ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?
by
Keshava Prasad B Kidoor, keshavaprasadb@gmail.com
·
July 8, 2014
ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ. ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ. ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು.ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ, ಸಾಲ ಜಾಸ್ತಿಯಾಗುತ್ತಿದೆ…ಇಷ್ಟೆಲ್ಲ ಸಮಸ್ಯೆಗಳಿರುವಾಗ ದಿಕ್ಕು ತೋಚದೆ ಕೀಳರಿಮೆಯಿಂದ ನೊಂದು ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದಯವಿಟ್ಟು ಗ್ರಾಮ ವಾಸ್ತವ್ಯ ಮಾಡಿ ಅಂತ ಮಂತ್ರಿಗಳಿಗೆ ಪಕ್ಷಾಧ್ಯಕ್ಷರು ಉತ್ತರದಿಂದ ಬಂದು ಕೌನ್ಸಿಲಿಂಗ್ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಮಠಗಳು ಕೂಡ ಸಾಂಪ್ರದಾಯಿಕ ವ್ಯವಸಾಯಗಳನ್ನೆಲ್ಲ ಕೈ ಬಿಟ್ಟು ಶಿಕ್ಷಣ, ಎಂಜಿನಿಯರಿಂಗ್ ಅಂತ ಬೇರೆ ಉದ್ಯೋಗಗಳಲ್ಲಿ ಫಸಲು ಕಾಣುತ್ತಿವೆ. ಇನ್ನೂ ಕೃಷಿಯನ್ನು ನೆಚ್ಚಿರುವ ಸಣ್ಣ ಪುಟ್ಟ ಮಠಗಳ ಸ್ಥಿತಿ ಬಡಪಾಯಿ ರೈತನಿಗೆ ಸಮವಾಗಿದೆ.
ಎದೆ ಮುಟ್ಟಿ ಕೇಳಿ, ಯಾರಿಗೆ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವಾಸೆ ಇರುತ್ತದೆ ? ನಮ್ಮ ಸರಕಾರಗಳು ನಿಜಕ್ಕೂ ಪ್ರಾಂಜಲ ಮನಸ್ಸಿನಿಂದ ರೈತರ ನೋವನ್ನು ಶಮನಗೊಳಿಸುತ್ತಿವೆಯಾ ? ಪ್ರತಿ ಸಲ ಬಜೆಟ್ ಮಂಡನೆ
ಯಾದಾಗಲೂ ಸರಕಾರ ತನ್ನದು ರೈತಪರ ಬಜೆಟ್ ಅಂತ ಘೋಷಿಸುವುದನ್ನು ನೋಡುತ್ತೇವೆ. ಕೇಂದ್ರ ಸರಕಾರ ವಿದರ್ಭ ಪ್ರಾಂತ್ಯದ ರೈತರಿಗೆ ಪ್ಯಾಕೇಜ್ ಪ್ರಕಟಿಸಿ ಕೈ ತೊಳೆಯಿತು. ಆದರೆ ಈವತ್ತಿಗೂ ಅಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ.
ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಉತ್ತೇಜಿಸಿದರೆ ರೈತನ ಬದುಕು ಉದ್ಧಾರವಾದೀತು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸುಲಿಗೆ ನಿಂತರೆ, ಬೆಳೆಗೆ ಯೋಗ್ಯ ಬೆಲೆ ಕಟ್ಟಿದರೆ ಮಿಕ್ಕಿದ ಸಮಸ್ಯೆಗಳೆಲ್ಲ ಕರಗಿಯಾವು ಅಂತ ಎಲ್ಲರಿಗೂ ಗೊತ್ತಿದೆ. ಆದರೆ ರೈತರ ಕಲ್ಯಾಣದ ಮಂಥನ, ಜಿಜ್ಞಾಸೆಗಳೆಲ್ಲ ಬಾಯುಪಚಾರದಲ್ಲೇ ನಿಂತುಬಿಟ್ಟಿದೆ. ಬರೀ ಮಾತು…ಮಾತು…ಮಾತು.. ಬಹುಶಃ ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎಂದರೆ ಕೃಷಿಯೇ.
.
ಕೃಷಿ ಕ್ಷೇತ್ರದ ಸುಧಾರಣೆಗೆ ಉದ್ಯಮ ಬೆಂಬಲವಾಗಿ ನಿಲ್ಲಬೇಕು. ಅಭಿವೃದ್ಧಿ ಹೊಂದಿದ ಪ್ರತಿ ರಾಷ್ಟ್ರದಲ್ಲಿಯೂ ಶೇ.80 ರಷ್ಟು ಕೃಷಿ ಉತ್ಪನ್ನಗಳು ಸಂಸ್ಕರಣೆಯಾಗುತ್ತವೆ. ಆದರೆ ನಮ್ಮಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಹೊತ್ತಿಗೆ ಶೇ. 40 ರಷ್ಟು ಸಂಸ್ಕರಣೆಯಾಗದೆ ವ್ಯರ್ಥವಾಗುತ್ತವೆ.
ಗ್ರಾಮೀಣ ಪ್ರದೇಶಗಳ ಸಮಸ್ಯೆ ಮತ್ತು ಆತಂಕದ ಕಾರಣಗಳು ಒಂದೊಂದು ಕಡೆಯಲ್ಲಿ ಭಿನ್ನ. ಹೀಗೆ ಏಕಕಾಲದಲ್ಲಿ ದಶದಿಕ್ಕುಗಳಿಂದ ಸಮಸ್ಯೆಗಳು ಬಂದೆರಗಿರುವುದರಿಂದ ಯುವಜನತೆ ಬೆಂಗಳೂರಿಗೋ, ಮುಂಬಯಿಗೋ, ಗೋವಾಗೋ, ಹುಬ್ಬಳ್ಳಿಗೋ ಹೋಗುವುದರಲ್ಲಿ ಆಶ್ಚರ್ಯವಾಗುವಂಥದ್ದೇನಿದೆ ?
.
– ಕೇಶವ ಪ್ರಸಾದ. ಬಿ. ಕಿದೂರು
Tags: Agriculture problems
ಅರ್ಥವತ್ತಾದ ಬರಹ .ಚೆನ್ನಾಗಿದೆ.