ಬೆಳಕು-ಬಳ್ಳಿ

ಜ್ಞಾನವೆಂಬ ಅಡುಗೆ

Share Button

ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆ
ಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ

ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆ
ಪರಿಶ್ರಮವೆಂಬ ವ್ಯಂಜನಕ್ಕೆ ನಿಷ್ಠೆಯೆಂಬ ನೀರು ಬೆರೆತಿದೆ
ಅದೃಷ್ಟವೆಂಬ ಚಿಟಿಕೆ ಉಪ್ಪು ರುಚಿಯ ತರಿಸಿದೆ

ಬೇಯದ ಗಟ್ಟಿಕಾಳುಗಳಂತೆ ಈ ಹಠಮಾರಿತನವು
ಬೇಗನೆ ಮೆತ್ತಗಾಗುವ ಹಸಿ ಸೊಪ್ಪಂತೆ ಸಂಕೋಚ ಸ್ವಭಾವವು

ಮುದತರುವ ಘಟನೆಗಳೇ ಸಿಹಿಯ ಬೆಲ್ಲವು
ಕಣ್ಣೀರು ಭರಿಸುವ ಕ್ಷಣಗಳೇ ಹಾಗಲಕಾಯಿಯ ಪಲ್ಯವು
ಮೋಜಿನ ಸಂಧರ್ಭಗಳೇ ಎಣ್ಣೆಯ ಒಗ್ಗರಣೆಯು

ಉತ್ತಮ ಹವ್ಯಾಸಗಳೇ ಹಪ್ಪಳ ಸಂಡಿಗೆಗಳು
ದಯೆ ಕರುಣೆ ಸಹಿಷ್ಣುತೆಗಳೇ ಸವಿ ಮಂಡಿಗೆಗಳು
ತಾಳ್ಮೆಯೆಂಬ ತರಕಾರಿಯ ಯಥೇಚ್ಛವಾಗಿ ಬಳಸಿ‌ ಮಾಡಿದ ರುಚಿಕರವಾದ ಖಾದ್ಯಗಳು

ತಯಾರಿಸಿದ ಅಡುಗೆಯ ಬಿಸಿ ಬಿಸಿಯಾಗಿರುವಾಗಲೇ ಬಡಿಸೋಣ
ಸಕಲರಿಗೂ ಹಂಚಿ ಸವಿ ಸವಿದು ಉಣ್ಣೋಣ

ಬಡಿಸಿದಷ್ಟು ಮತ್ತೆ ಮತ್ತೆ ಹೆಚ್ಚುವ ಪರಮಾನ್ನವಿದು
ಮೊಗೆದಷ್ಟು ಖಾಲಿಯಾಗದ ಹಯವದನ ಕೃಪೆಯ ಹಯಗ್ರೀವವಿದು                    

-ಕೆ.ಎಂ ಶರಣಬಸವೇಶ

8 Comments on “ಜ್ಞಾನವೆಂಬ ಅಡುಗೆ

  1. ನವಿರಾದ ಹಾಸ್ಯ ಅದರೊಳಗೆ ಅನುಭವ ದ ತತ್ವ ದ ಅಳವಡಿಸಿ ಬರೆದ ಜ್ಞಾನ ವೆಂಬ ಅಡಿಗೆ ಕವನ ..ಸೊಗಸಾಗಿ ಮೂಡಿ ಬಂದಿದೆ ಅಭಿನಂದನೆಗಳು ಸಾರ್

  2. ವಿಶೇಷವಾದ ಜ್ಞಾನದಡುಗೆ ಮಾಡಿ ಬಡಿಸಿದ ತಮಗೆ ಧನ್ಯವಾದಗಳು ಸರ್

  3. ಬ್ರಹ್ಮಾಂಡದ ಸಕಲ ಭಾವಕೋಶವನ್ನು ಚಿಕ್ಕ ಅಡುಗೆ ಮನೆಯ ಅಡುಗೆಗೆ ಹೋಲಿಸಿ ಸಂಕ್ಷಿಪ್ರಗೊಳಿಸಿ ಕೊಟ್ಟಿರುವ ಪರಿ ಸೊಗಸಾಗಿದೆ. ಅಭಿನಂದನೆಗಳು.

  4. ಜ್ಞಾನದ ಅಡಿಗೆಯ ರಸಭಾವನೆಗಳಲ್ಲಿ ಬಣ್ಣಿಸಿರುವಿರಿ/
    ನವರಸ ಭಾವಗಳ ಅನುಭವದಲ್ಲಿ ತಯಾರಿಸಿರುವಿರಿ
    ಜ್ಞಾನದ ಅಡಿಗೆಯ ರಸಭಾವನೆಗಳಲ್ಲಿ ಬಣ್ಣಿಸಿರುವಿರಿ/
    ಉದಾತ್ತ ಮನಸಿನಲ್ಲಿ ಸಕಲರನು ಆಹ್ವಾನಿಸಿರುವಿರಿ/

    ಅಸ್ತಿತ್ವದಲ್ಲಿರಲು ಬೆರಸಿರುವಿರಿ ಅವಶ್ಯದ ಸಾಮಗ್ರಿಗಳನು/
    ಶ್ರಮವಿಲ್ಲದೆ ಬದುಕಲು ಒದಗಿರಿಸಿರುವಿರಿ ಒತ್ತಾಸೆಗಳನು/
    ಜೀವದಿಂದಿರಲು ಮಿಶ್ರಿಸಿರುವಿರಿ ಬೇಕಾದ ಅನ್ನಾಂಗಗಳನು/
    ಪರಿಮಳದಲ್ಲಿ ಬೇಯುಸಿರುವಿರಿ ಸಮಗ್ರ ಜೀವಸತ್ವಗಳನು/

    ಜ್ಞಾನದ ಅಡಿಗೆಯ ನಿವೇದನೆಯಲ್ಲಿ ಧಾರ್ಮಿಕರಾಗಿರುವುರಿ/
    ಬೇದಭಾವವಿಲದೆ ಸಕಲರಿಗೂ ಪ್ರೀತಿಯಲ್ಲಿ ಹಂಚಿರುವುರಿ/
    ಪಾಕ ಪ್ರವೀಣತೆಯಲಿ ತನ್ಮಯವಾಗಿ ಮಹಾಶಯರಾದಿರಿ/
    ಮುಂದುವರಿಯಲಿ ಹೀಗೆಯೇ ಜ್ಞಾನದ ಅಡುಗೆಯ ನೀಡುತಿರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *