ಅವಿಸ್ಮರಣೀಯ ಅಮೆರಿಕ-ಎಳೆ 2

Share Button

ಎಳೆ 2

ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ

ವೀಸಾ ನಮ್ಮ ಕೈ ಸೇರಿದ್ದರಿಂದ, ಮನಸ್ಸಲ್ಲಿ ಆಗಲೇ ಅಮೆರಿಕದಲ್ಲಿ ಇದ್ದಂತಹ ಸಂಭ್ರಮ!   ಅಲ್ಲಿಗೆ ಹೋಗುವ ದಿನ ನಿಗದಿಯಾಗಿ, ನಾಲ್ಕು ತಿಂಗಳು ಮುಂಚಿತವಾಗಿ ಸೀಟು ಕಾದಿರಿಸುವಿಕೆಯ ಕೆಲಸವು ಅಂತರ್ಜಾಲದ ಮೂಲಕ ನಡೆದು, ಅದರ ನಕಲು ಪ್ರತಿಯೊಂದು ನಮ್ಮ ಕೈಗೆ ಬಂದೇ ಬಿಟ್ಟಿತು. ಅಮೆರಿಕಕ್ಕೆ ಆ ದಿನಗಳಲ್ಲಿ  ಈಗಿನಂತೆ, ಪಕ್ಕದ ಮನೆಗೆ ಹೋಗುವಂತೆ ಹೋಗಲಾಗುತ್ತಿರಲಿಲ್ಲ. ಅಲ್ಲದೆ, ಕಾದಿರಿಸದಿದ್ದಲ್ಲಿ ಸೀಟು ಸಿಗುವುದೂ ದುರ್ಲಭ. ಹಾಗೇನಾದರು ಸಿಕ್ಕಿದರೂ ಒಂದಕ್ಕೆ ಹತ್ತುಪಟ್ಟು ದುಡ್ಡು ತೆರಬೇಕಾತ್ತದೆ. ಈಗ ವ್ಯವಸ್ಥೆಗಳು ಇನ್ನೂ ಸುಲಲಿತವಾಗಿವೆ. ಹಾಗಾಗಿ, ನಿಜವಾಗಿಯೂ ಹೇಳುವುದಾದರೆ, ನಮ್ಮ ನಮ್ಮ ಪಕ್ಕದ ಮನೆಗಳಲ್ಲಿ ಅಮೆರಿಕಕ್ಕೆ ಹೋಗದವರು ಇಲ್ಲವೆಂದೇ ಹೇಳಬಹುದು. ಅಲ್ವೇ?

ಅದಿರಲಿ..ಈಗ ನನ್ನ ಅನುಭವದ ಕಥೆಗೆ ಬರೋಣ. ಅಮೆರಿಕದಲ್ಲಿರುವ ಮಗಳ ಬಾಣಂತನಕ್ಕಾಗಿ  ಹೋಗುವ ತಯಾರಿ ನಡೆಸಿದ್ದೆ. ಆರು ತಿಂಗಳು ಮಾತ್ರ (ಸರಿಯಾಗಿ 180 ದಿನಗಳು) ಅಲ್ಲಿರಲು ಆ ದೇಶದ ಅನುಮತಿ ಇರುವುದರಿಂದ, ಅದಕ್ಕೆ ಹೊಂದಿಕೊಂಡು ನನ್ನ ಪ್ರವಾಸದ ದಿನವೂ ನಿಗದಿಯಾಗಿತ್ತು. ನಾನು ದೂರವಾಣಿ ಇಲಾಖೆಯಲ್ಲಿ ನೌಕರಿಯಲ್ಲಿದ್ದುದರಿಂದ, ದೀರ್ಘ ರಜೆಗೆ ಅನುಮತಿ ಕೋರಿ ದಿಲ್ಲಿಯ ನಮ್ಮ ಮೇಲಧಿಕಾರಿಗಳಿಗೆ ಬರೆದ ಪತ್ರಕ್ಕೆ, ಹೊರಡುವ ದಿನ ಹತ್ತಿರ ಬಂದರೂ ಉತ್ತರ ಬರಲಿಲ್ಲ. ನನ್ನ ಆತಂಕವನ್ನು ಯಾರಲ್ಲಿ ಹೇಳಲಿ? ಅಂತೂ, ಮಂಗಳೂರಿನ ನಮ್ಮ ಮೇಲಧಿಕಾರಿಗಳ ಬಳಿ ಗೋಗರೆದು ಹೇಗೋ ಮೌಖಿಕ ಸಮ್ಮತಿಯನ್ನು ಗಿಟ್ಟಿಸಿಕೊಂಡು, ಮೊಂಡು ಧೈರ್ಯದಲ್ಲಿ ಹೊರಡುವ ತಯಾರಿ ಆರಂಭವಾಯ್ತು.

ಮುಂದಿನ ಹಂತವೇ ಜೊತೆಗೆ ಒಯ್ಯಲಿರುವ ಸಾಮಾನುಗಳ ಜೋಡಣೆ. ಒಬ್ಬರಿಗೆ ತಲಾ 23ಕೆ.ಜಿ. ತೂಕದ ಎರಡು ಸೂಟ್ಕೇಸುಗಳು, ಏಳು ಕೆ.ಜಿ.ಯ ದೊಡ್ಡ ಬ್ಯಾಗು ಹಾಗೂ ಮೂರು ಕೆ.ಜಿ.ಯ ಸಣ್ಣ ಕೈಚೀಲ ಎನ್ನುವ ನಿರ್ಬಂಧಗಳಿವೆ. ಜೊತೆಗೆ ಮಗಳಿಗಾಗಿ ಒಯ್ಯಲು ಊರಲ್ಲಿರುವ ಎಲ್ಲಾ ಸಾಮಾನುಗಳ ಹನುಮಂತನ ಬಾಲದುದ್ದ ಪಟ್ಟಿಯೂ ಸಿದ್ಧವಾಯ್ತು. ಅಂತೂ ಎಲ್ಲವನ್ನೂ ಕ್ರೋಢೀಕರಿಸಿ ಸೂಟ್ಕೇಸುಗಳಲ್ಲಿ ತುಂಬಿಸಿದ ಮೇಲೆ ಅವುಗಳನ್ನು ತೂಕಮಾಡಲು ಒಂದು ತೂಕದ ಯಂತ್ರವೂ ಮನೆಗೆ ಬಂದಾಯ್ತು. ಪ್ರತಿಯೊಂದರಲ್ಲೂ ಅದರದರ ತೂಕಕ್ಕೆ ತಕ್ಕಂತೆ ತುಂಬಿಸುವುದು ಎಷ್ಟು ಕಷ್ಟ ಎಂದು ನನಗೆ ಅರ್ಥವಾದುದು ಆಗಲೇ!  ತಿಂಡಿ ತಿನಿಸುಗಳು, ಹರಿತವಾದ ವಸ್ತುಗಳು (ಚೂರಿ, ಪಿನ್ನು ಇತ್ಯಾದಿಗಳು)  ಇದ್ದರೆ 23ಕೆ.ಜಿ ತೂಗುವ  ವಸ್ತುಗಳ ಜೊತೆಗಿಟ್ಟು ಚೆಕ್ ಇನ್  ಬ್ಯಾಗಿಗೆ ಹಾಕಬೇಕಿತ್ತು , ಕೈಯಲ್ಲಿ ತಗೊಂಡು ಹೋಗುವ ಹಾಗಿಲ್ಲ. ಅವುಗಳು ನೇರ ವಿಮಾನದ ಡಿಕ್ಕಿಗೆ ಹೋಗುವಂತಹುಗಳು. ಸಾಮಾನು ತುಂಬಿಸುವುದು,ತೆಗೆಯುವುದು ಮಾಡುತ್ತಾ ಸೂಟ್ಕೇಸುಗಳನ್ನು ಹಿಡಿದುಕೊಂಡು ಲೆಕ್ಕವಿಲ್ಲದಷ್ಟು ಸಲ ತೂಕದ ಯಂತ್ರ ಹತ್ತಿ ಇಳಿದು ಮಾಡಿ, ಅಂತೂ ಸರಿಯಾದ ತೂಕದ ಲಗೇಜುಗಳನ್ನು ಸಿದ್ಧಪಡಿಸಿದೆವು. ಅವುಗಳಿಗೆ ಚಂದದ ರಿಬ್ಬನ್ ಕೂಡಾ ಕಟ್ಟಲಾಯಿತು.. ಗುರುತಿಗಾಗಿ. ಇದೆಲ್ಲಾ ಮುಗಿದ ಬಳಿಕ ನಮ್ಮ ಶರೀರದ ತೂಕವೇ ಕಡಿಮೆಯಾಗಿರಬಹುದೆಂದು ನನ್ನೆಣಿಕೆ. ತಪಾಸಣಾ ಸಮಯದಲ್ಲಿ ಸಾಮಾನಿನ ತೂಕ  ಲೆಕ್ಕಕ್ಕಿಂತ ಜಾಸ್ತಿ ಇದ್ದರೆ ಲವಲೇಶವೂ ಕರುಣೆಯಿಲ್ಲದೆ ಸಿಕ್ಕಾಪಟ್ಟೆ ದಂಡ ವಿಧಿಸುವುದರ ಜೊತೆಗೆ ಏನಾದರೂ ಸಂಶಯ ಬಂದರೆ ಎಲ್ಲಾ ಕಿತ್ತು ಎಸೆಯುತ್ತಾರೆ ಕೂಡಾ. ಹಾಗೇನಾದರೂ ಆದರೆ ನನ್ನಲ್ಲಿರುವ ಉಪ್ಪಿನಕಾಯಿ, ಸಾಂಬಾರು ಪುಡಿ, ಹಪ್ಪಳ, ಸಂಡಿಗೆಗಳ ಗತಿ ಏನೆಂದು ನನ್ನ ಚಿಂತೆ. ಅಲ್ಲದೆ ಇಷ್ಟೊಂದು ಸಾಮಾನುಗಳೊಂದಿಗೆ ನಾನೊಬ್ಬಳೇ ಹೋಗುವ ಬಗ್ಗೆ ಯೋಚಿಸುವಾಗಲೇ ಎದೆಯಲ್ಲಿ ನಡುಕ! (ನನ್ನವರು ಮೂರು ತಿಂಗಳ ತರುವಾಯ ಬರುವುದೆಂದು ನಿರ್ಣಯವಾಗಿತ್ತು) ಇವುಗಳೊಂದಿಗೆ ಇನ್ನೊಂದು ಹೊಸ ಸಮಸ್ಯೆ..ನಾನಂತೂ ಸೀರೆ ಬಿಟ್ಟು ಬೇರೆ ಉಡುಗೆ ಧರಿಸಿದವಳಲ್ಲ. ಎಲ್ಲರ ಸರ್ವಾನುಮತದ ಅಭಿಪ್ರಾಯದಂತೆ, ಈ ಭಾರೀ ಸಾಮಾನುಗಳೊಂದಿಗೆ ಪ್ರಯಾಣಿಸಲು ಚೂಡಿದಾರವೇ ಸೂಕ್ತ, ಸೀರೆ ಅಲ್ಲ ಎಂದು. ಆದರೆ ನನಗೋ ಅದನ್ನು ಯೋಚಿಸಿದರೇ ಮನಸ್ಸಿಗೆ ಹಿಂಸೆ! ದಿನ ನಿಲ್ಲುವುದೇ?…ಕೊನೆಗೂ ಆ ದಿನ ಬಂದೇ ಬಿಟ್ಟಿತು.

ಬೆಂಗಳೂರು  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನನ್ನ ಪ್ರಯಾಣ ಆರಂಭವಾಗಿ, ಅಲ್ಲಿಂದ ಮುಂದೆ ಹಾಂಗ್ ಕಾಂಗ್ ನಿಂದ ಇನ್ನೊಂದು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಎಲ್ಲಾ ಲಗೇಜ್ ಗಳ ಸಹಿತ ಬೆಂಗಳೂರಿನ ನಮ್ಮ ಕುಟುಂಬ ಸ್ನೇಹಿತರ ಮನೆಯಲ್ಲಿದ್ದು ಮರುದಿನ ಮುಂಜಾನೆ ಮೂರು ಗಂಟೆಯ ವಿಮಾನಕ್ಕೆ ಮಧ್ಯರಾತ್ರಿ ಹನ್ನೊಂದು ಗಂಟೆಗೆ ಹೊರಡುವುದಿತ್ತು. ಕಿರಿಕಿರಿಯಾಗುತ್ತಿದ್ದರೂ ಎಲ್ಲರ ನಿರ್ಣಯದ ಉಡುಪಿನಲ್ಲಿ ಸಿದ್ಧಳಾದಾಗ, ಈ ಭಯ, ಗಾಬರಿಗಳ ನಡುವೆ ಮಧ್ಯರಾತ್ರಿಯ ನಿದ್ದೆಯ ಮಂಪರು ಕೂಡಾ ಎಲ್ಲೋ ಕಾಲ್ಕಿತ್ತಿತ್ತು. ನಿಲ್ದಾಣಕ್ಕೆ ತಲಪಿದ ಮೇಲೆ, ಮಕ್ಕಳು ಮುಂಚಿತವಾಗಿ, ಹಂತ ಹಂತವಾಗಿ ನಡೆಯುವ ಎಲ್ಲಾ ತಪಾಸಣೆಗಳ ಬಗ್ಗೆಯೂ ವಿವರವಾಗಿ ಹೇಳಿದುದನ್ನು ತುಂಬಾ ಜಾಗರೂಕತೆಯಿಂದ ನೆನಪಿಟ್ಟುಕೊಂಡಿದ್ದರೂ, ಜೊತೆಗೆ ಚೀಟಿ ಬರೆದು ಕೈ ಚೀಲದಲ್ಲೇ ಇರಿಸಿಕೊಂಡಿದ್ದರೂ, ಅಲ್ಲಿಯ ಜನ ಸಂದಣಿಯನ್ನು ನೋಡಿದಾಗ ಎಲ್ಲಾ ಮರೆತೇ ಹೋಯ್ತು! ಜೊತೆಗೆ, ಇಷ್ಟೊಂದು ಭಾರೀ ಸಾಮಾನುಗಳ ಹೊರೆ ಬೇರೆ… ನನಗೆ ಇನ್ನೆರಡು ಕೈಗಳು ಜಾಸ್ತಿ ಇರಬರದಾಗಿತ್ತೇ ಎನ್ನಿಸಿದ್ದು ಮಾತ್ರ  ಸುಳ್ಳಲ್ಲ. ದೊಡ್ಡ ಸೂಟ್ಕೇಸುಗಳನ್ನು ಇರಿಸಿ ಒಯ್ಯಲು ತಳ್ಳು ಕೈಗಾಡಿ(ಟ್ರಾಲಿ) ಇತ್ತು ನಿಜ..ಆದರೆ ಅದು ನಾನು ತಳ್ಳಿದಲ್ಲಿ ಹೋಗದೆ ಬೇರೆಲ್ಲೋ ಹೋಗುತ್ತಿತ್ತು! ಈ ಕಷ್ಟ ಮಾತ್ರ ಯಾರಿಗೆ ಬೇಕು ಹೇಳಿ? ಎಲ್ಲಿ ಹೋಗಬೇಕೆಂದು ತಿಳಿಯದಾಗ, ಉಳಿದ ಪ್ರಯಾಣಿಕರು ಹೋಗುವುದನ್ನು ಗಮನಿಸುತ್ತಾ ಅವರೊಡನೆ  ಹೆಜ್ಜೆ ಹಾಕಿದೆ. ನನ್ನನ್ನು ಕಳುಹಿಸಿಕೊಡಲು  ಬಂದವರು ಕಣ್ಣಿಗೆ ಕಾಣಲಾರದಷ್ಟು ದೂರ ಹೊರಗಡೆ ಇದ್ದುದರಿಂದ, ಇನ್ನು ಅಮೆರಿಕ ತಲಪುವ ವರೆಗೆ ನಾನೊಬ್ಬಳೇ ಎನ್ನುವ ಭಯಂಕರ ಸತ್ಯವನ್ನು ಅರಗಿಸಿಕೊಳ್ಳುವ ವ್ಯರ್ಥ ಪ್ರಯತ್ನ  ಮಾಡಿದೆ.

ಸರಿಯಾದ ಸಮಯಕ್ಕೆ ಕೌಂಟರ್ ಪ್ರಾರಂಭವಾದಾಗ ಸೀಟು ಕಾದಿರಿಸಿದ ವಿವರಗಳನ್ನು ನೀಡಿದೆ. ಮತ್ತೊಮ್ಮೆ  ಪ್ರತಿಯೊಂದರ ತೂಕವನ್ನೂ ನೋಡಲಾಗಿ, ನಿಯಮಕ್ಕೆ ಅನುಸಾರವಾಗಿ ಇದ್ದುದು ಮಾತ್ರ ನನ್ನ ಪುಣ್ಯ! ಬೇರೆ ಕೆಲವರು, ತೂಕಕ್ಕಿಂತ ಹೆಚ್ಚಾದ ಸಾಮಾನುಗಳನ್ನು ಸರಿದೂಗಿಸಲು ಒದ್ದಾಡುವುದನ್ನು ನೋಡಿದಾಗ ಅಯ್ಯೋ..ಪಾಪ ಎನಿಸಿತು. 23ಕೆ.ಜಿ.ಯ ಎರಡು ಸೂಟ್ಕೇಸುಗಳು ನನ್ನ ಕೈಯಿಂದ ಬಿಡುಗಡೆ ಹೊಂದಿ ವಿಮಾನದ ಡಿಕ್ಕಿ ಸೇರಿದವು.  ಅವುಗಳ ರಶೀದಿಯ ಜೊತೆಗೆ ವಿಮಾನದ ಟಿಕೆಟ್ ಕೂಡಾ ನೀಡಿದರು. ವಿಮಾನದ ಟಿಕೆಟ್ ನಲ್ಲಿ, ವಿಮಾನದ ಸಂಖ್ಯೆ, ಸೀಟಿನ ಸಂಖ್ಯೆ, ನಾವು ಹತ್ತಲಿರುವ ವಿಮಾನವಿರುವ ಗೇಟ್ ಸಂಖ್ಯೆ ಎಲ್ಲವೂ ವಿವರವಾಗಿ ನಮೂದಿಸಲ್ಪಟ್ಟಿರುತ್ತದೆ. ಡಿಕ್ಕಿ ಸೇರಿದ ಸೂಟ್ಕೇಸುಗಳನ್ನು  ಕೊನೆಯ ನಿಲ್ದಾಣವಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಾನು ರಶೀದಿ ತೋರಿಸಿ ಪಡೆಯಬೇಕು. ಆದ್ದರಿಂದ ಅವುಗಳ ರಶೀದಿಯನ್ನು ಬಹಳ ಭದ್ರವಾಗಿ ಇರಿಸಿಕೊಳ್ಳಬೇಕಿತ್ತು. ಜೊತೆಗೆ ಅಪರಿಚಿತ ಜನರ ನಡುವೆ ನಾನೊಬ್ಬಳೇ ಉಳಿದಾಗ ನನ್ನ ಅವಸ್ಥೆ ಹೇಳತೀರದು.

ಮುಂದಿನ ವಾರ ಹೋಗೋಣ…..ಹಾಂಗ್ ಕಾಂಗ್ ನತ್ತ…..ಆಗದೇ?

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34525

ಶಂಕರಿ ಶರ್ಮ, ಪುತ್ತೂರು.

10 Responses

  1. B c n murthy says:

    ಚೆನ್ನಾಗಿದೆ ಪ್ರವಾಸ ಕಥನ

  2. ನಾಗರತ್ನ ಬಿ. ಅರ್. says:

    ಮೊದಲು ತಯಾರಿ ನಂತರ ವಿಮಾನ ನಿಲ್ದಾಣಕ್ಕೆ ಸವಾರಿ ಬಹಳ ಚೆನ್ನಾಗಿದೆ ಮೇಡಂ… ವಿದೇಶ ಕ್ಕೆ ಹೊರಟವರಿಗೆ ಗೈಡ್ ಲೈನ್.. ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.

    • . ಶಂಕರಿ ಶರ್ಮ says:

      ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನಾ ಮೇಡಂ ಅವರಿಗೆ.

  3. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  4. ಆಶಾ ನೂಜಿ says:

    ಸೂಪರ್ ಅಕ್ಕೋ

  5. Padma Anand says:

    ಸುಂದರ ನಿರೂಪಣೆ. ನಾನಂತೂ ನಿಮ್ಮೊಂದಿಗೆ ಹಾಂಗ್ ಕಾಂಗ್ ಸುತ್ತಲು ರೆಡಿ. ಹಾಂಗ್ ಕಾಂಗ್ ಸುತ್ತಲು ಬಿಡುವುದಿಲ್ಲ, ಬಿಡಿ. ಬರೀ ಏರ್ ಪೋರ್ಟಿಗೇ ಸಮಾಧಾನ ಪಟ್ಟುಕೊಳ್ಳೋಣ.

  6. ವಿದೇಶ ಪ್ರವಾಸದ ಕಿರಿಕಿರಿ
    ಮಗಳನ್ನು ನೋಡಲು ಹಿರಿಹಿರಿ ಹಿಗ್ಗುತ್ತಾ ನಡೆದ ತಾಯಿ
    ಸೊಗಸಾದ ಪ್ರವಾಸ ಕಥನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: