ಜ್ಯೋತಿರ್ಲಿಂಗ 6 : ಭೀಮಾ ಶಂಕರ
ಪಟ್ಟಣಗಳ ಸದ್ದು ಗದ್ದಲದಿಂದ ದೂರ, ಜನ ಜಂಗುಳಿಯ ನೂಕು ನುಗ್ಗಾಟದಿಂದ ಬಹುದೂರ, ಕಾಂಕ್ರೀಟ್ ಕಾಡುಗಳಿಂದ ಇನ್ನೂ ದೂರವಿರುವ ಭೀಮಾಶಂಕರನ ದರ್ಶನ ಮಾಡೋಣ ಬನ್ನಿ. ಮಹಾರಾಷ್ಟ್ರದ ಪುಣೆಯಿಂದ 129 ಕಿ.ಮೀ. ದೂರದಲ್ಲಿರುವ ಖೇಡ್ ತಾಲ್ಲೂಕಿನ ಬೋರ್‌ಗಿರಿ ಎಂಬ ಗ್ರಾಮದಲ್ಲಿ, ಡಾಕಿನಿ ಬೆಟ್ಟದ ಬಳಿಯಿರುವ, ಭೀಮಾ ನದಿಯ ತೀರದಲ್ಲಿರುವ ದೇಗುಲವೇ ಭೀಮಾಶಂಕರ ಜ್ಯೋತಿರ್ಲಿಂಗ. ಸಹ್ಯಾದ್ರಿ ಪರ್ವತ ಶ್ರೇಣಿಗಳು, ದಟ್ಟವಾದ ಅರಣ್ಯಗಳು, ಮುಗಿಲನ್ನು ಮುತ್ತಿಡುವ ಗಿರಿ ಶಿಖರಗಳು, ಸಂಭ್ರಮದಿಂದ ಉಲಿಯುತ್ತಿರುವ ಹಕ್ಕಿಗಳು ಹಾಗೂ ವಿವಿಧ ಬಗೆಯ ಪ್ರಾಣಿ ಪಕ್ಷಿಗಳು ಭೀಮಾಶಂಕರನ ಗುಡಿಗೆ ವಿಶೇಷ ಮೆರಗನ್ನು ನೀಡಿವೆ. ಶಿವನ ಕಿವಿಯಲ್ಲಿ ಏನನ್ನೋ ಉಸುರುತ್ತಿರುವ ತಂಗಾಳಿ, ಧ್ಯಾನ ಮಗ್ನನಾಗಿ ಕುಳಿತಿರುವ ಪರಶಿವನ ಪಾದಗಳನ್ನು ತೊಳೆಯುತ್ತಿರುವ ಭೀಮಾ ನದಿ – ಪರಿಸರ ಪ್ರೇಮಿಗಳ ಪಾಲಿನ ಸ್ವರ್ಗವೇ ಸರಿ. ಆಸ್ತಿಕರಿಗೆ ಭೀಮಾಶಂಕರ ಜ್ಯೋತಿರ್ಲಿಂಗದ ದರುಶನದ ಭಾಗ್ಯ, ನಾಸ್ತಿಕರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುವ ಸೌಭಾಗ್ಯ. ಶಿವಭಕ್ತರು – ‘ಹರ ಹರ ಮಹಾದೇವ್’ಎನ್ನುತ್ತಾ ಹೆಜ್ಜೆ ಹಾಕಿದರೆ, ಚಾರಣಿಗರು ಕಡಿದಾದ ಬೆಟ್ಟ ಗುಡ್ಡಗಳನ್ನು ಏರುತ್ತಾ ನಿಸರ್ಗದ ಚೆಲುವನ್ನು ಆಸ್ವಾದಿಸುತ್ತಾ ಸಾಗುವರು. ಈ ಶಿವಲಿಂಗವು ಬೃಹದಾಕಾರದಲ್ಲಿರುವುದರಿಂದ ‘ಮೋಟೇಶ್ವರ ಮಹಾದೇವ’ ಎಂದೂ ಪ್ರಖ್ಯಾತವಾಗಿದೆ. ಒಂದಾನೊಂದು ಕಾಲದಲ್ಲಿ ಶಾಕಿನಿ ಮತ್ತು ಡಾಕಿನಿ ಎಂಬ ರಾಕ್ಷಸಿಯರು ಇಲ್ಲಿ ವಾಸವಾಗಿದ್ದುದರಿಂದ, ಈ ಪ್ರದೇಶಕ್ಕೆ ಡಾಕಿನಿ ಎಂಬ ಹೆಸರು ಬಂತೆಂದೂ ಕೆಲವರ ಅಭಿಪ್ರಾಯ. ಸೂರ್ಯನು ಉದಯಿಸಿದಾಗ, ಈ ಜ್ಯೋತಿರ್ಲಿಂಗದ ದರ್ಶನ ಮಾಡಿದವರ ಎಲ್ಲಾ ಇಚ್ಛೆಗಳೂ ಪೂರೈಸುವುವು ಹಾಗೂ ಅವರ ಎಲ್ಲಾ ಪಾಪಗಳೂ ಪರಿಹಾರವಾಗುವುವು ಎಂಬ ನಂಬಿಕೆಯೂ ಇದೆ.
ಈ ದೇಗುಲವು, ಸಮುದ್ರ ತೀರದಿಂದ 3,250 ಅಡಿ ಎತ್ತರದಲ್ಲಿದ್ದು, ಸುಮಾರು 230 ಮೆಟ್ಟಿಲುಗಳನ್ನು ದೇಗುಲದ ಮುಂಭಾಗದಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಇಂಡೋ-ಆರ್ಯನ್/ ‘ನಗರ’ ವಾಸ್ತು ಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ವಿಶ್ವಕರ್ಮನಿಂದ ರಚಿಸಲ್ಪಟ್ಟ ಸುಂದರ ಮೂರ್ತಿಗಳು, ದೇಗುಲದ ಪ್ರಾಂಗಣದಲ್ಲಿ ಪೌರಾಣಿಕ ಪ್ರಸಂಗಗಳನ್ನು ನಿರೂಪಿಸುವ ಅದ್ಭುತ ಶಿಲ್ಪಗಳು ಪ್ರವಾಸಿಗರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಈ ದೇಗುಲವನ್ನು ಹದಿಮೂರನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂತರದಲ್ಲಿ ಬಂದ ಅನೇಕ ರಾಜ ಮಹಾರಾಜರು, ಈ ದೇವಾಲಯವನ್ನು ವಿಸ್ತರಿಸುತ್ತಾ ಹೋದರು. ಚಿಮಾಜಿ ಅಪ್ಪಾಜಿ ನಾಯಕ್ ಬಿಂಧೆ ಎಂಬ ನಾಯಕನು ರೋಮನ್ ಶೈಲಿಯ ಒಂದು ಬೃಹದಾಕಾರದ ಗಂಟೆಯನ್ನು ದೇಗುಲದ ಮುಂದೆ ತೂಗು ಹಾಕಿಸಿದನು. ಈ ಗಂಟೆಯ ಮೇಲೆ ಅಪರೂಪವಾದ ಮೇರಿ ಮಾತೆ ಮತ್ತು ಜೀಸಸ್‌ನ ಮೂರ್ತಿಗಳ ಕೆತ್ತನೆ ಇದೆ. ಹದಿನೆಂಟನೇ ಶತಮಾನದಲ್ಲಿ ನಾನಾ ಫಡ್ನವೀಸ್ ಸಭಾ ಮಂಟಪವನ್ನು ಕಟ್ಟಿಸಿದನು. ಮರಾಠರ ದೊರೆಯಾದ ಛತ್ರಪತಿ ಶಿವಾಜಿಯು ದೇವಸ್ಥಾನದ ನಿರ್ವಹಣೆಗಾಗಿ ಜಮೀನನ್ನು ಉಂಬಳಿಯನ್ನಾಗಿ ನೀಡಿದನು. ಇನ್ನು ದೇವಾಲಯದ ಕೆಲವು ಭಾಗದಲ್ಲಿ ಬೌದ್ಧಶೈಲಿಯ ಶಿಲ್ಪಗಳೂ ಕಂಡು ಬರುತ್ತವೆ. ಸಂತ ಧ್ಯಾನೇಶ್ವರರು, ತಪಗೈದ ಪವಿತ್ರ ಕ್ಷೇತ್ರ ಇದು. ದೇಗುಲದ ಪ್ರಾಂಗಣದಲ್ಲಿ, ದಶಾವತಾರದ ಮನಮೋಹಕ ಶಿಲ್ಪಗಳನ್ನು ಕಂಡು ಯಾತ್ರಿಗಳು ಪುನೀತರಾಗುವರು. ‘ರಾಜಾ ರಾಮ್ ಮಹಾರಾಜ್’, ‘ರಘುನಾಥ್ ರಾವ್ ಪೇಶಾ’ ಮುಂತಾದವರು ದೇಗುಲವನ್ನು ನವೀಕರಿಸುತ್ತಾ ಹೋದರು. ಇವರು ಕಟ್ಟಿಸಿದರೆನ್ನಲಾದ ಒಂದು ಬಾವಿಯು ದೇಗುಲದ ಬದಿಯಲ್ಲಿದೆ.
ಈಗ ಭೀಮಾಶಂಕರನ ಪೌರಾಣಿಕ ಹಿನ್ನೆಲೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ. ತ್ರೇತಾಯುಗದಲ್ಲಿ, ತ್ರಿಪುರಾಸುರನೆಂಬ ರಕ್ಕಸನು ಶಿವನ ವರಪ್ರಸಾದದಿಂದ ಅಮರತ್ವ ಪಡೆದು, ಅಹಂಕಾರದಿಂದ ಮೆರೆಯುತ್ತಿದ್ದನು. ಸ್ವರ್ಗ, ನರಕ, ಪಾತಾಳ ಲೋಕದಲ್ಲಿದ್ದ ಸುರ ಮುನಿಗಳನ್ನೂ, ಮಾನವರನ್ನೂ ಪೀಡಿಸುತ್ತಿದ್ದನು. ತಮ್ಮ ಉಳಿವಿಗಾಗಿ ದೇವತೆಗಳು, ಶಿವನ ಮೊರೆ ಹೋದಾಗ, ಶಿವನು ಅರ್ಧನಾರೀಶ್ವರನಾಗಿ ಅವತರಿಸಿ, ತ್ರಿಪುರಾಸುರನನ್ನು ಸಂಹರಿಸುತ್ತಾನೆ. ನಂತರ ಭಕ್ತರ ಬೇಡಿಕೆಯಂತೆ ಅಲ್ಲಿಯೇ ಜ್ಯೋತಿ ಸ್ವರೂಪನಾಗಿ ನೆಲಸುತ್ತಾನೆ. ಪಾರ್ವತಿಯು ‘ಕಮಲಜ’ ಎಂಬ ಹೆಸರಿನಿಂದ ಅಲ್ಲಿ ನೆಲಸಿರುವಳು. ತ್ರಿಪುರಾಸುರನೊಂದಿಗೆ ಕಾದಾಡುವಾಗ, ಶಿವನ ಶರೀರದಿಂದ ಹರಿದ ಬೆವರಿನ ಧಾರೆ ಭೀಮಾ ನದಿಯಾಗಿ ಹರಿಯಿತೆಂಬ ಪ್ರತೀತಿಯೂ ಇದೆ. ಈಗಲೂ, ಶಿವಲಿಂಗದಿಂದ ಉಕ್ಕುವ ಜಲಧಾರೆ ಭೀಮಾ ನದಿಯ ಉಗಮ ಸ್ಥಾನವೆಂಬ ನಂಬಿಕೆ ಇದೆ. ಇಲ್ಲಿರುವ ಪವಿತ್ರ ಕ್ಷೇತ್ರಗಳ ಪಟ್ಟಿ ಸಾಕಷ್ಟು ದೊಡ್ಡದೇ – ಮೋಕ್ಷಕುಂಡ, ಜ್ಞಾನಕುಂಡ, ಗುಪ್ತ ಭೀಮೇಶ್ವರ, ಸಾಕ್ಷಿ ವಿನಾಯಕ ಮುಂತಾದವು. ಹತ್ತಿರದಲ್ಲಿಯೇ ಇರುವ ನಾಥ ಪಂಥದ ರುವಾರಿಗಳಾದ ಗೋರಕನಾಥರ ಆಶ್ರಮ ಯೋಗಾಭ್ಯಾಸಿಗಳನ್ನು ಆಯಸ್ಕಾಂತದಂತೆ ಸೆಳೆಯುವುದು.
ಇನ್ನೊಂದು ಪೌರಾಣಿಕ ಪ್ರಸಂಗ ಹೀಗಿದೆ – ಲಂಕಾಧಿಪತಿ ರಾವಣೇಶ್ವರನ ಸಹೋದರನಾದ ಕುಂಭಕರ್ಣನು ಇಲ್ಲಿ ವಾಸಿಸುತ್ತಿದ್ದ ಕರ್ಕಾತಿ ಎಂಬ ಹೆಣ್ಣನ್ನು ಮೋಹಿಸಿ ಮದುವೆಯಾಗುವನು. ಅವರಿಗೆ ಭೀಮ, ಎಂಬ ಮಗನು ಜನಿಸುವನು. ಕುಂಭಕರ್ಣನು ರಾಮ ರಾವಣರ ಮಧ್ಯೆ ನಡೆದ ಯುದ್ಧದಲ್ಲಿ ಹತನಾಗುವನು. ಭೀಮನು, ತನ್ನ ತಂದೆಯನ್ನು ಕೊಂದ, ದೇವತೆಗಳನ್ನು ಸಂಹರಿಸಲು, ಬ್ರಹ್ಮದೇವನನ್ನು ಕುರಿತು ಉಗ್ರವಾದ ತಪಸ್ಸನ್ನಾಚರಿಸುವನು. ಸೃಷ್ಟಿಕರ್ತನಾದ ಬ್ರಹ್ಮನು ಪ್ರತ್ಯಕ್ಷನಾದಾಗ ತಾನು ಅಜೇಯನಾಗುವಂತೆ ವರ ಬೇಡುವನು. ಹೀಗೆ ಬ್ರಹ್ಮದೇವನ ವರಪ್ರಸಾದದಿಂದ ಮಹಾಪರಾಕ್ರಮಿಯಾದ ಭೀಮನು, ದೇವಾನು ದೇವತೆಗಳನ್ನು ಪೀಡಿಸುವನು. ಇಂದ್ರನು, ತಮ್ಮ ರಕ್ಷಣೆಗಾಗಿ, ಶಿವನ ಮೊರೆ ಹೋಗುವನು.
ಒಮ್ಮೆ ಭೀಮನು, ಕಾಮರೂಪ ರಾಜ್ಯದ ದೊರೆಯಾದ ಸುದಕ್ಷಿಣನೆಂಬ ಶಿವಭಕ್ತನ ಮೇಲೆ ಆಕ್ರಮಣ ಮಾಡಿ, ಅವನನ್ನು ಕಾರಾಗೃಹದಲ್ಲಿ ಬಂಧಿಸುವನು. ಸುದಕ್ಷಿಣನು ಬಂಧೀಖಾನೆಯಲ್ಲಿಯೇ ಶಿವಲಿಂಗವೊಂದನ್ನು ಸ್ಥಾಪಿಸಿ ಪೂಜಿಸುವನು. ಭೀಮನು, ಆ ಶಿವಲಿಂಗವನ್ನು ಧ್ವಂಸ ಮಾಡಲು ಕತ್ತಿಯನ್ನು ಝಳಪಿಸಿದಾಗ, ಶಿವನು ಜ್ಯೊತಿಸ್ವರೂಪನಾಗಿ ಅವತರಿಸಿ, ಈ ಅಸುರನನ್ನು ಸಂಹರಿಸುವನು. ತದನಂತರ, ರಾಜನ ಪ್ರಾರ್ಥನೆಯ ಮೇರೆಗೆ, ಅಲ್ಲಿಯೇ ಜ್ಯೋತಿಸ್ವರೂಪದಲ್ಲಿ ನೆಲೆಯಾಗುವನು.
ಜಾನಪದರ ಲಾವಣಿಗಳಲ್ಲಿ ಬರುವ ಭೀಮಾಶಂಕರನ ಕತೆ ಬಹಳ ಸೊಗಸಾಗಿದೆ. ಕೇಳೋಣ ಬನ್ನಿ. ‘ಒಂದಾನೊಂದು ಕಾಲದಲ್ಲಿ ಭಾತಿರಾವ್ ಲಕಾಧಾರ್ ಎಂಬ ನಿರ್ಗತಿಕನಿದ್ದ.. ಅವನು ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದ. ಒಮ್ಮೆ ದಟ್ಟವಾದ ಕಾಡಿನಲ್ಲಿ, ಮರ ಕಡಿಯಲು ಹೊರಟನು. ಅಲ್ಲೊಂದು ಬೃಹದಾಕಾರವಾಗಿದ್ದ ಮರ, ಹಲವು ಪ್ರಾಣಿ ಪಕ್ಷಿಗಳಿಗೆ ಆಸರೆ ನೀಡಿತ್ತು. ಆ ಮರವನ್ನು ಕಡಿದರೆ ತನಗೆ ಸಾಕಷ್ಟು ಲಾಭವಾಗುವುದು ಎಂಬ ಲೆಕ್ಕಾಚಾರ ಹಾಕಿದವನು, ಕೊಡಲಿಯನ್ನು ಹರಿತಗೊಳಿಸಿ, ನಾಲ್ಕಾರು ಏಟು ಹಾಕಿದ. ಇದ್ದಕ್ಕಿದ್ದಂತೆ, ಆ ಮರದಿಂದ ರಕ್ತ ಸುರಿಯಲು ಆರಂಭವಾಯಿತು. ಅವನಿಗೆ ದಿಕ್ಕೇ ತೋಚಲಿಲ್ಲ. ಗಾಬರಿಯಿಂದ ಊರಿಗೆ ಓಡೋಡಿ ಬಂದು, ಜನರಿಗೆ ವಿಷಯ ತಿಳಿಸಿದ. ಎಲ್ಲರೂ ಚಕಿತರಾಗಿ, ಆ ಸ್ಥಳಕ್ಕೆ ಧಾವಿಸಿದರು. ಮರದಿಂದ ರಕ್ತ ಸುರಿಯುತ್ತಿದುದನ್ನು ಕಂಡರು. ಆಗ ಕಾಡಿನಲ್ಲಿ ಹುಲ್ಲು ಮೇಯಲು ಬಂದಿದ್ದ ಹಸುವೊಂದು, ಮರದ ಬಳಿ ನಿಂತು ಹಾಲು ಸುರಿಸಿತು. ರಕ್ತ ಸುರಿಯುವುದು ನಿಂತಿತು. ಅಲ್ಲೊಂದು ಜ್ಯೋತಿ ಸ್ವರೂಪವಾದ ಶಿವಲಿಂಗ ಕಾಣಿಸಿತು. ಎಲ್ಲರೂ ಭಕ್ತಿ ಭಾವದಿಂದ ನಮಸ್ಕರಿಸಿದರು. ಭೀಮಾ ನದೀ ತೀರದಲ್ಲಿ ಉದ್ಭವವಾದ ಲಿಂಗವನ್ನು ಭೀಮಾಶಂಕರನೆಂದು ಪೂಜಿಸಿದರು. ಅಂದಿನಿಂದ ಆ ಗ್ರಾಮಸ್ಥರು ಕೇವಲ ಒಣಗಿದ ಮರಗಳನ್ನು ಮಾತ್ರ ಕಡಿಯಬಹುದು ಎಂಬ ನಿಯಮವನ್ನು ಜಾರಿಗೆ ತಂದರಂತೆ. ಜಾನಪದರ ನಿಸರ್ಗ ಪ್ರೇಮ ಅಸೀಮವಾದದ್ದು. ಮರಗಿಡಗಳಿಗೂ ಜೀವ ಇದೆ ಎಂದು ಪ್ರಮಾಣಿಸಲು ‘ರಕ್ತ ಸುರಿಸಿದ ಮರದ’ ರೂಪಕವನ್ನು ಜನರ ಮುಂದಿಡುತ್ತಾರೆ. ‘ಗಾಯಗೊಂಡ ಮರದ ಬಳಿ ಹಾಲು ಸುರಿಸುವ ಹಸು’ – ಪ್ರಕೃತಿಯ ಸೃಷ್ಟಿಯಾದ, ಎಲ್ಲ ಜೀವಿಗಳ ಸಹಬಾಳ್ವೆಯ ಪ್ರತೀಕವಾಗಿ ನಿಲ್ಲುವುದು. ಮರ ಗಿಡಗಳಲ್ಲಿ ದೇವರಿದ್ದಾನೆ ಎಂದು ಸಾರಲು – ಅ ಮರದಲ್ಲಿ ಲಿಂಗಾಕೃತಿ ಕಾಣುವಂತೆ ಚಿತ್ರಿಸಿದ್ದಾರೆ.
‘ಭೀಮಾಶಂಕರ ಅಭಯಾರಣ್ಯ’ವು ಸುಮಾರು 131 ಕಿ.ಮೀ. ವಿಸ್ತೀರ್ಣವಿದ್ದು, ಇದು ಸಸ್ಯಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಹಲವು ಬಗೆಯ ಸಸ್ಯಗಳ ಪ್ರಭೇಧಗಳು ಇಲ್ಲಿ ಕಾಣ ಸಿಗುತ್ತವೆ. ವಿವಿಧ ಜಾತಿಯ ಪ್ರಾಣಿ ಪಕ್ಷಿಗಳೂ ಇಲ್ಲಿ ನೆಲೆಕಂಡಿವೆ. ಇಲ್ಲಿನ ವೈವಿಧ್ಯಮಯ ಜೀವಜಾಲ, ಜೀವಶಾಸ್ತ್ರಜ್ಞರಿಗೆ ರಸದೌತಣವೇ ಸರಿ. ‘ಮಲಬಾರ್ ದೈತ್ಯ ಅಳಿಲು’ ಇಲ್ಲಿ ದೊರೆತಿರುವ ವಿಶೇಷವಾದ ಪ್ರಾಣಿ. ಇಲ್ಲಿರುವ ಅಹುದೆ ಜಲಪಾತ, ಹನುಮಾನ್ ಸರೋವರ ಗಳನ್ನು ನೋಡಲು ಎರಡು ಕಣ್ಣೂ ಸಾಲದು. ಸುತ್ತಲೂ ಇರುವ – ನಾರಾಯಣಘಡ್, ಶಿವನೇರಿ ಮುಂತಾದ ಕೋಟೆ ಕೊತ್ತಲುಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಚಾರಣಿಗರ ಸ್ವರ್ಗ ಎಂದೇ ಹೆಸರು ಪಡೆದಿರುವ ಈ ಕ್ಷೇತ್ರದಲ್ಲಿ, ಹಲವು ಚಾರಣ ಮಾರ್ಗಗಳು ಕಡಿದಾದ ಪರ್ವತ ಶ್ರೇಣಿಗಳನ್ನು ತಲುಪುವುವು. ಈ ದೇಗುಲದ ಸುತ್ತಲೂ ಇರುವ ದಟ್ಟವಾದ ಕಾಡಿನಲ್ಲಿ ಹಲವು ಬಗೆಯ ಔಷಧೀಯ ಸಸ್ಯಗಳೂ ದೊರೆಯುವುವು. ಭೀಮಾನದಿಯು ಪಂಡರಾಪುರದ ಬಳಿ ಸಾಗುವಾಗ ‘ಚಂದ್ರಭಾಗಾ’ ಎಂಬ ಹೆಸರಿನಿಂದ ಕರೆಯಲ್ಪಡುವುದು.
ಶಿವರಾತ್ರಿಯಂದು, ಭೀಮಾಶಂಕರನ ದರ್ಶನಕ್ಕೆಂದು ಬರುವ ಭಕ್ತರು, ಶಿವನ ನಾಮಸ್ಮರಣೆ ಮಾಡುತ್ತಾ ಪರವಶರಾಗಿ ‘ಹರ ಹರ ಮಹಾದೇವ್’ ‘ಭಂ ಭಂ ಭೋಲೆನಾಥ್’ ಎಂದು ಕುಣಿಯುವುದನ್ನು ನೋಡುವುದೇ ಸೊಗಸು. ಇನ್ನೇಕೆ ತಡ, ಬನ್ನಿ ಭೀಮಾಶಂಕರನ ದರ್ಶನ ಮಾಡಿ ಪುನೀತರಾಗೋಣ.
ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 5 ) ಇಲ್ಲಿದೆ: http://surahonne.com/?p=34603
-ಡಾ.ಗಾಯತ್ರಿದೇವಿ ಸಜ್ಜನ್
ಚೆನ್ನಾಗಿದೆ. ಪ್ರಕೃತಿಯ ವಿವರಗಳಂತೂ ಮನಸಿಗೆ ತುಂಬಾ ಮುದ ನೀಡುತ್ತವೆ.
ಭೀಮಾಶಂಕರನ ವಿವರಣಾತ್ಮಕ ಲೇಖನ ಬಹಳ ಆಪ್ತವಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ.ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೀರಾ ಅದೂ ಒಂದು ಕಲೆಯೇ..
ವಂದನೆಗಳು
ನಾನು ಇಲ್ಲಿಗೆ ಹೋಗಿ ಸುಮಾರು ವರ್ಷಗಳೇ ಕಳೆದಿವೆ. ಮತ್ತೆ ನೆನಪಿಗೆ ಬಂತು. ವಿವರಣೆ ಬಹಳ ಚೆನ್ನಾಗಿದೆ. ಧನ್ಯವಾದಗಳು.
ವಿಶೇಷವಾದ ಭೀಮಾಶಂಕರ ಜ್ಯೋತಿರ್ಲಿಂಗದ ಬಗೆಗಿನ ರೋಚಕವಾದ ವಿವಿಧ ಕಥೆಗಳು, ಪ್ರಕೃತಿ ಮಡಿಲಿನಲ್ಲಿ ಧ್ಯಾನಾಸಕ್ತನಾದ ಭೋಲೇನಾಥ ಇವೆಲ್ಲವೂ ಬಹಳ ಕುತೂಹಲಕಾರಿಯಾಗಿವೆ. ಸೊಗಸಾದ ನಿರೂಪಣೆಯು ಒಮ್ಮೆಯಾದರೂ ಈ ದಿವ್ಯ ದೇಗುಲದ ದರುಶನಕ್ಕೆ ಮನಮಾಡುವಂತೆ ಪ್ರೇರೇಪಿಸುತ್ತದೆ.
ಪೌರಾಣಿಕ, ಚಾರಿತ್ರಿಕ ಹಿನ್ನೆಲೆಯೊಂದಿಗೆ ಜಾನಪದ ಸೊಗಡೂ ಸೇರಿಕೊಂಡು, ಸುಂದರ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಭೀಮಾಶಂಕರನ ವರ್ಣನೆಯನ್ನು ಓದಿ ಮನ ತಣಿಯಿತು ಧನ್ಯವಾದಗಳು ತಮಗೆ
ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಬರೆಯಲು ಸ್ಫೂರ್ತಿ ವಂದನೆಗಳು