ಬೊಗಸೆಬಿಂಬ

ಅಂತಃಪ್ರಜ್ಞೆ‍(Intuition)

Share Button

“ನಿನ್ನ ಬಗ್ಗೆಯೇ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ನೀನೇ ಬಂದು ಬಿಟ್ಟೆ. ನಿನಗೆ ನೂರು ವರ್ಷ ಆಯುಷ್ಯ ನೋಡು” ಅಂತ ಅನ್ನುತ್ತಾ ಒಬ್ಬ ಸಂತಸ ವ್ಯಕ್ತಪಡಿಸುತ್ತಿದ್ದರೆ, ಇನ್ನೊಬ್ಬ “ನೋಡೋ, ನೆನೆದವರ ಮನದಲ್ಲಿ… ಧುತ್ತನೆಂದು ಪ್ರತ್ಯಕ್ಷ ಆಗಿ ಬಿಟ್ಟನಲ್ಲಾ” ಅನ್ನುತ್ತಿದ್ದುದನ್ನು ಕೇಳಿ ಒಳಗೊಳಗೆ ಖುಷಿ ಆದರೂ “ಇನ್ನು ನೂರು ವರ್ಷ ಬದುಕುವುದು ಬೇಡಪ್ಪಾ” ಅಂದ ಅವನು. ಹೌದು, ಇಂತಹ ಅನುಭವ ಹಲವರಿಗೆ ಆಗಿರುತ್ತದೆ. ಎಷ್ಟೋ ಸಲ ನಾವು ಅಂದುಕೊಂಡಂತೆ ನಡೆಯುವುದಿದೆ. ಬೆಳ್ಳಂಬೆಳಿಗ್ಗೆಯೇ ಗೆಳೆಯನೊಬ್ಬನ/ಗೆಳತಿಯೊಬ್ಬಳ ನೆನಪಾಗುತ್ತದೆ. ಯಾಕೋ ಗೆಳೆಯನ ಜೊತೆ ಮಾತನಾಡಬೇಕು ಅಂತ ಅನ್ನಿಸುತ್ತಿರುವಾಗಲೇ ಗೆಳೆಯ ಬಂದೇ ಬಿಡುತ್ತಾನೆ ಅಥವಾ ಅವನ ದೂರವಾಣಿ ಕರೆ ಬರುತ್ತದೆ. ಈ ತರಹದ ಘಟನೆ ಕಾಕತಾಳೀಯವೇ ಆದರೂ ಅದು ಯಾಕಾಗಿ ಆಗುತ್ತದೆ ಅಥವಾ ನಡೆಯಲಿರುವ ಘಟನೆಯ ಮುನ್ಸೂಚನೆ ಹೇಗೆ ಸಿಗುತ್ತದೆ ಅನ್ನುವುದಕ್ಕೆ ಉತ್ತರವಿಲ್ಲ.

ನಮಗೇ ಗೊತ್ತಿಲ್ಲದಂತೆ ನಮ್ಮ ಮನಸ್ಸಿನಲ್ಲಿ ಮುಂದೆ ನಡೆಯಲಿರುವ ಘಟನೆಗಳ ಬಗ್ಗೆ ಪೂರ್ವಸೂಚನೆ ನೀಡುವಂತಹ ಆಲೋಚನೆಗಳು ಮೂಡುವುದು, ತದನಂತರ ಅಂದುಕೊಂಡಂತೆಯೇ ನಡೆಯುವುದು. ಒಳ್ಳೆಯ ವಿಷಯವಾದರೆ, ಮನಸ್ಸಿಗೆ ಖುಷಿ. ಬೇಸರದ ವಿಷಯವಾದರೆ ಮನಸ್ಸಿಗೆ ಆತಂಕ. “ದೇವರೇ, ಆ ತರಹ ಆಗದಿರಲಿ” ಅಂತ ಪ್ರಾರ್ಥನೆಯೂ ಮಾಡುವುದುಂಟು. ಅಷ್ಟಾಗಿಯೂ ಈ ತರಹದ ಆಲೋಚನೆಗಳು ಅಂದರೆ ಮುಂದೆ ಘಟಿಸಲಿರುವ ಸಂಗತಿಗಳು ಯಾಕೆ ಹೊಳೆಯುತ್ತವೆ ಮತ್ತು ಅದೇ ಸಂಗತಿಗಳು ಯಾಕೆ ಘಟಿಸುತ್ತವೆ ಅನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ಮುಂದೆ ಘಟಿಸಲಿರುವ ಘಟನೆಗಳ ಬಗ್ಗೆ ಮೂಡುವ ಆಲೋಚನೆಗಳಿಗೆ ಆಂಗ್ಲ ಭಾಷೆಯಲ್ಲಿIntuition ಅನ್ನುತ್ತೇವೆ. ಅಂತಃಪ್ರಜ್ಞೆ, ಒಳಜ್ಞಾನ, ಅಪರೋಕ್ಷ ಜ್ಞಾನ, ನೇರ ಅರಿವು ಮುಂತಾದ ಅರ್ಥಗಳಿವೆ.  ಕಣ್ಣು ಅದುರಿದರೆ/ಹೊಡೆದುಕೊಂಡರೆ (ಗಂಡಸರಿಗೆ ಬಲಗಣ್ಣು, ಹೆಂಗಸರಿಗೆ ಎಡಗಣ್ಣು), ಕೆಟ್ಟ ಆಲೋಚನೆ ಮೂಡಿದಾಗ ಹಲ್ಲಿ ಲೊಚಗುಟ್ಟಿದರೆ, ಆಕಾಶದತ್ತ ಮುಖ ಮಾಡಿ ನಾಯಿ ಊಳಿಟ್ಟರೆ ಏನೋ ಕೆಟ್ಟದ್ದು ಸಂಭವಿಸಲಿದೆ ಅನ್ನುವುದು ವಾಡಿಕೆಯಿಂದ ಬೆಳೆದುಬಂದ ಕೆಲವು ನಂಬಿಕೆಗಳು.

ಅಡುಗೆಯಲ್ಲಿ ನಿರತಳಾಗಿರುವ ಗೃಹಿಣಿ  ಏನಾದರೂ ಅಪರೂಪದ ತಿಂಡಿ ಮಾಡುತ್ತಿರುವಾಗ/ ತಯಾರಿಯಲ್ಲಿರುವಾಗ “ಅಕಸ್ಮಾತ್ ತಿಂಡಿ ತಿನ್ನುವ ಹೊತ್ತಿಗೆ ಯಾರಾದರೂ ಬಂದುಬಿಟ್ಟರೆ, ಸ್ವಲ್ಪ ಜಾಸ್ತಿಯೇ ಇರಲಿ” ಅಂತ ಅಂದಾಜು ಮಾಡಿಯೇ ತಯಾರಿ ಮಾಡಿದಳೆನ್ನಿ. ಅದೇ ದಿನ ಹೇಳದೇ ಕೇಳದೆ ಯಾರಾದರೂ ಅತಿಥಿಗಳು ಬಂದರೆಂದರೆ ಗೃಹಿಣಿಗೆ “ನಾನೆಣಿಸಿದ ಹಾಗೆ ಆಯ್ತು” ಅನ್ನುವ ಸಂತಸ. ಇನ್ನೂ ಸೋಜಿಗದ ವಿಷಯವೆಂದರೆ ಬೆಕ್ಕು ಮುಖ ತೊಳೆದರೆ, ಕಾಗೆ ಕರೆದರೆ, ಕಟ್ಟಿಗೆಯೊಲೆಯ ಬೆಂಕಿ ಸಶಬ್ದವಾಗಿ ಉರಿದರೆ (ಗ್ಯಾಸ್ ಒಲೆಯಲ್ಲ!) ಆ ದಿನ ಮನೆಗೆ ನೆಂಟರು ಬರಬಹುದೆನ್ನುವ ಮುನ್ಸೂಚನೆ ಅನ್ನುವುದು ಹಿಂದಿನವರ ನಂಬಿಕೆ. ಒಂದು ವೇಳೆ ನಿಜವಾದರೆ, “ಬೆಳಿಗ್ಗೆ ಬೆಳಿಗ್ಗೆ ಕಾಗೆ ಕೂಗುತ್ತಿತ್ತು/ ಬೆಕ್ಕು ಮುಖ ತೊಳೆಯುತ್ತಿತ್ತು. ಮನೆಗೆ ಯಾರಾದರೂ ಬರಬಹುದು ಅಂದ್ಕೊಳ್ತಿದ್ದೆ. ನೀವೇ ಬಂದುಬಿಟ್ಟಿರಿ” ಅಂತ ಮುಖ ಮೊರದಗಲ ಮಾಡಿಕೊಂಡು ಆ ಮನೆಯ ಗೃಹಿಣಿ ನುಡಿದಾಗ ಬಂದವರ ಮುಖದಲ್ಲಿಯೂ ನಸುನಗು.

ನಾನು ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜು ಕಛೇರಿಯ ಸಿಬ್ಬಂದಿಯೊಬ್ಬರು ತಿಂಗಳ ಸಂಬಳ ಬರುವುದು ತಡವಾದಾಗ ನನ್ನ ಬಳಿ ಬಂದು “ಮೇಡಂ, ಅರ್ಜೆಂಟಾಗಿ ಸ್ವಲ್ಪ ಹಣ ಬೇಕಿತ್ತು. ಒಂದು ವಾರದೊಳಗೆ ವಾಪಸ್ ಕೊಡುತ್ತೇನೆ” ಅಂತ ಕೇಳಿ ಹಣ ಪಡೆದು, ಹೇಳಿದ ದಿನಗಳೊಳಗೆ ಹಣ ವಾಪಸ್ ಕೊಡುವ ಪರಿಪಾಠ ಮೂರು ವರ್ಷಗಳಿಂದಲೂ ನಡೆಯುತ್ತಿರುವ ವಿಷಯ. ಒಂದು ದಿನ ಬೆಳಗ್ಗೆ ತಲೆಯಲ್ಲೊಂದು ಆಲೋಚನೆ “ಓ, ಈಗ ಅವರು ನನ್ನ ಬಳಿ ಹಣ ಕೇಳದೇ ತುಂಬಾ ಸಮಯ ಆಯಿತಲ್ಲಾ” ಅಂತ. ಅದೇ ದಿನ ನಾನು ಕಾಲೇಜು ತಲುಪಿದ ಕೂಡಲೇ ಅವರು ನನ್ನ ಬಳಿ ಬಂದು “ಮೇಡಂ, ಸ್ವಲ್ಪ ಹಣ ಸಿಗಬಹುದೇ?” ಅಂತ ಕೇಳಿದಾಗ ನನಗೆ ಆಶ್ಚರ್ಯ. “ಇವತ್ತು ಬೆಳಿಗ್ಗೆಯಷ್ಟೇ ನೀವು ನನ್ನ ಬಳಿ ಹಣ ಕೇಳದೇ ಕೆಲವು ಸಮಯವಾಯ್ತಲ್ಲಾ ಅಂದ್ಕೊಂಡೆ” ಅಂದಾಗ ಅವರು ನಸುನಕ್ಕರು.

ಬೆಳಗಿನ ಜಾವ ಬಿದ್ದ ಕನಸು ನಿಜವಾಗುತ್ತದೆ, ಬೆಳಗಿನ ಜಾವ ಬಿದ್ದ ಕನಸು ಮುಂದೆ ನಡೆಯಲಿರುವ ವಿಷಯಗಳ ಮುನ್ಸೂಚನೆ ಅಂತ ಹಲವರು ನಂಬುತ್ತಾರೆ. ಕೆಲವು ವರ್ಷಗಳ ಮೊದಲು ಮೆಟ್ಟಲಿಳಿಯುವಾಗ ಕಾಲು ತಪ್ಪಿ ಬಿದ್ದ ಕಾರಣ ಕಾಲಿನ ಮೂಳೆ ಮುರಿದಿತ್ತು. ಮೂಳೆ ಮುರಿತ ಸಂಭವಿಸುವ ಕೆಲದಿನಗಳ ಮೊದಲು ರಾತ್ರಿ ನಿದ್ದೆಯಲ್ಲಿ ಬಿದ್ದ ಕನಸಿನಲ್ಲಿ ನನ್ನ ಕಾಲು ಮುರಿದಿತ್ತು. ಕಾಕತಾಳೀಯವೇ ಆದರೂ ಕನಸು ನಿಜವಾಗಿಬಿಟ್ಟಿತ್ತು.

ನನ್ನ ತಂದೆಯವರು ನಿಧನರಾದ ದಿನ  ನನಗೆ ಆದ ವಿಚಿತ್ರ ಅನುಭವ. ತಂದೆಯವರು ತಕ್ಕ ಮಟ್ಟಿಗೆ ಆರೋಗ್ಯವಾಗಿಯೇ ಇದ್ದರು.  ಕೆಲ ದಿನಗಳ ಹಿಂದೆಯಷ್ಟೇ ತವರುಮನೆಗೆ ಹೋಗಿ ಬಂದಿದ್ದ ಕಾರಣ, ದೂರವಾಣಿ ಕರೆ ಕೂಡಾ ಮಾಡಿ ಕೆಲವು ದಿನಗಳು ಕಳೆದಿತ್ತು.   ತಂದೆಯವರು ಕೊನೆಯುಸಿರೆಳೆಯುವ ಸುಮಾರು ಒಂದು ಘಂಟೆ ಮೊದಲೇ ನನ್ನ ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಲಾರಂಭಿಸಿತ್ತು “ತಮ್ಮನ ಹೆಂಡತಿಯ ದೂರವಾಣಿ ಕರೆ ಬಂದ ಹಾಗೆ, ನಿಮ್ಮ ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೋದರು ಅಂದ ಹಾಗೆ”. ಆ ಆಲೋಚನೆಗಳು ಬಂದ ಒಂದು ಘಂಟೆಯ ತರುವಾಯ ನಿಜವಾಗಿಯೂ ತಮ್ಮನ ಹೆಂಡತಿಯ ದೂರವಾಣಿ ಕರೆ ಬಂದಾಗಲೇ ಹೃದಯ ಕಂಪಿಸಿತ್ತು. ಹಲೋ ಅನ್ನದೆ ಹೇಳು ಅಂದಿದ್ದೆ. ಯಾಕೆಂದರೆ ಮನಸ್ಸಿನೊಳಗೆ ಆಗಲೇ ಆತಂಕ ಮನೆ ಮಾಡಿಯಾಗಿತ್ತು. ಸಾಯುವ ಮೊದಲೇ  ಅದೇ ದಿನ ಆ ಆಲೋಚನೆಗಳು ಯಾಕೆ ಬಂತು ಅನ್ನುವುದೇ ಇಂದಿಗೂ ನನಗೆ ಯಕ್ಷಪ್ರಶ್ನೆ.

ಹಲವರು ಹೇಳುವುದು ಕೇಳಿದ್ದೇನೆ. ತನ್ನ ಅಂತ್ಯಕಾಲ ಸನ್ನಿಹಿತವಾಗುತ್ತಿದೆ ಅಂತ ಸಾಯುವ ಕೆಲವು ದಿನಗಳ ಮೊದಲೇ ಕೆಲವರಿಗೆ ಸಂಜ್ಞೆಗಳು ತೋರುವುದುಂಟು. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತನಾಗಿದ್ದ ವ್ಯಕ್ತಿಯೊಬ್ಬ ಒಂದು ದಿನ ತನ್ನ ಹೆಂಡತಿಯ ಬಳಿ “ನೋಡು, ಮನೆಯ ಜವಾಬ್ದಾರಿಯನ್ನು ವಹಿಸಲು ನಿನ್ನ ಮಗನಿಗೂ ಹೇಳು. ಅವನಿಗೂ ಜವಾಬ್ದಾರಿ ಏನೂಂತ ಅರ್ಥವಾಗಲಿ” ಎಂದು ಹೇಳಿ ಒಂದು ವಾರದೊಳಗೆ  ಮೃತಪಟ್ಟನಂತೆ. ಹಾಗಾದರೆ ಆ ವ್ಯಕ್ತಿಗೆ ತಾನು ಬೇಗನೇ ಸಾಯಲಿರುವೆನೆಂದು ಗೊತ್ತಿತ್ತೇ ಅನ್ನುವ ಪ್ರಶ್ನೆ!

ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಧನಾತ್ಮಕವಾಗಿದ್ದಲ್ಲಿ ಆತ್ಮವಿಶ್ವಾಸ ಹೆಚ್ಛಾಗುತ್ತದೆ. ಆ ದಿನದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬೇಕಾದಷ್ಟು ಪೂರ್ವಸಿದ್ಧತೆ ಮಾಡಿಕೊಂಡು  “ಈ ದಿನ ಗೆಲುವು ನನ್ನದೇ” ಅಂತ ಅಂದುಕೊಂಡು ಯಾವುದಾದರೂ ಪರೀಕ್ಷೆ/ಸ್ಪರ್ಧೆ ಎದುರಿಸಿದಾಗ ವಿಜಯಲಕ್ಷ್ಮಿ ಕೈ ಹಿಡಿದ ಹಲವಾರು ನಿದರ್ಶನಗಳು/ಸಂದರ್ಭಗಳು ಎಲ್ಲರ ಬಾಳಿನಲ್ಲಿ ನಡೆದಿರುತ್ತವೆ. ಸೋಲಿನ ಭಯ ನೂಲೆಳೆಯಷ್ಟು ಇದ್ದಾಗ ಗೆಲುವು ತಪ್ಪಿದ್ದಿರಬಹುದು. ಏನಿದ್ದರೂ ಎಣಿಸಿಕೊಂಡಂತೆ ನಡೆಯುವುದು ಯಾಕೆಂದು ನನ್ನ ಬಳಿ ಸಮರ್ಪಕ ಉತ್ತರವಿಲ್ಲ. ನಿಮ್ಮ ಬಳಿ ಉತ್ತರ ಇದ್ದರೆ ಹಂಚಿಕೊಳ್ಳಿ.

ಡಾ. ಕೃಷ್ಣಪ್ರಭ ಎಂ, ಮಂಗಳೂರು

12 Comments on “ಅಂತಃಪ್ರಜ್ಞೆ‍(Intuition)

  1. ಹೌದು ಈ ಮಾತು ಸತ್ಯ ವಾದದ್ದೇ ..ಚಿಂತನೆಗೆ ಹಚ್ಚುವಂತಹ ಬರಹ ಚೆನ್ನಾಗಿ ಮೂಡಿಬಂದಿದೆ ಮೇಡಂ. ಧನ್ಯವಾದಗಳು

  2. ಹೌದು…ಕಲವು ಘಟನೆಗಳು ಕಾಕತಾಳೀಯದಂತೆ ಕಂಡರೂ
    ವಿಚಿತ್ರವೆನಿಸುತ್ತವೆ. ಇಂತಹುಗಳು ಸಾಮಾನ್ಯವಾಗಿ ಆಗಾಗ ಅನುಭವಕ್ಕೆ ಬರುವುದು ವಿಚಿತ್ರ ಆದರೂ ನಿಜ…ಚಂದದ ಲೇಖನ

    1. ಹೌದು. ಕೆಲವು ಘಟನೆಗಳಿಗೆ ಕಾರಣಗಳನ್ನು ಕೊಡಲಾಗುವುದಿಲ್ಲ. ಯಾಕೆ ಸಂಭವಿಸಿತು ಅನ್ನುವುದಕ್ಕೆ ನಿಖರ ವಿವರಣೆ ಇಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು

  3. “ಹಲವರ ಸುಪ್ತ ಮನಸ್ಸಿಗೆ ಭವಿಷ್ಯದ ಘಟನೆಗಳು ಕನಸು/ಶಕುನಗಳ ಮೂಲಕ (ಅ)ಸ್ಪಷ್ಟವಾಗಿ ಗೋಚರಿಸುವುದು ನಿಜ.. ಆಶ್ಚರ್ಯಕರ..

    ನಿಮಗಾದ ಅನುಭವದೊಂದಿಗೆ ಲೇಖನ ಚೆನ್ನಾಗಿ ಮೂಡಿಬಂದಿದೆ”..

    ನನ್ನ ಲೇಖನಗಳನ್ನು ಓದಿ ಸದಾ ಪ್ರೋತ್ಸಾಹ ನೀಡುವ ಡಾ ರಾಜೇಂದ್ರ ಅವರ ಪ್ರತಿಕ್ರಿಯೆ

  4. ತುಂಬಾ ವಿಷಯಗಳು ನಡೆದ ಘಟನೆ ಬಗ್ಗೆ ನೆನಪಿಗೆ ಬರುವಂತೆ ಮಾಡಿದಿರಿ, ನನಗೂ ಎಷ್ಟೋ ಸಾರಿ ಹೀಗೆಯೇ ಆಗಿದೆ ಅನಿಸುತ್ತದೆ, ಧನ್ಯವಾದಗಳು

  5. ನನ್ನ ಜೀವನದಲ್ಲಿ ಬಹಳಷ್ಟು ಹೀಗೆ ನಡೆಯುತ್ತದೆ, ಅಪರೂಪಕ್ಕೆ ನೆನಪಿಗೆ ಬಂದವರು ಎದುರಿಗೆ ಕಾಣಸಿಗುತ್ತಾರೆ. ಹಾಗೆ ಹಳೇಕಾಲದಲ್ಲಿ ಒಲೆ ಮೊರೆದಾಗ ಯಾರಾದರೂ ಬರುತ್ತಾರೆ ಎಂದು ಅಮ್ಮ ಅನ್ನು ತ್ತಿದ್ದದ್ದು ನೆನಪಿಗೆ ಬಂತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *