ಮಹಿಳೆಯ ಕೌಟುಂಬಿಕ ಬಾಂಧವ್ಯ ಹಾಗೂ ಬದ್ಧತೆ
ಭಾರತೀಯ ಮಹಿಳೆಯ ಸಂಸ್ಕೃತಿ- ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿರುವಂತಾದ್ದು. ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು. ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!. ಒಬ್ಬ ಸ್ತ್ರೀ ಅಥವಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ.ಹುಟ್ಟು ಕುಟುಂಬ ಒಂದಾದರೆ; ಸೇರಿದ ಕುಟುಂಬ ಇನ್ನೊಂದು. ಹಾಗೆಯೇ ಬಾಂಧವ್ಯದಲ್ಲೂ ರಕ್ತ ಸಂಬಂಧ ಹಾಗೂ ನೆಂಟಸ್ತಿಕೆ ಸಂಬಂಧ ಎಂಬೀ ಎರಡು ವಿಧಗಳು.
ವಿವಾಹವಾಗುವ ಸಂದರ್ಭದಲ್ಲಿ ಸಪ್ತಪದಿ ತುಳಿಯುವಾಗ ಪುರೋಹಿತರು ನೀಡುವ ಉಪದೇಶದಂತೆ ‘ಧರ್ಮೇಚ, ಅರ್ಥೇಚ, ಕಾಮೇಚ, – ಸತಿಪತಿಗಳಾದ ನೀವಿಬ್ಬರೂ ಬದುಕಿನುದ್ದಕ್ಕೂ ಧರ್ಮ, ಅರ್ಥ,ಕಾಮ, ಮೋಕ್ಷಗಳ ಸಾಧನೆಗಾಗಿ ಜೊತೆಯಲ್ಲೇ ಬಾಳಬೇಕು. ಬೌದ್ಧಿಕ ಉನ್ನತಿಗಾಗಿ ಧರ್ಮ, ಶರೀರದ ಪೋಷಣೆಗಾಗಿ ಅರ್ಥ, ಸಂತೃಪ್ತಿ ಸಂತಾನಕ್ಕಾಗಿ ಕಾಮ, ಆತ್ಮೋನ್ನತಿಗಾಗಿ ಮೋಕ್ಷ; ಎಂಬುದು ಹಿಂದೂಗಳ ನಂಬಿಕೆ.
ವಿವಾಹವು ಹೆಣ್ಣಿನ ಬದುಕಿಗೊಂದು ಆಧಾರ. ಈ ವಿಚಾರ ಆಧುನಿಕ ಕಾಲಕ್ಕೆ ಅನ್ವೈಸುವುದಿಲ್ಲ ಎನ್ನುವುದಾದರೂ ಹೆಣ್ಣಿಗೊಂದು ರಕ್ಷಣೆಬೇಕು ಎಂಬುದು ಸರ್ವಕಾಲಿಕ ಸತ್ಯ. “ಹೆಣ್ಣಿಗೆ ವಿವಾಹವಾಗುವ ತನಕ ತಂದೆಯೂ ವಿವಾಹದ ನಂತರದಲ್ಲಿ ಪತಿಯೂ ಮುಂದೆ ವೃದ್ಧಾಪ್ಯದಲ್ಲಿ ಮಕ್ಕಳೂ ಆಸರೆ” ಎಂದು ‘ಮನು ಸ್ಮೃತಿ’ ಯಲ್ಲಿ ಬರೆದಿದ್ದಾನೆ.
ಮದುವೆಯಾಗಿ ಪತಿಗೃಹಕ್ಕೆ ಕಾಲಿಟ್ಟಮೇಲೆ ಹೆಣ್ಣಿನ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲಿ ಕೆಲವರಿಗೆ ಒಂದು ರೀತಿಯ ಭಯದಿಂದಾಗಿ ಪ್ರತಿಯೊಂದಕ್ಕೂ ಗಾಬರಿ,ಗಲಿಬಿಲಿ ಅನುಭವ ಆಗಬಹುದು. ತವರಿನಲ್ಲಿ ಇದ್ದಂತೆ ಸೇರಿದ ಮನೆಯಲ್ಲಿ ಸ್ವೇಚ್ಛೆಯಾಗಿರಲು ಬರುವುದಿಲ್ಲ. ಆದರೆ ಧೈರ್ಯ, ಆತ್ಮವಿಶ್ವಾಸ ಇದ್ದವರು ಎದೆಗುಂದದೆ ವಾಸ್ತವಿಕತೆಯ ಭದ್ರ ನೆಲೆಗಟ್ಟಿನಲ್ಲಿ ನಿಲ್ಲುತ್ತಾರೆ. ಮಕ್ಕಳು ಮರಿಗಳಾದ ಮೇಲಂತೂ ಜವಾಬ್ದಾರಿ ಹೆಚ್ಚುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ,ಕಷ್ಟ ಕೋಲೆಗಳು ಎದುರಾಗುತ್ತವೆ. ಒಂದು ರೀತಿಯ ತ್ಯಾಗ,ಸಹನೆಗಳ ಪರೀಕ್ಷೆ ಆಗಬಹುದು. ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಗೋಡೆ, ಬದುಕಿನ ನದಿಯನ್ನು ತಡೆ ಹಿಡಿದು ಆತ್ಮ ವಿಶ್ವಾಸ ಕುಂಠಿಸಬಹುದು. ಆದರೆ ಒಂದೊಂದು ಸಮಸ್ಯೆಯೂ ಅವಕಾಶವನ್ನು ಸೃಷ್ಟಿಸುತ್ತದೆಯಲ್ಲದೆ ಅನುಭವದ ಪಾಠವನ್ನು ಕಲಿಸುತ್ತದೆ. ಇಂತಹ ಸಿಹಿ- ಕಹಿ ಅನುಭವದಿಂದಲೇ ಯುವತಿ ಪ್ರಬುದ್ಧಳಾಗುತ್ತಾಳೆ. |ಗೃಹಿಣಿ ಗೃಹಮುಚ್ಚ್ಯತೇ| ಸದ್ಗೃಹಿಣಿಯು ಮನಗೆ ಶೋಭೆಯನ್ನು ತರುವವಳಾಗಿದ್ದಾಳೆ. ಈಗಿನ ಉದ್ಯೋಗಸ್ಥೆಯು ಈ ಮಾತನ್ನು ತಳ್ಳಿ ಹಾಕಬಹುದಾದರೂ ಹೊರಗೆ ದುಡಿಯುವ ಮಹಿಳೆ ,ಎರಡೂ ಜವಾಬ್ದಾರಿಗಳನ್ನು ಹೊರಬಲ್ಲವಳಾದರೆ (ವಿಭಕ್ತ ಕುಟುಂಬವಾದರೂ) ಅಲ್ಲಿ ಸುಖ,ಸಾಮರಸ್ಯಗಳು ನೆಲೆಯೂರಲು ಸಾಧ್ಯವಿದೆ. ಮಹಿಳೆಯರು ತಾರುಣ್ಯದಿಂದಲೇ ತಮ್ಮ ಗುಣಶೀಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾಗುತ್ತದೆ.
ವಧುವನ್ನು ನೋಡಲು ಬಂದಾಗ ಅವಳಲ್ಲಿ ಹಾಡು- ಹಸೆ ಹೇಳಿಸಿ, ಉತ್ತೀರ್ಣಳಾದರೆ, ಅಡಿಗೆ ಕೆಲಸ, ಮನೆಗೆಲಸ ಬಲ್ಲವಳಾದರೆ, ವರನ ಕಡೆಯವರು ಆಯ್ಕೆಮಾಡುವ ಕಾಲವೊಂದಿತ್ತು!. ಹಿರಿಯರು ನೋಡಿ ನಿರ್ಣೈಸಿದ ಮೇಲಷ್ಟೇ ಮದುವೆ ನಡೆಯುವುದಲ್ಲದೆ; ಹುಡುಗ- ಹುಡುಗಿ ಪರಸ್ಪರ ಮುಖ ನೋಡಿಕೊಳ್ಳುವದೂ ಧಾರೆಮಂಟಪದಲ್ಲಿ ಅಂಕಪರದೆ ಇಳಿದು ಹಸೆ ಮಣೆಯ ಮೇಲಷ್ಟೇ ಆಗಿತ್ತು. ಹೀಗೆ ಮನೆತುಂಬಿ ಬಂದ ಹೆಣ್ಣು ಮನೆಗೆಲಸ, ಮನೆಮಂದಿಯ ಊಟೋಪಚಾರ, ಹಿರಿಯರ ಬೇಕು- ಬೇಡಗಳನ್ನೆಲ್ಲ ಪೂರೈಸಬೇಕಲ್ಲದೆ ‘ಕ್ಷಮಯಾಧರಿತ್ರಿ’ ಎಂದು ಆಕೆಗೆ ಹಿತವಚನ ಹೇಳಲಾಗುತ್ತಿತ್ತು. ಆಕೆ ಭೂಮಿತೂಕದವಳಾಗಿರಬೇಕೆಂದು ಮನೆಯವರೂ ಬಂಧುವರ್ಗದವರೂ ಬಯಸುತ್ತಿದ್ದರು. ಅಂತಹ ಕನ್ಯೆಯ ವಯಸ್ಸು ಎಷ್ಟು ಗೊತ್ತೇ….!? ಕೇಳಿ ಬೆಚ್ಚಿ ಬೀಳಬೇಡಿ. ಕೇವಲ ಐದರಿಂದ ಹತ್ತುವರ್ಷದೊಳಗೆ!!.ಹೀಗೆ ವಿವಾಹವಾಗಿ ಸಾಗಿಬಂದ ತಲೆಮಾರು ಉತ್ಸಾಹಿಗಳೂ ಅನುಭವಿಗಳೂ ಕಿರಿಯರಿಗೆ ಮಾರ್ಗದರ್ಶಕರೂ ಆಗಿ ಕಾಣಸಿಗುತ್ತಾರೆ.
|ಹೆಣ್ಣು ಹುಟ್ಟತು ಎಂದು ಅಣ್ಣ ಚಿಂತಿಸಬೇಡ|ಹೆಣ್ಣಂಗು ಪರರ ಒಡವೆಯ| ಆ ಹೆಣ್ಣು ಅಣ್ಣಾ ನೀ ಬಾರೆಂದೆ ಕರೆಯುಗು|| ಅದೆಷ್ಟು ಅರ್ಥ ಗರ್ಭಿತವಾಗಿದೆ ಈ ಸಾಲುಗಳು!. ಪುತ್ರಸಂತಾನಕ್ಕಾಗಿ ಬಯಸಿ,ಬಯಸಿ, ಹಲವು ದೇವರುಗಳಿಗೆ ಹರಕೆಹೊತ್ತು ಪಡೆದ ಮಗುವಿಗೆ ,ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ,ಇಂಜಿನಿಯರೋ ಡಾಕ್ಟ್ರೋ ಆಗಿ ಹೊರದೇಶದಲ್ಲಿ ಹೋಗಿ ಕುಳಿತು ,ತಂದೆ- ತಾಯಿಯರನ್ನು ಮರೆತು ಬಿಡುವ ಸನ್ನಿವೇಶವೇ ಈಗ ಎಲ್ಲೆಡೆ ಕಾಣುತ್ತಿದೆ.ಅಂತಹವರಿಗಾಗಿಯೇ ಅದೆಷ್ಟೋ ಕಾಲದ ಹಿಂದೆ ಮೇಲಿನ ಜಾನಪದ ಹಾಡು ರಚಿಸಿದ್ದಾರೆ ಎಂದು ಅನಿಸದಿರದು.
ಹೆಣ್ಣಿನ ಶ್ರೇಷ್ಠತೆ:- ಯಾದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ| ನಮಸ್ತಸ್ಮೈ ನಮಸ್ತ್ಸಮೈ ನಮಸ್ತಸ್ಮೈ ನಮೋ ನಮಃ|| ಎಂಬ ಜಗನ್ಮಾತೆಯ ಈ ಸ್ತುತಿಯಿಂದ ಮಾತೆಯ ಮಹತ್ವದ ಅರಿವಾಗುವುದು.
| ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ| ಎಂದು ಶಂಕರಾಚಾರ್ಯರು ತಾವು ರಚಿಸಿದ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಹೇಳಿದ್ದಾರೆ. “ಲೋಕದಲ್ಲಿ ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಇರಲಾರಳು.
ಸ್ತ್ರೀ ಇತರ ಬಾಂಧವ್ಯಗಳಿಂದ ಮಾತೆಯಾಗಿ ಮಾಡುವ ಜವಾಬ್ದಾರಿಗಳೇ ಹಿರಿದು ಎನಿಸುತ್ತದೆ. ಭ್ರೂಣ ರೂಪದಿಂದ ಹಿಡಿದು ಮಗು ಜನಿಸಿ ಅದಕ್ಕೆ ಹೊರಗಿನ ಪ್ರಪಂಚದ ಆಗು ಹೋಗುಗಳ ತಿಳುವಳಿಕೆ ಬರುವವರೆಗೂ ಮಗು ತಾಯಿಯನ್ನೇ ಅವಲಂಬಿಸಿರುತ್ತದೆ. ಒಂದೇ ತಟ್ಟೆಯಲ್ಲಿ ಒಟ್ಟಿಗೆ ಊಟ ಮಾಡುವವರಿದ್ದಾರೆ. ಆದರೆ ಒಂದೇ ಬಾಯಿಯಲ್ಲಿ ಊಟ ಮಾಡುವವರೆಂದರೆ ; ಅದು ತಾಯಿ- ಮಗು ಗರ್ಭಸ್ಥ ರೂಪದಲ್ಲಿ.
ಮಗುವು ತಾಯಿಯ ಆಧಾರದಿಂದ ಮಾತ್ರವಲ್ಲದೆ ಆಚಾರ,ವಿಚಾರ, ಚಿಂತನೆಗಳು ಅಮ್ಮನ ಮನಸ್ಥಿತಿಯಿಂದಲೂ ಪ್ರಭಾವಿತವಾಗುತ್ತದೆ. ಮಹಾಭಾರತದ ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸುವ ವಿದ್ಯೆಯನ್ನು ಮಾತೆ ಸುಭದ್ರೆಯ ಗರ್ಭದಲ್ಲಿದ್ದಾಗ (ಕೃಷ್ಣ ಸುಭದ್ರೆಗೆ ಕತೆ ಹೇಳುತ್ತಿದ್ದಾಗ) ಆಕೆಯ ಜ್ಞಾನೇಂದ್ರಿಯಗಳ ಮೂಲಕ ಪಡೆದುಕೊಂಡಿದ್ದು ಉತ್ತಮ ಉದಾಹರಣೆ. ಹಾಗೆಯೇ ಹಿರಣ್ಯಕಶಿಪುವಿನ ವಿಷ್ಣು ವಿರೋಧವನ್ನು ನಿರ್ಮೂಲನ ಮಾಡುವುದಕ್ಕಾಗಿ ನಾರದ ಮುನಿಗಳು; ಗರ್ಭವತಿಯಾಗಿದ್ದ ಕಯಾದುವು ದೇವಗುಣ ಸಂಕೀರ್ತನ ಪ್ರಭಾವಕ್ಕೆ ಒಳಗಾಗುವಂತೆ ಮಾಡಿದರು. ಇವು ಪುರಾಣದ ಉದಾಹರಣೆಯಾದರೆ ; ಶಿವಾಜಿಯು ಸಮರ್ಥ ವೀರ ಚಕ್ರವರ್ತಿ ಯಾಗುವಂತಾಗಿದ್ದು ಆತನ ತಾಯಿ ಜೀಜಾಬಾಯಿಯ ಪ್ರಭಾವವೇ ಕಾರಣವೆಂದು ಇತಿಹಾಸ ಹೇಳುತ್ತದೆ.ಸ್ತ್ರೀ ಶಕ್ತಿ ದೇವತೆ. ಮಹಿಳೆ ಮನಸ್ಸು ಮಾಡಿದರೆ ಅವಳಿಂದಾಗದ ಕೆಲಸವೇ ಇಲ್ಲ. ಒಬ್ಬ ಮಹಾನ್ ವ್ಯಕ್ತಿಯ ಹಿಂದೆ ಆತನ ಶ್ರೇಯಸ್ಸಿಗೆ ಕಾರಣೀಭೂತಳಾಗಿ ಒಬ್ಬ ಸ್ತ್ರೀ ಇದ್ದಾಳೆ.ಆಕೆಯ ತಾಯಿಯೋ ಸೋದರಿಯೋ ಸ್ನೇಹಿತೆಯೋ ಯಾರೇ ಆಗಿರಬಹುದು.ಇದು ಅನುಭವಿಗಳ ಮಾತು. ‘ಮಾತೃದೇವೋಭವ’ ತಾಯಿಯನ್ನು ದೇವರಿಗೆ ಹೋಲಿಸಿದ್ದಾರೆ. ಆದರೆ ಜನ್ಮಕೊಡದ ಸಾಕುಮಾತೆಯರೂ ಹೆತ್ತ ತಾಯಿಗಿಂತ ಮಿಗಿಲಾಗಿ ಸಾಕಿದ್ದಿದೆ. ಉದಾ: ಕೃಷ್ಣನನ್ನು ಸಾಕಿದ ಯಶೋದೆ, ಇತಿಹಾಸದ ಚಂದ್ರಹಾಸನನ್ನು ಶತ್ರುಗಳಿಂದ ರಕ್ಷಣೆಮಾಡಿ, ಸಾಕಿದ ಸೇವಕಿಯ ಉದಾಹರಣೆ ಕೊಡಬಹುದು.
ಇಂದಿನ ತರುಣ ಮಾತೆಯರಿಗೆ ಕಿವಿಮಾತು:- ಕೆಲವು ದಶಕಗಳ ಹಿಂದೆ ಮಾತೆಯರು, ತಮ್ಮ ಹೆಣ್ಣು ಮಕ್ಕಳು ಋತುಮತಿಯರಾದ ಮೇಲಷ್ಟೇ ಕಾಮುಕರಿಂದ ರಕ್ಷಣೆ ಮಾಡಲು ಜಾಗ್ರತೆ ವಹಿಸಿಕೊಳ್ಳಬೇಕಿತ್ತು. ಆದರೆ ಇತ್ತೀಚೆಗೆ ಹೆಣ್ಣು ಶಿಶು ಭೂಮಿಗೆ ಬಿದ್ದಾಕ್ಷಣದಿಂದ ಅದರ ಶೀಲ ಕಾಪಾಡುವ ಕಣ್ಣಿಡಬೇಕೆಂದರೆ!,ಏನು ಹೇಳಲಿ!!. ಇಂತಹ ನರರಾಕ್ಷಸ ಸಮಾಜ ಈಗ ಸೃಷ್ಟಿಯಾಗಿದೆ ಎಂಬುದನ್ನರಿತಾಗ ಮೈ ನವಿರೇಳುತ್ತದೆ.
ಹಾಗೆಯೇ ಹೆಣ್ಣುಮಕ್ಕಳು ಲೌಜಿಹಾದ್ ಎಂಬ ಮಾಯಾಪುರುಷನ ಬಲೆಗೆ ಬಿದ್ದು ; ಮುಂದೆ ಮತಾಂತರ!, ಆ ಮೇಲೆ ದೇಶಾಂತರ!!, ಅದಕ್ಕೂ ಮುಂದೆ ಲೋಕಾಂತರ!!!. ಆಗುವ ವರದಿಯನ್ನು ನಿತ್ಯಲೂ ಪತ್ರಿಕೆಗಳಲ್ಲಿ ನೋಡುತ್ತೇವೆ. ಈ ನಿಟ್ಟಿನಲ್ಲಿ ಹೆಣ್ಣು ಹೆತ್ತವರು; ತಮ್ಮ ಎಚ್ಚರವೆಂಬ ಕಣ್ಣನ್ನು ಮುಚ್ಚಿದರೆ , ಮಕ್ಕಳನ್ನು ಕೈಬಿಟ್ಟರೆ, ಮುಂದೆ ಅವರ ಕಾಲುಹಿಡಿದು ಬೇಡುಕೊಳ್ಳುವ ಪರಿಸ್ಥಿತಿ ಬಂದೀತು ಎಂಬುದೂ ಸುಳ್ಳಲ್ಲ. ಅದಕ್ಕಾಗಿ ಅಕ್ಷರ ಕಲಿಸುವಾಗಲೇ ನಮ್ಮ ಸಂಸ್ಕೃತಿ – ಸಂಸ್ಕಾರಗಳನ್ನು ಕಲಿಸಬೇಕು. ಪ್ರತಿದಿನವೂ ಅವರ ಮೇಲೆ ಎಚ್ಚರವೆಂಬ ಕಣ್ಣನ್ನು ತೆರೆದಿಡಬೇಕು.
ಸನಾತನ ಧರ್ಮದಲ್ಲಿ ಹಲವು ದೈವ ದೇವರುಗಳಿದ್ದರೂ ದೇವಾರಾಧನೆಗೆ ದೇವರ,ಸಮಯದ, ದಿನಗಳ ನಿರ್ಬಂಧ ಹಿಂದೂಗಳಲ್ಲಿ ಇಲ್ಲ. ಅವರವರ ಜನ್ಮನಕ್ಷತ್ರ, ಜಾತಕ,ಮನಸ್ಸಿಗೆ ಹೊಂದಿಕೊಂಡು ಆರಾಧನೆ ಮಾಡುವ ಸ್ವಾತಂತ್ರ್ಯ ನಮ್ಮಲ್ಲಿದೆ.ಈ ಮುಕ್ತ ಸ್ವಾತಂತ್ರ್ಯ ಅನ್ಯ ಮತಗಳಲ್ಲಿಲ್ಲ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು. ಹೆಣ್ಣು ಮಕ್ಕಳು ನಮ್ಮ ಸನಾತನ ಧರ್ಮದ ಬಗ್ಗೆ ಪ್ರಶ್ನೆ ಹಾಕಿದಾಗ ಸಮರ್ಪಕ ಉತ್ತರ ನೀಡದೆ ಜಾರಿಕೊಂಡಿದ್ದಾದರೆ ; ಮಕ್ಕಳಿಗೆ ನಮ್ಮ ಧರ್ಮದಲ್ಲಿ ವಿಶ್ವಾಸ ತಪ್ಪಲು ಆಸ್ಪದವಿದೆ. ಹಾಗಾಗಲು ಬಿಡಲೇ ಬಾರದು. ತಾಯಂದಿರಿಗೆ ಆ ತಿಳುವಳಿಕೆ ಇಲ್ಲದಲ್ಲಿ ; ತಿಳಿದವರಿಂದ ತಿಳಿಹೇಳಿಸುವ ಕೆಲಸ ಖಂಡಿತವಾಗಿ ಮಾಡಿ, ಎಂಬುದನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇನೆ.
‘ಸಂಸಾರ ಗುಟ್ಟು ವ್ಯಾಧಿರಟ್ಟು’ ಎಂಬ ಗಾದೆಯಿದೆ. ಕುಟುಂಬದಲ್ಲಿ ಕೆಲವಷ್ಟು ಜತನಮಾಡುವ ,ಗುಪ್ತವಾಗಿಡುವ ವಿಷಯಗಳಿರುತ್ತವೆ. ಅದನ್ನು ಕಾಪಾಡಿಕೊಂಡು ಬರುವ ಜಾಣತನ ಸ್ತ್ರೀಯರ ಮೇಲಿದೆ. ಆದರೆ ವ್ಯಾಧಿಯನ್ನು ವೈದ್ಯರ ಮುಂದೆ ಮರೆಮಾಚಬಾರದು. ಎಂಬುದು ಈ ಗಾದೆಯ ತಿರುಳು. ಹೆಣ್ಣಿಗೆ ಯಾರಲ್ಲಿ ಹೇಗೆ ಮಾತಾಡಬೇಕೆಂದು ತಿಳಿದಿರಬೇಕು. ಅತ್ತೆ- ಸೊಸೆಯರು ಸಾಮರಸ್ಯವಿಲ್ಲದೆ ಪರಸ್ಪರ ಕಚ್ಚಾಡುತ್ತಿದ್ದರೆ ; ಆ ಮನೆಯಲ್ಲಿ ಶಾಂತಿ, ನೆಮ್ಮದಿ ಎಲ್ಲಿಂದ?. ಮನೆ ಮಂದಿಯಲ್ಲಿ ಒಡಕು ಮೂಡಿಸುವ ಕೆಲಸವೂ ಹಾಗೆಯೇ ಒಂದು ಗೂಡಿಸುವ ಕಲೆಯೂ ಹೆಣ್ಣಿಗೆ ಇದೆಯಂತೆ!. ಒಬ್ಬರ ತಪ್ಪನ್ನು ಕ್ಷಮಿಸಬೇಕೇ ವಿನಹಃ ದ್ವೇಷ ಸಾಧನೆ ಮಾಡಬಾರದು ಎಂಬುದು ಕಿವಿಮಾತು.ಮನೆಯೊಳಗೆ ಸಂಘಟನಾ ಚತುರತೆ ಇರುವ ಸ್ತ್ರೀಗೆ ಸಮಾಜ ಸಂಘಟನಾ ಸಾಮರ್ಥ್ಯವೂ ಬರಲೇಬೇಕು.
‘ಹೆಣ್ಣು ಸಂಸಾರದ ಕಣ್ಣು’ ಎಂದಿದ್ದಾರೆ ಅನುಭವಿಗಳು!. ಹೆಣ್ಣಿನ ಇರವು ಉತ್ತಮಗೊಂಡರೆ ಸಂಸಾರವು ಹಸನಾಗುವುದರಲ್ಲಿ ಸಂಶಯವೇ ಇಲ್ಲ. ಇಂದಿನ ನಾರಿ ಎಲ್ಲಾ ಕ್ಷೇತ್ರದಲ್ಲೂ ಅಂದರೆ ; ಸೇನಾಸೇವೆಯಲ್ಲೂ ತನ್ನ ಛಾಪನ್ನು ಒತ್ತಿ ಸೈ ಎನಿಸಿ ಕೊಂಡಿದ್ದಾಳೆ ಎಂಬುದು ಶ್ಲಾಘನೀಯ. ಹೀಗೆ ಹತ್ತು ಸಂಸಾರಗಳಿಂದ ಒಂದು ಉತ್ತಮ ಸಮಾಜ .ಈ ಸಮಾಜದಿಂದಲೇ ದೇಶ, ರಾಷ್ಟ್ರ ಎಲ್ಲವೂ. ವೈಯಕ್ತಿಕ ಗುಣಶೀಲಗಳು ,ಸಾಂಸಾರಿಕ ನೀತಿ, ಇವು ಅತ್ಯಂತ ಮುಖ್ಯವಾದವುಗಳು. ವ್ಯಕ್ತಿ ಸಂಪತ್ತೇ ದೇಶ ಸಂಪತ್ತೂ ಆಗಿದೆ. ಆ ಸಂಪತ್ತನ್ನು ವೃದ್ಧಿಪಡಿಸುವ ಹೊಣೆಯಲ್ಲಿ ಮಹಿಳೆಯರೂ ಭಾಗಿಗಳಾಗೋಣ.
–ವಿಜಯಾಸುಬ್ರಹ್ಮಣ್ಯ, ಕುಂಬಳೆ
ಪ್ರಕಟಿಸಿದ ಅಡ್ಮಿನರಿಗೆ ಹಾಗೂ ಓದುಗರಿಗೆ ಧನ್ಯವಾದಗಳು.
ಚೆನ್ನಾಗಿದೆ ವಿಜಯ
ಒಳ್ಳೆಯ ಮಾಹಿತಿಯುಳ್ಳ ಲೇಖನ ಚೆನ್ನಾಗಿ ಮೂಡಿಬಂದಿದೆ ಮೇಡಂ ಧನ್ಯವಾದಗಳು.
ಚೆನ್ನಾಗಿದೆ
ಮಹಿಳೆಯ ಶ್ರೇಷ್ಠತೆಯು ದರ್ಪಿಸುವುದು ಜನ್ಮ ನೀಡುವ ಶಕ್ತಿಯಲ್ಲಿ
ಮಹಿಳೆಯ ಶ್ರೇಷ್ಠತೆಯು ದರ್ಪಿಸುವುದು ಜನ್ಮ ನೀಡುವ ಶಕ್ತಿಯಲ್ಲಿ/
ದೈವಾಂಶದ ಪ್ರತಿರೂಪವು ಪೂಜ್ಯ ಪಾವನಗಳ ಪವಿತ್ರತೆಯಲ್ಲಿ/
ಮಹಿಳೆಯ ಘನತೆಯು ಕಾಣುವುದು ಪೋಷಣೆಯ ದೃಢನಿಷ್ಠೆಯಲ್ಲಿ/
ಶುದ್ಧ ಪರಿಶುದ್ಧ ಪುಣ್ಯಕರ ಪ್ರತೀಕವು ಧಾರ್ಮಿಕತೆಯ ಮುದಿಪಿನಲ್ಲಿ/
ಮುಗ್ದತೆಯಲಿ ಮಾತಾಡುವ ಮೊದಲನೆಯ ಮಗುವಿನ ಮಾತು/
ಅಮ್ಮ ಎಂಬ ಸಿಹಿಸಕ್ಕರೆ ಸವಿಜೇನ ಸವರಿರುವ ಪಂಚಾಮೃತ/
ಮುಗ್ದತೆಯಲಿ ಮಾತಾಡುವ ಮೊದಲನೆಯ ಮಗುವಿನ ಮಾತು/
ಅಮ್ಮ ಎಂಬ ಆತ್ಮನಂಬಿಕೆಯ ಆತ್ಮವಿಶ್ವಾಸದ ಪಂಚಾಮೃತ/
ಕಹಿಸಿಹಿಗಳ ಸಂದರ್ಭದಲ್ಲಿ ಮೊದಲು ನೆನಪಾಗುವುದು ಅಮ್ಮ/
ಅಮ್ಮನ ಪೋಷಣೆಯಲ್ಲಿ ರೂಪಿಸುವುದು ಬಾಳುವ ಪರಾಶಕ್ತಿಯು/
ನೋವು ನಲಿವಿನ ಪರಿಸ್ಥಿತಿಯಲ್ಲಿ ಸ್ಮರಣೆಯಾಗುವುದು ಅಮ್ಮ/
ಅಮ್ಮನ ಪಾಲನೆಯಲ್ಲಿ ಸಮೃದ್ಧಿಸುವುದು ಜೀವಿಸುವ ದಾರಿಯು/
ಜೀನವದುದ್ದಕ್ಕೂ ಮಹಿಳೆ ಹೊರುವ ಜವಾಬ್ದಾರಿ ಮತ್ತು ಅವಳ ಪಾತ್ರದ ವೈಶಿಷ್ಟವನ್ನು ಅತ್ಯಂತ ಸಮಂಜಸವಾಗಿ ಪ್ರತಿಪಾದಿಸಿದ್ದೀರಿ. ಅಭಿನಂದನೆಗಳು.
ಸಾಂದರ್ಭಿಕ ಬರಹ ಬಹಳ ಸೊಗಸಾಗಿದೆ…ಧನ್ಯವಾದಗಳು ವಿಜಯಕ್ಕಾ.