ಅಕ್ಕಾ ಕೇಳವ್ವಾ : ‘ದೊಡ್ಡವ್ವ’
ಅಂದು ಸಂಕ್ರಾಂತಿ. ಭಾಸ್ಕರನು ತನ್ನ ಪಥವನ್ನು ಬದಲಿಸುವ ಸಂಕ್ರಮಣಕಾಲ. ಮಾಗಿಯ ಚಳಿಯಲ್ಲಿ ಮಾಗಿದ ಜೀವವೊಂದು ತನ್ನ ಇಹಲೋಕದ ಪಯಣಕ್ಕೆ ಇತಿಶ್ರೀ ಹಾಡಲು, ತನ್ನ ಇಷ್ಟದೈವವಾದ ದಾನಮ್ಮನನ್ನು ನೆನೆಯುತ್ತಿತ್ತು. ಎಂಭತ್ತೈದರ ಹರೆಯದ ದೊಡ್ಡವ್ವ ಹಾಸಿಗೆಯ ಮೇಲೆ ಹಿಡಿಯಷ್ಟಾಗಿ ಮಲಗಿದ್ದಳು. ನಿಧಾನಗತಿಯ ಉಸಿರಾಟವೊಂದೇ ಅವಳ ಅಸ್ತಿತ್ವವನ್ನು ಸಾರುತ್ತಿತ್ತು.
‘ದೊಡ್ಡವ್ವನ’ ಹೆಸರು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಎಲ್ಲರಿಗೂ ಇವಳು ದೊಡ್ಡವ್ವನೇ. ಸದಾ ಇಸ್ತ್ರಿ ಹಾಕಿದ ಗರಿಮುರಿಯಾದ ಇಳಕಲ್ ಸೀರಿ ಉಟ್ಟು, ತಲೆಯ ಮೇಲೆ ಮುಸುಕು ಹಾಕಿ, ಹಣೆಯ ತುಂಬಾ ವಿಭೂತಿ ಪಟ್ಟೆ ಹಾಕಿ, ಕೈತುಂಬಾ ಹಸಿರು ಗಾಜಿನ ಬಳೆಗಳ ಜೊತೆ ಚಿನ್ನದ ಪಾಟ್ಲಿ, ಬಿಲಾವರ ಬಳೆ, ಕಣ್ಣಿಗೆ ಕನ್ನಡಕ ಧರಿಸಿ ಹೊರಡುತ್ತಿತ್ತು ದೊಡ್ಡವ್ವನ ಸವಾರಿ. ಅರಳು ಹುರಿದಂತೆ ಮಾತು, ಯಾರನ್ನು ಕಂಡರೂ, ‘ಅಕ್ಕಾವ್ರೇ, ಅಣ್ಣಾವ್ರೇ..ಚಲೋ ಅದೀರಾ, ಚಾ ಆತೇನ್ರೀ’.. ಅಂತ ತನ್ನ ಬೊಚ್ಚು ಬಾಯಿಂದ ನಗುನಗುತ್ತಲೇ ಆಡುವ ಮಾತುಗಳು. ಮನೆಗೆ ಬಂದವರ ಯೋಗಕ್ಷೇಮ ವಿಚಾರಿಸುತ್ತಲೇ, ತಿಂಡಿ ಊಟ ಮಾಡಿಸಿಯೇ ಕಳುಹಿಸುತ್ತಿದ್ದ, ಅವಳ ಆತ್ಮೀಯತೆ ಬೆರಗು ಹುಟ್ಟಿಸುವಂತಿತ್ತು.
ಅಡಿಗೆ ಮನೆಯೇ ಇವಳ ಸಾಮ್ರಾಜ್ಯ, ತರಕಾರಿ ಹೆಚ್ಚುವ ಈಳಿಗಿ, ರೊಟ್ಟಿ ಲಟ್ಟಿಸಲು ಇರುವ ಲತ್ತುಡಿ ಮಣೆಯೇ ಇವಳ ಸಂಪತ್ತು. ಮುಂಜಾನೆಯಿಂದ ಸಂಜೀ ತನಕ ಅಡಿಗೆ ಮನೆಯ ಕೆಲಸ ಮುಗಿದದ್ದೇ ಇಲ್ಲ. ತರಕಾರಿ ಹೆಚ್ಚುತ್ತಲೊ, ಸೊಪ್ಪು ಬಿಡಿಸುತ್ತಲೋ ಅಥವಾ ರೊಟ್ಟಿ, ಚಪಾತಿ ಮಾಡುತ್ತಲೋ ಕಾಲ ಹಾಕುತ್ತಿದ್ದಳು. ಇನ್ನು ಹಬ್ಬ ಹರಿದಿನಗಳು ಬಂದರಂತೂ, ದಿನದ ಹನ್ನೆರಡು ಗಂಟೆಗಳೂ ಸಾಲುತ್ತಿರಲಿಲ್ಲ. ನಮಗೋ ಕ್ಯಾಲೆಂಡರ್‌ನಲ್ಲಿ ಕೆಂಪು ಅಕ್ಷರಗಳಲ್ಲಿ ಗುರುತು ಮಾಡಲ್ಪಟ್ಟ ಹಬ್ಬಗಳಷ್ಟೇ ಗೊತ್ತು. ಆದರೆ, ಇವಳಿಗೋ – ಮಣ್ಣೆತ್ತಿನ ಅಮಾವಾಸ್ಯೆ, ಭೂಮಿ ಹುಣ್ಣಿಮೆ, ಎಳ್ಳಮವಾಸ್ಯೆ, ಬನದ ಹುಣ್ಣಿಮೆ, ಭಾರತ ಹುಣ್ಣಿಮೆ.. ಹೀಗೆ ಪ್ರತೀ ಅಮಾವಾಸ್ಯೆ, ಹುಣ್ಣಿಮೆಗೊಂದು ಹಬ್ಬ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಅಡಿಗೆ ಆಗಬೇಕಿತ್ತು. ಹಬ್ಬಗಳಲ್ಲಿ, ಜಂಗಮರನ್ನು ಮನೆಗೆ ಕರೆಸಿ, ಅವರ ಪಾದ ಪೂಜೆ ಮಾಡಿ, ಅವರಿಗೆ ಭೋಜನ ಮಾಡಿಸಿಯೇ ಕಳುಹಿಸುತ್ತಿದ್ದಳು.
ದೊಡ್ಡವ್ವನ ಹೆಸರು ‘ಶಾಂತವ್ವ’, ತಂದೆ ತಾಯಿಗೆ ಹಿರಿಯ ಮಗಳಾಗಿ ಹುಟ್ಟಿದ ಕೂಸು ಸದಾ ಚಟುವಟಿಕೆಯ ಕೇಂದ್ರಬಿಂದು. ತುಂಬು ಸಂಸಾರದಲ್ಲಿ ಬೆಳೆದ ಹುಡುಗಿ, ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡೇ ಬೆಳೆದಳು. ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿದ ಹುಡುಗಿ, ತವರಿನವರ ಹರಕೆ ಹೊತ್ತು, ಹದಿನಾರನೇ ವರ್ಷದಲ್ಲಿ, ಮದುವೆಯಾಗಿ ಗಂಡನ ಮನೆಗೆ ತೆರಳಿದಳು. ‘ಐವತ್ತು ತೊಲಿ ಚಿನ್ನ ಹಾಕಿದ್ರು, ನನ್ನ ಮದುವೇಲಿ, ಅತ್ತೀಮನೆಯವರು ಎಂದು ಹೆಮ್ಮೆಯಿಂದ ಬೀಗುತ್ತಿದ್ದಳು.’ ಅಷ್ಟು ಸಪೂರವಾಗಿದ್ದ ಹೆಣ್ಣು, ಅಷ್ಟೊಂದು ಚಿನ್ನವನ್ನು ಹೇಗೆ ಹೇರಿಕೊಳ್ಳುತ್ತಿದ್ದಳೋ ಏನೋ? ಗಂಡನ ಮನೆಯವರು ರೈತಾಪಿ ಜನ, ಮನೆಯ ಮುಂದೊಂದು ದಿನಸಿ ಅಂಗಡಿಯೂ ಇತ್ತು. ಒಟ್ಟು ಕುಟುಂಬ. ಹಿರಿಯ ಸೊಸೆಯಾಗಿದ್ದಳು ಹದಿನಾರರ ಪೋರಿ, ಹಾಗಾಗಿ ಅಡಿಗೆ ಕೋಣೆಯಲ್ಲೇ ಬಂದಿ. ದಿನವಿಡೀ ಒಲೆಯ ಮುಂದೆ ಕುಳಿತು, ರೊಟ್ಟಿ, ಪಲ್ಲೆ ಮಾಡುತ್ತಾ, ಬಡವಾದಳು ಹುಡುಗಿ. ಶ್ರಾವಣ ಮಾಸ ಎಂದು ಬಂದೀತು, ತವರಿನವರು ಕರೆಯಲು ಎಂದು ಬಂದಾರು ಎಂದು ಕಾತರದಿಂದ ದಿನ ಎಣಿಸುತ್ತಲೇ ಕಾಲ ಕಳೆಯುತ್ತಿದ್ದಳು ಬಾಲೆ. ತವರಿಗೆ ಮಗಳನ್ನು ಕರೆದೊಯ್ಯಲು ಅಪ್ಪ, ಮೋಟಾರು ಗಾಡಿ ಮಾಡಿಕೊಂಡೇ ಬರುತ್ತಿದ್ದ. ಅಡಿಗೆ ಮನೆಯಿಂದಲೇ ಕತ್ತು ಉದ್ದ ಚಾಚಿ , ಅಪ್ಪನ ದಾರಿ ನೋಡುತ್ತಿದ್ದ ಹುಡುಗಿ, ಅತ್ತಿ ಮಾವನ ಅನುಮತಿ ಪಡೆದು, ಸಡಗರದಿಂದ ತವರಿಗೆ ಹೊರಟು ಬಿಡುತ್ತಿದ್ದಳು. ದಾರಿಯುದ್ದಕ್ಕೂ, ಅಪ್ಪನ ಜೊತೆ ಹರಟುತ್ತಾ, ತಾಯಿ, ತಮ್ಮ, ತಂಗಿಯರ ಯೋಗಕ್ಷೇಮ ವಿಚಾರಿಸುತ್ತಾ, ನಕ್ಕು ನಲಿಯುತ್ತಿದ್ದಳು. ಶ್ರಾವಣಕ್ಕೆ, ತವರಿಗೆ ಬಂದವಳು ದೀಪಾವಳಿ ಮುಗಿಸಿಯೇ ಗಂಡನ ಮನೆಗೆ ಹಿಂತಿರುಗುತ್ತಿದ್ದುದು ರೂಢಿಯಾಗಿತ್ತು. ತವರಿನಲ್ಲಿ ರೆಕ್ಕೆ ಬಿಚ್ಚಿ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯಂತಿದ್ದರೆ, ಗಂಡನ ಮನೆಯಲ್ಲಿ ರೆಕ್ಕೆ ಪುಕ್ಕ ಮುದುರಿ ಕುಳಿತ ಗುಬ್ಬಚ್ಚಿಯಂತೆ ನಡೆದಿತ್ತು ಅವಳ ಬಾಳು. ವರ್ಷಕ್ಕೊಮ್ಮೆ, ಅಪ್ಪ ಪ್ರವಾಸೆಕ್ಕೆಂದು ಎಲ್ಲರನ್ನೂ ಹೊರಡಿಸುತ್ತಿದ್ದರು , ಒಂದು ವ್ಯಾನಿನಲ್ಲಿ ಕುಟುಂಬದವರು ಕುಳಿತರೆ, ಮತ್ತೊಂದು ಕಾರಿನಲ್ಲಿ ಅಡಿಗೆಯವರು ದಿನಸಿಯೊಂದಿಗೆ ಹಿಂಬಾಲಿಸುತ್ತಿದ್ದರು. ಹತ್ತರಿಂದ ಹದಿನೈದು ದಿನಗಳ ಕಾಲ ನಡೆಯುತ್ತಿತ್ತು ಅವರ ಪ್ರವಾಸ. ಪ್ರತಿ ವರ್ಷ, ಗುಡ್ಡಾಪುರದ ದಾನಮ್ಮನ ದರುಶನ ಪಡೆಯಲು ಕಾಲ್ನಡಿಗೆಯಲ್ಲೇ ಹೋಗುತ್ತಿದ್ದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಳು ದೊಡ್ಡವ್ವ.
ವರ್ಷಗಳು ಉರುಳಿದರೂ ದೊಡ್ಡವ್ವನಿಗೆ ಮಕ್ಕಳಾಗಲಿಲ್ಲ. ವೈದ್ಯರಿಂದ ತಪಾಸಣೆಯಾಯಿತು, ದೇವರು ದಿಂಡರು ಎಂದು ಹರಕೆ ಕಟ್ಟಿದ್ದಾಯಿತು, ಆದರೂ ದಾನಮ್ಮ ಯಾಕೋ ಕಣ್ಣು ತೆರೆಯಲೇ ಇಲ್ಲ. ಕುಟುಂಬದಲ್ಲಿ ಯಾರಿಗೆ ಮಕ್ಕಳಾದರೂ, ಅಲ್ಲಿ, ಕೂಸು ಬಾಣಂತಿಯ ಆರೈಕೆ ಮಾಡಲು ದೊಡ್ಡವ್ವ ಹಾಜರ್. ಎಲ್ಲ ಮಕ್ಕಳೂ ದೊಡ್ಡವ್ವನ ಮಮತೆಯ ಮಡಿಲಲ್ಲಿ ಬೆಳೆದವರೇ. ಹೀಗೆಯೇ ಸಾಗಿತ್ತು ಅವಳ ಬಾಳಪಥ. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತರಾದರು ಅವಳ ಪತಿರಾಯ. ಅವಳ ಮೈದುನ, ವ್ಯಾಪಾರಕ್ಕೆಂದು, ಅವಳಿಂದ ಚಿನ್ನವನ್ನು ಕಡ ತೆಗೆದುಕೊಂಡವನು ತಿರುಗಿ ಕೊಡಲಿಲ್ಲ. ಮುಂದೇನು, ಎಂದು ಕಂಗಾಲಾಗಿ, ತಲೆಯ ಮೇಲೆ ಕೈಹೊತ್ತು ಕುಳಿತ ದೊಡ್ಡವ್ವನಿಗೆ ಆಸರೆಯಾಗಿ ನಿಂತವನು, ತಂಗಿಯ ಮಗ ಬಾಲು. ಅವಳ ಪಾಲಿಗೆ ಬಂದ ಆಸ್ತಿಯನ್ನು ಮಾರಾಟ ಮಾಡಿ, ಬಂದ ಹಣವನ್ನು ಅವಳ ಹೆಸರಿನಲ್ಲಿಯೇ ಠೇವಣಿ ಮಾಡಿದ ಹುಡುಗ. ತವರಿನವರು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬ ಸಂಪ್ರದಾಯಕ್ಕೆ ಕಟ್ಟುಬಿದ್ದವರು. ಅವರಿಂದ, ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ‘ತವರೂರ ಮನೆ ನೋಡ ಬಂದೆ, ತಾಯಿ ನೆನಪಾಗಿ ಕಣ್ಣೀರ ತಂದೆ’ .. ಎನ್ನುವ ಸಾಲುಗಳು ನೆನಪಾಗಿ ಕಣ್ತುಂಬಾ ನೀರುತುಂಬಿತ್ತು ಐವತ್ತರ ಹರೆಯದ ಹೆಣ್ಣಿಗೆ. ಅತಂತ್ರವಾದ, ಮುಂದಿನ ಬದುಕಿಗೆ ಕಾಲಿಡುವ ಮುನ್ನ, ಹಾನಗಲ್ಲಿನ ಕುಮಾರಸ್ವಾಮಿಯವರಿಗೆ ಒಂದು ಲಕ್ಷ ದೇಣಿಗೆ ನೀಡಿ, ಅವರ ಆಶೀರ್ವಾದ ಪಡೆದು, ತಂಗಿಯ ಮನೆಗೆ ಬಂದಳು. ಹೊಸ ಬದುಕನ್ನು ಕಟ್ಟಿಕೊಳ್ಳಲು ಸಿದ್ಧವಾದಳು ದೊಡ್ಡವ್ವ. ತಂಗಿಗೆ ಅಕ್ಕವ್ವನಾಗಿ, ಮಕ್ಕಳಿಗೆ ದೊಡ್ಡವ್ವನಾಗಿ, ಬಲು ಬೇಗ ತಂಗಿಯ ಮನೆಯಲ್ಲಿ ಹೊಂದಿಕೊಂಡಳು. ಮಿತಭಾಷಿಯಾದ, ಮೃದುಹೃದಯಿಯಾದ ತಂಗಿ ನೀಲವ್ವನ ಜೊತೆ ಗಟ್ಟಿಯಾಗಿ ನಿಂತಳು. ನಿಧಾನವಾಗಿ, ದೊಡ್ಡವ್ವ ಎಲ್ಲ ಬಂಧುಗಳ ಕಣ್ಮಣಿಯಾದಳು. ಯಾರ ಮನೆಯಲ್ಲಿ ಹಪ್ಪಳ, ಸಂಡಿಗೆ , ಉಪ್ಪಿನಕಾಯಿ ಆಥವಾ ಯಾವುದೇ ಕಾರ್ಯಕ್ರಮವಿರಲಿ, ದೊಡ್ಡವ್ವ ಅಲ್ಲಿರಲೇ ಬೇಕಿತ್ತು. ತಂಗಿಯ ಮಕ್ಕಳ ಓದು, ಮದುವೆ, ಮೊಮ್ಮಕ್ಕಳ ಬಾಣಂತನಗಳ ನಡುವೆ, ಇಪ್ಪತ್ತು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ.
ಅಂದು ಯುಗಾದಿ ಹಬ್ಬ, ಬೇವು ಬೆಲ್ಲಗಳ ಮಿಶ್ರಣ ಮಾಡುತ್ತಿರುವಾಗ, ಒಂದು ಅವಘಡ ನಡೆದೇ ಬಿಟ್ಟಿತ್ತು, ಅತ್ತೆ ಸೊಸೆಯರ ನಡುವೆ. ಇಪ್ಪತ್ತು ವರ್ಷಗಳ ಕಾಲ ತಂಗಿಯ ಮನೆಯಲ್ಲಿ ಬಾಳಿದ ದೊಡ್ಡವ್ವನಿಗೆ ಅದು ತನ್ನದೇ ಮನೆಯೆಂಬ ಮಮಕಾರ. ನಾಲ್ಕಾರು ವರ್ಷಗಳ ಹಿಂದೆ ಗಂಡನ ಮನೆಗೆ ಕಾಲಿಟ್ಟ ಹುಡುಗಿಗೆ, ಇದು ತನ್ನ ಮನೆಯೆಂಬ ಅಹಂಭಾವ. ಯಾರದು ಸರಿ, ಯಾರದು ತಪ್ಪು ಎಂದು ತೀರ್ಪು ಕೊಡುವವರು ಯಾರು? ಸ್ವಾಭಿಮಾನಕ್ಕೆ ಧಕ್ಕೆಯಾದ ಮೇಲೆ, ಅಲ್ಲಿ ಉಳಿಯುವುದಾದರು ಹೇಗೆ? ಉಟ್ಟ ಸೀರೆಯಲ್ಲೇ ಮನೆ ಬಿಟ್ಟು ಹೊರಟಳು ದೊಡ್ಡವ್ವ. ಅವಳನ್ನು, ಒತ್ತಾಯಿಸಿ, ಮನೆಗೆ ಕರೆತಂದಿದ್ದ ಬಾಲು, ಇಂಗ್ಲೆಂಡಿಗೆ ಹೋಗಿದ್ದ. ಅವನಿಗೆ ಹೇಗೋ ಸುದ್ದಿ ಮುಟ್ಟಿತ್ತು. ತಕ್ಷಣ ತನ್ನಕ್ಕನಿಗೆ ಫೋನ್ ಮಾಡಿ, ದೊಡ್ಡವ್ವನನ್ನು ಕರೆದುಕೊಂಡು ಬಂದು ಮನೆಯಲ್ಲಿ ಇರಿಸಿಕೋ, ಎಂಬ ಸಂದೇಶ ರವಾನಿಸಿದ. ಹೀಗೆ ತಂಗಿಯ ಮಗಳ ಮನೆ ಸೇರಿ ನಾಲ್ಕಾರು ತಿಂಗಳು ಕಳೆದಿರಬಹುದಷ್ಟೇ. ತಂಗಿಗೆ ಸ್ತನ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಬಂದ ತಕ್ಷಣ ತಂಗಿಯ ಬಳಿಗೋಡಿದಳು. ತಂಗಿಯ ಶುಶ್ರೂಷೆ ಸಮಯದಲ್ಲಿ, ಅವಳ ಜೊತೆ ಗಟ್ಟಿಯಾಗಿ ನಿಂತಳು. ಆದರೆ ಚಿಕಿತ್ಸೆ ಫಲಿಸದೇ, ಮೂರೇ ತಿಂಗಳಲ್ಲಿ. ತಂಗಿಯನ್ನು ಕಳೆದುಕೊಂಡು ಮತ್ತೊಮ್ಮೆ ಅನಾಥ ಪ್ರಜ್ಞೆ ಅನುಭವಿಸಿದಳು ದೊಡ್ಡವ್ವ.
ಎಪ್ಪತ್ತು ವರ್ಷದ ಹೆಣ್ಣುಮಗಳು, ತನ್ನ ಇಳಿವಯಸ್ಸಿನಲ್ಲಿ, ಮತ್ತೊಮ್ಮೆ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾಗಿತ್ತು. ಆದರೆ ಸ್ವಾಭಿಮಾನಿಯಾಗಿದ್ದ ದೊಡ್ಡವ್ವ ಎದೆಗುಂದಲಿಲ್ಲ. ವಿದೇಶದಿಂದ ಆಗ ತಾನೇ ಹಿಂದಿರುಗಿದ್ದ ತಂಗಿಯ ಮಗನ ಜೊತೆ ಹೊಸ ಬದುಕನ್ನು ಆರಂಭಿಸಿದಳು. ಮಗ, ಸೊಸೆ ಇಬ್ಬರೂ ವೈದ್ಯರೇ, ಎರಡು ಮೊಮ್ಮಕ್ಕಳು. ಏಳು ವರ್ಷದ ಮೊಮ್ಮಗ ತೇಜು ಮತ್ತು ಇನ್ನೂ ಹಸುಗೂಸಾಗಿದ್ದ ಯಶು. ಮನೆಯಲ್ಲಿ ಇಬ್ಬರು ಕೆಲಸದವರು, ಕಸ ಮುಸುರೆ ಮಾಡಿ ಹೋಗುವಳು ಒಬ್ಬಳಾದರೆ, ಮತ್ತೊಬ್ಬಳು ಅಡಿಗೆ ಮಾಡಿ, ಮಗುವನ್ನು ನೋಡಿಕೊಳ್ಳಲು. ಮತ್ತೆ ದೊಡ್ಡವ್ವನಿಗೆ ಕೈತುಂಬಾ ಕೆಲಸ- ಕೆಲಸದವರ ಮೇಲ್ವಿಚಾರಣೆ, ಮೊಮ್ಮಕ್ಕಳ ಲಾಲನೆ ಪಾಲನೆ, ಅಡಿಗೆ ಮನೆಯ ಜವಾಬ್ದಾರಿ, ದೇವರ ಪೂಜೆ ಇತ್ಯಾದಿ.
ಮಗ ಸೊಸೆಯರ ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುವುದು ದೊಡ್ಡವ್ವನಿಗೆ ತುಸು ಕಷ್ಟವೇ ಆಗಿತ್ತು. ಹಿಂದೆ, ಮನೆಯ ಕಾಂಪೌಂಡಿನ ಮೂಲೆಯೊಂದರಲ್ಲಿ ಕಟ್ಟಿಸುತ್ತಿದ್ದ ಸಂಡಾಸು (ಶೌಚಾಲಯ) ಈಗ ಅವಳ ಕೊಠಡಿಗೆ ಅಂಟಿಕೊಂಡೇ ಇತ್ತು. ಹಬ್ಬ ಬಂತೆಂದರೆ, ಮಕ್ಕಳೊಂದಿಗೆ ಪಿಕ್‌ನಿಕ್ ಹೊರಡುವ ಮಗ ಸೊಸೆ. ಆದರೆ ದಿನವಿಡೀ ಆಸ್ಪತ್ರೆ, ಮನೆ ಮಕ್ಕಳು ಎಂದು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಸೊಸೆಗೆ ಏನನ್ನು ತಾನೇ ಹೇಳಿಯಾಳು? ಮಂಜಾಗುತ್ತಿದ್ದ ಕಣ್ಣುಗಳಿಗೆ ಮಗ ಆಪರೇಷನ್ ಮಾಡಿದ ನಂತರ, ಅವಳ ದೃಷ್ಟಿಕೋನವೇ ಬದಲಾಗಿತ್ತು. ಬದುಕಿನುದ್ದಕ್ಕೂ ಸಂಘರ್ಷ ನಡೆಸಿದ ದೊಡ್ಡವ್ವ ಈಗ ಶಾಂತವ್ವನಾಗಿದ್ದಳು. ಮಾಗಿತ್ತು ಜೀವ, ನಿಧಾನವಾಗಿ ಕಳಚುತ್ತಿತ್ತು ಭವ ಬಂಧನ. ಸಂಕ್ರಾಂತಿಯ ಹಿಂದಿನ ದಿನ, ಮನೆಯ ಬಾಗಿಲ ಬಳಿ ನಿಂತವಳು, ತನ್ನ ತಂಗಿ ಕರೆಯುತ್ತಿದಾಳೆ ಎಂದು ರಸ್ತೆಯ ತುದಿಯ ತನಕ ಹೋದವಳನ್ನು ನೋಡಿದ ಮೊಮ್ಮಗ ವಾಪಸ್ ಕರೆತಂದಿದ್ದ. ಎಲ್ಲಮ್ಮನನ್ನು ಪುಟ್ಟಿಯಲ್ಲಿ ಹೊತ್ತು, ಬಿಕ್ಷೆ ಬೇಡಲು ಬಂದವಳಿಗೆ, ತನ್ನದೊಂದು ಹೊಸ ಸೀರೆ ನೀಡಿ, ನೂರು ರೂ ಬಿಕ್ಷೆ ನೀಡಿ ಕಳುಹಿಸಿದ್ದಳು. ಇನ್ನು ‘ನನ್ನ ಬಳಿ ಬಂದು ಬಿಡು ಮಗಳೇ’, ಎಂದು ದಾನವ್ವ ಕರೆಯುತ್ತಿದ್ದಾಳೆ ಎಂದು ಪದೇ ಪದೇ ಹೇಳುತ್ತಿದ್ದಳು. ಎಂಭತ್ತೈದು ವರ್ಷಗಳ ತುಂಬು ಜೀವನ ನಡೆಸಿದ ದೊಡ್ಡವ್ವ, ಸ್ವಾಭಿಮಾನದಿಂದ, ಕೆಚ್ಚೆದೆಯಿಂದ ಬಾಳಿ ಬದುಕಿದವಳು. ಎಂದೂ ಕುಗ್ಗಲಿಲ್ಲ, ಜಗ್ಗಲಿಲ್ಲ, ಬಾಳಿನಲ್ಲಿ ಬಂದದ್ದನ್ನೆಲ್ಲಾ ಶಿವನ ಪ್ರಸಾದವೆಂದೇ ಒಪ್ಪಿಕೊಂಡು, ಅಪ್ಪಿಕೊಂಡು ಬದುಕಿದವಳು.
–ಡಾ.ಗಾಯತ್ರಿದೇವಿ ಸಜ್ಜನ್
ದೊಡ್ಡಮ್ಮನಂಥ ನಿಸ್ವಾರ್ಥ ಮಹಿಳೆಯರು ಹಿಂದೆ ಇದ್ದರು…ಈಗಲೂ ಇದ್ದಾರೆ…ಬೆಳಕಿಗೆ ಬರುವುದು. ಅಪರೂಪವಾಗಿ..ಇದು ಕಥೆ ಯೋ ಅನುಭವವೋ ತಿಳಿಯದಾಗದಾದರೂ..ಒಳ್ಳೆಯ ವಿಚಾರಗಳನ್ನೊಳಗೊಂಡ ಲೇಖನ ಧನ್ಯವಾದಗಳು ಮೇಡಂ.
ಬಹಳ ಚೆನ್ನಾಗಿದೆ ಲೇಖನ
ಪರಿಪಕ್ವ ಬದುಕಿನ ವ್ಯಕ್ತಿತ್ವದ ದೊಡ್ಡವ್ವನ ಪ್ರೌಢಜೀವನದ ಚಿತ್ರಣ ಸುಂದರವಾಗಿ ಮೂಡಿದೆ. ಅಭಿನಂದನೆಗಳು.
ಇದು ವಾಸ್ತವ ಚಿತ್ರಣ. ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು
ಹೌದು ! ನಾವೆಲ್ಲರೂ ನೋಡಿರುವ ದೊಡ್ಡವ್ವ ! ಅವರ ಬದುಕಿನ ಚಿತ್ರಣ ,ಬಹಳ ಚೆನ್ನಾಗಿ ಮೂಡಿ ಬಂದಿದೆ ,ಗಾಯತ್ರಿ . ನಮ್ಮೆಲ್ಲರನ್ನೂ ಯಾವಾಗಲೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದ ದೊಡ್ಡವ್ವ ಇನ್ನಲ್ಲವೇ. ?
ಮಾಗಿದ ಜೀವನ ದೊಡ್ಡವ್ವನದು…ಚಂದದ ಲೇಖನ..ಧನ್ಯವಾದಗಳು ಮೇಡಂ.
ಪತಿಯಿಲ್ಲದ ಮನೆಯು ನತಧ್ರುಷ್ಟದ ನಿವಾಸವು/
ಮಾನ್ಯತೆಯಿಲ್ಲದ ಗೃಹವು ದೊರಕದಲ್ಲಿ ಗೌರವವು/
ಹೀಯಾಳಿಕೆಯಲ್ಲಿ ತೊಳಲಾಡುವ ಅನುಭವವು/
ಮಕ್ಕಳಿರಲಿ ಇಲ್ಲದಿರಲಿ ಒಂಟಿತನದ ಜೀವನವು/
ವಿಧವೆಯ ಬಾಳು ಬದುಕು ವರ್ಣಿಸಲಾಗದ ದುರಂತವು/
ಬಂದುಗಳ ನಿರ್ಲಕ್ಷ್ಯತೆಯಲ್ಲಿ ಅನುದಿನವು ಪರಿಹಾಸವು/
ಸ್ವಂತ ಮಕ್ಕಳ ಅಲಕ್ಷ್ಯತೆಯಲ್ಲಿ ರೂಪಿಸುವ ಅಪಹಾಸ್ಯವು/
ಸಂಬಂಧಗಳ ನಿರ್ಲಿಪ್ತೆಯಲ್ಲಿ ಬಣ್ಣಿಸಲಾಗದ ವಿಷಾದವು/
ದೊಡ್ಡವ್ವನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ತಿರಸ್ಕಾರದಲ್ಲಿ/
ನಿಸ್ವಾರ್ಥದ ಸೇವೆಗೆ ದೊರಕದು ಬಿರುದು ಬಹುಮಾನಗಳು/
ದೊಡ್ಡವ್ವನ ಆತ್ಮಾಭಿಮಾನಕೆ ಕೆಡುಕಾಯಿತು ಅಪಮಾನದಲ್ಲಿ/
ನಿಷ್ಠೆಯ ದುಡಿತಕ್ಕೆ ಸಿಗದು ಮರ್ಯಾದೆಯ ಪುರಸ್ಕಾರಗಳು/
ನಿದರ್ಶನವಾಗಿರುವರು ದೊಡ್ಡವ್ವ ಆಧುನೀಕರಣ ಮಾರ್ಪಡೆಯಲ್ಲಿ/
ಭೌತಿಕದ ಭಾವನೆಗಳಲ್ಲಿ ಅಳಿಸಿಹೋಗಿದೆ ಪ್ರೀತಿಯ ಬಾಂದವ್ಯವು/
ಕಣ್ಮರೆಯಾಗಿದೆ ಋಣಾನುಬಂದವು ವೃತ್ತಿ ಜೇವನದ ಯಶಸ್ಸಿನಲ್ಲಿ/
ಆಧುನಿಕತೆಯ ಬಾಳು ಬದುಕಿನಲ್ಲಿ ಕಣ್ಮರೆಯಾಗಿದೆ ಮನುಷ್ಯತ್ವವು