ಮಹಿಳೆ ಮತ್ತು ವಿಜ್ಞಾನ

Share Button

ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು ಮಾತುಗಳನ್ನು ಆಡಬೇಕೆಂದು ಕೋರಿಕೆ ಇಡುತ್ತಾರೆ. ಸಹಜವಾಗಿಯೇ ನನಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾನು ಮಾತನಾಡುವಾಗ ಮಧ್ಯದಲ್ಲಿ ಹೆಣ್ಣೊಬ್ಬಳು ಕಲಿತರೆ…..’ ಎನ್ನುತ್ತೇನೆ. ಮರುಕ್ಷಣವೇ ಒಕ್ಕೊರಲಿನಿಂದ ಎಲ್ಲರೂ ಶಾಲೆಯೊಂದು ತೆರೆದಂತೆ’ ಎಂದು ಹೇಳುತ್ತಾರೆ. ಹೌದು ಇದು ಎಷ್ಟು ನಿಜವಾದ ಮಾತು. ಇದನ್ನು ಹೇಳುವ ಮಕ್ಕಳೂ ಸುಮಾರು 80-90% ಹೆಣ್ಣುಮಕ್ಕಳೇ ಆಗಿರುತ್ತಾರೆ.

ಗಂಡುಮಕ್ಕಳನ್ನು ಸರ್ಕಾರಿ ಶಾಲೆಗೆ ಅಷ್ಟಾಗಿ ಯಾರೂ ಸೇರಿಸುವುದಿಲ್ಲ. ಇರಲಿ, ಶಾಲೆಯ ನಂತರ ಈ ಹೆಣ್ಣುಮಕ್ಕಳು ಸರ್ಕಾರಿ ಶಾಲೆಯಿರಲಿ ಅಥವ ಖಾಸಗಿಯೇ ಇರಲಿ, ಏನು ಓದುತ್ತಾರೆ ಎನ್ನುವುದು ಮುಂದಿನ ಪ್ರಶ್ನೆ. ಎಷ್ಟೋ ಹೆಣ್ಣುಮಕ್ಕಳು ಕಾಲೇಜಿನ ಮೆಟ್ಟಿಲನ್ನೇ ಹತ್ತುವುದಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಕಾಲೇಜಿಗೆ ಸೇರುವವರಲ್ಲಿಯೂ ವಿಜ್ಞಾನದ ವಿಷಯಗಳನ್ನು ತೆಗೆದುಕೊಂಡು ಓದುವವರು ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಬಹುಶಃ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎನಿಸಬಹುದೇನೋ? ಆದರೇನು? ವಿಜ್ಞಾನ ಸಾವಿರಾರು ವರ್ಷಗಳಿಂದ ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮಹಿಳೆ ವಿಜ್ಞಾನವನ್ನು ತನ್ನ ದೈನಂದಿನ ಕೆಲಸಗಳಲ್ಲಿ ಉಪಯೋಗಿಸುತ್ತಲೇ ಬಂದಿದ್ದಾಳೆ. ವಿಶ್ಲೇಷಣೆ ಮಾಡದೆಯೇ ಮಾಡುತ್ತಿರಬಹುದು. ಮನೆಯನ್ನು ಶುಚಿಗೊಳಿಸುವುದರಿಂದ ಹಿಡಿದು ಆಹಾರ ಪದಾರ್ಥಗಳನ್ನು ತಯಾರಿಸುವವರೆಗೆ ಸಣ್ಣಪುಟ್ಟ ಮನೆ ಔಷಧಿಗಳನ್ನು ಉಪಯೋಗಿಸುವುದರಿಂದ ಹಿಡಿದು ಮಾನಸಿಕ ನೆಮ್ಮದಿಗೆ ಪೂಜೆ, ಧ್ಯಾನ ಇತ್ಯಾದಿಗಳನ್ನು ಮಾಡುವವರೆಗೆ ಇದು ವ್ಯಾಪಿಸಿದೆ. ದೈನಂದಿನ ಜೀವನದಲ್ಲಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಉಪಯೋಗ ಮಾಡುತ್ತೇವೆ.

ಇಂದು ವಿಜ್ಞಾನ ದಾಪುಗಾಲಿಡುತ್ತ ಮುಂದೆ ನಡೆಯುತ್ತಿದೆ. ಮಹಿಳೆ ಕೂಡ ವಿಜ್ಞಾನವನ್ನು ಕಲಿಯಲು ಮನಸ್ಸು ಮಾಡಿದ್ದಾಳೆ. ಆದರೂ ಸಂಖ್ಯೆ ಕಡಿಮೆ ಇದೆ. ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಏರಿದೆ. ಆದರೆ ತೃಪ್ತಿಕರ ಎಂದು ಹೇಳುವುದು ಕಷ್ಟ. ಸಂಶೋಧನೆಯ ಮಟ್ಟಕ್ಕೆ ಬಂದಾಗ ಮಹಿಳೆಯರ ಸಂಖ್ಯೆ ಅಚಾನಕ್ಕಾಗಿ ಇಳಿಯುತ್ತದೆ. ಬಹುಶಃ ಇದಕ್ಕೆ ಹಲವು ಕಾರಣಗಳಿರಬಹುದು. ಕುಟುಂಬದವರಿಂದ ಮದುವೆಯಾಗಲು ಒತ್ತಡ ಅಥವಾ ಹಲವು ವರ್ಷ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಆಗದೆ ಇರುವ ವೈಯಕ್ತಿಕ ಕಾರಣಗಳು ಇರಬಹುದು. ಮದುವೆಯಾದ ಮೇಲೆ ಅವಕಾಶಗಳು ಇನ್ನೂ ಕಡಿಮೆಯಾಗುತ್ತಾ ಹೋಗುತ್ತವೆ. ಒಮ್ಮೆ ನಾನು ಸಂಶೋಧನೆ ಮಾಡುತ್ತಿದ್ದಾಗ, ನಮ್ಮ ಸಂಶೋಧನಾ ಪ್ರಯೋಗಾಲಯದಲ್ಲಿ ಒಬ್ಬ ಯುವಕ ಸಂಶೋಧಕ ಮಹಿಳೆಯರಲ್ಲಿ ಖ್ಯಾತ ವಿಜ್ಞಾನಿಗಳೇ ಇಲ್ಲ. ಎಲ್ಲಾ ಪುರುಷರೇ ಸಾಧಿಸಿರುವುದು ಎಂದು ಮಾತನಾಡಿದ. ನನಗೆ ಮತ್ತು ಇನ್ನೊಬ್ಬ ಮಹಿಳೆಗೆ ಇದನ್ನು ಸಹಿಸಲಾಗಲಿಲ್ಲ. ನಾವು ಇಬ್ಬರು ಮಹಿಳೆಯರನ್ನು ಬಿಟ್ಟರೆ ಐದು ಜನ ಹುಡುಗರು ನಮ್ಮ ಲ್ಯಾಬ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದುದ್ದು. ಆ ಹುಡುಗನಿಗೆ ನಾನು ಇದರ ಹಿಂದಿನ ಕಾರಣಗಳನ್ನು ತಿಳಿಸಿದೆ. ಸಾಮಾನ್ಯವಾಗಿ ಮಹಿಳೆ ತನ್ನ ಕೆಲಸವೇ ಮುಖ್ಯ ಎಂದು ಎಂದೂ ತಿಳಿಯುವುದಿಲ್ಲ. ಅವಳು ತ್ಯಾಗಮಯಿ. ತನ್ನ ಸಂಸಾರದ ಸುಖಕ್ಕೆ ಮತ್ತು ಒಳ್ಳೆಯದಕ್ಕೆ ಸಮಾಜದ ಕೆಲವು ನಿಲುವುಗಳಿಗೆ ಬೆಲೆ ಕೊಟ್ಟು ತನ್ನ ಓದು ಅಥವಾ ಸಂಶೋಧನೆಯನ್ನು ತ್ಯಾಗ ಮಾಡುತ್ತಾಳೆ ಎಂದು ಹೇಳಿದೆ. ಇತ್ತೀಚೆಗೆ ಪರಿಸ್ಥಿತಿ ಸುಧಾರಿಸಿದೆ. ಮನೆಗೆಲಸಗಳಿಗೆ ಅನೇಕ ಸೌಲಭ್ಯಗಳು ಬಂದಿವೆ. ಪುರುಷರೂ ಮನೆಗೆಲಸದಲ್ಲಿ ಅನೇಕ ವೇಳೆ ನೆರವಾಗುತ್ತಾರೆ. ಸಮಾಜದಲ್ಲಿಯೂ ಹೆಣ್ಣಿನ ಸ್ಥಾನಮಾನ ಉನ್ನತೀಕರಣಗೊಳ್ಳುತ್ತಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿಜ್ಞಾನ ವಿಷಯಗಳನ್ನು ಓದಲು ತೊಡಗುತ್ತಾರೆ ಎನ್ನುವ ಆಶಾಭಾವನೆ ಇದೆ.

ನೊಬಲ್ ಪ್ರಶಸ್ತಿ ಗಳಿಸಿರುವವರ ಬಗ್ಗೆ ಹೇಳಬೇಕೆಂದರೆ ಮಹಿಳೆಯರು ವಿಶೇಷವಾಗಿ ವಿಜ್ಞಾನದಲ್ಲಿ ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸಾಹಿತ್ಯದಲ್ಲಿ ಪರವಾಗಿಲ್ಲ. 2005 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರೊ ಲಾರೆನ್ಸ್ ಸಮ್ಮರ್ಸ್ ಎನ್ನುವವರು ಹೇಳಿಕೆ ನೀಡಿದ್ದೇನೆಂದರೆ ಗಣಿತ ಅಥವಾ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಮರ್ಥ್ಯ ಪುರುಷರಿಗಿಂತ ತೀರ ಕೆಳಮಟ್ಟದ್ದು ಎಂದು. ಇದು ಅಹಂ ಅಲ್ಲದೆ ಮತ್ತೇನು? ಇದಕ್ಕೆ ಪುರುಷ ಪ್ರಧಾನ ಮೌಲ್ಯಗಳೇ ಕಾರಣ. ಆದರೆ ಕಾಲ ಬದಲಾಗಿದೆ. ಮೇಲೆ ಹೇಳಿದಂತೆ ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ. ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿರಲು ಕಾರಣವೇನು? ಅವರಲ್ಲಿ ಸಂಶೋಧನಾ ಸಾಮರ್ಥ್ಯ ಇಲ್ಲವೇ? ಖಂಡಿತ ಇದೆ. ಅವರ ಪ್ರತಿಭೆಯನ್ನು ಗುರುತಿಸುವುದಿಲ್ಲವೇ? ಕೆಲಮಟ್ಟಿಗೆ ಇದು ನಿಜ ಎನ್ನಬೇಕಾಗುತ್ತದೆ. ಸಮ್ಮರ್ಸ್ ಅಂತಹ ವಿಜ್ಞಾನಿಗಳನ್ನೂ ಪುರುಷ ಪ್ರಧಾನ ಮೌಲ್ಯಗಳು ಆವರಿಸಿಕೊಂಡಿದೆ ಎನ್ನಬೇಕಾಗುತ್ತದೆ. ಮಹಿಳೆಯರ ವಿಷಯದಲ್ಲಿ ಲಿಂಗ ತಾರತಮ್ಯ ಕೂಡ ಕಂಡುಬಂದಿದೆ. ಜರ್ಮನಿಯ ಲಿಸ್ ಮೆಯ್ನರ್ ಎಂಬ ಭೌತಶಾಸ್ತ್ರಜ್ಞೆ ನ್ಯೂಕ್ಲಿಯರ್ ಫಿಶನ್ ಕಂಡುಹಿಡಿದ ತಂಡದಲ್ಲಿದ್ದರೂ ನೊಬೆಲ್ ಪ್ರಶಸ್ತಿಗೆ ಅವಳ ಕೊಡುಗೆಯನ್ನು ನಿರ್ಲಕ್ಷಿಸಲಾಯಿತು. ಇದೇ ರೀತಿ ರೊಸಾಲಿನ್ ಫ್ರಾಂಕ್ಲಿನ್ ಎನ್ನುವ ರಸಾಯನಶಾಸ್ತ್ರಜ್ಞೆ ಇನ್ನಿಬ್ಬರು ಪುರುಷ ವಿಜ್ಞಾನಿಗಳಾದ ಜೇಮ್ಸ್ ವಾಟ್ಸ್‌ನ್ ಮತ್ತು ಫ್ರಾನ್ಸಿಸ್ ಕ್ರಿಕ್ ಜೊತೆ ಸಂಶೋಧನೆ ಮಾಡಿದ್ದಳು. ಡಿ.ಎನ್.ಎ. ಮಾಲಿಕ್ಯೂಲಿನ (ಬೃಹತ್ ಅಣು) ಸೂಕ್ಷ್ಮ ರಚನೆಯನ್ನು ಕಂಡುಹಿಡಿಯುವುದರಲ್ಲಿ ರೊಸಾಲಿನ್ ಪಾತ್ರವೂ ದೊಡ್ಡದಿತ್ತು. ಆದರೆ ವಾಟ್ಸನ್ ಮತ್ತು ಕ್ರಿಕ್ ಅವರುಗಳಿಗೆ 1953 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಈ ಮಹಿಳಾ ವಿಜ್ಞಾನಿಗೆ ಇಲ್ಲದೇ ಹೋಯಿತು.

ಆದರೆ ವಿಶ್ವದ ಅತಿ ಶ್ರೇಷ್ಠ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾದ ಮೇರಿ ಕ್ಯೂರಿಗೆ ನ್ಯಾಯ ಸಂದಿದೆ ಎನ್ನಬಹುದು. ಎರಡು ಬಾರಿ ನೊಬೆಲ್ ಪ್ರಶಸ್ತಿ ಗಳಿಸಿರುವ ಏಕೈಕ ಮಹಿಳಾ ವಿಜ್ಞಾನಿ ಈಕೆ. 1903 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಗಳಿಸಿದಳು ಮೇರಿ ಕ್ಯೂರಿ. ನಂತರ ರಸಾಯನಶಾಸ್ತ್ರದಲ್ಲಿ ಇನ್ನೊಂದು ನೊಬೆಲ್ ಪ್ರಶಸ್ತಿ ಇವಳ ಮುಡಿಗೇರಿತು. ಇಡೀ ಮಹಿಳಾ ವಿಜ್ಞಾನಿಗಳ ಸಂಕುಲವೇ ಹೆಮ್ಮೆ ಪಡಬೇಕಾದ ವಿಷಯ. ತನ್ನ ದಿರಿಸಿನ ಜೇಬುಗಳಲ್ಲಿಯೇ ಅಪಾಯಕಾರಿ ವಿಕಿರಣಗಳನ್ನು ಸೂಸುವ ರೇಡಿಯೋ ಆಕ್ಟೀವ್ ಐಸೋಟೋಪ್‌ಗಳನ್ನು ಇಟ್ಟುಕೊಂಡು ಸಂಶೋಧನೆ ನಡೆಸಿದಾಕೆ. ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲದೆ ಸಂಶೋಧನೆ ನಡೆಸಿ ವಿಕಿರಣಗಳಿಂದ ಕ್ಯಾನ್ಸ್‌ರ್‌ಗೆ ತುತ್ತಾಗಿ ಕಾಲವಾದಳು. ಮೇರಿ ಕ್ಯೂರಿಯ ಗಂಡ ಪಿಯರೆಕ್ಯೂರಿ ಮತ್ತು ಮಗಳು ಐರಿನ್ ಕ್ಯೂರಿ ಕೂಡ ನೊಬೆಲ್ ಪ್ರಶಸ್ತಿ ವಿಜೇತರು. ಇದು ನೊಬೆಲ್ ಪ್ರಶಸ್ತಿಗಳ ಇತಿಹಾಸದಲ್ಲಿಯೇ ಇರದ ದಾಖಲೆಯಾಗಿದೆ. ಒಂದೇ ಕುಟುಂಬದವರು ನಾಲ್ಕು ನೊಬೆಲ್ ಪ್ರಶಸ್ತಿಗಳನ್ನು ಪಡೆದಿರುವ ಉದಾಹರಣೆ ಕ್ಯೂರಿ ಕುಟುಂಬದ್ದಾಗಿದೆ.

ಪಿಯರೆಕ್ಯೂರಿ ಮತ್ತು ಮೇರಿ ಕ್ಯೂರಿ

ಭಾರತದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರು ಇದ್ದರೂ ಅವರ ಕೊಡುಗೆ ಹೆಚ್ಚಾಗಿ ಪ್ರಕಟವಾಗುವುದೇ ಇಲ್ಲ. ಗುರುತಿಸುವುದೂ ಕಡಿಮೆ. ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ನಮ್ಮ ಮಹಿಳೆಗೆ ಹಲವಾರು ಸಮಸ್ಯೆಗಳಿವೆ. ಕೌಟುಂಬಿಕ, ಸಾಮಾಜಿಕ ಹೊಣೆ ಮತ್ತು ಒತ್ತಡಗಳು ಇರುತ್ತವೆ. ಹಲವು ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗಿರುತ್ತದೆ. ನಮ್ಮ ಸಂಸ್ಕೃತಿಯಲ್ಲೂ ಮಹಿಳೆಯರಿಂದ ಕೆಲವು ವಿಷಯಗಳಲ್ಲಿ ನಿರೀಕ್ಷೆ ಇರುತ್ತದೆ. ಇವುಗಳು ಕೆಲಮಟ್ಟಿಗೆ ಮುಂದುವರಿದ ದೇಶದ ಮಹಿಳೆಗೂ ಇದ್ದೇ ಇವೆ. ಪ್ರಸ್ತುತ ಕಾಲದಲ್ಲಿ ಭಾರತೀಯ ಮಹಿಳೆ ಇದನ್ನೆಲ್ಲ ಸಂಭಾಳಿಸಿಕೊಂಡು ಮುನ್ನಡೆಯುತ್ತಿದ್ದಾಳೆ. ಕಾಲವೂ ಬದಲಾಗಿದೆ. ಅಭಿಪ್ರಾಯಗಳೂ ಸಮಾಜದಲ್ಲಿ ಬದಲಾವಣೆ ಕಾಣುತ್ತಿವೆ. ತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದು ಜಯಶಾಲಿಗಳಾಗಿರುವ ಮಹಿಳೆಯರು ನಮ್ಮ ಕರ್ನಾಟಕದಲ್ಲಿಯೇ ಇದ್ದಾರೆ. ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆಯಾಗಿರುವ ವಿಜ್ಞಾನಿ ಡಾ.ಕಿರಣ್ ಮಜುಂದಾರ್ ಒಬ್ಬರು. ಅಪ್ಪಟ ಕನ್ನಡತಿಯಾದ ತಂತ್ರಜ್ಞಾನಿ ಡಾ.ಸುಧಾಮೂರ್ತಿ ಇನ್ಫೋಸಿಸ್ ಸಂಸ್ಥೆಯನ್ನು ಹುಟ್ಟುಹಾಕಿದವರು. ಮೈಸೂರಿನ ಡಿ.ಎಫ್.ಆರ್.ಎಲ್. ಸಂಸ್ಥೆಯ ನಿರ್ದೇಶಕಿಯಾಗಿ ಡಾ.ರುಕ್ಮಿಣಿ ಶಂಕರನ್ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಹಲವಾರು ಮಹಿಳೆಯರು ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ಕೆಲವರು ವಿಜ್ಞಾನವನ್ನು ಅಭ್ಯಸಿಸಿ ಭಾರತೀಯ ಆಡಳಿತ ಸೇವೆಯಲ್ಲಿದ್ದಾರೆ. ಪ್ರಸ್ತುತ ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದ ಮೊದಲ ಮಹಿಳಾ ನಿರ್ದೇಶಕರಾಗಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ.

ವಿಜ್ಞಾನದ ಕೋನದಲ್ಲಿ ಯೋಚಿಸುವುದನ್ನು ಮಹಿಳೆ ಅಭ್ಯಾಸ ಮಾಡಿಕೊಳ್ಳಬೇಕು. ಕೋಶದಲ್ಲಿ ಮುದುಡಿ ಕೂತಿದ್ದ ಹುಳು ಸುಂದರ ಚಿಟ್ಟೆಯಾಗಿ ಹೊರಬಂದು ತನ್ನ ರೆಕ್ಕೆಗಳನ್ನು ಬಿಚ್ಚಿ ಹಾರುತ್ತದೆ. ಇದೇ ರೀತಿ ಹೆಚ್ಚು ಮಹಿಳೆಯರು ಮುಂದೆ ಬಂದು ವಿಜ್ಞಾನವನ್ನು ಓದಲಿ, ನಂತರ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲಿ ಎಂಬುದೇ ನನ್ನ ಹಾರೈಕೆ.

-ಡಾ.ಎಸ್. ಸುಧಾ

17 Responses

  1. sudha says:

    ವಿಜ್ಞಾನ ದಿನಾಚರಣೆ ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಬರೆದ ಈ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ಹೇಮಮಾಲರವರಿಗೆ ಧನ್ಯವಾದಗಳು.

  2. Saraswathy GV says:

    Dear Dr.Sudha my heartful congrats for your message very great .I am very happy to read your encouraging message.

  3. Dr.B.V.Sudhamani says:

    It’s a very interesting and informative article

  4. Anonymous says:

    ಉತ್ತಮ ಮಾಹಿತಿ ಪೂರ್ಣ ಲೇಖನ ಧನ್ಯವಾದಗಳು ಸುಧಾ ಮೇಡಂ

  5. Dr R Venu says:

    Congratulations sudha mam
    It really good message one has to read and importance of girls education

  6. ಮಹಿಳೆ ಮತ್ತು ವಿಜ್ಞಾನದ ಬಗ್ಗೆ ವಿಶ್ಲೇಷಿಸಿರುವ ಲೇಖನ ಅರ್ಥಪೂರ್ಣವಾಗಿ ಮೂಡಿಬಂದಿದೆ.

  7. ನಯನ ಬಜಕೂಡ್ಲು says:

    ಉತ್ತಮ ಲೇಖನ

  8. Mittur Nanajappa Ramprasad says:

    ಮಹಿಳೆ ಮತ್ತು ವಿಜ್ಞಾನ ಹೊಂದಾಣಿಕೆಯಲ್ಲಿ ಹೆಣೆದಿರುವುದು/

    ಮಹಿಳೆ ಮತ್ತು ವಿಜ್ಞಾನ ಹೊಂದಾಣಿಕೆಯಲ್ಲಿ ಹೆಣೆದಿರುವುದು/
    ಸೂಕ್ಷ್ಮತೆಯಲ್ಲಿ ವಿಶ್ಲೇಷಿಸಿದರೆ ತಿಳಿಯುವುದು ಯಥಾರ್ಥವು/
    ನೆರವಾಗಿ ಇಲ್ಲ ಪರೋಕ್ಷವಾಗಿ ಬದುಕಿನಲ್ಲಿ ನೇಯ್ದಿರುವುದು/
    ವಿಷದತೆಯಲ್ಲಿ ವಿಮರ್ಶಿಸಿದರೆ ಅರಿಯುವುದು ಸತ್ಯಾಂಶವು/

    ಸಮಾಜದ ಪಕ್ಷಪಾತದಲ್ಲಿ ಬಂದಿಯಾಗಿರುವಳು ಮಹಿಳೆಯು/
    ಮಹಿಳೆಗೆ ಪ್ರಕೃತಿಜನ್ಯದಲ್ಲಿ ಆಶೀರ್ವದಿಸಿದೆ ಧೀಮಂತಿಕೆಯು /
    ಸಂಪ್ರದಾಯಗಳ ನಿರ್ಬಂಧದಲ್ಲಿ ಸಿಲುಕಿರುವಳು ಅಭಲೆಯು/
    ಸ್ತ್ರೀಲಿಂಗಕೆ ಜನ್ಮಸಿದ್ಧತೆಯಲ್ಲಿ ಅನುಗ್ರಹಿಸಿದೆ ಬುದ್ಧಿವಂತಿಕೆಯು/

    ಧೃಢನಿಷ್ಠೆಯಲ್ಲಿ ಆಳಿಸಬೇಕು ಸಮಾಜದಲ್ಲಿರುವ ಬೇಧಭಾವಗಳ/
    ಹೆಣ್ಣುಗಂಡು ಶಿಶುಗಳ ಸರಿಕತನದಲ್ಲಿ ಬೆಳೆಸಬೇಕು ಸತ್ಯತೆಯಲ್ಲಿ/
    ಮನೆಗಳಲ್ಲಿ ಪ್ರಾರಂಭಿಸಬೇಕು ಸಮಾನತೆಯ ಮೂಲತತ್ವಗಳ/
    ಹೆಣ್ಣಾಗಲಿ ಗಂಡಾಗಲಿ ನೋಡಬೇಕು ಸರಿಸಮದ ಭಾವನೆಯಲ್ಲಿ/ /

    ನೇಮಿಸಿರುವುದು ನಿಸರ್ಗವು ಗಂಡು ಹೆಣ್ಣಿಗೆ ವಿವಿಧ ಕರ್ತವ್ಯಗಳ/\
    ಮೇಲುಕೀಳೆಂಬ ವಿಭಿನ್ನತೆಯಿಲ್ಲದ ಕಾರ್ಯಭಾರದ ಜವಾಬ್ದಾರಿಗಳ/
    ಯಶಸ್ಸಿನಲ್ಲಿ ಆಗಲು ಪ್ರಕೃತಿಯು ಹೆಣೆದಿರುವುದು ಬಾಂಧವ್ಯಗಳ/
    ನಿಸ್ವಾರ್ಥದಲ್ಲಿ ನೋಡಿದರೆ ತಿಳಿಯುವುದು ಮಹಿಳೆಯ ಜಾಣ್ಮೆಗಳ/

  9. sudha says:

    ಧನ್ಯವಾದಗಳು

  10. . ಶಂಕರಿ ಶರ್ಮ says:

    ಉತ್ತಮ ಮಾಹಿತಿ ಪೂರ್ಣ ಲೇಖನ ಧನ್ಯವಾದಗಳು ಸುಧಾ ಮೇಡಂ

Leave a Reply to sudha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: