ಪ್ರವಾಸ

ಅವಿಸ್ಮರಣೀಯ ಅಮೆರಿಕ-ಎಳೆ 13

Share Button

ಹಾಲಿವುಡ್ ನಲ್ಲಿ ಕೊನೆ ದಿನ…

ಅದಾಗಲೇ ಸಂಜೆ ನಾಲ್ಕು ಗಂಟೆ.. ನಮ್ಮಲ್ಲಿಯ ಜಾತ್ರೆಯಲ್ಲಿ ಇರುವಂತೆ ಕಿಕ್ಕಿರಿದ ಜನಸಂದಣಿಯನ್ನು ಅಮೇರಿಕದಲ್ಲಿ ಮೊದಲ ಬಾರಿಗೆ ನೋಡಿದೆ ಎನಿಸಿತು. ಆದರೆ ಅಲ್ಲಿ ನಮ್ಮಲ್ಲಿಯಂತೆ ಗೌಜಿ ಗದ್ದಲ ಕಾಣಲಾರದು. ಅತ್ಯಂತ ವಿಶಾಲವಾದ ಎಕರೆಗಟ್ಟಲೆ ಜಾಗದಲ್ಲಿ  ಆಕಾಶದೆತ್ತರದ  ಜೈಂಟ್ ವೀಲ್ ಗಳು,  ಉರುಳಾಡಿಕೊಂಡು ಚಿತ್ರವಿಚಿತ್ರ ರೀತಿಯಲ್ಲಿ ಸುತ್ತುವ ರೋಲರ್ ಕೋಸ್ಟರ್..ಒಂದೇ.. ಎರಡೇ? ಹತ್ತಾರು ಬಗೆಗಳ ಮನೋರಂಜನಾ ತಾಣಗಳು. ಬಗೆ ಬಗೆಯ ಅಂಗಡಿಗಳಲ್ಲಿ ವ್ಯಾಪಾರವೂ ಜೋರಾಗಿಯೇ ನಡೆದಿತ್ತು.

ಒಂದು ಉದ್ದನೆಯ ಕ್ಯೂ ಇದ್ದ ಕಡೆಗೆ ನಾವು ಹೋದಾಗ ಅಳಿಯ ನಮ್ಮನ್ನೂ ಅದರಲ್ಲಿ ಸೇರಿಕೊಳ್ಳಲು ಹೇಳಿದ. ಆದರೆ ನನಗೆ ಸ್ವಲ್ಪ ಅನುಮಾನದ ಗಾಳಿ ತಾಗಿದ್ದರಿಂದ ನಾವಿಬ್ಬರು ಬೇಡವೆಂದೆವು..ಅದು ರೋಲರ್ ಕೋಸ್ಟರ್ ನಲ್ಲಿ ಕುಳಿತುಕೊಳ್ಳಲು ಇರುವ ಕ್ಯೂ ಆಗಿತ್ತು. ಸ್ವಲ್ಪ ಎತ್ತರದಲ್ಲಿ ನಿಂತರೇನೇ ಸಿಕ್ಕಾಪಟ್ಟೆ ಭಯಪಡುವ ನಾನಂತೂ ಅದನ್ನು ನೋಡಿಯೇ ಕಂಗಾಲಾಗಿ ಹೋಗಿದ್ದೆ. ನಮ್ಮ ಭಯ ನಿವಾರಣೆಗಾಗಿ, ಅಳಿಯ ಸಮಾಧಾನಿಸಿ, ಅದು ಬೇರೆ ರೈಡ್ ಗೆ ಹೋಗುವ ಕ್ಯೂ ಎಂದು ಮನದಟ್ಟು ಮಾಡಿಸಿದ. ಅವನ ಮಾತನ್ನು ನಂಬಿದ ನಾವಿಬ್ಬರೂ ಹೋದದ್ದೇ ತಡ ನಮ್ಮೆದುರಿನ ಗೇಟ್ ಹಾಕಿಬಿಟ್ಟರು..ನಮ್ಮೆದುರಿಗೆ ದೈತ್ಯಾಕಾರವಾಗಿ ಆಕಾಶದೆತ್ತರ ನಿಂತ ರೋಲರ್ ಕೋಸ್ಟರ್ ನನ್ನನ್ನೇ ನುಂಗಲು ಕಾದಿರುವಂತೆ ಭಾಸವಾಯಿತು! ಹಿಂದಕ್ಕೆ ಹೋಗುವ ಹಾಗೆ ಇರಲಿಲ್ಲ. ಇನ್ನೇನು ಮಾಡಲಿ… ಬೇರೆ ದಾರಿ ಇಲ್ಲದೆ ಎಲ್ಲರ ಜೊತೆ ಬಲವಾದ ಬೆಲ್ಟ್ ಬಿಗಿದು ಬಲಿಪಶುವಂತೆ ಕುಳಿತಾಯಿತು. ಅದರಲ್ಲಿ ಆಟವನ್ನು ಆಸ್ವಾದಿಸುವುದು ಬಿಡಿ.. ನನ್ನ ಪ್ರಾಣವು ಅಲ್ಲೇ ಹೋಗುವುದೆಂದು ನನಗೆ ಖಾತ್ರಿಯಾಯಿತು! ರೋಲರ್ ಕೋಸ್ಟರ್ ತಿರುಗಲು ಪ್ರಾರಂಭವಾಗುತ್ತಿದ್ದಂತೆಯೇ ಬೇರೇನೂ ಮಾಡಲು ತೋಚದೆ ನನ್ನ ವಿಜ್ಞಾನದ ಬುದ್ಧಿಯನ್ನು ಉಪಯೋಗಿಸಿದೆ. ಕಣ್ಣು ತೆರೆದರಲ್ಲವೇ ಭಯ ಎಲ್ಲಾ..ಅದನ್ನು ಆದಷ್ಟು ಬಿಗಿಯಾಗಿ ಮುಚ್ಚಿ ಕುಳಿತೆ ನೋಡಿ..ಆದದ್ದಾಗಲಿ ಎಂದು! ಅದು..ಅದರ ಜೊತೆ ನಾನೂ ಉಲ್ಟಾಪಲ್ಟಾ ತಿರುಗುವ ಅನುಭವ ಅಗುತ್ತಿತ್ತು, ಆದರೆ ನಾನು ನಿಶ್ಚಿಂತೆಯಿಂದ ಕುಳಿತಿದ್ದೆ..ಏನು ಬೇಕಾದರೂ ಆಗಲಿ ಎಂದುಕೊಂಡು!!

ಅಂತೂ ಹತ್ತು ನಿಮಿಷಗಳ ಉರುಳಾಟ , ಹೊರಳಾಟ ಮುಗಿದು ಕೆಳಗಿಳಿದಾಗ ನಾನಿನ್ನೂ ಜೀವಂತ ಇದ್ದೇನೆಂದು ಆಶ್ಚರ್ಯವಾಯ್ತು!

ಅದಾಗಲೇ ಕತ್ತಲಾವರಿಸಿತ್ತು. ಕೊನೆಯದಾಗಿ, ನೂರಾರು ಅಡಿಗಳಷ್ಟು ಎತ್ತರದ ಜೈಂಟ್ ವ್ಹೀಲ್ ಏರುವ ಉತ್ಸಾಹದಲ್ಲಿ ಹೋಗುತ್ತಿರುವಾಗ ನನ್ನಲ್ಲಿ ಆಗಿದ್ದ ಬದಲಾವಣೆ ಗಮನಕ್ಕೆ ಬಂತು.. ಹೈಟ್ ಫೋಬಿಯಾ ಪಲಾಯನ ಮಾಡಿತ್ತು! ಜೈಂಟ್ ವ್ಹೀಲ್ ಏರುವ ಧೈರ್ಯ ಬಂದುದರಿಂದ ಎಲ್ಲರಿಂದ ಮುಂದುಗಡೆ ನಾನೇ ನಿಂತುಬಿಟ್ಟಿದ್ದೆ. ಅರೆ ಕತ್ತಲಲ್ಲಿ ಆಕಾಶದೆತ್ತರ ಎದ್ದು ನಿಂತಿದ್ದ ರಾಟೆ ತೊಟ್ಟಿಲು ನೋಡಿಯೇ ದಂಗಾಗಿ ಬಿಟ್ಟಿದ್ದೆ.  ಒಂದೊಂದು ತೊಟ್ಟಿಲು ಕೂಡಾ ಒಮ್ಮೆಲೇ ಹತ್ತಿಪ್ಪತ್ತು ಜನರು ಕುಳಿತುಕೊಳ್ಳಬಲ್ಲಷ್ಟು  ದೊಡ್ಡದಾದ ಕೋಣೆಯಷ್ಟಿತ್ತು. ನಾಲ್ಕೂ ಬದಿಗಳಿಗೂ ಗಾಜಿನ ಗೋಡೆ. ಬಾಗಿಲಿರುವ  ಪಕ್ಕ ಬಿಟ್ಟು ಉಳಿದ ಮೂರೂ ಕಡೆಗಳಲ್ಲಿ ಬೆಲ್ಟ್ ಬಿಗಿದುಕೊಂಡು ಆರಾಮವಾಗಿ ಕುಳಿತುಕೊಳ್ಳಲು  ಅಗಲವಾದ ಆಸನಗಳು. ಅದರೊಳಗೆ ಹೋದಾಗ ಯಾವುದೋ ಮನೆಯ ಕೋಣೆಗೆ ಹೊಕ್ಕಂತೆ ಭಾಸವಾಯಿತು. ಬೃಹದಾಕಾರದ ರಾಟೆ ತೊಟ್ಟಿಲು ಮೆಲ್ಲನೆ ತಿರುಗಿ, ನಾವು ಅತ್ಯಂತ ಮೇಲ್ಭಾಗಕ್ಕೆ ಬಂದಾಗ,  ಪೂರ್ತಿ ಲಾಸ್ ಏಂಜಲ್ಸ್, ವಿದ್ಯುದ್ದೀಪದ ಬೆಳಕಲ್ಲಿ ಝಗ ಝಗಿಸುವುದು ನೋಡಲು ಎರಡು ಕಣ್ಣುಗಳೂ ಸಾಲವೆಂದೆನಿಸಿತು. ಎದುರಿನ ಕೊಳದಲ್ಲಿ ಕಂಡ ಪ್ರತಿಬಿಂಬವು ಮೈಸೂರು ಅರಮನೆಯನ್ನು ನೆನಪಿಸಿತು. ಅರ್ಧ ಗಂಟೆಯ ನಮ್ಮ ಈ ರೈಡ್ ನ ಸಮಯವು ಸರಿದುದೇ ತಿಳಿಯಲಿಲ್ಲ.

ಮುಂದಕ್ಕೆ, ಹತ್ತಾರು ಅಂಗಡಿಗಳು ಇದ್ದರೂ, ಹೆಚ್ಚಿನ ಕಡೆಗಳಲ್ಲಿ ಸ್ಪರ್ಧೆಯ ಮೋಜಿನ ಆಟಗಳನ್ನಿಟ್ಟು ಹಣ ಗಳಿಸುವುದು ಕಂಡುಬಂತು. ನಾವು ಒಂದೆರಡು ಆಟಗಳಲ್ಲಿ ಭಾಗವಹಿಸಿ ಸ್ವಲ್ಪ ಡಾಲರ್ ಕಳಕೊಂಡದ್ದಷ್ಟು ಬಂತು! ಒಂದು ಕಡೆಗಿದ್ದ ಅರ್ಧ ಚಂದ್ರಾಕೃತಿಯ ಪುಟ್ಟ ವೇದಿಕೆಯ ಸುತ್ತಲೂ ಸುಮಾರು ಅರುವತ್ತು ಮಂದಿ ಕುಳಿತು ನೋಡುವ ಅವಕಾಶವಿತ್ತು. ಅಲ್ಲಿ ಕುಳಿತು ನೋಡಿದ ಹಲವಾರು ಜಾದೂ ಹಾಗೂ ಜಿಮ್ನಾಸ್ಟಿಕ್ ನ ಆಟಗಳು ಮೈ ನವಿರೇಳಿಸಿದವು. ಲಾಸ್ ಏಂಜಲ್ಸ್ ನ ಪೂರ್ತಿ ಸುತ್ತಾಟದಲ್ಲಿ ಭಯ ಪಡದೆ ಖುಷಿಯಿಂದ ಕುಳಿತು ನೋಡಿದ  ಕಾರ್ಯಕ್ರಮಗಳಲ್ಲಿ ಇದೂ ಒಂದು ಎನ್ನಬಹುದು.

ಇದು ಪ್ರಸಿದ್ಧ ಹಾಲಿವುಡ್ ನಲ್ಲಿ ನಮ್ಮ ಕೊನೆಯ ದಿನವಾಗಿತ್ತು.  ಹಾಗೆಯೇ ರಸ್ತೆ ಸುತ್ತಾಟಕ್ಕೆ ಹೊರಟಾಗ, ರಸ್ತೆ ಪಕ್ಕದಲ್ಲಿ ಝಗಝಗಿಸುವ, ಕಣ್ಮನ ಸೆಳೆಯುವ ವಿವಿಧ ರೀತಿಯ ಪ್ರದರ್ಶನಗಳು ನಡೆಯುತ್ತಿದ್ದುದು ಗಮನಕ್ಕೆ ಬಂತು. ಅತಿ ದೊಡ್ಡದಾದ ಗೋರಿಲ್ಲಾವೊಂದು ರಸ್ತೆ ಮಧ್ಯದಲ್ಲೇ ಠಳಾಯಿಸುತ್ತಿತ್ತು! … ಭಯಬೇಡ..ಆಂಗ್ಲ ಸಿನಿಮಾದ ವಿವಿಧ ಪಾತ್ರಗಳ ಆನೇಕ ವೇಷಧಾರಿಗಳು ಹೋದೆಡೆಗಳಲ್ಲೆಲ್ಲಾ ಕಾಣಸಿಗುತ್ತಿದ್ದರು.  ಇವರ ಕೈಗೆ ಒಂದೆರಡು ಡಾಲರ್ ಹಾಕಿದರೆ ಖುಷಿಯಿಂದ ಪಡೆಯುವರು..ಆದರೆ ಅದಕ್ಕಾಗಿ ಪೀಡಿಸುವುದು ಎಲ್ಲೂ ಕಾಣಲಿಲ್ಲ. ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಅವರ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದರು.  ಬೃಹದಾಕಾರದ ನಿರ್ವಾತ ಗಾಜಿನ ಗೋಳದೊಳಗೆ ಕೆಲವರು ತೇಲುತ್ತಿರುವುದನ್ನು ಗಮನಿಸಿದೆವು… ಅದು ಬಾಹ್ಯಾಕಾಶ ಪಯಣದ ವಿಶೇಷ  ಅನುಭವವಕ್ಕಾಗಿಯೇ ಇತ್ತು, ಇದನ್ನು ಹೊರಗಡೆಯಿಂದಲೇ ನೋಡಿ ಖುಷಿ ಪಟ್ಟೆವು.

ಅಂತೂ. ನಮ್ಮ ಪ್ರವಾಸದ ಕೊನೆಯ ಹಂತ ತಲಪಿದ್ದೆವು. ನಮ್ಮ ಬಾಲಿವುಡ್ ನ್ನೇ ನೋಡದ ನಾನು ಹಾಲಿವುಡ್ ನ್ನು ನೋಡುವ ಅವಕಾಶವನ್ನು ಕಲ್ಪಿಸಿದ ಆ ಕರುಣಾಮಯಿ ಭಗವಂತನಿಗೆ ಮನದಲ್ಲೇ ವಂದಿಸಿದೆ. ಅಭೂತಪೂರ್ವ ಅನುಭವಗಳ ಸಿಹಿಮೂಟೆಯನ್ನು ಹೊತ್ತು ಮನಸ್ಸಿಲ್ಲದ ಮನಸ್ಸಿನಿಂದ ಹೊರಡಲು ಸಜ್ಜಾದೆವು. ಮರುದಿನ ಬೆಳ್ಳಂಬೆಳಗ್ಗೆ ನಮ್ಮ ಸಾರಥಿಗಳು,

ನಮ್ಮ ಗಮ್ಯವಾದ ಮೌಂಟೆನ್ ವ್ಯೂ ಕಡೆಗೆ ನಮ್ಮನ್ನೊಯ್ಯಲು  ಸನ್ನದ್ಧರಾದರು.

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=34931

ಮುಂದುವರಿಯುವುದು….

-ಶಂಕರಿ ಶರ್ಮ, ಪುತ್ತೂರು,

7 Comments on “ಅವಿಸ್ಮರಣೀಯ ಅಮೆರಿಕ-ಎಳೆ 13

  1. ಅಮೆರಿಕ ಪ್ರವಾಸ ದ ಸಮಯದಲ್ಲಿ.ಅಲ್ಲಿ ನ ಮನೋರಂಜನೆಯಲ್ಲಿ ನಿಮ್ಮ ಭಾವನಾತ್ಮಕ ತಾಕಲಾಟ ಬಹಳ ಕುತೂಹಲ ಕೆರಳಿಸಿತು.. ಧನ್ಯವಾದಗಳು ಮೇಡಂ

    1. ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಮೇಡಂ.

  2. ಅಂತೂ ಅಮೆರಿಕಾ ಪ್ರವಾಸದಿಂದ ನಿಮ್ಮ ಹೈಟ್‌ ಫೋಬಿಯಾ ಓಡಿ ಹೋಯಿತಲ್ಲಾ! ಸೊಗಸಾದ ನಿರೂಪಣಾ ಶೈಲಿಯಿಂದ ಮುದ ನೀಡುತ್ತಿದೆ ಅಮೆರಿಕಾ ಪ್ರವಾಸ ಕಥನ

    1. ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು ಮೇಡಂ.

Leave a Reply to ASHA nooji Cancel reply

 Click this button or press Ctrl+G to toggle between Kannada and English

Your email address will not be published. Required fields are marked *