ಅವಿಸ್ಮರಣೀಯ ಅಮೆರಿಕ: ವೀಸಾ ಕಸಿವಿಸಿ
…ನನ್ನ ಅಮೆರಿಕ ಭೇಟಿಯ ನೆನಪಿನೆಳೆಗಳನ್ನು ಬಿಡಿಸುತ್ತಾ ನಿಮ್ಮ ಮುಂದೆ…….ಎಳೆ 1
ತೀರಾ ಹಳ್ಳಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಅಕ್ಕಪಕ್ಕದ ಪುಟ್ಟ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಪೂರೈಸಿ; ನೌಕರಿಯನ್ನೂ ಅಲ್ಲಿಯೇ ಹತ್ತಿರದಲ್ಲಿ ಪಡೆದು ಇಪ್ಪತ್ತು ವರ್ಷಗಳಾಗಿದ್ದರೂ, ನಮ್ಮ ದೇಶದೊಳಗಡೆಯೇ ದೂರ ಪ್ರವಾಸವೆಂದೂ ಹೋಗದವಳು, ಅಮೆರಿಕದಲ್ಲಿರುವ ಮಗಳು ಅಲ್ಲಿಗೆ ಬರ ಹೇಳಿದಾಗ ಖುಷಿಯಿಂದ ಬೀಗಿದ್ದೇ ಬೀಗಿದ್ದು!
ಹನ್ನೊಂದು ವರ್ಷಗಳ ಹಿಂದಿನ ಮಾತು. ಪರದೇಶಗಳಿಗೆ ಹೋಗಲು ಮೊತ್ತ ಮೊದಲನೆಯದಾಗಿ ಬೇಕಾಗಿರುವುದು ಪಾಸ್ ಪೋರ್ಟ್. ಅದರ ಗೋಜಿಯಲ್ಲೇ ಇರದಿದ್ದ ನಾವು, ಹೇಗೋ ತಿಪ್ಪರಲಾಗ ಹಾಕಿ, ಮಧ್ಯವರ್ತಿಗಳ ಮೂಲಕ ಹೆಚ್ಚು ತೊಂದರೆ ಇಲ್ಲದೆ ಅದು ನಮ್ಮ ಕೈಸೇರಿತೇನೋ ನಿಜ. ಆದರೆ ಮುಂದಿನ ಹೆಜ್ಜೆ ಅಲ್ಲಿಯ ವೀಸಾ (VISA- Visitors International Stay Admission) ಪಡೆಯಲು ಅರ್ಜಿ ಹಾಕುವುದು. ಬೇರೆ ಬೇರೆ ದೇಶಗಳಿಗೆ ವೀಸಾ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಎಲ್ಲಾ ದೇಶಗಳಿಗಿಂತ ಅಮೆರಿಕಕ್ಕೆ ವೀಸಾ ಸಿಗುವುದು ಬಹಳ ಕಷ್ಟ ಎಂದು ಎಲ್ಲರೂ ಹೇಳುತ್ತಿದ್ದರು. ವಿವಿಧ ಹಂತಗಳಲ್ಲಿ ತರಹೇವಾರಿ ಪರೀಕ್ಷೆಗಳು ನಡೆಯುತ್ತವೆ. ವೀಸಾಕ್ಕಿರುವ ಸಂದರ್ಶನವೂ ಅಷ್ಟೇ ಕಷ್ಟವಾಗಿರುವುದರಿಂದ ಸಂಪೂರ್ಣ ಸಿದ್ಧತೆ ಬೇಕಾಗುತ್ತದೆ. ಒಮ್ಮೆ ವೀಸಾ ಸಿಕ್ಕಿತೆಂದರೆ, ಪ್ರವಾಸಿಗಳಾಗಿ ವರ್ಷಕ್ಕೊಂದು ಬಾರಿ, ಹತ್ತು ವರ್ಷಗಳ ತನಕ ನಿರಾತಂಕವಾಗಿ ಹೋಗಲಡ್ಡಿಯಿಲ್ಲ. ಹತ್ತು ವರ್ಷಗಳ ಬಳಿಕ ನವೀಕರಣವು ಕೆಲವು ಸರಳ ಪ್ರಕ್ರಿಯೆಗಳ ಮೂಲಕ ಸುಲಭದಲ್ಲಿ ಆಗಿಬಿಡುವುದು.
ನಮ್ಮ ವೀಸಾ ಅರ್ಜಿಗಳನ್ನು ಮಕ್ಕಳ ಸಹಾಯದಿಂದ ಭರ್ತಿ ಮಾಡಿದುದಲ್ಲದೆ, ಅದಕ್ಕೆ ಲಗತ್ತಿಸಲು ಅಲ್ಲಿ ವಾಸವಾಗಿರುವವರ ಆಹ್ವಾನಪತ್ರವೂ ಬೇಕಾಗಿರುವುದರಿಂದ ಮಗಳು ಅದನ್ನೂ ಕಳುಹಿಸಿಕೊಟ್ಟಳು. ಅದರಲ್ಲಿ ಅವಳು ಕೆಲಸ ಮಾಡುವ ಕಂಪೆನಿಯ ಪೂರ್ತಿ ಜಾತಕ, ಅವಳು ಪಡೆಯುವ ಸಂಬಳ ಇತ್ಯಾದಿಗಳ ಸವಿವರಗಳ ಪಟ್ಟಿ ಬಹಳ ಮುಖ್ಯ. ಅದು ಸರಿಯಾಗಿಲ್ಲದಿದ್ದರೆ ಅರ್ಜಿಯು ಸ್ವೀಕೃತವಾಗುವುದೇ ಇಲ್ಲ. ಅಲ್ಲದೆ, ವಾಸ್ತವ್ಯವಿರುವಷ್ಟು ಸಮಯವೂ ಅಲ್ಲಿ ನಮ್ಮನ್ನು ಸಾಕುವವರು(?) ಸರಿಯಾದ ಮಾಹಿತಿಯನ್ನು ಅದರಲ್ಲಿ ನಮೂದಿಸಬೇಕಾಗುತ್ತದೆ. ಜೊತೆಗೆ, ನಾವೆಷ್ಟು ಸಮಯ ಅಲ್ಲಿರುವೆವೋ ಅಷ್ಟು ದಿನಗಳಿಗೆ ಆರೋಗ್ಯ ವಿಮೆಯನ್ನು ಮಾಡುವುದು ಕಡ್ಡಾಯ. ಇನ್ನು, ಅದಕ್ಕೆ ಸಲ್ಲಿಸಬೇಕಾದ ನಮ್ಮ ಭಾವಚಿತ್ರದ ಕಥೆಯೇ ಬೇರೆ. ಅದರ ಅಳತೆ, ಹಿನ್ನೆಲೆಯ ಬಣ್ಣ(ಶುಭ್ರ ಬಿಳಿ) ಎಲ್ಲಾ ಕರಾರುವಾಕ್ಕಾಗಿ ಇರಲೇಬೇಕಾಗುತ್ತದೆ. ಅದಕ್ಕೋಸ್ಕರವೇ ವಿಶೇಷವಾದ ಭಾವಚಿತ್ರಾಲಯಕ್ಕೆ ಹೋಗಿ ಫೊಟೋ ತೆಗೆಸಿದ್ದಾಯ್ತು. ಫೊಟೋವನ್ನು ಯಾವುದೇ ಕಾರಣಕ್ಕೂ ರಿಪೇರಿ ಮಾಡಬಾರದೆಂದು ತಿಳಿಸಿದ್ದೆವು. ಸಾಧಾರಣವಾಗಿ ಛಾಯಾಚಿತ್ರಗಾರರು ನಮ್ಮ ಫೊಟೋವನ್ನು ತಿದ್ದಿ ತೀಡಿ, ನಾವು ಇಷ್ಟೂ ಚಂದ ಇರುವೆವಾ(??! ) ಎಂದು ಸಂಶಯಪಡುವಷ್ಟು ಚಂದ ಮಾಡಿ ಕೊಡುತ್ತಾರೆ, ನಮ್ಮನ್ನು ಖುಷಿಪಡಿಸಲು.. ಅಲ್ಲವೇ? ನಮ್ಮ ಫೊಟೋ ಸಿಗುವಾಗ, ಹಿನ್ನೆಲೆಯಲ್ಲಿ ಸರಿಯಾದ ಬಿಳಿ ಬಣ್ಣವಾಗಿಲ್ಲವೆಂಬ ನಮ್ಮ ತಕರಾರಿಗೆ, “ನಾವು ನೂರಾರು ಮಂದಿಗೆ ಹೀಗೇ ತೆಗೆದುದು, ಯಾರಿಗೂ ಏನೂ ತೊಂದರೆಯಾಗಿಲ್ಲ” ಎಂದು ನಮ್ಮ ಬಾಯಿ ಮುಚ್ಚಿಸಿಬಿಟ್ಟರು.. ಛಾಯಾಗ್ರಾಹಕರು.
ಮುಂದಕ್ಕೆ, ಮಕ್ಕಳಿಂದ ನಮಗೆ ಸಂದರ್ಶನದ ತಯಾರಿಗಾಗಿ ಪಾಠ ಸುರುವಾಯ್ತು ನೋಡಿ. ನಮ್ಮ ಡಿಗ್ರಿ ಪರೀಕ್ಷೆಗೂ ಇಷ್ಟು ತಯಾರಿ ನಡೆಸಿರಲಿಲ್ಲ ಎಂಬುದು ನನ್ನ ಅನಿಸಿಕೆ. ವೀಸಾ ಸಂದರ್ಶನವು ನಮಗೆ ಚೆನ್ನೈಯಲ್ಲಿತ್ತು. ಅಲ್ಲಿ ಕೇಳಬಹುದಾದಂತಹ ಪ್ರಶ್ನೆಗಳ ಹನುಮಂತನ ಬಾಲದುದ್ದ ಪಟ್ಟಿ ಸಿದ್ಧವಾಯ್ತು. ಅದಕ್ಕೆ ಹೇಳಬೇಕಾದ ಉತ್ತರಗಳನ್ನೂ ಕಂಠಪಾಠ ಮಾಡಲಾಯಿತು. ಅಲ್ಲಿ ತಪ್ಪಿಯೂ ಮಗಳನ್ನು ಕಾಣಲು ಹೋಗುವುದೆಂದು ಹೇಳುವ ಹಾಗಿಲ್ಲ.. ಬದಲಿಗೆ, ಅಲ್ಲಿರುವ ಅವರ ಪ್ರವಾಸಿ ಸ್ಥಳಗಳನ್ನು ಕಾಣಲು ಮಾತ್ರ ನಾವು ಹೋಗಬೇಕಿತ್ತು. ಆದ್ದರಿಂದ ಅಲ್ಲಿಯ ಪ್ರವಾಸಿತಾಣಗಳ ಉದ್ದುದ್ದ ಪಟ್ಟಿಯನ್ನು ಮುಂದಿಟ್ಟು ಕಂಠಪಾಠ ಮಾಡಿದ್ದೇ ಮಾಡಿದ್ದು. ನಾವು ಅಲ್ಲಿ ಹೆಚ್ಚು ಸಮಯ ಉಳಿಯುವುದಿಲ್ಲ, ವಾಪಾಸು ನಮ್ಮೂರಿಗೆ ಬರುತ್ತೇವೆ ಎಂದು ಅವರಿಗೆ ಮನವರಿಕೆ ಮಾಡಿಸಲು, ನಮ್ಮ ಮನೆ, ಜಾಗದ ವಿವರಗಳನ್ನು ಮೂಲ ದಾಖಲೆ ಸಮೇತ ಒಟ್ಟುಗೂಡಿಸಿ ಇರಿಸಲಾಯಿತು. ಜೊತೆಗೆ ನಾನು ನೌಕರಿಯಲ್ಲಿರುವ ಪ್ರಮಾಣಪತ್ರವನ್ನೂ ಸೇರಿಸಲಾಯಿತು. ಆ ದೇಶದವರಿಗೆ ಭಯ..ನಾವು ಅಲ್ಲೇ ಝಂಡಾ ಹೂಡಿಬಿಟ್ಟರೆ!? ಮಗಳೊಂದಿಗಿನ ಕುಟುಂಬ ಸಹಿತದ ದೊಡ್ಡ ಗಾತ್ರದ ಫೊಟೋವೊಂದನ್ನು, ನಾವಿಬ್ಬರು ನಮ್ಮ ಮಗಳ ತಂದೆ ತಾಯಿ(?!) ಎನ್ನುವುದಕ್ಕೆ ಸಾಕ್ಷಿಯಾಗಿ ಜೊತೆಗೊಯ್ಯಲು ಹೇಳಿದರು ಮಕ್ಕಳು. ಇಷ್ಟೆಲ್ಲಾ ದಾಖಲೆಗಳನ್ನು ಹೊಂದಿಸುವುದರೊಳಗೆ ನಮಗೆ ನಮ್ಮ ಮೇಲೆಯೇ ನಂಬಿಕೆ ಕಳಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು! ಒಮ್ಮೆಯಂತೂ ನಮ್ಮ ಕ್ಲಾಸು, ಪ್ರಶ್ನೋತ್ತರಗಳು ನಡೆಯುತ್ತಿದ್ದಾಗ ಅವರು ಹೇಳಿಕೊಟ್ಟದ್ದು ಮರೆತು ಹೋಗಿ ತಪ್ಪು ತಪ್ಪು ಉತ್ತರಿಸಿ ನಗೆಪಾಟಲಾದುದು ಬೇರೆ! ನಮ್ಮ ಮಕ್ಕಳು ಚಿಕ್ಕವರಿದ್ದಾಗ ಪರೀಕ್ಷೆ ಸಮಯದಲ್ಲಿ , ನಾವು ಅವರಲ್ಲಿ ಪ್ರಶ್ನೆ ಕೇಳಿ, ಸರಿಯಾಗಿ ಉತ್ತರಿಸದಿದ್ದಲ್ಲಿ ಜೋರು ಮಾಡಿದ್ದನ್ನು ಈಗ ಬಡ್ಡಿ ಸಮೇತ ತೀರಿಸಲು ಪಣ ತೊಟ್ಟಂತಿತ್ತು! ಅಂತೂ ನಮ್ಮ ಪೂರ್ವ ಸಿದ್ಧತೆಗಳು ಮುಗಿಯುತ್ತಿದ್ದಂತೆ ವೀಸಾ ಪರೀಕ್ಷೆ ಹತ್ತಿರ ಬಂದೇಬಿಟ್ಟಿತು.
ಚೆನ್ನೈಯಲ್ಲಿರುವ ನಮ್ಮ ಬಂಧುಗಳ ಮನೆಯಲ್ಲಿ ಉಳಕೊಂಡು, ಅಲ್ಲಿರುವ ಅಮೆರಿಕ ವೀಸಾ ಕಚೇರಿಯಲ್ಲಿರುವ ಸಂದರ್ಶನದ ದಿನ ಪ್ರಾತ:ಕಾಲವೇ ಎದ್ದು ತಯಾರಾಗಿ, ನಮಗಿಂತ ಭಾರವಾದ ದಾಖಲೆಗಳ ದೊಡ್ದದಾದ ಚೀಲವನ್ನು ಹಿಡಿದು, ದೇವರಿಗೆ ಉದ್ದಂಡ ನಮಸ್ಕರಿಸಿ ಹೊರಟಾಗ, ನಮ್ಮ ನೌಕರಿ ಬೇಟೆ ಸಮಯದಲ್ಲಿ ಹೋದ ಸಂದರ್ಶನಕ್ಕೆ ಕೂಡಾ ಇಷ್ಟು ತಯಾರಿ ನಡೆಸಿರಲಿಲ್ಲವೆಂದು ಎನಿಸಿದ್ದು ಸುಳ್ಳಲ್ಲ.
ನಾವು ಸಂದರ್ಶನದ ಜಾಗಕ್ಕೆ ತಲಪುವಾಗ ಗಂಟೆ ಎಂಟೂವರೆಯಷ್ಟೆ… ಒಂಭತ್ತು ಗಂಟೆಗೆ ಬಾಗಿಲು ತೆರೆಯುವುದಿತ್ತು. ಅಲ್ಲಿ, ಆಗಲೇ ಮೈಲುದ್ದ ಕ್ಯೂ ಕಂಡು ಗಾಬರಿಯಾದರೂ ಧೈರ್ಯ ತಂದುಕೊಂಡು ಪರೀಕ್ಷೆಗೆ ತಯಾರಾಗಿ ಬಂದ ವಿದ್ಯಾರ್ಥಿಗಳಂತೆ ಉತ್ತರಗಳನ್ನು ಮನನ ಮಾಡಿಕೊಳ್ಳುತ್ತಾ, ಅಕ್ಕಪಕ್ಕದಲ್ಲಿರುವವರನ್ನು ಮಾತನಾಡಿಸಿದಾಗ ಅವರು ಎರಡನೇ ಸಲ, ಮೂರನೇ ಸಲ ಬಂದಿರುವುದಾಗಿ ತಿಳಿಯಿತು. ಅವರು ಅದಾಗಲೇ ಸಂದರ್ಶನಗಳಲ್ಲಿ ಅನುತ್ತೀರ್ಣರಾಗಿದ್ದವರು ಪುನ: ಅವರ ಅದೃಷ್ಟವನ್ನು ಪರೀಕ್ಷಿಸಲು ಬಂದಿದ್ದರು! ಇದನ್ನು ಕೇಳಿದ ನಮಗೆ ಇದ್ದಬದ್ದ ಧೈರ್ಯವೂ ಬೆಟ್ಟಹತ್ತಿತು.
ಒಂಭತ್ತು ಗಂಟೆಗೆ ಬಾಗಿಲೇನೋ ತೆರೆಯಿತು, ಆದರೆ ಒಳಗೆ ಬಿಡಲೊಲ್ಲರು. ಅಂತೂ ಹತ್ತು ಗಂಟೆಗೆ ನಮ್ಮ ಸರತಿಸಾಲು ಚಲಿಸಲು ಆರಂಭವಾಯ್ತು. ಸ್ವಲ್ಪ ಹೊತ್ತಲ್ಲಿ ನಮ್ಮ ಸರದಿ ಬಂದಾಗ ದೇವಸ್ಥಾನದ ಒಳಗೆ ಹೋಗುವಂತೆ ಭಯ ಭಕ್ತಿಯಿಂದ ಬಲಗಾಲಿಟ್ಟು ಒಳಗೆ ಸರಿದಾಗ ಅಲ್ಲೇ ಇದ್ದ ಜವಾನ ನಮಗೆ ದಾರಿ ತೋರಿಸಿದ. ಮೊತ್ತ ಮೊದಲಾಗಿ, ಒಬ್ಬರು ನಮ್ಮಲ್ಲಿದ್ದ ದಾಖಲೆಗಳನ್ನು, ಫೊಟೋಗಳನ್ನು ತೀಕ್ಷ್ಣವಾಗಿ ಪರಿಶೀಲಿಸಿ ಮುಂದಕ್ಕೆ ಕಳುಹಿಸಿದರು. ಎದುರುಗಡೆಗೆ ಸಿನಿಮಾ ಮಂದಿರದ ಟಿಕೆಟ್ ಕೌಂಟರಿನಂತಹ ಮೂರು ಚಿಕ್ಕದಾದ ಕೌಂಟರುಗಳಿದ್ದವು. ಇದ್ದ ಪುಟ್ಟ ಕ್ಯೂನಲ್ಲಿ ನಿಂತು ಅರ್ಧಗಂಟೆಯ ಬಳಿಕ ನಾವು ಅದರ ಮುಂದೆ ನಿಂತಿದ್ದೆವು. ಅದರೊಳಗಿದ್ದವರು ನಮ್ಮ ಭಾವಚಿತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಭಾವಚಿತ್ರ ಸರಿಯಿಲ್ಲ.. ನಿಮ್ಮ ಹಿನ್ನೆಲೆಯ ಬಣ್ಣ ಸರಿಯಿಲ್ಲ, ಫೊಟೋ ತಿದ್ದಲಾಗಿದೆ ಇತ್ಯಾದಿ ದೂರುಗಳನ್ನು ಸಲ್ಲಿಸುವಾಗ ನಾವು ತಬ್ಬಿಬ್ಬು. ಇಷ್ಟು ಸಮಯ ಸುಮ್ಮನೇ ವ್ಯರ್ಥವಾಯ್ತಲ್ಲ ಎನ್ನಿಸಿತು. ಇನ್ನು ಫೊಟೋ ತೆಗೆಸಲು ಏನು ಮಾಡುವುದೆಂದು ಅತ್ತಿತ್ತ ನಿರುಕಿಸುತ್ತಿದ್ದಾಗ ಪುಣ್ಯವಶಾತ್ ಅಲ್ಲೇ ನಮ್ಮಂತಹವರಿಗಾಗಿಯೇ ಸಿದ್ಧವಿತ್ತು ಜಟ್ ಪಟ್ ಸ್ಟುಡಿಯೊ. ಚೆನ್ನೈಯ ಬಿರು ಬಿಸಿಲಿನ ಬೇಗೆಗೆ ಬೆವರು ಸುರಿಸುತ್ತಿದ್ದ, ಗಡಿಬಿಡಿಯಲ್ಲಿ ಕಂಗೆಟ್ಟಿದ್ದ ಮುಖಕ್ಕೆ ಸವರಲು ಅಲ್ಲಿಯ ಸ್ಟುಡಿಯೋದಲ್ಲಿ ಪೌಡರ್ ಏನೂ ಇರಲಿಲ್ಲ. ನಮ್ಮ ಹಿನ್ನೆಲೆಯ ಸೌಂದರ್ಯಕ್ಕಾಗಿ ಅಚ್ಚ ಬಿಳಿಯ ಛತ್ರಿಯೊಂದು ತಯಾರಾಗಿ ಕುಳಿತಿತ್ತು. ಹದಿನೈದು ನಿಮಿಷಗಳಲ್ಲಿ ಸಿದ್ಧವಾದ ಆ ಫೊಟೋವನ್ನು ನೋಡುವ ಹಾಗೇ ಇರಲಿಲ್ಲ! ನಮ್ಮಲ್ಲಿ ವೋಟಿಗಾಗಿ ತೆಗೆಯುವ ಫೊಟೋವು ಡಕಾಯಿತರಂತೆ ಬಂದದ್ದಿದೆ. ಇದು ಕೂಡಾ ಅಂತಹುದೇ ಇನ್ನೊಂದಾಗಿ, ನಾನು ಹೌದೋ ಅಲ್ಲವೋ ಎಂಬ ಸಂಶಯ ಬಂತು! ಅಲ್ಲದೆ ಅದನ್ನೇ ವೀಸಾಕ್ಕೂ ಅಂಟಿಸುವುದರಿಂದ ದೇಶ ವಿದೇಶಗಳಲ್ಲಿ ಅದೇ ಫೊಟೋ ಓಡಾಡುವುದೆಂಬುದನ್ನು ನೆನೆದು ಬಹಳ ಹಿಂಸೆಯಾಯ್ತು.. ಆದರೂ ನಾವೇನೂ ಮಾಡುವ ಹಾಗಿರಲಿಲ್ಲವಲ್ಲ!
ಅಂತೂ ಫೊಟೋ ಪ್ರವರ ಮುಗಿದು, ಅದು ಕೈಗೆ ಸಿಕ್ಕಿದಾಗ ಎವರೆಷ್ಟ್ ಏರಿದ ಅನುಭವ! (ಬಚೇಂದ್ರಿಪಾಲ್ ಅವರನ್ನು ಕೇಳಬೇಕಷ್ಟೆ.. ಅನುಭವ ಹೇಗಿತ್ತೆಂದು!) ಕೈಯಲ್ಲಿದ್ದ ದಾಖಲೆಗಳನ್ನು ಜಾಗರೂಕತೆಯಿಂದ ಹಿಡಿದುಕೊಂಡು ಪುನ: ಉದ್ದಕ್ಕಿದ್ದ ಕ್ಯೂ ಹಿಂದೆ ಸೇರಿಕೊಂಡೆವು. ನಮ್ಮ ಸರದಿ ಬಂದಾಗ ಆ ಪುಟ್ಟ ಕೌಂಟರಿನ ಹಿಂದೆ ಕುಳಿತಿದ್ದ ಅಮೆರಿಕದ ಬಿಳಿ ಬಣ್ಣ ಹೊತ್ತ ಬೇರೊಬ್ಬ ವ್ಯಕ್ತಿ ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದಾಗ ಬದುಕಿದೆವು ಎಂದುಕೊಂಡೆ. “ಎಲ್ಲಿಗೆ ಹೋಗುತ್ತೀರಿ? ಯಾಕೆ ಹೋಗುತ್ತೀರಿ? ಅಲ್ಲಿ ಏನು ನೋಡುತ್ತೀರಿ? ಯಾರಿದ್ದಾರೆ? ಎಷ್ಟು ಸಮಯ ನಿಲ್ಲುತ್ತೀರಿ?” ಯಂತಹ ಕೆಲವು ಸರಳ ಪ್ರಶ್ನೆಗಳನ್ನು ನಗು ನಗುತ್ತಾ ಕೇಳಿದಾಗ, ಅವರ ಇಂಗ್ಲಿಷ್ ಸರಿಯಾಗಿ ಅರ್ಥವಾಗದಿದ್ದರೂ ಪುನ: ಕೇಳಿಕೊಂಡು ಯಾವುದೇ ಆತಂಕವಿಲ್ಲದೆ ಸಲೀಸಾಗಿ ಉತ್ತರಿಸಿದೆವು. ನಮ್ಮ ಪಾಸ್ ಪೋರ್ಟ್ ನ್ನು ಅವರಲ್ಲಿ ಇರಿಸಿಕೊಂಡು ಉಳಿದವುಗಳನ್ನೆಲ್ಲ ಹಿಂತಿರುಗಿಸಿದರು. ಸುಮಾರು ಹತ್ತು ನಿಮಿಷಗಳ ಸಂವಾದದ ಕೊನೆಗೆ “ ಸರಿ, ಮಗಳಲ್ಲಿಗೆ ಹೋಗಿ ಆರು ತಿಂಗಳು ಇದ್ದು ಬನ್ನಿ. ಪಾಸ್ ಪೋರ್ಟ್ ನಿಮ್ಮಲ್ಲಿಗೆ ಕಳುಹಿಸಲಾಗುವುದು” ಎಂದಾಗಲೂ ನಾನು ಅಲ್ಲಿಂದ ಕದಲಲಿಲ್ಲ. ಯಾಕೆಂದರೆ ನನ್ನ ಊಹೆಯಂತೆ ಅದು ಸಂದರ್ಶನವೇ ಆಗಿರಲಿಲ್ಲ! ತೆರೆಯ ಮೇಲೆ ನಾವು ನೋಡುವಂತೆ; ಅದಕ್ಕಾಗಿಯೇ ದೊಡ್ಡದಾದ ಆಫೀಸ್ ಇರಬೇಕು.. ಅದೆಲ್ಲ ಇನ್ನು ಮುಂದಿದೆ.. ಸಂದರ್ಶನ ಇನ್ನು ಆಗಬೇಕಷ್ಟೆ ಎಂಬುದು ನನ್ನ ಎಣಿಕೆಯಾಗಿತ್ತು. ಇನ್ನು ಎಲ್ಲಿ ಹೋಗಬೇಕೆಂದು ಹಿಂದುಮುಂದು ನೋಡಿದಾಗ ಅಲ್ಲಿದ್ದ ಪೇದೆ, “ನೀವು ಹೋಗಿ ಅಮ್ಮ, ಸಂದರ್ಶನ ಮುಗಿಯಿತು” ಎಂದಾಗ ನಿಜಕ್ಕೂ ನಂಬಲಾಗಲಿಲ್ಲ! ನಾವು ಕಷ್ಟಪಟ್ಟು ತಂದ ಯಾವುದೇ ದಾಖಲೆಗಳನ್ನು ಪೂರ್ತಿಯಾಗಿ ನೋಡದೆ, ಕಂಠಪಾಠ ಮಾಡಿದ ಉತ್ತರಗಳಲ್ಲಿ ಎಲ್ಲವನ್ನೂ ಒಪ್ಪಿಸದೆ ನಾವು ಪಾಸಾಗಿದ್ದೆವು! ಆಮೇಲೆ ಎರಡು ವಾರಗಳಲ್ಲಿ ವೀಸಾ ನಮ್ಮ ಕೈಸೇರಿತು… ಅಂತೂ ಅಮೆರಿಕಕ್ಕೆ ಹೋಗುವ ಒಂದು ಹಂತವು ನಿರಾತಂಕವಾಯಿತು!
(ಮುಂದುವರಿಯುವುದು…..)
ಮುಂದಿನ ವಾರ ಅಮೆರಿಕಕ್ಕೆ ಹೊರಡೋಣವೇ?..
-ಶಂಕರಿ ಶರ್ಮ, ಪುತ್ತೂರು.
ಸವಿವರವಾದ ಬರಹ, ಸೊಗಸಾಗಿದೆ
ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
ಯಬ್ಬೋ ನನಗೇ ಓದಿ ಭಯವಾಯಿತಕ್ಕಾ ನಿಮ್ಮ ಕಂಠಪಾಠ ಮಾಡಿ ಎಲ್ಲಿ ಎಡವಿರೋ ಎಂದು …ಸದ್ಯ ಬಚಾವ್ ಪಾಸಾದಿರಲ್ಲಾ. ನೋಡ ನಿಮ್ಮ ಅಮೇರಿಕಾದ ಪ್ರವಾಸ ಕಥನದ ಮುಂದಿನ ಭಾಗಕ್ಕೆ ಕಾಯುವೆ ….
ಹೌದು ಆಶಾ…ಅಲ್ಲಿ ಹೆದರಿ ಪಡ್ಚ ನಾನು! ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು.
ಪ್ರವಾಸ ಹೋಗಲು ನೆಡೆಸಿದ ತಯಾರಿ ಬಹಳಷ್ಟು ಮಾಹಿತಿಗಳನ್ನು ಒಳಗೊಂಡು ಕುತೂಹಲದಿಂದ ಓದಿಸಿಕೊಂಡು ಹೋಯಿತು ಮೇಡಂ… ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
ನಾನೂ ಕಾಯಿತ್ತಿದ್ದೇನೆ ಅಕ್ಕಾ,,,ಸವಿಸ್ತಾರವಾಗಿ ಬರಹ ಕುತೂಹಲಕಾರಿಯಾಗಿದೆ
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ವಿದ್ಯಾ
ಮೇಡಂ ಅವರಿಗೆ.
ಪ್ರವಾಸದ ಸುಂದರವಾದ ಶುಭಾರಂಭವಾಯಿತು. ಮುಂದಿನ ಅಮೆರಿಕಾ ಪ್ರವಾಸದ ಅನುಭವಕ್ಕಾಗಿ ಕುತೂಹಲದಿಂದ ಮನ ಕಾಯುತ್ತಿದೆ.
ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು.
ಅಮೆರಿಕ ಪ್ರವಾಸ ಕಥನವು ಪ್ರಥಮ ಕಂತಿನಿಂದಲೇ ಕುತೂಹಲಕಾರಿಯಾಗಿದೆ. ಮುಂದಿನ ಕಂತಿಗೆ ಕಾತರದಿಂದ ಕಾಯುತ್ತೇನೆ.
ಬರಹವನ್ನು ಬಹಳ ಚಂದಕ್ಕೆ ಪ್ರಕಟಿಸಿ, ಮೆಚ್ಚಿ ಪ್ರೋತ್ಸಾಹಿಸುವ ಹೇಮಮಾಲಾ ಅವರಿಗೆ ಧನ್ಯವಾದಗಳು.
ನಿಮ್ಮ ಅನುಭವದ ಕಥನ ತುಂಬಾ ಕುತೂಹಲ ಕಾರಿಯಾಗಿ ನಿರೂಪಿಸಿದ್ದೀರಿ. ಮುಂದಿನ ಕಂತಿನ ನಿರೀಕ್ಷೆಯಲ್ಲಿ..