ಮಾಲಕ್ಕನೂ ಮೊಸರನ್ನವೂ…
ಇಂದು ಬೆಳಿಗ್ಗೆ ಮಾಲಕ್ಕ ಮಧ್ಯಾಹ್ನ ಊಟಕ್ಕೆ ಬಿಸಿಬೇಳೆಭಾತ್ ಮತ್ತು ಮೊಸರನ್ನ ಮಾಡುತ್ತೇನೆಂದು ಘೋಷಿಸಿದಾಗ ಮಧ್ಯಾಹ್ನಕ್ಕಿಟ್ಟುಕೊಂಡ ಗೆಳತಿಯ ಜೊತೆಗಿನ ಪ್ರಾಜೆಕ್ಟ್-ಕಟ್ಟೆ ಹರಟೆಯನ್ನು ಸಂಜೆ ನಾಲ್ಕಕ್ಕೆ ಮುಂದೆ ಹಾಕುವ ತೀರ್ಮಾನ ಮಾಡಿದೆ. ಮಾಲಕ್ಕನ ಅಡುಗೆಯ ದೊಡ್ದ ಅಭಿಮಾನಿ ನಾನು. ಅದರಲ್ಲೂ ಮೈಸೂರು ಸ್ಪೆಷಲ್ ಮೊಸರನ್ನ, ಬಿಸಿಬೇಳೆ ಭಾತ್ ಇಂತಹುದನ್ನೆಲ್ಲ ಮೈಸೂರಿನವರಿಗಿಂತ ಚೆನ್ನಾಗಿ ತಯಾರಿಸುತ್ತಾರೆ. ಯಾವಾಗಲೂ ಅಷ್ಟೆ! ಮೊಸರನ್ನವನ್ನು ಮಿಸ್ ಮಾಡುವಂತೆಯೇ ಇಲ್ಲ! ಅದಾಗಲೇ ಅರ್ಧ ದಾರಿ ತಲುಪಿದ್ದ ಗೆಳತಿಗೆ ಮನಸ್ಸಿನಲ್ಲೇ ಬೈದುಕೊಂಡು ಯೂನಿವರ್ಸಿಟಿ ಯ ನಮ್ಮ ಎಂದಿನ ಸ್ಥಳವಾದ ಹುಣಿಸೆ ಮರದ ಕೆಳಗೆ ತಲುಪಿದೆ. ರಂಜ಼ಾನ್ ಉಪವಾಸದಲ್ಲಿದ್ದ ಫ಼್ರೆಂಡ್ ಗೆ ’ಮಾಲಕ್ಕನ ಮೊಸರನ್ನ’ದ ರುಚಿಯ ಬಗ್ಗೆ ಒಂದು ಸಣ್ಣ ವಿವರ ಕೊಟ್ಟು, ಒಂದು ಗಂಟೆಗೆ ವಾಪಸು ಹೋಗಬೇಕೆನ್ನುತ್ತಲೇ ನಮ್ಮ ಕೆಲಸ ಆಯಿತೆನ್ನಿಸಿದಾಗ ಗಂಟೆ ಎರಡು. ತಣ್ಣಗಿನ ಮೊಸರನ್ನವ ನೆನೆಸಿಕೊಳ್ಳುತ್ತಾ ಅಡ್ದಾದಿಡ್ಡಿ ಗಾಡಿ ಚಲಾಯಿಸಿ ಮನೆ ತಲುಪಿದಾಗ ಮಾಲಕ್ಕ ಕಂಪ್ಯೂಟರ್ ನಲ್ಲಿ ಏನೋ ಟೈಪಿಸುತ್ತಾ ಕುಳಿತಿದ್ದರೆ, ಮಾಲಕ್ಕನ ಬಿಸಿಬೇಳೆಭಾತ್ ಅಭಿಮಾನಿಯಾದ ಪುಟ್ಟ ಕಾಲು ಸುಟ್ಟ ಬೆಕ್ಕಿನಂತೆ ಹಾಲ್, ಡೈನಿಂಗ್ ರೂಂ ಅಂತ ಅಲೆಯುತ್ತಿದ್ದ ಯಾಕೆಂದರೆ ಊಟದ ಸಮಯ ಮೀರುತ್ತಲಿತ್ತು.
ಮಾಲಕ್ಕನ ಅಚ್ಚುಕಟ್ಟಾದ ಅಡುಗೆಮನೆಯಲ್ಲಿ ಚೊಕ್ಕವಾಗಿ ಕುಳಿತ ಮೊಸರನ್ನದ ಪಾತ್ರೆಯನ್ನೆತ್ತಿ ಮೊದಲು ಟೇಬಲ್ ಮೇಲೆ ಸ್ಥಾಪಿಸಿದೆ. ಬಿಸಿಲಿಗೆ ತಣ್ಣಗಿನ ಮೊಸರನ್ನವ ಉಣ್ಣುವುದೇ ಒಂದು ಸಂಭ್ರಮ! ನಿಧಾನವಾಗಿ ಜೊತೆಯಲ್ಲಿ ಕುಳಿತು ಉಂಡೆದ್ದಾಗ ಮಾಲಕ್ಕನ ಮೊಸರನ್ನದ ರುಚಿಯನ್ನು ಸುರಹೊನ್ನೆಬಳಗಕ್ಕೂ ಪರಿಚಯಿಸುವ ಹೊಣೆ ಹೊತ್ತು ಒಂದು ಫೊಟೊ ಕ್ಲಿಕ್ಕಿಸಿದೆ.
ಇಲ್ಲಿದೆ ರೆಸಿಪಿ :
ಒಂದೂವರೆ ಕಪ್ ಅನ್ನ ಮೆತ್ತಗೆ ಮಲ್ಲಿಗೆ ಹೂವಿನಂತೆ ಬೇಯಿಸಿಟ್ಟುಕೊಂಡು ಅದಕ್ಕೆ ಒಂದು ಕಪ್ ಬಿಸಿ ಹಾಲು ಹಾಕಿ ಸೌಟಿನಲ್ಲಿ ಒತ್ತಿ ಮೆದುವಾಗಿಸಿ. ಈ ಮಿಶ್ರಣ ತಣಿದಾಗ ಎರಡು ಕಪ್ ಕಪ್ ಸಿಹಿ ಮೊಸರು ಬೆರೆಸಿಕೊಳ್ಳಿ. ಗಟ್ಟಿಯೆನಿಸಿದರೆ ಇನ್ನೂ ಸ್ವಲ್ಪ ಮೊಸರು ಅಥವಾ ನೀರನ್ನು ಹಾಕಬಹುದು. ಮೊಸರನ್ನ ಸೌಟಿನಲ್ಲಿ ಸುರಿಯುವಂತಿರಬೇಕು. ತೀರಾ ಗಟ್ಟಿ ಇದ್ದರೆ ಚೆನ್ನಗಿರುವುದಿಲ್ಲ. ಹಾಗಾಗಿ ಮೊಸರನ್ನ ಕಲೆಸಿ ಕೆಲವು ಗಂಟೆಗಳ ನಂತರ ಉಣ್ಣುವುದಾದರೆ ಇನ್ನಷ್ಟು ಮೊಸರು ಅಥವಾ ಹಾಲು ಸೇರಿಸಿ ಹದಗೊಳಿಸಬಹುದು.
ಇದಕ್ಕೆ ಉಪ್ಪು, ಹಸಿಮೆಣಸಿನಕಾಯಿ, ಸೌತೇಕಾಯಿ(ಮುಳ್ಳುಸೌತೆ) ಚೂರುಗಳನ್ನು ಸೇರಿಸಿಕೊಳ್ಳಿ. ದಾಳಿಂಬೆ ಬೀಜಗಳು, ಹಸಿರು ದ್ರಾಕ್ಷಿ, ಒಣ ದ್ರಾಕ್ಷಿ ಇವೆಲ್ಲಾ ಸೇರಿಸಿದರೆ ಮತ್ತೂ ಚೆನ್ನ! ಇಷ್ಟಾಯಿತೇ.. ಮುಂದೆ ಘಮಘಮಿಸುವ ಸಾಸಿವೆ, ಒಣಮೆಣಸು, ಧಾರಾಳ ಕರಿಬೇವಿನೆಲೆಗಳ ಒಗ್ಗರಣೆ ಕೊಟ್ಟುಕೊಂಡು ಪರಿಮಳ ಲಾಕ್ ಆಗುವಂತೆ ಮುಚ್ಚಿಟ್ಟರೆ ಮೊಸರನ್ನ ಸಿದ್ಧ! ಕೊತ್ತಂಬರಿ ಸೊಪ್ಪು ಇಷ್ಟವಿದ್ದರೆ ಮೇಲೆ ಉದುರಿಸಿಕೊಳ್ಳಿರಿ.
“ಒಂದು ದಿನದ ಮಟ್ಟಿಗೆ ಚಿಕ್ಕ ಪ್ರವಾಸ ಮಾಡುವುದಿದ್ದರೆ ಹೋಟೆಲ್ ಊಟಕ್ಕಿಂತ ಮನೆಯಲ್ಲಿಯೇ ತಯಾರಿಸಿದ ಯಾವುದಾದರೂ ಒಂದು ಕಲಸಿದ ಅನ್ನದ(ಉದಾ: ಪುಳಿಯೋಗರೆ,ಚಿತ್ರಾನ್ನ,ಪಲಾವ್, ವಿವಿಧ ಭಾತ್) ಜತೆಗೆ ಮೊಸರನ್ನ, ಒಂದಿಷ್ಟು ಕುರುಕಲು ತಿಂಡಿ ಮತ್ತು ಹಣ್ಣು ಒಯ್ದರೆ ಹೊಟ್ಟೆಯೂ ತುಂಬುತ್ತದೆ, ಅರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಕತ್ತರಿಯಿಲ್ಲ, ಹೋದ ಕಡೆ ಸರಿಯಾದ ಹೋಟೆಲ್ ಸಿಗದಿದ್ದರೆ ಆಗುವ ಪೇಚಾಟವೂ ತಪ್ಪುತ್ತದೆ” ಎಂದು ಮಾಲಕ್ಕನ ಅನುಭವದ ನುಡಿಗಳು. ಹಾಲು ಮೊಸರು ಒಲ್ಲದ ಮಕ್ಕಳೂ ಕಲರ್ ಫುಲ್ ಮೊಸರನ್ನವನ್ನು ಇಷ್ಟಪಟ್ಟು ತಿನ್ನುತ್ತಾರೆ.
ಇನ್ನು ಕೆಲಸಕ್ಕೆ ಧಾವಿಸುವ ಮಹಿಳೆಯರಿಗೆ ತಮ್ಮ ಲಂಚ್ ಬಾಕ್ಸ್ ಗೆ ಇಷ್ಟೆಲ್ಲಾ ಶ್ರದ್ಧೆಯಿಂದ ಮೊಸರನ್ನ ತಯಾರಿಸಲು ಸಮಯವಿಲ್ಲದಿದ್ದಾಗ ಅದಕ್ಕೂ ಶಾರ್ಟ್ ಕಟ್ ಶೈಲಿ. ಸಾಸಿವೆ/ಜೀರಿಗೆಯ ಒಗ್ಗರಣೆ ಹಾಕಿದರಾಯಿತು ಅಥವಾ ಸ್ವಲ್ಪ ಈರುಳ್ಳಿ ಚೂರುಗಳನ್ನು ಉದುರಿಸುವುದು ಏನೂ ಇಲ್ಲದಿದ್ದರೆ ಕೇವಲ ಉಪ್ಪು ಬೆರೆಸಿದರೂ ಸರಿಯೇ. ಒಂದು ಹೋಳು ಉಪ್ಪಿನಕಾಯಿ ಜತೆಗಿದ್ದರೆ ರುಚಿಗೇನೂ ಕೊರತೆಯಿಲ್ಲ. ಇದು ಮೊಸರನ್ನದ ಮಹಿಮೆ!
– ಶ್ರುತಿ ಶರ್ಮಾ,ಮೈಸೂರು
ಬರಹ ಚೆನ್ನಾಗಿದೆ. ಮನೆಯಲ್ಲಿದ್ದರೆ ನಮಗೆ ಮೊಸರನ್ನ ಅಂದರೆ ಅಷ್ಟಕ್ಕಷ್ಟೇ. ಬೆಂಗಳೂರಿನಲ್ಲೊಮ್ಮೆ, ಪಾಂಡಿಚೇರಿಯಲ್ಲೊಮ್ಮೆ ಮೊಸರನ್ನದ ಸವಿ ನೋಡಿದ್ದೇನೆ. ಸೂಪರ್…! ಪಾಂಡಿಚೇರಿ ಪ್ರವಾಸದಲ್ಲಿ ಉಂಡ ಮೊಸರನ್ನದ ರುಚಿಯಂತೂ ಈಗಲೂ ನೆನಪಿಗೆ ಬರುತ್ತಿದೆ!
ಮೊಸರನ್ನ ನಾವೇ ತಿಂದ ಹಾಗೆ ರುಚಿ ಇತ್ತು .ನಮ್ಮಲ್ಲಿ ನೀರುಳ್ಳಿ ಹಾಕದಿದ್ದರೆ ಮುಟ್ಟುವುದಿಲ್ಲ . ಕೊನೆಗೆ ಬರೆದಿದ್ದು ನಿಜ. ಎಲ್ಲಾದರೂ ಹೋಗುವಾಗ
ಒಯ್ದರೆ ಬೆಸ್ಟ್. ಮೊಸರನ್ನವನ್ನು ಲೇಖಕರು ಪ್ರೆಸೆಂಟ್ ಮಾಡಿದ ಕ್ರಮ ಚೆನ್ನಾಗಿತ್ತು.
ಮಾಲಕ್ಕನೂ,ಮೊಸರನ್ನವೂ ಬಹಳ ಸು೦ದರವಾಗಿ ಬರೆದಿದ್ದೀರಿ .ಇ೦ದೇ ತಯಾರಿಸುವೆ .ಆಹಾ ರುಚಿ .
ಬಿಸಿಬೇಳೆ ಭಾತ್ ಮಸಾಲೆ ಹೇಗೆ ತಯಾರಿಸೋದು?
ಬಿಸಿಬೇಳೆ ಭಾತ್ ತಯಾರಿಯ ವಿಧಾನವನ್ನು ಇಲ್ಲಿ ನೋಡಬಹುದು.
http://www.wikihow.com/Prepare-Bisibelebath-(a-Tasty-South-Indian-Dish)
ಮೊಸರನ್ನ ಇಷ್ಟವಾಗದವರ ಬಾಯಲ್ಲೂ ನೀರೂರಿಸುತ್ತೆ ಈ ರೆಸಿಪಿ.
ಮಾಲಕ್ಕನ ಅಡುಗೆಯ ಕೈಚಳಕವನ್ನು ಸವಿದು ಉಂಡವರಲ್ಲಿ ನಾನೂ ಒಬ್ಬಳು. ಆಕೆಯ ಸಿಹಿ ಮತ್ತು ಖಾರ ಪೊಂಗಲ್ ಜೊತೆಗೆ ಹುಣಸೆ ಹಣ್ಣು ಬೆಳ್ಳುಳ್ಳಿ ಗೊಜ್ಜಿನ ಸವಿಯು ಇನ್ನು ಬಾಯಲ್ಲೇ ಇದೆ. ಅದನ್ನು ಮಾಡುವ ವಿಧಾನವನ್ನೂ ಕಳುಹಿಸುವಿರಾ?