ಪೌರಾಣಿಕ ಕತೆ

ಲೋಕದಲ್ಲಿ ಹೆಸರುವಾಸಿಯಾದ ಸಾಕು ತಂದೆ…

Share Button

‘ಅನಾಥೋ  ದೈವ ರಕ್ಷಕಃ’  ದಿಕ್ಕಿಲ್ಲದವರನ್ನು, ತನ್ನವರು ಯಾರೆಂದು ತಿಳಿಯದವರನ್ನು, ತನ್ನವರಿಂದಲೇ  ಪೀಡನೆಗೊಳಗಾದವರನ್ನು ಕಷ್ಟ ಇಲ್ಲವೇ ಅಪಾಯದ ಸ್ಥಿತಿಯಲ್ಲಿದ್ದಾಗ  ಒಂದಿಲ್ಲೊಂದು ವಿಧದಲ್ಲಿ ದೇವರು ರಕ್ಷಿಸುತ್ತಾನೆ. ಇದು ಆಸ್ತಿಕರ, ಅನುಭವಿಗಳ ವಿಶ್ವಾಸ. ಕೆಲವೊಮ್ಮೆ ಇಂತಹ ರಕ್ಷಣೆಯು ಯಾವುದೋ ಒಂದು ಮಹತ್ಕಾರ್ಯಕ್ಕೋ ಲೋಕಕಲ್ಯಾಣಕ್ಕೋ ದೈವ ಸಂಕಲ್ಪವಾಗಿ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಪುರಾಣದೊಳಗೆ ಇಂತಹ ಉದಾಹರಣೆಗಳನ್ನು ಬೇಕಾದಷ್ಟು ಕಾಣುತ್ತೇವೆ. ಈ ನಿಟ್ಟಿನಲ್ಲಿ ಕುಂತಿಯ ಮಗ ಕರ್ಣ, ಉತ್ತಾನಪಾದನ ಮಗ ಧ್ರುವ, ಜನಕನಿಗೆ ದೊರಕಿದ ಮಗಳು ಸೀತೆ, ವಿಶ್ವಾಮಿತ್ರ-ಮೇನಕೆಯರ ಮಗಳು ಶಕುಂತಲೆ ಹೀಗೆ ಪಟ್ಟಿ ಬೆಳೆಯುತ್ತದೆ. ಯಾವುದೋ ಕಾರಣಕ್ಕೆ ಹೆತ್ತವರು ಮಗುವನ್ನು ತೊರೆದು ಹೋದರೆ, ಆ ಶಿಶುವಿಗೆ ಭವಿಷ್ಯವಿದ್ದರೆ, ಅದರಿಂದ ಲೋಕೋಪಯೋಗಿ ಕಾರ್ಯ ಆಗಬೇಕೆಂದಾದರೆ ಪ್ರತ್ಯಕ್ಷ ಕೈಯೊಂದು ಅಲ್ಲಿ ಬಂದು ಸೇರುವಂತೆ ಸೃಷ್ಟಿಯಾಗುತ್ತದೆ.ಇದು ಇಂದಿನ ಕಾಲಕ್ಕೂ ಅನ್ವಯಿಸುತ್ತದೆ ಎಂಬುದು ಸತ್ಯ.

ಲೋಕದಲ್ಲಿ ತಮ್ಮ ಮಕ್ಕಳನ್ನು ಅಕ್ಕರೆಯಿಂದ, ಮುಚ್ಚಟೆಯಿಂದ ಸಲಹುವುದು ವಿಶೇಷವಲ್ಲ. ಅನ್ಯರ ಮಕ್ಕಳಿಗೆ ಅಥವಾ ಅನಾಥ ಮಕ್ಕಳಿಗೆ ತಾಯಿ -ತಂದೆಯರಾಗುವುದು ಹೆಚ್ಚುಗಾರಿಕೆ, ಕೆಲವು ಸಂದರ್ಭದಲ್ಲಿ ತಾಯಿ ಮತ್ತು ತಂದೆಯರ ಇಬ್ಬರ ಪಾತ್ರವನ್ನೂ ಒಬ್ಬರೇ ನಿರ್ವಹಿಸಬೇಕಾಗುತ್ತದೆ. ಅದರಲ್ಲೂ ತಾಯಿಯ ಸ್ಥಾನವನ್ನೂ ಸಾಕು ತಂದೆಯೇ ಪೂರೈಸುವುದು ನಿಸ್ವಾರ್ಥ ಸೇವೆಯೂ ಕಠಿಣ ಕೆಲಸವೂ ಆಗಿದೆ. ಈ ನಿಟ್ಟಿನಲ್ಲಿ ಕಣ್ವ ಮಹರ್ಷಿಗಳು ನೆನಪಿಗೆ ಬರುತ್ತಾರೆ. ಲೋಕದಲ್ಲಿ ಸಾಕು ತಂದೆ ಎಂದಾಗ ಕಣ್ವ ಮಹರ್ಷಿಗಳ ನೆನಪಾಗಲೇ ಬೇಕು. ಅಂತಹ ಪ್ರಾಮಾಣಿಕವಾದ ಪವಿತ್ರ ಕೆಲಸ ನಿರ್ವಹಿಸಿದವರು ಕಣ್ವರು.

ಕಣ್ವನು ಕಶ್ಯಪಗೋತ್ರದ ಒಬ್ಬ ಋಷಿ. ಇವನ ತಂದೆ ಮೇಧಾತಿಥಿ, ಕಣ್ವನ ಆಶ್ರಮವು ಅಯೋಧ್ಯೆಯ ಪಶ್ಚಿಮದಲ್ಲಿರುವ ಲಕ್ನೋವಿನ ಬಿದನೂರಿನ ಅರಣ್ಯ ಪ್ರದೇಶದಲ್ಲಿತ್ತೆಂದು ತಿಳಿದು ಬರುತ್ತದೆ. ಒಂದು ದಿನ ಕಣ್ವನು ಸ್ನಾನ ಮಾಡಲೆಂದು ‘ಮಾಲಿನೀ’ ನದಿಗೆ ತೆರಳಿದಾಗ ತೀರಾ ಎಳೇ ಶಿಶುವು ಅಳುವುದು ಕೇಳಿಸಿತು. ಹುಡುಕುತ್ತಾ ಸಾಗಿದಾಗ ಒಂದೆಡೆ ತರಗೆಲೆಗಳ ಮಧ್ಯೆ ಮಲಗಿರುವ ಹೆಣ್ಣು ಶಿಶು ಕಂಡಿತು. ಅದರ ಸುತ್ತಲೂ ಹಲವು ಹಕ್ಕಿಗಳು ರೆಕ್ಕೆ ಬಿಚ್ಚಿ ನೆರಳನೊದಗಿಸುತ್ತಾ ರಕ್ಷಣೆ ಮಾಡುತ್ತಿದ್ದವು! ಅವು ಕಿಲಕಿಲನೆ ಶಬ್ದ ಮಾಡುತ್ತಾ ಶಿಶುವಿನ ಜನ್ಮ ವೃತಾಂತವನ್ನು ತಿಳಿಸಿದವು! ಕಣ್ವನಿಗೆ ಪಕ್ಷಿಗಳ ಭಾಷೆಯು ತಿಳಿದಿತ್ತು. ಈ ಹೆಣ್ಣು ಶಿಶುವು ವಿಶ್ವಾಮಿತ್ರ-ಮೇನಕೆಯರ ಪುತ್ರಿಯೆಂದು ಕಣ್ವರ ದಿವ್ಯದೃಷ್ಟಿಗೆ ತಿಳಿಯಿತಲ್ಲದೆ ಅವರಿಬ್ಬರು ಅಂದರೆ ಒಬ್ಬ ಶ್ರೇಷ್ಠ ಋಷಿ ಹಾಗೂ ಅಪ್ಪರೆ ಸ್ತ್ರೀ ಪರಸ್ಪರ ಸೇರಲು ಸಕಾರಣವೂ ಹೊಳೆಯಿತು.

PC:Internet

ವಸಿಷ್ಠರ ದ್ವೇಷಿಯಾದ ವಿಶ್ವಾಮಿತ್ರ, ವಸಿಷ್ಠರನ್ನು ಮೀರಿಸಲೋಸುಗ ಘೋರ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿನ ಕಠಿಣತೆ ಎಷ್ಟಿತ್ತೆಂದರೆ ದೇವೇಂದ್ರನನ್ನು ದಹಿಸಲು ತೊಡಗುತ್ತದೆ. ಇದಕ್ಕಾಗಿ ವಿಶ್ವಾಮಿತ್ರನ ತಪಸ್ಸು ಭಂಗಗೊಳಿಸಲೇಬೇಕೆಂದು ದೇವೇಂದ್ರನು ಉಪಾಯ ಹೂಡಿ ಋಷಿ ತಪಸ್ಸು ಮಾಡುವಲ್ಲಿಗೆ ಮೇನಕೆಯೆಂಬ ಅಪ್ಸರೆ ಸ್ತ್ರೀಯನ್ನು ಕಳಿಸಿ ಆತನು ಮೋಹಿಸುವಂತೆ ಮಾಡಬೇಕೆಂದು ನೇಮಿಸುತ್ತಾನೆ. ತನ್ನ ಕಾರ್ಯ ಕೈಗೂಡಲು ಆಕೆ ವಾಯು ಮತ್ತು ಮನ್ಮಥರ ಸಹಾಯವನ್ನೂ ಪಡೆಯುತ್ತಾಳೆ. ವಿಶ್ವಾಮಿತ್ರ ತಪಸ್ಸು ಮಾಡುವಲ್ಲಿ ಮೇನಕೆ ಸಂಚರಿಸುತ್ತಾಳೆ. ವಾಯು ಬಂದು ಅವರ ವಸ್ತ್ರವನ್ನು ಹಾರುವಂತೆಯೂ ಮನ್ಮಥನು ಬಂದು ವಿಶ್ವಾಮಿತ್ರನಲ್ಲಿ ಸೇರಿ ಮೇನಕೆಯನ್ನು ಮೋಹಿಸುವಂತೆಯೂ ಮಾಡುತ್ತಾನೆ. ಕಡೆಗೆ ಅವರಿಬ್ಬರು ಒಂದಾಗಿ ಒಂದು ಹೆಣ್ಣು ಕೂಸು ಜನಿಸುತ್ತದೆ.ಮೇನಕೆಯು ತಾನು ಬಂದ ಕೆಲಸವಾಯಿತೆಂದು ಶಿಶುವನ್ನು ವಿಶ್ವಾಮಿತ್ರನಿಗೊಪ್ಪಿಸಿ ಹೊರಟು ಹೋಗುತ್ತಾಳೆ. ವಿಶ್ವಾಮಿತ್ರನಿಗೂ ತನ್ನ ತಪೋಶಕ್ತಿ ನಷ್ಟವಾಯಿತೆಂದು ಪಶ್ಚಾತ್ತಾಪವುಂಟಾಗಿ ಆತನೂ ಶಿಶುವನ್ನು ಬಿಟ್ಟು ತೆರಳುತ್ತಾನೆ. ಪರಿಣಾಮವಾಗಿ ಶಿಶು ಅನಾಥವಾಗುತ್ತದೆ. ಆ ಹೆಣ್ಣು ಶಿಶುವನ್ನು ಕಣ್ವ ಸಾಕಿ ಅವಳಿಂದ ಮುಂದೆ ಭರತಖಂಡವನ್ನು ಬೆಳಗಿಸಬಲ್ಲಂತಹ ಭರತ ಚಕ್ರವರ್ತಿ ಜನಿಸುತ್ತಾನೆಂದು ಒಂದಕ್ಕೊಂದು ಸಂಬಂಧಿತ ಸಕಾರಣದ ಸರಪಳಿ ದೈವ ಸಂಕಲ್ಪ!!

ಕಣ್ವನು ಶಿಶುವನ್ನು ತನ್ನ ಆಶ್ರಮಕ್ಕೆ ತಂದು ಮಗುವಿಗೆ ಶಕುಂತಲಾ ಎಂದು ಹೆಸರಿಟ್ಟು (ಶಕುಂತ-ಪಕ್ಷಿ, ಲಾ-ಪೋಷಿಸಿದವು) ಸಾಕುತ್ತಾನೆ. ತನ್ನ ಸಾಕುಮಗಳಿಗೆ ಒಬ್ಬಳಿಗೇ ಬೇಜಾರಾಗಬಾರದೆಂದು ಪ್ರಿಯಂವದ ಎಂದು   ಇಬ್ಬರು ಜೊತೆಗಾತಿಯರಾದ ಅನಸೂಯೆ ಹಾಗೂ ಪ್ರಯಂವದ ಎಂಬ ಇಬ್ಬರನ್ನು ನೇಮಿಸಿ ಬಹಳ ಪ್ರೀತಿಯಿಂದ ಬೆಳೆಸುತ್ತಾನೆ. ಹೀಗಿರುತ್ತಾ ಶಕುಂಕಳೆ ಹದಿಹರಯಕ್ಕೆ ಬಂದಾಗ ಕಣ್ವನಿಲ್ಲದ ಒಂದು ದಿನ ಚಂದ್ರವಂಶದ ‘ದುಷ್ಯಂತ’ ಮಹಾರಾಜ ಆ ದಾರಿಯಾಗಿ ಬಂದ. ಕಣ್ವನಿಲ್ಲದ ವೇಳೆಯಾದ್ದರಿಂದ ಶಕುಂತಲೆಯೇ ಆತನನ್ನು ಸ್ವಾಗತಿಸಿದಳು. ಅವಳ ಅಂದ-ಚೆಂದವನ್ನು ನೋಡಿದ ದುಷ್ಯಂತ ಪ್ರಥಮ ಭೇಟಿಯಲ್ಲಿಯೇ ಮೋಹಿತನಾದ. ಅವರು ಗಾಂಧರ್ವ ರೀತಿಯಿಂದ ವಿವಾಹವಾದರು.

ಸತಿಯೊಂದಿಗೆ ಒಂದೆರಡು ದಿನಗಳಿದ್ದು ಜರೂರು ರಾಜಕಾರ್ಯದ ನಿಮಿತ್ತ ಹಿಂತಿರುಗುತ್ತಾನೆ ದುಷ್ಯಂತ, ಯಾವುದೋ ಕಾರ್ಯನಿಮಿತ್ತ ದೂರ ಹೋಗಿದ್ದ ಕಣ್ವರು ಬಂದಾಗ ಸಾಕು ಮಗಳು ಶಕುಂತಳೆ ದುಷ್ಯಂತ ಮಹಾರಾಜನನ್ನು ವಿವಾಹವಾಗಿದ್ದೂ ಅವನು ರಾಜಧಾನಿಗೆ ಮರಳಿದ್ದೂ ತಿಳಿಯುತ್ತದೆಯಾದರೂ ಕಣ್ವರು ಮನಃಪೂರ್ತಿಯಾಗಿ ಮನ್ನಿಸುವುದು ಕಣ್ವರ ವಿಶಾಲ ಮನೋಭಾವವನ್ನೂ ತಾಳ್ಮೆಯನ್ನೂ ಸೂಚಿಸುತ್ತದೆ.

ಒಂದೆರಡು ದಿನಗಳಲ್ಲೇ ಹಿಂತಿರುಗಿ ಬರುವೆನೆಂದೂ ಕಣ್ವರ ಉಪಸ್ಥಿತಿಯಲ್ಲಿಯೇ ‘ನಿನ್ನನ್ನು ರಾಜಧಾನಿಗೆ ವೈಭವದಿಂದ ಕರೆಸಿಕೊಳ್ಳುವನೆಂದೂ’ ಹೇಳಿ ಹೋಗಿದ್ದ ದುಷ್ಯಂತ ಮಹಾರಾಜ ಬರಲೇ ಇಲ್ಲ. ಇತ್ತ ಶಕುಂತಳೆ ಗರ್ಭಿಣಿಯಾಗುತ್ತಾಳೆ. ತಾನಿಲ್ಲದಿರುವಾಗ ಮದುವೆಯಾದ ಮಗಳು, ಅಳಿಯ ಬಾರದೆ ಹೋದರು ಅವಳನ್ನು ಈ ಸ್ಥಿತಿಯಲ್ಲಿ ಗಂಡನ ಮನೆ ಸೇರಿಸುವುದು ಕಣ್ವನ ಕರ್ತವ್ಯ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಅಂತೆಯೇ ಸಾಕುಮಗಳಾದರೂ ಶಕುಂತಳೆ ಗಂಡನ ಮನೆಗೆ ಹೊರಟು ನಿಂತಾಗ ಕಣ್ವನಿಗಾದ ನೋವು ಅಷ್ಟಿಷ್ಟಲ್ಲ. ಕಣ್ವನ ಕಣ್ಣಿನಿಂದ ಕಂಬನಿ ಧಾರೆಯಾಗಿ ಹರಿಯುತ್ತದೆ. ಮಗಳನ್ನು ಗಂಡನಿಗೆ ಕೊಡಲೂ ಬಾರದೆ, ಕೊಡದೆ ಇರಲೂ ಆಗದೆ ಕಣ್ವನು ಚಡಪಡಿಸುವ ರೀತಿ ಮನಃ ಕರಗುವಂತಹುದು. ಈ ಮಧ್ಯೆ ಶಕುಂತಲೆಗೆ ದೂರ್ವಾಸರ ಶಾಪ, ದುಷ್ಯಂತನ ತಿರಸ್ಕಾರ ಇವೆಲ್ಲವೂ ಕಣ್ವರನ್ನು ಕಂಗಾಲುಗೊಳಿಸುತ್ತದೆ. ಮುಂದೆ ಶಕುಂತಳೆಗೆ ಸರ್ವದಮನನ ಜನನ. ತಾಯಿ-ಮಗುವನ್ನು ಶಿಷ್ಯರೊಂದಿಗೆ ರಾಜಧಾನಿಗೆ ಕಳುಹಿಸುವುದು. ಅವನು ಸ್ವೀಕರಿಸಿದೆ (ತನ್ನದಲ್ಲವೆಂದು) ಇರುವಾಗ ತಾನೇ ಸ್ವತಃ ಒಪ್ಪಿಸುವ ಪರಿ! ಎಲ್ಲವೂ ಕಣ್ವನ ಬಗ್ಗೆ ಹೆಮ್ಮೆ ಮೂಡಿಸುವ ದೃಷ್ಟಾಂತಗಳು.

-ವಿಜಯಾಸುಬ್ರಹ್ಮಣ್ಯ, ಕುಂಬಳೆ

8 Comments on “ಲೋಕದಲ್ಲಿ ಹೆಸರುವಾಸಿಯಾದ ಸಾಕು ತಂದೆ…

  1. ಪೌರಾಣಿಕ ಕಥೆಗಳನ್ನು ಅತ್ಯಂತ ಸರಳ ಹಾಗೂ ಸುಂದರ ವಾಗಿ ಕಟ್ಟಿಕೊಡುತ್ತಾ ನಮ್ಮನ್ನು ಆಕಾಲದ ಕಥೆಗಳನ್ನು ಮೆಲುಕು ಹಾಕುವಂತೆ ಮಾಡುವ ನಿಮಗೆ ಧನ್ಯವಾದಗಳು ಮೇಡಂ

  2. ಗೊತ್ತಿರುವ ಕಥೆಯಾದರೂ, ಕಣ್ವ, ಶಕುಂತಳೆ, ದುಶ್ಯಂತರ ಕಥೆಯು ಮಗದೊಮ್ಮೆ ಮನಮುಟ್ಟಿತು… ಇಂತಹ ಪೌರಾಣಿಕ ಕಥೆಗಳು ಸದಾ ನಿತ್ಯನೂತನ! ಧನ್ಯವಾದಗಳು ವಿಜಯಕ್ಕ.

  3. ಸಾಕು ತಂದೆ ಮಹರ್ಷಿ ಕಣ್ವರ ಅಂತಃಕರಣದ ಅನಾವರಣ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

Leave a Reply to Padmini Hegade Cancel reply

 Click this button or press Ctrl+G to toggle between Kannada and English

Your email address will not be published. Required fields are marked *