”ಹೂಂ ಅಮ್ಮಾ, ಎಲ್ಲ ಮಾಡಿದ್ದೇವೆ. ಅದು ಸರಿ ಕೇಶುಮಾಮ ಹೇಳಿಕಳಿಸಿದ್ದರಲ್ಲಾ ಏನಂತೆ ವಿಷಯ” ಎಂದು ಪ್ರಶ್ನಿಸಿದಳು ಭಾಗ್ಯ. ಇವಳೇ ವಿಷಯವನ್ನು ಕೆದಕಿದಾಗ ಹೇಳಿಬಿಡುವುದೇ ಒಳ್ಳೆಯದೆಂದು ”ಭಾಗ್ಯಾ, ಜೋಯಿಸರ ಮನೆಯವರೆಲ್ಲ ನಿನ್ನನ್ನು ಒಪ್ಪಿಕೊಂಡಿದ್ದಾರೆ. ನಾನು ನಿಮ್ಮಪ್ಪ ನಾಳೆ ಕೇಶವಣ್ಣ, ರಾಧಕ್ಕನ ಜೊತೆಯಲ್ಲಿ ಅವರ ಮನೆಗೆ ಹೋಗಿ ಬರಬೇಕಂತೆ. ಅದನ್ನು ಹೇಳಿಕಳಿಸಿದ್ದರು. ನನ್ನ ಮುದ್ದುಮಗಳಿಗೆ ಒಳ್ಳೆಯ ಮನೆ ಸಿಕ್ಕಿತು. ನಮ್ಮ ಅಳತೆಗೆ ಒಪ್ಪಿದರೆ ಮದುವೆ, ಏನಂತೀ?” ಎಂದಾಗ ನಾಚಿಕೊಳ್ಳುತ್ತಾ ”ಹೋಗಮ್ಮಾ..ನನ್ನ ಕಳುಹಿಸುವುದರಲ್ಲೇ ಇದ್ದೀರಾ” ಎಂದಳು ಭಾಗ್ಯ.
ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡ ಭಾವನಾ ”ವ್ಹಾ ! ಅಕ್ಕಾ ಫಸ್ಟ್ ಇಂಟರ್‍ವ್ಯೂನಲ್ಲೇ ಸಕ್ಸಸ್. ಲೇ ವೀಣಾ, ವಾಣೀ ನಮ್ಮಕ್ಕನಿಗೆ ಸದ್ಯದಲ್ಲೇ ಡುಂ ಡುಂ, ಪೀ ಪೀ”ಎಂದು ಅಭಿನಯ ಮಾಡಿ ತೋರಿಸಿದಳು. ಚಿಕ್ಕವರಿಬ್ಬರೂ ”ಹೌದಾ ಹಾಗಾದರೆ ನಮ್ಮಿಬ್ಬರಿಗೂ ಜರಿಲಂಗ ಹೊಲಿಸ್ತೀರಾ, ಹೊಸಬಳೆ, ಕುಚ್ಚು ಹೊಸದೇ ಕೊಡಿಸಿಬಿಡಿ. ರಿಬ್ಬನ್, ಬೈತಲೆಬೊಟ್ಟು…”
”ಹೋಲ್ಡಾನ್, ನಿಮ್ಮ ಪಟ್ಟಿ ನಿಲ್ಲಿಸ್ತೀರಾ?” ಎಂದು ಬ್ರೇಕ್ ಹಾಕಿದಳು ಭಾವನಾ.
”ಅವರನ್ನು ಗದರಬೇಡ ಬಿಡು, ಅದೇನೇನು ಬೇಕೋ ಎಲ್ಲಾ ಪಟ್ಟಿಮಾಡಿ ಬರೆದಿಡಿ ಮಕ್ಕಳಾ, ಖಂಡಿತಾ ತಂದುಕೊಡ್ತೀನಿ”ಎಂದು ಹೇಳಿ ಭಾಗ್ಯಳನ್ನು ಹತ್ತಿರ ಎಳೆದುಕೊಂಡು ಅವಳ ಮುಂದಲೆಗೊಂದು ಸಿಹಿಮುತ್ತನ್ನು ಇತ್ತು ಕೋಣೆಯಿಂದ ಹೊರಗೆ ಹೊರಟವಳು ಮತ್ತೆ ಹಿಂದಿರುಗಿ ಮಕ್ಕಳ ಕಡೆಗೆ ತಿರುಗಿ ”ಹೇಳುವುದನ್ನು ಮರೆತಿದ್ದೆ. ನಾಳೆ ನಾನು, ನಿಮ್ಮಪ್ಪ ಜೋಯಿಸರ ಮನೆಗೆ ಹೋಗುವಾಗ ನೀವೆಲ್ಲ ನಮ್ಮ ಜೊತೆಯಲ್ಲಿ ಬರಬೇಕು. ಅಲ್ಲಿ ನೀವು ಕೇಶವಣ್ಣನ ಮನೆಯಲ್ಲಿ ಶಾಂತ, ಸುಬ್ಬಣ್ಣನ ಜೊತೆ ಇರಿ. ನಾವು ಹಿಂದಿರುಗಿ ಬಂದಮೇಲೆ ಒಟ್ಟಿಗೆ ಮನೆಗೆ ಬರೋಣ” ಎಂದಳು ಲಕ್ಷ್ಮಿ.
”ಅಲ್ಲಮ್ಮಾ ನಾವೆಲ್ಲ ಅಲ್ಲಿಗೆ ಏಕೆ ಬರಬೇಕು? ಬಾಗಿಲು ಭದ್ರವಾಗಿ ಹಾಕಿಕೊಂಡು ಇಲ್ಲೇ ಇರುತ್ತೇವೆ. ಮತ್ತೆಮತ್ತೆ ಅಲ್ಲಿಗೇಕಮ್ಮಾ?” ಎಂದು ಗೊಣಗಿದಳು ಭಾಗ್ಯ.
”ನಾನೂ ಹಾಗೆ ಹೇಳಿದೆನಮ್ಮ. ಆದರೆ ಕೇಶವಣ್ಣ, ರಾಧಕ್ಕ ಇಬ್ಬರೂ ಬೇಡಿ, ಇಲ್ಲಿ ಅಂಗಡಿಗೆ ಕೇಳಿಕೊಂಡು ಬರುವವರು ಅಥವ ಬಸವನೋ ಇನ್ನಾರನ್ನಾದರೂ ಅಂಗಡಿಯಲ್ಲಿ ಕುಳಿತಿರಿ ಎಂದು ಬಿಟ್ಟುಹೋದರೆ ಮನೆಯಲ್ಲಿ ಬರಿ ಹೆಣ್ಣುಮಕ್ಕಳಿರುತ್ತಾರೆ. ಅಕ್ಕಪಕ್ಕದವರು ಏನಾದರೂ ಆಡಿಕೊಳ್ಳುತ್ತಾರೆ. ಎಲ್ಲಾ ಒಂದು ಹಂತಕ್ಕೆ ಬರುವವರೆಗೆ ಇಲ್ಲದ ಸಲ್ಲದ ಮಾತುಗಳೇಕೆ ಅಂದರು” ಎಂದು ಹೇಳಿದಳು ಲಕ್ಷ್ಮಿ.
”ಹೋ..ಎಷ್ಟು ಮುಂದಾಲೋಚನೆ ಮಾಡಿದ್ದಾರೆ. ಅಕ್ಕಾ ಅವರುಗಳು ಹೇಳಿದಂತೆ ನಾವು ಅವರ ಮನೆಯಲ್ಲೇ ಇದ್ದು ಅಪ್ಪ, ಅಮ್ಮ ಬಂದಮೇಲೆ ಅವರ ಜೊತೆಗೇ ಬರೋಣ” ಎಂದಳು ಭಾವನಾ.
”ಆಗಲಿ, ಆ ಮನೆಗೆ ಹೋಗಬೇಕಾದರೆ ತುದಿಕಾಲಲ್ಲಿ ನಿಂತಿರುತ್ತೀ” ಎಂದು ತಂಗಿಯ ತಲೆಗೊಂದು ಮೊಟಕಿ ”ಆಯಿತಮ್ಮ ನಾವೆಲ್ಲ ರೆಡಿಯಾಗಿರುತ್ತೇವೆ” ಎಂದು ಪ್ರಕರಣಕ್ಕೆ ವಿರಾಮ ಹಾಕಿದಳು ಭಾಗ್ಯ.
ಮಗಳು ಏನು ಹೇಳುತ್ತಾಳೋ, ಹೇಗೆ ಪ್ರತಿಕ್ರಯಿಸುತ್ತಾಳೋ ಎಂಬ ಅಂಜಿಕೆಯಿಂದಲೇ ಮಕ್ಕಳ ಕೋಣೆಯೊಳಕ್ಕೆ ಬಂದಿದ್ದ ಲಕ್ಷ್ಮಿಗೆ ಮಗಳೇ ವಿಷಯ ತೆಗೆದು ಸಕಾರಾತ್ಮಕ ಉತ್ತರ ನೀಡಿದ್ದು ಸಮಾಧಾನ ತಂದಿತ್ತು. ದೇವರು ದೊಡ್ಡವನು ಒಂದು ಸಂದಿಗ್ಧತೆಯಿಂದ ಪಾರು ಮಾಡಿದ. ಹುಡುಗನನ್ನು, ಅವನ ಮನೆಯವರನ್ನು ನೋಡಿದಮೇಲೆ ಭಾಗ್ಯ ಮನಸ್ಸು ಬದಲಾಯಿಸಿರಬಹುದು ಹೇಗೋ ಸುಖವಾಗಿದ್ದರೆ ಸಾಕು. ನಾವೇ ಹುಡುಕಿದ್ದರೂ ಇಷ್ಟು ಒಳ್ಳೆಯ ಸಂಬಂಧ ಸಿಗುವುದು ಕಷ್ಟವಾಗಿತ್ತು. ನಾಳೆ ನಾವಂದುಕೊಂಡಂತೆ ಒಪ್ಪಂದಕ್ಕೆ ಬಂದರೆ ಸಾಕು ಎಂದುಕೊಂಡು ಹಗುರವಾದ ಮನದಿಂದ ಕೋಣೆಯಿಂದ ಹೊರಬಂದಳು.
ಸಂಜೆ ಅಂಗಡಿಗೆ ಬಂದಿದ್ದ ಒಂದಿಬ್ಬರೊಡನೆ ವ್ಯವಹಾರ ಮುಗಿಸಿ ಬಾಗಿಲು ಹಾಕಿಕೊಂಡು ಬಂದರು ಭಟ್ಟರು. ಸ್ನಾನ ಸಂಧ್ಯಾವಂದನೆ ಮುಗಿಸಿ ಮಕ್ಕಳೆಲ್ಲರೊಡಗೂಡಿ ಭಜನೆ ಮಾಡಿದರು. ನಂತರ ಸ್ವಲ್ಪಹೊತ್ತು ಕುಳಿತು ಮಾತನಾಡುವ ಅಭ್ಯಾಸವಿದ್ದುದರಿಂದ ಇದೇ ತಕ್ಕ ಸಮಯವೆಂದು ಮರುದಿನದ ಕಾರ್ಯಕ್ರಮದ ಬಗ್ಗೆ ಹೇಳಲು ಪ್ರಾರಂಭಿಸುತ್ತಿದ್ದಂತೆ ಚಿಕ್ಕ ಮಕ್ಕಳಿಬ್ಬರೂ ‘ಹಾ..ಹಾ..ಇದು ನಮಗೆ ಹಳೇ ಸುದ್ಧಿ. ಅಮ್ಮ ಆಗಲೇ ಹೇಳಿಬಿಟ್ಟಿದ್ದಾರೆ’ ಎಂದರು. ”ಹೌದಾ ಹಾಗಾದರೆ ಸರಿ ಮಕ್ಕಳೇ ಅಡುಗೆ ಮುಗಿದು ನಿಮ್ಮ ಅಮ್ಮನಿಂದ ಊಟಕ್ಕೆ ಕರೆ ಬರುವವರೆಗೂ ಯಾರಾದರೊಬ್ಬರು ಒಂದು ಒಳ್ಳೆಯ ದಾಸರಪದವನ್ನು ಹಾಡಿ” ಎಂದರು.
”ಇನ್ಯಾರು ಭಾಗ್ಯಕ್ಕನೇ ಹೇಳುತ್ತಾಳೆ. ಮದುವೆಯಾಗಿ ಹೋಗುವವಳು ಅವಳೆ ತಾನೆ. ಆಮೇಲೆ ನಾವು ಹಾಡುತ್ತೇವೆ. ಅಲ್ಲವಾ ಭಾಗ್ಯಕ್ಕಾ” ಎಂದು ಚಿಕ್ಕವರಾದ ವಾಣಿ, ವೀಣಾ ಅವಳನ್ನು ಕಿಚಾಯಿಸಿದರು.
”ಆಡಿ ಆಡಿ, ಎಷ್ಟುದಿನ ಆಡ್ತೀರಾ, ನಿಮ್ಮ ಸರದೀನೂ ಬರುತ್ತೆ. ಆಗ ನಾನು ನೋಡಿಕೊಳ್ಳುತ್ತೇನೆ”ಎಂದಳು ಭಾಗ್ಯ.
ಭಟ್ಟರು, ಮಕ್ಕಳು ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಸಂತೋಷಪಡುತ್ತಿದ್ದರು. ಇದನ್ನು ನೋಡಿ ನಾವು ಹಣವಂತರಲ್ಲದಿದ್ದರೂ ಮಕ್ಕಳಿಗೆ ಪ್ರೀತಿ ವಾತ್ಸಲ್ಯಕ್ಕೇನೂ ಕೊರತೆ ಮಾಡಿಲ್ಲ. ಬರೀ ಹೆಣ್ಣುಮಕ್ಕಳಾದುವೆಂಬ ಕಾರಣಕ್ಕೆ ಬೇಸರವನ್ನು ಯಾವತ್ತೂ ತೋರಿಸಿಕೊಂಡವರಲ್ಲ. ಇವರನ್ನು ಸಹಿಸದ ಬೇರೆಯವರು ”ಆ ಭಟ್ಟರ ಮನೆಯ ದರ್ಬಾರು ನೋಡು, ಚೂರೋಪಾರೋ ಓದುಬರೆಹ ಕಲಿಸಿ ಯಾರನ್ನಾದರೂ ಹಿಡಿದು ಗಂಟುಹಾಕಿ ಮಕ್ಕಳ ಕನ್ಯಾಸೆರೆ ಬಿಡಿಸಿಕೊಳ್ಳೊದು ಬಿಟ್ಟು ಅನುಕೂಲವಂತರೇ ಮಕ್ಕಳನ್ನು ಸೇರಿಸಲು ಹಿಂದುಮುಂದು ನೋಡುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಅದರ ಜೊತೆಗೆ ಸಂಗೀತ, ಹೊಲಿಗೆ, ಕಸೂತಿ ತರಗತಿ, ಒಂದೇ ಎರಡೇ ಅಬ್ಬಬ್ಬಾ ! ಇನ್ನೂ ಇದ್ದಿದ್ದರೆ ಏನೇನು ಮಾಡುತ್ತಿದ್ದರೋ. ಅವರಪ್ಪ ಇದ್ದಾಗ ಅವರ ಪಿಂಚಣಿ ಹಣ, ಜಮೀನಿನ ಆಮದನಿಯಲ್ಲೇ ಮಜಾ ಉಢಾಯಿಸಿಕೊಂಡು ಅಬ್ಬೇಪಾರಿಯಂತೆ ಅಲೆದಾಡುತ್ತಿದ್ದ. ಈಗೇನು ಸಿಕ್ಕಿತೋ ಕನಕನಿಗೆ ಸಿಕ್ಕಂತೆ ಕೊಪ್ಪರಿಗೆ..” ಹೀಗೆ ಪುಂಖಾನುಪುಂಖವಾಗಿ ತಮ್ಮದೇ ಆದ ರೀತಿಯಲ್ಲಿ ವಾಕ್‌ಪ್ರವಾಹವನ್ನು ಹರಿಯಬಿಡುತ್ತಿದ್ದರು. ಆಗಾಗ್ಗೆ ಇಂತಹ ಮಾತುಗಳನ್ನು ಕೇಳಿಸಿಕೊಂಡ ಭಟ್ಟರು ಹೆಂಡತಿಯ ಮುಂದೆ ”ಲಕ್ಷ್ಮೀ ಹೀಗೆಲ್ಲ ಹೇಳಿಕೊಂಡು ವ್ಯಂಗ್ಯವಾಡುತ್ತಾರೆ” ಎಂದು ಪೇಚಾಡಿಕೊಳ್ಳುತ್ತಿದ್ದರು.
ಗಂಡ ಹೇಳಿದ ಮಾತುಗಳನ್ನೆಲ್ಲ ಸಾವಧಾನವಾಗಿ ಕೇಳಿಸಿಕೊಂಡ ಲಕ್ಷ್ಮಿ ”ನೋಡಿ ಆಡಿಕೊಳ್ಳುವವರು ಆಡಿಕೊಳ್ಳಲಿ ಬಿಡಿ, ಕಾಲ ಬದಲಾದಂತೆ ನಾವೂ ಬದಲಾಗಬೇಕು. ಹೆಣ್ಣಾಗಲೀ, ಗಂಡಾಗಲೀ ಮಕ್ಕಳಿಗೆ ನಮಗೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡಬೇಕು. ಅವರೇನು ನಮಗೆ ದುಡಿದು ಹಿಂದಕ್ಕೆ ಕೊಡಬೇಕಿಲ್ಲ. ಆದರೆ ನಾಲ್ಕು ಅಕ್ಷರ ಕಲಿಯುವುದಷ್ಟಕ್ಕೇ ಸೀಮಿತವಾಗಿರಬಾರದು. ನಾಲ್ಕು ಜನಕ್ಕೆ ಅದನ್ನು ಕಲಿಸುವ ಸಾಮರ್ಥ್ಯ ಪಡೆದಿರಬೇಕು. ವ್ಯವಹಾರ ಕಲಿಯಲು ಹೊರಗೇ ಹೋಗಿ ಕೆಲಸ ಮಾಡಬೇಕಿಲ್ಲ. ಮನೆಯನ್ನು ನಿಭಾಯಿಸುತ್ತಲೇ ಜೊತೆಗಾರನ ನೊಗಕ್ಕೆ ಹೆಗಲುಕೊಟ್ಟು ಸಹಕರಿಸುವ ಛಾತಿ ಬೆಳೆಸಿಕೊಳ್ಳಬೇಕು. ಆಗ ಸಂಸಾರದ ಗಾಡಿ ಸರಾಗವಾಗಿ ಮುಂದೆ ಸಾಗುತ್ತದೆ. ಅದಕ್ಕಾಗಿಯೇ ನಾನು ಕಷ್ಟವಾದರೂ ಇವನ್ನೆಲ್ಲ ಮಕ್ಕಳಿಗೆ ಕಲಿಸುತ್ತಿರುವುದು, ಇದಕ್ಕೆಲ್ಲ ನೀವು ಅನಾವಶ್ಯಕವಾಗಿ ತಲೆ ಕೆಡಿಸಿಕೊಳ್ಳಬೇಡಿ. ಅವರಿಗೆ ಉತ್ತರಿಸಲೂ ಹೋಗಬೇಡಿ” ಎಂದು ಭಟ್ಟರ ಚಿಂತೆಯನ್ನು, ಕಳವಳವನ್ನು ನಿವಾರಿಸುತ್ತಿದ್ದಳು. ಹೆಂಡತಿ ಹೇಳುತ್ತಿದ್ದ ಮಾತುಗಳು ‘ಮೌನವಾಗಿ ಇದ್ದುಬಿಡಿ’ ಎಂಬುದನ್ನು ಚಾಚೂ ತಪ್ಪದಂತೆ ಪಾಲಿಸುತ್ತ ಬರುತ್ತಿದ್ದರು ಭಟ್ಟರು. ಅಷ್ಟರಲ್ಲಿ ”ಅಪ್ಪಾ..ಒಂದೊಂದು ಸಾರಿ ನೀವು ಎಲ್ಲಿಯೋ ಕಳೆದುಹೋಗಿರುತ್ತೀರಿ. ಅಕ್ಕನಿಗೆ ಹಾಡಲು ಹೇಳಿ ಪ್ಲೀಸ್ ”ಎಂದು ಮಕ್ಕಳು ಕೂಗಿದಾಗ ತಡಬಡಾಯಿಸಿಕೊಂಡು ಎಚ್ಚತ್ತು ”ಹಾ..ಹಾಡುಹೇಳು ಭಾಗ್ಯ” ಎಂದರು.
ಭಾಗ್ಯ ತಂದೆಯ ಕೋರಿಕೆಯಂತೆ ”ಆಚಾರವಿಲ್ಲದ ನಾಲಿಗೇ, ನಿನ್ನ ನೀಚಬುದ್ಧಿಯ ಬಿಡು ನಾಲಿಗೇ. ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವ ನಾಲಿಗೇ” ಎಂದು ಸುಶ್ರಾವ್ಯವಾಗಿ ಹಾಡಿದಳು. ಹೊರಹೊಮ್ಮಿದ ಪುರಂದರದಾಸರ ಕೀರ್ತನೆ ಮುಗಿದರೂ ಎಲ್ಲರೂ ಅದರ ಗುಂಗಿನಲ್ಲಿ ಮುಳುಗಿಹೋಗಿದ್ದರು. ”ರೀ..ಮಕ್ಕಳೇ, ಅಡುಗೆ ರೆಡಿ, ಊಟಕ್ಕೆಲ್ಲರೂ ಬನ್ನಿ” ಎಂಬ ಕೂಗು ಎಲ್ಲರನ್ನು ಬಾಹ್ಯಕ್ಕೆ ಕರೆತಂದಿತು. ಎಚ್ಚೆತ್ತ ಭಟ್ಟರೂ ”ತುಂಬ ಚೆನ್ನಾಗಿದೆ ಮಗಳೇ” ಎಂದು ಹೊಗಳಿ ”ನಡೆಯಿರಿ ಊಟಕ್ಕೆ ಅಮ್ಮನಿಂದ ಬುಲಾವ್ ಬಂತಲ್ಲಾ” ಎಂದು ಹೊದ್ದಿದ್ದ ಉತ್ತರೀಯವನ್ನು ಸೊಂಟಕ್ಕೆ ಸುತ್ತಿಕೊಂಡು ಮೇಲೆದ್ದರು.
ಊಟದ ಮನೆಗೆ ಕಾಲಿಟ್ಟ ಭಾಗ್ಯ, ಭಾವನಾರಿಗೆ ಅಚ್ಚರಿ ಕಾದಿತ್ತು. ಅಮ್ಮನಾಗಲೇ ಎಲ್ಲಾ ತಟ್ಟೆಗಳನ್ನು ಇಟ್ಟು ನೀರು ಲೋಟಗಳನ್ನು ತುಂಬಿಸಿ ಸಿದ್ಧಪಡಿಸಿದ್ದಳು. ಅಕ್ಕತಂಗಿಯರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ”ಅಮ್ಮಾ ನಮ್ಮನ್ನು ಕರೆಯಬಾರದಾಗಿತ್ತೇ? ಎಲ್ಲಾ ನೀವೇ ಮಾಡಿದ್ದೀರಿ” ಎಂದರು.
”ನೀವೆಲ್ಲಾ ಸೇರಿಕೊಂಡು ಅಪ್ಪನ ಹತ್ತಿರ ಮಾತನಾಡುತ್ತಿದ್ದಿರಿ. ಭಜನೆ, ಹಾಡು, ಮಾತುಕತೆ ನಡೆಯುತ್ತಿತ್ತು. ಮಧ್ಯೆ ಬಂದು ಕಿರಿಕಿರಿ ಮಾಡುವುದೇಕೆಂದು ಇವನ್ನೆಲ್ಲ ಸಿದ್ಧಮಾಡಿದೆ. ಅದ್ಯಾವ ಘನಕಾರ್ಯ ಬಿಡಿ. ಅಂದಹಾಗೆ ಹಾಡಿದ್ದು ಭಾಗ್ಯ ತಾನೇ?” ಎಂದು ಕೇಳಿದಳು ಲಕ್ಷ್ಮಿ.
ಭಾವನಾ ”ಹೂ ಅಮ್ಮಾ, ತುಂಬ ಮನಸ್ಸಿಟ್ಟು ಹಾಡಿದಳು ಅನ್ನಿಸುತ್ತೆ. ಎಂದಿಗಿಂತಲೂ ಮಧುರವಾಗಿತ್ತು. ಬಹುಶಃ ನಾಳೆ ನೀವೆಲ್ಲ ಜೋಯಿಸರ ಮನೆಗೆ ಹೋಗಿಬಂದಮೇಲೆ ಅವರುಗಳು ನಮ್ಮ ಮನೆಗೆ ಬರುತ್ತಾರಲ್ಲಾ, ಆಗ ಅದೇ ಆವತ್ತು ಬಂದಂತಹ ಮೇಷ್ಟ್ರು ಬಂದರೆ ಅವರ ಪ್ರಶೆಗಳೆಲ್ಲಾ ಮುಗಿದುಹೋಗಿದ್ದು ಹಾಡು ಬರುತ್ತಾ ಎಂದು ಕೇಳಬಹುದು” ಎಂದು ಅವಳಿನ್ನೂ ಮಾತು ಮುಗಿಸುವುದರೊಳಗೆ ಅವಳ ಕಿವಿಯನ್ನು ಹಿಂಡಿ ”ನಿನ್ನನ್ನು ನೋಡಲು ಬಂದವರಿಗೆ ಹೇಳುತ್ತೇನೆ ಚೆನ್ನಾಗಿ ಗೋಳು ಹೊಯ್ದುಕೊಳ್ಳಲು” ಎಂದಳು ಭಾಗ್ಯ.
ಇಬ್ಬರು ಸೋದರಿಯರ ಪ್ರೀತಿಯ ಕಲಹ ನಡೆಯುತ್ತಿದ್ದಾಗಲೇ ಭಟ್ಟರು ಚಿಕ್ಕಮಕ್ಕಳ ಜೊತೆ ಬಂದರು. ”ಲಕ್ಷ್ಮೀ ಏನು ಏಲಕ್ಕಿ ವಾಸನೆ ಘಮಲು?”
”ಅಬ್ಬಾ ನಾಯಿ ಮೂಗು ನಿಮ್ಮದು. ಬನ್ನಿ ಊಟಕ್ಕೆ ಕೂಡಿ, ಬಡಿಸಿದ ಮೇಲೆ ಘಮಲು ಎಲ್ಲಿಂದ, ಯಾವುದರಿಂದ ಬಂದದ್ದೆಂದು ಗೊತ್ತಾಗುತ್ತೆ ”ಎಂದಳು ಲಕ್ಷ್ಮಿ.
”ಏ..ಅನ್ನ, ಹುಳಿ, ಪಲ್ಯ, ಮೊಸರು ಇಲ್ಲವೇ ಅನ್ನ, ತಿಳಿಸಾರು, ಪಲ್ಯ, ಮೊಸರು ಇನ್ನೇನಿರುತ್ತೆ ಈ ಭಟ್ಟರ ಮನೆಯಲ್ಲಿ. ಅದೂ ರಾತ್ರಿಯ ಹೊತ್ತು” ಎಂದರು.
”ಹಾ..ದಿನವೂ ಪಕ್ವಾನ್ನಮಾಡಿ ಉಣಬಡಿಸುವಷ್ಟು ಸಿರಿವಂತರಲ್ಲ. ಆದರೆ ಇದ್ದುದರಲ್ಲೇ ರುಚಿಯಾಗಿ ಮಾಡಿಕೊಂಡು ತಿನ್ನುತ್ತೇವಲ್ಲಾ. ತೊಗೊಳಿ” ಎಂದು ಪ್ರತಿಯೊಬ್ಬರ ಮುಂದೆ ಒಂದೊಂದು ಬಟ್ಟಲನ್ನು ಇಟ್ಟಳು.
”ಹೋ ! ಗಸಗಸೆ ಪಾಯಸ, ಆನಂದದಿಂದ ಬಟ್ಟಲನ್ನು ಕೈಗೆತ್ತಿಕೊಂಡು ಅಮ್ಮಾ ನನಗಿದನ್ನು ಹೇಗೆ ಮಾಡುವುದೆಂಬುದು ಗೊತ್ತು” ಎಂದಳು ಪುಟ್ಟ ವೀಣಾ.
”ಹ್ಹ ಹ್ಹಾ ಭಾಗ್ಯ, ಭಾವನಾಗೆ ಗೊತ್ತು ಎಂದರೆ ನಂಬಬಹುದು. ನಿನಗೆ ಹೇಗೆ? ಹೇಳು ನೋಡೋಣ” ಎಂದು ಕೇಳಿದರು ಭಟ್ಟರು.
”ಮೊದಲಿಗೆ ಕೊಬ್ಬರಿ, ಗಸಗಸೆಯನ್ನು ಒರಳುಕಲ್ಲಿನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಆಮೇಲೆ ಒಂದು ದಪ್ಪ ತಳವಿರುವ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಗಳನ್ನು ಕರಿದುಕೊಳ್ಳಬೇಕು. ಅವನ್ನು ತೆಗೆದು ಒಂದು ಬಟ್ಟಲಲ್ಲಿಡಬೇಕು. ರುಬ್ಬಿದ ಗಸಗಸೆ, ಕೊಬ್ಬರಿಯನ್ನು ಪಾತ್ರೆಗೆ ಹಾಕಿ ಅದನ್ನು ಸಣ್ಣ ಉರಿಯಲ್ಲಿ ಕೆದಕುತ್ತಿರಬೇಕು. ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಿ ಸ್ವಲ್ಪಹೊತ್ತು ಸೌಟಿನಿಂದ ತಿರುವುತ್ತಿರಬೇಕು. ಎಷ್ಟು ಸಿಹಿಬೇಕೋ ಅಷ್ಟು ಸಕ್ಕರೆ ಹಾಕಿ ಅದು ಚೆನ್ನಾಗಿ ಬೆರೆಯುವವರೆಗೂ ಕುದಿಸಿ ಏಲಕ್ಕಿಪುಡಿಯನ್ನು ಅದಕ್ಕೆ ಸೇರಿಸಿ, ಕರಿದಿಟ್ಟಿರುವ ದ್ರಾಕ್ಷಿ ಗೋಡಂಬಿಗಳನ್ನು ಅದಕ್ಕೆ ಹಾಕಿ ಸ್ವಲ್ಪ ಕುದಿಸಬೇಕು. ನಂತರ ಈಗ ಅಮ್ಮ ಹಾಕಿಕೊಟ್ಟಿದ್ದಾರಲ್ಲ ಹಾಗೆ ಬಟ್ಟಲುಗಳಲ್ಲಿ ಹಾಕಿಕೊಂಡು ಕುಡಿಯೋದು. ಬೇಕಾದರೆ ಸಕ್ಕರೆ ಬದಲಿಗೆ ಬೆಲ್ಲವನ್ನೂ ಹಾಕಬಹುದು. ನಾನು ಹೇಳಿದ್ದು ಸರೀನಾ ಅಪ್ಪಾ”ಎಂದು ಕೇಳಿದಳು.
”ಅರೆ ಸರಿಯಾಗಿದೆ, ಇದೆಲ್ಲ ನಿನಗೆ ಹೇಗೆ ಗೊತ್ತು? ನಿನ್ನನ್ನು ಯಾವತ್ತೂ ಒಲೆ ಮುಂದೆ ಬಿಟ್ಟಿಲ್ಲವಲ್ಲಾ” ಎಂದು ಆಶ್ಚರ್ಯ ವ್ಯಕ್ತಪಡಿಸಿದಳು ಲಕ್ಷ್ಮಿ.
”’ಹಾ..ಅಕ್ಕ ಮಾಡೋವಾಗ ಅವಳಿಂದ ಕೇಳಿ ತಿಳಿದುಕೊಂಡೆ. ಭಾಗ್ಯಕ್ಕ, ಭಾವನಾಕ್ಕ ಎಲ್ಲರೂ ಮದುವೆಯಾಗಿ ಹೋದಮೇಲೆ ನಾನು ನಿಮ್ಮಿಬ್ಬರಿಗೂ ಮಾಡಿಕೊಡುತ್ತೇನೆ ಗೊತ್ತಾ ”ಎಂದಳು.
”ಮಾಡಿಕೊಡೋದೇನು, ಅಮ್ಮ ಬಗ್ಗಿಸಿ ಕೊಡುತ್ತಾರೆ ಅಮ್ಮಣ್ಣಿ ”ಎಂದು ಭಾವನಾ ಅಣಕಿಸಿದಳು.
”ನೀವು ಬಗ್ಗದಿದ್ದರೂ ನಾನು ಬಗ್ಗಿಸಲೇಬೇಕು ಮಕ್ಕಳೇ, ಬದುಕು ಕಟ್ಟಿಕೊಳ್ಳಲು ಹೋದಾಗ ಅಲ್ಲಿಯವರು ನಿಮ್ಮ ಅಮ್ಮ ಏನು ಕಲಿಸಿದ್ದಾಳೆಂದು ಬೈಯುವುದು ನನ್ನನ್ನೇ ಗೊತ್ತಾ. ಸದ್ಯಕ್ಕೆ ಮಾಡಿರೋ ಗಸಗಸೆ ಪಾಯಸ ಕುಡಿದು ಹೇಗಿದೆಯೆಂದು ಹೇಳಿ ಎಂದಳು” ಲಕ್ಷ್ಮಿ.
”ಚೆನ್ನಾಗಿಯೆ ಇರುತ್ತೆ ಬಿಡು ಲಕ್ಷ್ಮಿ. ಇದನ್ನು ಕುಡಿದರೆ ನಿದ್ರೆಯಂತೂ ಸೊಗಸಾಗಿ ಬರುತ್ತದೆ”ಎಂದರು ಭಟ್ಟರು.
”ಹ್ಹ..ಹ್ಹ ನಿಮಗೆ ನಿದ್ರೆ ಯಾವಾಗ ಬರಲ್ಲಾ, ಹೇಳಿ ಭಟ್ಟರೇ” ಎಂದು ಚುಡಾಯಿಸಿದಳು ಲಕ್ಷ್ಮಿ.
”ಹಾ..ಮಕ್ಕಳೇ ನಿಮ್ಮಮ್ಮ ಪಾಪ ನಿದ್ರೆಯನ್ನೇ ಮಾಡುವುದಿಲ್ಲ. ದಿಂಬಿಗೆ ತಲೆಯಿಟ್ಟರೆ ಸಾಕು ಭೂಕಂಪವಾದರೂ ಎಚ್ಚರವಾಗುವುದಿಲ್ಲ”ಎಂದು ನಗಾಡಿದರು ಭಟ್ಟರು. ಹೀಗೇ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಮಕ್ಕಳೊಂದಿಗೆ ಭಟ್ಟರು ಊಟ ಮುಂದುವರಿಸುತ್ತಾ, ”ಅದಿರಲಿ ಇದ್ದಕ್ಕಿದ್ದಂತೆ ಸಿಹಿ ಏಕೆ ಮಾಡಿದೆ ಲಕ್ಷ್ಮಿ? ”ಎಂದು ಕೇಳಿದರು.
”ಜೋಯಿಸರ ಮನೆಗೆ ಹೋಗಲು ಕರೆಬಂದ ಸಿಹಿಸುದ್ಧಿ, ನಾಳೆ ಅಲ್ಲಿಗೆ ಹೋದಮೇಲೆ ಮತ್ತೊಂದು ಸಿಹಿಸುದ್ಧಿ ಸಿಗಲೆಂಬ ಆಶಯದಿಂದ ಮಾಡಿದೇರಿ. ಕಿಚಾಯಿಸುವುದನ್ನು ಬಿಟ್ಟು ಒಳ್ಳೆಯದಾಗಲೆಂದು ಹಾರೈಸಿ” ಎಂದು ಕೋರಿದಳು ಲಕ್ಷ್ಮಿ.
”ಖಂಡಿತಾ ಲಕ್ಷ್ಮೀ, ನನ್ನ ಆಸೆಯೂ ಅದೇ ಆಗಿದೆ. ಆದರೆ ಮೇಲೊಬ್ಬ ಇದ್ದಾನಲ್ಲ, ಅವನ ಆಶಯ ಏನಿದೆಯೋ. ಅವನನ್ನೇ ಬೇಡಿಕೊಳ್ಳೋಣ. ಎಂದು ಊಟ ಮುಗಿಸಿ ಅಡುಗೆ ಮನೆಯಿಂದ ಹೊರಬಂದರು. ಎಲ್ಲರ ಊಟಗಳೂ ಮುಗಿದನಂತರ ಲಕ್ಷ್ಮಿ ತಾನೂ ಊಟ ಮಾಡಿದಳು. ಮಕ್ಕಳಿಬ್ಬರೂ ಮಿಕ್ಕ ಕೆಲಸಗಳನ್ನು ಮಾಡುತ್ತೇವೆಂದಾಗ ಒಪ್ಪಿ ಹಿತ್ತಲ ಬಾಗಿಲು ಹಾಕಿಕೊಂಡು ಬನ್ನಿ” ಎಂದುಹೇಳಿ ಅಡುಗೆ ಮನೆಯಿಂದ ಹೊರಬಂದಳು ಲಕ್ಷ್ಮಿ.
ಎಂದಿನಂತೆ ಭಟ್ಟರು ಮುಂಭಾಗಿಲನ್ನು ಭದ್ರಪಡಿಸಿ ಅಲ್ಲಿಯೇ ಶತಪಥ ತಿರುಗುತ್ತಿದ್ದರು. ಲಕ್ಷ್ಮಿಯೂ ಅಲ್ಲೇ ಸ್ವಲ್ಪ ಹೊತ್ತು ಓಡಾಡಿ ಮಕ್ಕಳ ಕೋಣೆಯ ಕಡೆ ಹೋಗಿ ಮಲಗಲು ಅನುವು ಮಾಡಿಕೊಂಡಿದ್ದಾರೆಂದು ಮನಗಂಡು ತನ್ನ ಕೋಣೆಗೆ ಹೋಗಿ ಅಲ್ಲಿ ಹಾಸಿಗೆ ಸಿದ್ಧಪಡಿಸಿದಳು. ಭಟ್ಟರೂ ಆಗಮಿಸಿದರು. ತಮ್ಮ ತಮ್ಮ ಓದು, ಧ್ಯಾನ ಮುಗಿಸಿ ಇಬ್ಬರೂ ಮಲಗಲು ಸನ್ನದ್ಧರಾದರು. ”ನಾಳೆ ಜಮೀನಿನ ಕಡೆ ಹೋಗುವ ಕೆಲಸವೇನಿಲ್ಲ. ಸ್ವಲ್ಪ ತಡವಾಗಿ ಏಳಬಹುದೆಂದು ಹೇಳಿದ ನೆನಪು” ಎಂದರು ಭಟ್ಟರು.
”ನಾಳೆ ಆ ವಿಷಯ ನೆನಪಿದ್ದ ಹಾಗೇ ಜೋಯಿಸರ ಮನೆಗೆ ಬರಿಯ ಕೈಯಲ್ಲಿ ಹೋಗಬಾರದೆಂಬುದೂ ನಿಮಗೆ ನಿಮಗಿರಬಹುದು ಅಂದುಕೊಳ್ಳುತ್ತೇನೆ ”ಎಂದಳು ಲಕ್ಷ್ಮಿ.
”ಹೂಂ ಗೊತ್ತಿದೆ ಲಕ್ಷ್ಮೀ, ವೀಳ್ಯದೆಲೆ, ಅಡಿಕೆ ಮನೆಯಲ್ಲಿದೆ. ಹಣ್ಣುಗಳು, ಹೂ ತರಲು ಬಸವನ ಕ್ಯಯಲ್ಲಿ ದುಡ್ಡು ಕೊಟ್ಟಿದ್ದೇನೆ. ಅವನು ಬೆಳಿಗ್ಗೆಯೇ ಬರುತ್ತಾನೆ. ಅವನು ತಂದಿದ್ದು ಸಾಕಾಗಲಿಲ್ಲದಿದ್ದರೆ ಹೇಳು ನಾನು ತಂದುಕೊಡುತ್ತೇನೆ”ಎಂದರು ಭಟ್ಟರು.
”ವೆರಿಗುಡ್, ಅಂತೂ ನನ್ನ ಗಂಡನಿಗೆ ಜವಾಬ್ದಾರಿ ಬಂದಿದೆ ಎಂದ ಹಾಗಾಯ್ತು. ಈ ಸಮಯದಲ್ಲಿ ಹಿರಿಯರಿದ್ದರೆ ಚೆನ್ನಾಗಿತ್ತು. ಅವರಿಗೆ ಅಷ್ಟೇನು ಅವಸರವಾಗಿತ್ತೋ ಒಬ್ಬರಿಂದೆ ಒಬ್ಬರು ನಾಲ್ಕೂ ಜನರು ಹೇಳಿ ಕರೆಸಿಕೊಂಡಂತೆ ಹೋಗೇ ಬಿಟ್ಟರು. ಅವರ ಓರಿಗೆಯವರು ನಮ್ಮ ಕಣ್ಮುಂದೆಯೇ ಓಡಾಡಿಕೊಂಡಿದ್ದಾರೆ. ಅವರನ್ನು ನೋಡಿದರೆ ನಾವೆಷ್ಟು ಅದೃಷ್ಟಹೀನರು ಅನ್ನಿಸುತ್ತದೆ”ಎಂದು ನೋವಿನಿಂದ ಹೇಳಿಕೊಂಡಳು ಲಕ್ಷ್ಮಿ.
”ಹೌದು ಲಕ್ಷ್ಮೀ, ಅಜ್ಜಾ, ಅಜ್ಜಿ ಹೋಗಲಿ ಅವರಿಗೆ ತುಂಬ ವಯಸ್ಸಾಗಿತ್ತು. ಆರೋಗ್ಯವೂ ಅಷ್ಟಕ್ಕಷ್ಟೇ ಆಗಿತ್ತು. ಅದೇನೋ ಹೇಳ್ತಾರಲ್ಲಾ, ‘ತೀರ್ಥ ತಗೊಂಡ್ರೆ ಶೀತ, ಮಂಗಳಾರತಿ ತಗೊಂಡ್ರೆ ಉಷ್ಣ’ ಅನ್ನುವ ಹಂತಕ್ಕೆ ಮುಟ್ಟಿದ್ದರು. ಆದರೆ ನನ್ನ ಹೆತ್ತವರು ಚೆನ್ನಾಗಿಯೇ ಇದ್ದರು. ಆದರೂ ಸರಸರನೆ ನಡೆದೇಬಿಟ್ಟರು ಈ ಮಗನನ್ನು ತಬ್ಬಲಿಮಾಡಿ. ಆದರೆ ಒಂದು ಉಪಕಾರ ಮಾಡಿದರು ನೋಡು ”ಎಂದರು ಭಟ್ಟರು.
”ಉಪಕಾರಾನೇ ! ಅದೇನಪ್ಪಾ? ”ಎಂದಳು ಲಕ್ಷ್ಮಿ.
”ಅವರಿದ್ದಿದ್ದರೆ ನನಗೆ ಜವಾಬ್ದಾರಿ ಬರುತ್ತಿತ್ತೋ ಇಲ್ಲವೋ,,ನೀನು ಇಷ್ಟು ಹೇಳಲೂ ಆಗುತ್ತಿರಲಿಲ್ಲ. ನೀನು ಯಾವಾಗಲೂ ಹೇಳುತ್ತೀಯಲ್ಲ, ‘ಊಟ ತಿಂಡಿಗೆ ಮುದ್ದು ಉಳಿದದ್ದಕ್ಕೆಲ್ಲಾ ಗುದ್ದು’ ಅಂತ ಅದನ್ನವರು ಮಾಡಲೇ ಇಲ್ಲ, ಈಗ ನನಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಅದಕ್ಕೇ ನೀನು ಮಕ್ಕಳು ತಪ್ಪು ಮಾಡಿದಾಗ, ತಿದ್ದುವಾಗ ಶಿಕ್ಷೆ ಕೊಡುವಾಗ ನಾನು ಅಡ್ಡ ಬಾರದೇ ಇರುವುದು. ಅವರೂ ನನ್ನಂತಾಗಬಾರದು” ಎಂದು ವೇದನೆಯಿಂದ ನುಡಿದರು ಭಟ್ಟರು.
”ಬಿಡಿ ಆ ಹಳೆಯ ಮಾತುಗಳನ್ನು, ಹಿರಿಯರಿದ್ದಿದ್ದರೆ ಚಂದ ಅಂದಿತು ಮನಸ್ಸು. ಅದನ್ನು ನೆನಪಿಸಿ ನಿಮಗೆ ದುಃಖವನ್ನುಂಟು ಮಾಡಿದೆ. ಇನ್ನು ಮಲಗಿ. ನೀವೇ ಹೇಳಿದ ಮಾತು ಗಸಗಸೆ ಪಾಯಸ ಕುಡಿದರೆ ಸೊಗಸಾದ ನಿದ್ರೆ” ಎಂದು ವಿಷಯ ಬದಲಿಸಿ ಮುಂದಿನ ಮಾತಿಗೆ ಅವಕಾಶ ಕೊಡದೆ ದೀಪವಾರಿಸಿದಳು ಲಕ್ಷ್ಮಿ.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ :http://surahonne.com/?p=34948
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಬಹಳ ಸುಂದರವಾಗಿದೆ ಕಾದಂಬರಿ. ಕೆಲಸಕ್ಕೆ ಹೋಗದೆ ಮನೆ ನಿಭಾಯಿಸುವ ಹೆಣ್ಣೂ ಎಷ್ಟು ಬುದ್ದಿವಂತಳು ಹಾಗೂ ಅವಳ ಮಹತ್ವವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ.
ನಿಮ್ಮ ಪ್ರತಿ ಕ್ರಿಯೆಗೆ ನನ್ನ ಧನ್ಯವಾದಗಳು ನಯನ ಮೇಡಂ
ಸಂತೋಷದಿಂದಿರಲು, ಆರ್ಥಿಕ ಬಡತನ ಅಡ್ಡಬರುವುದಿಲ್ಲ, ಹೃದಯ ಶ್ರೀಮಂತಿಕೆಯಿದ್ದರೆ ಸಾಕು ಎಂದು ಪಾಯಸದ ಪ್ರಕರಣ ನಿರೂಪಿಸುವ ಕಾದಂಬರಿಯ ಈ ಕಂತೂ ಎಂದಿನಂತೆ ಆಪ್ಯಾಯಮಾನವಾಗಿದೆ.
ಧನ್ಯವಾದಗಳು ಗೆಳತಿ ಪದ್ಮಾ
ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಓದುಗರ ಮನಗೆದ್ದಿದೆ ಎನ್ನುವುದರಲ್ಲಿ ಸಂಶಯವಿಲ್ಲ…ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಚೆನ್ನಾಗಿ ದೆ ಮುಂದಿನ ಭಾಗಕ್ಕೆ ಕಾಯುವೆ
ಧನ್ಯವಾದಗಳು ಆಶಾ ಮೇಡಂ.