ಬದುಕಿನ ಭರವಸೆಯ ನೂರುದಾರಿ; ‘ಭುಜಂಗಯ್ಯನ ದಶಾವತಾರಗಳು’.

Share Button
ಶ್ರೀಕೃಷ್ಣ ಆಲನಹಳ್ಳಿ

ಬದುಕಿನ ಭರವಸೆಯ ನೂರುದಾರಿ ”ಭುಜಂಗಯ್ಯನ ದಶಾವತಾರಗಳು” (ಲೇ: ಶ್ರೀಕೃಷ್ಣ ಆಲನಹಳ್ಳಿ)

ಶ್ರೀಕೃಷ್ಣ ಆಲನಹಳ್ಳಿಯವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ 1947 ರಲ್ಲಿ ಜನಿಸಿದರು. ಇವರ ತಂದೆತಾಯಿಗಳು ಕೃಷಿಕರಾಗಿದ್ದು ಬಾಲ್ಯದಿಂದಲೇ ಶ್ರೀಕೃಷ್ಣರವರಿಗೆ ರೈತಾಪಿ ಕುಟುಂಬದ ಚಟುವಟಿಕೆಗಳ ಪರಿಚಯ ಚೆನ್ನಾಗಿತ್ತು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯವಾಗಿ ಪಡೆದು ಕಾಲೇಜು ವ್ಯಾಸಂಗಕ್ಕಾಗಿ ಮೈಸೂರು ಸೇರಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಎಂ.ಎ., ಸ್ನಾತಕೋತ್ತರ ಪದವಿಯನ್ನು ಪಡೆದರು. ಕೆಲವು ಕಾಲ ಅಧ್ಯಾಪಕರಾಗಿ ಮಹಾರಾಜಾ ಕಾಲೇಜು ಮತ್ತು ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನಂತರ ಪೂರ್ಣಾವಧಿಯ ಲೇಖಕರಾಗಿರಲು ನಿರ್ಧರಿಸಿದರು. ಕವಿತೆ, ಸಣ್ಣಕಥೆ, ಕಾದಂಬರಿ ಕ್ಷೇತ್ರಗಳಲ್ಲಿ ತಮ್ಮ ಬರಹಗಳಿಂದ ವಿಶಿಷ್ಟವಾದ ಗ್ರಾಮೀಣ ಪ್ರತಿಭೆಯೆಂದು ಗುರುತಿಸಿಕೊಂಡರು. ಇವರಿಗಿದ್ದ ಗ್ರಾಮ ಬದುಕಿನ ಅರಿವು ಸೂಕ್ಷ್ಮ ವಿವರಗಳೊಂದಿಗೆ ಕಥೆ, ಕಾದಂಬರಿ ಪಾತ್ರಗಳಲ್ಲಿ ಅಚ್ಚೊತ್ತಿದೆ. ಹೊಸದೇನನ್ನೋ ಸೃಜಿಸಿ ಸಾಧಿಸುವ ತಮ್ಮ ಪ್ರಯತ್ನದಲ್ಲಿ ಶ್ರೀಕೃಷ್ಣ ಸಾಕಷ್ಟು ಸಫಲರಾಗಿದ್ದರು. ಇವರ ಕಥಾ ಸಂಕಲನಗಳು, ಮತ್ತು ಕಾದಂಬರಿಗಳು ಓದುಗರಿಗೆ ಮೆಚ್ಚುಗೆಯಾದವು. ಅಲ್ಲದೆ ಕಾಡು, ಪರಸಂಗದ ಗೆಂಡೆತಿಮ್ಮ ಮತ್ತು ಭುಜಂಗಯ್ಯನ ದಶಾವತಾರಗಳು ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿ ಜನರ ಮನ್ನಣೆಗೆ ಪಾತ್ರವಾಗಿವೆ. ಹೀಗೆ ಕೃಷಿ, ಸಾಹಿತ್ಯ, ಪತ್ರಕೋದ್ಯಮ, ಚಲನಚಿತ್ರ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಶ್ರೀಕೃಷ್ನ ತಮ್ಮ ಕಿರಿಯ ವಯಸ್ಸಿನಲ್ಲಿಯೇ ವಿಧಿವಶರಾದುದು ದುರ್ದೈವದ ಸಂಗತಿ. ಇವರ ಕೃತಿಗಳು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

ಕಾದಂಬರಿ ‘ಭುಜಂಗಯ್ಯನ ದಶಾವತಾರಗಳು’:
ಕಾದಂಬರಿಯ ಮುಖ್ಯಪಾತ್ರವಾದ ಭುಜಂಗಯ್ಯ ಹೆಗ್ಗಡದೇವನಕೋಟೆ ಕಾಡಿನಂಚಿನಲ್ಲಿನ ಒಂದು ಪುಟ್ಟ ಗ್ರಾಮ ಮಾದಳ್ಳಿಯ ಸಾಧಾರಣ ರೈತ. ಇಲ್ಲಿ ತನಗಿದ್ದ ಮಳೆಯಾಶ್ರಿತ ಜಮೀನಿನಲ್ಲಿ ಕಷ್ಟಪಟ್ಟು ವ್ಯವಸಾಯ ಮಾಡುತ್ತ ತಾನು, ಹೆಂಡತಿ ಪಾರ್ವತಿ ಮತ್ತು ಮಕ್ಕಳೊಡನೆ ಅಲ್ಲಿಗಲ್ಲಿಗೆ ಆರ್ಥಿಕವಾಗಿ ಜೀವನ ಸಾಗಿಸುತ್ತಿರುತ್ತಾನೆ. ಗ್ರಾಮದಲ್ಲಿ ಪ್ರತಿಷ್ಠಿತರೆಂದರೆ ಹೆಚ್ಚು ಜಮೀನು, ಮತ್ತು ಹಣಕಾಸಿನಲ್ಲಿ ಉತ್ತಮರಾದ ಬೆರಳೆಕೆಯಷ್ಟು ಜನ. ಇವರಲ್ಲಿ ಊರಿನ ಹಿರಿಯರಾಗಿದ್ದ ಮತ್ತು ಪಂಚಾಯ್ತಿ ಮುಖ್ಯಸ್ಥರಾಗಿದ್ದ ವಂಶಪಾರಂಪರ್‍ಯವಾಗಿ ಗೌಡಿಕೆಯನ್ನು ಪಡೆದುಕೊಂಡಿದ್ದ ಕರೀಗೌಡರು. ಅವರ ತಮ್ಮನಾದ ಮುದ್ದೇಗೌಡರು ಮಾದಳ್ಳಿಗೆ ಸಮೀಪದಲ್ಲೇ ಇದ್ದ ಮುದ್ದಯ್ಯನ ಹುಂಡಿಯ ಜಮೀನುದಾರರು. ಇವರು ಅಣ್ಣನ ಆಜ್ಞಾನುವರ್ತಿಗಳು. ಊರನಲ್ಲಿ ಗೌಡರದೇ ಪ್ರಬಲ ಕೋಮು. ಲಿಂಗಾಯತರಲ್ಲಿ ರುದ್ರಪ್ಪ ಸಾಹುಕಾರನೆಂದು ಕರೆಸಿಕೊಳ್ಳುವ ಇನ್ನೊಬ್ಬ ಗಟ್ಟಿಕುಳ. ಅವರ ಕೋಮಿಗೆ ಸೇರಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅನ್ಯರೂ ಇದ್ದರೂ ಅವರೆಲ್ಲ ಒಂದಲ್ಲ ಒಂದು ಗುಂಪಿಗೆ ಅನುಯಾಯಿಗಳಾಗಿದ್ದರು.

ಭುಜಂಗಯ್ಯ ಊರಿನಲ್ಲಿ ಸಾಮಾನ್ಯವಾಗಿ ಎಲ್ಲರೊಡನೆ ವಿಶ್ವಾಸದಿಂದ ಇದ್ದವನು. ಅವನು ಒಳ್ಳೆಯ ಸಂಘಟಕನಾಗಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಊರಿನಲ್ಲಿ ಮಳೆಬಾರದೆ ಬರಗಾಲ ಬಿದ್ದಾಗ ಗ್ರಾಮದ ನಂಬಿಕೆಯ ದೈವ ಹುಲಿಕಂತ್ಯನ ಪರ ಆಚರಿಸಿ ಮಳೆಗಾಗಿ ಪ್ರಾರ್ಥನೆ ಮಾಡಿಸುತ್ತಿದ್ದನು. ಹೀಗಾಗಿ ಅವನ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಮಾನ್ಯ ಮಾಡುತ್ತಿದ್ದರು. ಇಂತಹ ಒಂದು ಬರಗಾಲದ ಬೇಸಗೆಯಲ್ಲಿ ಊರಮುಂದೆ ಕೂಡುರಸ್ತೆಯ ಬಳಿ ಬಸ್ಸು ನಿಲ್ಲುವ ಸ್ಥಳದಲ್ಲಿ ಯಾರೋ ಪರವೂರಿನವರೊಬ್ಬರು ಹೇಳಿದಂತೆ ಒಂದು ಹೋಟೆಲು ತೆರೆಯಲು ಭುಜಂಗಯ್ಯ ಮುಂದಾಗುತ್ತಾನೆ. ಮೊದಲು ಅವನ ಪಂಗಡದ ಜನಗಳು, ಅವನ ಪತ್ನಿ, ಅವನ ಮಾವ ಎಲ್ಲರೂ ಆ ಕೆಲಸವನ್ನು ಅವಮಾನಕರವೆಂದು ವಿರೋಧಿಸುತ್ತಾರೆ. ಆದರೆ ಭುಜಂಗಯ್ಯ ಸಾಹಸಿ ಮತ್ತು ಪ್ರಯೋಗಶೀಲ. ಎಲ್ಲ ವಿರೋಧಗಳ ನಡುವೆ ಹೋಟೆಲನ್ನು ತೆರೆದು ಅದೇ ಜನರು ಭೇಷ್ ಎನ್ನುವಂತೆ ಸಂಪಾದನೆಯನ್ನೂ ಮಾಡುತ್ತಾನೆ. ಅವನ ಹಣಕಾಸು ಪರಿಸ್ಥಿತಿ ಉತ್ತಮಗೊಂಡಾಗ ಅವನನ್ನು ಪ್ರಶಂಸಿಸುವವರಿದ್ದರೂ ಕಂಡು ಕರುಬುವವರೂ ಗ್ರಾಮದಲ್ಲಿ ಇರುತ್ತಾರೆ.

ಅವನ ಸಾಂಸಾರಿಕ ಪರಿಸ್ಥಿತಿಯು ಉತ್ತಮವಾಗಿದ್ದರೂ ಹೆಂಡತಿ ಜಕ್ಕಳ್ಳಿಯ ಅನುಕೂಲಸ್ಥರ ಮಗಳಾದ್ದರಿಂದ ಸ್ವಭಾವತಃ ಗಯ್ಯಾಳಿ, ಜಗಳಗಂಟಿಯಾಗಿ ಆಗಾಗ ಅವರಿಬ್ಬರ ನಡುವೆ ಜಗಳ, ಬಡಿದಾಟ ಇದ್ದೇ ಇರುತ್ತದೆ. ಊರಿನ ಗೌಡರು ಕರೀಗೌಡರು ಮಾತ್ರ ಭುಜಂಗಯ್ಯನ ಅಭಿಮಾನಿ ಮತ್ತು ಹಿತಚಿಂತಕರಾಗಿರುತ್ತಾರೆ.

ಬದಲಾದ ಪರಿಸ್ಥಿತಿಯಲ್ಲಿ ಭುಜಂಗಯ್ಯ ಹುಂಡಿಯ ಹಾದಿಯಲ್ಲಿ ಕೆರೆ ಅಂಚಿನ ಒಂದು ಜಮೀನನ್ನೂ ಮುದ್ದೇಗೌಡರ ನೆರವಿನಿಂದ ಖರೀದಿಸಿ ಅಲ್ಲಿಯೂ ಕೃಷಿಮಾಡಿ ಹೆಚ್ಚಿನ ಲಾಭ ಪಡೆದಾಗ ಊರಿನಲ್ಲಿದ್ದ ಅವನ ವಿರೊಧಿಗಳ ಅಸಹನೆ ಹೆಚ್ಚಾಗುತ್ತದೆ. ಭುಜಂಗಯ್ಯ ಏನೇ ಮಾಡಿದರೂ ಶ್ರಮವಹಿಸಿ ಅದರಲ್ಲಿ ತೊಡಗುತ್ತಾನೆ. ಆದರೆ ಅವನಲ್ಲಿ ಎಲ್ಲರೂ ಮೆಚ್ಚುವಂತಹ ಗುಣಗಳೇ ಹೆಚ್ಚಿದ್ದರೂ ಕೆಲವು ದೌರ್ಬಲ್ಯಗಳಿರುತ್ತವೆ. ತನ್ನ ಹೋಟೆಲಿನ ಕೋಣೆಯಲ್ಲಿ ಹಲವಾರು ಗೆಳೆಯರ ಗುಂಪು ಸೇರಿಸಿಕೊಂಡು ಇಸ್ಪೀಟು ಆಡುವ ಚಪಲವಿರುತ್ತದೆ. ಇದು ಅತಿಯಾಗಿ ಕೆಲವು ಸಾರಿ ಅದರ ಸಲುವಾಗಿಯೇ ಮನೆಯಲ್ಲಿ ಮನಸ್ತಾಪಗಳಾಗುತ್ತವೆ. ಇಂತಹ ಒಂದು ಕೂಟದ ದೆಸೆಯಿಂದ ಖಾಯಂ ಗಿರಾಕಿಗಳಾದ ಮೈಸೂರಿನಿಂದ ಬರುತ್ತಿದ್ದ ಬಳೆಶೆಟ್ಟರು ಇವನ ಹೋಟೆಲಿನಲ್ಲೇ ಆಗೀಗ ತಂಗುವಂತಾಗುತ್ತದೆ.

ಊರಿನಲ್ಲಿ ಒಳ್ಳೆಯ ಸುಗ್ಗಿ ನಡೆದಾಗ ಜನರೆಲ್ಲ ಸಂತೋಷವಾಗಿದ್ದು ಒಂದು ನಾಟಕ ಮಾಡಲು ಉತ್ಸಾಹಿತರಾಗುತ್ತಾರೆ. ಮತ್ತೆ ಭುಜಂಗಯ್ಯನೇ ಸಂಘಟಕನಾಗಿ ನಾಟಕ ಕಲಿಸುವ ಮೇಷ್ಟರನ್ನು ಗೊತ್ತುಮಾಡುವುದರೊಂದಿಗೆ ಪ್ರಾಕ್ಟೀಸಿಗೆ ವ್ಯವಸ್ಥೆ, ಸಂಬಂಧಪಟ್ಟ ಸಾಮಾನು ಸರಂಜಾಮುಗಳನ್ನು ಮಂಡ್ಯದಿಂದ ತಂದು ಅದ್ದೂರಿಯಾಗಿ ನಾಟಕವನ್ನು ಯಶಸ್ವಿಯಾಗಿ ಮಾಡಿ ಗಾಮ್ರಸ್ಥರಿಂದ ಮೆಚ್ಚುಗೆ ಗಳಿಸುತ್ತಾನೆ. ಆದರೆ ಅದೇ ಸಮಯದಲ್ಲಿ ಸಾಂದರ್ಭಿಕವಾಗಿ ಬಳೆಶೆಟ್ಟರ ಪುತ್ರಿ ಸುಶೀಲಳ ಸೆಳೆತಕ್ಕೆ ಒಳಗಾಗುತ್ತಾನೆ. ಇದರಿಂದಾಗಿ ಅವನ ಸಾಂಸಾರಿಕ ಜೀವನದಲ್ಲಿ ಚಂಡಮಾರುತವೇ ಬೀಸಿ ಹೆಂಡತಿ ತವರು ಮನೆ ಸೇರುತ್ತಾಳೆ. ಮಾವ ಅಳಿಯನ ನಡುವೆ ಬಿರುಸಾದ ಮಾತುಕತೆ, ಪಂಚಾಯ್ತಿ ನಡೆದು ಪಾರ್ವತಿಯ ಮಕ್ಕಳ ಹೆಸರಿಗೆ ಭುಜಂಗಯ್ಯನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಸಂಪೂರ್ಣ ಆಸ್ತಿಯನ್ನು ಬರೆದುಕೊಡಬೇಕಾಗುತ್ತದೆ. ಇದರಿಂದ ಭುಜಂಗಯ್ಯ ಮತ್ತು ಪಾರ್ವತಿಯ ಸಂಬಂಧ ಪೂರ್ತಿ ಹಳಸಿಕೊಳ್ಳುತ್ತದೆ. ಆತನ ಶಕ್ತಿಯಾಗಿದ್ದ ತಾಯಿ ದೇವೀರಮ್ಮನೂ ತೀರಿದಾಗ ಅವನ ಬದುಕೇ ಶೂನ್ಯವಾಗುತ್ತದೆ.

ಭುಜಂಗಯ್ಯ ನೆಲ ಕಚ್ಚಿದ ಎಂದುಕೊಳ್ಳುವಷ್ಟರಲ್ಲಿ ಅವನು ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಾನೆ. ಬೇರೆ ಜಾತಿಯವಳಾದ ಸುಶೀಲಳನ್ನು ಮದುವೆಯಾಗಿ ದೇವನೂರಿನ ಮಠದ ಸ್ವಾಮಿಗಳಿಂದ ಆಕೆಗೆ ಲಿಂಗಧಾರಣೆ ಮಾಡಿಸಿ ತನ್ನ ಜಾತಿಯ ವಿರೋಧಿಗಳಿಗೆ ಸವಾಲಾಗುವಂತೆ ಸಂಸಾರ ನಡೆಸುತ್ತಾನೆ. ಕೆಲವು ಆತ್ಮೀಯರು ಅವನ ಬೆನ್ನಿಗೆ ನಿಲ್ಲುತ್ತಾರೆ. ಹೊಸ ಜಮೀನಿನಲ್ಲಿ ತೋಟ ಮಾಡುವ ಹುಮ್ಮಸ್ಸು ಬಂದು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದು ಬಾವಿ ತೆಗೆಸುತ್ತಾನೆ. ಇದರಿಂದ ಮತ್ತೆಮತ್ತೆ ಬರಗಾಲ ಬಂದಾಗಲೂ ವ್ಯವಸಾಯಕ್ಕೆ ತೋದರೆಯಾಗದೆಂದು ಆಲೋಚಿಸಿ ಇಡೀ ಗ್ರಾಮದಲ್ಲಿ ಮೊಟ್ಟ ಮೊದಲನೆಯವನಾಗಿ ಇಂತಹ ಪ್ರಯೋಗಕ್ಕೆ ಮುಂದಾಗುತ್ತಾನೆ. ಅವನು ಯಶಸ್ಸನ್ನು ಕಂಡು ಮುದ್ದೇಗೌಡರಾದಿಯಾಗಿ ಪ್ರೇರಣೆ ಹೊಂದಿ ಊರಿನಲ್ಲಿ ಅವನನ್ನೇ ಮುಂದಾಳಾಗಿಟ್ಟುಕೊಂಡು ಹಲವರು ಬಾವಿ ತೆಗೆಸುವ ಪ್ರಯತ್ನ ಮಾಡುತ್ತಾರೆ. ಅವರಿಗೆಲ್ಲ ಸೂಕ್ತ ಮಾರ್ಗದರ್ಶನ ಭುಜಂಗಯ್ಯನದ್ದೇ.

ಭುಜಂಗಯ್ಯನಿಗೆ ಕರಗತವಾಗಿದ್ದ ಮತ್ತೊಂದು ವಿದ್ಯೆಯೆಂದರೆ ಹಾವು ಕಚ್ಚಿದವರಿಗೆ ಚಿಕಿತ್ಸೆ ಮಾಡುವುದು. ಅವನು ಯಾವುದೋ ಹಸಿರು ಔಷಧಿಯನ್ನು ಕಂಡುಕೊಂಡಿದ್ದ. ಅದನ್ನು ಸಂಗ್ರಹಿಸಿ ತಂದು ಒಣಗಿಸಿ ಪುಡಿಮಾಡಿ ಸೋರೆಬುರುಡೆಯೊಂದರಲ್ಲಿ ಇಡುತ್ತಿದ್ದ. ಇದರಿಂದಾಗಿ ಅವನು ಸಂಕಷ್ಟ ಸಮಯದಲ್ಲಿ ಎಲ್ಲರಿಗೂ ಆಪದ್ಬಾಂಧವನಾಗಿದ್ದ. ಅವನ ಮುಖ್ಯ ಹಿತೈಷಿಗಳಾಗಿದ್ದ ಕರಿಗೌಡರಿಗೇ ಒಮ್ಮೆ ಹಾವು ಕಡಿದು ಅವರ ಸ್ಥಿತಿ ಚಿಂತಾಜನಕವಾಗಿತ್ತು. ಭುಜಂಗಯ್ಯ ತನ್ನ ಚಿಕತ್ಸೆಯಿಂದ ಅವರನ್ನು ಸಾವಿನ ದವಡೆಯಿಂದ ಬಚಾವು ಮಾಡಿದ. ಇದರಿಂದಾಗಿ ಅವರಿಬ್ಬರ ನಡುವಿನ ವಿಶ್ವಾಸ ಮತ್ತಷ್ಟು ಗಟ್ಟಿಗೊಂಡಿತು.

ಭುಜಂಗಯ್ಯನಿಗೆ ಬಾಲ್ಯಕಾಲದಲ್ಲಿ ಕೂಲಿಮಠದಲ್ಲಿ ವಿದ್ಯಾಭ್ಯಾಸವಾಗಿದ್ದು ಗುರುಗಳಿಂದ ಮತ್ತು ಊರಿಗೆ ಭಿಕ್ಷೆಗೆಂದು ಬರುತ್ತಿದ್ದ ತಂಬೂರಿ ಅಯ್ಯನವರಿಂದ ಅಲ್ಪಸ್ವಲ್ಪ ತತ್ವಜಾನದ ಆಸಕ್ತಿ ಕೂಡ ಬೆಳೆದಿತ್ತು. ತಾನು ಎಷ್ಟೊ ಸಾರಿ ಕಾಲದ ಅರಿವೇ ಇಲ್ಲದಂತೆ ಅಯ್ಯನವರಿಂದ ತತ್ವಪದಗಳನ್ನು, ಶರಣರ ವಚನಗಳನ್ನು ಹಾಡಿಸಿ ಅದರಲ್ಲಿ ತನ್ಮಯನಾಗಿಬಿಡುತ್ತಿದ್ದ. ಮನೆಯಲ್ಲಿ ಶಿವಪೂಜೆ, ಧ್ಯಾನದಲ್ಲೂ ಅವನ ಮನಸ್ಸು ಭಕ್ತಿಯಲ್ಲಿ ಲೀನವಾಗುತ್ತಿತ್ತು.

ಒಮ್ಮೆ ಅಚಾತುರ್ಯದಿಂದ ಹೋಟೆಲಿನಲ್ಲಿ ಕೆಲಸ ಮಾಡುವ ಹುಡುಗ ಹರಿಜನರಿಗೆ ಕೊಟ್ಟ ತಟ್ಟೆಬಟ್ಟಲುಗಳನ್ನು ಕುಲೀನರಿಗೆ ತಿಂಡಿತೀರ್ಥ ನೀಡಿದ ಪಾತ್ರೆಗಳೊಂದಿಗೆ ಸೇರಿಸಿ ತೊಳೆದಿಟ್ಟನೆಂದು ಒಬ್ಬರು ಆರೋಪಿಸಿದರು. ಇದನ್ನು ಕಾರಣವಾಗಿಸಿಕೊಂಡು ಭುಜಂಗಯ್ಯನ ವಿರೋಧಿಗಳ ಗುಂಪು ತಮ್ಮ ಜಾತಿಕುಲಗಳನ್ನು ಕೆಡಿಸಿದನೆಂದು ಅವನ ವಿರುದ್ಧ ಧಂಗೆಯೆದ್ದು ಅವನಿಗೆ ಹೊಡೆದು ಅವನ ಹೋಟೆಲನ್ನು ಸಂಪೂರ್ಣವಾಗಿ ಸುಟ್ಟು ಹಾಕುತ್ತಾರೆ. ಅವನಿಗೆ ನಿಲ್ಲಲೂ ನೆಲೆಯಿಲ್ಲದಂತೆ ಮಾಡುತ್ತಾರೆ. ಆಗ ಹೊತ್ತಿದ ವೈಷಮ್ಯದ ಫಲವಾಗಿ ಪೋಲೀಸಿನವರು ಗ್ರಾಮಕ್ಕಾಗಮಿಸಿ ರುದ್ರಪ್ಪನನ್ನೂ ಸೇರಿ ಕೆಲವರನ್ನು ಸ್ಟೇಷನ್ನಿಗೂ ಕರೆದುಕೊಂಡು ಹೋಗುತ್ತಾರೆ. ಕೊನೆಗೆ ಕರೀಗೌಡರೇ ತಮ್ಮ ಹೊಸಮನೆಯ ಒಪ್ಪಾರಿನಲ್ಲಿ ಅವನಿಗೆ ಇರಲು ಅವಕಾಶ ಮಾಡಿಕೊಡುತ್ತಾರೆ. ಮತ್ತು ಅಪರಾಧಿಗಳ ವಿರುದ್ಧ ಕೊಟ್ಟಿದ್ದ ಕಂಪ್ಲೇಂಟನ್ನು ಹಿಂಪಡೆಯಲು ಭುಜಂಗಯ್ಯನ ಮನವೊಲಿಸುತ್ತಾರೆ.

ಮತ್ತೊಂದು ಬರಗಾಲದಲ್ಲಿ ಸರ್ಕಾರ ಕೈಗೊಂಡ ಪರಿಹಾರ ಕಾಮಗಾರಿಗಳ ಕೆಲಸಗಳನ್ನು ನಿರ್ವಹಿಸುವ ಗುತ್ತಿಗೆ ಹಿಡಿದ ನರಸಿಂಹಯ್ಯ ಮಾದಳ್ಳಿಗೆ ಬಂದಾಗ ಆಳುಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ಭುಜಂಗಯ್ಯನಿಗೆ ವಹಿಸುತ್ತಾನೆ. ಭುಜಂಗಯ್ಯನ ನಿಷ್ಠೆಯನ್ನು ಮೆಚ್ಚಿದ ಕಾರಣ ಅವರಿಬ್ಬರ ಗೆಳೆತನ ಪ್ರಾರಂಭವಾಗಿ ಇದರಿಂದ ಅವನನ್ನೇ ಕೆಲಸದ ಮೇಸ್ತ್ರಿಯಾಗಿ ಮಾಡಿಕೊಳ್ಳುತ್ತಾನೆ. ಕೆಲಸದ ಅನುಭವ ಪಡೆದುಕೊಂಡ ಭುಜಂಗಯ್ಯನ ಮನಸ್ಸು ಮತ್ತೊಂದು ಸಾಹಸಕ್ಕೆ ಕೈಹಾಕುತ್ತದೆ. ಅವನೇ ಸಣ್ಣಪುಟ್ಟ ಗುತ್ತಿಗೆ ಹಿಡಿದು ಸ್ವತಂತ್ರ ಕಂಟ್ರಾಕ್ಟರಾಗಿ ಕೆಲಸ ಮಾಡಿಸುತ್ತಾನೆ. ಇದರಲ್ಲಿ ಒಳ್ಳೆಯ ಆದಾಯ ಗಳಿಸಿ ತಾನು ಇರಲು ಸ್ವಂತದ್ದಾದ ಒಂದು ಪುಟ್ಟ ಮನೆಯನ್ನೂ ಹೊಸದಾಗಿ ಕಟ್ಟಿಕೊಳ್ಳುತ್ತಾನೆ. ಸುಶೀಲಳೊಡನೆ ಅದೇ ಮನೆಯಲ್ಲಿ ಸಂಸಾರ ನಡೆಸುತ್ತಾನೆ. ಊರಿನವರೂ ಅವರನ್ನು ಸಾಕಷ್ಟು ರೀತಿಯಲ್ಲಿ ಹೊಂದಿಕೊಳ್ಳುತ್ತಾರೆ.
ಗುತ್ತಿಗೆ ಕೆಲಸಗಳಿಂದ ಗಳಿಸಿದ ಲಾಭದಿಂದ ಪ್ರೋತ್ಸಾಹಿತನಾಗಿ ತನ್ನಳವಿಗೆ ದೊಡ್ಡದಾದ ಕೆರೆ ದುರಸ್ತಿ ಕಂಟ್ರಾಕ್ಟ್ ಒಂದನ್ನು ಹಿಡಿಯುತ್ತಾನೆ. ಹಲವಾರು ಕಡೆಗಳಲ್ಲಿ ಅವನ ಗುತ್ತಿಗೆಯ ಕೆಲಸಗಳು ನಡೆಯುತ್ತಿರುವಾಗ ಒಬ್ಬನೇ ನಿಗಾ ವಹಿಸಲಾಗದ್ದರಿಂದ ಸಹಾಯಕ್ಕೆ ವೆಂಕಟದಾಸಿ ಎಂಬುವನನ್ನು ಮೇಸ್ತ್ರಿಯನ್ನಾಗಿ ಮಾಡಿಕೊಳ್ಳುತ್ತಾನೆ. ಕೆಲವು ಕಾಲ ಎಲ್ಲವೂ ಕ್ರಮವಾಗಿ ನಡೆಯುತ್ತದೆ. ಕೃಷಿಯನ್ನೂ ನಿರ್ಲಕ್ಷಿಸದೆ ಭುಜಂಗಯ್ಯ ಹೊಸದಾಗಿ ತೋಟಮಾಡಿದ್ದ ಜಮೀನಿನಲ್ಲಿ ಅದರ ಉಸ್ತುವಾರಿಗಾಗಿ ಅನುಭವಿ ಕಾಳಿಮುತ್ತು ಎಂಬುವನ ಕುಟುಂಬವನ್ನು ತಂದು ಅಲ್ಲೇ ವಾಸ್ತವ್ಯ ಮಾಡಿಸಿ ತೋಟವನ್ನು ಮೊದಲಿಗಿಂತ ಅಭಿವೃದ್ಧಿಗೊಳಿಸುತ್ತಾನೆ. ಆ ಕಾಲವೊಂದು ಭುಜಂಗಯ್ಯನ ಜೀವನದಲ್ಲಿ ಅತ್ಯಂತ ತೃಪ್ತಿಯ ಅವಧಿ.

ನಂತರ ಸುಶೀಲಳು ಮಗುವೊಂದನ್ನು ಹೆತ್ತು ಹೆರಿಗೆಯಲ್ಲೇ ಅದು ಸತ್ತು ಅವಳ ಸ್ಥಿತಿ ಅತ್ಯಂತ ಆತಂಕಕಾರಿಯಾಗುತ್ತದೆ. ಅವಳ ಆರೈಕೆಯಲ್ಲಿ ಭುಜಂಗಯ್ಯ ಬಹಳ ಕಾಲ ಕಳೆಯಬೇಕಾಗಿ ಬರುತ್ತದೆ. ತನ್ನ ಕೆಲಸಗಳ ಬಗ್ಗೆ ತಿರುಗಿ ನೋಡಲೂ ಬಿಡುವಾಗುವುದಿಲ್ಲ. ಅಂತೂ ಸುಶೀಲ ಸುಧಾರಿಸಿಕೊಂಡಳೆನ್ನುವಾಗ ಬರಸಿಡಿಲಿನಂತೆ ಮೇಸ್ತ್ರಿಯಾಗಿದ್ದ ವೆಂಕಟದಾಸಿ ದೊಡ್ಡ ಮೊತ್ತದ ಹಣವನ್ನು ಹೊತ್ತುಕೊಂಡು ಇವನಿಗೆ ಕೈಕೊಟ್ಟು ಪರಾರಿಯಾದನೆಂಬ ಸುದ್ಧಿ ತಿಳಿಯುತ್ತದೆ. ಇದರಿಂದ ಭೂಮಿಗೇ ಇಳಿದುಹೋದ ಭುಜಂಗಯ್ಯ ಕೆಲವು ಕಾಲದ ನಂತರ ಸುಧಾರಿಸಿಕೊಂಡು ತೋಟದ ಕಡೆ ಗಮನ ಹರಿಸಲು ತನ್ನ ಕೈಯಲ್ಲಿದ್ದ ಕಂಟ್ರಾಕ್ಟ್ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ ಕೈತೊಳೆದು ಕೊಳ್ಳಬೇಕೆಂದು ನಿರ್ಧರಿಸುತ್ತಾನೆ. ಈ ಮಧ್ಯೆ ತೋಟ ನೋಡಿಕೊಳ್ಳುತ್ತಿದ್ದ ಕಾಳಿಮುತ್ತುವನ್ನು ರುದ್ರಪ್ಪ ಹೆಚ್ಚು ಆಮಿಷಗಳನ್ನೊಡ್ಡಿ ತನ್ನ ಕಡೆಗೆ ಸೆಳೆದುಕೊಂಡುಬಿಡುತ್ತಾನೆ. ಇದರಿಂದ ಭುಜಂಗಯ್ಯನ ಕೈ ಮುರಿದಂತಾಗುತ್ತದೆ. ಅನೇಕರಿಗೆ ಬಾವಿ ತೆಗೆಸಿಕೊಡುವ ಕೆಲಸಗಳನ್ನು ಒಪ್ಪಿಕೊಂಡಿದ್ದು ಅವೆಲ್ಲವನ್ನೂ ಮಳೆಗಾಲ ಬರುವುದರೊಳಗೇ ಪೂರ್ಣಗೊಳಿಸಬೇಕೆಂಬ ಆತುರದಿಂದ ಒಮ್ಮೆ ಬಂಡೆ ಸಿಡಿಸುವ ಕೆಲಸವನ್ನು ಬ್ಲಾಸ್ಟರ್ ಗವರಯ್ಯ ಬರದಿದ್ದಾಗ ತಾನೇ ಸಿಡಿಮದ್ದು ಇಡುವ ಪ್ರಯತ್ನ ಮಾಡುತ್ತಾನೆ. ಅದು ಅಪಾಯಕಾರಿಯಾಗಿ ಸಿಡಿದು ಭುಜಂಗಯ್ಯನ ಮುಖವೆಲ್ಲ ಸುಟ್ಟು ಹೋಗುತ್ತದೆ. ಅವನು ಜೀವಸಹಿತ ಉಳಿದದ್ದೇ ಹೆಚ್ಚಾಗಿ ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ. ಸುಶೀಲಳ ಅವಿರತ ಸೇವೆಯಿಂದ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮಾದಳ್ಳಿಗೆ ಬಂದು ಸೇರುತ್ತಾನೆ. ಮುಂದಿನ ಬಾಳು ಹೀಗೆ ಅಂಧಕಾರವಾಗಿ ಏನುಗತಿ ಎಂದು ಆಲೋಚಿಸುತ್ತಿರುವಾಗ ಬಾವಿ ತೆಗೆಸುವ ಕೆಲಸಕ್ಕಾಗಿ ಅವನಿಗೆ ಮುಂಗಡ ಕೊಟ್ಟಿದ್ದ ಹಲವರು ತಮ್ಮ ಹಣ ಹಿಂದಿರುಗಿಸುವಂತೆ ವರಾತ ಹಚ್ಚುತ್ತಾರೆ. ಅವನ ಪರವಾಗಿ ಎಂದಿನಂತೆ ನಿಲ್ಲುತ್ತಿದ್ದ ಕರೀಗೌಡರು ಗತಿಸಿದ್ದರಿಂದ ಅವನಿಗೆ ದಿಕ್ಕೇ ತೋಚದಂತಾಗುತ್ತದೆ. ಆಗ ಅವನು ಆಲೋಚಿಸಿ ತನ್ನದೆಂಬ ಏಕೈಕ ಆಸ್ತಿಯಾದ ತೋಟವನ್ನು ಮಾರಿಬಿಡಲು ತೀರ್ಮಾನಿಸುತ್ತಾನೆ. ಅವನ ಹಿತೈಷಿಗಳಾದ ಮುದ್ದೇಗೌಡರು ಎಷ್ಟೇ ಬುದ್ಧಿಹೇಳಿದರೂ ತನ್ನ ತೀರ್ಮಾನವನ್ನು ಬದಲಿಸದೆ ತೋಟವನ್ನು ಅವರಿಗೇ ಕ್ರಯಮಾಡಿ ಬಂದ ಹಣದಿಂದ ಕೊಡಬೇಕಾದವರಿಗೆ ಎಲ್ಲ ಬಾಕಿಯನ್ನೂ ತೀರಿಸಿ ನಿರಾಳವಾಗುತ್ತಾನೆ. ಬದುಕಿಗೆ ಬೇಕಾದ ಆವಶ್ಯಕತೆಗಳಿಗಾಗಿ ಸುಶೀಲ ಗಂಡನಿಗೆ ಒತ್ತಾಸೆಯಾಗಿ ತನಗೆ ತಿಳಿದಿದ್ದ ಬಳೆ ಮಾರುವ ಉದ್ಯೋಗವನ್ನು ಮತ್ತೆ ಪ್ರಾರಂಭಿಸುತ್ತಾಳೆ. ಇದರಿಂದ ದೈನಂದಿನ ಖರ್ಚುವೆಚ್ಚಗಳನ್ನು ಸರಿದೂಗಿಸುತ್ತಾಳೆ. ಅಷ್ಟುಹೊತ್ತಿಗೆ ಭುಜಂಗಯ್ಯ ತತ್ವಚಿಂತನೆಯಲ್ಲಿ ಹೆಚ್ಚಾಗಿ ಮುಳುಗುತ್ತಾನೆ. ಹಾಡು ಅವನ ಅವಿಭಾಜ್ಯ ಚಟುವಟಿಕೆಯಾಗಿ ತಂಬೂರಿ ಅಯ್ಯನವರಿಂದ ಒಡೆದುಕೊಂಡಿದ್ದ ತಂಬೂರಿ ನುಡಿಸುತ್ತಾ ದಿನವೆಲ್ಲ ತನಗೆ ತಾನೇ ಹಾಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತಾನೆ.

ದೈವಕ್ಕೆ ಇದೂ ತೃಪ್ತಿಯಾಗುವುದಿಲ್ಲ. ಒಮ್ಮೆ ಮುಸ್ಸಂಜೆಯ ಹೊತ್ತಿನಲ್ಲಿ ಹುಂಡಿಯಿಂದ ಹಿಂದಿರುಗುತ್ತಿದ್ದ ಸುಶೀಲಳನ್ನು ಗೌಡರ ಕೊನೆಯ ಮಗ ಲಂಪಟ ನಾರಾಯಣ ಅಡ್ಡಹಾಕಿ ಬಲಾತ್ಕರಿಸುತ್ತಾನೆ. ಹಿಂದೊಮ್ಮೆ ಅವಳಿಂದ ತಿರಸ್ಕರಿಸಲ್ಪಟ್ಟ ಅವನು ಸೇಡು ತೀರಿಸಿಕೊಳ್ಳುವಂತೆ ಅಸಹಾಯಕ ಸ್ಥಿತಿಯಲ್ಲಿದ್ದ ಅವಳ ಶೀಲ ಹರಣಮಾಡುತ್ತಾನೆ. ಮನೆಗೆ ಹಿಂತಿರುಗಿದ ಅವಳಿಂದ ವಿಷಯ ತಿಳಿದ ಭುಜಂಗಯ್ಯನು ಇನ್ನಷ್ಟು ಅಂತರ್ಮುಖಿಯಾಗಿಬಿಡುತ್ತಾನೆ. ಅಂದಿನಿಂದ ತಾನೇ ಕಾವಿ ಉಡುಗೆತೊಟ್ಟು ತಂಬೂರಿ ಹಿಡಿದು ಮನೆಗಳಿಗೆ ಹಾಡುತ್ತಾ ಭಿಕ್ಷಾಟನೆಗೆ ಪ್ರಾರಂಭಿಸುತ್ತಾನೆ. ಅದರಿಂದ ಬಂದದ್ದರಲ್ಲಿ ಕಾಲಹಾಕುತ್ತಾರೆ. ಆ ಪರಿಸ್ಥಿತಿಯಲ್ಲೂ ಕ್ರಿಯಾಶೀಲನಾಗಿ ಹೊಸ ಮಾರ್ಗವನ್ನು ಕಂಡುಕೊಂಡ ಭುಜಂಗಯ್ಯನ ಸಾಹಸವನ್ನು ಗಮನಿಸಿದ ಎಲ್ಲರೂ, ಅವನ ವಿರೋಧಿಗಳೂ ಸೇರಿ ಅವನ ಬಗ್ಗೆ ಅನುಕಂಪ ತೋರುತ್ತಾರೆ. ಅವನನ್ನು ಒಬ್ಬ ಸಂತನೆಂದೇ ಭಾವಿಸುತ್ತಾರೆ.

ಒಮ್ಮೆ ಸುಶೀಲಳ ಸರ್ವವನ್ನೂ ಹಾಳುಮಾಡಿದ ನಾರಾಯಣನಿಗೆ ಹಾವುಕಚ್ಚಿದ ವಾರ್ತೆಯನ್ನು ಅವನ ಅಣ್ಣ ಶಂಕರ ಭುಜಂಗಯ್ಯನಿಗೆ ತಿಳಿಸಿ ಅವನ ನೆರವನ್ನು ಕೋರುತ್ತಾನೆ. ಭುಜಂಗಯ್ಯ ಬಹಳ ದಿನಗಳಿಂದ ಔಷಧಿಯನ್ನು ಸಂಗ್ರಹಿಸದೇ ಇದ್ದುದರಿಂದ ಅವನಲ್ಲಿದ್ದ ಸೋರೆಬುರುಡೆ ಖಾಲಿಯಾಗಿರುತ್ತದೆ. ಆದರೂ ಅತ್ಯಂತ ಮಾನವೀಯ ದೃಷ್ಟಿಯಿಂದ ದೇವರಮೇಲೆ ಭಾರಹಾಕಿ ನಾರಾಯಣನ ಚಿಕಿತ್ಸೆಗೆ ಮುಂದಾಗುತ್ತಾನೆ. ವಿಷವನ್ನು ಗಾಯದಿಂದ ತನ್ನ ಬಾಯಿಹಾಕಿ ಹೀರಿ ಹೊರತೆಗೆದು ತನ್ನಲ್ಲಿದ್ದ ಅಲ್ಪಪ್ರಮಾಣದ ಔಷಧಿಯ ಪುಡಿಯನ್ನು ನಾರಾಯಣನಿಗೆ ಕುಡಿಸಿ ಅವನನ್ನು ಸಾವಿನ ದವಡೆಯಿಂದ ಬಹು ಪ್ರಯಾಸದಿಂದ ಪಾರು ಮಾಡುತ್ತಾನೆ . ಆದರೆ ತನಗಾಗಿ ವಿಷಹಾರಿ ಪುಡಿ ಉಳಿದಿರಲಿಲ್ಲವಾದ್ದರಿಂದ ತಾನು ರಕ್ಷಣೆಯಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಾನೆ. ಆಗ ಮಾತ್ರ ಊರಿನವರೆಲ್ಲರೂ ಭುಜಂಗಯ್ಯನ ಉದಾತ್ತ ಗುಣಕ್ಕಾಗಿ ಅವನನ್ನು ಅವತಾರ ಪುರುಷನೆಂದು ಹೊಗಳುತ್ತಾರೆ.

ಹೀಗೆ ಒಬ್ಬ ಸಾಧಾರಣ ಗ್ರಾಮೀಣ ರೈತನೊಬ್ಬ ಒಂದರ ನಂತರ ಇನ್ನೊಂದು ಹೊಸ ಸಾಹಸಗಳನ್ನು ಮಾಡುತ್ತಾ ಅಸಾಧಾರಣ ಸಾಧನೆಮಾಡಿದುದನ್ನೇ ಗಮನದಲ್ಲಿಟ್ಟುಕೊಂಡು ಅವನ ಪ್ರತಿಯೊಂದು ಹೊಸ ಪ್ರಯತ್ನವನ್ನೂ ಒಂದೊಂದು ಅವತಾರವೆಂಬಂತೆ ಮೂಡಿಸಿ ಕಾದಂಬರಿಗೆ ಭುಜಂಗಯ್ಯನ ದಶಾವತಾರಗಳೆಂಬ ಶೀರ್ಷಿಕೆಯಿಟ್ಟಿರುವುದು ಸಾರ್ಥಕವಾಗಿದೆ. ಗ್ರಾಮೀಣ ಬದುಕಿನ ಒಂದೊಂದು ಸಣ್ಣ ಘಟನೆಗಳು, ಧಾರ್ಮಿಕ ನಂಬಿಕೆಗಳು, ಅಸೂಯಾಪರರ ಕುಯುಕ್ತಿಗಳು, ವೈಯಕ್ತಿಕ ಬದುಕಿನ ಸೂಕ್ಷ್ಮ ತಿರುವುಗಳು, ಹಳವಂಡಗಳು, ಗುಂಪು ರಾಜಕೀಯ, ಎಲ್ಲವನ್ನೂ ಪಾರದರ್ಶಕವಾಗಿ ಚಿತ್ರಿಸಿ ಓದುಗರಿಗೆ ಪರಿಚಯಿಸಿರುವ ಶ್ರೀಕೃಷ್ಣ ಆಲನಹಳ್ಳಿಯವರಿಗೆ ಅಭಿನಂದನೆಗಳು. ಆದರೆ ಕಾದಂಬರಿ ಇಷ್ಟೊಂದು ದೀರ್ಘವಾಗಬೇಕಾಗಿರಲಿಲ್ಲ ಎಂಬುದು ನಮ್ಮ ಅನಿಸಿಕೆ. ಆದರೂ ಈ ಲೋಪವನ್ನು ಮನ್ನಿಸಬಹುದಾಗಿದೆ.

-ಬಿ.ಆರ್.ನಾಗರತ್ನ

8 Responses

  1. ನಯನ ಬಜಕೂಡ್ಲು says:

    ಸೊಗಸಾದ ಪುಸ್ತಕ ಪರಿಚಯ

  2. . ಶಂಕರಿ ಶರ್ಮ says:

    ಸೊಗಸಾದ ಕಾದಂಬರಿ ಭುಜಂಗಯ್ಯನ ದಶಾವತಾರದ ವಿಮರ್ಶಾತ್ಮಕ ವಿಶ್ಲೇಷಣೆಯು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಮೇಡಂ. ಪೂರ್ತಿ ಕಾದಂಬರಿಯ ಸೂಕ್ಷ್ಮ ಪರಿಚಯವು ಬಹಳ ಹಿಡಿಸಿತು.

  3. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಮೇಡಂ

  4. Padma Anand says:

    ಗ್ರಾಮೀಣ ಬದುಕಿನ ಏರುಪೇರಿಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ ಸುಂದರ ಪುಸ್ತಕದ ಪರಿಚಯ ಸೊಗಸಾಗಿದೆ

  5. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗೆಳತಿ ಪದ್ಮಾ

  6. Padmini says:

    ಕಾದಂಬರಿಯ ಸೂಕ್ಷ್ಮ ಪರಿಚಯ ಸೊಗಸಾಗಿದೆ!

  7. Samatha.R says:

    ಕಾದಂಬರಿಯನ್ನು ಇನ್ನೊಮ್ಮೆ ಓದಿದಂಥಾಯಿತು…ಉತ್ತಮವಾದ ಪುಸ್ತಕ ಪರಿಚಯ Madam

  8. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸಮತಾ ಹಾಗೂ ಪದ್ಮಿನಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: