ಅವಿಸ್ಮರಣೀಯ ಅಮೆರಿಕ-ಎಳೆ 3
ಹಾಂಗ್ ಕಾಂಗ್ ನತ್ತ…
ನನ್ನ ಗಾಬರಿಯ ಮಧ್ಯದಲ್ಲೇ, ಮುಂದಿನ ತಪಾಸಣಾ ಹಂತದಲ್ಲಿ, ಕೈಚೀಲದಲ್ಲಿದ್ದ ನೀರಿನ ಬಾಟಲಿ ಕಸದ ಬುಟ್ಟಿ ಸೇರಿತು! ಯಾವುದೇ ದ್ರಾವಣವನ್ನು ಕೈಚೀಲದಲ್ಲಿ ಒಯ್ಯಬಾರದೆಂಬ ವಿಷಯವನ್ನು ಮಕ್ಕಳು ತಲೆಗೆ ತುಂಬಿದ್ದರೂ, ಬಾಟಲಿಯಲ್ಲಿದ್ದ ನೀರು ಖಾಲಿ ಮಾಡಲು ಮರೆತೇ ಹೋಗಿತ್ತು! ಮುಂದಿನ ಹಂತದಲ್ಲಿ ದಿರುಸುಗಳ ತಪಾಸಣೆ..!. ಕೈಯಲ್ಲಿರುವ ವಾಚು, ಬಳೆ, ಕಾಲ ಚಪ್ಪಲಿ ಸಹಿತ ತೆಗೆದಿರಿಸಿ, ಮಹಿಳಾ ಸಿಬ್ಬಂದಿ ನಮ್ಮ ಶರೀರವನ್ನು ಮತ್ತು ಅಂಗೈಯನ್ನು ಬೇರೆ ಬೇರೆಯಾಗಿ ಯಂತ್ರದಲ್ಲಿ ಪರೀಕ್ಷಿಸಿದಾಗ ಯಾವುದೋ ಆಸ್ಪತ್ರೆಗೆ ಬಂದಂತೆನಿಸಿ ಇರುಸು ಮುರುಸಾದರೂ ಸಹಿಸಲೇ ಬೇಕಿತ್ತಲ್ಲ. ಎಲ್ಲಾ ಸುಲಲಿತವಾಗಿ ಮುಗಿದು, ನಾವು ಮುಂದುವರಿಯುವ ಬಗೆಗೆ ಧ್ವನಿವರ್ಧಕದ ಮೂಲಕ ಎಲ್ಲಾ ಮಾಹಿತಿಗಳನ್ನೂ ಇಂಗ್ಲಿಷಲ್ಲಿ ಬಿತ್ತರಿಸುತ್ತಿದ್ದರೂ ನನಗೆ ಆ ಗದ್ದಲದಲ್ಲಿ ಏನೆಂದು ಗೊತ್ತಾಗುತ್ತಲೇ ಇರಲಿಲ್ಲ.. ಎಲ್ಲಾ ಆಯೋಮಯ! ಮುಂದಕ್ಕೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬುಗೊಳ್ಳುವಂತಾಯ್ತು. ಆದರೂ, ಎಲ್ಲರೂ ಎಲ್ಲಿ ಹೋಗುವರೆಂದು ಗಮನಿಸುತ್ತಾ, ಅವರ ಹಿಂದೆಯೇ ಓಡುತ್ತಾ, ಅಗತ್ಯವಾದ ಗೇಟ್ ಪಾಸ್, ಪಾಸ್ ಪೋರ್ಟ್ ಗಳನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಅಲ್ಲಲ್ಲಿ ಹಾಕಿದ ಸೂಚನಾಫಲಕಗಳನ್ನು ಗಮನಿಸುತ್ತಾ ಹೋಗುತ್ತಿರುವಾಗ ಅಭದ್ರತೆ ಕಾಡಿದ್ದಂತೂ ನಿಜ. ನೀರಿನಲ್ಲಿ ಇಳಿದಾಗಿತ್ತು.ಇನ್ನು ಈಜಲೇ ಬೇಕಲ್ಲ!ಒಂದೆರಡು ಮಹಡಿಗಳನ್ನು ಯಾಂತ್ರೀಕೃತ ಮೆಟ್ಟಿಲುಗಳಲ್ಲಿ (Escalator) ಏರುತ್ತಾ, ಇಳಿಯುತ್ತಾ ಸಾಗುವುದೇ ನನಗೆ ದೊಡ್ಡ ಪರೀಕ್ಷೆಯಾಯ್ತು! ಅಗಾಧ ಎತ್ತರಕ್ಕಿರುವ ಮೆಟ್ಟಲುಗಳನ್ನು ಭಾರದ ಬ್ಯಾಗುಗಳೊಂದಿಗೆ ಏರುವುದೇನೋ ಕಷ್ಟವೇ. ಆದರೆ ಚಲಿಸುತ್ತಿರುವ ಮೆಟ್ಟಲನ್ನು ಏರುವುದು ಇನ್ನೂ ಕಷ್ಟವಾಯ್ತು. ಸರಿಯಾದ ಸಮಯಕ್ಕೆ ಕಾಲು ಇರಿಸದಿದ್ದರೆ ನಾವು ಮುಗ್ಗರಿಸುವುದಂತೂ ಖಂಡಿತ. ಎಲ್ಲರೂ ಸರಾಗವಾಗಿ ಹೋಗುವುದನ್ನು ನೋಡಿ ಹೊಟ್ಟೆಯುರಿದರೂ, ಹೇಗೋ ಸರ್ಕಸ್ ಮಾಡಿ ನಮ್ಮ ಗೇಟ್ ಬಳಿ ಬಂದಾಗ ಬೆವತು ಬಿಟ್ಟಿದ್ದರೂ ಸ್ವಲ್ಪ ನೆಮ್ಮದಿಯಾಯಿತು.
ಅಂತೂ ಕೊನೆಯ ಹಂತವಾಗಿ, ವಿಮಾನ ನಿಂತಿರುವ ದ್ವಾರದ ಬಳಿ ತೆರಳಿ ಎಲ್ಲರೊಡನೆ ಕಾಯುತ್ತಾ ಕುಳಿತೆ. ಅಲ್ಲಿಯ ಶುಚಿ, ಅಚ್ಚುಕಟ್ಟುತನ ಮನಸ್ಸಿಗೇನೋ ಖುಷಿ ತಂದಿತ್ತು.. ಆದರೆ ಜೊತೆಗೇ ಏನೋ ಆತಂಕ. ಪಕ್ಕದಲ್ಲಿ ಇರುವವರೊಡನೆ ವಿಚಾರಿಸಿ, ನಾವು ಕುಳಿತಿರುವ ಸ್ಥಳ ಸರಿಯಾಗಿರುವ ಬಗ್ಗೆ ಖಾತರಿ ಪಡಿಸಿಕೊಂಡದ್ದಾಯಿತು. ವಿಮಾನವೇರಲು ಇನ್ನೂ ಒಂದು ತಾಸು ಸಮಯವಿತ್ತು. ಅದಾಗಲೇ ಗಾಢ ನಿದ್ರೆಯ ಸಮಯ..ರಾತ್ರಿ ಎರಡು ಗಂಟೆ. ಕಣ್ಣು ಧಗಧಗಿಸುತ್ತಿದ್ದರೂ ನಿದ್ರಿಸುವ ಹಾಗಿಲ್ಲವಲ್ಲ.. ಜೊತೆಗೆ ಆ ನಿದ್ರೆಯೂ ಅದೆಲ್ಲೋ ಓಡಿಹೋಗಿತ್ತು ಬಿಡಿ. ಹಾಗೆಯೇ, ಕನ್ನಡದವರು ಯಾರಾದರೂ ಇರುವರೇನೋ ಎಂದು ಆಚೀಚೆ ನಿರುಕಿಸಿದೆ. ಅಲ್ಲೇ ಬಳಿಯಲ್ಲಿ ಕನ್ನಡದ ಮಾತು ಕೇಳಿಸಿದಾಗ ಸ್ವರ್ಗಕ್ಕೆ ಮೂರೇ ಗೇಣು! ಬದುಕಿದೆಯಾ ಬಡಜೀವವೇ ಎಂದುಕೊಂಡು ಅವರ ಬಳಿ ಹೋಗಿ ಪರಿಚಯ ಮಾಡಿಕೊಂಡೆ. ಇಳಿವಯಸ್ಸಿನ ಹುಬ್ಬಳ್ಳಿಯ ದಂಪತಿಗಳು ಅದೇ ವಿಮಾನದಲ್ಲಿ ಅಮೆರಿಕಕ್ಕೆ ಹೋಗಲಿರುವರೆಂದು ತಿಳಿದು ನಿರಾಳವಾಯ್ತು. ಸಮಯಕ್ಕೆ ಸರಿಯಾಗಿ, ಮೊದಲೇ ತಯಾರಾಗಿ ನಿಂತಿದ್ದ ವಿಮಾನವೇರಿ ಕಿಟಿಕಿ ಪಕ್ಕ ಕಾದಿರಿಸಿದ್ದ ಸೀಟಿನಲ್ಲಿ ಕುಳಿತಾಗ ಒಮ್ಮೆಗೆ ಹಾಯೆನಿಸಿದರೂ ಎದೆ ಡವಗುಟ್ಟುತ್ತಿತ್ತು. ಜೊತೆಗೇ, ಮೊದಲ ಬಾರಿಗೆ ವಿಮಾನ ಪ್ರಯಾಣಿಸಿದಾಗಿನ ಘಟನೆ ನೆನಪಾಗಿ ನಗುವೂ ಬಂತು.
ಆ ದಿನ, ನಾವು ದಂಪತಿಗಳ ಜೀವನದ ಮೊತ್ತಮೊದಲ ವಿಮಾನ ಪ್ರಯಾಣವಾಗಿತ್ತು. ವಿಮಾನದಲ್ಲಿ ಕುಳಿತ ಕೂಡಲೇ ಸೀಟು ಬೆಲ್ಟ್ ಹಾಕಬೇಕೆಂದು ಮಗಳು ಹೇಳಿದ್ದರಿಂದ, ಬೆಲ್ಟನ್ನು ಹುಡುಕಲೇ ಸ್ವಲ್ಪ ತಡಕಾಡಬೇಕಾಯ್ತು. ಹೇಗೋ ಹುಡುಕಿ, ಅದನ್ನು ಹಾಗೂ ಹೀಗೂ ತಿರುಗಿಸಿ ನೋಡಿದರೆ, ಅದನ್ನು ಸಿಕ್ಕಿಸುವುದು ಹೇಗೆಂದು ತಿಳಿಯಲಿಲ್ಲ. ಅಕ್ಕ ಪಕ್ಕದಲ್ಲಿ ಮೆಲ್ಲನೆ ಕಣ್ಣು ಹಾಯಿಸಿದಾಗ ಅವರೆಲ್ಲ ಆರಾಮವಾಗಿ ಸೀಟು ಬೆಲ್ಟ್ ಬಿಗಿದು ಕೂತಿದ್ದರು. ಅಂತೂ ಹೇಗೋ ಬೆಲ್ಟ್ ಹಾಕಿದ್ದಾಯ್ತು..!. ಹಾಂ… ಇನ್ನು ತೆಗೆಯುವುದು ಹೇಗೆಂದು ನೋಡೋಣವೆಂದರೆ ಅದು ಜಪ್ಪಯ್ಯಾ ಎಂದರೂ ಬರಲೇ ಇಲ್ಲ!. ನಮ್ಮ ಈ ಕಿತಾಪತಿಯನ್ನು ಯಾರೂ ಗಮನಿಸಲಿಲ್ಲವಲ್ಲ ಎಂದುಕೊಂಡು ಆಚೆ ಈಚೆ ನೋಡಿ ಏನೂ ಆಗದಂತೆ ಗಂಭೀರವಾಗಿ ಕುಳಿತೆವು ನಾವಿಬ್ಬರು, ಮಿಸ್ಟರ್ ಬೀನ್ ತರಹ! (ನಾವು ಅವನ ಫೇನ್ ಗಳು ಬೇರೆ..!.) ನಮ್ಮ ಪಕ್ಕದಲ್ಲಿದ್ದವರು ನಮ್ಮನ್ನೊಮ್ಮೆ ನೋಡಿ ಸುಮ್ಮನಿದ್ದರು. ಮನಸ್ಸಲ್ಲೇ ನಕ್ಕಿರಬಹುದೆಂದು ನಮ್ಮ ಊಹೆ. ಇಷ್ಟೆಲ್ಲಾ ಆದ ಬಳಿಕ ಬಂದಳು ನೋಡಿ ಗಗನಸಖಿ.. ಮುಂಭಾಗದಲ್ಲಿ ನಿಂತು, ಒಂದು ಬೆಲ್ಟ್ ಕೈಯಲ್ಲಿ ಹಿಡಿದು, ಹೇಗೆ ಹಾಕುವುದು, ತೆಗೆಯುವುದೆಂದು ಚೆನ್ನಾಗಿ ತೋರಿಸಿಕೊಟ್ಟಳು. ಈಗ ಬೆಪ್ಪಾಗುವ ಸರದಿ ನಮ್ಮದು. ಇಷ್ಟು ಸುಲಭದ ಕೆಲಸವನ್ನು ಮಾಡಲು ಎಷ್ಟೆಲ್ಲಾ ಸರ್ಕಸ್ ಮಾಡ್ತಾ ಇದ್ದೆವಲ್ಲಾ! ಎಲ್ಲಾ ತಿಳಿದ ಬಳಿಕ ನಾವೇ ಜಾಣರು ಅಲ್ವಾ..? ಈಗಂತೂ ಯಾವ ಯೋಚನೆಯೂ ಇಲ್ಲದೆ ಬೆಲ್ಟ್ ಬಿಗಿದು ಆರಾಮವಾಗಿ ಕೂಳಿತುಕೊಂಡೆ ಎನ್ನಿ! ನಾನು ಪರಿಚಯ ಮಾಡಿಕೊಂಡಿದ್ದ ದಂಪತಿಗಳು ಕಣ್ಣಳತೆಯ ದೂರದಲ್ಲಿ ಎಲ್ಲೂ ಕಾಣಲಿಲ್ಲವಾದರೂ ಭಯಪಡುವ ಅಗತ್ಯವಿಲ್ಲವೆಂದು ನನಗೆ ನಾನೇ ಸಮಾಧಾನಿಸಿಕೊಂಡೆ. ನಾನು ಪ್ರಯಾಣಿಸುತ್ತಿದ್ದ ವಿಮಾನವು ಸುಮಾರು 350 ಮಂದಿ ಹಿಡಿಸಬಲ್ಲ ಚೀನಾದ Cathay Pacific ಎಂಬ ಏರ್ ಲೈನ್ಸ್ ದಾಗಿತ್ತು. ಮುಂದಕ್ಕೆ, ಹಾಂಗ್ ಕಾಂಗ್ ನಲ್ಲಿರುವ ಅಮೆರಿಕ ಪ್ರಯಾಣಿಕರನ್ನು ಸೇರಿಸಿಕೊಂಡು ಅವರದೇ ಬೇರೊಂದು ವಿಮಾನದಲ್ಲಿ ಪಯಣಿಸುವುದಿತ್ತು.
ಸ್ವಲ್ಪ ಸಮಯದಲ್ಲಿ ಶುಭ್ರ ಬಿಳಿಯ, ಬಿಸಿಯಾದ, ನಸುಗಂಪು ಬೀರುವ ಕರವಸ್ತ್ರವನ್ನು ಚಿಮಟಿಯಲ್ಲಿ ಹಿಡಿದು ಬಂದಳು ಚಂದದ ಗಗನಸಖಿ. ಅದನ್ನು ಏನು ಮಾಡಬೇಕೆಂದು ತಿಳಿಯದೆ ಅಕ್ಕಪಕ್ಕ ನೋಡಿದರೆ, ಅದರಲ್ಲಿ ಮುಖ ಒರಸುವುದು ಕಂಡಿತು. ನಾನೂ ಹಾಗೇ ಮಾಡಿ, ಅದು ನನಗೇ ಇರಬಹುದೆಂದುಕೊಂಡು ಬಳಿಯಲ್ಲಿ ಇರಿಸಿಕೊಂಡೆ. ಆಗಲೇ ಬಂದ ಇನ್ನೊಬ್ಬಳು, ಅದನ್ನು ಇಸಿದುಕೊಂಡು ತನ್ನ ಚಂದದ ಟ್ರೇಯಲ್ಲಿಟ್ಟು ನಡೆದಾಗ ನನ್ನ ಅವಸ್ಥೆ ಬೇಡ! ಕಟ್ಟಾ ಸಸ್ಯಾಹಾರಿಗಳಿಗೆ ತುಸು ಉಪ್ಪಿಟ್ಟು, ಸಣ್ಣ ಕೇಕ್ ತುಂಡು, ಹಣ್ಣಿನ ಚೂರುಗಳಿದ್ದ ಪೊಟ್ಟಣ, ಕುಡಿಯಲು ಸೇಬು ಹಣ್ಣಿನ ರಸವನ್ನಿತ್ತರೂ, ಆ ನಿದ್ರೆ ಇಲ್ಲದ ಮುಂಜಾನೆ ಹೊತ್ತಲ್ಲಿ ಸೇವಿಸಲು ಇಷ್ಟವಿಲ್ಲದಿದ್ದರೂ, ಅವೆಲ್ಲಾ ತಕರಾರಿಲ್ಲದೆ ಹೊಟ್ಟೆ ಸೇರಿದವು. ಎದುರುಗಡೆಗಿರುವ ಟಿ.ವಿ.ಯಲ್ಲಿ ಸಿಗುವ ಹಿಂದಿ ಸಿನಿಮಾ ಒಂದನ್ನು ನೋಡಿ ಮುಗಿಸುವಷ್ಟರಲ್ಲಿ, ಅದಾಗಲೇ ನಾಲ್ಕು ತಾಸು ಪ್ರಯಾಣ ಮುಗಿದಿತ್ತು..ನನ್ನ ಪ್ರಯಾಣದ ಇನ್ನೊಂದು ಹಂತವಾದ ಹಾಂಗ್ ಕಾಂಗ್ ನಿಲ್ದಾಣ ಬಂದೇ ಬಿಟ್ಟಿತ್ತು…ಆಗಲೇ ನಾನೇನೋ ಸಾಧಿಸಿದ ಅನುಭವ!
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34567
ಮುಂದುವರಿಯುವುದು………
-ಶಂಕರಿ ಶರ್ಮ, ಪುತ್ತೂರು.
ಮೊದಲು ಪ್ರವಾಸದ ತಯಾರಿ ನಂತರ ವಿಮಾನ ನಿಲ್ದಾಣದಲ್ಲಿನ ಅನುಭವ ತದನಂತರ ವಿಮಾನದೊಳಗೆ ಕೂಡುವ ಸಿದ್ದತೆ ಅಲ್ಲಿ ನಾ ಪಜೀತಿ.. ಎಳೆಎಳೆಯಾಗಿ ನಿರೂಪಿಸುತ್ತಾ ನಮ್ಮನ್ನು ಕುತೂಹಲದಿಂದ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ ಮೇಡಂ ನಿಮ್ಮ ಲೇಖನ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
ಚೆನ್ನಾಗಿದೆ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
ಲೇಖನ ಚೆನ್ನಾಗಿದೆ.
ಮನದ ಆತಂಕಕ್ಕೆ ನವುರಾದ ಹಾಸ್ಯ ಲೇಪನ ಮಾಡಿದ ಅನುಭವ ಕಥನ ಚೆನ್ನಾಗಿ ಮೂಡಿ ಬರುತ್ತಿದೆ.
ಸೊಗಸಾದ ಆತ್ಮೀಯ ನಿರೂಪಣೆ